ಅನುಶಾಸನ ಪರ್ವ: ದಾನಧರ್ಮ ಪರ್ವ
೫೫
ಕುಶಿಕನ ಪ್ರಶ್ನೆಗೆ ಉತ್ತರವಾಗಿ ಚ್ಯವನನು ಕುಶಿಕನ ಅರಮನೆಗೆ ಬಂದ ಕಾರಣವನ್ನು ಹೇಳಿದುದು (೧-೨೭). ಕುಶಿಕನಿಗೆ ವರಗಳನ್ನು ಕೊಟ್ಟಿದುದು (೨೮-೩೫).
13055001 ಚ್ಯವನ ಉವಾಚ|
13055001a ವರಶ್ಚ ಗೃಹ್ಯತಾಂ ಮತ್ತೋ ಯಶ್ಚ ತೇ ಸಂಶಯೋ ಹೃದಿ|
13055001c ತಂ ಚ ಬ್ರೂಹಿ ನರಶ್ರೇಷ್ಠ ಸರ್ವಂ ಸಂಪಾದಯಾಮಿ ತೇ||
ಚ್ಯವನನು ಹೇಳಿದನು: “ನನ್ನಿಂದ ವರವನ್ನು ಪಡೆದುಕೋ. ನರಶ್ರೇಷ್ಠ! ನಿನ್ನ ಹೃದಯದಲ್ಲಿರುವ ಸಂಶಯವನ್ನು ಹೇಳು. ಎಲ್ಲವನ್ನೂ ಹೋಗಲಾಡಿಸುತ್ತೇನೆ.”
13055002 ಕುಶಿಕ ಉವಾಚ|
13055002a ಯದಿ ಪ್ರೀತೋಽಸಿ ಭಗವಂಸ್ತತೋ ಮೇ ವದ ಭಾರ್ಗವ|
13055002c ಕಾರಣಂ ಶ್ರೋತುಮಿಚ್ಚಾಮಿ ಮದ್ಗೃಹೇ ವಾಸಕಾರಿತಮ್||
ಕುಶಿಕನು ಹೇಳಿದನು: “ಭಗವನ್! ಭಾರ್ಗವ! ನೀನು ಪ್ರೀತನಾಗಿದ್ದರೆ ನನಗೆ ಹೇಳು. ನನ್ನ ಮನೆಯಲ್ಲಿ ನೀನು ವಾಸಮಾಡಿದುದರ ಕಾರಣವನ್ನು ಕೇಳ ಬಯಸುತ್ತೇನೆ.
13055003a ಶಯನಂ ಚೈಕಪಾರ್ಶ್ವೇನ ದಿವಸಾನೇಕವಿಂಶತಿಮ್|
13055003c ಅಕಿಂಚಿದುಕ್ತ್ವಾ ಗಮನಂ ಬಹಿಶ್ಚ ಮುನಿಪುಂಗವ||
13055004a ಅಂತರ್ಧಾನಮಕಸ್ಮಾಚ್ಚ ಪುನರೇವ ಚ ದರ್ಶನಮ್|
13055004c ಪುನಶ್ಚ ಶಯನಂ ವಿಪ್ರ ದಿವಸಾನೇಕವಿಂಶತಿಮ್||
13055005a ತೈಲಾಭ್ಯಕ್ತಸ್ಯ ಗಮನಂ ಭೋಜನಂ ಚ ಗೃಹೇ ಮಮ|
13055005c ಸಮುಪಾನೀಯ ವಿವಿಧಂ ಯದ್ದಗ್ಧಂ ಜಾತವೇದಸಾ|
13055005e ನಿರ್ಯಾಣಂ ಚ ರಥೇನಾಶು ಸಹಸಾ ಯತ್ಕೃತಂ ತ್ವಯಾ||
13055006a ಧನಾನಾಂ ಚ ವಿಸರ್ಗಸ್ಯ ವನಸ್ಯಾಪಿ ಚ ದರ್ಶನಮ್|
13055006c ಪ್ರಾಸಾದಾನಾಂ ಬಹೂನಾಂ ಚ ಕಾಂಚನಾನಾಂ ಮಹಾಮುನೇ||
13055007a ಮಣಿವಿದ್ರುಮಪಾದಾನಾಂ ಪರ್ಯಂಕಾನಾಂ ಚ ದರ್ಶನಮ್|
13055007c ಪುನಶ್ಚಾದರ್ಶನಂ ತಸ್ಯ ಶ್ರೋತುಮಿಚ್ಚಾಮಿ ಕಾರಣಮ್||
ಮುನಿಪುಂಗವ! ವಿಪ್ರ! ಮಹಾಮುನೇ! ಇಪ್ಪತ್ತೊಂದು ದಿವಸಗಳ ಪರ್ಯಂತ ಒಂದೇ ಮಗ್ಗುಲಿನಲ್ಲಿ ಮಲಗಿಕೊಂಡಿದುದು, ಏನನ್ನೂ ಹೇಳದೇ ಹೊರಕ್ಕೆ ಹೊರಟುಹೋದುದು, ಅಕಸ್ಮಾತ್ತಾಗಿ ಅಂತರ್ಧಾನನಾದುದು ಮತ್ತು ಪುನಃ ಕಾಣಿಸಿಕೊಂಡಿದುದು, ಪುನಃ ಇಪ್ಪತ್ತೊಂದು ದಿವಸಗಳು ಮಲಗಿಕೊಂಡಿದ್ದುದು, ತೈಲಾಭ್ಯಂಜನಕ್ಕೆ ಹೋದುದು ಮತ್ತು ನನ್ನ ಮನೆಯಲ್ಲಿ ಭೋಜನ ಮಾಡಿದುದು, ಜಾತವೇದಸನಿಂದ ವಸ್ತುಗಳೆಲ್ಲವೂ ದಗ್ಧವಾಗಿಹೋದುದು, ನಂತರ ಒಮ್ಮೆಲೇ ನೀನು ರಥದಲ್ಲಿ ಹೊರಟಿದುದು, ನೀನು ಮಾಡಿದ ಧನಗಳ ವಿತರಣೆ, ವನದ ದರ್ಶನ, ಕಾಂಚನದ ಅನೇಕ ಭವನಗಳು, ಮತ್ತು ಮಣಿವಿದ್ರುಮ ವೃಕ್ಷ-ಪರ್ಯಂಕಗಳ ದರ್ಶನ ಹಾಗೂ ಪುನಃ ಅವುಗಳು ಕಾಣದಂತಾದುದು, ಇವೆಲ್ಲವುಗಳ ಕಾರಣವನ್ನು ಕೇಳಬಯಸುತ್ತೇನೆ.
13055008a ಅತೀವ ಹ್ಯತ್ರ ಮುಹ್ಯಾಮಿ ಚಿಂತಯಾನೋ ದಿವಾನಿಶಮ್|
13055008c ನ ಚೈವಾತ್ರಾಧಿಗಚ್ಚಾಮಿ ಸರ್ವಸ್ಯಾಸ್ಯ ವಿನಿಶ್ಚಯಮ್|
13055008e ಏತದಿಚ್ಚಾಮಿ ಕಾರ್ತ್ಸ್ನ್ಯೇನ ಸತ್ಯಂ ಶ್ರೋತುಂ ತಪೋಧನ||
ತಪೋಧನ! ಹಗಲು-ರಾತ್ರಿ ಇದರ ಕುರಿತು ಚಿಂತಿಸುತ್ತಾ ಮೋಹಿತನಾಗಿದ್ದೇನೆ. ಆದರೂ ಇವೆಲ್ಲವುಗಳ ಕುರಿತು ನಿಶ್ಚಯಿಸಲಾಗದವನಾಗಿದ್ದೇನೆ. ಸಂಪೂರ್ಣ ಸತ್ಯವನ್ನು ಕೇಳಬಯಸುತ್ತೇನೆ.”
13055009 ಚ್ಯವನ ಉವಾಚ|
13055009a ಶೃಣು ಸರ್ವಮಶೇಷೇಣ ಯದಿದಂ ಯೇನ ಹೇತುನಾ|
13055009c ನ ಹಿ ಶಕ್ಯಮನಾಖ್ಯಾತುಮೇವಂ ಪೃಷ್ಟೇನ ಪಾರ್ಥಿವ||
ಚ್ಯವನನು ಹೇಳಿದನು: “ಪಾರ್ಥಿವ! ಇವುಗಳ ಕಾರಣಗಳನ್ನು ಇದ್ದಹಾಗೆ ಸಂಪೂರ್ಣವಾಗಿ ಕೇಳು. ನೀನು ಕೇಳಿದುದಕ್ಕೆ ಹೇಳದೇ ಇರಲು ಶಕ್ಯವಿಲ್ಲ.
13055010a ಪಿತಾಮಹಸ್ಯ ವದತಃ ಪುರಾ ದೇವಸಮಾಗಮೇ|
13055010c ಶ್ರುತವಾನಸ್ಮಿ ಯದ್ರಾಜಂಸ್ತನ್ಮೇ ನಿಗದತಃ ಶೃಣು||
ರಾಜನ್! ಹಿಂದೆ ದೇವಸಮಾಗಮದಲ್ಲಿ ಪಿತಾಮಹನು ಹೇಳಿದ್ದುದನ್ನು ನಾನು ಕೇಳಿದ್ದೆ. ಅದನ್ನೇ ನಿನಗೆ ಹೇಳುತ್ತೇನೆ. ಕೇಳು.
13055011a ಬ್ರಹ್ಮಕ್ಷತ್ರವಿರೋಧೇನ ಭವಿತಾ ಕುಲಸಂಕರಃ|
13055011c ಪೌತ್ರಸ್ತೇ ಭವಿತಾ ರಾಜಂಸ್ತೇಜೋವೀರ್ಯಸಮನ್ವಿತಃ||
ಬ್ರಹ್ಮಕ್ಷತ್ರವಿರೋಧದಿಂದ ಕುಲಸಂಕರವಾಗಲಿಕ್ಕಿದೆ. ರಾಜನ್! ನಿನ್ನ ಮೊಮ್ಮಗನು ತೇಜೋವೀರ್ಯಸಮನ್ವಿತನಾಗುತ್ತಾನೆ.
13055012a ತತಃ ಸ್ವಕುಲರಕ್ಷಾರ್ಥಮಹಂ ತ್ವಾ ಸಮುಪಾಗಮಮ್|
13055012c ಚಿಕೀರ್ಷನ್ಕುಶಿಕೋಚ್ಚೇದಂ ಸಂದಿಧಕ್ಷುಃ ಕುಲಂ ತವ||
ಆಗ ನನ್ನ ಕುಲದ ರಕ್ಷಣಾರ್ಥವಾಗಿ ನಾನು ನಿನ್ನ ಬಳಿಬಂದೆನು. ಕುಶಿಕ! ನಿನ್ನ ಕುಲವನ್ನು ಭಸ್ಮಮಾಡಲು ಬಯಸಿದ್ದೆನು.
13055013a ತತೋಽಹಮಾಗಮ್ಯ ಪುರಾ ತ್ವಾಮವೋಚಂ ಮಹೀಪತೇ|
13055013c ನಿಯಮಂ ಕಂ ಚಿದಾರಪ್ಸ್ಯೇ ಶುಶ್ರೂಷಾ ಕ್ರಿಯತಾಮಿತಿ||
ಮಹೀಪತೇ! ಆಗ ನೀನು ಹೇಳಿದಂತೆ ಹಿಂದೆ ನಿನ್ನ ಪುರಕ್ಕೆ ಆಗಮಿಸಿ ಯಾವುದೇ ನಿಯಮವನ್ನು ಪ್ರಾರಂಭಿಸುತ್ತಿದ್ದೇನೆ, ಶುಶ್ರೂಷೆಮಾಡು ಎಂದು ಕೇಳಿದೆನು.
13055014a ನ ಚ ತೇ ದುಷ್ಕೃತಂ ಕಿಂ ಚಿದಹಮಾಸಾದಯಂ ಗೃಹೇ|
13055014c ತೇನ ಜೀವಸಿ ರಾಜರ್ಷೇ ನ ಭವೇಥಾಸ್ತತೋಽನ್ಯಥಾ||
ರಾಜರ್ಷೇ! ನಾನು ನಿನ್ನ ಗೃಹದಲ್ಲಿ ವಾಸಮಾಡುತ್ತಿರುವಾಗ ನೀನು ಯಾವುದೇ ದುಷ್ಕೃತವನ್ನೂ ಮಾಡಲಿಲ್ಲ. ಅದರಿಂದಲೇ ನೀನು ಜೀವಿಸಿರುವೆ. ಅನ್ಯಥಾ ನೀನು ಜೀವಿಸುತ್ತಿರಲಿಲ್ಲ.
13055015a ಏತಾಂ ಬುದ್ಧಿಂ ಸಮಾಸ್ಥಾಯ ದಿವಸಾನೇಕವಿಂಶತಿಮ್|
13055015c ಸುಪ್ತೋಽಸ್ಮಿ ಯದಿ ಮಾಂ ಕಶ್ಚಿದ್ಬೋಧಯೇದಿತಿ ಪಾರ್ಥಿವ||
ಪಾರ್ಥಿವ! ಯಾರಾದರೂ ನನ್ನನ್ನು ಎಬ್ಬಿಸುತ್ತಾರೆ ಎಂದು ಯೋಚಿಸಿ ನಾನು ಇಪ್ಪತ್ತೊಂದು ದಿನಗಳು ಮಲಗಿಕೊಂಡೇ ಇದ್ದೆ.
13055016a ಯದಾ ತ್ವಯಾ ಸಭಾರ್ಯೇಣ ಸಂಸುಪ್ತೋ ನ ಪ್ರಬೋಧಿತಃ|
13055016c ಅಹಂ ತದೈವ ತೇ ಪ್ರೀತೋ ಮನಸಾ ರಾಜಸತ್ತಮ||
ರಾಜಸತ್ತಮ! ಮಲಗಿರುವ ನನ್ನನ್ನು ಭಾರ್ಯೆಯೊಡನೆ ನೀನು ಎಬ್ಬಿಸಲಿಲ್ಲ. ಆಗಲೇ ನಾನು ನಿನ್ನಮೇಲೆ ಪ್ರೀತನಾದೆನು.
13055017a ಉತ್ಥಾಯ ಚಾಸ್ಮಿ ನಿಷ್ಕ್ರಾಂತೋ ಯದಿ ಮಾಂ ತ್ವಂ ಮಹೀಪತೇ|
13055017c ಪೃಚ್ಚೇಃ ಕ್ವ ಯಾಸ್ಯಸೀತ್ಯೇವಂ ಶಪೇಯಂ ತ್ವಾಮಿತಿ ಪ್ರಭೋ||
ಮಹೀಪತೇ! ಪ್ರಭೋ! ಎಲ್ಲಿಗೆ ಹೋಗುತ್ತಿದ್ದೀಯೆ ಎಂದು ನೀನು ಕೇಳುತ್ತೀಯೆ ಮತ್ತು ಆಗ ನಾನು ನಿನ್ನನ್ನು ಶಪಿಸಬಹುದು ಎಂದು ನಾನು ಎದ್ದು ಹೊರ ಹೊರಟೆ.
13055018a ಅಂತರ್ಹಿತಶ್ಚಾಸ್ಮಿ ಪುನಃ ಪುನರೇವ ಚ ತೇ ಗೃಹೇ|
13055018c ಯೋಗಮಾಸ್ಥಾಯ ಸಂವಿಷ್ಟೋ ದಿವಸಾನೇಕವಿಂಶತಿಮ್||
ಪುನಃ ಅಂತರ್ಹಿತನಾದೆ ಮತ್ತು ಪುನಃ ನಿನ್ನ ಗೃಹದಲ್ಲಿ ಯೋಗವನ್ನಾಶ್ರಯಿಸಿ ಇಪ್ಪತ್ತೊಂದು ದಿವಸಗಳು ನಿದ್ರಿಸಿದೆ..
13055019a ಕ್ಷುಧಿತೋ ಮಾಮಸೂಯೇಥಾಃ ಶ್ರಮಾದ್ವೇತಿ ನರಾಧಿಪ|
13055019c ಏತಾಂ ಬುದ್ಧಿಂ ಸಮಾಸ್ಥಾಯ ಕರ್ಶಿತೌ ವಾಂ ಮಯಾ ಕ್ಷುಧಾ||
ನರಾಧಿಪ! ನೀವಿಬ್ಬರೂ ಬೇಸತ್ತು ನನ್ನನ್ನು ನಿಂದಿಸುವಿರೆಂದು ಯೋಚಿಸಿ ನಿಮ್ಮನ್ನು ಹಸಿವು-ಬಾಯಾರಿಕೆಗಳಿಂದ ಮತ್ತು ಶ್ರಮದಿಂದ ಬಳಲಿಸಿದೆನು.
13055020a ನ ಚ ತೇಽಭೂತ್ಸುಸೂಕ್ಷ್ಮೋಽಪಿ ಮನ್ಯುರ್ಮನಸಿ ಪಾರ್ಥಿವ|
13055020c ಸಭಾರ್ಯಸ್ಯ ನರಶ್ರೇಷ್ಠ ತೇನ ತೇ ಪ್ರೀತಿಮಾನಹಮ್||
ಪಾರ್ಥಿವ! ಭಾರ್ಯೆಯೊಡನೆ ನಿನ್ನಲ್ಲಿ ಅಣುವಷ್ಟೂ ಕೋಪವಿಲ್ಲ. ನರಶ್ರೇಷ್ಠ! ಅದರಿಂದ ನಾನು ನಿನ್ನ ಮೇಲೆ ಪ್ರೀತನಾಗಿದೆ.
13055021a ಭೋಜನಂ ಚ ಸಮಾನಾಯ್ಯ ಯತ್ತದಾದೀಪಿತಂ ಮಯಾ|
13055021c ಕ್ರುಧ್ಯೇಥಾ ಯದಿ ಮಾತ್ಸರ್ಯಾದಿತಿ ತನ್ಮರ್ಷಿತಂ ಚ ತೇ||
ಭೋಜನವನ್ನೂ ತರಿಸಿದೆ ಮತ್ತು ಎಲ್ಲವನ್ನೂ ಸುಟ್ಟುಬಿಟ್ಟೆ. ಆದರೂ ಕ್ರೋಧವಾಗಲೀ ಮಾತ್ಸರ್ಯವಾಗಲೀ ನಿನ್ನನ್ನು ಮುಟ್ಟಲಿಲ್ಲ.
13055022a ತತೋಽಹಂ ರಥಮಾರುಹ್ಯ ತ್ವಾಮವೋಚಂ ನರಾಧಿಪ|
13055022c ಸಭಾರ್ಯೋ ಮಾಂ ವಹಸ್ವೇತಿ ತಚ್ಚ ತ್ವಂ ಕೃತವಾಂಸ್ತಥಾ||
ನರಾಧಿಪ! ಅನಂತರ ನಾನು ರಥವನ್ನೇರಿ ಭಾರ್ಯೆಯೊಂದಿಗೆ ನನ್ನ ರಥವನ್ನು ಎಳೆದುಕೊಂಡು ಹೋಗು ಎಂದು ಹೇಳಿದೆ. ಅದನ್ನೂ ಕೂಡ ನೀನು ಮಾಡಿದೆ.
13055023a ಅವಿಶಂಕೋ ನರಪತೇ ಪ್ರೀತೋಽಹಂ ಚಾಪಿ ತೇನ ತೇ|
13055023c ಧನೋತ್ಸರ್ಗೇಽಪಿ ಚ ಕೃತೇ ನ ತ್ವಾಂ ಕ್ರೋಧಃ ಪ್ರಧರ್ಷಯತ್||
ನರಪತೇ! ಆಗಲೂ ಅವಿಶಂಕನಾಗಿದ್ದ ನಿನ್ನ ಮೇಲೆ ನಾನು ಪ್ರೀತನಾದೆ. ಧನವನ್ನು ಹಂಚುತ್ತಿರುವಾಗಲೂ ನೀನು ಕ್ರೋಧವನ್ನು ಪ್ರದರ್ಶಿಸಲಿಲ್ಲ.
13055024a ತತಃ ಪ್ರೀತೇನ ತೇ ರಾಜನ್ಪುನರೇತತ್ಕೃತಂ ತವ|
13055024c ಸಭಾರ್ಯಸ್ಯ ವನಂ ಭೂಯಸ್ತದ್ವಿದ್ಧಿ ಮನುಜಾಧಿಪ||
ರಾಜನ್! ಮನುಜಾಧಿಪ! ಅನಂತರ ಭಾರ್ಯೆಯೊಂದಿಗೆ ನಿನಗೆ ಈ ವನವನ್ನು ತೋರಿಸಿ ನಿನಗೆ ಪ್ರಿಯವಾದುದನ್ನು ಮಾಡಿದೆನು.
13055025a ಪ್ರೀತ್ಯರ್ಥಂ ತವ ಚೈತನ್ಮೇ ಸ್ವರ್ಗಸಂದರ್ಶನಂ ಕೃತಮ್|
13055025c ಯತ್ತೇ ವನೇಽಸ್ಮಿನ್ನೃಪತೇ ದೃಷ್ಟಂ ದಿವ್ಯಂ ನಿದರ್ಶನಮ್||
ನೃಪತೇ! ನಿನ್ನ ಪ್ರೀತ್ಯರ್ಥವಾಗಿ ಈ ವನದಲ್ಲಿ ನಿನಗೆ ಸ್ವರ್ಗದ ಸಂದರ್ಶನವನ್ನು ಮಾಡಿಸಿದೆನು. ದಿವ್ಯ ನಿದರ್ಶನವನ್ನು ತೋರಿಸಿದೆನು.
13055026a ಸ್ವರ್ಗೋದ್ದೇಶಸ್ತ್ವಯಾ ರಾಜನ್ಸಶರೀರೇಣ ಪಾರ್ಥಿವ|
13055026c ಮುಹೂರ್ತಮನುಭೂತೋಽಸೌ ಸಭಾರ್ಯೇಣ ನೃಪೋತ್ತಮ||
ಪಾರ್ಥಿವ! ನೃಪೋತ್ತಮ! ಭಾರ್ಯೆಯೊಂದಿಗೆ ಸಶರೀರಿಯಾಗಿಯೇ ನೀನು ಸ್ವರ್ಗಪ್ರದೇಶವನ್ನು ಅನುಭವಿಸಿದೆ.
13055027a ನಿದರ್ಶನಾರ್ಥಂ ತಪಸೋ ಧರ್ಮಸ್ಯ ಚ ನರಾಧಿಪ|
13055027c ತತ್ರ ಯಾಸೀತ್ ಸ್ಪೃಹಾ ರಾಜಂಸ್ತಚ್ಚಾಪಿ ವಿದಿತಂ ಮಮ||
ರಾಜನ್! ತಪಸ್ಸು ಮತ್ತು ಧರ್ಮದ ನಿದರ್ಶನಾರ್ಥವಾಗಿ ನಾನು ಇವೆಲ್ಲವನ್ನೂ ಸೃಷ್ಟಿಸಿದೆನು.
13055028a ಬ್ರಾಹ್ಮಣ್ಯಂ ಕಾಂಕ್ಷಸೇ ಹಿ ತ್ವಂ ತಪಶ್ಚ ಪೃಥಿವೀಪತೇ|
13055028c ಅವಮನ್ಯ ನರೇಂದ್ರತ್ವಂ ದೇವೇಂದ್ರತ್ವಂ ಚ ಪಾರ್ಥಿವ||
ಪೃಥಿವೀಪತೇ! ಪಾರ್ಥಿವ! ನರೇಂದ್ರತ್ವ ಮತ್ತು ದೇವೇಂದ್ರತ್ವವನ್ನು ತಿರಸ್ಕರಿಸಿ ನೀನು ಬ್ರಾಹ್ಮಣ್ಯವನ್ನು ಪಡೆದು ತಪಸ್ಸನ್ನಾಚರಿಸಲು ಆಕಾಂಕ್ಷಿಸುತ್ತಿದ್ದೀಯೆ.
13055029a ಏವಮೇತದ್ಯಥಾತ್ಥ ತ್ವಂ ಬ್ರಾಹ್ಮಣ್ಯಂ ತಾತ ದುರ್ಲಭಮ್|
13055029c ಬ್ರಾಹ್ಮಣ್ಯೇ ಸತಿ ಚರ್ಷಿತ್ವಮೃಷಿತ್ವೇ ಚ ತಪಸ್ವಿತಾ||
ಅಯ್ಯಾ! ನೀನು ಉದ್ಗರಿಸಿದುದು ನಿಜವು. ಬ್ರಾಹ್ಮಣ್ಯವು ದುರ್ಲಭ. ಬ್ರಾಹ್ಮಣ್ಯಕ್ಕಿಂತಲೂ ಋಷಿತ್ವವು ದುರ್ಲಭ. ಋಷಿತ್ವಕ್ಕಿಂತಲೂ ತಪಸ್ವಿತ್ವವು ದುರ್ಲಭವಾದುದು.
13055030a ಭವಿಷ್ಯತ್ಯೇಷ ತೇ ಕಾಮಃ ಕುಶಿಕಾತ್ಕೌಶಿಕೋ ದ್ವಿಜಃ|
13055030c ತೃತೀಯಂ ಪುರುಷಂ ಪ್ರಾಪ್ಯ ಬ್ರಾಹ್ಮಣತ್ವಂ ಗಮಿಷ್ಯತಿ||
ನಿನ್ನ ಬಯಕೆಯು ಭವಿಷ್ಯದಲ್ಲಿ ಪೂರೈಸುತ್ತದೆ. ಕುಶಿಕನಿಂದ ಕೌಶಿಕನೆಂಬ ದ್ವಿಜನಾಗುತ್ತಾನೆ. ನಿನ್ನಿಂದ ಮೂರನೆಯ ಪುರುಷನು ಬ್ರಾಹ್ಮಣತ್ವವನ್ನು ಪಡೆದುಕೊಳ್ಳುತ್ತಾನೆ.
13055031a ವಂಶಸ್ತೇ ಪಾರ್ಥಿವಶ್ರೇಷ್ಠ ಭೃಗೂಣಾಮೇವ ತೇಜಸಾ|
13055031c ಪೌತ್ರಸ್ತೇ ಭವಿತಾ ವಿಪ್ರ ತಪಸ್ವೀ ಪಾವಕದ್ಯುತಿಃ||
ಪಾರ್ಥಿವಶ್ರೇಷ್ಠ! ಭೃಗುವಂಶೀಯರ ತೇಜಸ್ಸಿನಿಂದ ನಿನ್ನ ಮೊಮ್ಮಗನು ಪಾವಕದ್ಯುತಿ ತಪಸ್ವೀ ವಿಪ್ರನಾಗುತ್ತಾನೆ.
13055032a ಯಃ ಸ ದೇವಮನುಷ್ಯಾಣಾಂ ಭಯಮುತ್ಪಾದಯಿಷ್ಯತಿ|
13055032c ತ್ರಯಾಣಾಂ ಚೈವ ಲೋಕಾನಾಂ ಸತ್ಯಮೇತದ್ಬ್ರವೀಮಿ ತೇ||
ಅವನು ದೇವ-ಮನುಷ್ಯರಲ್ಲಿ ಮತ್ತು ಮೂರು ಲೋಕಗಳಲ್ಲಿಯೂ ಭಯವನ್ನುಂಟುಮಾಡುತ್ತಾನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
13055033a ವರಂ ಗೃಹಾಣ ರಾಜರ್ಷೇ ಯಸ್ತೇ ಮನಸಿ ವರ್ತತೇ|
13055033c ತೀರ್ಥಯಾತ್ರಾಂ ಗಮಿಷ್ಯಾಮಿ ಪುರಾ ಕಾಲೋಽತಿವರ್ತತೇ||
ರಾಜರ್ಷೇ! ನಿನ್ನ ಮನಸ್ಸಿನಲ್ಲಿರುವುದನ್ನು ವರವಾಗಿ ಪಡೆದುಕೋ. ಕಾಲವು ಕಳೆಯುವ ಮೊದಲೇ ತೀರ್ಥಯಾತ್ರೆಗೆ ಹೋಗುತ್ತೇನೆ.”
13055034 ಕುಶಿಕ ಉವಾಚ|
13055034a ಏಷ ಏವ ವರೋ ಮೇಽದ್ಯ ಯತ್ತ್ವಂ ಪ್ರೀತೋ ಮಹಾಮುನೇ|
13055034c ಭವತ್ವೇತದ್ಯಥಾತ್ಥ ತ್ವಂ ತಪಃ ಪೌತ್ರೇ ಮಮಾನಘ|
13055034e ಬ್ರಾಹ್ಮಣ್ಯಂ ಮೇ ಕುಲಸ್ಯಾಸ್ತು ಭಗವನ್ನೇಷ ಮೇ ವರಃ||
ಕುಶಿಕನು ಹೇಳಿದನು: “ಮಹಾಮುನೇ! ಅನಘ! ನೀನು ನನ್ನ ಮೇಲೆ ಪ್ರೀತನಾಗಿರುವುದೇ ನನಗೆ ಇಂದು ವರವಾಗಿದೆ. ನೀನು ಹೇಳಿದಂತೆಯೇ ಆಗಲಿ. ನನ್ನ ಪೌತ್ರನು ತಪಸ್ವಿಯಾಗಲಿ. ನನ್ನ ಕುಲವು ಬ್ರಾಹ್ಮಣ್ಯವಾಗಲಿ. ಭಗವನ್! ಅದೇ ನನ್ನ ವರ.
13055035a ಪುನಶ್ಚಾಖ್ಯಾತುಮಿಚ್ಚಾಮಿ ಭಗವನ್ವಿಸ್ತರೇಣ ವೈ|
13055035c ಕಥಮೇಷ್ಯತಿ ವಿಪ್ರತ್ವಂ ಕುಲಂ ಮೇ ಭೃಗುನಂದನ|
13055035e ಕಶ್ಚಾಸೌ ಭವಿತಾ ಬಂಧುರ್ಮಮ ಕಶ್ಚಾಪಿ ಸಂಮತಃ||
ಭಗವನ್! ಭೃಗುನಂದನ! ನನ್ನ ಕುಲಕ್ಕೆ ವಿಪ್ರತ್ವವು ಹೇಗೆ ಬರುತ್ತದೆ ಎನ್ನುವುದನ್ನು ಪುನಃ ವಿಸ್ತಾರವಾಗಿ ಕೇಳಬಯಸುತ್ತೇನೆ. ಸರ್ವಸಮ್ಮತನಾಗುವ ಆ ನನ್ನ ಬಂಧುವು ಯಾರು?”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ಪಂಚಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ತೈದನೇ ಅಧ್ಯಾಯವು.