Anushasana Parva: Chapter 65

ಅನುಶಾಸನ ಪರ್ವ: ದಾನಧರ್ಮ ಪರ್ವ

೬೫

ತಿಲಾದಿದಾನ ಫಲ

ಭೀಷ್ಮನು ಯುಧಿಷ್ಠಿರನಿಗೆ ತಿಲದಾನಫಲ (೧-೫), ಭೂದಾನಫಲ (೧೬-೩೪), ಗೋದಾನಫಲ (೩೫-೫೩), ಮತ್ತು ಅನ್ನದಾನಫಲ (೫೪-೬೩) ಗಳ ಕುರಿತು ಹೇಳಿದುದು.

13065001 ಯುಧಿಷ್ಠಿರ ಉವಾಚ|

13065001a ದಹ್ಯಮಾನಾಯ ವಿಪ್ರಾಯ ಯಃ ಪ್ರಯಚ್ಚತ್ಯುಪಾನಹೌ|

13065001c ಯತ್ಫಲಂ ತಸ್ಯ ಭವತಿ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಬಿಸಿಲಿನಲ್ಲಿ ಕಾಲು ಸುಡುತ್ತಿರುವ ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ದಾನಮಾಡಲಾಗುತ್ತದೆ. ಅದರ ಫಲವು ಏನೆಂದು ನನಗೆ ಹೇಳು.”

13065002 ಭೀಷ್ಮ ಉವಾಚ|

13065002a ಉಪಾನಹೌ ಪ್ರಯಚ್ಚೇದ್ಯೋ ಬ್ರಾಹ್ಮಣೇಭ್ಯಃ ಸಮಾಹಿತಃ|

13065002c ಮರ್ದತೇ ಕಂಟಕಾನ್ಸರ್ವಾನ್ವಿಷಮಾನ್ನಿಸ್ತರತ್ಯಪಿ||

13065002E ಸ ಶತ್ರೂಣಾಮುಪರಿ ಚ ಸಂತಿಷ್ಠತಿ ಯುಧಿಷ್ಠಿರ|

13065003a ಯಾನಂ ಚಾಶ್ವತರೀಯುಕ್ತಂ ತಸ್ಯ ಶುಭ್ರಂ ವಿಶಾಂ ಪತೇ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ವಿಶಾಂಪತೇ! ಸಮಾಹಿತನಾಗಿದ್ದುಕೊಂಡು ಬ್ರಾಹ್ಮಣರಿಗೆ ಪಾದರಕ್ಷೆಗಳನ್ನು ಕೊಡುವವನು ಸರ್ವ ಕಂಟಕಗಳನ್ನೂ ಕೊನೆಗೊಳಿಸಿ ವಿಷಮ ಪರಿಸ್ಥಿತಿಯಿಂದಲೂ ಪಾರಾಗುತ್ತಾನೆ. ಅವನು ಶತ್ರುಗಳ ಮೇಲೆ ನಿಲ್ಲುತ್ತಾನೆ. ಅವನಿಗೆ ಉತ್ತಮ ಕುದುರೆಗಳನ್ನು ಕಟ್ಟಿದ ಶುಭ್ರ ರಥವು ದೊರಕುತ್ತದೆ.

13065003c ಉಪತಿಷ್ಠತಿ ಕೌಂತೇಯ ರೂಪ್ಯಕಾಂಚನಭೂಷಣಮ್|

13065003E ಶಕಟಂ ದಮ್ಯಸಂಯುಕ್ತಂ ದತ್ತಂ ಭವತಿ ಚೈವ ಹಿ||

ಕೌಂತೇಯ! ಹೊಸ ಎತ್ತುಗಳನ್ನು ಕಟ್ಟಿದ ಬಂಡಿಯನ್ನು ದಾನಮಾಡಿದವನಿಗೆ ಬೆಳ್ಳಿ-ಕಾಂಚನವಿಭೂಷಿತ ರಥವು ದೊರೆಯುತ್ತದೆ.”

13065004 ಯುಧಿಷ್ಠಿರ ಉವಾಚ|

13065004a ಯತ್ಫಲಂ ತಿಲದಾನೇ ಚ ಭೂಮಿದಾನೇ ಚ ಕೀರ್ತಿತಮ್|

13065004c ಗೋಪ್ರದಾನೇಽನ್ನದಾನೇ ಚ ಭೂಯಸ್ತದ್ಬ್ರೂಹಿ ಕೌರವ||

ಯುಧಿಷ್ಠಿರನು ಹೇಳಿದನು: “ಕೌರವ! ತಿಲದಾನ, ಭೂಮಿದಾನ, ಗೋದಾನ ಮತ್ತು ಅನ್ನದಾನಗಳ ಫಲವನ್ನು ಹೇಳಿದ್ದೀಯೆ. ಆದರೂ ಇನ್ನೊಮ್ಮೆ ಅದನ್ನು ಹೇಳು.”

13065005 ಭೀಷ್ಮ ಉವಾಚ|

13065005a ಶೃಣುಷ್ವ ಮಮ ಕೌಂತೇಯ ತಿಲದಾನಸ್ಯ ಯತ್ಫಲಮ್|

13065005c ನಿಶಮ್ಯ ಚ ಯಥಾನ್ಯಾಯಂ ಪ್ರಯಚ್ಚ ಕುರುಸತ್ತಮ||

ಭೀಷ್ಮನು ಹೇಳಿದನು: “ಕೌಂತೇಯ! ಕುರುಸತ್ತಮ! ತಿಲದಾನದ ಫಲದ ಕುರಿತು ನನ್ನನ್ನು ಕೇಳು. ಇದನ್ನು ಕೇಳಿ ಯಥಾನ್ಯಾಯವಾಗಿ ಅದನ್ನು ದಾನಮಾಡು.

13065006a ಪಿತೄಣಾಂ ಪ್ರಥಮಂ ಭೋಜ್ಯಂ ತಿಲಾಃ ಸೃಷ್ಟಾಃ ಸ್ವಯಂಭುವಾ|

13065006c ತಿಲದಾನೇನ ವೈ ತಸ್ಮಾತ್ಪಿತೃಪಕ್ಷಃ ಪ್ರಮೋದತೇ||

ಸ್ವಯಂಭುವು ಪಿತೃಗಳ ಪ್ರಥಮ ಭೋಜನವಾಗಿ ತಿಲವನ್ನು ಸೃಷ್ಟಿಸಿದನು. ಆದುದರಿಂದ ತಿಲದಾನದಿಂದ ಪಿತೃಗಳು ಅತ್ಯಂತ ಪ್ರಸನ್ನರಾಗುತ್ತಾರೆ.

13065007a ಮಾಘಮಾಸೇ ತಿಲಾನ್ಯಸ್ತು ಬ್ರಾಹ್ಮಣೇಭ್ಯಃ ಪ್ರಯಚ್ಚತಿ|

13065007c ಸರ್ವಸತ್ತ್ವಸಮಾಕೀರ್ಣಂ ನರಕಂ ಸ ನ ಪಶ್ಯತಿ||

ಮಾಘಮಾಸದಲ್ಲಿ ಬ್ರಾಹ್ಮಣರಿಗೆ ತಿಲವನ್ನು ದಾನಮಾಡುವವನು ಸರ್ವಜಂತುಗಳಿಂದ ಕೂಡಿರುವ ನರಕವನ್ನು ನೋಡುವುದಿಲ್ಲ.

13065008a ಸರ್ವಕಾಮೈಃ ಸ ಯಜತೇ ಯಸ್ತಿಲೈರ್ಯಜತೇ ಪಿತೄನ್|

13065008c ನ ಚಾಕಾಮೇನ ದಾತವ್ಯಂ ತಿಲಶ್ರಾದ್ಧಂ ಕಥಂ ಚನ||

ತಿಲದಿಂದ ಪಿತೃಗಳನ್ನು ಪೂಜಿಸುವವನು ಸರ್ವಕಾಮಗಳಿಂದ ಪೂಜಿಸುತ್ತಾನೆ. ನಿಷ್ಕಾಮನಾಗಿ ತಿಲಶ್ರಾದ್ಧವನ್ನು ಎಂದೂ ಮಾಡಬಾರದು.

13065009a ಮಹರ್ಷೇಃ ಕಶ್ಯಪಸ್ಯೈತೇ ಗಾತ್ರೇಭ್ಯಃ ಪ್ರಸೃತಾಸ್ತಿಲಾಃ|

13065009c ತತೋ ದಿವ್ಯಂ ಗತಾ ಭಾವಂ ಪ್ರದಾನೇಷು ತಿಲಾಃ ಪ್ರಭೋ||

ಪ್ರಭೋ! ತಿಲವು ಮಹರ್ಷಿ ಕಶ್ಯಪನ ಅಂಗಗಳಿಂದ ಪ್ರಕಟವಾಗಿ ವಿಸ್ತರಿತಗೊಂಡವು. ಆದುದರಿಂದ ದಾನದ ಸಮಯದಲ್ಲಿ ತಿಲಗಳಿಗೆ ದಿವ್ಯತ್ವವು ಪ್ರಾಪ್ತವಾಗುತ್ತದೆ.

13065010a ಪೌಷ್ಟಿಕಾ ರೂಪದಾಶ್ಚೈವ ತಥಾ ಪಾಪವಿನಾಶನಾಃ|

13065010c ತಸ್ಮಾತ್ಸರ್ವಪ್ರದಾನೇಭ್ಯಸ್ತಿಲದಾನಂ ವಿಶಿಷ್ಯತೇ||

ತಿಲವು ಪೌಷ್ಟಿಕ ಪದಾರ್ಥವು. ಅದು ಸುಂದರ ರೂಪವನ್ನು ನೀಡುತ್ತದೆ ಮತ್ತು ಪಾಪವನ್ನು ನಾಶಗೊಳಿಸುತ್ತದೆ. ಆದುದರಿಂದ ತಿಲದಾನವು ಎಲ್ಲ ದಾನಗಳಿಗಿಂತ ವಿಶೇಷವಾದುದು.

13065011a ಆಪಸ್ತಂಬಶ್ಚ ಮೇಧಾವೀ ಶಂಖಶ್ಚ ಲಿಖಿತಸ್ತಥಾ|

13065011c ಮಹರ್ಷಿರ್ಗೌತಮಶ್ಚಾಪಿ ತಿಲದಾನೈರ್ದಿವಂ ಗತಾಃ||

ಮೇಧಾವೀ ಮಹರ್ಷಿಗಳಾದ ಆಪಸ್ತಂಬ, ಶಂಖ, ಲಿಖಿತ ಮತ್ತು ಗೌತಮರು ತಿಲದಾನದಿಂದ ದಿವಕ್ಕೆ ಹೋದರು.

13065012a ತಿಲಹೋಮಪರಾ ವಿಪ್ರಾಃ ಸರ್ವೇ ಸಂಯತಮೈಥುನಾಃ|

13065012c ಸಮಾ ಗವ್ಯೇನ ಹವಿಷಾ ಪ್ರವೃತ್ತಿಷು ಚ ಸಂಸ್ಥಿತಾಃ||

ಸಂಯತ ಮೈಥುನರಾಗಿ ಈ ಎಲ್ಲ ವಿಪ್ರರೂ ತಿಲಹೋಮವನ್ನು ಮಾಡುತ್ತಿದ್ದರು. ತಿಲವನ್ನು ಹಸುವಿನ ತುಪ್ಪದ ಸಮಾನ ಹವಿಸ್ಸಾಗಿದುದರಿಂದ ಅದನ್ನು ಹೋಮ ಮತ್ತು ಇತರ ಕಾರ್ಯಗಳಲ್ಲಿ ಬಳಕೆಗೆ ಬರುತ್ತದೆ.

13065013a ಸರ್ವೇಷಾಮೇವ ದಾನಾನಾಂ ತಿಲದಾನಂ ಪರಂ ಸ್ಮೃತಮ್|

13065013c ಅಕ್ಷಯಂ ಸರ್ವದಾನಾನಾಂ ತಿಲದಾನಮಿಹೋಚ್ಯತೇ||

ಸರ್ವ ದಾನಗಳಲ್ಲಿ ತಿಲದಾನವು ಶ್ರೇಷ್ಠವೆಂದು ಹೇಳುತ್ತಾರೆ. ಎಲ್ಲ ದಾನಗಳಿಗಿಂತ ಇಲ್ಲಿ ತಿಲದಾನವು ಅಕ್ಷಯ ಫಲವನ್ನು ನೀಡುತ್ತದೆ ಎಂದು ಹೇಳುತ್ತಾರೆ.

13065014a ಉತ್ಪನ್ನೇ ಚ ಪುರಾ ಹವ್ಯೇ ಕುಶಿಕರ್ಷಿಃ ಪರಂತಪ|

13065014c ತಿಲೈರಗ್ನಿತ್ರಯಂ ಹುತ್ವಾ ಪ್ರಾಪ್ತವಾನ್ಗತಿಮುತ್ತಮಾಮ್||

ಪರಂತಪ! ಹಿಂದೆ ರಾಜರ್ಷಿ ಕುಶಿಕನು ಬೆಳೆದಿದ್ದ ತಿಲವನ್ನೇ ಆಹುತಿಯನ್ನಾಗಿ ಹೋಮಿಸಿ ಮೂರು ಅಗ್ನಿಗಳನ್ನು ತೃಪ್ತಿಪಡಿಸಿ ಉತ್ತಮ ಗತಿಯನ್ನು ಪಡೆದುಕೊಂಡನು.

13065015a ಇತಿ ಪ್ರೋಕ್ತಂ ಕುರುಶ್ರೇಷ್ಠ ತಿಲದಾನಮನುತ್ತಮಮ್|

13065015c ವಿಧಾನಂ ಯೇನ ವಿಧಿನಾ ತಿಲಾನಾಮಿಹ ಶಸ್ಯತೇ||

ಕುರುಶ್ರೇಷ್ಠ! ತಿಲದಾನವು ಅನುತ್ತಮವಾದುದೆಂದು ಹೀಗೆ ಹೇಳಿದ್ದಾರೆ. ಯಾವ ವಿಧಿಯಿಂದ ತಿಲದಾನಮಾಡಬೇಕೆಂದು ಇಲ್ಲಿ ಹೇಳಿದ್ದಾರೆ.

13065016a ಅತ ಊರ್ಧ್ವಂ ನಿಬೋಧೇದಂ ದೇವಾನಾಂ ಯಷ್ಟುಮಿಚ್ಚತಾಮ್|

13065016c ಸಮಾಗಮಂ ಮಹಾರಾಜ ಬ್ರಹ್ಮಣಾ ವೈ ಸ್ವಯಂಭುವಾ||

ಮಹಾರಾಜ! ಇನ್ನು ಮುಂದೆ ಯಜ್ಞಮಾಡಲು ಬಯಸಿದ ದೇವತೆಗಳು ಮತ್ತು ಸ್ವಯಂಭು ಬ್ರಹ್ಮನ ಸಮಾಗಮದ ಕುರಿತು ಹೇಳುತ್ತೇನೆ. ಕೇಳು.

13065017a ದೇವಾಃ ಸಮೇತ್ಯ ಬ್ರಹ್ಮಾಣಂ ಭೂಮಿಭಾಗಂ ಯಿಯಕ್ಷವಃ|

13065017c ಶುಭಂ ದೇಶಮಯಾಚಂತ ಯಜೇಮ ಇತಿ ಪಾರ್ಥಿವ||

ಪಾರ್ಥಿವ! ಯಜ್ಞಮಾಡಬೇಕೆಂದು ಬಯಸಿದ ದೇವತೆಗಳು ಒಂದಾಗಿ ಭೂಮಿಯ ಯಾವುದಾದರೂ ಭಾಗವನ್ನು ಯಾಚಿಸಿ ಬ್ರಹ್ಮನಲ್ಲಿಗೆ ಹೋದರು.

13065018 ದೇವಾ ಊಚುಃ|

13065018a ಭಗವಂಸ್ತ್ವಂ ಪ್ರಭುರ್ಭೂಮೇಃ ಸರ್ವಸ್ಯ ತ್ರಿದಿವಸ್ಯ ಚ|

13065018c ಯಜೇಮಹಿ ಮಹಾಭಾಗ ಯಜ್ಞಂ ಭವದನುಜ್ಞಯಾ|

ದೇವತೆಗಳು ಹೇಳಿದರು: “ಭಗವನ್! ಮಹಾಭಾಗ! ತ್ರಿದಿವಗಳ ಮತ್ತು ಎಲ್ಲವುಗಳ ಪ್ರಭುವು ನೀನು. ನಿನ್ನ ಅನುಜ್ಞೆಯನ್ನು ಪಡೆದು ನಾವು ಯಜ್ಞವನ್ನು ಯಾಜಿಸಲು ಬಯಸುತ್ತೇವೆ.

13065018e ನಾನನುಜ್ಞಾತಭೂಮಿರ್ಹಿ ಯಜ್ಞಸ್ಯ ಫಲಮಶ್ನುತೇ||

13065019a ತ್ವಂ ಹಿ ಸರ್ವಸ್ಯ ಜಗತಃ ಸ್ಥಾವರಸ್ಯ ಚರಸ್ಯ ಚ|

13065019c ಪ್ರಭುರ್ಭವಸಿ ತಸ್ಮಾತ್ತ್ವಂ ಸಮನುಜ್ಞಾತುಮರ್ಹಸಿ||

ಭೂಮಿಯ ಸ್ವಾಮಿಯು ಯಾವ ಭೂಮಿಯಲ್ಲಿ ಯಜ್ಞಮಾಡಲು ಅನುಮತಿಯನ್ನು ನೀಡುವುದ್ದಿಲ್ಲವೋ ಆ ಭೂಮಿಯಲ್ಲಿ ಯಜ್ಞಮಾಡಿದರೆ ಅದರ ಫಲವು ದೊರೆಯುವುದಿಲ್ಲ. ನೀನು ಸಂಪೂರ್ಣ ಚರಾಚರ ಜಗತ್ತಿನ ಸ್ವಾಮಿ. ಆದುದರಿಂದ ಪೃಥ್ವಿಯ ಮೇಲೆ ಯಜ್ಞಮಾಡಲು ನಮಗೆ ನಿನ್ನ ಅನುಮತಿ ಬೇಕು.”

13065020 ಬ್ರಹ್ಮೋವಾಚ|

13065020a ದದಾಮಿ ಮೇದಿನೀಭಾಗಂ ಭವದ್ಭ್ಯೋಽಹಂ ಸುರರ್ಷಭಾಃ|

13065020c ಯಸ್ಮಿನ್ದೇಶೇ ಕರಿಷ್ಯಧ್ವಂ ಯಜ್ಞಂ ಕಾಶ್ಯಪನಂದನಾಃ||

ಬ್ರಹ್ಮನು ಹೇಳಿದನು: “ಸುರರ್ಷಭರೇ! ಕಾಶ್ಯಪನಂದನರೇ! ನೀವು ಯಜ್ಞವನ್ನು ಯಾವ ಪದೇಶದಲ್ಲಿ ಮಾಡಬಯಸುತ್ತೀರೋ ಅದನ್ನೇ ನಾನು ನಿಮಗೆ ಕೊಡುತ್ತೇನೆ.”

13065021 ದೇವಾ ಊಚುಃ|

13065021a ಭಗವನ್ಕೃತಕಾಮಾಃ ಸ್ಮೋ ಯಕ್ಷ್ಯಾಮಸ್ತ್ವಾಪ್ತದಕ್ಷಿಣೈಃ|

13065021c ಇಮಂ ತು ದೇಶಂ ಮುನಯಃ ಪರ್ಯುಪಾಸಂತ ನಿತ್ಯದಾ||

ದೇವತೆಗಳು ಹೇಳಿದರು: “ಭಗವನ್! ಆಪ್ತದಕ್ಷಿಣೆಗಳಿಂದ ನಾವು ಯಜ್ಞವನ್ನು ಮಾಡಿ ಕೃತಕೃತ್ಯರಾದೆವೆಂದೇ ಭಾವಿಸುತ್ತೇವೆ. ನಾವು ಯಜ್ಞಮಾಡುವ ಪ್ರದೇಶವಾದರೋ ನಿತ್ಯವು ಮುನಿಗಳು ಪರ್ಯುಪಾಸನೆ ಮಾಡುವಂಥದ್ದಾಗಿದೆ.””

13065022 ಭೀಷ್ಮ ಉವಾಚ|

13065022a ತತೋಽಗಸ್ತ್ಯಶ್ಚ ಕಣ್ವಶ್ಚ ಭೃಗುರತ್ರಿರ್ವೃಷಾಕಪಿಃ|

13065022c ಅಸಿತೋ ದೇವಲಶ್ಚೈವ ದೇವಯಜ್ಞಮುಪಾಗಮನ್||

13065023a ತತೋ ದೇವಾ ಮಹಾತ್ಮಾನ ಈಜಿರೇ ಯಜ್ಞಮಚ್ಯುತ|

13065023c ತಥಾ ಸಮಾಪಯಾಮಾಸುರ್ಯಥಾಕಾಲಂ ಸುರರ್ಷಭಾಃ||

ಭೀಷ್ಮನು ಹೇಳಿದನು: “ಅನಂತರ ಅಗಸ್ತ್ಯ, ಕಣ್ವ, ಭೃಗು, ಅತ್ರಿ, ವೃಷಾಕಪಿ, ಅಸಿತ ಮತ್ತು ದೇವಲರು ದೇವತೆಗಳ ಆ ಯಜ್ಞದಲ್ಲಿ ಉಪಸ್ಥಿತರಾದರು. ಅಚ್ಯುತ! ಆಗ ಮಹಾತ್ಮ ದೇವ ಸುರರ್ಷಭರು ಯಜ್ಞವನ್ನು ಮಾಡಿ ಯಥಾಸಮಯದಲ್ಲಿ ಸಮಾಪ್ತಗೊಳಿಸಿದರು ಕೂಡ.

13065024a ತ ಇಷ್ಟಯಜ್ಞಾಸ್ತ್ರಿದಶಾ ಹಿಮವತ್ಯಚಲೋತ್ತಮೇ|

13065024c ಷಷ್ಠಮಂಶಂ ಕ್ರತೋಸ್ತಸ್ಯ ಭೂಮಿದಾನಂ ಪ್ರಚಕ್ರಿರೇ||

ಉತ್ತಮ ಪರ್ವತ ಹಿಮಾಲಯದ ಬಳಿ ಯಜ್ಞವನ್ನು ಪೌರೈಸಿದ ದೇವತೆಗಳು ಆ ಯಜ್ಞದ ಫಲದ ಆರನೇ ಒಂದು ಭಾಗದ ಸಮನಾದ ಭೂಮಿದಾನವನ್ನು ಮಾಡಿದರು.

13065025a ಪ್ರಾದೇಶಮಾತ್ರಂ ಭೂಮೇಸ್ತು ಯೋ ದದ್ಯಾದನುಪಸ್ಕೃತಮ್|

13065025c ನ ಸೀದತಿ ಸ ಕೃಚ್ಚ್ರೇಷು ನ ಚ ದುರ್ಗಾಣ್ಯವಾಪ್ನುತೇ||

ಅಗೆಯದೇ ಅಥವಾ ಹೂಳದೇ ಇದ್ದ ಭೂಮಿಪ್ರದೇಶವನ್ನು ದಾನಮಾಡುವವನೂ ಕೂಡ ಕಷ್ಟಗಳಲ್ಲಿ ಕುಸಿಯುವುದಿಲ್ಲ ಮತ್ತು ಸಂಕಟಗಳನ್ನು ಪಡೆಯುವುದಿಲ್ಲ.

13065026a ಶೀತವಾತಾತಪಸಹಾಂ ಗೃಹಭೂಮಿಂ ಸುಸಂಸ್ಕೃತಾಮ್|

13065026c ಪ್ರದಾಯ ಸುರಲೋಕಸ್ಥಃ ಪುಣ್ಯಾಂತೇಽಪಿ ನ ಚಾಲ್ಯತೇ||

ಛಳಿ, ಬಿಸಿಲು ಮತ್ತು ಗಾಳಿಯಿಂದ ರಕ್ಷಿತವಾದ ಮನೆಕಟ್ಟಲು ಯೋಗ್ಯ ಸುಸಂಸ್ಕೃತ ಭೂಮಿಯನ್ನು ದಾನಮಾಡುವವನು ಸುರಲೋಕದಲ್ಲಿ ವಾಸಿಸುತ್ತಾನೆ. ಪುಣ್ಯವು ಕೊನೆಗೊಂಡರೂ ಅವನು ಅಲ್ಲಿಂದ ಹೊರಗಾಗುವುದಿಲ್ಲ.

13065027a ಮುದಿತೋ ವಸತೇ ಪ್ರಾಜ್ಞಃ ಶಕ್ರೇಣ ಸಹ ಪಾರ್ಥಿವ|

13065027c ಪ್ರತಿಶ್ರಯಪ್ರದಾತಾ ಚ ಸೋಽಪಿ ಸ್ವರ್ಗೇ ಮಹೀಯತೇ||

ಪಾರ್ಥಿವ! ಮನೆಯನ್ನು ದಾನಮಾಡುವ ಪ್ರಾಜ್ಞನು ಸ್ವರ್ಗದಲ್ಲಿ ಶಕ್ರನೊಂದಿಗೆ ಮುದಿತನಾಗಿ ವಾಸಿಸುತ್ತಾನೆ ಮತ್ತು ಅಲ್ಲಿ ಮೆರೆಯುತ್ತಾನೆ.

13065028a ಅಧ್ಯಾಪಕಕುಲೇ ಜಾತಃ ಶ್ರೋತ್ರಿಯೋ ನಿಯತೇಂದ್ರಿಯಃ|

13065028c ಗೃಹೇ ಯಸ್ಯ ವಸೇತ್ತುಷ್ಟಃ ಪ್ರಧಾನಂ ಲೋಕಮಶ್ನುತೇ||

ಯಾರು ದಾನವಾಗಿ ನೀಡಿರುವ ಮನೆಯಲ್ಲಿ ಅಧ್ಯಾಪಕುಲದಲ್ಲಿ ಹುಟ್ಟಿದ ನಿಯತೇಂದ್ರಿಯ ಶ್ರೋತ್ರಿಯು ವಾಸಿಸುತ್ತಾನೋ ಅವನು ಪ್ರಧಾನ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13065029a ತಥಾ ಗವಾರ್ಥೇ ಶರಣಂ ಶೀತವರ್ಷಸಹಂ ಮಹತ್|

13065029c ಆಸಪ್ತಮಂ ತಾರಯತಿ ಕುಲಂ ಭರತಸತ್ತಮ||

ಭರತಸತ್ತಮ! ಛಳಿ-ಮಳೆಗಳಿಂದ ರಕ್ಷಣಾರ್ಥವಾಗಿ ಗೋವುಗಳಿಗೆ ಮನೆಯನ್ನು ಕಟ್ಟಿಸುವವನು ಏಳು ಪೀಳಿಗೆಗಳವರೆಗೆ ತನ್ನ ಕುಲವನ್ನು ಉದ್ಧರಿಸುತ್ತಾನೆ.

13065030a ಕ್ಷೇತ್ರಭೂಮಿಂ ದದಲ್ಲೋಕೇ ಪುತ್ರ ಶ್ರಿಯಮವಾಪ್ನುಯಾತ್|

13065030c ರತ್ನಭೂಮಿಂ ಪ್ರದತ್ತ್ವಾ ತು ಕುಲವಂಶಂ ವಿವರ್ಧಯೇತ್||

ಪುತ್ರ! ಹೊಲದ ಭೂಮಿಯನ್ನು ದಾನಮಾಡಿದರೆ ಲೋಕದಲ್ಲಿ ಅವನು ಸಂಪತ್ತನ್ನು ಪಡೆದುಕೊಳ್ಳುತ್ತಾನೆ. ರತ್ನಭೂಮಿಯನ್ನು ದಾನಮಾಡಿದರೆ ಕುಲವಂಶದ ವೃದ್ಧಿಯಾಗುತ್ತದೆ.

13065031a ನ ಚೋಷರಾಂ ನ ನಿರ್ದಗ್ಧಾಂ ಮಹೀಂ ದದ್ಯಾತ್ಕಥಂ ಚನ|

13065031c ನ ಶ್ಮಶಾನಪರೀತಾಂ ಚ ನ ಚ ಪಾಪನಿಷೇವಿತಾಮ್||

ಬಡಸಲಾಗಿರುವ, ಸುಟ್ಟುಹೋಗಿರುವ ಅಥವಾ ಶ್ಮಶಾನದ ಬಳಿಯಿರುವ ಮತ್ತು ಪಾಪಿಜನರು ನಿವಾಸಿಸುವ ಭೂಮಿಯನ್ನು ಎಂದೂ ದಾನವಾಗಿ ಕೊಡಬಾರದು.

13065032a ಪಾರಕ್ಯೇ ಭೂಮಿದೇಶೇ ತು ಪಿತೄಣಾಂ ನಿರ್ವಪೇತ್ತು ಯಃ|

13065032c ತದ್ಭೂಮಿಸ್ವಾಮಿಪಿತೃಭಿಃ ಶ್ರಾದ್ಧಕರ್ಮ ವಿಹನ್ಯತೇ||

ಇತರರ ಭೂಮಿಪ್ರದೇಶದಲ್ಲಿ ಪಿತೃಗಳ ಪೂಜನ-ಶ್ರಾದ್ಧಗಳನ್ನು ಮಾಡಿ ದಾನಮಾಡಿದರೆ ಅವನು ಮಾಡಿದ ಶ್ರಾದ್ಧಕರ್ಮ ಮತ್ತು ದಾನ ಇವೆರಡೂ ನಷ್ಟವಾಗುತ್ತವೆ.

13065033a ತಸ್ಮಾತ್ಕ್ರೀತ್ವಾ ಮಹೀಂ ದದ್ಯಾತ್ಸ್ವಲ್ಪಾಮಪಿ ವಿಚಕ್ಷಣಃ|

13065033c ಪಿಂಡಃ ಪಿತೃಭ್ಯೋ ದತ್ತೋ ವೈ ತಸ್ಯಾಂ ಭವತಿ ಶಾಶ್ವತಃ||

ಆದುದರಿಂದ ವಿಚಕ್ಷಣನು ಸ್ವಲ್ಪವಾದರು ಭೂಮಿಯನ್ನು ಖರೀದಿಸಿ ಅದನ್ನು ದಾನಮಾಡಬೇಕು. ಖರೀದಿಸಿದ ಭೂಮಿಯಲ್ಲಿ ಪಿತೃಗಳಿಗೆ ಪಿಂಡವನ್ನಿತ್ತರೆ ಅವು ಶಾಶ್ವತವಾಗುವವು.

13065034a ಅಟವೀಪರ್ವತಾಶ್ಚೈವ ನದೀತೀರ್ಥಾನಿ ಯಾನಿ ಚ|

13065034c ಸರ್ವಾಣ್ಯಸ್ವಾಮಿಕಾನ್ಯಾಹುರ್ನ ಹಿ ತತ್ರ ಪರಿಗ್ರಹಃ||

13065035a ಇತ್ಯೇತದ್ಭೂಮಿದಾನಸ್ಯ ಫಲಮುಕ್ತಂ ವಿಶಾಂ ಪತೇ|

ವಿಶಾಂಪತೇ! ವನ, ಪರ್ವತ, ನದಿ ಮತ್ತು ತೀರ್ಥ – ಈ ಸ್ಥಾನಗಳು ಯಾವುದೇ ಸ್ವಾಮಿಯ ಅಧೀನವಾಗಿರುವುದಿಲ್ಲ. ಆದುದರಿಂದ ಅಲ್ಲಿ ಶ್ರಾದ್ಧವನ್ನು ಮಾಡಲು ಭೂಮಿಯನ್ನು ಖರೀದಿಸುವ ಅವಶ್ಯಕತೆಯಿರುವುದಿಲ್ಲ. ಈ ಪ್ರಕಾರವಾಗಿ ಭೂಮಿದಾನದ ಫಲವನ್ನು ಹೇಳಲಾಗಿದೆ.

13065035c ಅತಃ ಪರಂ ತು ಗೋದಾನಂ ಕೀರ್ತಯಿಷ್ಯಾಮಿ ತೇಽನಘ||

13065036a ಗಾವೋಽಧಿಕಾಸ್ತಪಸ್ವಿಭ್ಯೋ ಯಸ್ಮಾತ್ಸರ್ವೇಭ್ಯ ಏವ ಚ|

13065036c ತಸ್ಮಾನ್ಮಹೇಶ್ವರೋ ದೇವಸ್ತಪಸ್ತಾಭಿಃ ಸಮಾಸ್ಥಿತಃ||

ಅನಘ! ಇನ್ನು ನಾನು ನಿನಗೆ ಗೋದಾನದ ಮಹಾತ್ಮೆಯನ್ನು ಹೇಳುತ್ತೇನೆ. ಗೋವುಗಳು ಸಮಸ್ತ ತಪಸ್ವಿಗಳಿಗೂ ಅಧಿಕ. ಆದುದರಿಂದ ದೇವ ಮಹೇಶ್ವರನು ಅವುಗಳೊಂದಿಗೆ ವಾಸಿಸುತ್ತಾ ತಪಸ್ಸನ್ನಾಚರಿಸಿದ್ದನು.

13065037a ಬ್ರಹ್ಮಲೋಕೇ ವಸಂತ್ಯೇತಾಃ ಸೋಮೇನ ಸಹ ಭಾರತ|

13065037c ಆಸಾಂ ಬ್ರಹ್ಮರ್ಷಯಃ ಸಿದ್ಧಾಃ ಪ್ರಾರ್ಥಯಂತಿ ಪರಾಂ ಗತಿಮ್||

ಭಾರತ! ಗೋವುಗಳು ಸೋಮನೊಂದಿಗೆ ಬ್ರಹ್ಮಲೋಕದಲ್ಲಿ ವಾಸಿಸುತ್ತವೆ. ಈ ಪರಮ ಗತಿಯನ್ನು ಬ್ರಹ್ಮರ್ಷಿ ಸಿದ್ಧರೂ ಪ್ರಾರ್ಥಿಸುತ್ತಾರೆ.

13065038a ಪಯಸಾ ಹವಿಷಾ ದಧ್ನಾ ಶಕೃತಾಪ್ಯಥ ಚರ್ಮಣಾ|

13065038c ಅಸ್ಥಿಭಿಶ್ಚೋಪಕುರ್ವಂತಿ ಶೃಂಗೈರ್ವಾಲೈಶ್ಚ ಭಾರತ||

ಭಾರತ! ಈ ಗೋವುಗಳು ತಮ್ಮ ಹಾಲು, ಮೊಸರು, ತುಪ್ಪ, ಸಗಣಿ, ಚರ್ಮ, ಅಸ್ತಿ, ಕೋಡು ಮತ್ತು ಬಾಲಗಳಿಂದಲೂ ಜಗತ್ತಿಗೆ ಉಪಕಾರವನ್ನು ಮಾಡುತ್ತವೆ.

13065039a ನಾಸಾಂ ಶೀತಾತಪೌ ಸ್ಯಾತಾಂ ಸದೈತಾಃ ಕರ್ಮ ಕುರ್ವತೇ|

13065039c ನ ವರ್ಷಂ ವಿಷಮಂ ವಾಪಿ ದುಃಖಮಾಸಾಂ ಭವತ್ಯುತ||

13065040a ಬ್ರಾಹ್ಮಣೈಃ ಸಹಿತಾ ಯಾಂತಿ ತಸ್ಮಾತ್ಪರತರಂ ಪದಮ್|

ಇವುಗಳಿಗೆ ಛಳಿ, ಬಿಸಿಲು ಮತ್ತು ಮಳೆಯೂ ಕಷ್ಟವೆನಿಸುವುದಿಲ್ಲ. ಇವು ಸದೈವ ತಮ್ಮ ಕರ್ಮವನ್ನು ಮಾಡುತ್ತಿರುತ್ತವೆ. ಆದುದರಿಂದ ಬ್ರಾಹ್ಮಣರ ಸಹಿತ ಇವು ಆ ಪರಮಪದಕ್ಕೆ ಹೋಗುತ್ತವೆ.

13065040c ಏಕಂ ಗೋಬ್ರಾಹ್ಮಣಂ ತಸ್ಮಾತ್ಪ್ರವದಂತಿ ಮನೀಷಿಣಃ||

13065041a ರಂತಿದೇವಸ್ಯ ಯಜ್ಞೇ ತಾಃ ಪಶುತ್ವೇನೋಪಕಲ್ಪಿತಾಃ|

13065041c ತತಶ್ಚರ್ಮಣ್ವತೀ ರಾಜನ್ಗೋಚರ್ಮಭ್ಯಃ ಪ್ರವರ್ತಿತಾ||

13065042a ಪಶುತ್ವಾಚ್ಚ ವಿನಿರ್ಮುಕ್ತಾಃ ಪ್ರದಾನಾಯೋಪಕಲ್ಪಿತಾಃ|

ಮನೀಷಿಣರು ಗೋವು ಮತ್ತು ಬ್ರಾಹ್ಮಣ ಎರಡೂ ಒಂದೇ ಎಂದು ಹೇಳುತ್ತಾರೆ. ರಾಜನ್! ರಂತಿದೇವನ ಯಜ್ಞದಲ್ಲಿ ಪಶುರೂಪದಲ್ಲಿ ದಾನನೀಡಲು ನಿಶ್ಚಯಿಸಲಾಯಿತು. ಆಗ ಗೋವುಗಳ ಚರ್ಮಗಳಿಂದ ಆ ಚರ್ಮಣ್ವತೀ ಎಂಬ ನದಿಯು ಪ್ರವಹಿಸಿತ್ತು. ಆ ಎಲ್ಲ ಗೋವುಗಳೂ ಪಶುತ್ವದಿಂದ ಮುಕ್ತವಾಗಿದ್ದವು ಮತ್ತು ದಾನಕ್ಕೆ ಸಿದ್ಧಗೊಳಿಸಲ್ಪಟ್ಟಿದ್ದವು.

13065042c ತಾ ಇಮಾ ವಿಪ್ರಮುಖ್ಯೇಭ್ಯೋ ಯೋ ದದಾತಿ ಮಹೀಪತೇ|

13065042e ನಿಸ್ತರೇದಾಪದಂ ಕೃಚ್ಚ್ರಾಂ ವಿಷಮಸ್ಥೋಽಪಿ ಪಾರ್ಥಿವ||

ಮಹೀಪತೇ! ಪಾರ್ಥಿವ! ವಿಪ್ರಮುಖ್ಯರಿಗೆ ಈ ಗೋವುಗಳನ್ನು ದಾನಮಾಡುವವನು ಆಪತ್ತು, ಕಷ್ಟ ಮತ್ತು ವಿಷಮಪರಿಸ್ಥಿತಿಗಳನ್ನೂ ದಾಟಬಲ್ಲನು.

13065043a ಗವಾಂ ಸಹಸ್ರದಃ ಪ್ರೇತ್ಯ ನರಕಂ ನ ಪ್ರಪಶ್ಯತಿ|

13065043c ಸರ್ವತ್ರ ವಿಜಯಂ ಚಾಪಿ ಲಭತೇ ಮನುಜಾಧಿಪ||

ಮನುಜಾಧಿಪ! ಸಾವಿರ ಗೋವುಗಳನ್ನು ದಾನಮಾಡಿದವನು ನರಕವನ್ನು ಕಾಣುವುದಿಲ್ಲ. ಅವನಿಗೆ ಸರ್ವತ್ರ ವಿಜಯವೂ ಲಭಿಸುತ್ತದೆ.

13065044a ಅಮೃತಂ ವೈ ಗವಾಂ ಕ್ಷೀರಮಿತ್ಯಾಹ ತ್ರಿದಶಾಧಿಪಃ|

13065044c ತಸ್ಮಾದ್ದದಾತಿ ಯೋ ಧೇನುಮಮೃತಂ ಸ ಪ್ರಯಚ್ಚತಿ||

ಗೋವಿನ ಹಾಲು ಅಮೃತವೆಂದು ತ್ರಿದಶಾಧಿಪನು ಹೇಳಿದ್ದಾನೆ. ಆದ್ದರಿಂದ ಹಸುವನ್ನು ದಾನಮಾಡಿದವನು ಅಮೃತವನ್ನು ದಾನಮಾಡಿದಂತೆ.

13065045a ಅಗ್ನೀನಾಮವ್ಯಯಂ ಹ್ಯೇತದ್ಧೌಮ್ಯಂ ವೇದವಿದೋ ವಿದುಃ|

13065045c ತಸ್ಮಾದ್ದದಾತಿ ಯೋ ಧೇನುಂ ಸ ಹೌಮ್ಯಂ ಸಂಪ್ರಯಚ್ಚತಿ||

ಗೋವಿನ ಹಾಲಿನ ರೂಪದ ಹವಿಸ್ಸನ್ನು ಅಗ್ನಿಯಲ್ಲಿ ಹವನಮಾಡುವುದರಿಂದ ಅವಿನಾಶೀ ಫಲವು ದೊರೆಯುತ್ತದೆ ಎಂದು ವೇದವಿದ ಪುರುಷರ ಅನುಭವವು. ಆದುದರಿಂದ ಗೋವನ್ನು ದಾನಮಾಡುವವನು ಹವಿಸ್ಸನ್ನೂ ದಾನಮಾಡಿದಂತೆ.

13065046a ಸ್ವರ್ಗೋ ವೈ ಮೂರ್ತಿಮಾನೇಷ ವೃಷಭಂ ಯೋ ಗವಾಂ ಪತಿಮ್|

13065046c ವಿಪ್ರೇ ಗುಣಯುತೇ ದದ್ಯಾತ್ಸ ವೈ ಸ್ವರ್ಗೇ ಮಹೀಯತೇ||

ಹೋರಿಯು ಸ್ವರ್ಗದ ಮೂರ್ತಿಮಾನ್ ಸ್ವರೂಪವು. ಹೋರಿಯನ್ನು ಗುಣಯುತ ವಿಪ್ರನಿಗೆ ದಾನಮಾಡಿದವನು ಸ್ವರ್ಗದಲ್ಲಿ ಮೆರೆಯುತ್ತಾನೆ.

13065047a ಪ್ರಾಣಾ ವೈ ಪ್ರಾಣಿನಾಮೇತೇ ಪ್ರೋಚ್ಯಂತೇ ಭರತರ್ಷಭ|

13065047c ತಸ್ಮಾದ್ದದಾತಿ ಯೋ ಧೇನುಂ ಪ್ರಾಣಾನ್ವೈ ಸ ಪ್ರಯಚ್ಚತಿ||

ಭರತರ್ಷಭ! ಈ ಗೋಪ್ರಾಣಿಗಳನ್ನು ಪ್ರಾಣಗಳೆಂದೇ ಕರೆಯುತ್ತಾರೆ. ಆದುದರಿಂದ ಗೋವನ್ನು ದಾನಮಾಡಿದವನು ಪ್ರಾಣವನ್ನೇ ದಾನಮಾಡಿದಂತೆ.

13065048a ಗಾವಃ ಶರಣ್ಯಾ ಭೂತಾನಾಮಿತಿ ವೇದವಿದೋ ವಿದುಃ|

13065048c ತಸ್ಮಾದ್ದದಾತಿ ಯೋ ಧೇನುಂ ಶರಣಂ ಸಂಪ್ರಯಚ್ಚತಿ||

ಗೋವುಗಳು ಜೀವಿಗಳ ಶರಣ್ಯರು ಎಂದು ವೇದವಿದರು ತಿಳಿದಿದ್ದಾರೆ. ಆದುದರಿಂದ ಹಸುವನ್ನು ದಾನಮಾಡುವವನು ಎಲ್ಲವಕ್ಕೂ ಶರಣ ನೀಡುವವನಾಗುತ್ತಾನೆ.

13065049a ನ ವಧಾರ್ಥಂ ಪ್ರದಾತವ್ಯಾ ನ ಕೀನಾಶೇ ನ ನಾಸ್ತಿಕೇ|

13065049c ಗೋಜೀವಿನೇ ನ ದಾತವ್ಯಾ ತಥಾ ಗೌಃ ಪುರುಷರ್ಷಭ||

ಪುರುಷರ್ಷಭ! ಗೋವನ್ನು ವಧಾರ್ಥಕ್ಕಾಗಿ ಎಂದೂ ಕೊಡಬಾರದು. ಹಾಗೆಯೇ ಕಟುಕನಿಗೆ, ನಾಸ್ತಿಕನಿಗೆ, ಮತ್ತು ಗೋವಿನಿಂದಲೇ ಉಪಜೀವನ ಮಾಡುವವನಿಗೆ ಗೋವನ್ನು ದಾನಮಾಡಬಾರದು.

13065050a ದದಾತಿ ತಾದೃಶಾನಾಂ ವೈ ನರೋ ಗಾಃ ಪಾಪಕರ್ಮಣಾಮ್|

13065050c ಅಕ್ಷಯಂ ನರಕಂ ಯಾತೀತ್ಯೇವಮಾಹುರ್ಮನೀಷಿಣಃ||

ಅಂತಹ ಪಾಪಿಕರ್ಮಿಗಳಿಗೆ ಗೋವನ್ನು ದಾನಮಾಡಿದ ನರನು ಅಕ್ಷಯ ನರಕಕ್ಕೆ ಹೋಗುತ್ತಾನೆಂದು ಮನೀಷಿಣರು ಹೇಳುತ್ತಾರೆ.

13065051a ನ ಕೃಶಾಂ ಪಾಪವತ್ಸಾಂ ವಾ ವಂಧ್ಯಾಂ ರೋಗಾನ್ವಿತಾಂ ತಥಾ|

13065051c ನ ವ್ಯಂಗಾಂ ನ ಪರಿಶ್ರಾಂತಾಂ ದದ್ಯಾದ್ಗಾಂ ಬ್ರಾಹ್ಮಣಾಯ ವೈ||

ಬಡಕಲಾಗಿರುವ, ಕರುವನ್ನು ಕಳೆದುಕೊಂಡ, ಅಥವಾ ಗಿಡ್ಡದಾಗಿರುವ, ರೋಗಾನ್ವಿತವಾಗಿರುವ, ವಿಕಲಾಂಗವಾಗಿರುವ, ಮತ್ತು ವೃದ್ಧ ಗೋವನ್ನು ಬ್ರಾಹ್ಮಣನಿಗೆ ದಾನಮಾಡಬಾರದು.

13065052a ದಶಗೋಸಹಸ್ರದಃ ಸಮ್ಯಕ್ ಶಕ್ರೇಣ ಸಹ ಮೋದತೇ|

13065052c ಅಕ್ಷಯಾಽಲ್ಲಭತೇ ಲೋಕಾನ್ನರಃ ಶತಸಹಸ್ರದಃ||

ಹತ್ತು ಸಾವಿರ ಗೋವುಗಳನ್ನು ದಾನಮಾಡಿದವನು ಶಕ್ರನೊಂದಿಗೆ ಸ್ವರ್ಗದಲ್ಲಿ ಮೋದಿಸುತ್ತಾನೆ. ಒಂದು ಲಕ್ಷ ಗೋವುಗಳನ್ನು ದಾನಮಾಡಿದ ನರನಿಗೆ ಅಕ್ಷಯ ಲೋಕಗಳು ದೊರೆಯುತ್ತವೆ.

13065053a ಇತ್ಯೇತದ್ಗೋಪ್ರದಾನಂ ಚ ತಿಲದಾನಂ ಚ ಕೀರ್ತಿತಮ್|

13065053c ತಥಾ ಭೂಮಿಪ್ರದಾನಂ ಚ ಶೃಣುಷ್ವಾನ್ನೇ ಚ ಭಾರತ||

ಹೀಗೆ ಗೋದಾನ, ತಿಲದಾನ ಮತ್ತು ಭೂಮಿದಾನಗಳ ಕುರಿತು ಹೇಳಿದ್ದಾರೆ. ಭಾರತ! ಇನ್ನು ಅನ್ನದಾನದ ಕುರಿತು ಕೇಳು.

13065054a ಅನ್ನದಾನಂ ಪ್ರಧಾನಂ ಹಿ ಕೌಂತೇಯ ಪರಿಚಕ್ಷತೇ|

13065054c ಅನ್ನಸ್ಯ ಹಿ ಪ್ರದಾನೇನ ರಂತಿದೇವೋ ದಿವಂ ಗತಃ||

ಕೌಂತೇಯ! ಅನ್ನ ದಾನವು ಪ್ರಧಾನವಾದುದು ಎಂದು ಕಂಡುಕೊಂಡಿದ್ದಾರೆ. ಅನ್ನದಾನದಿಂದಲೇ ರಂತಿದೇವನು ದಿವಕ್ಕೆ ಹೋದನು.

13065055a ಶ್ರಾಂತಾಯ ಕ್ಷುಧಿತಾಯಾನ್ನಂ ಯಃ ಪ್ರಯಚ್ಚತಿ ಭೂಮಿಪ|

13065055c ಸ್ವಾಯಂಭುವಂ ಮಹಾಭಾಗಂ ಸ ಪಶ್ಯತಿ ನರಾಧಿಪ||

ಭೂಮಿಮ! ನರಾಧಿಪ! ಹಸಿವೆಯಿಂದ ಬಳಲಿದವನಿಗೆ ಯಾರು ಅನ್ನವನ್ನು ನೀಡುತ್ತಾನೋ ಅವನು ಮಹಾಭಾಗ ಸ್ವಾಯಂಭುವ ಬ್ರಹ್ಮನನ್ನು ಕಾಣುತ್ತಾನೆ.

13065056a ನ ಹಿರಣ್ಯೈರ್ನ ವಾಸೋಭಿರ್ನಾಶ್ವದಾನೇನ ಭಾರತ|

13065056c ಪ್ರಾಪ್ನುವಂತಿ ನರಾಃ ಶ್ರೇಯೋ ಯಥೇಹಾನ್ನಪ್ರದಾಃ ಪ್ರಭೋ||

ಭಾರತ! ಪ್ರಭೋ! ಅನ್ನದಾನದಿಂದ ಪಡೆಯುವಷ್ಟು ಶ್ರೇಯಸ್ಸನ್ನು ಮನುಷ್ಯನು ಹಿರಣ್ಯ, ವಸ್ತ್ರಗಳು ಅಥವಾ ಅಶ್ವದಾನದಿಂದಲೂ ಪಡೆದುಕೊಳ್ಳುವುದಿಲ್ಲ.

13065057a ಅನ್ನಂ ವೈ ಪರಮಂ ದ್ರವ್ಯಮನ್ನಂ ಶ್ರೀಶ್ಚ ಪರಾ ಮತಾ|

13065057c ಅನ್ನಾತ್ಪ್ರಾಣಃ ಪ್ರಭವತಿ ತೇಜೋ ವೀರ್ಯಂ ಬಲಂ ತಥಾ||

ಅನ್ನವು ಪರಮ ದ್ರವ್ಯವೆಂದೂ ಪರಮ ಸಂಪತ್ತೆಂದೂ ಅಭಿಪ್ರಾಯವಿದೆ. ಅನ್ನದಿಂದ ತ್ರಾಣ, ತೇಜಸ್ಸು, ವೀರ್ಯ ಮತ್ತು ಬಲಗಳು ವೃದ್ಧಿಯಾಗುತ್ತವೆ.

13065058a ಸದ್ಭ್ಯೋ ದದಾತಿ ಯಶ್ಚಾನ್ನಂ ಸದೈಕಾಗ್ರಮನಾ ನರಃ|

13065058c ನ ಸ ದುರ್ಗಾಣ್ಯವಾಪ್ನೋತೀತ್ಯೇವಮಾಹ ಪರಾಶರಃ||

ಏಕಾಗ್ರಮನಸ್ಸಿನಿಂದ ಸಾಧುಜನರಿಗೆ ಅನ್ನವನ್ನು ನೀಡುವವನು ಯಾವುದೇ ಕಷ್ಟಗಳನ್ನು ಪಡೆಯುವುದಿಲ್ಲ ಎಂದು ಪರಾಶರನು ಹೇಳಿದ್ದಾನೆ.

13065059a ಅರ್ಚಯಿತ್ವಾ ಯಥಾನ್ಯಾಯಂ ದೇವೇಭ್ಯೋಽನ್ನಂ ನಿವೇದಯೇತ್|

13065059c ಯದನ್ನೋ ಹಿ ನರೋ ರಾಜಂಸ್ತದನ್ನಾಸ್ತಸ್ಯ ದೇವತಾಃ||

ರಾಜನ್! ಯಥಾನ್ಯಾಯವಾಗಿ ದೇವತೆಗಳನ್ನು ಅರ್ಚಿಸಿ ಅನ್ನವನ್ನು ನೈವೇದ್ಯಮಾಡಬೇಕು. ಏಕೆಂದರೆ ಮನುಷ್ಯನು ಯಾವ ಅನ್ನವನ್ನು ತಿನ್ನುತ್ತಾನೋ ಅದೇ ದೇವತೆಗಳಿಗೂ ಅನ್ನವಾಗಿದೆ.

13065060a ಕೌಮುದ್ಯಾಂ ಶುಕ್ಲಪಕ್ಷೇ ತು ಯೋಽನ್ನದಾನಂ ಕರೋತ್ಯುತ|

13065060c ಸ ಸಂತರತಿ ದುರ್ಗಾಣಿ ಪ್ರೇತ್ಯ ಚಾನಂತ್ಯಮಶ್ನುತೇ||

ಕಾರ್ತೀಕಮಾಸದ ಶುಕ್ಲಪಕ್ಷದಲ್ಲಿ ಅನ್ನದಾನವನ್ನು ಮಾಡುವವನು ಎಲ್ಲ ಕಷ್ಟಗಳನ್ನು ಪಾರಾಗಿ ಮರಣಾನಂತರ ಅಕ್ಷಯ ಸುಖದ ಭಾಗಿಯಾಗುತ್ತಾನೆ.

13065061a ಅಭುಕ್ತ್ವಾತಿಥಯೇ ಚಾನ್ನಂ ಪ್ರಯಚ್ಚೇದ್ಯಃ ಸಮಾಹಿತಃ|

13065061c ಸ ವೈ ಬ್ರಹ್ಮವಿದಾಂ ಲೋಕಾನ್ಪ್ರಾಪ್ನುಯಾದ್ಭರತರ್ಷಭ||

ಭರತರ್ಷಭ! ಸಮಾಹಿತನಾಗಿ ನಾನು ಉಣ್ಣದೇ ಅತಿಥಿಗೆ ಅನ್ನವನ್ನು ನೀಡಿದವನು ಬ್ರಹ್ಮವಿದರ ಲೋಕವನ್ನು ಹೊಂದುತ್ತಾನೆ.

13065062a ಸುಕೃಚ್ಚ್ರಾಮಾಪದಂ ಪ್ರಾಪ್ತಶ್ಚಾನ್ನದಃ ಪುರುಷಸ್ತರೇತ್|

13065062c ಪಾಪಂ ತರತಿ ಚೈವೇಹ ದುಷ್ಕೃತಂ ಚಾಪಕರ್ಷತಿ||

ಅನ್ನದಾನ ಮಾಡಿದ ಪುರುಷನು ಅತ್ಯಂತ ಕಠಿನ ಆಪತ್ತುಗಳಿಂದಲೂ ಪಾರಾಗುತ್ತಾನೆ. ಪಾಪದಿಂದ ಮುಕ್ತನಾಗುತ್ತಾನೆ ಮತ್ತು ಮುಂದೆ ನಡೆಯಲಿರುವ ದುಷ್ಕರ್ಮಗಳನ್ನೂ ನಾಶಗೊಳಿಸುತ್ತಾನೆ.

13065063a ಇತ್ಯೇತದನ್ನದಾನಸ್ಯ ತಿಲದಾನಸ್ಯ ಚೈವ ಹ|

13065063c ಭೂಮಿದಾನಸ್ಯ ಚ ಫಲಂ ಗೋದಾನಸ್ಯ ಚ ಕೀರ್ತಿತಮ್||

ಹೀಗೆ ಅನ್ನದಾನ, ತಿಲದಾನ, ಭೂಮಿದಾನ ಮತ್ತು ಗೋದಾನಗಳ ಫಲವನ್ನು ಹೇಳಿದ್ದಾರೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪಂಚಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅರವತ್ತೈದನೇ ಅಧ್ಯಾಯವು.

Image result for flowers against white background

Comments are closed.