Anushasana Parva: Chapter 62

ಅನುಶಾಸನ ಪರ್ವ: ದಾನಧರ್ಮ ಪರ್ವ

೬೨

ಅನ್ನದಾನಪ್ರಶಂಸಾ

ನಾರದನ ಮಾತುಗಳಲ್ಲಿ ಅನ್ನದಾನದ ಪ್ರಶಂಸೆ (೧-೪೨). ಭೀಷ್ಮನು ಅನ್ನದಾನ ಮಾಡಿದವರಿಗೆ ದೊರಕುವ ಭುವನಗಳನ್ನು ವರ್ಣಿಸಿದುದು (೪೩-೫೧).

13062001 ಯುಧಿಷ್ಠಿರ ಉವಾಚ|

13062001a ಕಾನಿ ದಾನಾನಿ ಲೋಕೇಽಸ್ಮಿನ್ದಾತುಕಾಮೋ ಮಹೀಪತಿಃ|

13062001c ಗುಣಾಧಿಕೇಭ್ಯೋ ವಿಪ್ರೇಭ್ಯೋ ದದ್ಯಾದ್ಭರತಸತ್ತಮ||

ಯುಧಿಷ್ಠಿರನು ಹೇಳಿದನು: “ಭರತಸತ್ತಮ! ದಾನಮಾಡಬಯಸಿದ ಮಹೀಪತಿಯು ಈ ಲೋಕದಲ್ಲಿ ಗುಣಾಧಿಕ ವಿಪ್ರರಿಗೆ ಯಾವ ದಾನಗಳನ್ನು ನೀಡಬೇಕು?

13062002a ಕೇನ ತುಷ್ಯಂತಿ ತೇ ಸದ್ಯಸ್ತುಷ್ಟಾಃ ಕಿಂ ಪ್ರದಿಶಂತ್ಯುತ|

13062002c ಶಂಸ ಮೇ ತನ್ಮಹಾಬಾಹೋ ಫಲಂ ಪುಣ್ಯಕೃತಂ ಮಹತ್||

ಯಾವುದನ್ನು ದಾನಮಾಡುವುದರಿಂದ ಬ್ರಾಹ್ಮಣನು ತಕ್ಷಣವೇ ತೃಪ್ತನಾಗುತ್ತಾನೆ? ಮಹಾಬಾಹೋ! ಅಂಥಹ ಮಹಾ ಪುಣ್ಯಕರ್ಮದ ಫಲವನ್ನು ನನಗೆ ಹೇಳು.

13062003a ದತ್ತಂ ಕಿಂ ಫಲವದ್ರಾಜನ್ನಿಹ ಲೋಕೇ ಪರತ್ರ ಚ|

13062003c ಭವತಃ ಶ್ರೋತುಮಿಚ್ಚಾಮಿ ತನ್ಮೇ ವಿಸ್ತರತೋ ವದ||

ರಾಜನ್! ಯಾವುದನ್ನು ಕೊಡುವುದರಿಂದ ಇಹದಲ್ಲಿ ಮತ್ತು ಪರಲೋಕದಲ್ಲಿ ಫಲವನ್ನು ನೀಡುತ್ತದೆ? ಅದನ್ನು ಕೇಳ ಬಯಸುತ್ತೇನೆ. ವಿಸ್ತಾರವಾಗಿ ಅದರ ಕುರಿತು ನೀನು ಹೇಳು.”

13062004 ಭೀಷ್ಮ ಉವಾಚ|

13062004a ಇಮಮರ್ಥಂ ಪುರಾ ಪೃಷ್ಟೋ ನಾರದೋ ದೇವದರ್ಶನಃ|

13062004c ಯದುಕ್ತವಾನಸೌ ತನ್ಮೇ ಗದತಃ ಶೃಣು ಭಾರತ||

ಭೀಷ್ಮನು ಹೇಳಿದನು: “ಇದೇ ವಿಷಯವನ್ನು ನಾನು ಹಿಂದೆ ದೇವದರ್ಶನ ನಾರದನಿಗೆ ಕೇಳಿದ್ದೆ. ಭಾರತ! ಅವನು ಏನು ಹೇಳಿದ್ದನೋ ಅದನ್ನೇ ನಾನು ನಿನಗೆ ಹೇಳುತ್ತೇನೆ. ಕೇಳು.

13062005 ನಾರದ ಉವಾಚ|

13062005a ಅನ್ನಮೇವ ಪ್ರಶಂಸಂತಿ ದೇವಾಃ ಸರ್ಷಿಗಣಾಃ ಪುರಾ|

13062005c ಲೋಕತಂತ್ರಂ ಹಿ ಯಜ್ಞಾಶ್ಚ[1] ಸರ್ವಮನ್ನೇ ಪ್ರತಿಷ್ಠಿತಮ್||

ನಾರದನು ಹೇಳಿದನು: “ದೇವತೆಗಳು ಮತ್ತು ಋಷಿಗಣಗಳು ಅನ್ನವನ್ನೇ ಪ್ರಶಂಸಿಸುತ್ತಾರೆ. ಅನ್ನದಿಂದಲೇ ಲೋಕಯಾತ್ರೆಯು ನಡೆಯುತ್ತದೆ. ಯಜ್ಞ ಮತ್ತು ಎಲ್ಲವೂ ಅನ್ನದಲ್ಲಿಯೇ ಪ್ರತಿಷ್ಠಿತಗೊಂಡಿವೆ.

13062006a ಅನ್ನೇನ ಸದೃಶಂ ದಾನಂ ನ ಭೂತಂ ನ ಭವಿಷ್ಯತಿ|

13062006c ತಸ್ಮಾದನ್ನಂ ವಿಶೇಷೇಣ ದಾತುಮಿಚ್ಚಂತಿ ಮಾನವಾಃ||

ಅನ್ನದ ಸಮಾನ ದಾನವು ಹಿಂದೆ ಇರಲಿಲ್ಲ ಮುಂದು ಇರುವುದೂ ಇಲ್ಲ. ಆದುದರಿಂದ ಮಾನವರು ವಿಶೇಷವಾಗಿ ಅನ್ನವನ್ನೇ ದಾನಮಾಡ ಬಯಸುತ್ತಾರೆ.

13062007a ಅನ್ನಮೂರ್ಜಸ್ಕರಂ ಲೋಕೇ ಪ್ರಾಣಾಶ್ಚಾನ್ನೇ ಪ್ರತಿಷ್ಠಿತಾಃ|

13062007c ಅನ್ನೇನ ಧಾರ್ಯತೇ ಸರ್ವಂ ವಿಶ್ವಂ ಜಗದಿದಂ ಪ್ರಭೋ||

ಪ್ರಭೋ! ಅನ್ನವೇ ಲೋಕದಲ್ಲಿ ಶರೀರದ ಬಲವನ್ನು ಹೆಚ್ಚಿಸುತ್ತದೆ. ಅನ್ನವನ್ನು ಅವಲಂಬಿಸಿಯೇ ಪ್ರಾಣಗಳು ನಿಂತಿವೆ. ಈ ಸಂಪೂರ್ಣ ವಿಶ್ವ ಜಗತ್ತನ್ನು ಅನ್ನವೇ ಧಾರಣೆಮಾಡಿಕೊಂಡಿದೆ.

13062008a ಅನ್ನಾದ್ಗೃಹಸ್ಥಾ ಲೋಕೇಽಸ್ಮಿನ್ಭಿಕ್ಷವಸ್ತತ ಏವ ಚ|

13062008c ಅನ್ನಾತ್ಪ್ರಭವತಿ ಪ್ರಾಣಃ ಪ್ರತ್ಯಕ್ಷಂ ನಾತ್ರ ಸಂಶಯಃ||

ಈ ಲೋಕದಲ್ಲಿ ಗೃಹಸ್ಥ, ವಾನಪ್ರಸ್ಥ ಮತ್ತು ಭಿಕ್ಷು ಇವರೆಲ್ಲರೂ ಅನ್ನದಿಂದಲೇ ಜೀವಿಸುತ್ತಾರೆ. ಅನ್ನದಿಂದಲೇ ಪ್ರಾಣವು ಹುಟ್ಟುತ್ತದೆ. ಈ ವಿಷಯವು ಪ್ರತ್ಯಕ್ಷವಾಗಿದೆ. ಅದರಲ್ಲಿ ಸಂಶಯವಿಲ್ಲ.

13062009a ಕುಟುಂಬಂ ಪೀಡಯಿತ್ವಾಪಿ[2] ಬ್ರಾಹ್ಮಣಾಯ ಮಹಾತ್ಮನೇ|

13062009c ದಾತವ್ಯಂ ಭಿಕ್ಷವೇ ಚಾನ್ನಮಾತ್ಮನೋ ಭೂತಿಮಿಚ್ಚತಾ||

ತನ್ನ ಕಲ್ಯಾಣವನ್ನು ಬಯಸುವವನು ತನ್ನ ಕುಟುಂಬಕ್ಕೆ ಕಷ್ಟಬಂದರೂ ಮಹಾತ್ಮ ಬ್ರಾಹ್ಮಣನಿಗೆ ಅನ್ನವನ್ನು ಭಿಕ್ಷವಾಗಿ ಕೊಡಬೇಕು.

13062010a ಬ್ರಾಹ್ಮಣಾಯಾಭಿರೂಪಾಯ ಯೋ ದದ್ಯಾದನ್ನಮರ್ಥಿನೇ|

13062010c ನಿದಧಾತಿ ನಿಧಿಂ ಶ್ರೇಷ್ಠಂ ಪಾರಲೌಕಿಕಮಾತ್ಮನಃ||

ಯಾಚಿಸುವ ಸುಪಾತ್ರ ಬ್ರಾಹ್ಮಣನಿಗೆ ಅನ್ನವನ್ನು ನೀಡುವವನು ಪರಲೋಕದಲ್ಲಿ ತನಗಾಗಿ ಒಂದು ಶ್ರೇಷ್ಠ ನಿಧಿಯನ್ನು ಸಿದ್ಧಗೊಳಿಸುತ್ತಾನೆ.

13062011a ಶ್ರಾಂತಮಧ್ವನಿ ವರ್ತಂತಂ ವೃದ್ಧಮರ್ಹಮುಪಸ್ಥಿತಮ್|

13062011c ಅರ್ಚಯೇದ್ಭೂತಿಮನ್ವಿಚ್ಚನ್ಗೃಹಸ್ಥೋ ಗೃಹಮಾಗತಮ್||

ಪ್ರಯಾಣದಲ್ಲಿ ಬಳಲಿ ಮನೆಗೆ ಬಂದ ಅರ್ಹ ವೃದ್ಧನನ್ನು ಕಲ್ಯಾಣವನ್ನು ಬಯಸುವ ಗೃಹಸ್ಥನು ಆ ಆದರಣೀಯ ಅತಿಥಿಯನ್ನು ಪೂಜಿಸಬೇಕು.

13062012a ಕ್ರೋಧಮುತ್ಪತಿತಂ ಹಿತ್ವಾ ಸುಶೀಲೋ ವೀತಮತ್ಸರಃ|

13062012c ಅನ್ನದಃ ಪ್ರಾಪ್ನುತೇ ರಾಜನ್ದಿವಿ ಚೇಹ ಚ ಯತ್ಸುಖಮ್||

ರಾಜನ್! ಉಕ್ಕಿಬರುತ್ತಿರುವ ಕೋಪವನ್ನು ತೊರೆದು ಸುಶೀಲನಾಗಿ ಮಾತ್ಸರ್ಯವನ್ನು ಕಳೆದುಕೊಂಡು ಅನ್ನವನ್ನು ನೀಡುವವನು ಇಹ ಮತ್ತು ಪರಲೋಕಗಳಲ್ಲಿ ಸುಖವನ್ನು ಪಡೆಯುತ್ತಾನೆ.

13062013a ನಾವಮನ್ಯೇದಭಿಗತಂ ನ ಪ್ರಣುದ್ಯಾತ್ಕಥಂ ಚನ|

13062013c ಅಪಿ ಶ್ವಪಾಕೇ ಶುನಿ ವಾ ನ ದಾನಂ ವಿಪ್ರಣಶ್ಯತಿ||

ಮನೆಗೆ ಬಂದವನನ್ನು ಎಂದೂ ಅಪಮಾನಿಸಬಾರದು ಮತ್ತು ಕುಕ್ಕಬಾರದು. ಏಕೆಂದರೆ ಚಂಡಾಲ ಅಥವಾ ನಾಯಿಗೂ ಕೊಟ್ಟ ಅನ್ನ ದಾನವು ನಾಶವಾಗುವುದಿಲ್ಲ.

13062014a ಯೋ ದದ್ಯಾದಪರಿಕ್ಲಿಷ್ಟಮನ್ನಮಧ್ವನಿ ವರ್ತತೇ|

13062014c ಶ್ರಾಂತಾಯಾದೃಷ್ಟಪೂರ್ವಾಯ ಸ ಮಹದ್ಧರ್ಮಮಾಪ್ನುಯಾತ್||

ಕಷ್ಟದಲ್ಲಿರುವ ಅಪರಿಚಿತ ದಾರಿಹೋಕನಿಗೆ ಪ್ರಸನ್ನತಾಪೂರ್ವಕ ಅನ್ನವನ್ನು ನೀಡುವವನಿಗೆ ಮಹಾ ಧರ್ಮವು ಪ್ರಾಪ್ತವಾಗುತ್ತದೆ.

13062015a ಪಿತೄನ್ದೇವಾನೃಷೀನ್ವಿಪ್ರಾನತಿಥೀಂಶ್ಚ ಜನಾಧಿಪ|

13062015c ಯೋ ನರಃ ಪ್ರೀಣಯತ್ಯನ್ನೈಸ್ತಸ್ಯ ಪುಣ್ಯಫಲಂ ಮಹತ್||

ಜನಾಧಿಪ! ಪಿತೃ, ದೇವತೆಗಳು, ಋಷಿಗಳು, ವಿಪ್ರರು ಮತ್ತು ಅತಿಥಿಗಳಿಗೆ ಯಾವ ನರನು ಅನ್ನವನ್ನಿತ್ತು ಸಂತುಷ್ಟಗೊಳಿಸುತ್ತಾನೋ ಅವನ ಪುಣ್ಯವು ದೊಡ್ಡದು.

13062016a ಕೃತ್ವಾಪಿ ಪಾಪಕಂ ಕರ್ಮ ಯೋ ದದ್ಯಾದನ್ನಮರ್ಥಿನೇ|

13062016c ಬ್ರಾಹ್ಮಣಾಯ ವಿಶೇಷೇಣ ನ ಸ ಪಾಪೇನ ಯುಜ್ಯತೇ||

ಪಾಪಕರ್ಮಗಳನ್ನು ಮಾಡಿದ್ದರೂ ಯಾಚಕನಿಗೆ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನಿಗೆ ಅನ್ನವನ್ನು ನೀಡಿದವನು ಪಾಪದಿಂದ ಮುಕ್ತನಾಗುತ್ತಾನೆ.

13062017a ಬ್ರಾಹ್ಮಣೇಷ್ವಕ್ಷಯಂ ದಾನಮನ್ನಂ ಶೂದ್ರೇ ಮಹಾಫಲಮ್|

13062017c ಅನ್ನದಾನಂ ಚ ಶೂದ್ರೇ ಚ ಬ್ರಾಹ್ಮಣೇ ಚ ವಿಶಿಷ್ಯತೇ||

ಬ್ರಾಹ್ಮಣನಿಗೆ ಅನ್ನದಾನ ಮಾಡಿದುದರ ಫಲವು ಅಕ್ಷಯವಾಗುತ್ತದೆ. ಶೂದ್ರನಿಗೆ ಮಾಡಿದ ಅನ್ನದಾನದ ಫಲವೂ ಕೂಡ ಮಹತ್ತರವಾಗಿರುತ್ತದೆ. ಏಕೆಂದರೆ ಬ್ರಾಹ್ಮಣನಿಗೆ ಅಥವಾ ಶೂದ್ರನಿಗೆ ನೀಡುವ ಅನ್ನದಾನಗಳಲ್ಲಿ ವಿಶೇಷ ಅಂತರವಿರುವುದಿಲ್ಲ.

13062018a ನ ಪೃಚ್ಚೇದ್ಗೋತ್ರಚರಣಂ ಸ್ವಾಧ್ಯಾಯಂ ದೇಶಮೇವ ವಾ|

13062018c ಭಿಕ್ಷಿತೋ ಬ್ರಾಹ್ಮಣೇನೇಹ ಜನ್ಮ ವಾನ್ನಂ ಪ್ರಯಾಚಿತಃ||

ಬ್ರಾಹ್ಮಣನು ಭಿಕ್ಷೆಗಾಗಿ ಬಂದರೆ ಅವನ ಗೋತ್ರ, ಆಚರಣ, ಸ್ವಾಧ್ಯಾಯ ಅಥವಾ ದೇಶಾದಿಗಳ ಕುರಿತು ಪ್ರಶ್ನಿಸದೇ ಒಡನೆಯೇ ಅವನ ಸೇವೆಗೆ ಅನ್ನವನ್ನು ತಂದಿಡಬೇಕು.

13062019a ಅನ್ನದಸ್ಯಾನ್ನವೃಕ್ಷಾಶ್ಚ ಸರ್ವಕಾಮಫಲಾನ್ವಿತಾಃ|

13062019c ಭವಂತೀಹಾಥ ವಾಮುತ್ರ ನೃಪತೇ ನಾತ್ರ ಸಂಶಯಃ||

ನೃಪತೇ! ಅನ್ನದಾನ ಮಾಡುವವನಿಗಾಗಿ ಇಹಲೋಕ ಮತ್ತು ಪರಲೋಕಗಳಲ್ಲಿ ಸರ್ವಕಾಮಫಲಗಳನ್ನು ನೀಡುವ ಅನ್ನದ ವೃಕ್ಷವೇ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

13062020a ಆಶಂಸಂತೇ ಹಿ ಪಿತರಃ ಸುವೃಷ್ಟಿಮಿವ ಕರ್ಷಕಾಃ|

13062020c ಅಸ್ಮಾಕಮಪಿ ಪುತ್ರೋ ವಾ ಪೌತ್ರೋ ವಾನ್ನಂ ಪ್ರದಾಸ್ಯತಿ||

ಕೃಷಿಕರು ಉತ್ತಮ ಮಳೆಯನ್ನು ಹೇಗೋ ಹಾಗೆ ಪಿತೃಗಳೂ ಕೂಡ ತಮ್ಮ ಪುತ್ರ-ಪೌತ್ರರು ಅನ್ನದಾನಮಾಡುತ್ತಾರೆಂದು ಆಶಿಸುತ್ತಿರುತ್ತಾರೆ.

13062021a ಬ್ರಾಹ್ಮಣೋ ಹಿ ಮಹದ್ಭೂತಂ ಸ್ವಯಂ ದೇಹೀತಿ ಯಾಚತೇ|

13062021c ಅಕಾಮೋ ವಾ ಸಕಾಮೋ ವಾ ದತ್ತ್ವಾ ಪುಣ್ಯಮವಾಪ್ನುಯಾತ್||

ಬ್ರಾಹ್ಮಣನು ಓರ್ವ ಮಹಾ ಪ್ರಾಣಿ. ಒಂದುವೇಳೆ ಸ್ವಯಂ ಅವನೇ ದೇಹಿ ಎಂದು ಯಾಚಿಸಿದಾಗ ನಿಷ್ಕಾಮಭಾವದಿಂದ ಅಥವಾ ಸಕಾಮಭಾವದಿಂದ ಅವನಿಗೆ ಅನ್ನವನ್ನಿತ್ತು ಪುಣ್ಯವನ್ನು ಪಡೆದುಕೊಳ್ಳಬೇಕು.

13062022a ಬ್ರಾಹ್ಮಣಃ ಸರ್ವಭೂತಾನಾಮತಿಥಿಃ ಪ್ರಸೃತಾಗ್ರಭುಕ್|

13062022c ವಿಪ್ರಾ ಯಮಭಿಗಚ್ಚಂತಿ ಭಿಕ್ಷಮಾಣಾ ಗೃಹಂ ಸದಾ||

13062023a ಸತ್ಕೃತಾಶ್ಚ ನಿವರ್ತಂತೇ ತದತೀವ ಪ್ರವರ್ಧತೇ|

13062023c ಮಹಾಭೋಗೇ ಕುಲೇ ಜನ್ಮ ಪ್ರೇತ್ಯ ಪ್ರಾಪ್ನೋತಿ ಭಾರತ||

ಭಾರತ! ಬ್ರಾಹ್ಮಣನು ಸರ್ವಭೂತಗಳಿಗೆ ಅತಿಥಿ. ಅವನಿಗೆ ಎಲ್ಲರಗಿಂತಲೂ ಮೊದಲು ಭೋಜನಮಾಡುವ ಅಧಿಕಾರವಿದೆ. ಯಾರ ಮನೆಗೆ ವಿಪ್ರನು ಸದಾ ಭಿಕ್ಷಕ್ಕೆಂದು ಹೋಗಿ ಅಲ್ಲಿ ಸತ್ಕೃತನಾಗಿ ಹಿಂದಿರುಗುತ್ತಾನೋ ಆ ಮನೆಯು ಅತೀವ ಅಭಿವೃದ್ಧಿಯನ್ನು ಹೊಂದುತ್ತದೆ. ಮರಣಾನಂತರ ಆ ಮನೆಯ ಮಾಲೀಕನು ಮಹಾ ಸೌಭಾಗ್ಯಶಾಲೀ ಕುಲದಲ್ಲಿ ಜನ್ಮವನ್ನು ಪಡೆಯುತ್ತಾನೆ.

13062024a ದತ್ತ್ವಾ ತ್ವನ್ನಂ ನರೋ ಲೋಕೇ ತಥಾ ಸ್ಥಾನಮನುತ್ತಮಮ್|

13062024c ಮೃಷ್ಟಮೃಷ್ಟಾನ್ನದಾಯೀ ತು ಸ್ವರ್ಗೇ ವಸತಿ ಸತ್ಕೃತಃ||

ಈ ಲೋಕದಲ್ಲಿ ಅನ್ನ, ಉತ್ತಮ ಸ್ಥಾನ ಮತ್ತು ಮೃಷ್ಟಾನ್ನಗಳನ್ನು ನೀಡುತ್ತಾನೋ ಅವನು ಸ್ವರ್ಗದಲ್ಲಿ ಸತ್ಕೃತನಾಗಿ ವಾಸಿಸುತ್ತಾನೆ.

13062025a ಅನ್ನಂ ಪ್ರಾಣಾ ನರಾಣಾಂ ಹಿ ಸರ್ವಮನ್ನೇ ಪ್ರತಿಷ್ಠಿತಮ್|

13062025c ಅನ್ನದಃ ಪಶುಮಾನ್ಪುತ್ರೀ ಧನವಾನ್ಭೋಗವಾನಪಿ||

13062026a ಪ್ರಾಣವಾಂಶ್ಚಾಪಿ ಭವತಿ ರೂಪವಾಂಶ್ಚ ತಥಾ ನೃಪ|

13062026c ಅನ್ನದಃ ಪ್ರಾಣದೋ ಲೋಕೇ ಸರ್ವದಃ ಪ್ರೋಚ್ಯತೇ ತು ಸಃ||

ನೃಪ! ಅನ್ನವೇ ಮನುಷ್ಯರ ಪ್ರಾಣ. ಅನ್ನದಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿವೆ. ಆದುದರಿಂದ ಅನ್ನವನ್ನು ದಾನಮಾಡಿದವನು ಪಶು, ಪುತ್ರ, ಧನ, ಭೋಗ, ಬಲ ಮತ್ತು ರೂಪಗಳನ್ನು ಪಡೆದುಕೊಳ್ಳುತ್ತಾನೆ. ಲೋಕದಲ್ಲಿ ಅನ್ನವನ್ನು ನೀಡುವ ಪುರುಷನನ್ನು ಪ್ರಾಣದಾತಾ ಮತ್ತು ಸರ್ವವನ್ನೂ ಕೊಡುವವನು ಎಂದು ಕರೆಯುತ್ತಾರೆ.

13062027a ಅನ್ನಂ ಹಿ ದತ್ತ್ವಾತಿಥಯೇ ಬ್ರಾಹ್ಮಣಾಯ ಯಥಾವಿಧಿ|

13062027c ಪ್ರದಾತಾ ಸುಖಮಾಪ್ನೋತಿ ದೇವೈಶ್ಚಾಪ್ಯಭಿಪೂಜ್ಯತೇ||

ಅತಿಥಿ ಬ್ರಾಹ್ಮಣನಿಗೆ ಯಥಾವಿಧಿಯಾಗಿ ಅನ್ನದಾನಮಾಡಿದವನು ಸುಖವನ್ನು ಪಡೆದುಕೊಳ್ಳುತ್ತಾನೆ ಮತ್ತು ದೇವತೆಗಳೂ ಅವನನ್ನು ಪೂಜಿಸುತ್ತಾರೆ.

13062028a ಬ್ರಾಹ್ಮಣೋ ಹಿ ಮಹದ್ಭೂತಂ ಕ್ಷೇತ್ರಂ ಚರತಿ ಪಾದವತ್|

13062028c ಉಪ್ಯತೇ ತತ್ರ ಯದ್ಬೀಜಂ ತದ್ಧಿ ಪುಣ್ಯಫಲಂ ಮಹತ್||

ಬ್ರಾಹ್ಮಣನು ಒಂದು ಮಹಾ ಪ್ರಾಣಿ ಮತ್ತು ಕಾಲಿನಿಂದ ನಡೆಯುವ ಕ್ಷೇತ್ರ. ಆ ಕ್ಷೇತ್ರದಲ್ಲಿ ಯಾವ ಬೀಜವನ್ನು ಬಿತ್ತಿದರೂ ಅದು ಮಹಾ ಪುಣ್ಯಫಲವನ್ನು ನೀಡುತ್ತದೆ.

13062029a ಪ್ರತ್ಯಕ್ಷಂ ಪ್ರೀತಿಜನನಂ ಭೋಕ್ತೃದಾತ್ರೋರ್ಭವತ್ಯುತ|

13062029c ಸರ್ವಾಣ್ಯನ್ಯಾನಿ ದಾನಾನಿ ಪರೋಕ್ಷಫಲವಂತ್ಯುತ||

ಅನ್ನದಾನವು ದಾತಾ ಮತ್ತು ಭೋಕ್ತಾ ಇಬ್ಬರನ್ನೂ ಪ್ರತ್ಯಕ್ಷರೂಪದಲ್ಲಿಯೇ ಸಂತುಷ್ಟಗೊಳಿಸುತ್ತದೆ. ಅನ್ಯ ಎಲ್ಲ ದಾನಗಳ ಫಲಗಳೂ ಪರೋಕ್ಷ ಎಂದು ಹೇಳುತ್ತಾರೆ.

13062030a ಅನ್ನಾದ್ಧಿ ಪ್ರಸವಂ ವಿದ್ಧಿ ರತಿಮನ್ನಾದ್ಧಿ ಭಾರತ|

13062030c ಧರ್ಮಾರ್ಥಾವನ್ನತೋ ವಿದ್ಧಿ ರೋಗನಾಶಂ ತಥಾನ್ನತಃ||

ಭಾರತ! ಅನ್ನದಿಂದಲೇ ಸಂತಾನವು ಪ್ರಾಪ್ತವಾಗುತ್ತದೆ. ಅನ್ನದಿಂದಲೇ ರತಿಯ ಸಿದ್ಧಿಯಾಗುತ್ತದೆ. ಅನ್ನದಿಂದಲೇ ಧರ್ಮ-ಅರ್ಥಗಳು ಸಿದ್ಧಿಸುತ್ತವೆ ಎಂದು ತಿಳಿ. ಹಾಗೆಯೇ ಅನ್ನದಿಂದಲೇ ರೋಗಗಳು ನಾಶವಾಗುತ್ತವೆ.

13062031a ಅನ್ನಂ ಹ್ಯಮೃತಮಿತ್ಯಾಹ ಪುರಾಕಲ್ಪೇ ಪ್ರಜಾಪತಿಃ|

13062031c ಅನ್ನಂ ಭುವಂ ದಿವಂ ಖಂ ಚ ಸರ್ವಮನ್ನೇ ಪ್ರತಿಷ್ಠಿತಮ್||

ಪೂರ್ವಕಲ್ಪಗಳಲ್ಲಿ ಪ್ರಜಾಪತಿಯು ಅನ್ನವನ್ನು ಅಮೃತವೆಂದು ಹೇಳಿದ್ದಾನೆ. ಭೂಲೋಕ, ಸ್ವರ್ಗಲೋಕ, ಮತ್ತು ಆಕಾಶಗಳೂ ಅನ್ನರೂಪವೇ. ಏಕೆಂದರೆ ಅನ್ನವೇ ಎಲ್ಲದರ ಅಧಾರ.

13062032a ಅನ್ನಪ್ರಣಾಶೇ ಭಿದ್ಯಂತೇ ಶರೀರೇ ಪಂಚ ಧಾತವಃ|

13062032c ಬಲಂ ಬಲವತೋಽಪೀಹ ಪ್ರಣಶ್ಯತ್ಯನ್ನಹಾನಿತಃ||

ಅನ್ನವು ದೊರೆಯದಿದ್ದರೆ ಶರೀರದ ಪಂಚ ಧಾತುಗಳೂ ಒಡೆದು ಬೇರೆ ಬೇರೆಯಾಗುತ್ತವೆ. ಅನ್ನವು ಕಡಿಮೆಯಾದರೆ ಬಲವಂತರ ಬಲವೂ ಕ್ಷೀಣಿಸುತ್ತದೆ.

13062033a ಆವಾಹಾಶ್ಚ ವಿವಾಹಾಶ್ಚ ಯಜ್ಞಾಶ್ಚಾನ್ನಮೃತೇ ತಥಾ|

13062033c ನ ವರ್ತಂತೇ ನರಶ್ರೇಷ್ಠ ಬ್ರಹ್ಮ ಚಾತ್ರ ಪ್ರಲೀಯತೇ||

ನಿಮಂತ್ರಣ, ವಿವಾಹ ಮತ್ತು ಯಜ್ಞಗಳೂ ಕೂಡ ಅನ್ನವಿಲ್ಲದೇ ನಿಂತುಹೋಗುತ್ತವೆ. ನರಶ್ರೇಷ್ಠ! ಅನ್ನವಿಲ್ಲದಿದ್ದರೆ ವೇದಜ್ಞಾನವೂ ಕೂಡ ಲಯವಾಗಿ ಹೋಗುತ್ತದೆ.

13062034a ಅನ್ನತಃ ಸರ್ವಮೇತದ್ಧಿ ಯತ್ಕಿಂ ಚಿತ್ ಸ್ಥಾಣು ಜಂಗಮಮ್|

13062034c ತ್ರಿಷು ಲೋಕೇಷು ಧರ್ಮಾರ್ಥಮನ್ನಂ ದೇಯಮತೋ ಬುಧೈಃ||

ಏನೆಲ್ಲ ಸ್ಥಾವರ-ಜಂಗಮಗಳಿವೆಯೋ ಅವೆಲ್ಲವೂ ಅನ್ನದ ಆಧಾರದ ಮೇಲೆಯೇ ನಿಂತಿವೆ. ಆದುದರಿಂದ ಮೂರೂ ಲೋಕಗಳಲ್ಲಿ ತಿಳಿದವರು ಧರ್ಮಕ್ಕಾಗಿ ಅನ್ನವನ್ನು ಕೊಡಬೇಕೆಂದು ತಿಳಿದಿರುತ್ತಾರೆ.

13062035a ಅನ್ನದಸ್ಯ ಮನುಷ್ಯಸ್ಯ ಬಲಮೋಜೋ ಯಶಃ ಸುಖಮ್|

13062035c ಕೀರ್ತಿಶ್ಚ ವರ್ಧತೇ ಶಶ್ವತ್ತ್ರಿಷು ಲೋಕೇಷು ಪಾರ್ಥಿವ||

ಪಾರ್ಥಿವ! ಅನ್ನದಾನ ಮಾಡಿದ ಮನುಷ್ಯನ ಬಲ, ಓಜಸ್ಸು, ಯಶಸ್ಸು, ಸುಖ, ಕೀರ್ತಿಗಳು ಮೂರು ಲೋಕಗಳಲ್ಲಿಯೂ ಸದಾ ವರ್ಧಿಸುತ್ತಲೇ ಇರುತ್ತವೆ.

13062036a ಮೇಘೇಷ್ವಂಭಃ ಸಂನಿಧತ್ತೇ ಪ್ರಾಣಾನಾಂ ಪವನಃ ಶಿವಃ|

13062036c ತಚ್ಚ ಮೇಘಗತಂ ವಾರಿ ಶಕ್ರೋ ವರ್ಷತಿ ಭಾರತ||

ಭಾರತ! ಪ್ರಾಣಗಳ ಸ್ವಾಮೀ ಪವನಸ್ವರೂಪ ಶಿವನು ಮೇಘಗಳ ಮೇಲೆ ನಿಂತಿರುತ್ತಾನೆ ಮತ್ತು ಆ ಮೇಘಗಳಲ್ಲಿರುವ ಜಲವನ್ನು ಶಕ್ರನು ಮಳೆಯಾಗಿ ಸುರಿಸುತ್ತಾನೆ.

13062037a ಆದತ್ತೇ ಚ ರಸಂ ಭೌಮಮಾದಿತ್ಯಃ ಸ್ವಗಭಸ್ತಿಭಿಃ|

13062037c ವಾಯುರಾದಿತ್ಯತಸ್ತಾಂಶ್ಚ ರಸಾನ್ದೇವಃ ಪ್ರಜಾಪತಿಃ||

ಸೂರ್ಯನು ತನ್ನ ಕಿರಣಗಳಿಂದ ಭೂಮಿಯ ರಸಗಳನ್ನು ಹೀರಿಕೊಳ್ಳುತ್ತಾನೆ. ವಾಯುವು ಸೂರ್ಯನಿಂದ ಆ ರಸಗಳನ್ನು ತೆಗೆದುಕೊಂಡು ಪುನಃ ಭೂಮಿಯ ಮೇಲೆ ಮಳೆಸುರಿಸುತ್ತಾನೆ.

13062038a ತದ್ಯದಾ ಮೇಘತೋ ವಾರಿ ಪತಿತಂ ಭವತಿ ಕ್ಷಿತೌ|

13062038c ತದಾ ವಸುಮತೀ ದೇವೀ ಸ್ನಿಗ್ಧಾ ಭವತಿ ಭಾರತ||

ಭಾರತ! ಹೀಗೆ ಭೂಮಿಯ ಮೇಲೆ ಮಳೆಬಿದ್ದಾಗ ಭೂಮಿಯು ಸ್ನಿಗ್ಧಳಾಗುತ್ತಾಳೆ.

13062039a ತತಃ ಸಸ್ಯಾನಿ ರೋಹಂತಿ ಯೇನ ವರ್ತಯತೇ ಜಗತ್|

13062039c ಮಾಂಸಮೇದೋಸ್ಥಿಶುಕ್ರಾಣಾಂ ಪ್ರಾದುರ್ಭಾವಸ್ತತಃ ಪುನಃ||

ಒದ್ದೆಯಾದ ಭೂಮಿಯಿಂದ ಸಸ್ಯಗಳು ಬೆಳೆಯುತ್ತವೆ. ಈ ಸಸ್ಯಗಳಿಂದಲೇ ಜಗತ್ತು ನಡೆಯುತ್ತದೆ. ಅನ್ನದಿಂದಲೇ ದೇಹದಲ್ಲಿ ಮಾಸ, ಮೇದಾ, ಅಸ್ತಿ ಮತ್ತು ವೀರ್ಯದ ಉತ್ಪನ್ನವಾಗುತ್ತದೆ.

13062040a ಸಂಭವಂತಿ ತತಃ ಶುಕ್ರಾತ್ಪ್ರಾಣಿನಃ ಪೃಥಿವೀಪತೇ|

13062040c ಅಗ್ನೀಷೋಮೌ ಹಿ ತಚ್ಚುಕ್ರಂ ಪ್ರಜನಃ ಪುಷ್ಯತಶ್ಚ ಹ||

ಪೃಥಿವೀಪತೇ! ಈ ವೀರ್ಯದಿಂದ ಪ್ರಾಣಿಗಳು ಉತ್ಪನ್ನವಾಗುತ್ತವೆ.  ಹೀಗೆ ಅಗ್ನಿ ಮತು ಸೋಮರು ಆ ವೀರ್ಯವನ್ನು ಸೃಷ್ಟಿಸುತ್ತಾರೆ ಮತ್ತು ಪುಷ್ಟಿಗೊಳಿಸುತ್ತಾರೆ.

13062041a ಏವಮನ್ನಂ ಚ ಸೂರ್ಯಶ್ಚ ಪವನಃ ಶುಕ್ರಮೇವ ಚ|

13062041c ಏಕ ಏವ ಸ್ಮೃತೋ ರಾಶಿರ್ಯತೋ ಭೂತಾನಿ ಜಜ್ಞಿರೇ||

ಹೀಗೆ ಅನ್ನ, ಸೂರ್ಯ, ಪವನ, ಶುಕ್ರಗಳು ಒಂದೇ ರಾಶಿಗೆ ಸೇರಿದವು ಎಂದು ತಿಳಿಯಲಾಗಿದೆ. ಇವುಗಳಿಂದಲೇ ಪ್ರಾಣಿಗಳು ಹುಟ್ಟಿಕೊಂಡವು.

13062042a ಪ್ರಾಣಾನ್ದದಾತಿ ಭೂತಾನಾಂ ತೇಜಶ್ಚ ಭರತರ್ಷಭ|

13062042c ಗೃಹಮಭ್ಯಾಗತಾಯಾಶು ಯೋ ದದ್ಯಾದನ್ನಮರ್ಥಿನೇ||

ಭರತರ್ಷಭ! ಆರ್ಥಿಯಾಗಿ ಮನೆಗೆ ಬಂದವನಿಗೆ ಕೊಡುವ ಅನ್ನವು ಎಲ್ಲ ಪ್ರಾಣಿಗಳಿಗೂ ಪ್ರಾಣ-ತೇಜಸ್ಸುಗಳನ್ನು ನೀಡುತ್ತದೆ.””

13062043 ಭೀಷ್ಮ ಉವಾಚ|

13062043a ನಾರದೇನೈವಮುಕ್ತೋಽಹಮದಾಮನ್ನಂ ಸದಾ ನೃಪ|

13062043c ಅನಸೂಯುಸ್ತ್ವಮಪ್ಯನ್ನಂ ತಸ್ಮಾದ್ದೇಹಿ ಗತಜ್ವರಃ||

ಭೀಷ್ಮನು ಹೇಳಿದನು: “ನೃಪ! ನಾರದನು ಹೀಗೆ ಹೇಳಿದಾಗಿನಿಂದ ನಾನು ನಿತ್ಯವೂ ಅನ್ನವನ್ನು ದಾನಮಾಡುತ್ತಿದ್ದೆ. ಆದುದರಿಂದ ನೀನೂ ಕೂಡ ಅಸೂಯೆ ಮತ್ತು ತಾಪಗಳನ್ನು ತೊರೆದು ಅನ್ನದಾನವನ್ನು ಮಾಡುತ್ತಿರು.

13062044a ದತ್ತ್ವಾನ್ನಂ ವಿಧಿವದ್ರಾಜನ್ವಿಪ್ರೇಭ್ಯಸ್ತ್ವಮಪಿ ಪ್ರಭೋ|

13062044c ಯಥಾವದನುರೂಪೇಭ್ಯಸ್ತತಃ ಸ್ವರ್ಗಮವಾಪ್ಸ್ಯಸಿ||

ಪ್ರಭೋ! ರಾಜನ್! ವಿಧಿವತ್ತಾಗಿ ಸುಯೋಗ್ಯ ಬ್ರಾಹ್ಮಣರಿಗೆ ಅನ್ನದಾನ ಮಾಡಿ ಅದರ ಪುಣ್ಯದಿಂದ ನೀನು ಸ್ವರ್ಗಲೋಕವನ್ನು ಪಡೆದುಕೊಳ್ಳುತ್ತೀಯೆ.

13062045a ಅನ್ನದಾನಾಂ ಹಿ ಯೇ ಲೋಕಾಸ್ತಾಂಸ್ತ್ವಂ ಶೃಣು ನರಾಧಿಪ|

13062045c ಭವನಾನಿ ಪ್ರಕಾಶಂತೇ ದಿವಿ ತೇಷಾಂ ಮಹಾತ್ಮನಾಮ್|

ನರಾಧಿಪ! ಅನ್ನದಾನಮಾಡಿದವರಿಗೆ ಯಾವ ಲೋಕಗಳು ಪ್ರಾಪ್ತವಾಗುತ್ತವೆ ಎನ್ನುವುದನ್ನು ಹೇಳುತ್ತೇನೆ. ಕೇಳು. ದಿವಿಯಲ್ಲಿ ಅಂತಹ ಮಹಾತ್ಮರ ಭವನಗಳು ಪ್ರಕಾಶಿಸುತ್ತಿರುತ್ತವೆ.

13062045e ನಾನಾಸಂಸ್ಥಾನರೂಪಾಣಿ ನಾನಾಸ್ತಂಭಾನ್ವಿತಾನಿ ಚ||

13062046a ಚಂದ್ರಮಂಡಲಶುಭ್ರಾಣಿ ಕಿಂಕಿಣೀಜಾಲವಂತಿ ಚ|

ಆ ಭವನಗಳು ನಾನಾ ರೂಪಗಳಿಂದ ಮತ್ತು ನಾನಾ ಕಂಭಗಳಿಂದ ಸುಶೋಭಿತವಾಗಿರುತ್ತವೆ. ಚಂದ್ರಮಂಡಲದಂತೆ ಶುಭ್ರವಾಗಿರುತ್ತವೆ. ಅವುಗಳಲ್ಲಿ ಕಿಂಕಿಣೀ ಗಂಟೆಗಳ ಮಾಲೆಗಳಿರುತ್ತವೆ.

13062046c ತರುಣಾದಿತ್ಯವರ್ಣಾನಿ ಸ್ಥಾವರಾಣಿ ಚರಾಣಿ ಚ||

13062047a ಅನೇಕಶತಭೌಮಾನಿ ಸಾಂತರ್ಜಲವನಾನಿ ಚ|

ಬೆಳಗಿನ ಸೂರ್ಯನ ಬಣ್ಣದ ಆ ಭವನಗಳಲ್ಲಿ ಕೆಲವು ನಿಂತುಕೊಂಡೇ ಇರುತ್ತವೆ ಮತ್ತೆ ಕೆಲವು ಚಲಿಸುತ್ತಿರುತ್ತವೆ. ನೂರಾರು ಮಹಡಿಗಳಿರುತ್ತವೆ. ನೀರಿನಲ್ಲಿ ವಾಸಿಸುವ ಪ್ರಾಣಿಗಳೊಂದಿಗೆ ಜಲಾಶಯಗಳಿರುತ್ತವೆ.

13062047c ವೈಡೂರ್ಯಾರ್ಕಪ್ರಕಾಶಾನಿ ರೌಪ್ಯರುಕ್ಮಮಯಾನಿ ಚ||

13062048a ಸರ್ವಕಾಮಫಲಾಶ್ಚಾಪಿ ವೃಕ್ಷಾ ಭವನಸಂಸ್ಥಿತಾಃ|

ವೈಡೂರ್ಯಮಣಿ ಮತ್ತು ಸೂರ್ಯನ ಸಮಾನ ಪ್ರಕಾಶಿಸುತ್ತಿರುತ್ತವೆ. ಬೆಳ್ಳಿ ಮತ್ತು ಚಿನ್ನಗಳಿಂದ ಮಾಡಲ್ಪಟ್ಟಿರುತ್ತವೆ. ಆ ಭವನಗಳಲ್ಲಿ ಸರ್ವಕಾಮಫಲಗಳನ್ನೂ ನೀಡುವ ವೃಕ್ಷಗಳಿರುತ್ತವೆ.

13062048c ವಾಪ್ಯೋ ವೀಥ್ಯಃ ಸಭಾಃ ಕೂಪಾ ದೀರ್ಘಿಕಾಶ್ಚೈವ ಸರ್ವಶಃ||

13062049a ಘೋಷವಂತಿ ಚ ಯಾನಾನಿ ಯುಕ್ತಾನ್ಯಥ ಸಹಸ್ರಶಃ|

ಆ ಭವನಗಳಲ್ಲಿ ಅನೇಕ ಚೌಕಗಳೂ, ರಸ್ತೆಗಳೂ, ಸಭೆಗಳೂ, ಬಾವಿಗಳೂ, ಕೆರೆಗಳೂ ಮತ್ತು ಘೋಷಿಸುವ ಅನೇಕ ಸಹಸ್ರ ಯಾನಗಳೂ ಇರುತ್ತವೆ.

13062049c ಭಕ್ಷ್ಯಭೋಜ್ಯಮಯಾಃ ಶೈಲಾ ವಾಸಾಂಸ್ಯಾಭರಣಾನಿ ಚ||

13062050a ಕ್ಷೀರಂ ಸ್ರವಂತ್ಯಃ ಸರಿತಸ್ತಥಾ ಚೈವಾನ್ನಪರ್ವತಾಃ|

ಅಲ್ಲಿ ಭಕ್ಷ್ಯಭೋಜ್ಯಗಳ ಪರ್ವತ, ವಸ್ತ್ರಗಳು ಮತ್ತು ಆಭರಣಗಳಿರುತ್ತವೆ. ಅನ್ನದ ಪರ್ವತದಂತೆ ಅಲ್ಲಿ ಹಾಲು ಹರಿಯುವ ನದಿಯೂ ಇರುತ್ತದೆ.

13062050c ಪ್ರಾಸಾದಾಃ ಪಾಂಡುರಾಭ್ರಾಭಾಃ ಶಯ್ಯಾಶ್ಚ ಕನಕೋಜ್ಜ್ವಲಾಃ|

13062050e ತಾನನ್ನದಾಃ ಪ್ರಪದ್ಯಂತೇ ತಸ್ಮಾದನ್ನಪ್ರದೋ ಭವ||

ಆ ಭವನಗಳಲ್ಲಿ ಬಿಳಿಯ ಮೋಡಗಳಂತಿರುವ ಪ್ರಾಸಾದಗಳೂ, ಸುವರ್ಣದಂತೆ ಹೊಳೆಯುವ ಶಯನಗಳೂ ಇರುತ್ತವೆ. ಇಂಥಹ ಭವನಗಳು ಅನ್ನದಾತನಿಗೆ ದೊರೆಯುತ್ತವೆ. ಆದುದರಿಂದ ನೀನೂ ಕೂಡ ಅನ್ನದಾತನಾಗು.

13062051a ಏತೇ ಲೋಕಾಃ ಪುಣ್ಯಕೃತಾಮನ್ನದಾನಾಂ ಮಹಾತ್ಮನಾಮ್|

13062051c ತಸ್ಮಾದನ್ನಂ ವಿಶೇಷೇಣ ದಾತವ್ಯಂ ಮಾನವೈರ್ಭುವಿ||

ಈ ಪುಣ್ಯಕೃತ ಲೋಕಗಳು ಅನ್ನದಾನವನ್ನು ಮಾಡಿದ ಮಹಾತ್ಮರದ್ದಾಗುತ್ತದೆ. ಆದುದರಿಂದ ಭುವಿಯಲ್ಲಿ ಮಾನವರು ವಿಶೇಷವಾಗಿ ಅನ್ನದಾನವನ್ನು ಮಾಡಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಅನ್ನದಾನಪ್ರಶಂಸಾಯಾಂ ದ್ವಿಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಅನ್ನದಾನಪ್ರಶಂಸಾ ಎನ್ನುವ ಅರವತ್ತೆರಡನೇ ಅಧ್ಯಾಯವು.

Image result for plants against white background

[1] ಸಂಜ್ಞಾಶ್ಚ ಎಂಬ ಪಾಠಾಂತರವಿದೆ.

[2] ಕುಟುಂಬಿನೇ ಸೀದತೇ ಚ ಎಂಬ ಪಾಠಾಂತರವಿದೆ.

Comments are closed.