ಅನುಶಾಸನ ಪರ್ವ: ದಾನಧರ್ಮ ಪರ್ವ
೬೬
ಪಾನೀಯದಾನಫಲ (೧-೧೯).
13066001 ಯುಧಿಷ್ಠಿರ ಉವಾಚ|
13066001a ಶ್ರುತಂ ದಾನಫಲಂ ತಾತ ಯತ್ತ್ವಯಾ ಪರಿಕೀರ್ತಿತಮ್|
13066001c ಅನ್ನಂ ತು ತೇ ವಿಶೇಷೇಣ ಪ್ರಶಸ್ತಮಿಹ ಭಾರತ||
ಯುಧಿಷ್ಠಿರನು ಹೇಳಿದನು: “ತಾತ! ಭಾರತ! ಅನ್ನದಾನವನ್ನು ವಿಶೇಷವಾಗಿ ಪ್ರಶಂಸಿಸಿದ ನಿನ್ನಿಂದ ದಾನಫಲಗಳ ಕುರಿತು ಕೇಳಿದೆ.
13066002a ಪಾನೀಯದಾನಂ ಪರಮಂ ಕಥಂ ಚೇಹ ಮಹಾಫಲಮ್|
13066002c ಇತ್ಯೇತಚ್ಚ್ರೋತುಮಿಚ್ಚಾಮಿ ವಿಸ್ತರೇಣ ಪಿತಾಮಹ||
ಪಿತಾಮಹ! ಜಲದಾನದಿಂದ ಯಾವ ಪರಮ ಮಹಾಫಲವು ದೊರೆಯುತ್ತದೆ ಎನ್ನುವುದನ್ನು ವಿಸ್ತಾರವಾಗಿ ಕೇಳ ಬಯಸುತ್ತೇನೆ.”
13066003 ಭೀಷ್ಮ ಉವಾಚ|
13066003a ಹಂತ ತೇ ವರ್ತಯಿಷ್ಯಾಮಿ ಯಥಾವದ್ಭರತರ್ಷಭ|
13066003c ಗದತಸ್ತನ್ಮಮಾದ್ಯೇಹ ಶೃಣು ಸತ್ಯಪರಾಕ್ರಮ|
ಭೀಷ್ಮನು ಹೇಳಿದನು: “ಭರತರ್ಷಭ! ಸತ್ಯಪರಾಕ್ರಮಿ! ನಾನು ಯಥಾವತ್ತಾಗಿ ಹೇಳುತ್ತೇನೆ. ಇಂದು ನೀನು ನನ್ನ ಬಾಯಿಂದ ಇದನ್ನು ಹೇಳುವುದನ್ನು ಕೇಳು.
13066003e ಪಾನೀಯದಾನಾತ್ಪ್ರಭೃತಿ ಸರ್ವಂ ವಕ್ಷ್ಯಾಮಿ ತೇಽನಘ||
13066004a ಯದನ್ನಂ ಯಚ್ಚ ಪಾನೀಯಂ ಸಂಪ್ರದಾಯಾಶ್ನುತೇ ನರಃ|
ಅನಘ! ಜಲದಾನದಿಂದ ಪ್ರಾರಂಭಿಸಿ ಎಲ್ಲ ದಾನಗಳ ಫಲವನ್ನೂ ನಿನಗೆ ಹೇಳುತ್ತೇನೆ. ಅನ್ನ ಮತ್ತು ಜಲದಾನಗಳನ್ನು ಮಾಡಿದ ನರನು ಯಾವ ಫಲಗಳನ್ನು ಪಡೆಯುತ್ತಾನೆ ಕೇಳು.
13066004c ನ ತಸ್ಮಾತ್ಪರಮಂ ದಾನಂ ಕಿಂ ಚಿದಸ್ತೀತಿ ಮೇ ಮತಿಃ||
13066005a ಅನ್ನಾತ್ಪ್ರಾಣಭೃತಸ್ತಾತ ಪ್ರವರ್ತಂತೇ ಹಿ ಸರ್ವಶಃ|
ಅನ್ನ ಮತ್ತು ಜಲದಾನಗಳಿಗಿಂತ ಪರಮ ದಾನವು ಇನ್ನೊಂದಿಲ್ಲ ಎಂದು ನನ್ನ ಮತ. ಅಯ್ಯಾ! ಅನ್ನದಿಂದಲೇ ಎಲ್ಲ ಜೀವಿಗಳೂ ಉತ್ಪನ್ನವಾಗುತ್ತವೆ ಮತ್ತು ಜೀವಧಾರಣೆ ಮಾಡಿಕೊಂಡಿರುತ್ತವೆ.
13066005c ತಸ್ಮಾದನ್ನಂ ಪರಂ ಲೋಕೇ ಸರ್ವದಾನೇಷು ಕಥ್ಯತೇ||
13066006a ಅನ್ನಾದ್ಬಲಂ ಚ ತೇಜಶ್ಚ ಪ್ರಾಣಿನಾಂ ವರ್ಧತೇ ಸದಾ|
13066006c ಅನ್ನದಾನಮತಸ್ತಸ್ಮಾಚ್ಚ್ರೇಷ್ಠಮಾಹ ಪ್ರಜಾಪತಿಃ||
ಆದುದರಿಂದ ಲೋಕದಲ್ಲಿ ಎಲ್ಲ ದಾನಗಳಿಗಿಂತ ಅನ್ನದಾನವೇ ಶ್ರೇಷ್ಠವಾದುದೆಂದು ಹೇಳುತ್ತಾರೆ. ಅನ್ನದಿಂದ ಪ್ರಾಣಿಗಳ ಬಲ ಮತ್ತು ತೇಜಸ್ಸು ಸದಾ ವರ್ಧಿಸುತ್ತವೆ. ಆದುದರಿಂದ ಪ್ರಜಾಪತಿಯು ಅನ್ನದಾನವೇ ಶ್ರೇಷ್ಠವೆಂದು ಹೇಳಿದನು.
13066007a ಸಾವಿತ್ರ್ಯಾ ಹ್ಯಪಿ ಕೌಂತೇಯ ಶ್ರುತಂ ತೇ ವಚನಂ ಶುಭಮ್|
13066007c ಯತಶ್ಚೈತದ್ಯಥಾ ಚೈತದ್ದೇವಸತ್ರೇ ಮಹಾಮತೇ||
ಕೌಂತೇಯ! ಸಾವಿತ್ರಿಯ ಈ ಶುಭ ವಚನವನ್ನು ನೀನು ಕೇಳಿದ್ದಿರಬಹುದು. ಮಹಾಮತೇ! ದೇವಸತ್ರದಲ್ಲಿ ಯಾವಕಾರಣದಿಂದ ಸಾವಿತ್ರಿಯು ಏನನ್ನು ಹೇಳಿದಳು ಎನ್ನುವುದು ಈ ಪ್ರಕಾರವಾಗಿದೆ:
13066008a ಅನ್ನೇ ದತ್ತೇ ನರೇಣೇಹ ಪ್ರಾಣಾ ದತ್ತಾ ಭವಂತ್ಯುತ|
13066008c ಪ್ರಾಣದಾನಾದ್ಧಿ ಪರಮಂ ನ ದಾನಮಿಹ ವಿದ್ಯತೇ||
13066009a ಶ್ರುತಂ ಹಿ ತೇ ಮಹಾಬಾಹೋ ಲೋಮಶಸ್ಯಾಪಿ ತದ್ವಚಃ|
“ಇಲ್ಲಿ ಅನ್ನವನ್ನು ದಾನಮಾಡಿದ ನರನು ಪ್ರಾಣವನ್ನೇ ದಾನಮಾಡಿದಂತೆ. ಈ ಸಂಸಾರದಲ್ಲಿ ಪ್ರಾಣದಾನಕ್ಕಿಂತ ದೊಡ್ಡ ದಾನವು ಬೇರೆ ಯಾವುದೂ ಇಲ್ಲ.” ಮಹಾಬಾಹೋ! ಇದರ ಕುರಿತು ಲೋಮಶನ ಮಾತನ್ನೂ ನೀನು ಕೇಳಿದ್ದಿರಬಹುದು.
13066009c ಪ್ರಾಣಾನ್ದತ್ತ್ವಾ ಕಪೋತಾಯ ಯತ್ಪ್ರಾಪ್ತಂ ಶಿಬಿನಾ ಪುರಾ||
13066010a ತಾಂ ಗತಿಂ ಲಭತೇ ದತ್ತ್ವಾ ದ್ವಿಜಸ್ಯಾನ್ನಂ ವಿಶಾಂ ಪತೇ|
ವಿಶಾಂಪತೇ! ಹಿಂದೆ ಶಿಬಿಯು ಪಾರಿವಾಳಕ್ಕೆ ಪ್ರಾಣದಾನವನ್ನು ನೀಡಿ ಯಾವ ಲೋಕವನ್ನು ಪಡೆದುಕೊಂಡನೋ ಅದೇ ಲೋಕವು ಬ್ರಾಹ್ಮಣನಿಗೆ ಅನ್ನದಾನಮಾಡಿ ಪಡೆದುಕೊಳ್ಳಬಹುದು.
13066010c ಗತಿಂ ವಿಶಿಷ್ಟಾಂ ಗಚ್ಚಂತಿ ಪ್ರಾಣದಾ ಇತಿ ನಃ ಶ್ರುತಮ್||
13066011a ಅನ್ನಂ ಚಾಪಿ ಪ್ರಭವತಿ ಪಾನೀಯಾತ್ಕುರುಸತ್ತಮ|
13066011c ನೀರಜಾತೇನ ಹಿ ವಿನಾ ನ ಕಿಂ ಚಿತ್ಸಂಪ್ರವರ್ತತೇ||
ಪ್ರಾಣವನ್ನು ನೀಡಿದವನು ವಿಶಿಷ್ಠಗತಿಯಲ್ಲಿ ಹೋಗುತ್ತಾನೆ ಎಂದು ನಾವು ಕೇಳಿದ್ದೇವೆ. ಕುರುಸತ್ತಮ! ಅನ್ನವೂ ಜಲದಿಂದಲೇ ಉತ್ಪನ್ನವಾಗುತ್ತದೆ. ಜಲರಾಶಿಯಿಂದ ಉತ್ಪನ್ನ ಧಾನ್ಯದ ವಿನಾ ಏನೂ ಸಾಧ್ಯವಿಲ್ಲ.
13066012a ನೀರಜಾತಶ್ಚ ಭಗವಾನ್ಸೋಮೋ ಗ್ರಹಗಣೇಶ್ವರಃ|
13066012c ಅಮೃತಂ ಚ ಸುಧಾ ಚೈವ ಸ್ವಾಹಾ ಚೈವ ವಷತ್ತಥಾ||
13066013a ಅನ್ನೌಷಧ್ಯೋ ಮಹಾರಾಜ ವೀರುಧಶ್ಚ ಜಲೋದ್ಭವಾಃ|
13066013c ಯತಃ ಪ್ರಾಣಭೃತಾಂ ಪ್ರಾಣಾಃ ಸಂಭವಂತಿ ವಿಶಾಂ ಪತೇ||
ಮಹಾರಾಜ! ವಿಶಾಂಪತೇ! ಗ್ರಹಗಣೇಶ್ವರ ಭಗವಾನ್ ಸೋಮನು ಜಲದಿಂದಲೇ ಉದ್ಭವಿಸಿದನು. ಅಮೃತ, ಸುಧಾ, ಸ್ವಾಹಾ, ವಷಟ್ಕಾರ, ಅನ್ನ, ಔಷಧ ಮತ್ತು ಲತೆಗಳೂ ಜಲದಿಂದಲೇ ಉದ್ಭವಿಸಿವೆ. ಇವುಗಳಿಂದಲೇ ಸಮಸ್ತ ಪ್ರಾಣಿಗಳ ಪ್ರಾಣಗಳು ಹುಟ್ಟುತ್ತವೆ ಮತ್ತು ಪುಷ್ಟಿಗೊಳ್ಳುತ್ತವೆ.
13066014a ದೇವಾನಾಮಮೃತಂ ಚಾನ್ನಂ ನಾಗಾನಾಂ ಚ ಸುಧಾ ತಥಾ|
13066014c ಪಿತೄಣಾಂ ಚ ಸ್ವಧಾ ಪ್ರೋಕ್ತಾ ಪಶೂನಾಂ ಚಾಪಿ ವೀರುಧಃ||
ಅಮೃತವು ದೇವತೆಗಳಿಗೆ ಅನ್ನ, ಸುಧೆಯು ನಾಗಗಳಿಗೆ ಅನ್ನ, ಸ್ವಧಾವು ಪಿತೃಗಳಿಗೆ ಅನ್ನ ಮತ್ತು ತೃಣ-ಲತೆಗಳು ಪಶುಗಳಿಗೆ ಅನ್ನ.
13066015a ಅನ್ನಮೇವ ಮನುಷ್ಯಾಣಾಂ ಪ್ರಾಣಾನಾಹುರ್ಮನೀಷಿಣಃ|
13066015c ತಚ್ಚ ಸರ್ವಂ ನರವ್ಯಾಘ್ರ ಪಾನೀಯಾತ್ಸಂಪ್ರವರ್ತತೇ||
13066016a ತಸ್ಮಾತ್ಪಾನೀಯದಾನಾದ್ವೈ ನ ಪರಂ ವಿದ್ಯತೇ ಕ್ವ ಚಿತ್|
ನರವ್ಯಾಘ್ರ! ಅನ್ನವೇ ಮನುಷ್ಯರ ಪ್ರಾಣವೆಂದು ಮನೀಷಿಣರು ಹೇಳಿದ್ದಾರೆ. ಎಲ್ಲ ಅನ್ನಗಳೂ ಜಲದಿಂದಲೇ ಉತ್ಪನ್ನವಾಗುತ್ತವೆ. ಅದುದರಿಂದ ಜಲದಾನಕ್ಕಿಂತಲೂ ಶ್ರೇಷ್ಠ ದಾನವು ಇನ್ನೊಂದಿಲ್ಲ.
13066016c ತಚ್ಚ ದದ್ಯಾನ್ನರೋ ನಿತ್ಯಂ ಯ ಇಚ್ಚೇದ್ಭೂತಿಮಾತ್ಮನಃ||
13066017a ಧನ್ಯಂ ಯಶಸ್ಯಮಾಯುಷ್ಯಂ ಜಲದಾನಂ ವಿಶಾಂ ಪತೇ|
13066017c ಶತ್ರೂಂಶ್ಚಾಪ್ಯಧಿ ಕೌಂತೇಯ ಸದಾ ತಿಷ್ಠತಿ ತೋಯದಃ||
ವಿಶಾಂಪತೇ! ಕೌಂತೇಯ! ತನ್ನ ಕಲ್ಯಾಣವನ್ನು ಬಯಸುವ ನರನು ನಿತ್ಯವೂ ಜಲದಾನವನ್ನು ಮಾಡಬೇಕು. ಜಲದಾನವು ಧನ, ಯಶಸ್ಸು ಮತ್ತು ಆಯುಸ್ಸನ್ನು ವೃದ್ಧಿಸುತ್ತದೆ. ಜಲದಾನಮಾಡಿದವನು ತನ್ನ ಶತ್ರುಗಳಿಗಿಂತ ಮಿಗಿಲಾಗುತ್ತಾನೆ.
13066018a ಸರ್ವಕಾಮಾನವಾಪ್ನೋತಿ ಕೀರ್ತಿಂ ಚೈವೇಹ ಶಾಶ್ವತೀಮ್|
13066018c ಪ್ರೇತ್ಯ ಚಾನಂತ್ಯಮಾಪ್ನೋತಿ ಪಾಪೇಭ್ಯಶ್ಚ ಪ್ರಮುಚ್ಯತೇ||
ಅವನು ಈ ಲೋಕದಲ್ಲಿ ಸರ್ವಕಾಮನೆಗಳನ್ನು ಮತ್ತು ಶಾಶ್ವತ ಕೀರ್ತಿಯನ್ನು ಪಡೆದುಕೊಳ್ಳುತ್ತಾನೆ. ಪಾಪಗಳಿಂದ ಮುಕ್ತನಾಗಿ ಮರಣಾನಂತರ ಅನಂತ ಲೋಕಗಳನ್ನು ಪಡೆದುಕೊಳ್ಳುತ್ತಾನೆ.
13066019a ತೋಯದೋ ಮನುಜವ್ಯಾಘ್ರ ಸ್ವರ್ಗಂ ಗತ್ವಾ ಮಹಾದ್ಯುತೇ|
13066019c ಅಕ್ಷಯಾನ್ಸಮವಾಪ್ನೋತಿ ಲೋಕಾನಿತ್ಯಬ್ರವೀನ್ಮನುಃ||
ಮಹಾದ್ಯುತೇ! ಮನುಜವ್ಯಾಘ್ರ! ಜಲದಾನ ಮಾಡಿದವನು ಸ್ವರ್ಗಕ್ಕೆ ಹೋಗಿ ಅಲ್ಲಿ ಅಕ್ಷಯ ಲೋಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ಮನುವು ಹೇಳಿದ್ದಾನೆ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪಾನೀಯದಾನಮಹಾತ್ಮ್ಯೇ ಷಟ್ಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪಾನೀಯದಾನಮಹಾತ್ಮ್ಯೆ ಎನ್ನುವ ಅರವತ್ತಾರನೇ ಅಧ್ಯಾಯವು.