Anushasana Parva: Chapter 77

ಅನುಶಾಸನ ಪರ್ವ: ದಾನಧರ್ಮ ಪರ್ವ

೭೭

ವಸಿಷ್ಠನು ಸೌದಾಸನಿಗೆ ಗೋದಾನದ ವಿಧಿ ಮತ್ತು ಮಹಿಮೆಯನ್ನು ವರ್ಣಿಸಿದುದು (1-24).

13077001 ಭೀಷ್ಮ ಉವಾಚ|

13077001a ಏತಸ್ಮಿನ್ನೇವ ಕಾಲೇ ತು ವಸಿಷ್ಠಮೃಷಿಸತ್ತಮಮ್|

13077001c ಇಕ್ಷ್ವಾಕುವಂಶಜೋ ರಾಜಾ ಸೌದಾಸೋ ದದತಾಂ[1] ವರಃ||

13077002a ಸರ್ವಲೋಕಚರಂ ಸಿದ್ಧಂ ಬ್ರಹ್ಮಕೋಶಂ ಸನಾತನಮ್|

13077002c ಪುರೋಹಿತಮಿದಂ ಪ್ರಷ್ಟುಮಭಿವಾದ್ಯೋಪಚಕ್ರಮೇ||

ಭೀಷ್ಮನು ಹೇಳಿದನು: “ಒಂದು ಕಾಲದಲ್ಲಿ ದಾನಿಗಳಲ್ಲಿ ಶ್ರೇಷ್ಠ ಇಕ್ಷ್ವಾಕುವಂಶಜ ರಾಜಾ ಸೌದಾಸನು ತನ್ನ ಪುರೋಹಿತನಾದ ಸರ್ವಲೋಕಗಳನ್ನೂ ಸಂಚರಿಸುವ ಸಿದ್ಧ ಬ್ರಹ್ಮಕೋಶ ಸನಾತನ ಋಷಿಸತ್ತಮ ವಸಿಷ್ಠನಿಗೆ ನಮಸ್ಕರಿಸಿ ಕೇಳಲು ಉಪಕ್ರಮಿಸಿದನು.

13077003 ಸೌದಾಸ ಉವಾಚ|

13077003a ತ್ರೈಲೋಕ್ಯೇ ಭಗವನ್ಕಿಂ ಸ್ವಿತ್ಪವಿತ್ರಂ ಕಥ್ಯತೇಽನಘ|

13077003c ಯತ್ಕೀರ್ತಯನ್ಸದಾ ಮರ್ತ್ಯಃ ಪ್ರಾಪ್ನುಯಾತ್ಪುಣ್ಯಮುತ್ತಮಮ್||

ಸೌದಾಸನು ಹೇಳಿದನು: “ಭಗವನ್! ಅನಘ! ಮೂರೂ ಲೋಕಗಳಲ್ಲಿಯೂ ಕೇವಲ ನಾಮಕೀರ್ತನೆಯನ್ನು ಮಾಡುವುದರಿಂದಲೇ ಮನುಷ್ಯನು ಉತ್ತಮ ಪುಣ್ಯವನ್ನು ಪಡೆದುಕೊಳ್ಳಬಹುದಾದ ಪವಿತ್ರ ವಸ್ತುವು ಯಾವುದಿದೆ?””

13077004 ಭೀಷ್ಮ ಉವಾಚ|

13077004a ತಸ್ಮೈ ಪ್ರೋವಾಚ ವಚನಂ ಪ್ರಣತಾಯ ಹಿತಂ ತದಾ|

13077004c ಗವಾಮುಪನಿಷದ್ವಿದ್ವಾನ್ನಮಸ್ಕೃತ್ಯ ಗವಾಂ ಶುಚಿಃ||

ಭೀಷ್ಮನು ಹೇಳಿದನು: “ತನ್ನ ಚರಣಗಳಿಗೆ ನಮಸ್ಕರಿಸಿದ ರಾಜಾ ಸೌದಾಸನಿಗೆ ಗವೋಪನಿಷತ್ತಿನ[2] ವಿದ್ವಾನ್ ಪವಿತ್ರ ಮಹರ್ಷಿ ವಸಿಷ್ಠನು ಗೋವುಗಳನ್ನು ನಮಸ್ಕರಿಸಿ ಈ ಮಾತುಗಳನ್ನಾಡಿದನು:

13077005a ಗಾವಃ ಸುರಭಿಗಂಧಿನ್ಯಸ್ತಥಾ ಗುಗ್ಗುಲುಗಂಧಿಕಾಃ|

13077005c ಗಾವಃ ಪ್ರತಿಷ್ಠಾ ಭೂತಾನಾಂ ಗಾವಃ ಸ್ವಸ್ತ್ಯಯನಂ ಮಹತ್||

“ಗೋವುಗಳ ಶರೀರದಿಂದ ಅನೇಕ ಪ್ರಕಾರದ ಮನೋರಮ

ಸುಗಂಧವು ಹೊರಸೂಸುತ್ತದೆ ಮತ್ತು ಹೆಚ್ಚಾಗಿ ಗೋವುಗಳು ಗುಗ್ಗುಲುವಿನ[3] ಸುಗಂಧವನ್ನು ಹೊಂದಿರುತ್ತವೆ. ಗೋವುಗಳು ಸಮಸ್ಥ ಪ್ರಾಣಿಗಳಿಗೆ ಅಧಾರವೂ ಮಂಗಳ ನಿಧಿಗಳೂ ಆಗಿವೆ.

13077006a ಗಾವೋ ಭೂತಂ ಭವಿಷ್ಯಚ್ಚ ಗಾವಃ ಪುಷ್ಟಿಃ ಸನಾತನೀ|

13077006c ಗಾವೋ ಲಕ್ಷ್ಮ್ಯಾಸ್ತಥಾ ಮೂಲಂ ಗೋಷು ದತ್ತಂ ನ ನಶ್ಯತಿ|

ಗೋವುಗಳು ಭೂತ ಮತ್ತು ಭವಿಷ್ಯಗಳು. ಗೋವುಗಳು ಸನಾತನ ಪುಷ್ಟಿಯನ್ನು ನೀಡುವವು. ಗೋವುಗಳು ಲಕ್ಷ್ಮಿಯ ಮೂಲ. ಗೋವುಗಳಿಗೆ ನೀಡಿದವುಗಳು ಎಂದೂ ನಷ್ಟವಾಗುವುದಿಲ್ಲ.

13077006e ಅನ್ನಂ ಹಿ ಸತತಂ ಗಾವೋ ದೇವಾನಾಂ ಪರಮಂ ಹವಿಃ||

13077007a ಸ್ವಾಹಾಕಾರವಷಟ್ಕಾರೌ ಗೋಷು ನಿತ್ಯಂ ಪ್ರತಿಷ್ಠಿತೌ|

ಗೋವುಗಳು ಪರಮ ಅನ್ನವನ್ನು ನೀಡುತ್ತವೆ. ಅವು ದೇವತೆಗಳಿಗೆ ಪರಮ ಹವಿಸ್ಸನ್ನೂ ನೀಡುತ್ತವೆ. ಸ್ವಾಹಾಕಾರ[4] ಮತ್ತು ವಷಟ್ಕಾರ[5] ಇವೆರಡೂ ಕರ್ಮಗಳೂ ಸದಾ ಗೋವನ್ನೇ ಅವಲಂಬಿಸಿವೆ.

13077007c ಗಾವೋ ಯಜ್ಞಸ್ಯ ಹಿ ಫಲಂ ಗೋಷು ಯಜ್ಞಾಃ ಪ್ರತಿಷ್ಠಿತಾಃ||

13077008a ಸಾಯಂ ಪ್ರಾತಶ್ಚ ಸತತಂ ಹೋಮಕಾಲೇ ಮಹಾಮತೇ|

13077008c ಗಾವೋ ದದತಿ ವೈ ಹೋಮ್ಯಮೃಷಿಭ್ಯಃ ಪುರುಷರ್ಷಭ||

ಮಹಾಮತೇ! ಪುರುಷರ್ಷಭ! ಗೋವುಗಳೇ ಯಜ್ಞದ ಫಲಗಳು. ಗೋವುಗಳಲ್ಲಿ ಯಜ್ಞಗಳು ಪ್ರತಿಷ್ಠಿತಗೊಂಡಿವೆ. ಪ್ರಾತಃ ಕಾಲ ಮತ್ತು ಸಾಯಂಕಾಲ ಸತತವೂ ಹೋಮಕಾಲಗಳಲ್ಲಿ ಋಷಿಗಳಿಗೆ ಗೋವುಗಳೇ ಹವನೀಯ ಪದಾರ್ಥಗಳನ್ನು ಕೊಡುತ್ತವೆ.

13077009a ಕಾನಿ ಚಿದ್ಯಾನಿ ದುರ್ಗಾಣಿ ದುಷ್ಕೃತಾನಿ ಕೃತಾನಿ ಚ|

13077009c ತರಂತಿ ಚೈವ ಪಾಪ್ಮಾನಂ ಧೇನುಂ ಯೇ ದದತಿ ಪ್ರಭೋ||

ಪ್ರಭೋ! ಗೋವನ್ನು ದಾನಮಾಡುವವನು ಯಾವುದೇ ಸಂಕಟದಲ್ಲಿದ್ದರೂ ಅದನ್ನು ಮತ್ತು ಮಾಡಿದ ದುಷ್ಕೃತಗಳ ಪಾಪಗಳನ್ನೂ ಪಾರುಮಾಡುತ್ತಾನೆ.

13077010a ಏಕಾಂ ಚ ದಶಗುರ್ದದ್ಯಾದ್ದಶ ದದ್ಯಾಚ್ಚ ಗೋಶತೀ|

13077010c ಶತಂ ಸಹಸ್ರಗುರ್ದದ್ಯಾತ್ಸರ್ವೇ ತುಲ್ಯಫಲಾ ಹಿ ತೇ||

ಹತ್ತು ಗೋವುಗಳಿರುವವನು ಒಂದನ್ನು ದಾನಮಾಡಲಿ, ನೂರು ಗೋವುಗಳಿರುವವನು ಹತ್ತನ್ನು ದಾನಮಾಡಲಿ ಮತ್ತು ಸಾವಿರ ಗೋವುಗಳಿರುವವನು ನೂರನ್ನು ದಾನಮಾಡಲಿ, ಎಲ್ಲರಿಗೂ ಒಂದೇ ಸಮನಾದ ಫಲವು ದೊರೆಯುತ್ತದೆ.

13077011a ಅನಾಹಿತಾಗ್ನಿಃ ಶತಗುರಯಜ್ವಾ ಚ ಸಹಸ್ರಗುಃ|

13077011c ಸಮೃದ್ಧೋ ಯಶ್ಚ ಕೀನಾಶೋ ನಾರ್ಘ್ಯಮರ್ಹಂತಿ ತೇ ತ್ರಯಃ||

ನೂರು ಗೋವುಗಳಿದ್ದುಕೊಂಡೂ ಅಗ್ನಿಹೋತ್ರವನ್ನು ಮಾಡದ, ಸಾವಿರ ಗೋವುಗಳಿದ್ದುಕೊಂಡೂ ಯಜ್ಞವನ್ನು ಮಾಡದ ಮತ್ತು ಧನಿಕನಾಗಿದ್ದುಕೊಂಡೂ ಕೃಪಣತೆಯನ್ನು ಬಿಟ್ಟಿರದ ಈ ಮೂರೂ ಮನುಷ್ಯರೂ ಅರ್ಘ್ಯವನ್ನು ಪಡೆದುಕೊಳ್ಳಲು ಅರ್ಹರಲ್ಲ.

13077012a ಕಪಿಲಾಂ ಯೇ ಪ್ರಯಚ್ಚಂತಿ ಸವತ್ಸಾಂ ಕಾಂಸ್ಯದೋಹನಾಮ್|

13077012c ಸುವ್ರತಾಂ ವಸ್ತ್ರಸಂವೀತಾಮುಭೌ ಲೋಕೌ ಜಯಂತಿ ತೇ||

ಕರುವಿನೊಂದಿಗೆ ಸುವ್ರತೆ ಕಪಿಲೆಯನ್ನು ವಸ್ತ್ರಗಳೊಂದಿಗೆ ಮತ್ತು ಹಾಲುಕರೆಯುವ ಕಂಚಿನ ಪಾತ್ರೆಯೊಂದಿಗೆ ದಾನಮಾಡುವವನು ಇಹ ಮತ್ತು ಪರ ಎರಡೂ ಲೋಕಗಳನ್ನೂ ಜಯಿಸುತ್ತಾನೆ.

13077013a ಯುವಾನಮಿಂದ್ರಿಯೋಪೇತಂ ಶತೇನ ಸಹ ಯೂಥಪಮ್|

13077013c ಗವೇಂದ್ರಂ ಬ್ರಾಹ್ಮಣೇಂದ್ರಾಯ ಭೂರಿಶೃಂಗಮಲಂಕೃತಮ್||

13077014a ವೃಷಭಂ ಯೇ ಪ್ರಯಚ್ಚಂತಿ ಶ್ರೋತ್ರಿಯಾಯ ಪರಂತಪ|

13077014c ಐಶ್ವರ್ಯಂ ತೇಽಭಿಜಾಯಂತೇ ಜಾಯಮಾನಾಃ ಪುನಃ ಪುನಃ||

ಪರಂತಪ! ಯುವ, ಇಂದ್ರಿಯ ಸಂಪನ್ನ, ನೂರು ಗೋವುಗಳ ಯೂಥಪತಿ, ಎತ್ತರದ ಹಿಳಿಲುಗಳಿರುವ, ಅಲಂಕರಿಸಲ್ಪಟ್ಟ, ಹೋರಿಯನ್ನು ಶ್ರೋತ್ರೀಯ ಬ್ರಾಹ್ಮಣೇಂದ್ರನಿಗೆ ದಾನಮಾಡುವವನು ಈ ಸಂಸಾರದಲ್ಲಿ ಜನ್ಮ ಜನ್ಮದಲ್ಲಿಯೂ ಮಹಾನ್ ಐಶ್ವರ್ಯದ ಭಾಗಿಯಾಗುತ್ತಾನೆ.

13077015a ನಾಕೀರ್ತಯಿತ್ವಾ ಗಾಃ ಸುಪ್ಯಾನ್ನಾಸ್ಮೃತ್ಯ ಪುನರುತ್ಪತೇತ್|

13077015c ಸಾಯಂ ಪ್ರಾತರ್ನಮಸ್ಯೇಚ್ಚ ಗಾಸ್ತತಃ ಪುಷ್ಟಿಮಾಪ್ನುಯಾತ್||

ಗೋವಿನ ನಾಮಕೀರ್ತನೆಯನ್ನು ಮಾಡದೇ ಮಲಗಬಾರದು. ಅವನ್ನು ಸ್ಮರಿಸುತ್ತಲೇ ಏಳಬೇಕು. ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ಗೋವುಗಳನ್ನು ನಮಸ್ಕರಿಸುವುದರಿಂದ ಪುಷ್ಟಿಯು ಪ್ರಾಪ್ತವಾಗುತ್ತದೆ.

13077016a ಗವಾಂ ಮೂತ್ರಪುರೀಷಸ್ಯ ನೋದ್ವಿಜೇತ ಕದಾ ಚನ|

13077016c ನ ಚಾಸಾಂ ಮಾಂಸಮಶ್ನೀಯಾದ್ಗವಾಂ ವ್ಯುಷ್ಟಿಂ ತಥಾಶ್ನುತೇ||

ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಎಂದೂ ಉದ್ವಿಗ್ನರಾಗಬಾರದು. ಗೋವಿನ ಮಾಂಸವನ್ನೂ ತಿನ್ನಬಾರದು. ಇದರಿಂದ ವ್ಯುಷ್ಟಿಯನ್ನು ಪಡೆಯುತ್ತಾರೆ.

13077017a ಗಾಶ್ಚ ಸಂಕೀರ್ತಯೇನ್ನಿತ್ಯಂ ನಾವಮನ್ಯೇತ ಗಾಸ್ತಥಾ|

13077017c ಅನಿಷ್ಟಂ ಸ್ವಪ್ನಮಾಲಕ್ಷ್ಯ ಗಾಂ ನರಃ ಸಂಪ್ರಕೀರ್ತಯೇತ್||

ನಿತ್ಯವೂ ಗೋವುಗಳ ನಾಮಸಂಕೀರ್ತನೆಯನ್ನು ಮಾಡಬೇಕು. ಗೋವುಗಳನ್ನು ಅಪಮಾನಿಸಬಾರದು. ಅನಿಷ್ಟ ಸ್ವಪ್ನವನ್ನು ಕಂಡರೆ ಮನುಷ್ಯನು ಗೋವಿನ ನಾಮಸ್ಮರಣೆಯನ್ನು ಮಾಡಬೇಕು.

13077018a ಗೋಮಯೇನ ಸದಾ ಸ್ನಾಯಾದ್ಗೋಕರೀಷೇ ಚ ಸಂವಿಶೇತ್|

13077018c ಶ್ಲೇಷ್ಮಮೂತ್ರಪುರೀಷಾಣಿ ಪ್ರತಿಘಾತಂ ಚ ವರ್ಜಯೇತ್||

ಸದಾ ಗೋಮಯದಲ್ಲಿ ಸ್ನಾನಮಾಡಬೇಕು. ಗೋಮಯದಿಂದ ಸಾರಿಸಿದ ನೆಲದಮೇಲೆ ಕುಳಿತುಕೊಳ್ಳಬೇಕು. ಅದರ ಮೇಲೆ ಉಗುಳಬಾರದು. ಮಲಮೂತ್ರಗಳನ್ನು ಅದರ ಮೇಲೆ ವಿಸರ್ಜಿಸಬಾರದು. ಗೋವನ್ನು ತಿರಸ್ಕರಿಸ ಬಾರದು.

13077019a ಸಾರ್ದ್ರಚರ್ಮಣಿ ಭುಂಜೀತ ನಿರೀಕ್ಷನ್ವಾರುಣೀಂ ದಿಶಮ್|

13077019c ವಾಗ್ಯತಃ ಸರ್ಪಿಷಾ ಭೂಮೌ ಗವಾಂ ವ್ಯುಷ್ಟಿಂ ತಥಾಶ್ನುತೇ||

ಒದ್ದೆಯಾದ ಗೋಚರ್ಮದ ಮೇಲೆ ಕುಳಿತು ಊಟಮಾಡಬೇಕು. ಪಶ್ಚಿಮ ದಿಕ್ಕಿಗೆ ಮುಖಮಾಡಿ ಮೌನವಾಗಿ ನೆಲದ ಮೇಲೆ ಕುಳಿತುಕೊಂಡು ತುಪ್ಪವನ್ನು ಸೇವಿಸಿದರೆ ಸದಾ ಗೋವುಗಳ ಪುಷ್ಟಿಯಾಗುತ್ತದೆ.

13077020a ಘೃತೇನ ಜುಹುಯಾದಗ್ನಿಂ ಘೃತೇನ ಸ್ವಸ್ತಿ ವಾಚಯೇತ್|

13077020c ಘೃತಂ ದದ್ಯಾದ್ಘೃತಂ ಪ್ರಾಶೇದ್ಗವಾಂ ವ್ಯುಷ್ಟಿಂ ತಥಾಶ್ನುತೇ||

ಅಗ್ನಿಯಲ್ಲಿ ತುಪ್ಪದಿಂದಲೇ ಹವನ ಮಾಡಬೇಕು. ತುಪ್ಪದಿಂದ ಸ್ವಸ್ತಿವಾಚನವನ್ನು ಮಾಡಿಸಬೇಕು. ತುಪ್ಪವನ್ನು ದಾನ ಮಾಡಬೇಕು ಮತ್ತು ತಾನೂ ಗೋವಿನ ತುಪ್ಪವನ್ನು ಸೇವಿಸಬೇಕು. ಇದರಿಂದ ಮನುಷ್ಯನು ಸದಾ ಗೋವುಗಳ ಪುಷ್ಟಿ ಮತ್ತು ವೃದ್ಧಿಯನ್ನು ಪಡೆಯುತ್ತಾನೆ.

13077021a ಗೋಮತ್ಯಾ ವಿದ್ಯಯಾ ಧೇನುಂ ತಿಲಾನಾಮಭಿಮಂತ್ರ್ಯ ಯಃ|

13077021c ರಸರತ್ನಮಯೀಂ ದದ್ಯಾನ್ನ ಸ ಶೋಚೇತ್ಕೃತಾಕೃತೇ||

ರಸರತ್ನಮಯೀ ಎಳ್ಳಿನಿಂದ ತಯಾರಿಸಿದ ಹಸುವನ್ನು ಗೋಮತೀ ವಿದ್ಯೆಯಿಂದ ಅಭಿಮಂತ್ರಿಸಿ ಬ್ರಾಹ್ಮಣನಿಗೆ ದಾನಮಾಡುವವನು ಅವನು ಮಾಡಿದ ಶುಭಾಶುಭ ಕರ್ಮಗಳಿಗಾಗಿ ಶೋಕಿಸಬೇಕಾಗುವುದಿಲ್ಲ.

13077022a ಗಾವೋ ಮಾಮುಪತಿಷ್ಠಂತು ಹೇಮಶೃಂಗಾಃ ಪಯೋಮುಚಃ|

13077022c ಸುರಭ್ಯಃ ಸೌರಭೇಯಾಶ್ಚ ಸರಿತಃ ಸಾಗರಂ ಯಥಾ||

“ನದಿಗಳು ಸಮುದ್ರದ ಬಳಿಸಾಗುವಂತೆ ಹಾಲನ್ನೀಯುವ ಹೇಮಶೃಂಗಾ ಸುರಭಿಗಳು ಮತ್ತು ಸುರಭೇಯೀ ಗೋವುಗಳು ನನ್ನ ಹತ್ತಿರ ಬರಲಿ.

13077023a ಗಾವಃ ಪಶ್ಯಂತು ಮಾಂ ನಿತ್ಯಂ ಗಾವಃ ಪಶ್ಯಾಮ್ಯಹಂ ತದಾ|

13077023c ಗಾವೋಽಸ್ಮಾಕಂ ವಯಂ ತಾಸಾಂ ಯತೋ ಗಾವಸ್ತತೋ ವಯಮ್||

ನಾನು ನಿತ್ಯವೂ ಗೋವುಗಳನ್ನು ನೋಡುವಂತಾಗಲಿ ಮತ್ತು ಹಾಗೆಯೇ ನಿತ್ಯವೂ ಗೋವುಗಳು ನನ್ನನ್ನು ನೋಡುವಂತಾಗಲಿ. ಗೋವುಗಳು ನಮ್ಮವು ಮತ್ತು ನಾವು ಗೋವುಗಳವು. ಎಲ್ಲಿ ಗೋವುಗಳಿರುವವೋ ಅಲ್ಲಿಯೇ ನಾವೂ ಇರುವಂತಾಗಲಿ.”

13077024a ಏವಂ ರಾತ್ರೌ ದಿವಾ ಚೈವ ಸಮೇಷು ವಿಷಮೇಷು ಚ|

13077024c ಮಹಾಭಯೇಷು ಚ ನರಃ ಕೀರ್ತಯನ್ಮುಚ್ಯತೇ ಭಯಾತ್||

ಹೀಗೆ ದಿನ-ರಾತ್ರಿ ಸಮ-ವಿಷಮ ಸಮಯಗಳಲ್ಲಿ ಗೋವುಗಳ ಕೀರ್ತನೆಯನ್ನು ಮಾಡುವ ನರನು ಮಹಾಭಯದಿಂದಲೂ ಮುಕ್ತನಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಸಪ್ತಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.

[1] ವದತಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಗೋ-ಮಹಿಮೆಗಳ ಗೂಢ ರಹಸ್ಯವನ್ನು ಪ್ರಕಟಪಡಿಸುವ ವಿದ್ಯಾ (ಗೀತಾ ಪ್ರೆಸ್).

[3] ಹಾಲುಮಡ್ಡಿ ಗಿಡ

[4] ದೇವಯಜ್ಞ

[5] ಇಂದ್ರಯಾಗ

Comments are closed.