Anushasana Parva: Chapter 60

ಅನುಶಾಸನ ಪರ್ವ: ದಾನಧರ್ಮ ಪರ್ವ

೬೦

ಕ್ಷತ್ರಿಯಧರ್ಮ

ಸತತವೂ ರೌದ್ರಕರ್ಮಗಳನ್ನು ಮಾಡಬೇಕಾಗಿರುವ ಕ್ಷತ್ರಿಯನಿಗೆ ಕೇವಲ ಯಜ್ಞಕರ್ಮಗಳು ಮತ್ತು ದಾನಗಳು ಅವನನ್ನು ಇಲ್ಲಿ ಪವಿತ್ರಗೊಳಿಸುತ್ತವೆ ಎಂದು ಹೇಳಿ ಭೀಷ್ಮನು ರಾಜನ ಕರ್ತವ್ಯಗಳನ್ನು ತಿಳಿಸುವುದು (೧-೨೫).

13060001 ಯುಧಿಷ್ಠಿರ ಉವಾಚ|

13060001a ದಾನಂ ಯಜ್ಞಕ್ರಿಯಾ ಚೇಹ ಕಿಂ ಸ್ವಿತ್ಪ್ರೇತ್ಯ ಮಹಾಫಲಮ್|

13060001c ಕಸ್ಯ ಜ್ಯಾಯಃ ಫಲಂ ಪ್ರೋಕ್ತಂ ಕೀದೃಶೇಭ್ಯಃ ಕಥಂ ಕದಾ||

13060002a ಏತದಿಚ್ಚಾಮಿ ವಿಜ್ಞಾತುಂ ಯಾಥಾತಥ್ಯೇನ ಭಾರತ|

13060002c ವಿದ್ವನ್ಜಿಜ್ಞಾಸಮಾನಾಯ ದಾನಧರ್ಮಾನ್ಪ್ರಚಕ್ಷ್ವ ಮೇ||

ಯುಧಿಷ್ಠಿರನು ಹೇಳಿದನು: “ಭಾರತ! ವಿದ್ವನ್! ದಾನ ಮತ್ತು ಯಜ್ಞಕ್ರಿಯೆ ಇವುಗಳಲ್ಲಿ ಮರಣಾನಂತರ ಯಾವುದು ಮಹಾಫಲದಾಯಕವಾಗುತ್ತದೆ? ಯಾವುದರ ಫಲವು ಶ್ರೇಷ್ಠವೆಂದು ಹೇಳಲಾಗಿದೆ? ಎಂಥವರಿಗೆ, ಹೇಗೆ ಮತ್ತು ಯಾವಾಗ ದಾನ-ಯಜ್ಞಗಳನ್ನು ಮಾಡಬೇಕು? ಇದರ ಕುರಿತು ಯಥಾತಥ್ಯವಾಗಿ ತಿಳಿಯಬಯಸುತ್ತೇನೆ. ಜಿಜ್ಞಾಸುವಾದ ನನಗೆ ದಾನ-ಧರ್ಮಗಳ ಕುರಿತು ಹೇಳಬೇಕು.

13060003a ಅಂತರ್ವೇದ್ಯಾಂ ಚ ಯದ್ದತ್ತಂ ಶ್ರದ್ಧಯಾ ಚಾನೃಶಂಸ್ಯತಃ|

13060003c ಕಿಂ ಸ್ವಿನ್ನಿಃಶ್ರೇಯಸಂ ತಾತ ತನ್ಮೇ ಬ್ರೂಹಿ ಪಿತಾಮಹ||

ತಾತ! ಪಿತಾಮಹ! ಯಜ್ಞಗಳಲ್ಲಿ ಶ್ರದ್ಧಾಪೂರ್ವಕವಾಗಿ ನೀಡುವ ದಾನ ಮತ್ತು ಯಜ್ಞದ ಹೊರತಾಗಿ ದಯಾದೃಷ್ಠಿಯಿಂದ ನೀಡುವ ದಾನ ಇವುಗಳಲ್ಲಿ ಯಾವುದು ಹೆಚ್ಚಿನ ಶ್ರೇಯಸ್ಕರವಾದುದು ಎನ್ನುವುದನ್ನು ನನಗೆ ಹೇಳು.”

13060004 ಭೀಷ್ಮ ಉವಾಚ|

13060004a ರೌದ್ರಂ ಕರ್ಮ ಕ್ಷತ್ರಿಯಸ್ಯ ಸತತಂ ತಾತ ವರ್ತತೇ|

13060004c ತಸ್ಯ ವೈತಾನಿಕಂ ಕರ್ಮ ದಾನಂ ಚೈವೇಹ ಪಾವನಮ್||

ಭೀಷ್ಮನು ಹೇಳಿದನು: “ಮಗೂ! ಕ್ಷತ್ರಿಯನಿಗೆ ಸತತವೂ ರೌದ್ರ ಕರ್ಮಗಳನ್ನು ಮಾಡಬೇಕಾಗುತ್ತದೆ. ಆದುದರಿಂದ ಯಜ್ಞಕರ್ಮಗಳು ಮತ್ತು ದಾನ ಇವೇ ಅವನನ್ನು ಇಲ್ಲಿ ಪವಿತ್ರಗೊಳಿಸುವವು.

13060005a ನ ತು ಪಾಪಕೃತಾಂ ರಾಜ್ಞಾಂ ಪ್ರತಿಗೃಹ್ಣಂತಿ ಸಾಧವಃ|

13060005c ಏತಸ್ಮಾತ್ಕಾರಣಾದ್ಯಜ್ಞೈರ್ಯಜೇದ್ರಾಜಾಪ್ತದಕ್ಷಿಣೈಃ||

ಪಾಪಕರ್ಮಿ ರಾಜನಿಂದ ಸಾಧುಗಳು ದಾನಗಳನ್ನು ಸ್ವೀಕರಿಸುವುದಿಲ್ಲ. ಈ ಕಾರಣದಿಂದಲೇ ರಾಜನು ಪರ್ಯಾಪ್ತ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಯಾಜಿಸಬೇಕು.

13060006a ಅಥ ಚೇತ್ಪ್ರತಿಗೃಹ್ಣೀಯುರ್ದದ್ಯಾದಹರಹರ್ನೃಪಃ|

13060006c ಶ್ರದ್ಧಾಮಾಸ್ಥಾಯ ಪರಮಾಂ ಪಾವನಂ ಹ್ಯೇತದುತ್ತಮಮ್||

ಶ್ರೇಷ್ಠಪುರುಷರು ಒಂದು ವೇಳೆ ದಾನಗಳನ್ನು ಸ್ವೀಕರಿಸಿದರೆ ಪ್ರತಿನಿತ್ಯ ರಾಜನು ಅವರಿಗೆ ಶ್ರದ್ಧಾಪೂರ್ವಕ ದಾನಗಳನ್ನು ಮಾಡುತ್ತಿರಬೇಕು. ಏಕೆಂದರೆ ಶ್ರದ್ಧೆಯಿಂದ ನೀಡಿದ ದಾನವು ಆತ್ಮಶುದ್ಧಿಯ ಸರ್ವೋತ್ತಮ ಸಾಧನವು.

13060007a ಬ್ರಾಹ್ಮಣಾಂಸ್ತರ್ಪಯೇದ್ದ್ರವ್ಯೈಸ್ತತೋ ಯಜ್ಞೇ ಯತವ್ರತಃ|

13060007c ಮೈತ್ರಾನ್ಸಾಧೂನ್ವೇದವಿದಃ ಶೀಲವೃತ್ತತಪೋನ್ವಿತಾನ್||

ನೀನು ನಿತ್ಯವೂ ಯಜ್ಞಗಳಲ್ಲಿ ಯತವ್ರತ, ಎಲ್ಲರೊಡನೆಯೂ ಮೈತ್ರಭಾವವನ್ನಿಟ್ಟಿರುವ, ಸಾಧು, ವೇದವಿದ, ಶೀಲವೃತ ಮತ್ತು ತಪೋನ್ವಿತ ಬ್ರಾಹ್ಮಣರಿಗೆ ದ್ರವ್ಯಗಳನ್ನಿತ್ತು ತೃಪ್ತಿಪಡಿಸು.

13060008a ಯತ್ತೇ ತೇನ ಕರಿಷ್ಯಂತಿ ಕೃತಂ ತೇನ ಭವಿಷ್ಯತಿ|

13060008c ಯಜ್ಞಾನ್ಸಾಧಯ ಸಾಧುಭ್ಯಃ ಸ್ವಾದ್ವನ್ನಾನ್ದಕ್ಷಿಣಾವತಃ||

ನೀನು ಕೊಟ್ಟ ದಾನಗಳನ್ನು ಅವರು ಸ್ವೀಕರಿಸದೇ ಇದ್ದರೆ ನಿನಗೆ ಪುಣ್ಯವು ಲಭಿಸುವುದಿಲ್ಲ. ಆದುದರಿಂದ ಯಜ್ಞಗಳಲ್ಲಿ ಸಾಧುಜನರಿಗೆ ಸ್ವಾದಿಷ್ಟ ಭೋಜನ ಮತ್ತು ಹೇರಳ ದಕ್ಷಿಣೆಗಳನ್ನಿತ್ತು ತೃಪ್ತಿಪಡಿಸು.

13060009a ಇಷ್ಟಂ ದತ್ತಂ ಚ ಮನ್ಯೇಥಾ ಆತ್ಮಾನಂ ದಾನಕರ್ಮಣಾ|

13060009c ಪೂಜಯೇಥಾ ಯಾಯಜೂಕಾಂಸ್ತವಾಪ್ಯಂಶೋ ಭವೇದ್ಯಥಾ||

ದಾನಕರ್ಮಗಳಿಂದಲೇ ನೀನು ಯಜ್ಞದ ಪುಣ್ಯದ ಭಾಗಿಯಾಗಬಲ್ಲೆ. ಯಜ್ಞಮಾಡುವವರನ್ನು ಪೂಜಿಸಬೇಕು. ಆಗಲೇ ನಿನಗೆ ಯಜ್ಞಫಲದ ಅಂಶವು ದೊರೆಯುತ್ತದೆ.

[1]13060010a ಪ್ರಜಾವತೋ ಭರೇಥಾಶ್ಚ ಬ್ರಾಹ್ಮಣಾನ್ಬಹುಭಾರಿಣಃ|

13060010c ಪ್ರಜಾವಾಂಸ್ತೇನ ಭವತಿ ಯಥಾ ಜನಯಿತಾ ತಥಾ||

ಅನೇಕರಿಗೆ ಉಪಕಾರವನ್ನು ಮಾಡುವ ಮತ್ತು ಸಂತಾನವಿರುವ ಬ್ರಾಹ್ಮಣರ ಪಾಲನೆ-ಪೋಷಣೆಗಳನ್ನು ಮಾಡುವವು ಈ ಶುಭಕರ್ಮದ ಪ್ರಭಾವದಿಂದ ಪ್ರಜಾಪತಿಯ ಸಮಾನ ಸಂತಾನವಂತನಾಗುತ್ತಾನೆ.

13060011a ಯಾವತೋ ವೈ ಸಾಧುಧರ್ಮಾನ್ಸಂತಃ ಸಂವರ್ತಯಂತ್ಯುತ|

13060011c ಸರ್ವೇ ತೇ ಚಾಪಿ ಭರ್ತವ್ಯಾ ನರಾ ಯೇ ಬಹುಭಾರಿಣಃ||

ಸಾಧುಧರ್ಮಗಳನ್ನು ಪ್ರಚಾರಮಾಡುವ ಮತ್ತು ವಿಸ್ತರಿಸುವ ಸಾಧು ಪುರುಷರನ್ನು ಸರ್ವಸ್ವವನ್ನೂ ಕೊಟ್ಟಾದರೂ ಭರಣ-ಪೋಷಣ ಮಾಡಬೇಕು. ಏಕೆಂದರೆ ಅಂಥವರು ರಾಜನಿಗೆ ಅತ್ಯಂತ ಉಪಕಾರಿಗಳಾಗುತ್ತಾರೆ.

13060012a ಸಮೃದ್ಧಃ ಸಂಪ್ರಯಚ್ಚಸ್ವ ಬ್ರಾಹ್ಮಣೇಭ್ಯೋ ಯುಧಿಷ್ಠಿರ|

13060012c ಧೇನೂರನಡುಹೋಽನ್ನಾನಿ ಚ್ಚತ್ರಂ ವಾಸಾಂಸ್ಯುಪಾನಹೌ||

ಯುಧಿಷ್ಠಿರ! ಸಮೃದ್ಧಶಾಲಿಯಾಗಿರುವ ನೀನು ಬ್ರಾಹ್ಮಣರಿಗೆ ಗೋವು, ಎತ್ತು, ಅನ್ನ, ಚತ್ರಿ, ಪಾದರಕ್ಷೆ ಮತ್ತು ವಸ್ತ್ರಗಳನ್ನು ದಾನಮಾಡುತ್ತಿರು.

13060013a ಆಜ್ಯಾನಿ ಯಜಮಾನೇಭ್ಯಸ್ತಥಾನ್ನಾದ್ಯಾನಿ ಭಾರತ|

13060013c ಅಶ್ವವಂತಿ ಚ ಯಾನಾನಿ ವೇಶ್ಮಾನಿ ಶಯನಾನಿ ಚ||

13060014a ಏತೇ ದೇಯಾ ವ್ಯುಷ್ಟಿಮಂತೋ ಲಘೂಪಾಯಾಶ್ಚ ಭಾರತ|

ಭಾರತ! ಯಜ್ಞಮಾಡುವ ಬ್ರಾಹ್ಮಣರಿಗೆ ತುಪ್ಪ, ಅನ್ನ, ಕುದುರೆಗಳನ್ನು ಕಟ್ಟಿರುವ ರಥ ಮೊದಲಾದ ವಾಹನಗಳು, ಮನೆ ಮತ್ತು ಹಾಸಿಗೆ ಮೊದಲಾದ ವಸ್ತುಗಳನ್ನು ದಾನಮಾಡಬೇಕು. ಭಾರತ! ರಾಜರಿಗೆ ಈ ದಾನಗಳು ಸರಳ ಮತ್ತು ಸಮೃದ್ಧಿಯನ್ನು ಹೆಚ್ಚಿಸುವವು.

13060014c ಅಜುಗುಪ್ಸಾಂಶ್ಚ ವಿಜ್ಞಾಯ ಬ್ರಾಹ್ಮಣಾನ್ವೃತ್ತಿಕರ್ಶಿತಾನ್||

13060015a ಉಪಚ್ಚನ್ನಂ ಪ್ರಕಾಶಂ ವಾ ವೃತ್ತ್ಯಾ ತಾನ್ಪ್ರತಿಪಾದಯ|

ಜೀವನನಡೆಸಲು ಕಷ್ಟದಲ್ಲಿರುವ ಬ್ರಾಹ್ಮಣರ ಕುರಿತು ಗುಪ್ತಚರರಿಂದ ತಿಳಿದುಕೊಂಡು ಅವರಿಗೆ ಬಹಿರಂಗವಾಗಿ ಅಥವಾ ಗುಪ್ತವಾಗಿ ಜೀವನ ವೃತ್ತಿಯನ್ನು ಒದಗಿಸಿಕೊಡುತ್ತಿರು.

13060015c ರಾಜಸೂಯಾಶ್ವಮೇಧಾಭ್ಯಾಂ ಶ್ರೇಯಸ್ತತ್ಕ್ಷತ್ರಿಯಾನ್ಪ್ರತಿ||

13060016a ಏವಂ ಪಾಪೈರ್ವಿಮುಕ್ತಸ್ತ್ವಂ ಪೂತಃ ಸ್ವರ್ಗಮವಾಪ್ಸ್ಯಸಿ|

ಇದು ಕ್ಷತ್ರಿಯನಿಗೆ ರಾಜಸೂಯ-ಅಶ್ವಮೇಧಗಳಿಗಿಂತಲೂ ಶ್ರೇಯಸ್ಕರವಾದವುಗಳು. ಹೀಗೆ ನೀನು ಪಾಪಗಳಿಂದ ಮುಕ್ತನಾಗಿ ಪವಿತ್ರನಾಗಿ ಸ್ವರ್ಗವನ್ನು ಪಡೆಯುತ್ತೀಯೆ.

13060016c ಸ್ರಂಸಯಿತ್ವಾ ಪುನಃ ಕೋಶಂ ಯದ್ರಾಷ್ಟ್ರಂ ಪಾಲಯಿಷ್ಯಸಿ||

13060017a ತತಶ್ಚ ಬ್ರಹ್ಮಭೂಯಸ್ತ್ವಮವಾಪ್ಸ್ಯಸಿ ಧನಾನಿ ಚ|

ಪುನಃ ಕೋಶವನ್ನು ಸಂಗ್ರಹಿಸಿ ಅದರಿಂದ ರಾಷ್ಟ್ರವನ್ನು ಪರಿಪಾಲಿಸಿದರೆ ಮರಣಾನಂತರ ಧನ ಮತ್ತು ಬ್ರಾಹ್ಮಣತ್ವವು ಪ್ರಾಪ್ತವಾಗುತ್ತದೆ.

13060017c ಆತ್ಮನಶ್ಚ ಪರೇಷಾಂ ಚ ವೃತ್ತಿಂ ಸಂರಕ್ಷ ಭಾರತ||

13060018a ಪುತ್ರವಚ್ಚಾಪಿ ಭೃತ್ಯಾನ್ಸ್ವಾನ್ಪ್ರಜಾಶ್ಚ ಪರಿಪಾಲಯ|

ಭಾರತ! ನೀನು ನಿನ್ನ ಮತ್ತು ಇತರರ ವೃತ್ತಿಯನ್ನು ಸಂರಕ್ಷಿಸು. ಸೇವಕರನ್ನೂ ಪ್ರಜೆಗಳನ್ನೂ ನಿನ್ನ ಪುತ್ರರಂತೆಯೇ ಪರಿಪಾಲಿಸು.

13060018c ಯೋಗಕ್ಷೇಮಶ್ಚ ತೇ ನಿತ್ಯಂ ಬ್ರಾಹ್ಮಣೇಷ್ವಸ್ತು ಭಾರತ||

[2]13060019a ಅರಕ್ಷಿತಾರಂ ಹರ್ತಾರಂ ವಿಲೋಪ್ತಾರಮದಾಯಕಮ್|

13060019c ತಂ ಸ್ಮ ರಾಜಕಲಿಂ ಹನ್ಯುಃ ಪ್ರಜಾಃ ಸಂಭೂಯ ನಿರ್ಘೃಣಮ್||

ಭಾರತ! ಬ್ರಾಹ್ಮಣರಲ್ಲಿ ಏನಿಲ್ಲವೋ ಅವುಗಳನ್ನು ಕೊಡುವುದು ಮತ್ತು ಅವರಲ್ಲಿ ಏನಿದೆಯೋ ಅವುಗಳ ರಕ್ಷಣೆಯನ್ನು ಮಾಡುವುದು ನಿನ್ನ ನಿತ್ಯ ಕರ್ತವ್ಯವು. ರಕ್ಷಣೆ ಮಾಡದಿರುವ, ಪ್ರಜೆಗಳನ್ನು ಶೋಷಿಸುವ, ನಾಯಕನಲ್ಲದ, ಮತ್ತು ಕೊಡದಿರುವ ರಾಜನು ರಾಜನಲ್ಲ. ಅವನು ಕಲಿಯು. ಅಂಥಹ ನಿರ್ದಯಿ ರಾಜನ ವಧೆಯನ್ನು ಸರ್ವ ಪ್ರಜೆಗಳೂ ಬಯಸುತ್ತಾರೆ.

13060020a ಅಹಂ ವೋ ರಕ್ಷಿತೇತ್ಯುಕ್ತ್ವಾ ಯೋ ನ ರಕ್ಷತಿ ಭೂಮಿಪಃ|

13060020c ಸ ಸಂಹತ್ಯ ನಿಹಂತವ್ಯಃ ಶ್ವೇವ ಸೋನ್ಮಾದ ಆತುರಃ||

“ನಾನು ನಿಮ್ಮನ್ನು ರಕ್ಷಿಸುತ್ತೇನೆ” ಎಂದು ಹೇಳಿ ಯಾವ ರಾಜನು ರಕ್ಷಿಸುವುದಿಲ್ಲವೋ ಅವನು ಹುಚ್ಚು ಮತ್ತು ರೋಗಿ ನಾಯಿಯಂತೆ ವಧೆಗೆ ಅರ್ಹನಾಗುತ್ತಾನೆ.

13060021a ಪಾಪಂ ಕುರ್ವಂತಿ ಯತ್ಕಿಂ ಚಿತ್ಪ್ರಜಾ ರಾಜ್ಞಾ ಹ್ಯರಕ್ಷಿತಾಃ|

13060021c ಚತುರ್ಥಂ ತಸ್ಯ ಪಾಪಸ್ಯ ರಾಜಾ ಭಾರತ ವಿಂದತಿ||

ಭಾರತ! ರಾಜನಿಂದ ರಕ್ಷಿತರಾದ ಪ್ರಜೆಗಳು ಪಾಪಕರ್ಮಗಳನ್ನು ಮಾಡಿದರೆ ಆ ಪಾಪದ ನಾಲ್ಕನೆಯ ಒಂದು ಭಾಗವು ರಾಜನಿಗೆ ದೊರೆಯುತ್ತದೆ.

13060022a ಅಪ್ಯಾಹುಃ ಸರ್ವಮೇವೇತಿ ಭೂಯೋಽರ್ಧಮಿತಿ ನಿಶ್ಚಯಃ|

13060022c ಚತುರ್ಥಂ ಮತಮಸ್ಮಾಕಂ ಮನೋಃ ಶ್ರುತ್ವಾನುಶಾಸನಮ್||

ಆ ಪಾಪಗಳೆಲ್ಲವೂ ರಾಜನಿಗೆ ತಗಲುತ್ತವೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಅದರ ಅರ್ಧಭಾಗವೇ ರಾಜನಿಗೆ ತಗಲುತ್ತದೆ ಎಂದು ನಿಶ್ಚಯಿಸಿದ್ದಾರೆ. ಆದರೆ ಮನುವಿನ ಅನುಶಾಸನವನ್ನು ಕೇಳಿ ನನಗನ್ನಿಸುತ್ತದೆ – ಪಾಪಗಳ ನಾಲ್ಕನೇ ಒಂದು ಭಾಗ ಮಾತ್ರ ರಾಜನಿಗೆ ತಗಲುತ್ತದೆ.

13060023a ಶುಭಂ ವಾ ಯತ್ಪ್ರಕುರ್ವಂತಿ ಪ್ರಜಾ ರಾಜ್ಞಾ ಸುರಕ್ಷಿತಾಃ|

13060023c ಚತುರ್ಥಂ ತಸ್ಯ ಪುಣ್ಯಸ್ಯ ರಾಜಾ ಚಾಪ್ನೋತಿ ಭಾರತ||

ಭಾರತ! ರಾಜನಿಂದ ಸುರಕ್ಷಿತವಾಗಿರುವ ಪ್ರಜೆಗಳು ಯಾವುದೇ ಶುಭ ಕಾರ್ಯಗಳನ್ನು ಮಾಡಿದರೂ ಅದರ ಪುಣ್ಯದ ನಾಲ್ಕನೆಯ ಒಂದು ಭಾಗವು ರಾಜನಿಗೆ ದೊರೆಯುತ್ತದೆ.

13060024a ಜೀವಂತಂ ತ್ವಾನುಜೀವಂತು ಪ್ರಜಾಃ ಸರ್ವಾ ಯುಧಿಷ್ಠಿರ|

13060024c ಪರ್ಜನ್ಯಮಿವ ಭೂತಾನಿ ಮಹಾದ್ರುಮಮಿವ ದ್ವಿಜಾಃ||

13060025a ಕುಬೇರಮಿವ ರಕ್ಷಾಂಸಿ ಶತಕ್ರತುಮಿವಾಮರಾಃ|

13060025c ಜ್ಞಾತಯಸ್ತ್ವಾನುಜೀವಂತು ಸುಹೃದಶ್ಚ ಪರಂತಪ||

ಯುಧಿಷ್ಠಿರ! ಪರಂತಪ! ಪ್ರಾಣಿಗಳು ಮಳೆಯನ್ನು ಹೇಗೋ, ಪಕ್ಷಿಗಳು ಮಹಾವೃಕ್ಷವನ್ನು ಹೇಗೋ, ರಾಕ್ಷಸರು ಕುಬೇರನನ್ನು ಹೇಗೋ, ಮತ್ತು ಅಮರರು ಶತಕ್ರತುವನ್ನು ಹೇಗೋ ಹಾಗೆ ನೀನು ಜೀವಿತವಾಗಿರುವಾಗ ಸರ್ವ ಪ್ರಜೆಗಳೂ ತಮ್ಮ ಜೀವನವನ್ನು ನಡೆಸುತ್ತಿರಲಿ ಮತ್ತು ನಿನ್ನ ಸುಹೃದರು ಬಂಧುಗಳು ನಿನ್ನನ್ನೇ ಅವಲಂಬಿಸಿ ಜೀವನ ನಡೆಸುತ್ತಿರಲಿ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಅರವತ್ತನೇ ಅಧ್ಯಾಯವು.

Image result for trees against white background

[1] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ವಿದ್ವದ್ಭ್ಯಃ ಸಂಪ್ರದಾನೇನ ತತ್ರಾಪ್ಯಂಶ್ಯೋಽಸ್ಯ ಪೂಜಯಾ| ಯಜ್ವಭ್ಯಶ್ಚಾಥ ವಿದ್ವದ್ಬ್ಯೋ ದತ್ವಾ ಲೋಕಂ ಪ್ರದಾಯತೇ| ಪ್ರದದ್ಯಾನ್ ಜ್ಞಾನಧಾತೄಣಾಂ ಜ್ಞಾನದಾನಾಂಶಭಾಗ್ ಭವೇತ್|| ಅರ್ಥಾತ್: ವಿದ್ವಾಂಸರನ್ನು ಪೂಜಿಸಿ ದಾನನೀಡುವುದರಿಂದ ಪೂಜಕ-ದಾನಿಗೆ ಯಜ್ಞದ ಫಲಾಂಶವು ದೊರೆಯುತ್ತದೆ. ಯಜ್ಞಮಾಡಿಸುವ ವಿದ್ವಾಂಸರಿಗೆ ನೀಡುವ ದಾನವು ಪುಣ್ಯ ಲೋಕಗಳನ್ನು ದೊರಕಿಸುತ್ತದೆ. ಜ್ಞಾನದಾತನಿಗೆ ದಾನಮಾಡುವುದರಿಂದ ಆ ಜ್ಞಾನದಾನದ ಅಂಶವು ದೊರೆಯುತ್ತದೆ.

[2] ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲು ೧೨ ಅಧಿಕ ಶ್ಲೋಕಗಳಿವೆ.

Comments are closed.