ಅನುಶಾಸನ ಪರ್ವ: ದಾನಧರ್ಮ ಪರ್ವ
೭೫
ಗೋದಾನ ಕಥನ
ಗೋದಾನದ ವಿಧಿ, ಗೋವುಗಳ ಪ್ರಾರ್ಥನೆ ಮತ್ತು ಗೋದಾನ ಮಾಡಿದ ರಾಜರ ವಿವರಣೆ (೧-೩೧).
13075001 ಯುಧಿಷ್ಠಿರ ಉವಾಚ|
13075001a ವಿಧಿಂ ಗವಾಂ ಪರಮಹಂ ಶ್ರೋತುಮಿಚ್ಚಾಮಿ ತತ್ತ್ವತಃ|
13075001c ಯೇನ ತಾನ್ ಶಾಶ್ವತಾಽಲ್ಲೋಕಾನಖಿಲಾನಶ್ನುವೀಮಹಿ[1]||
ಯುಧಿಷ್ಠಿರನು ಹೇಳಿದನು: “ಯಾವುದರಿಂದ ಶಾಶ್ವತಲೋಕಗಳನ್ನೂ ಮತ್ತು ಇಲ್ಲಿ ಅಖಿಲವನ್ನೂ ಪಡೆಯಬಹುದೋ ಆ ಗೋದಾನ ಪರಮ ವಿಧಿಯನ್ನು ತತ್ತ್ವತಃ ಕೇಳಲು ಇಚ್ಛಿಸುತ್ತೇನೆ.”
13075002 ಭೀಷ್ಮ ಉವಾಚ|
13075002a ನ ಗೋದಾನಾತ್ಪರಂ ಕಿಂ ಚಿದ್ವಿದ್ಯತೇ ವಸುಧಾಧಿಪ|
13075002c ಗೌರ್ಹಿ ನ್ಯಾಯಾಗತಾ ದತ್ತಾ ಸದ್ಯಸ್ತಾರಯತೇ ಕುಲಮ್||
ಭೀಷ್ಮನು ಹೇಳಿದನು: “ವಸುಧಾಧಿಪ! ಗೋದಾನಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ನ್ಯಾಯಗತವಾದ ಗೋವಿನ ದಾನವು ಕೂಡಲೇ ಕುಲವನ್ನು ಉದ್ಧರಿಸುತ್ತದೆ.
13075003a ಸತಾಮರ್ಥೇ ಸಮ್ಯಗುತ್ಪಾದಿತೋ ಯಃ
ಸ ವೈ ಕ್ಲೃಪ್ತಃ ಸಮ್ಯಗಿಷ್ಟಃ[2] ಪ್ರಜಾಭ್ಯಃ|
13075003c ತಸ್ಮಾತ್ಪೂರ್ವಂ ಹ್ಯಾದಿಕಾಲೇ ಪ್ರವೃತ್ತಂ
ಗವಾಂ ದಾನೇ ಶೃಣು ರಾಜನ್ವಿಧಿಂ ಮೇ||
ಸತ್ಪುರುಷರ ಸಲುವಾಗಿ ಋಷಿಗಳು ಗೋದಾನದ ಈ ವಿಧಿಯನ್ನು ರಚಿಸಿ ಪ್ರಜೆಗಳಿಗೆ ಅನುಗ್ರಹಿಸಿದ್ದಾರೆ. ರಾಜನ್! ಹಿಂದೆ ಆದಿಕಾಲದಿಂದಲೂ ಪ್ರವೃತ್ತವಾಗಿರುವ ಈ ಗೋದಾನದ ವಿಧಿಯನ್ನು ಕೇಳು.
13075004a ಪುರಾ ಗೋಷೂಪನೀತಾಸು ಗೋಷು ಸಂದಿಗ್ಧದರ್ಶಿನಾ|
13075004c ಮಾಂಧಾತ್ರಾ ಪ್ರಕೃತಂ ಪ್ರಶ್ನಂ ಬೃಹಸ್ಪತಿರಭಾಷತ||
ಹಿಂದೆ ತನ್ನ ಬಳಿ ಬಂದಿದ್ದ ಗೋವುಗಳನ್ನು ನೋಡಿ ಸಂದಿಗ್ಧನಾದ ಮಾಂಧಾತನ ಪ್ರಕೃತಪ್ರಶ್ನೆಗೆ ಬೃಹಸ್ಪತಿಯು ಹೇಳಿದನು.
13075005a ದ್ವಿಜಾತಿಮಭಿಸತ್ಕೃತ್ಯ ಶ್ವಃ ಕಾಲಮಭಿವೇದ್ಯ ಚ|
13075005c ಪ್ರದಾನಾರ್ಥೇ ನಿಯುಂಜೀತ ರೋಹಿಣೀಂ ನಿಯತವ್ರತಃ||
13075006a ಆಹ್ವಾನಂ ಚ ಪ್ರಯುಂಜೀತ ಸಮಂಗೇ ಬಹುಲೇತಿ ಚ|
13075006c ಪ್ರವಿಶ್ಯ ಚ ಗವಾಂ ಮಧ್ಯಮಿಮಾಂ ಶ್ರುತಿಮುದಾಹರೇತ್||
“ಬ್ರಾಹ್ಮಣನನ್ನು ಆಹ್ವಾನಿಸಿ ಸತ್ಕರಿಸಿ ನಾಳಿನ ಗೋದಾನದ ಕಾಲವನ್ನು ಅವನಿಗೆ ತಿಳಿಸಬೇಕು. ನಿಯತವ್ರತನಾಗಿ ದಾನಕ್ಕಿರುವ ಕೆಂಪುಬಣ್ಣದ ಹಸುವನ್ನು ತಂದು ಮುಟ್ಟಿ “ಸಮಂಗೇ ಬಹುಲೇ” ಎಂದು ಹೇಳಬೇಕು. ಅನಂತರ ಗೋವುಗಳ ಮಧ್ಯದಲ್ಲಿ ನಿಂತು ಈ ಮಂತ್ರವನ್ನು ಹೇಳಬೇಕು:
13075007a ಗೌರ್ಮೇ ಮಾತಾ ಗೋವೃಷಭಃ ಪಿತಾ ಮೇ
ದಿವಂ ಶರ್ಮ ಜಗತೀ ಮೇ ಪ್ರತಿಷ್ಠಾ|
13075007c ಪ್ರಪದ್ಯೈವಂ ಶರ್ವರೀಮುಷ್ಯ ಗೋಷು
ಮುನಿರ್ವಾಣೀಮುತ್ಸೃಜೇದ್ಗೋಪ್ರದಾನೇ||
“ಗೋವು ನನ್ನ ಮಾತಾ. ವೃಷಭನು ನನ್ನ ತಂದೆ. ಗೋ-ವೃಷಭಗಳೆರಡೂ ನನಗೆ ಸ್ವರ್ಗವನ್ನೂ ಐಹಿಕ ಸುಖವನ್ನೂ ದಯಪಾಲಿಸಲಿ. ಹಸುವೇ ನನ್ನ ಜೀವಿಕೆಗೆ ಆಧಾರಭೂತವಾಗಿದೆ.” ಹೀಗೆ ಹೇಳಿಕೊಂಡು ಗೋವನ್ನು ಶರಣುಹೊಂದಿ ಆ ಗೋವುಗಳ ಮಧ್ಯದಲ್ಲಿಯೇ ಮೌನಿಯಾಗಿ ರಾತ್ರಿಯನ್ನು ಕಳೆದು ಗೋದಾನ ಕಾಲದಲ್ಲಿಯೂ ಅದೇ ಮಂತ್ರವನ್ನು ಹೇಳಬೇಕು.
13075008a ಸ ತಾಮೇಕಾಂ ನಿಶಾಂ ಗೋಭಿಃ ಸಮಸಖ್ಯಃ ಸಮವ್ರತಃ|
13075008c ಐಕಾತ್ಮ್ಯಗಮನಾತ್ಸದ್ಯಃ ಕಲ್ಮಷಾದ್ವಿಪ್ರಮುಚ್ಯತೇ||
ಹೀಗೆ ಒಂದು ರಾತ್ರಿ ಗೋವುಗಳೊಡನಿದ್ದು ಸಮಸಖ್ಯನಾಗಿ ಸಮವ್ರತನಾಗಿ ನಡೆದುಕೊಂಡು ಏಕಾತ್ಮತೆಯನ್ನು ಹೊಂದಿದರೆ ಕೂಡಲೇ ಅವನು ಪಾಪಗಳಿಂದ ವಿಮುಕ್ತನಾಗುತ್ತಾನೆ.
13075009a ಉತ್ಸೃಷ್ಟವೃಷವತ್ಸಾ ಹಿ ಪ್ರದೇಯಾ ಸೂರ್ಯದರ್ಶನೇ|
13075009c ತ್ರಿವಿಧಂ[3] ಪ್ರತಿಪತ್ತವ್ಯಮರ್ಥವಾದಾಶಿಷಃ ಸ್ತವಾಃ||
ಸೂರ್ಯೋದಯದಲ್ಲಿ ಗಂಡುಕರುವಿನೊಡನೆ ಗೋವನ್ನು ದಾನಮಾಡಬೇಕು. ಇದರಿಂದ ಅಥರ್ವಮಂತ್ರದಲ್ಲಿರುವ ಆಶೀರ್ವಾದಗಳು ಗೋದಾನಿಗೆ ಸಫಲವಾಗುವವು.
13075010a ಊರ್ಜಸ್ವಿನ್ಯ ಊರ್ಜಮೇಧಾಶ್ಚ ಯಜ್ಞೋ
ಗರ್ಭೋಽಮೃತಸ್ಯ ಜಗತಶ್ಚ ಪ್ರತಿಷ್ಠಾ|
13075010c ಕ್ಷಿತೌ ರಾಧಃಪ್ರಭವಃ ಶಶ್ವದೇವ[4]
ಪ್ರಾಜಾಪತ್ಯಾಃ ಸರ್ವಮಿತ್ಯರ್ಥವಾದಃ||
“ಗೋವುಗಳು ಉತ್ಸಾಹಸಂಪನ್ನವಾದವುಗಳು. ಬಲ-ಬುದ್ಧಿ ಸಂಪನ್ನವಾದವುಗಳು. ಯಜ್ಞಾಂಗವಾದ ಅಮೃತಸ್ವರೂಪದ ಹವಿಸ್ಸನ್ನು ಗರ್ಭದಲ್ಲಿ ಧರಿಸಿರುವವು. ಜಗತ್ತಿಗೇ ಆಶ್ರಯವಾಗಿರುವವು. ಭೂಮಿಯಲ್ಲಿ ಬೆಳೆಯುವ ಎಲ್ಲವುಗಳ ಶಾಶ್ವತ ಮೂಲ. ಗೋವುಗಳು ಪ್ರಜಾಪತಿಯ ಮಕ್ಕಳು.” ಇದೇ ಗೋವಿನ ವಿಷಯದಲ್ಲಿರುವ ಅರ್ಥವಾದ.
13075011a ಗಾವೋ ಮಮೈನಃ ಪ್ರಣುದಂತು ಸೌರ್ಯಾಸ್
ತಥಾ ಸೌಮ್ಯಾಃ ಸ್ವರ್ಗಯಾನಾಯ ಸಂತು|
13075011c ಆಮ್ನಾತಾ ಮೇ ದದತೀರಾಶ್ರಯಂ ತು[5]
ತಥಾನುಕ್ತಾಃ ಸಂತು ಸರ್ವಾಶಿಷೋ ಮೇ||
ಸೂರ್ಯ-ಚಂದ್ರರ ಅಂಶದಿಂದ ಪ್ರಕಟವಾದ ಗೋವುಗಳು ನಮ್ಮ ಪಾಪಗಳನ್ನು ನಾಶಗೊಳಿಸಲಿ. ನಮಗೆ ಸ್ವರ್ಗಾದಿ ಉತ್ತಮ ಲೋಕಗಳನ್ನು ಪಡೆಯಲು ಸಹಾಯ ಮಾಡಲಿ. ಮಾತೆಯಂತೆ ನಮಗೆ ಆಶ್ರಯವನ್ನು ನೀಡಲಿ. ಈ ಮಂತ್ರಗಳಲ್ಲಿ ಹೇಳಿರುವ ಮತ್ತು ಹೇಳದೇ ಇರುವ ಎಲ್ಲ ಕಾಮನೆಗಳೂ ಗೋಮಾತೆಯ ಕೃಪೆಯಿಂದ ಪೂರ್ಣಗೊಳ್ಳಲಿ.
13075012a ಶೇಷೋತ್ಸರ್ಗೇ ಕರ್ಮಭಿರ್ದೇಹಮೋಕ್ಷೇ
ಸರಸ್ವತ್ಯಃ ಶ್ರೇಯಸಿ ಸಂಪ್ರವೃತ್ತಾಃ|
13075012c ಯೂಯಂ ನಿತ್ಯಂ ಪುಣ್ಯಕರ್ಮೋಪವಾಹ್ಯಾ
ದಿಶಧ್ವಂ ಮೇ ಗತಿಮಿಷ್ಟಾಂ ಪ್ರಪನ್ನಾಃ||
ಗೋಮಾತೇ! ಸೇವೆಗೈದು ನಿನ್ನನ್ನು ಆರಾಧಿಸುವವರಿಗೆ ಅವರ ಕರ್ಮಗಳಿಂದ ಪ್ರಸನ್ನಳಾಗಿ ಅವರಿಗೆ ಕ್ಷಯ ಮೊದಲಾದಿ ರೋಗಗಳಿಂದ ಮುಕ್ತರನ್ನಾಗಿಸು ಮತ್ತು ಜ್ಞಾನವನ್ನು ನೀಡಿ ಅವರನ್ನು ದೇಹಬಂಧನದಿಂದ ಮುಕ್ತಗೊಳಿಸು. ನಿನ್ನ ಸೇವೆಯಲ್ಲಿ ನಿರತರಾಗಿರುವವರ ಕಲ್ಯಾಣಕ್ಕಾಗಿ ನೀನು ನದೀ ಸರಸ್ವತಿಯಂತೆ ಸದಾ ಪ್ರಯತ್ನಿಸುತ್ತೀಯೆ. ನಮ್ಮ ಮೇಲೆ ಸದಾ ಪ್ರಸನ್ನಳಾಗಿರು ಮತ್ತು ಸಮಸ್ತ ಪುಣ್ಯಗಳ ಮೂಲಕ ದೊರೆಯುವ ಅಭೀಷ್ಟಗತಿಗಳನ್ನು ನೀಡು.”
13075013a ಯಾ ವೈ ಯೂಯಂ ಸೋಽಹಮದ್ಯೈಕಭಾವೋ
ಯುಷ್ಮಾನ್ದತ್ತ್ವಾ ಚಾಹಮಾತ್ಮಪ್ರದಾತಾ|
13075013c ಮನಶ್ಚ್ಯುತಾ ಮನಏವೋಪಪನ್ನಾಃ
ಸಂಧುಕ್ಷಧ್ವಂ ಸೌಮ್ಯರೂಪೋಗ್ರರೂಪಾಃ||
13075014a ಏವಂ ತಸ್ಯಾಗ್ರೇ ಪೂರ್ವಮರ್ಧಂ ವದೇತ
ಗವಾಂ ದಾತಾ ವಿಧಿವತ್ಪೂರ್ವದೃಷ್ಟಮ್|
13075014c ಪ್ರತಿಬ್ರೂಯಾಚ್ಚೇಷಮರ್ಧಂ ದ್ವಿಜಾತಿಃ
ಪ್ರತಿಗೃಹ್ಣನ್ವೈ ಗೋಪ್ರದಾನೇ ವಿಧಿಜ್ಞಃ||
ಅನಂತರ ಗೋವನ್ನು ನೀಡುವವನು ವಿಧಿವತ್ತಾಗಿ ಈ ಕೆಳಗಿನ ಅರ್ಧಶ್ಲೋಕವನ್ನು ಹೇಳಬೇಕು: “ಯಾ ವೈ ಯೂಯಂ ಸೋಽಹಮಧ್ಯೈಕಭಾವೋ ಯುಷ್ಮಾನ್ದತ್ತ್ವಾ ಚಾಹಮಾತ್ಮಪ್ರದಾತಾ| ಅರ್ಥಾತ್ ಗೋಮಾತಾ! ನಿನ್ನ ಸ್ವರೂಪವು ನನ್ನ ಸ್ವರೂಪವೂ ಹೌದು. ನೀನು ಮತ್ತು ನನ್ನಲ್ಲಿ ಯಾವ ಭೇದವೂ ಇಲ್ಲ. ಆದುದರಿಂದ ಇಂದು ನಿನ್ನನ್ನು ದಾನವನ್ನಾಗಿತ್ತು ನಾನು ನನ್ನನ್ನೇ ದಾನವನ್ನಾಗಿ ಕೊಟ್ಟಿದ್ದೇನೆ.” ದಾನಮಾಡುವವನು ಹೀಗೆ ಹೇಳಿದ ನಂತರ ದಾನ ಗ್ರಹಣಮಾಡುವ ಗೋಪ್ರದಾನ ವಿಧಿಜ್ಞ ಬ್ರಾಹ್ಮಣನು ಉಳಿದ ಅರ್ಧಶ್ಲೋಕವನ್ನು ಹೇಳಬೇಕು: “ಮನಶ್ಚ್ಯುತಾ ಮನಏವೋಪಪನ್ನಾಃ ಸಂಧುಕ್ಷಧ್ವಂ ಸೌಮ್ಯರೂಪೋಗ್ರರೂಪಾ|| ಅರ್ಥಾತ್ ಗೋಮಾತ! ನೀನು ಸೌಮ್ಯ ಮತ್ತು ಉಗ್ರರೂಪಗಳನ್ನು ಧರಿಸಬಲ್ಲೆ. ಇನ್ನು ನಿನ್ನನ್ನು ಕೊಡುವವನಿಗೆ ನಿನ್ನ ಮೇಲಿನ ಅಧಿಕಾರವಿಲ್ಲ. ಈಗ ನೀನು ನನ್ನ ಅಧಿಕಾರದಲ್ಲಿ ಬಂದಿದ್ದೀಯೆ. ಆದುದರಿಂದ ಅಭೀಷ್ಟ ಭೋಗವನ್ನು ನೀಡಿ ನೀನು ನನ್ನನ್ನು ಮತ್ತು ದಾತನನ್ನೂ ಪ್ರಸನ್ನಗೊಳಿಸು.”
13075015a ಗಾಂ ದದಾನೀತಿ ವಕ್ತವ್ಯಮರ್ಘ್ಯವಸ್ತ್ರವಸುಪ್ರದಃ|
13075015c ಊಧಸ್ಯಾ ಭರಿತವ್ಯಾ[6] ಚ ವೈಷ್ಣವೀತಿ ಚ ಚೋದಯೇತ್||
13075016a ನಾಮ ಸಂಕೀರ್ತಯೇತ್ತಸ್ಯಾ ಯಥಾಸಂಖ್ಯೋತ್ತರಂ ಸ ವೈ|
ಗೋವಿನ ನಿಷ್ಕ್ರಯ ರೂಪದಲ್ಲಿ ಯಾರು ಅದರ ಮೌಲ್ಯ, ವಸ್ತ್ರ ಅಥವಾ ಸುವರ್ಣವನ್ನು ದಾನಮಾಡುತ್ತಾರೋ ಅವರನ್ನೂ ಗೋದಾತರೆಂದೇ ಕರೆಯಬೇಕು. ಮೌಲ್ಯ, ವಸ್ತ್ರ ಮತ್ತು ಸುವರ್ಣರೂಪದಲ್ಲಿ ದಾನಮಾಡುವ ಗೋವುಗಳ ಹೆಸರುಗಳು ಕ್ರಮಶಃ ಊಧಸ್ಯಾ, ಭವಿತವ್ಯಾ ಮತ್ತು ವೈಷ್ಣವೀ ಎಂದು. ಸಂಕಲ್ಪದ ಸಮಯದಲ್ಲಿ ಇದೇ ಹೆಸರುಗಳಿಂದ ಉಚ್ಚರಿಸಬೇಕು; ಅರ್ಥಾತ್, “ಇಮಾಂ ಊಧಸ್ಯಾಂ”, “ಇಮಾಂ ಭರಿತವ್ಯಾಂ”, “ಇಮಾಂ ವೈಷ್ಣವೀಂ ತುಭ್ಯಮಹಂ ಸಂಪ್ರದದೇ ತ್ವಂ ಗೃಹಾಣ” ಎಂದು ಹೇಳಿ ಬ್ರಾಹ್ಮಣನಿಗೆ ಅದನ್ನು ದಾನಗ್ರಹಣ ಮಾಡಲು ಪ್ರೇರೇಪಿಸಬೇಕು.
13075016c ಫಲಂ ಷಡ್ವಿಂಶದಷ್ಟೌ[7] ಚ ಸಹಸ್ರಾಣಿ ಚ ವಿಂಶತಿಃ||
13075017a ಏವಮೇತಾನ್ಗುಣಾನ್ ವೃದ್ಧಾನ್ಗವಾದೀನಾಂ ಯಥಾಕ್ರಮಮ್|
13075017c ಗೋಪ್ರದಾತಾ ಸಮಾಪ್ನೋತಿ ಸಮಸ್ತಾನಷ್ಟಮೇ ಕ್ರಮೇ||
ಇವುಗಳ ದಾನದ ಫಲವು ಕ್ರಮಶಃ ಈ ಪ್ರಕಾರದಲ್ಲಿದೆ: ಗೋವಿನ ಮೌಲ್ಯವನ್ನು ಕೊಡುವವನು ಮೂವತ್ತೆರಡು ಸಾವಿರ ವರ್ಷಗಳ ವರೆಗೆ, ಗೋವಿನ ಬದಲಾಗಿ ವಸ್ತ್ರವನ್ನು ದಾನಮಾಡುವವನು ಎಂಟು ಸಾವಿರ ವರ್ಷಗಳ ವರೆಗೆ ಮತ್ತು ಗೋವಿನ ಬದಲಾಗಿ ಸುವರ್ಣವನ್ನು ದಾನಮಾಡುವವನು ಇಪ್ಪತ್ತು ಸಾವಿರ ವರ್ಷಗಳ ವರೆಗೆ ಪರಲೋಕದಲ್ಲಿ ಸುಖವನ್ನು ಅನುಭವಿಸುತ್ತಾನೆ. ಹೀಗೆ ಗೋವಿನ ನಿಷ್ಕ್ರಯ ದಾನದ ಫಲಗಳನ್ನು ಹೇಳಿದ್ದಾರೆ. ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಸಾಕ್ಷಾತ್ ಗೋವಿನ ದಾನವನ್ನು ಸ್ವೀಕರಿಸಿ ಬ್ರಾಹ್ಮಣನು ತನ್ನ ಮನೆಯ ಕಡೆಗೆ ಹೊರಟಾಗ ಅವನು ಎಂಟು ಹೆಜ್ಜೆ ಹೋಗುತ್ತಲೇ ಗೋದಾನಮಾಡಿದವನಿಗೆ ತನ್ನ ದಾನದ ಫಲವು ದೊರೆಯುತ್ತದೆ.
13075018a ಗೋದಃ ಶೀಲೀ ನಿರ್ಭಯಶ್ಚಾರ್ಘದಾತಾ
ನ ಸ್ಯಾದ್ದುಃಖೀ ವಸುದಾತಾ ಚ ಕಾಮೀ|
13075018c ಊಧಸ್ಯೋಢಾ ಭಾರತ ಯಶ್ಚ ವಿದ್ವಾನ್
ವ್ಯಾಖ್ಯಾತಾಸ್ತೇ ವೈಷ್ಣವಾಶ್ಚಂದ್ರಲೋಕಾಃ||
ಸಾಕ್ಷಾತ್ ಗೋವನ್ನು ದಾನಮಾಡುವವನು ಶೀಲವಂತನೂ, ಅದರ ಮೌಲ್ಯವನ್ನು ದಾನಮಾಡುವವನು ನಿರ್ಭಯನೂ ಆಗುತ್ತಾನೆ. ಗೋವಿನ ಬದಲಾಗಿ ಇಚ್ಛಾನುಸಾರ ಸುವರ್ಣದಾನವನ್ನು ಮಾಡುವವನು ಎಂದೂ ದುಃಖದಲ್ಲಿ ಬೀಳುವುದಿಲ್ಲ. ಪ್ರಾತಃಕಾಲ ಎದ್ದು ನಿತ್ಯ ನಿಯಮಗಳನ್ನು ಅನುಷ್ಠಾನಮಾಡುವ, ಮಹಾಭಾರತದ ವಿದ್ವಾಂಸ, ಹಾಗೂ ವಿಖ್ಯಾತ ವೈಷ್ಣವ ಇವರೆಲ್ಲರೂ ಚಂದ್ರಲೋಕಕ್ಕೆ ಹೋಗುತ್ತಾರೆ.
13075019a ಗಾ ವೈ ದತ್ತ್ವಾ ಗೋವ್ರತೀ ಸ್ಯಾತ್ತ್ರಿರಾತ್ರಂ
ನಿಶಾಂ ಚೈಕಾಂ ಸಂವಸೇತೇಹ ತಾಭಿಃ|
13075019c ಕಾಮ್ಯಾಷ್ಟಮ್ಯಾಂ ವರ್ತಿತವ್ಯಂ ತ್ರಿರಾತ್ರಂ
ರಸೈರ್ವಾ ಗೋಃ ಶಕೃತಾ ಪ್ರಸ್ನವೈರ್ವಾ||
ಗೋದಾನವನ್ನು ಮಾಡಿದವನು ಮೂರು ರಾತ್ರಿಗಳ ಗೋವ್ರತವನ್ನು ಪಾಲಿಸಬೇಕು ಮತ್ತು ಒಂದು ರಾತ್ರಿ ಗೋವುಗಳೊಡನೆಯೇ ಇರಬೇಕು. ಕಾಮಾಷ್ಟಮಿಯಿಂದ ಮೂರು ರಾತ್ರಿಗಳ ವರೆಗೆ ಸಗಣಿ, ಗೋವಿನ ಹಾಲು ಅಥವಾ ಗೋರಸದ ಆಹಾರವನ್ನು ಮಾತ್ರ ಸೇವಿಸಬೇಕು.
13075020a ವೇದವ್ರತೀ ಸ್ಯಾದ್ವೃಷಭಪ್ರದಾತಾ
ವೇದಾವಾಪ್ತಿರ್ಗೋಯುಗಸ್ಯ ಪ್ರದಾನೇ|
13075020c ತಥಾ ಗವಾಂ ವಿಧಿಮಾಸಾದ್ಯ ಯಜ್ವಾ
ಲೋಕಾನಗ್ರ್ಯಾನ್ವಿಂದತೇ ನಾವಿಧಿಜ್ಞಃ||
ಹೋರಿಯನ್ನು ದಾನಮಾಡುವವನು ದೇವವ್ರತಿ[8]ಯಾಗುತ್ತಾನೆ. ಗೋವು ಮತ್ತು ಹೋರಿಯನ್ನು ದಾನಮಾಡುವವನಿಗೆ ವೇದಪ್ರಾಪ್ತಿಯಾಗುತ್ತದೆ. ವಿಧಿಪೂರ್ವಕವಾಗಿ ಗೋದಾನ ಯಜ್ಞವನ್ನು ಮಾಡುವವನಿಗೆ ಉತ್ತಮ ಲೋಕವು ದೊರೆಯುತ್ತದೆ. ಆದರೆ ವಿಧಿಯನ್ನು ತಿಳಿಯದವನಿಗೆ ಉತ್ತಮ ಫಲದ ಪ್ರಾಪ್ತಿಯಾಗುವುದಿಲ್ಲ.
13075021a ಕಾಮಾನ್ಸರ್ವಾನ್ ಪಾರ್ಥಿವಾನೇಕಸಂಸ್ಥಾನ್
ಯೋ ವೈ ದದ್ಯಾತ್ಕಾಮದುಘಾಂ ಚ ಧೇನುಮ್|
13075021c ಸಮ್ಯಕ್ತಾಃ ಸ್ಯುರ್ಹವ್ಯಕವ್ಯೌಘವತ್ಯಸ್
ತಾಸಾಮುಕ್ಷ್ಣಾಂ ಜ್ಯಾಯಸಾಂ ಸಂಪ್ರದಾನಮ್||
ಹಾಲುಕೊಡುವ ಧೇನುವನ್ನು ಇಚ್ಛಾನುಸಾರ ದಾನಮಾಡುವವನು ಸಮಸ್ತ ಪಾರ್ಥಿವ ಭೋಗಗಳನ್ನು ಒಟ್ಟಾರೆ ದಾನಮಾಡಿದ ಹಾಗೆ ಎಂದು ತಿಳಿದುಕೋ. ಒಂದೇ ಗೋವಿನ ದಾನದ ಮಹಾತ್ಮೆಯು ಇಷ್ಟಿರುವಾಗ ಹವ್ಯಕವ್ಯದ ರಾಶಿಯಿಂದ ಸುಶೋಭಿತ ಅನೇಕ ಗೋವುಗಳನ್ನು ವಿಧಿಪೂರ್ವಕವಾಗಿ ದಾನಮಾಡಿದರೆ ಎಷ್ಟೊಂದು ಅಧಿಕ ಫಲವು ದೊರಕಬಹುದು! ಯುವ ಹೋರಿಗಳನ್ನು ದಾನಮಾಡುವುದರಿಂದ ಇದಕ್ಕಿಂತಲೂ ಅಧಿಕ ಪುಣ್ಯವು ದೊರೆಯುತ್ತದೆ.
13075022a ನ ಚಾಶಿಷ್ಯಾಯಾವ್ರತಾಯೋಪಕುರ್ಯಾನ್
ನಾಶ್ರದ್ದಧಾನಾಯ ನ ವಕ್ರಬುದ್ಧಯೇ|
13075022c ಗುಹ್ಯೋ ಹ್ಯಯಂ ಸರ್ವಲೋಕಸ್ಯ ಧರ್ಮೋ
ನೇಮಂ ಧರ್ಮಂ ಯತ್ರ ತತ್ರ ಪ್ರಜಲ್ಪೇತ್||
ತನ್ನ ಶಿಷ್ಯನಲ್ಲದ, ವ್ರತಪಾಲನೆಯನ್ನು ಮಾಡದ, ಶ್ರದ್ಧೆಯಿಲ್ಲದ, ಕುಟಿಲಬುದ್ಧಿಯ ಪುರುಷರಿಗೆ ಈ ಗೋದಾನವಿಧಿಯನ್ನು ಉಪದೇಶಿಸಬಾರದು. ಏಕೆಂದರೆ ಇದು ಎಲ್ಲಕ್ಕಿಂತಲೂ ಗೋಪನೀಯ ಧರ್ಮವು. ಆದುದರಿಂದ ಇದನ್ನು ಅಲ್ಲಿ ಇಲ್ಲಿ ಸರ್ವತ್ರ ಪ್ರಚಾರ ಮಾಡಬಾರದು.
13075023a ಸಂತಿ ಲೋಕೇ ಶ್ರದ್ದಧಾನಾ[9] ಮನುಷ್ಯಾಃ
ಸಂತಿ ಕ್ಷುದ್ರಾ ರಾಕ್ಷಸಾ ಮಾನುಷೇಷು|
13075023c ಯೇಷಾಂ ದಾನಂ ದೀಯಮಾನಂ ಹ್ಯನಿಷ್ಟಂ
ನಾಸ್ತಿಕ್ಯಂ ಚಾಪ್ಯಾಶ್ರಯಂತೇ ಹ್ಯಪುಣ್ಯಾಃ||
ಲೋಕದಲ್ಲಿ ಅನೇಕ ಶ್ರದ್ಧೆಯಿಲ್ಲದಿರುವ ಮನುಷ್ಯರಿದ್ದಾರೆ. ಮನುಷ್ಯರಲ್ಲಿಯೂ ಕ್ಷುದ್ರ ರಾಕ್ಷಸರಿದ್ದಾರೆ. ಎಷ್ಟೋ ಮಂದಿ ನಾಸ್ತಿಕ್ಯವನ್ನು ಆಶ್ರಯಿಸಿ ಅಪುಣ್ಯರಾಗಿರುತ್ತಾರೆ. ಅಂಥವರಿಗೆ ಈ ದಾನದ ಉಪದೇಶವನ್ನು ನೀಡುವುದು ಅನಿಷ್ಟಕಾರಕವಾಗುತ್ತದೆ.
13075024a ಬಾರ್ಹಸ್ಪತ್ಯಂ ವಾಕ್ಯಮೇತನ್ನಿಶಮ್ಯ
ಯೇ ರಾಜಾನೋ ಗೋಪ್ರದಾನಾನಿ ಕೃತ್ವಾ|
13075024c ಲೋಕಾನ್ ಪ್ರಾಪ್ತಾಃ ಪುಣ್ಯಶೀಲಾಃ ಸುವೃತ್ತಾಸ್
ತಾನ್ಮೇ ರಾಜನ್ಕೀರ್ತ್ಯಮಾನಾನ್ನಿಬೋಧ||
ಬೃಹಸ್ಪತಿಯ ಈ ಉಪದೇಶವನ್ನು ಕೇಳಿ ಯಾವ ಪುಣ್ಯಶೀಲ ಸುಶೀಲ ರಾಜರು ಗೋದಾನವನ್ನು ಮಾಡಿ ಪುಣ್ಯ ಲೋಕಗಳನ್ನು ಪಡೆದರೋ ಆ ರಾಜರ ಹೆಸರುಗಳನ್ನು ಹೇಳುತ್ತೇನೆ ಕೇಳು.
13075025a ಉಶೀನರೋ ವಿಷ್ವಗಶ್ವೋ ನೃಗಶ್ಚ
ಭಗೀರಥೋ ವಿಶ್ರುತೋ ಯೌವನಾಶ್ವಃ|
13075025c ಮಾಂಧಾತಾ ವೈ ಮುಚುಕುಂದಶ್ಚ ರಾಜಾ
ಭೂರಿದ್ಯುಮ್ನೋ ನೈಷಧಃ ಸೋಮಕಶ್ಚ||
13075026a ಪುರೂರವಾ ಭರತಶ್ಚಕ್ರವರ್ತೀ
ಯಸ್ಯಾನ್ವಯೇ ಭಾರತಾಃ ಸರ್ವ ಏವ|
13075026c ತಥಾ ವೀರೋ ದಾಶರಥಿಶ್ಚ ರಾಮೋ
ಯೇ ಚಾಪ್ಯನ್ಯೇ ವಿಶ್ರುತಾಃ ಕೀರ್ತಿಮಂತಃ||
13075027a ತಥಾ ರಾಜಾ ಪೃಥುಕರ್ಮಾ ದಿಲೀಪೋ
ದಿವಂ ಪ್ರಾಪ್ತೋ ಗೋಪ್ರದಾನೇ ವಿಧಿಜ್ಞಃ|
13075027c ಯಜ್ಞೈರ್ದಾನೈಸ್ತಪಸಾ ರಾಜಧರ್ಮೈರ್
ಮಾಂಧಾತಾಭೂದ್ಗೋಪ್ರದಾನೈಶ್ಚ ಯುಕ್ತಃ||
ಉಶೀನರ, ವಿಷ್ವಗಶ್ವ, ನೃಗ, ಭಗೀರಥ, ವಿಶ್ರುತ ಯೌವನಾಶ್ವ, ಮಾಂಧಾತಾ, ರಾಜಾ ಮುಚುಕುಂದ, ಭೂರಿದ್ಯುಮ್ನ, ನೈಷಧ ನಲ, ಸೋಮಕ, ಪುರೂರವ, ಯಾರ ವಂಶದಲ್ಲಾದವರೆಲ್ಲರನ್ನೂ ಭಾರತರೆಂದು ಕರೆಯುತ್ತಾರೋ ಆ ಭರತ ಚಕ್ರವರ್ತೀ, ವೀರ ದಾಶರಥಿ ರಾಮ, ಮತ್ತು ಅನ್ಯ ಕೀರ್ತಿಮಂತ ರಾಜಾ ಪೃಥುಕರ್ಮಾ ದಿಲೀಪ – ಈ ಎಲ್ಲ ವಿಧಿಜ್ಞ ನರೇಶರೂ ಗೋದಾನವನ್ನು ಮಾಡಿ ಸ್ವರ್ಗಲೋಕವನ್ನು ಪಡೆದುಕೊಂಡರು. ರಾಜಾ ಮಾಂಧಾತನಾದರೋ ಯಜ್ಞ, ದಾನ, ತಪಸ್ಯಾ, ರಾಜಧರ್ಮ ಮತ್ತು ಗೋದಾನಾದಿ ಎಲ್ಲ ಶ್ರೇಷ್ಠ ಗುಣಗಳಿಂದ ಸಂಪನ್ನನಾಗಿದ್ದನು.
13075028a ತಸ್ಮಾತ್ಪಾರ್ಥ ತ್ವಮಪೀಮಾಂ ಮಯೋಕ್ತಾಂ
ಬಾರ್ಹಸ್ಪತೀಂ ಭಾರತೀಂ ಧಾರಯಸ್ವ|
13075028c ದ್ವಿಜಾಗ್ರ್ಯೇಭ್ಯಃ ಸಂಪ್ರಯಚ್ಚ ಪ್ರತೀತೋ
ಗಾಃ ಪುಣ್ಯಾ ವೈ ಪ್ರಾಪ್ಯ ರಾಜ್ಯಂ ಕುರೂಣಾಮ್||
ಆದುದರಿಂದ ಪಾರ್ಥ! ನೀನೂ ಕೂಡ ನಾನು ಹೇಳಿದ ಬೃಹಸ್ಪತಿಯ ಈ ಉಪದೇಶವನ್ನು ಧಾರಣೆ ಮಾಡಿಕೊಂಡು ಕೌರವ ರಾಜ್ಯದ ಅಧಿಕಾರವನ್ನು ಪಡೆದು ಉತ್ತಮ ಬ್ರಾಹ್ಮಣರಿಗೆ ಪ್ರಸನ್ನತಾಪೂರ್ವಕ ಪವಿತ್ರ ಗೋವುಗಳನ್ನು ದಾನಮಾಡು.””
13075029 ವೈಶಂಪಾಯನ ಉವಾಚ|
13075029a ತಥಾ ಸರ್ವಂ ಕೃತವಾನ್ ಧರ್ಮರಾಜೋ
ಭೀಷ್ಮೇಣೋಕ್ತೋ ವಿಧಿವದ್ಗೋಪ್ರದಾನೇ|
13075029c ಸ ಮಾಂಧಾತುರ್ದೇವದೇವೋಪದಿಷ್ಟಂ
ಸಮ್ಯಗ್ಧರ್ಮಂ ಧಾರಯಾಮಾಸ ರಾಜಾ||
ವೈಶಂಪಾಯನನು ಹೇಳಿದನು: “ಭೀಷ್ಮನು ಹೀಗೆ ವಿಧಿವತ್ತಾಗಿ ಗೋದಾನ ಮಾಡಲು ಆಜ್ಞೆಯನ್ನು ನೀಡಲು ಧರ್ಮರಾಜ ಯುಧಿಷ್ಠಿರನು ಹಾಗೆಯೇ ಮಾಡಿದನು ಮತ್ತು ದೇವತೆಗಳಿಗೂ ದೇವ ಬೃಹಸ್ಪತಿಯು ಮಾಂಧಾತನಿಗೆ ನೀಡಿದ ಉತ್ತಮ ಕರ್ಮಗಳ ಉಪದೇಶವನ್ನು ಚೆನ್ನಾಗಿ ಸ್ಮರಿಸಿಕೊಂಡನು.
13075030a ಇತಿ ನೃಪ ಸತತಂ ಗವಾಂ ಪ್ರದಾನೇ
ಯವಶಕಲಾನ್ಸಹ ಗೋಮಯೈಃ ಪಿಬಾನಃ|
13075030c ಕ್ಷಿತಿತಲಶಯನಃ ಶಿಖೀ ಯತಾತ್ಮಾ
ವೃಷ ಇವ ರಾಜವೃಷಸ್ತದಾ ಬಭೂವ||
ನೃಪ! ರಾಜರಲ್ಲಿಯೇ ಶ್ರೇಷ್ಠ ಯುಧಿಷ್ಠಿರನು ಸದಾ ಗೋದಾನನಿರತನಾಗಿದ್ದನು. ಗೋಮಯ-ಗೋಮೂತ್ರಗಳೊಂದಿಗೆ ಗೋಧಿಯ ಕಾಳುಗಳನ್ನು ಸೇವಿಸುತ್ತಾ ನೆಲದ ಮೇಲೆ ಮಲಗುತ್ತಾ ಜಲಾಹಾರಿಯಾಗಿ ಇಂದ್ರಿಯಗಳನ್ನು ಸಂಯಮಿಸಿ, ಶಿರದಲ್ಲಿ ಜಟೆಯನ್ನು ಧರಿಸಿ, ಸಾಕ್ಷಾತ್ ಧರ್ಮಮೂರ್ತಿಯಂತೆಯೇ ಕಾಣುತ್ತಿದ್ದನು.
13075031a ಸ ನೃಪತಿರಭವತ್ಸದೈವ ತಾಭ್ಯಃ
ಪ್ರಯತಮನಾ ಹ್ಯಭಿಸಂಸ್ತುವಂಶ್ಚ ಗಾ ವೈ|
13075031c ನೃಪಧುರಿ ಚ ನ ಗಾಮಯುಂಕ್ತ ಭೂಯಸ್
ತುರಗವರೈರಗಮಚ್ಚ ಯತ್ರ ತತ್ರ||
ನೃಪತಿ ಯುಧಿಷ್ಠಿರನು ಸದಾ ಗೋವುಗಳಿಗೆ ವಿನೀತನಾಗಿ ಅವುಗಳನ್ನು ಸ್ತುತಿಸುತ್ತಿದ್ದನು. ಅದರ ನಂತರ ಅವನು ಎಂದೂ ಹೋರಿಗಳನ್ನು ತನ್ನ ವಾಹನವನ್ನಾಗಿ ಬಳಸಲಿಲ್ಲ. ಅವನು ಶ್ರೇಷ್ಠ ಕುದುರೆಗಳ ಮೇಲೆಯೇ ಅಲ್ಲಲ್ಲಿ ಸಂಚರಿಸುತ್ತಿದ್ದನು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋದಾನಕಥನೇ ಪಂಚಸಪ್ತತಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋದಾನಕಥನ ಎನ್ನುವ ಎಪ್ಪತ್ತೈದನೇ ಅಧ್ಯಾಯವು.
[1] ಆಶ್ವತಾಲ್ಲೋಕಾನರ್ಥಿನಾಂ ಪ್ರಾಪ್ನುಯಾದಿಹ| (ಭಾರತ ದರ್ಶನ, ಗೀತಾಪ್ರೆಸ್).
[2] ಸಮ್ಯಗಾಭ್ಯಃ (ಭಾರತ ದರ್ಶನ, ಗೀತಾ ಪ್ರೆಸ್).
[3] ತ್ರಿದಿವಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಕ್ಷಿತೇ ರೋಹಃ ಪ್ರವಹಃ ಶಶ್ವದೇವ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಆತ್ಮಾನಂ ಮೇ ಮಾತೃವಚ್ಚಾಶ್ರಯಂತು ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[6] ಊರ್ಧ್ವಸ್ಯಾ ಭವಿತವ್ಯಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[7] ಷಟ್ತ್ರಿಂಶದಷ್ಟೌ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[8] ಸೂರ್ಯಮಂಡಲವನ್ನು ಭೇದಿಸಿ ಹೋಗುವ ಬ್ರಹ್ಮಚಾರೀ (ಗೀತಾ ಪ್ರೆಸ್).
[9] ಲೋಕೇಽಶ್ರದ್ಧಧಾನಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).