ಅನುಶಾಸನ ಪರ್ವ: ದಾನಧರ್ಮ ಪರ್ವ
೮
ಪೂಜ್ಯವರ್ಣನ
“ನೀನು ಯಾರಂತಾಗಲು ಬಯಸುತ್ತೀಯೆ? ಯಾರನ್ನು ಪೂಜಿಸುತ್ತೀಯೆ?” ಎಂದು ಯುಧಿಷ್ಠಿರನು ಕೇಳಲು ಭೀಷ್ಮನು ತಾನು ಬ್ರಾಹ್ಮಣರಂತಾಗಲು ಬಯಸುತ್ತೇನೆ ಮತ್ತು ಬ್ರಾಹ್ಮಣರನ್ನು ಪೂಜಿಸುತ್ತೇನೆ ಎನ್ನುವುದು (೧-೨೯).
13008001 ಯುಧಿಷ್ಠಿರ ಉವಾಚ|
13008001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾಃ ಕಾನ್ನಮಸ್ಯಸಿ ಭಾರತ|
13008001c ಏತನ್ಮೇ ಸರ್ವಮಾಚಕ್ಷ್ವ ಯೇಷಾಂ ಸ್ಪೃಹಯಸೇ ನೃಪ||
ಯುಧಿಷ್ಠಿರನು ಹೇಳಿದನು: “ಭಾರತ! ನೃಪ! ಯಾರು ಪೂಜ್ಯರು? ಯಾರು ನಮಸ್ಕಾರ್ಯರು? ನೀನು ಯಾರನ್ನು ನಮಸ್ಕರಿಸುತ್ತೀಯೆ? ನೀನು ಯಾರಂತೆ ಆಗಬೇಕೆಂದು ಆಶಿಸುವೆ? ಇವೆಲ್ಲವನ್ನೂ ನನಗೆ ಹೇಳು.
13008002a ಉತ್ತಮಾಪದ್ಗತಸ್ಯಾಪಿ ಯತ್ರ ತೇ ವರ್ತತೇ ಮನಃ|
13008002c ಮನುಷ್ಯಲೋಕೇ ಸರ್ವಸ್ಮಿನ್ಯದಮುತ್ರೇಹ ಚಾಪ್ಯುತ||
ಈಗ ನೀನು ಉತ್ತಮ ಆಪತ್ತಿನಲ್ಲಿರುವಾಗಲೂ ನಿನ್ನ ಮನಸ್ಸು ಯಾರ ಕುರಿತು ಚಿಂತಿಸುತ್ತದೆ? ಈ ಸಮಸ್ತ ಮನುಷ್ಯಲೋಕದಲ್ಲಿ ಮತ್ತು ಪರಲೋಕದಲ್ಲಿ ಯಾವುದು ಹಿತವನ್ನುಂಟುಮಾಡುತ್ತದೆ?”
13008003 ಭೀಷ್ಮ ಉವಾಚ|
13008003a ಸ್ಪೃಹಯಾಮಿ ದ್ವಿಜಾತೀನಾಂ ಯೇಷಾಂ ಬ್ರಹ್ಮ ಪರಂ ಧನಮ್|
13008003c ಯೇಷಾಂ ಸ್ವಪ್ರತ್ಯಯಃ ಸ್ವರ್ಗಸ್ತಪಃಸ್ವಾಧ್ಯಾಯಸಾಧನಃ||
ಭೀಷ್ಮನು ಹೇಳಿದನು: “ಯಾರಿಗೆ ಬ್ರಹ್ಮವೇ ಪರಮ ಧನವೋ, ಸ್ವರ್ಗವು ಸ್ವಾಧೀನವಾಗಿದೆಯೋ ಮತ್ತು ಸ್ವಾಧ್ಯಾಯಸಾಧನವೇ ತಪಸ್ಸಾಗಿದೆಯೋ ಆ ಬ್ರಾಹ್ಮಣನಂತೆ ನಾನೂ ಆಗಲು ಆಶಿಸುತ್ತೇನೆ.
13008004a ಯೇಷಾಂ ವೃದ್ಧಾಶ್ಚ ಬಾಲಾಶ್ಚ ಪಿತೃಪೈತಾಮಹೀಂ ಧುರಮ್|
13008004c ಉದ್ವಹಂತಿ ನ ಸೀದಂತಿ ತೇಷಾಂ ವೈ ಸ್ಪೃಹಯಾಮ್ಯಹಮ್||
ಯಾರ ವಂಶದಲ್ಲಿ ವೃದ್ಧರಿಂದ ಹಿಡಿದು ಬಾಲಕರವರೆಗೂ ಪಿತೃಪಿತಾಮಹರ ಧರ್ಮಧುರವನ್ನು ಹೊತ್ತಿರುವರೋ ಮತ್ತು ಆ ಭಾರದಿಂದ ಕುಸಿಯುವುದಿಲ್ಲವೋ ಆ ಬ್ರಾಹ್ಮಣ ವಂಶದ ಸದಸ್ಯನಾಗಲು ಆಶಿಸುತ್ತೇನೆ.
13008005a ವಿದ್ಯಾಸ್ವಭಿವಿನೀತಾನಾಂ ದಾಂತಾನಾಂ ಮೃದುಭಾಷಿಣಾಮ್|
13008005c ಶ್ರುತವೃತ್ತೋಪಪನ್ನಾನಾಂ ಸದಾಕ್ಷರವಿದಾಂ ಸತಾಮ್||
ವಿದ್ಯಾವಂತರಾಗಿದ್ದರೂ ವಿನೀತರಾಗಿರುವ, ಇಂದ್ರಿಯ ಸಂಯಮಿಗಳಾಗಿರುವ, ಮೃದುಭಾಷಿಣಿಗಳಾಗಿರುವ, ಶಾಸ್ತ್ರಜ್ಞಾನ ಮತ್ತು ಸದಾಚಾರಗಳಿಂದ ಸಂಪನ್ನರಾಗಿರುವ, ಸದಾ ಅಕ್ಷರನಾಗಿರುವ ಬ್ರಹ್ಮನ ಕುರಿತು ತಿಳಿದಿರುವ ಸತ್ಪುರುಷರಂತೆ ಆಗಲು ಆಶಿಸುತ್ತೇನೆ.
13008006a ಸಂಸತ್ಸು ವದತಾಂ ಯೇಷಾಂ ಹಂಸಾನಾಮಿವ ಸಂಘಶಃ|
13008006c ಮಂಗಲ್ಯರೂಪಾ ರುಚಿರಾ ದಿವ್ಯಜೀಮೂತನಿಃಸ್ವನಾಃ||
13008007a ಸಮ್ಯಗುಚ್ಚಾರಿತಾ ವಾಚಃ ಶ್ರೂಯಂತೇ ಹಿ ಯುಧಿಷ್ಠಿರ|
13008007c ಶುಶ್ರೂಷಮಾಣೇ ನೃಪತೌ ಪ್ರೇತ್ಯ ಚೇಹ ಸುಖಾವಹಾಃ||
ಯುಧಿಷ್ಠಿರ! ಸಭೆಗಳಲ್ಲಿ ಹಂಸಪಕ್ಷಿಗಳ ಸಮೂಹದಂತೆ ಮಾತನಾಡುವ, ದಿವ್ಯ ಮೇಘಧ್ವನಿಯಲ್ಲಿ ಗಂಭೀರವಾದ ಶಬ್ಧದಿಂದ ಕೂಡಿ, ಮಂಗಲರೂಪದ ಸೊಗಸಾದ ಮತ್ತು ಸ್ಪಷ್ಟವಾಗಿ ಉಚ್ಚರಿಸಲ್ಪಟ್ಟ ಬ್ರಾಹ್ಮಣರ ಮಾತುಗಳು ಕೇಳಿಬರುತ್ತವೆ. ಏಕಾಗ್ರತೆಯಿಂದ ಕೇಳುವ ರಾಜನಿಗೆ ಅಂತಹ ದಿವ್ಯ ವಾಕ್ಕುಗಳು ಇಹ-ಪರಗಳೆರಡರಲ್ಲಿಯೂ ಸುಖವನ್ನುಂಟುಮಾಡುತ್ತವೆ.
13008008a ಯೇ ಚಾಪಿ ತೇಷಾಂ ಶ್ರೋತಾರಃ ಸದಾ ಸದಸಿ ಸಂಮತಾಃ|
13008008c ವಿಜ್ಞಾನಗುಣಸಂಪನ್ನಾಸ್ತೇಷಾಂ ಚ ಸ್ಪೃಹಯಾಮ್ಯಹಮ್||
ಸದಾ ಯಾರು ಅಂತಹ ಮಹಾತ್ಮರ ವಾಣಿಯನ್ನು ಕೇಳುತ್ತಾರೋ ಅವರೂ ವಿಜ್ಞಾನಗುಣಸಂಪನ್ನರಾಗಿ ಸನ್ಮಾನಿತರಾಗುತ್ತಾರೆ. ನಾನೂ ಅವರಂತೆ ಆಗಲು ಬಯಸುತ್ತೇನೆ.
13008009a ಸುಸಂಸ್ಕೃತಾನಿ ಪ್ರಯತಾಃ ಶುಚೀನಿ ಗುಣವಂತಿ ಚ|
13008009c ದದತ್ಯನ್ನಾನಿ ತೃಪ್ತ್ಯರ್ಥಂ ಬ್ರಾಹ್ಮಣೇಭ್ಯೋ ಯುಧಿಷ್ಠಿರ|
13008009e ಯೇ ಚಾಪಿ ಸತತಂ ರಾಜಂಸ್ತೇಷಾಂ ಚ ಸ್ಪೃಹಯಾಮ್ಯಹಮ್||
ಯುಧಿಷ್ಠಿರ! ರಾಜನ್! ಬ್ರಾಹ್ಮಣರ ತೃಪ್ತಿಗಾಗಿ ಸತತವೂ ಪ್ರಯತ್ನಪಟ್ಟು ಚೆನ್ನಾಗಿ ತಯಾರಿಸಿದ ಶುಚಿಯಾದ ಮತ್ತು ಗುಣಯುಕ್ತವಾದ ಆಹಾರವನ್ನು ನೀಡುವಂಥವರಂತೆ ಆಗಲು ಆಶಿಸುತ್ತೇನೆ.
13008010a ಶಕ್ಯಂ ಹ್ಯೇವಾಹವೇ ಯೋದ್ಧುಂ ನ ದಾತುಮನಸೂಯಿತಮ್|
13008010c ಶೂರಾ ವೀರಾಶ್ಚ ಶತಶಃ ಸಂತಿ ಲೋಕೇ ಯುಧಿಷ್ಠಿರ|
13008010e ತೇಷಾಂ ಸಂಖ್ಯಾಯಮಾನಾನಾಂ ದಾನಶೂರೋ ವಿಶಿಷ್ಯತೇ||
ಯುದ್ಧದಲ್ಲಿ ಹೋರಾಡಲು ಶಕ್ಯವಿದೆ. ಆದರೆ ಅಸೂಯೆಪಡದೇ ದಾನವನ್ನು ನೀಡುವುದು ಶಕ್ಯವಿಲ್ಲ. ಲೋಕದಲ್ಲಿ ನೂರಾರು ಶೂರರು ವೀರರು ಇದ್ದಾರೆ. ಆದರೆ ಅವರ ಅಳತೆಮಾಡಿದರೆ ದಾನಶೂರರೇ ಹೆಚ್ಚಿನವರಾಗುತ್ತಾರೆ.
13008011a ಧನ್ಯಃ ಸ್ಯಾಂ ಯದ್ಯಹಂ ಭೂಯಃ ಸೌಮ್ಯ ಬ್ರಾಹ್ಮಣಕೋಽಪಿ ವಾ|
13008011c ಕುಲೇ ಜಾತೋ ಧರ್ಮಗತಿಸ್ತಪೋವಿದ್ಯಾಪರಾಯಣಃ||
ಸೌಮ್ಯ! ಒಂದು ವೇಳೆ ನಾನೇನಾದರೋ ಮುಂದೆ ಬ್ರಾಹ್ಮಣಕುಲದಲ್ಲಿ ಹುಟ್ಟಿ ಧರ್ಮಮಾರ್ಗದಲ್ಲಿದ್ದುಕೊಂಡು ತಪಸ್ಸು ಮತ್ತು ವಿದ್ಯಾಪರಾಯಣನಾದರೆ ಧನ್ಯನಾದೆ ಎಂದುಕೊಳ್ಳುತ್ತೇನೆ.
13008012a ನ ಮೇ ತ್ವತ್ತಃ ಪ್ರಿಯತರೋ ಲೋಕೇಽಸ್ಮಿನ್ಪಾಂಡುನಂದನ|
13008012c ತ್ವತ್ತಶ್ಚ ಮೇ ಪ್ರಿಯತರಾ ಬ್ರಾಹ್ಮಣಾ ಭರತರ್ಷಭ||
ಪಾಂಡುನಂದನ! ಭರತರ್ಷಭ! ಈ ಲೋಕದಲ್ಲಿ ನನಗೆ ನಿನಗಿಂತಲೂ ಹೆಚ್ಚು ಪ್ರಿಯರಾದವರು ಇಲ್ಲ. ಆದರೆ ನನಗೆ ಬ್ರಾಹ್ಮಣರು ನಿನಗಿಂತಲೂ ಹೆಚ್ಚು ಪ್ರಿಯರಾದವರು.
13008013a ಯಥಾ ಮಮ ಪ್ರಿಯತರಾಸ್ತ್ವತ್ತೋ ವಿಪ್ರಾಃ ಕುರೂದ್ವಹ|
13008013c ತೇನ ಸತ್ಯೇನ ಗಚ್ಚೇಯಂ ಲೋಕಾನ್ಯತ್ರ ಸ ಶಂತನುಃ||
ಕುರೂದ್ವಹ! ವಿಪ್ರರು ನನಗೆ ನಿನಗಿಂತಲೂ ಪ್ರಿಯತಮರು ಎಂಬ ಈ ಸತ್ಯದಿಂದಲೇ ನಾನು ಶಂತನುವಿನ ಲೋಕಕ್ಕೆ ಹೋಗುತ್ತೇನೆ. ಇದರಲ್ಲಿ ಸಂಶಯವಿಲ್ಲ.
13008014a ನ ಮೇ ಪಿತಾ ಪ್ರಿಯತರೋ ಬ್ರಾಹ್ಮಣೇಭ್ಯಸ್ತಥಾಭವತ್|
13008014c ನ ಮೇ ಪಿತುಃ ಪಿತಾ ವಾಪಿ ಯೇ ಚಾನ್ಯೇಽಪಿ ಸುಹೃಜ್ಜನಾಃ||
ನನ್ನ ತಂದೆಯೂ ಕೂಡ ನನಗೆ ಬ್ರಾಹ್ಮಣರಿಗಿಂತ ಪ್ರಿಯತಮನಾಗಿರಲಿಲ್ಲ. ನನ್ನ ತಂದೆಯ ತಂದೆಯೂ ಮತ್ತು ಅನ್ಯ ಸುಹೃಜ್ಜನರೂ ಬ್ರಾಹ್ಮಣರಿಗಿಂತ ಪ್ರಿಯತಮರಾಗಿರಲಿಲ್ಲ.
13008015a ನ ಹಿ ಮೇ ವೃಜಿನಂ ಕಿಂ ಚಿದ್ವಿದ್ಯತೇ ಬ್ರಾಹ್ಮಣೇಷ್ವಿಹ|
13008015c ಅಣು ವಾ ಯದಿ ವಾ ಸ್ಥೂಲಂ ವಿದಿತಂ ಸಾಧುಕರ್ಮಭಿಃ||
ಸಾಧುಕರ್ಮಿ ಬ್ರಾಹ್ಮಣರ ಕುರಿತು ನನ್ನಿಂದ ಸೂಕ್ಷ್ಮವಾದ ಅಥವಾ ಸ್ಥೂಲವಾದ ಯಾವುದೇ ಅಪರಾಧವೂ ಆಗಿರುವುದಿಲ್ಲ.
13008016a ಕರ್ಮಣಾ ಮನಸಾ ವಾಪಿ ವಾಚಾ ವಾಪಿ ಪರಂತಪ|
13008016c ಯನ್ಮೇ ಕೃತಂ ಬ್ರಾಹ್ಮಣೇಷು ತೇನಾದ್ಯ ನ ತಪಾಮ್ಯಹಮ್||
ಪರಂತಪ! ಕರ್ಮದಿಂದ, ಮನಸ್ಸಿನಿಂದ ಮತ್ತು ಮಾತುಗಳಿಂದ ನಾನು ಬ್ರಾಹ್ಮಣರಿಗೆ ಯಾವ ಸೇವೆಯನ್ನು ಮಾಡಿರುವೆನೋ ಅದರ ಪ್ರಭಾವದಿಂದಲೇ ನಾನಿಂದು ಈ ಅವಸ್ಥೆಯಲ್ಲಿಯೂ ಸಂಕಟವನ್ನು ಅನುಭವಿಸುತ್ತಿಲ್ಲ.
13008017a ಬ್ರಹ್ಮಣ್ಯ ಇತಿ ಮಾಮಾಹುಸ್ತಯಾ ವಾಚಾಸ್ಮಿ ತೋಷಿತಃ|
13008017c ಏತದೇವ ಪವಿತ್ರೇಭ್ಯಃ ಸರ್ವೇಭ್ಯಃ ಪರಮಂ ಸ್ಮೃತಮ್||
ನನ್ನನ್ನು ಬ್ರಹ್ಮಣ್ಯ ಎಂದು ಕರೆಯುತ್ತಾರೆ. ಈ ಮಾತಿನಿಂದ ನಾನು ಬಹಳ ತೃಪ್ತನಾಗಿದ್ದೇನೆ. ಏಕೆಂದರೆ ಬ್ರಾಹ್ಮಣರ ಸೇವೆಯೇ ಎಲ್ಲಕ್ಕಿಂತ ಪರಮ ಪವಿತ್ರವಾದುದೆಂದು ಹೇಳುತ್ತಾರೆ.
13008018a ಪಶ್ಯಾಮಿ ಲೋಕಾನಮಲಾನ್ ಶುಚೀನ್ಬ್ರಾಹ್ಮಣಯಾಯಿನಃ|
13008018c ತೇಷು ಮೇ ತಾತ ಗಂತವ್ಯಮಹ್ನಾಯ ಚ ಚಿರಾಯ ಚ||
ಮಗೂ! ಶುಚೀ ಬ್ರಾಹ್ಮಣರ ಸೇವೆಯಲ್ಲಿ ನಿರತನಾದುದರಿಂದ ನನಗೆ ದೊರೆಯುವ ಅಮಲ ಲೋಕಗಳನ್ನು ಇಲ್ಲಿಂದಲೇ ನಾನು ನೋಡುತ್ತಿದ್ದೇನೆ. ಆ ಲೋಕಗಳಲ್ಲಿ ಚಿರವಾಗಿ ಇರಲು ಶೀಘ್ರವಾಗಿ ಅಲ್ಲಿಗೆ ಹೋಗ ಬಯಸುತ್ತೇನೆ.
13008019a ಯಥಾ ಪತ್ಯಾಶ್ರಯೋ ಧರ್ಮಃ ಸ್ತ್ರೀಣಾಂ ಲೋಕೇ ಯುಧಿಷ್ಠಿರ|
13008019c ಸ ದೇವಃ ಸಾ ಗತಿರ್ನಾನ್ಯಾ ಕ್ಷತ್ರಿಯಸ್ಯ ತಥಾ ದ್ವಿಜಾಃ||
ಯುಧಿಷ್ಠಿರ! ಲೋಕದಲ್ಲಿ ಹೇಗೆ ಸ್ತ್ರೀಯರಿಗೆ ಪತಿಯ ಅಶ್ರಯದಲ್ಲಿರುವುದೇ ಧರ್ಮವೋ ಹಾಗೆ ಕ್ಷತ್ರಿಯನಿಗೆ ದ್ವಿಜರನ್ನು ಆಶ್ರಯಿಸಿರುವುದೇ ಪರಮ ಧರ್ಮವು. ಕ್ಷತ್ರಿಯನಿಗೆ ಬ್ರಾಹ್ಮಣನೇ ದೇವ ಮತ್ತು ಗತಿ.
13008020a ಕ್ಷತ್ರಿಯಃ ಶತವರ್ಷೀ ಚ ದಶವರ್ಷೀ ಚ ಬ್ರಾಹ್ಮಣಃ|
13008020c ಪಿತಾಪುತ್ರೌ ಚ ವಿಜ್ಞೇಯೌ ತಯೋರ್ಹಿ ಬ್ರಾಹ್ಮಣಃ ಪಿತಾ||
ನೂರು ವರ್ಷದ ಕ್ಷತ್ರಿಯ ಮತ್ತು ಹತ್ತು ವರ್ಷದ ಬ್ರಾಹ್ಮಣ – ಇಬ್ಬರನ್ನೂ ಪಿತ-ಪುತ್ರರೆಂದೇ ತಿಳಿಯಬೇಕು. ಅವರಿಬ್ಬರಲ್ಲಿ ಬ್ರಾಹ್ಮಣನು ಪಿತನೆಂದೆನಿಸಿಕೊಳ್ಳುತ್ತಾನೆ.
13008021a ನಾರೀ ತು ಪತ್ಯಭಾವೇ ವೈ ದೇವರಂ ಕುರುತೇ ಪತಿಮ್|
13008021c ಪೃಥಿವೀ ಬ್ರಾಹ್ಮಣಾಲಾಭೇ ಕ್ಷತ್ರಿಯಂ ಕುರುತೇ ಪತಿಮ್||
ಪತಿಯು ತೀರಿಕೊಂಡರೆ ನಾರಿಯು ಪತಿಯ ಸಹೋದರನನ್ನು ಪತಿಯನ್ನಾಗಿ ಮಾಡಿಕೊಳ್ಳುವಂತೆ ಬ್ರಾಹ್ಮಣರು ಇಲ್ಲದಿರುವಾಗ ಪೃಥ್ವಿಯು ಕ್ಷತ್ರಿಯನನ್ನು ಪತಿಯನ್ನಾಗಿ ಮಾಡಿಕೊಳ್ಳುತ್ತಾಳೆ.
13008022a ಪುತ್ರವಚ್ಚ ತತೋ ರಕ್ಷ್ಯಾ ಉಪಾಸ್ಯಾ ಗುರುವಚ್ಚ ತೇ|
13008022c ಅಗ್ನಿವಚ್ಚೋಪಚರ್ಯಾ ವೈ ಬ್ರಾಹ್ಮಣಾಃ ಕುರುಸತ್ತಮ||
ಕುರುಸತ್ತಮ! ಬ್ರಾಹ್ಮಣರನ್ನು ಪುತ್ರರಂತೆ ರಕ್ಷಿಸಬೇಕು. ಗುರುವಂತೆ ಉಪಾಸಿಸಬೇಕು. ಅಗ್ನಿಯಂತೆ ಉಪಚರ್ಯಗಳನ್ನು ಮಾಡಬೇಕು.
13008023a ಋಜೂನ್ಸತಃ ಸತ್ಯಶೀಲಾನ್ಸರ್ವಭೂತಹಿತೇ ರತಾನ್|
13008023c ಆಶೀವಿಷಾನಿವ ಕ್ರುದ್ಧಾನ್ದ್ವಿಜಾನುಪಚರೇತ್ಸದಾ||
ಸರಳ ಸ್ವಭಾವದವರಾದ, ಸತ್ಯಶೀಲರಾದ, ಸರ್ವಭೂತಗಳ ಹಿತದಲ್ಲಿಯೇ ನಿರತರಾದ, ಹಾವಿನ ವಿಷದಂಥಹ ಕೋಪವನ್ನು ತಾಳಬಲ್ಲ ಬ್ರಾಹ್ಮಣರನ್ನು ಎಚ್ಚರಿಕೆಯಿಂದ ಉಪಚರಿಸಬೇಕು.
13008024a ತೇಜಸಸ್ತಪಸಶ್ಚೈವ ನಿತ್ಯಂ ಬಿಭ್ಯೇದ್ಯುಧಿಷ್ಠಿರ|
13008024c ಉಭೇ ಚೈತೇ ಪರಿತ್ಯಾಜ್ಯೇ ತೇಜಶ್ಚೈವ ತಪಸ್ತಥಾ||
ಯುಧಿಷ್ಠಿರ! ಅವರ ತೇಜಸ್ಸು ಮತ್ತು ತಪಸ್ಸುಗಳಿಗೆ ನಿತ್ಯವೂ ಹೆದರಬೇಕು. ಅವರ ತೇಜಸ್ಸು ಮತ್ತು ತಪಸ್ಸುಗಳಿಂದ ದೂರವಿರಬೇಕು.
13008025a ವ್ಯವಸಾಯಸ್ತಯೋಃ ಶೀಘ್ರಮುಭಯೋರೇವ ವಿದ್ಯತೇ|
13008025c ಹನ್ಯುಃ ಕ್ರುದ್ಧಾ ಮಹಾರಾಜ ಬ್ರಾಹ್ಮಣಾ ಯೇ ತಪಸ್ವಿನಃ||
ಮಹಾರಾಜ! ಅವರ ತೇಜಸ್ಸು ಮತ್ತು ತಪಸ್ಸುಗಳೆರಡರ ಫಲವೂ ತೀವ್ರವಾಗಿಯೇ ಇರುತ್ತದೆ. ತಪಸ್ವೀ ಬ್ರಾಹ್ಮಣರು ಕ್ರುದ್ಧರಾದರೆ ನಾಶಪಡಿಸುತ್ತಾರೆ.
13008026a ಭೂಯಃ ಸ್ಯಾದುಭಯಂ ದತ್ತಂ ಬ್ರಾಹ್ಮಣಾದ್ಯದಕೋಪನಾತ್|
13008026c ಕುರ್ಯಾದುಭಯತಃಶೇಷಂ ದತ್ತಶೇಷಂ ನ ಶೇಷಯೇತ್||
ಕೋಪರಹಿತ ಬ್ರಾಹ್ಮಣನು ತನ್ನ ತೇಜಸ್ಸು-ತಪಸ್ಸುಗಳನ್ನು ಇತರರ ಮೇಲೆ ಪ್ರಯೋಗಿಸಿದರೆ ಅವುಗಳ ತೀವ್ರತೆಯು ಸಹಿಸಲಸಾಧ್ಯವಾಗಿರುತ್ತದೆ. ಆದುದರಿಂದ ಇವೆರಡೂ ಅವನಲ್ಲಿಯೇ ಉಳಿಯುವಂತೆ ಮಾಡಬೇಕು.
13008027a ದಂಡಪಾಣಿರ್ಯಥಾ ಗೋಷು ಪಾಲೋ ನಿತ್ಯಂ ಸ್ಥಿರೋ ಭವೇತ್|
13008027c ಬ್ರಾಹ್ಮಣಾನ್ಬ್ರಹ್ಮ ಚ ತಥಾ ಕ್ಷತ್ರಿಯಃ ಪರಿಪಾಲಯೇತ್||
ದಂಡವನ್ನು ಹಿಡಿದು ಗೋವುಗಳನ್ನು ಪಾಲಿಸುವಂತೆ ಕ್ಷತ್ರಿಯನು ದಂಡಪಾಣಿಯಾಗಿ ನಿತ್ಯವೂ ಸ್ಥಿರನಾಗಿದ್ದು ಬ್ರಾಹ್ಮಣರು ಮತ್ತು ವೇದವನ್ನು ಪರಿಪಾಲಿಸಬೇಕು.
13008028a ಪಿತೇವ ಪುತ್ರಾನ್ರಕ್ಷೇಥಾ ಬ್ರಾಹ್ಮಣಾನ್ಬ್ರಹ್ಮತೇಜಸಃ|
13008028c ಗೃಹೇ ಚೈಷಾಮವೇಕ್ಷೇಥಾಃ ಕಚ್ಚಿದಸ್ತೀಹ ಜೀವನಮ್||
ತಂದೆಯು ಮಕ್ಕಳನ್ನು ಹೇಗೋ ಹಾಗೆ ಬ್ರಹ್ಮತೇಜಸ ಬ್ರಾಹ್ಮಣರನ್ನು ರಕ್ಷಿಸು. ಅವರ ಮನೆಗಳಲ್ಲಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಇವೆಯೋ ಎನ್ನುವುದನ್ನು ಪರಿಶೀಲಿಸುತ್ತಿರು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪೂಜ್ಯವರ್ಣನೇ ಅಷ್ಟೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪೂಜ್ಯವರ್ಣನ ಎಂಟನೇ ಅಧ್ಯಾಯವು.