ಅನುಶಾಸನ ಪರ್ವ: ದಾನಧರ್ಮ ಪರ್ವ
೬೪
ಕಾಂಚನಾದಿ ದಾನಗಳು
ಸುವರ್ಣ, ಜಲ ಮೊದಲಾದವುಗಳ ದಾನಗಳ ಮಹಿಮೆಗಳು (೧-೧೯).
13064001 ಭೀಷ್ಮ ಉವಾಚ|
13064001a ಸರ್ವಾನ್ಕಾಮಾನ್ಪ್ರಯಚ್ಚಂತಿ ಯೇ ಪ್ರಯಚ್ಚಂತಿ ಕಾಂಚನಮ್|
13064001c ಇತ್ಯೇವಂ ಭಗವಾನತ್ರಿಃ ಪಿತಾಮಹಸುತೋಽಬ್ರವೀತ್||
ಭೀಷ್ಮನು ಹೇಳಿದನು: ““ಕಾಂಚನವನ್ನು ದಾನಮಾಡಿದವನು ಯಾಚಕನ ಸರ್ವಕಾಮನೆಗಳನ್ನೂ ಪೌರೈಸಿದಂತೆ” ಎಂದು ಪಿತಾಮಹ ಬ್ರಹ್ಮನ ಪುತ್ರ ಭಗವಾನ್ ಅತ್ರಿಯು ಹೇಳಿದ್ದಾನೆ.
13064002a ಪವಿತ್ರಂ ಶುಚ್ಯಥಾಯುಷ್ಯಂ ಪಿತೄಣಾಮಕ್ಷಯಂ ಚ ತತ್|
13064002c ಸುವರ್ಣಂ ಮನುಜೇಂದ್ರೇಣ ಹರಿಶ್ಚಂದ್ರೇಣ ಕೀರ್ತಿತಮ್||
“ಸುವರ್ಣವು ಪರಮ ಪವಿತ್ರ. ಆಯುಷ್ಯವನ್ನು ವರ್ಧಿಸುತ್ತದೆ ಮತ್ತು ಪಿತೃಗಳಿಗೆ ಅಕ್ಷಯ ಗತಿಯನ್ನು ಒದಗಿಸುತ್ತದೆ” ಎಂದು ಮನುಜೇಂದ್ರ ಹರಿಶ್ಚಂದ್ರನು ಹೇಳಿದ್ದಾನೆ.
13064003a ಪಾನೀಯದಾನಂ ಪರಮಂ ದಾನಾನಾಂ ಮನುರಬ್ರವೀತ್|
13064003c ತಸ್ಮಾದ್ವಾಪೀಶ್ಚ ಕೂಪಾಂಶ್ಚ ತಡಾಗಾನಿ ಚ ಖಾನಯೇತ್||
“ಪಾನೀಯದಾನವು ದಾನಗಳಲ್ಲಿ ಪರಮ ಶ್ರೇಷ್ಠವಾದುದು” ಎಂದು ಮನುವು ಹೇಳಿದ್ದಾನೆ. ಆದುದರಿಂದ ಕೆರೆ, ಬಾವಿ ಮತ್ತು ಹೊಂಡಗಳನ್ನು ಅಗೆಯಬೇಕು.
13064004a ಅರ್ಧಂ ಪಾಪಸ್ಯ ಹರತಿ ಪುರುಷಸ್ಯೇಹ ಕರ್ಮಣಃ|
13064004c ಕೂಪಃ ಪ್ರವೃತ್ತಪಾನೀಯಃ ಸುಪ್ರವೃತ್ತಶ್ಚ ನಿತ್ಯಶಃ||
ಉತ್ತಮ ನೀರಿರುವ ಮತ್ತು ಬಹುಜನರಿಗೆ ನಿತ್ಯವೂ ಉಪಯುಕ್ತವಾಗುವ ಬಾವಿಯನ್ನು ತೋಡುವ ಮನುಷ್ಯನ ಪಾಪಗಳಲ್ಲಿ ಅರ್ಧವನ್ನು ಅದು ಕಳೆಯುತ್ತದೆ.
13064005a ಸರ್ವಂ ತಾರಯತೇ ವಂಶಂ ಯಸ್ಯ ಖಾತೇ ಜಲಾಶಯೇ|
13064005c ಗಾವಃ ಪಿಬಂತಿ ವಿಪ್ರಾಶ್ಚ ಸಾಧವಶ್ಚ ನರಾಃ ಸದಾ||
ಯಾರು ತೋಡಿದ ಜಲಾಶಯದ ನೀರನ್ನು ಸದಾ ಗೋವುಗಳು, ವಿಪ್ರರು ಮತ್ತು ಸಾಧುಪುರುಷರು ಕುಡಿಯುತ್ತಾರೋ ಅವನ ವಂಶವು ಉದ್ಧಾರವಾಗುತ್ತದೆ.
13064006a ನಿದಾಘಕಾಲೇ ಪಾನೀಯಂ ಯಸ್ಯ ತಿಷ್ಠತ್ಯವಾರಿತಮ್|
13064006c ಸ ದುರ್ಗಂ ವಿಷಮಂ ಕೃಚ್ಚ್ರಂ ನ ಕದಾ ಚಿದವಾಪ್ನುತೇ||
ಬೇಸಗೆ ಕಾಲದಲ್ಲಿಯೂ ನೀರು ಬತ್ತದಂಥಹ ಕೆರೆಯನ್ನು ತೋಡಿದವನು ಎಂದೂ ಅತ್ಯಂತ ಸಂಕಟ-ಕಷ್ಟಗಳಲ್ಲಿ ಬೀಳುವುದಿಲ್ಲ.
13064007a ಬೃಹಸ್ಪತೇರ್ಭಗವತಃ ಪೂಷ್ಣಶ್ಚೈವ ಭಗಸ್ಯ ಚ|
13064007c ಅಶ್ವಿನೋಶ್ಚೈವ ವಹ್ನೇಶ್ಚ ಪ್ರೀತಿರ್ಭವತಿ ಸರ್ಪಿಷಾ||
ತುಪ್ಪವನ್ನು ದಾನಮಾಡುವುದರಿಂದ ಭಗವಾನ್ ಬೃಹಸ್ಪತಿ, ಪೂಷಾ, ಭಗ, ಅಶ್ವಿನೀ ದೇವತೆಗಳು ಮತ್ತು ಅಗ್ನಿದೇವರು ಪ್ರಸನ್ನರಾಗುತ್ತಾರೆ.
13064008a ಪರಮಂ ಭೇಷಜಂ ಹ್ಯೇತದ್ಯಜ್ಞಾನಾಮೇತದುತ್ತಮಮ್|
13064008c ರಸಾನಾಮುತ್ತಮಂ ಚೈತತ್ಫಲಾನಾಂ ಚೈತದುತ್ತಮಮ್||
ತುಪ್ಪವು ಪರಮ ಔಷಧಿ ಮತ್ತು ಯಜ್ಞದಲ್ಲಿ ಉಪಯೋಗಿಸುವ ಸರ್ವಶ್ರೇಷ್ಠ ವಸ್ತುವು. ಇದು ರಸಗಳಲ್ಲಿ ಉತ್ತಮ ರಸವು ಮತ್ತು ಫಲಗಳಲ್ಲಿ ಉತ್ತಮ ಫಲವು.
13064009a ಫಲಕಾಮೋ ಯಶಸ್ಕಾಮಃ ಪುಷ್ಟಿಕಾಮಶ್ಚ ನಿತ್ಯದಾ|
13064009c ಘೃತಂ ದದ್ಯಾದ್ದ್ವಿಜಾತಿಭ್ಯಃ ಪುರುಷಃ ಶುಚಿರಾತ್ಮವಾನ್||
ಫಲವನ್ನು ಬಯಸುವ, ಯಶಸ್ಸನ್ನು ಬಯಸುವ ಮತ್ತು ಸಮೃದ್ಧಿಯನ್ನು ಬಯಸುವ ಪುರುಷನು ನಿತ್ಯವೂ ಆತ್ಮಶುದ್ಧನಾಗಿ ಬ್ರಾಹ್ಮಣರಿಗೆ ತುಪ್ಪವನ್ನು ದಾನಮಾಡಬೇಕು.
13064010a ಘೃತಂ ಮಾಸೇ ಆಶ್ವಯುಜಿ ವಿಪ್ರೇಭ್ಯೋ ಯಃ ಪ್ರಯಚ್ಚತಿ|
13064010c ತಸ್ಮೈ ಪ್ರಯಚ್ಚತೋ ರೂಪಂ ಪ್ರೀತೌ ದೇವಾವಿಹಾಶ್ವಿನೌ||
ಆಶ್ವಯುಜ ಮಾಸದಲ್ಲಿ ತುಪ್ಪವನ್ನು ಬ್ರಾಹ್ಮಣರಿಗೆ ಯಾರು ದಾನಮಾಡುತ್ತಾನೋ ಅವನಿಗೆ ಅಶ್ವಿನೀ ದೇವತೆಗಳು ಪ್ರೀತರಾಗಿ ಸುಂದರ ರೂಪವನ್ನು ನೀಡುತ್ತಾರೆ.
13064011a ಪಾಯಸಂ ಸರ್ಪಿಷಾ ಮಿಶ್ರಂ ದ್ವಿಜೇಭ್ಯೋ ಯಃ ಪ್ರಯಚ್ಚತಿ|
13064011c ಗೃಹಂ ತಸ್ಯ ನ ರಕ್ಷಾಂಸಿ ಧರ್ಷಯಂತಿ ಕದಾ ಚನ||
ತುಪ್ಪವನ್ನು ಸೇರಿಸಿ ಪಾಯಸವನ್ನು ಬ್ರಾಹ್ಮಣರಿಗೆ ದಾನಮಾಡುವವನ ಗೃಹವನ್ನು ರಾಕ್ಷಸರು ಎಂದೂ ಕಾಡುವುದಿಲ್ಲ.
13064012a ಪಿಪಾಸಯಾ ನ ಮ್ರಿಯತೇ ಸೋಪಚ್ಚಂದಶ್ಚ ದೃಶ್ಯತೇ|
13064012c ನ ಪ್ರಾಪ್ನುಯಾಚ್ಚ ವ್ಯಸನಂ ಕರಕಾನ್ಯಃ ಪ್ರಯಚ್ಚತಿ||
ನೀರಿನಿಂದ ತುಂಬಿದ ಕಮಂಡಲುವನ್ನು ದಾನಮಾದುವವನು ಎಂದೂ ಬಾಯಾರಿಕೆಯಿಂದ ಸಾಯುವುದಿಲ್ಲ. ಅವನ ಬಳಿ ಎಲ್ಲ ಪ್ರಕಾರದ ಆವಶ್ಯಕ ಸಾಮಾಗ್ರಿಗಳೂ ಒದಗಿಬರುತ್ತವೆ ಮತ್ತು ಅವನು ಎಂದೂ ವ್ಯಸನವನ್ನು ಹೊಂದುವುದಿಲ್ಲ.
13064013a ಪ್ರಯತೋ ಬ್ರಾಹ್ಮಣಾಗ್ರೇಭ್ಯಃ ಶ್ರದ್ಧಯಾ ಪರಯಾ ಯುತಃ|
13064013c ಉಪಸ್ಪರ್ಶನಷಡ್ಭಾಗಂ ಲಭತೇ ಪುರುಷಃ ಸದಾ||
ಪ್ರಯತನಾಗಿ ಬ್ರಾಹ್ಮಣರ ಮುಂದೆ ನಿಂತು ಪರಮ ಶ್ರದ್ಧೆಯಿಂದ ಸೇವೆಗೈಯುವ ಪುರುಷನು ಸದಾ ದಾನದ ಆರನೆಯ ಒಂದು ಭಾಗವನ್ನು ಪಡೆದುಕೊಳ್ಳುತ್ತಾನೆ.
13064014a ಯಃ ಸಾಧನಾರ್ಥಂ ಕಾಷ್ಠಾನಿ ಬ್ರಾಹ್ಮಣೇಭ್ಯಃ ಪ್ರಯಚ್ಚತಿ|
13064014c ಪ್ರತಾಪಾರ್ಥಂ ಚ ರಾಜೇಂದ್ರ ವೃತ್ತವದ್ಭ್ಯಃ ಸದಾ ನರಃ||
13064015a ಸಿಧ್ಯಂತ್ಯರ್ಥಾಃ ಸದಾ ತಸ್ಯ ಕಾರ್ಯಾಣಿ ವಿವಿಧಾನಿ ಚ|
13064015c ಉಪರ್ಯುಪರಿ ಶತ್ರೂಣಾಂ ವಪುಷಾ ದೀಪ್ಯತೇ ಚ ಸಃ||
ರಾಜೇಂದ್ರ! ಸದಾಚಾರ ಸಂಪನ್ನ ಬ್ರಾಹ್ಮಣನಿಗೆ ಅಡುಗೆ ಮಾಡಿಕೊಳ್ಳಲು ಮತ್ತು ಬೆಚ್ಚಗಾಗಿಸಿಕೊಳ್ಳಲು ಕಟ್ಟಿಗೆಯನ್ನು ಕೊಡುವ ಮನುಷ್ಯನ ಸರ್ವ ಕಾಮನೆಗಳು ಮತ್ತು ವಿವಿಧ ಕಾರ್ಯಗಳು ಸಿದ್ಧಿಯಾಗುತ್ತವೆ. ಅವನ ಶತ್ರುಗಳ ಮೇಲೆಯೇ ಇದ್ದುಕೊಂಡು ತೇಜಸ್ಸಿನಿಂದ ಬೆಳಗುತ್ತಾನೆ.
13064016a ಭಗವಾಂಶ್ಚಾಸ್ಯ ಸುಪ್ರೀತೋ ವಹ್ನಿರ್ಭವತಿ ನಿತ್ಯಶಃ|
13064016c ನ ತಂ ತ್ಯಜಂತೇ ಪಶವಃ ಸಂಗ್ರಾಮೇ ಚ ಜಯತ್ಯಪಿ||
ಅವನ ಮೇಲೆ ಭಗವಾನ್ ಅಗ್ನಿಯು ನಿತ್ಯವು ಸುಪ್ರೀತನಾಗಿರುತ್ತಾನೆ. ಅವನ ಪಶುಗಳಿಗೆ ಹಾನಿಯುಂಟಾಗುವುದಿಲ್ಲ ಮತ್ತು ಅವನು ಸಂಗ್ರಾಮದಲ್ಲಿ ಜಯವನ್ನೇ ಹೊಂದುತ್ತಾನೆ.
13064017a ಪುತ್ರಾನ್ ಶ್ರಿಯಂ ಚ ಲಭತೇ ಯಶ್ಚತ್ರಂ ಸಂಪ್ರಯಚ್ಚತಿ|
13064017c ಚಕ್ಷುರ್ವ್ಯಾಧಿಂ ನ ಲಭತೇ ಯಜ್ಞಭಾಗಮಥಾಶ್ನುತೇ||
ಚತ್ರವನ್ನು ದಾನಮಾಡುವವನಿಗೆ ಪುತ್ರರೂ ಲಕ್ಷ್ಮಿಯೂ ಪ್ರಾಪ್ತವಾಗುತ್ತವೆ. ಅವನ ಕಣ್ಣುಗಳಿಗೆ ಯಾವ ರೋಗವೂ ಬರುವುದಿಲ್ಲ ಮತ್ತು ಅವನಿಗೆ ಯಜ್ಞಭಾಗವು ದೊರೆಯುತ್ತದೆ.
13064018a ನಿದಾಘಕಾಲೇ ವರ್ಷೇ ವಾ ಯಶ್ಚತ್ರಂ ಸಂಪ್ರಯಚ್ಚತಿ|
13064018c ನಾಸ್ಯ ಕಶ್ಚಿನ್ಮನೋದಾಹಃ ಕದಾ ಚಿದಪಿ ಜಾಯತೇ|
13064018e ಕೃಚ್ಚ್ರಾತ್ಸ ವಿಷಮಾಚ್ಚೈವ ವಿಪ್ರ[1] ಮೋಕ್ಷಮವಾಪ್ನುತೇ||
ಬೇಸಗೆಯಲ್ಲಿ ಮತ್ತು ಮಳೆಗಾಲದಲ್ಲಿ ಚತ್ರವನ್ನು ದಾನಮಾಡುವವನ ಮನಸ್ಸಿಗೆ ಎಂದೂ ಸಂತಾಪವುಂಟಾಗುವುದಿಲ್ಲ. ಅವನು ಅತ್ಯಂತ ದೊಡ್ಡ ಕಷ್ಟಗಳಲ್ಲಿಯೂ ಬೇಗನೇ ಪಾರಾಗುತ್ತಾನೆ.
13064019a ಪ್ರದಾನಂ ಸರ್ವದಾನಾನಾಂ ಶಕಟಸ್ಯ ವಿಶಿಷ್ಯತೇ|
13064019c ಏವಮಾಹ ಮಹಾಭಾಗಃ ಶಾಂಡಿಲ್ಯೋ ಭಗವಾನೃಷಿಃ||
“ಸರ್ವದಾನಗಳಲ್ಲಿ ಬಂಡಿಯ ದಾನವು ಹೆಚ್ಚಿನದು” ಎಂದು ಮಹಾಭಾಗ ಭಗವಾನ್ ಶಾಂಡಿಲ್ಯ ಋಷಿಯು ಹೇಳಿದ್ದಾನೆ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚತುಃಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಅರವತ್ನಾಲ್ಕನೇ ಅಧ್ಯಾಯವು.
[1] ಕ್ಷಿಪ್ರಂ ಎಂಬ ಪಾಠಾಂತರವಿದೆ.