ಅನುಶಾಸನ ಪರ್ವ: ದಾನಧರ್ಮ ಪರ್ವ
೫೪
ಚ್ಯವನನ ಪ್ರಭಾವದಿಂದ ರಾಜದಂಪತಿಗಳು ಆಶ್ಚರ್ಯಮಯ ದೃಶ್ಯಗಳನ್ನು ನೋಡಿದುದು (೧-೨೯). ಚ್ಯವನನು ಕುಶಿಕನಿಗೆ ವರವನ್ನು ಕೇಳಲು ಪ್ರೇರೇಪಿಸಿದುದು (೩೦-೪೦).
13054001 ಭೀಷ್ಮ ಉವಾಚ|
13054001a ತತಃ ಸ ರಾಜಾ ರಾತ್ರ್ಯಂತೇ ಪ್ರತಿಬುದ್ಧೋ ಮಹಾಮನಾಃ|
13054001c ಕೃತಪೂರ್ವಾಹ್ಣಿಕಃ ಪ್ರಾಯಾತ್ಸಭಾರ್ಯಸ್ತದ್ವನಂ ಪ್ರತಿ||
ಭೀಷ್ಮನು ಹೇಳಿದನು: “ರಾತ್ರಿಯು ಮುಗಿಯಲು ಆ ಮಹಾಮನಸ್ವಿ ರಾಜನು ಪೂರ್ವಾಹ್ಣಿಕಕರ್ಮಗಳನ್ನು ಮಾಡಿ ಭಾರ್ಯೆಯೊಡನೆ ಆ ವನದ ಕಡೆ ಪ್ರಯಾಣಿಸಿದನು.
13054002a ತತೋ ದದರ್ಶ ನೃಪತಿಃ ಪ್ರಾಸಾದಂ ಸರ್ವಕಾಂಚನಮ್|
13054002c ಮಣಿಸ್ತಂಭಸಹಸ್ರಾಢ್ಯಂ ಗಂಧರ್ವನಗರೋಪಮಮ್|
13054002e ತತ್ರ ದಿವ್ಯಾನಭಿಪ್ರಾಯಾನ್ದದರ್ಶ ಕುಶಿಕಸ್ತದಾ||
ಆಗ ನೃಪತಿಯು ಸಹಸ್ರ ಮಣಿಸ್ಥಂಭಗಳಿಂದ ಸಮಲಂಕೃತವಾಗಿದ್ದ ಮತ್ತು ಗಂಧರ್ವನಗರಿಯಂತೆ ಕಾಣುತ್ತಿದ್ದ ಸುವರ್ಣಮಯ ಸೌಧವನ್ನು ನೋಡಿದನು. ಕುಶಿಕನು ಅಲ್ಲಿ ದಿವ್ಯ ಅಲಂಕಾರಗಳನ್ನು ನೋಡಿದನು.
13054003a ಪರ್ವತಾನ್ರಮ್ಯಸಾನೂಂಶ್ಚ ನಲಿನೀಶ್ಚ ಸಪಂಕಜಾಃ|
13054003c ಚಿತ್ರಶಾಲಾಶ್ಚ ವಿವಿಧಾಸ್ತೋರಣಾನಿ ಚ ಭಾರತ|
13054003e ಶಾದ್ವಲೋಪಚಿತಾಂ ಭೂಮಿಂ ತಥಾ ಕಾಂಚನಕುಟ್ಟಿಮಾಮ್||
ಭಾರತ! ಬೆಳ್ಳಿಯ ಶಿಖರಗಳಿಂದ ಸುಶೋಭಿತವಾಗಿದ್ದ ಪರ್ವತಗಳನ್ನೂ, ಕಮಲ ಪುಷ್ಪಗಳಿಂದ ವ್ಯಾಪ್ತವಾಗಿದ್ದ ಸರೋವರಗಳನ್ನೂ, ನಾನಾ ವಿಧದ ಚಿತ್ರಶಾಲೆಗಳನ್ನೂ, ತೋರಣಗಳನ್ನೂ, ಹಚ್ಚಹಸಿರಾದ ಗರಿಕೆ ಹುಲ್ಲಿನಿಂದ ಕೂಡಿದ್ದ ಮತ್ತು ಸ್ವರ್ಣಖಚಿತ ಭೂಮಿಯನ್ನೂ ನೋಡಿದನು.
13054004a ಸಹಕಾರಾನ್ಪ್ರಫುಲ್ಲಾಂಶ್ಚ ಕೇತಕೋದ್ದಾಲಕಾನ್ಧವಾನ್|
13054004c ಅಶೋಕಾನ್ಮುಚುಕುಂದಾಂಶ್ಚ ಫುಲ್ಲಾಂಶ್ಚೈವಾತಿಮುಕ್ತಕಾನ್||
13054005a ಚಂಪಕಾಂಸ್ತಿಲಕಾನ್ಭವ್ಯಾನ್ಪನಸಾನ್ವಂಜುಲಾನಪಿ|
13054005c ಪುಷ್ಪಿತಾನ್ಕರ್ಣಿಕಾರಾಂಶ್ಚ ತತ್ರ ತತ್ರ ದದರ್ಶ ಹ||
ಚಿಗುರೆಲೆಗಳಿಂದ ಕೂಡಿದ್ದ ಮಾವಿನ ಮರಗಳನ್ನೂ, ಕೇದಿಗೇಮರಗಳನ್ನೂ, ಚಳ್ಳೇಮರಗಳನ್ನೂ, ಅಶೋಕವೃಕ್ಷಗಳನ್ನೂ, ಕೋಲುಮಲ್ಲಿಗೆಬಳ್ಳಿಗಳನ್ನೂ, ಮಾಧವೀ ಲತೆಗಳನ್ನೂ, ಸಂಪಿಗೆ ಮರಗಳನ್ನೂ, ತಿಲಕ ವೃಕ್ಷಗಳನ್ನೂ, ದಿವ್ಯ ಹಲಸಿನ ಮರಗಳನ್ನೂ, ಬೆತ್ತದ ಗಿಡಗಳನ್ನೂ, ಪುಷ್ಪಭರಿತ ಬೆಟ್ಟಕಣಗಿಲೇ ಗಿಡಗಳನ್ನೂ ಅಲ್ಲಲ್ಲಿ ಅವನು ನೋಡಿದನು.
13054006a ಶ್ಯಾಮಾಂ ವಾರಣಪುಷ್ಪೀಂ ಚ ತಥಾಷ್ಟಾಪದಿಕಾಂ ಲತಾಮ್|
13054006c ತತ್ರ ತತ್ರ ಪರಿಕ್ಳ್ಪ್ತಾ ದದರ್ಶ ಸ ಮಹೀಪತಿಃ||
ಆ ಮಹೀಪತಿಯು ಅಲ್ಲಲ್ಲಿ ಶ್ಯಾಮಲವರ್ಣದ ವಾರಣಪುಷ್ಪಗಳನ್ನೂ, ಅಷ್ಟಪದಿಕಾಲತೆಗಳನ್ನೂ ನೋಡಿದನು.
13054007a ವೃಕ್ಷಾನ್ಪದ್ಮೋತ್ಪಲಧರಾನ್ಸರ್ವರ್ತುಕುಸುಮಾಂಸ್ತಥಾ|
13054007c ವಿಮಾನಚ್ಚಂದಕಾಂಶ್ಚಾಪಿ ಪ್ರಾಸಾದಾನ್ಪದ್ಮಸಂನಿಭಾನ್||
13054008a ಶೀತಲಾನಿ ಚ ತೋಯಾನಿ ಕ್ವ ಚಿದುಷ್ಣಾನಿ ಭಾರತ|
13054008c ಆಸನಾನಿ ವಿಚಿತ್ರಾಣಿ ಶಯನಪ್ರವರಾಣಿ ಚ||
13054009a ಪರ್ಯಂಕಾನ್ಸರ್ವಸೌವರ್ಣಾನ್ಪರಾರ್ಧ್ಯಾಸ್ತರಣಾಸ್ತೃತಾನ್|
13054009c ಭಕ್ಷ್ಯಭೋಜ್ಯಮನಂತಂ ಚ ತತ್ರ ತತ್ರೋಪಕಲ್ಪಿತಮ್||
13054010a ವಾಣೀವಾದಾನ್ಚುಕಾಂಶ್ಚಾಪಿ ಶಾರಿಕಾಭೃಂಗರಾಜಕಾನ್|
13054010c ಕೋಕಿಲಾನ್ಚತಪತ್ರಾಂಶ್ಚ ಕೋಯಷ್ಟಿಮಕಕುಕ್ಕುಟಾನ್||
13054011a ಮಯೂರಾನ್ಕುಕ್ಕುಟಾಂಶ್ಚಾಪಿ ಪುತ್ರಕಾನ್ಜೀವಜೀವಕಾನ್|
13054011c ಚಕೋರಾನ್ವಾನರಾನ್ ಹಂಸಾನ್ಸಾರಸಾಂಶ್ಚಕ್ರಸಾಹ್ವಯಾನ್||
13054012a ಸಮಂತತಃ ಪ್ರಣದಿತಾನ್ದದರ್ಶ ಸುಮನೋಹರಾನ್|
13054012c ಕ್ವ ಚಿದಪ್ಸರಸಾಂ ಸಂಘಾನ್ಗಂಧರ್ವಾಣಾಂ ಚ ಪಾರ್ಥಿವ||
13054013a ಕಾಂತಾಭಿರಪರಾಂಸ್ತತ್ರ ಪರಿಷ್ವಕ್ತಾನ್ದದರ್ಶ ಹ|
13054013c ನ ದದರ್ಶ ಚ ತಾನ್ಭೂಯೋ ದದರ್ಶ ಚ ಪುನರ್ನೃಪಃ||
ಭಾರತ! ಪಾರ್ಥಿವ! ಪದ್ಮಗಳಂತೆ ಅರಳಿದ ಸರ್ವಋತುಗಳ ಕುಸುಮಗಳಿಂದ ಕೂಡಿದ ವೃಕ್ಷಗಳನ್ನೂ, ವಿಮಾನದಂತಿದ್ದ ಪದ್ಮಸನ್ನಿಭ ಸದನಗಳನ್ನೂ, ಶೀತಲ ಮತ್ತು ಬಿಸಿ ನೀರಿರುವ ಚಿಲುಮೆಗಳನ್ನೂ, ವಿಚಿತ್ರ ಆಸನ-ಶಯನಾದಿಗಳನ್ನೂ, ಅತ್ಯಮೂಲ್ಯ ರತ್ನಗಂಬಳಿಗಳನ್ನು ಹಾಸಿದ್ದ ರತ್ನಖಚಿತ ಮಂಚಗಳನ್ನೂ, ಅಲ್ಲಲ್ಲಿ ಕಲ್ಪಿಸಿದ್ದ ಅನಂತ ಭಕ್ಷ್ಯ-ಭೋಜ್ಯಗಳನ್ನೂ, ಮನುಷ್ಯರಂತೆಯೇ ಮಾತನಾಡುತ್ತಿದ್ದ ಗಿಳಿಗಳನ್ನೂ, ಆನಂದದಿಂದ ಕಿಲಕಿಲ ಶಬ್ಧಮಾಡುತ್ತಿದ್ದ ಸುಮನೋಹರ ಸಾರಿಕಾ ಪಕ್ಷಿಗಳನ್ನೂ, ಸುಮನೋಹರ ಕೋಗಿಲೆಗಳನ್ನೂ, ಶತಪತ್ರಗಳನ್ನೂ, ಬಿಳಿಯ ಕೊಕ್ಕರೆಗಳನ್ನೂ, ಬಕಬಕ್ಷಿಗಳನ್ನೂ, ಕಾಡುಕೋಳಿಗಳನ್ನೂ, ಚಕೋರಪಕ್ಷಿಗಳನ್ನೂ, ಕಪಿಗಳನ್ನೂ, ಹಂಸಗಳನ್ನೂ, ಸಾರಸಪಕ್ಷಿಗಳನ್ನೂ, ಚಕ್ರವಾಕ ಪಕ್ಷಿಗಳನ್ನೂ ನೋಡಿದನು. ಆ ನೃಪನು ಕೆಲವು ಕಡೆ ಅಪ್ಸರೆಯರ ಗುಂಪುಗಳನ್ನೂ, ಗಂಧರ್ವರ ಗುಂಪುಗಳನ್ನೂ, ಪ್ರಿಯತಮೆಯರನ್ನು ಬಾಹುಲತೆಗಳಿಂದ ಅಪ್ಪಿಕೊಂಡಿದ್ದ ಗಂಧರ್ವರನ್ನೂ ನೋಡಿದನು. ಅವರೆಲ್ಲರೂ ಒಮ್ಮೆ ಕಾಣಿಸಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಮಾಯವಾಗುತ್ತಿದ್ದರು.
13054014a ಗೀತಧ್ವನಿಂ ಸುಮಧುರಂ ತಥೈವಾಧ್ಯಯನಧ್ವನಿಮ್|
13054014c ಹಂಸಾನ್ಸುಮಧುರಾಂಶ್ಚಾಪಿ ತತ್ರ ಶುಶ್ರಾವ ಪಾರ್ಥಿವಃ||
ಪಾರ್ಥಿವನು ಅಲ್ಲಿ ಸುಮಧುರ ಗೀತಧ್ವನಿಯನ್ನೂ, ಹಾಗೆಯೇ ವೇದಾಧ್ಯಯನದ ಧ್ವನಿಯನ್ನೂ, ಹಂಸಗಳ ಮಧುರ ಧ್ವನಿಯನ್ನೂ ಕೇಳಿದನು.
13054015a ತಂ ದೃಷ್ಟ್ವಾತ್ಯದ್ಭುತಂ ರಾಜಾ ಮನಸಾಚಿಂತಯತ್ತದಾ|
13054015c ಸ್ವಪ್ನೋಽಯಂ ಚಿತ್ತವಿಭ್ರಂಶ ಉತಾಹೋ ಸತ್ಯಮೇವ ತು||
ಆ ಅದ್ಭುತವನ್ನು ನೋಡಿ ರಾಜನು ಮನಸ್ಸಿನಲ್ಲಿಯೇ ಚಿಂತಿಸಿದನು: “ಇದೇನು ಸ್ವಪ್ನವೇ? ಚಿತ್ತಭ್ರಮಣೆಯಿಂದ ಹೀಗೆಲ್ಲಾ ಕಾಣುತ್ತಿರುವುದೇ? ಅಥವಾ ಇಲ್ಲಿರುವುದೆಲ್ಲವೂ ಸತ್ಯವೇ?
13054016a ಅಹೋ ಸಹ ಶರೀರೇಣ ಪ್ರಾಪ್ತೋಽಸ್ಮಿ ಪರಮಾಂ ಗತಿಮ್|
13054016c ಉತ್ತರಾನ್ವಾ ಕುರೂನ್ಪುಣ್ಯಾನಥ ವಾಪ್ಯಮರಾವತೀಮ್||
ಅಥವಾ ನಾನು ಸಶರೀರಿಯಾಗಿಯೇ ಪರಮ ಗತಿಯನ್ನು ಹೊಂದಿಬಿಟ್ಟಿದ್ದೇನೆಯೇ? ಅಥವಾ ಇದು ಉತ್ತರ ಕುರುವೇ? ಅಥವಾ ಅಮರಾವತಿಯೇ?
13054017a ಕಿಂ ತ್ವಿದಂ ಮಹದಾಶ್ಚರ್ಯಂ ಸಂಪಶ್ಯಾಮೀತ್ಯಚಿಂತಯತ್|
13054017c ಏವಂ ಸಂಚಿಂತಯನ್ನೇವ ದದರ್ಶ ಮುನಿಪುಂಗವಮ್||
ನಾನು ಕಾಣುತ್ತಿರುವ ಈ ಮಹದಾಶ್ಚರ್ಯವು ಏನಾಗಿರಬಹುದು?” ಹೀಗೆ ಚಿಂತಿಸುತ್ತಿರುವಾಗಲೇ ಅವನು ಮುನಿಪುಂಗವನನ್ನು ಕಂಡನು.
13054018a ತಸ್ಮಿನ್ವಿಮಾನೇ ಸೌವರ್ಣೇ ಮಣಿಸ್ತಂಭಸಮಾಕುಲೇ|
13054018c ಮಹಾರ್ಹೇ ಶಯನೇ ದಿವ್ಯೇ ಶಯಾನಂ ಭೃಗುನಂದನಮ್||
ಮಣಿಸ್ತಂಭಗಳಿಂದ ಕೂಡಿದ್ದ ಆ ಸುವರ್ಣಮಯ ವಿಮಾನದಲ್ಲಿ ಭೃಗುನಂದನನು ಅತ್ಯಮೂಲ್ಯ ದಿವ್ಯ ಶಯನದಲ್ಲಿ ಪವಡಿಸಿದ್ದನು.
13054019a ತಮಭ್ಯಯಾತ್ಪ್ರಹರ್ಷೇಣ ನರೇಂದ್ರಃ ಸಹ ಭಾರ್ಯಯಾ|
13054019c ಅಂತರ್ಹಿತಸ್ತತೋ ಭೂಯಶ್ಚ್ಯವನಃ ಶಯನಂ ಚ ತತ್||
ಆಗ ಹರ್ಷದಿಂದ ನರೇಂದ್ರನು ಭಾರ್ಯೆಯೊಡನೆ ಅವನ ಸಮೀಪಹೋಗಲು ಶಯನದೊಂದಿಗೆ ಚ್ಯವನನು ಪುನಃ ಅಂತರ್ಹಿತನಾದನು.
13054020a ತತೋಽನ್ಯಸ್ಮಿನ್ವನೋದ್ದೇಶೇ ಪುನರೇವ ದದರ್ಶ ತಮ್|
13054020c ಕೌಶ್ಯಾಂ ಬೃಸ್ಯಾಂ ಸಮಾಸೀನಂ ಜಪಮಾನಂ ಮಹಾವ್ರತಮ್|
13054020e ಏವಂ ಯೋಗಬಲಾದ್ವಿಪ್ರೋ ಮೋಹಯಾಮಾಸ ಪಾರ್ಥಿವಮ್||
ಅನಂತರ ಇನ್ನೊಂದು ಪ್ರದೇಶದಲ್ಲಿ ಪುನಃ ದರ್ಭಾಸನದ ಮೇಲೆ ಕುಳಿತು ಜಪಿಸುತ್ತಿರುವ ಆ ಮಹಾವ್ರತನನ್ನು ಕಂಡನು. ಹೀಗೆ ವಿಪ್ರನು ತನ್ನ ಯೋಗಬಲದಿಂದ ಪಾರ್ಥಿವನನ್ನು ಮೋಹಗೊಳಿಸಿದನು.
13054021a ಕ್ಷಣೇನ ತದ್ವನಂ ಚೈವ ತೇ ಚೈವಾಪ್ಸರಸಾಂ ಗಣಾಃ|
13054021c ಗಂಧರ್ವಾಃ ಪಾದಪಾಶ್ಚೈವ ಸರ್ವಮಂತರಧೀಯತ||
ಕ್ಷಣದಲ್ಲಿಯೇ ಆ ವನ, ಅಪ್ಸರಗಣಗಳು, ಗಂಧರ್ವರು, ವೃಕ್ಷಗಳು ಎಲ್ಲವೂ ಅಂತರ್ಧಾನವಾದವು.
13054022a ನಿಃಶಬ್ದಮಭವಚ್ಚಾಪಿ ಗಂಗಾಕೂಲಂ ಪುನರ್ನೃಪ|
13054022c ಕುಶವಲ್ಮೀಕಭೂಯಿಷ್ಠಂ ಬಭೂವ ಚ ಯಥಾ ಪುರಾ||
ನೃಪ! ಗಂಗಾಕೂಲವು ಪುನಃ ನಿಃಶಬ್ಧವಾಯಿತು. ಹಿಂದಿನಂತೆಯೇ ದರ್ಭೆಗಳಿಂದಲೂ ಹುತ್ತಗಳಿಂದಲೂ ತುಂಬಿತು.
13054023a ತತಃ ಸ ರಾಜಾ ಕುಶಿಕಃ ಸಭಾರ್ಯಸ್ತೇನ ಕರ್ಮಣಾ|
13054023c ವಿಸ್ಮಯಂ ಪರಮಂ ಪ್ರಾಪ್ತಸ್ತದ್ದೃಷ್ಟ್ವಾ ಮಹದದ್ಭುತಮ್||
ಮುನಿಯ ಕರ್ಮಗಳಿಂದಾದ ಆ ಮಹಾ ಅದ್ಭುತವನ್ನು ನೋಡಿ ರಾಜ ಕುಶಿಕನು ಭಾರ್ಯೆಯೊಡನೆ ಪರಮ ವಿಸ್ಮಿತನಾದನು.
13054024a ತತಃ ಪ್ರೋವಾಚ ಕುಶಿಕೋ ಭಾರ್ಯಾಂ ಹರ್ಷಸಮನ್ವಿತಃ|
13054024c ಪಶ್ಯ ಭದ್ರೇ ಯಥಾ ಭಾವಾಶ್ಚಿತ್ರಾ ದೃಷ್ಟಾಃ ಸುದುರ್ಲಭಾಃ||
ಆಗ ಹರ್ಷಸಮನ್ವಿತನಾದ ಕುಶಿಕನು ಭಾರ್ಯೆಗೆ ಹೇಳಿದನು: “ಭದ್ರೇ! ನೋಡಲು ದುರ್ಲಭವಾಗಿರುವ ಈ ವಿಚಿತ್ರ ಭಾವಗಳನ್ನು ನೋಡು!
13054025a ಪ್ರಸಾದಾದ್ಭೃಗುಮುಖ್ಯಸ್ಯ ಕಿಮನ್ಯತ್ರ ತಪೋಬಲಾತ್|
13054025c ತಪಸಾ ತದವಾಪ್ಯಂ ಹಿ ಯನ್ನ ಶಕ್ಯಂ ಮನೋರಥೈಃ||
ಭೃಗುಮುಖ್ಯನ ಪ್ರಸಾದ-ತಪೋಬಲಗಳಿಂದಲ್ಲದೇ ಬೇರೆ ಯಾವುದರಿಂದ ಇದು ಸಾಧ್ಯ? ಮನೋರಥಗಳೆಲ್ಲವನ್ನೂ ತಪಸ್ಸಿನ ಮೂಲಕ ಪ್ರತ್ಯಕ್ಷ ಪಡೆದುಕೊಳ್ಳಬಹುದು.
13054026a ತ್ರೈಲೋಕ್ಯರಾಜ್ಯಾದಪಿ ಹಿ ತಪ ಏವ ವಿಶಿಷ್ಯತೇ|
13054026c ತಪಸಾ ಹಿ ಸುತಪ್ತೇನ ಕ್ರೀಡತ್ಯೇಷ ತಪೋಧನಃ||
ತ್ರೈಲೋಕ್ಯರಾಜ್ಯಕ್ಕಿಂದಲೂ ತಪಸ್ಸೇ ಶ್ರೇಷ್ಠವಾದುದು. ಉತ್ತಮ ತಪಸ್ಸಿನಿಂದಲೇ ಈ ತಪೋಧನನು ಆಟವಾಡುತ್ತಿದ್ದಾನೆ.
13054027a ಅಹೋ ಪ್ರಭಾವೋ ಬ್ರಹ್ಮರ್ಷೇಶ್ಚ್ಯವನಸ್ಯ ಮಹಾತ್ಮನಃ|
13054027c ಇಚ್ಚನ್ನೇಷ ತಪೋವೀರ್ಯಾದನ್ಯಾಽಲ್ಲೋಕಾನ್ಸೃಜೇದಪಿ||
ಆಹಾ! ಮಹಾತ್ಮ ಬ್ರಹ್ಮರ್ಷಿ ಚ್ಯವನನ ಪ್ರಭಾವವೇ! ಇವನು ತಪೋವೀರ್ಯದಿಂದ ಅನ್ಯ ಲೋಕಗಳನ್ನೇ ಸೃಷ್ಟಿಸಬಲ್ಲನು.
13054028a ಬ್ರಾಹ್ಮಣಾ ಏವ ಜಾಯೇರನ್ಪುಣ್ಯವಾಗ್ಬುದ್ಧಿಕರ್ಮಣಃ|
13054028c ಉತ್ಸಹೇದಿಹ ಕರ್ತುಂ ಹಿ ಕೋಽನ್ಯೋ ವೈ ಚ್ಯವನಾದೃತೇ||
ಬುದ್ಧಿ-ಕರ್ಮಗಳಲ್ಲಿ ಪುಣ್ಯವಂತರಾದ ಬ್ರಾಹ್ಮಣರೇ ಹುಟ್ಟಬೇಕು! ಚ್ಯವನನ ಹೊರತಾಗಿ ಬೇರೆ ಯಾರು ತಾನೇ ಇಂಥಹದನ್ನು ಮಾಡಲು ಉತ್ಸಾಹಿಸುತ್ತಾನೆ?
13054029a ಬ್ರಾಹ್ಮಣ್ಯಂ ದುರ್ಲಭಂ ಲೋಕೇ ರಾಜ್ಯಂ ಹಿ ಸುಲಭಂ ನರೈಃ|
13054029c ಬ್ರಾಹ್ಮಣ್ಯಸ್ಯ ಪ್ರಭಾವಾದ್ಧಿ ರಥೇ ಯುಕ್ತೌ ಸ್ವಧುರ್ಯವತ್||
ಲೋಕದಲ್ಲಿ ಮನುಷ್ಯರು ರಾಜ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಆದರೆ ಬ್ರಾಹ್ಮಣ್ಯವು ದುರ್ಲಭವಾದುದು. ಬ್ರಾಹ್ಮಣನ ಪ್ರಭಾವದಿಂದ ನಾವುಗಳು ಕುದುರೆಗಳಂತೆ ರಥಕ್ಕೆ ಕಟ್ಟಲ್ಪಟ್ಟೆವು!”
13054030a ಇತ್ಯೇವಂ ಚಿಂತಯಾನಃ ಸ ವಿದಿತಶ್ಚ್ಯವನಸ್ಯ ವೈ|
13054030c ಸಂಪ್ರೇಕ್ಷ್ಯೋವಾಚ ಸ ನೃಪಂ ಕ್ಷಿಪ್ರಮಾಗಮ್ಯತಾಮಿತಿ||
ಅವನು ಹೀಗೆ ಯೋಚಿಸುತ್ತಿದ್ದುದು ಚ್ಯವನನಿಗೆ ತಿಳಿಯಿತು. ಕಾಣಿಸಿಕೊಂಡು ನೃಪನಿಗೆ ಬೇಗನೇ ಬರಬೇಕೆಂದು ಹೇಳಿದನು.
13054031a ಇತ್ಯುಕ್ತಃ ಸಹಭಾರ್ಯಸ್ತಮಭ್ಯಗಚ್ಚನ್ಮಹಾಮುನಿಮ್|
13054031c ಶಿರಸಾ ವಂದನೀಯಂ ತಮವಂದತ ಸ ಪಾರ್ಥಿವಃ||
ಇದನ್ನು ಕೇಳಿ ಪಾರ್ಥಿವನು ಭಾರ್ಯೆಯೊಡನೆ ಆ ಮಹಾಮುನಿಯಿದ್ದಲ್ಲಿಗೆ ಹೋಗಿ ವಂದನೀಯನಾದ ಅವನನ್ನು ಶಿರಸಾ ವಂದಿಸಿದನು.
13054032a ತಸ್ಯಾಶಿಷಃ ಪ್ರಯುಜ್ಯಾಥ ಸ ಮುನಿಸ್ತಂ ನರಾಧಿಪಮ್|
13054032c ನಿಷೀದೇತ್ಯಬ್ರವೀದ್ಧೀಮಾನ್ಸಾಂತ್ವಯನ್ಪುರುಷರ್ಷಭ||
ಪುರುಷರ್ಷಭ! ಧೀಮಾನ್ ಚ್ಯವನನು ನರಾಧಿಪನಿಗೆ ಆಶೀರ್ವಾದಗಳನ್ನಿತ್ತು ಸಾಂತ್ವನಗೊಳಿಸಿ ಕುಳಿತುಕೊಳ್ಳಲು ಹೇಳಿದನು.
13054033a ತತಃ ಪ್ರಕೃತಿಮಾಪನ್ನೋ ಭಾರ್ಗವೋ ನೃಪತೇ ನೃಪಮ್|
13054033c ಉವಾಚ ಶ್ಲಕ್ಷ್ಣಯಾ ವಾಚಾ ತರ್ಪಯನ್ನಿವ ಭಾರತ||
ನೃಪತೇ! ಭಾರತ! ಆಗ ತನ್ನ ಸಹಜಗುಣವನ್ನು ಪಡೆದಿದ್ದ ಭಾರ್ಗವನು ನೃಪತಿಯನ್ನು ತೃಪ್ತಿಪಡಿಸುತ್ತಿರುವನೋ ಎನ್ನುವಂತೆ ಮೃದು ಮಾತುಗಳನ್ನು ಆಡಿದನು:
13054034a ರಾಜನ್ಸಮ್ಯಗ್ಜಿತಾನೀಹ ಪಂಚ ಪಂಚಸು ಯತ್ತ್ವಯಾ|
13054034c ಮನಃಷಷ್ಠಾನೀಂದ್ರಿಯಾಣಿ ಕೃಚ್ಚ್ರಾನ್ಮುಕ್ತೋಽಸಿ ತೇನ ವೈ||
“ರಾಜನ್! ನೀನು ಐದು ಜ್ಞಾನೇಂದ್ರಿಯಗಳನ್ನೂ, ಐದು ಕರ್ಮೇಂದ್ರಿಯಗಳನ್ನೂ ಮತ್ತು ಆರನೆಯದಾದ ಮನಸ್ಸನ್ನೂ ಸಂಪೂರ್ಣವಾಗಿ ಜಯಿಸಿರುವೆ. ಆದುದರಿಂದಲೇ ನೀನು ಮಹಾಸಂಕಟದಿಂದ ಪಾರಾಗಿದ್ದೀಯೆ.
13054035a ಸಮ್ಯಗಾರಾಧಿತಃ ಪುತ್ರ ತ್ವಯಾಹಂ ವದತಾಂ ವರ|
13054035c ನ ಹಿ ತೇ ವೃಜಿನಂ ಕಿಂ ಚಿತ್ಸುಸೂಕ್ಷ್ಮಮಪಿ ವಿದ್ಯತೇ||
ಪುತ್ರ! ವಾಗ್ಮಿಗಳಲ್ಲಿ ಶ್ರೇಷ್ಠ! ನಿನ್ನಿಂದ ನಾನು ಚೆನ್ನಾಗಿ ಆರಾಧಿಸಲ್ಪಟ್ಟಿದ್ದೇನೆ. ನಿನ್ನಲ್ಲಿ ಅಣುವಷ್ಟು ಅಪರಾಧವನ್ನೂ ನಾನು ಕಾಣಲಿಲ್ಲ.
13054036a ಅನುಜಾನೀಹಿ ಮಾಂ ರಾಜನ್ಗಮಿಷ್ಯಾಮಿ ಯಥಾಗತಮ್|
13054036c ಪ್ರೀತೋಽಸ್ಮಿ ತವ ರಾಜೇಂದ್ರ ವರಶ್ಚ ಪ್ರತಿಗೃಹ್ಯತಾಮ್||
ರಾಜನ್! ಇನ್ನು ನನಗೆ ಅನುಮತಿಯನ್ನು ಕೊಡು. ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟುಹೋಗುತ್ತೇನೆ. ರಾಜೇಂದ್ರ! ನಿನ್ನಿಂದ ಪ್ರೀತನಾಗಿದ್ದೇನೆ. ವರವನ್ನು ಪಡೆದುಕೋ.”
13054037 ಕುಶಿಕ ಉವಾಚ|
13054037a ಅಗ್ನಿಮಧ್ಯಗತೇನೇದಂ ಭಗವನ್ಸಂನಿಧೌ ಮಯಾ|
13054037c ವರ್ತಿತಂ ಭೃಗುಶಾರ್ದೂಲ ಯನ್ನ ದಗ್ಧೋಽಸ್ಮಿ ತದ್ಬಹು||
ಕುಶಿಕನು ಹೇಳಿದನು: “ಭಗವನ್! ಭೃಗುಶಾರ್ದೂಲ! ಪ್ರಜ್ವಲಿಸುವ ಅಗ್ನಿಯ ಮಧ್ಯದಲ್ಲಿದ್ದಂತೆಯೇ ನಾನು ನಿನ್ನ ಸನ್ನಿಧಾನದಲ್ಲಿ ನಡೆದುಕೊಂಡೆನು. ಆದರೂ ನೀನು ನನ್ನನ್ನು ಸುಡಲಿಲ್ಲ.
13054038a ಏಷ ಏವ ವರೋ ಮುಖ್ಯಃ ಪ್ರಾಪ್ತೋ ಮೇ ಭೃಗುನಂದನ|
13054038c ಯತ್ಪ್ರೀತೋಽಸಿ ಸಮಾಚಾರಾತ್ಕುಲಂ ಪೂತಂ ಮಮಾನಘ||
ಭೃಗುನಂದನ! ಅನಘ! ಇದೇ ನನಗೆ ದೊರಕಿರುವ ಮುಖ್ಯ ವರವಾಗಿದೆ. ನನ್ನಿಂದ ಪ್ರೀತನಾಗಿ ನೀನು ಕುಲವನ್ನೇ ಪವಿತ್ರಗೊಳಿಸಿರುವೆ.
13054039a ಏಷ ಮೇಽನುಗ್ರಹೋ ವಿಪ್ರ ಜೀವಿತೇ ಚ ಪ್ರಯೋಜನಮ್|
13054039c ಏತದ್ರಾಜ್ಯಫಲಂ ಚೈವ ತಪಶ್ಚೈತತ್ಪರಂ ಮಮ||
ವಿಪ್ರ! ಇದೇ ನನಗೆ ನಿನ್ನ ಅನುಗ್ರಹವಾಗಿದೆ ಮತ್ತು ಜೀವಿತದ ಪ್ರಯೋಜನವೂ ಆಗಿದೆ. ಇದು ನನ್ನ ರಾಜ್ಯ ಮತ್ತು ತಪಸ್ಸಿನ ಫಲವೂ ಆಗಿದೆ.
13054040a ಯದಿ ತು ಪ್ರೀತಿಮಾನ್ವಿಪ್ರ ಮಯಿ ತ್ವಂ ಭೃಗುನಂದನ|
13054040c ಅಸ್ತಿ ಮೇ ಸಂಶಯಃ ಕಶ್ಚಿತ್ತನ್ಮೇ ವ್ಯಾಖ್ಯಾತುಮರ್ಹಸಿ||
ಭೃಗುನಂದನ! ವಿಪ್ರ! ಒಂದು ವೇಳೆ ನಿನಗೆ ನನ್ನ ಮೇಲೆ ಪ್ರೀತಿಯಿರುವುದಾದರೆ ನನ್ನಲ್ಲಿ ಒಂದು ಸಂಶಯವಿವೆ. ಅದನ್ನು ಬಗೆಹರಿಸಬೇಕು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ಚತುಃಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ನಾಲ್ಕನೇ ಅಧ್ಯಾಯವು.