Anushasana Parva: Chapter 52

ಅನುಶಾಸನ ಪರ್ವ: ದಾನಧರ್ಮ ಪರ್ವ

೫೨

ಚ್ಯವನ-ಕುಶಿಕ ಸಂವಾದ

ಭಾರ್ಗವ ವಂಶದಲ್ಲಿ ವರ್ಣವಿನಿಮಯದೋಷವು ಹೇಗೆ ಉಂಟಾಯಿತು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಚ್ಯವನ-ಕುಶಿಕರ ಸಂವಾದವನ್ನು ಉದಾಹರಿಸಿದುದು (೧-೭). ತನ್ನ ಕುಲದಲ್ಲಿ ಮುಂದೆ ಆಗುವ ದೋಷವನ್ನು ಮೊದಲೇ ಕಂಡಿದ್ದ ಚ್ಯವನನು ರಾಜಾ ಕುಶಿಕನ ಬಳಿ ಹೋಗಿ ನಿನ್ನೊಡನೆ ವಾಸಿಸಲು ಬಯಸುತ್ತೇನೆ ಎಂದು ಹೇಳಿ, ಇಪ್ಪತ್ತೊಂದು ರಾತ್ರಿಗಳು ಮಲಗಿದ್ದು, ಅರಮನೆಯಿಂದ ಹೊರಟು ಅಂತರ್ಧಾನನಾದುದು (೮-೩೯).

13052001 ಯುಧಿಷ್ಠಿರ ಉವಾಚ|

13052001a ಸಂಶಯೋ ಮೇ ಮಹಾಪ್ರಾಜ್ಞ ಸುಮಹಾನ್ಸಾಗರೋಪಮಃ|

13052001c ತನ್ಮೇ ಶೃಣು ಮಹಾಬಾಹೋ ಶ್ರುತ್ವಾ ಚಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ಮಹಾಬಾಹೋ! ನನ್ನಲ್ಲಿ ಸಾಗರದಂತಿರುವ ಮಹಾ ಸಂಶಯವುಂಟಾಗಿದೆ. ಅದನ್ನು ಕೇಳು. ಕೇಳಿ ಅದರ ಕುರಿತು ನನಗೆ ಹೇಳಬೇಕು.

13052002a ಕೌತೂಹಲಂ ಮೇ ಸುಮಹಜ್ಜಾಮದಗ್ನ್ಯಂ ಪ್ರತಿ ಪ್ರಭೋ|

13052002c ರಾಮಂ ಧರ್ಮಭೃತಾಂ ಶ್ರೇಷ್ಠಂ ತನ್ಮೇ ವ್ಯಾಖ್ಯಾತುಮರ್ಹಸಿ||

ಪ್ರಭೋ! ಧರ್ಮಭೃತರಲ್ಲಿ ಶ್ರೇಷ್ಠ ಜಾಮದಗ್ನಿ ರಾಮನ ಕುರಿತು ನನ್ನಲ್ಲಿ ಮಹಾ ಕುತೂಹಲವುಂಟಾಗಿದೆ. ಅದರ ಕುರಿತು ನನಗೆ ಹೇಳಬೇಕು.

13052003a ಕಥಮೇಷ ಸಮುತ್ಪನ್ನೋ ರಾಮಃ ಸತ್ಯಪರಾಕ್ರಮಃ|

13052003c ಕಥಂ ಬ್ರಹ್ಮರ್ಷಿವಂಶೇ ಚ ಕ್ಷತ್ರಧರ್ಮಾ ವ್ಯಜಾಯತ||

ಸತ್ಯಪರಾಕ್ರಮ ರಾಮನು ಹೇಗೆ ಜನಿಸಿದನು? ಕ್ಷತ್ರಧರ್ಮವನ್ನು ಅನುಸರಿಸುವ ಅವನು ಬ್ರಹ್ಮರ್ಷಿವಂಶದಲ್ಲಿ ಹೇಗೆ ಜನಿಸಿದನು?

13052004a ತದಸ್ಯ ಸಂಭವಂ ರಾಜನ್ನಿಖಿಲೇನಾನುಕೀರ್ತಯ|

13052004c ಕೌಶಿಕಾಚ್ಚ ಕಥಂ ವಂಶಾತ್ಕ್ಷತ್ರಾದ್ವೈ ಬ್ರಾಹ್ಮಣೋಽಭವತ್||

ರಾಜನ್! ಅವನ ಸಂಭವದ ಕುರಿತು ಅಖಿಲವನ್ನೂ ನನಗೆ ಹೇಳು. ಮತ್ತು ಕ್ಷತ್ರಿಯ ವಂಶದಲ್ಲಿ ಹುಟ್ಟಿದ ಕೌಶಿಕನೂ ಕೂಡ ಬ್ರಾಹ್ಮಣನು ಹೇಗಾದನು?

13052005a ಅಹೋ ಪ್ರಭಾವಃ ಸುಮಹಾನಾಸೀದ್ವೈ ಸುಮಹಾತ್ಮನೋಃ|

13052005c ರಾಮಸ್ಯ ಚ ನರವ್ಯಾಘ್ರ ವಿಶ್ವಾಮಿತ್ರಸ್ಯ ಚೈವ ಹ||

ನರವ್ಯಾಘ್ರ! ಅಹೋ! ಸುಮಹಾತ್ಮರಾದ ರಾಮ ಮತ್ತು ವಿಶ್ವಾಮಿತ್ರರ ಪ್ರಭಾವವು ಮಹತ್ತರವಾದುದು.

13052006a ಕಥಂ ಪುತ್ರಾನತಿಕ್ರಮ್ಯ ತೇಷಾಂ ನಪ್ತೃಷ್ವಥಾಭವತ್|

13052006c ಏಷ ದೋಷಃ ಸುತಾನ್ ಹಿತ್ವಾ ತನ್ಮೇ ವ್ಯಾಖ್ಯಾತುಮರ್ಹಸಿ||

ಕುಶಿಕನ ಮಗನು ಗಾಧಿ ಮತ್ತು ಋಚೀಕನ ಮಗನು ಜಮದಗ್ನಿ. ಇವರನ್ನು ಅತಿಕ್ರಮಿಸಿ ಇವರ ಮಕ್ಕಳಾದ ವಿಶ್ವಾಮಿತ್ರ-ಪರಶುರಾಮರಿಗೆ ವರ್ಣವಿನಿಮಯದೋಷವು ಹೇಗೆ ಉಂಟಾಯಿತು? ಇದರ ಕುರಿತು ಹೇಳಬೇಕು.”

13052007 ಭೀಷ್ಮ ಉವಾಚ|

13052007a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13052007c ಚ್ಯವನಸ್ಯ ಚ ಸಂವಾದಂ ಕುಶಿಕಸ್ಯ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಚ್ಯವನ ಮತ್ತು ಕುಶಿಕರ ಸಂವಾದವನ್ನು ಉದಾಹರಿಸುತ್ತಾರೆ.

13052008a ಏತಂ ದೋಷಂ ಪುರಾ ದೃಷ್ಟ್ವಾ ಭಾರ್ಗವಶ್ಚ್ಯವನಸ್ತದಾ|

13052008c ಆಗಾಮಿನಂ ಮಹಾಬುದ್ಧಿಃ ಸ್ವವಂಶೇ ಮುನಿಪುಂಗವಃ||

13052009a ಸಂಚಿಂತ್ಯ ಮನಸಾ ಸರ್ವಂ ಗುಣದೋಷಬಲಾಬಲಮ್|

13052009c ದಗ್ಧುಕಾಮಃ ಕುಲಂ ಸರ್ವಂ ಕುಶಿಕಾನಾಂ ತಪೋಧನಃ||

13052010a ಚ್ಯವನಸ್ತಮನುಪ್ರಾಪ್ಯ ಕುಶಿಕಂ ವಾಕ್ಯಮಬ್ರವೀತ್|

13052010c ವಸ್ತುಮಿಚ್ಚಾ ಸಮುತ್ಪನ್ನಾ ತ್ವಯಾ ಸಹ ಮಮಾನಘ||

ಮಹಾಬುದ್ಧಿ ಮುನಿಪುಂಗವ ಭಾರ್ಗವ ಚ್ಯವನನು ತನ್ನ ವಂಶದಲ್ಲಿ ಮುಂದೆ ಆಗಲಿದ್ದುದನ್ನು ಮೊದಲೇ ಕಂಡಿದ್ದನು. ಅದರ ಗುಣದೋಷ- ಬಲಾಬಲಗಳೆಲ್ಲವನ್ನೂ ಮನಸ್ಸಿನಲ್ಲಿಯೇ ಯೋಚಿಸಿ ಕುಶಿಕರ ಕುಲವೆಲ್ಲವನ್ನೂ ಭಸ್ಮಮಾಡಲು ಬಯಸಿ ಆ ತಪೋಧನ ಚ್ಯವನನು ಕುಶಿಕನ ಬಳಿಬಂದು “ಅನಘ! ನಿನ್ನೊಡನೆ ವಾಸಿಸುವ ಇಚ್ಛೆಯು ನನ್ನಲ್ಲುಂಟಾಗಿದೆ” ಎಂದನು.

13052011 ಕುಶಿಕ ಉವಾಚ|

13052011a ಭಗವನ್ಸಹಧರ್ಮೋಽಯಂ ಪಂಡಿತೈರಿಹ ಧಾರ್ಯತೇ|

13052011c ಪ್ರದಾನಕಾಲೇ ಕನ್ಯಾನಾಮುಚ್ಯತೇ ಚ ಸದಾ ಬುಧೈಃ||

ಕುಶಿಕನು ಹೇಳಿದನು: “ಭಗವನ್! ಈ ಸಹಧರ್ಮವನ್ನು ಪಂಡಿತರು ಧಾರಣೆಮಾಡಿಕೊಂಡಿರುತ್ತಾರೆ. ತಿಳಿದವರು ಕನ್ಯಾದಾನದ ಸಮಯದಲ್ಲಿ ಸದಾ ಇದರ ಕುರಿತು ಹೇಳುತ್ತಾರೆ.

13052012a ಯತ್ತು ತಾವದತಿಕ್ರಾಂತಂ ಧರ್ಮದ್ವಾರಂ ತಪೋಧನ|

13052012c ತತ್ಕಾರ್ಯಂ ಪ್ರಕರಿಷ್ಯಾಮಿ ತದನುಜ್ಞಾತುಮರ್ಹಸಿ||

ತಪೋಧನ! ನಾನು ಈ ಧರ್ಮದ್ವಾರವನ್ನು ಇನ್ನೂ ಅತಿಕ್ರಮಿಸಿಲ್ಲ. ಆ ಕಾರ್ಯವನ್ನೂ ಮಾಡುತ್ತೇನೆ. ಅದಕ್ಕೆ ಅನುಮತಿಯನ್ನು ನೀಡಬೇಕು.””

13052013 ಭೀಷ್ಮ ಉವಾಚ|

13052013a ಅಥಾಸನಮುಪಾದಾಯ ಚ್ಯವನಸ್ಯ ಮಹಾಮುನೇಃ|

13052013c ಕುಶಿಕೋ ಭಾರ್ಯಯಾ ಸಾರ್ಧಮಾಜಗಾಮ ಯತೋ ಮುನಿಃ||

ಭೀಷ್ಮನು ಹೇಳಿದನು: “ಕೂಡಲೇ ಕುಶಿಕನು ಭಾರ್ಯೆಯೊಡಗೂಡಿ ಮಹಾಮುನಿ ಚ್ಯವನನನ್ನು ಆಸನದಲ್ಲಿ ಕುಳ್ಳಿರಿಸಿದನು. ಮುನಿಯು ಕುಳಿತುಕೊಂಡನು.

13052014a ಪ್ರಗೃಹ್ಯ ರಾಜಾ ಭೃಂಗಾರಂ ಪಾದ್ಯಮಸ್ಮೈ ನ್ಯವೇದಯತ್|

13052014c ಕಾರಯಾಮಾಸ ಸರ್ವಾಶ್ಚ ಕ್ರಿಯಾಸ್ತಸ್ಯ ಮಹಾತ್ಮನಃ||

ರಾಜನು ಬಿಂದಿಗೆಯನ್ನು ಹಿಡಿದು ಪಾದ್ಯವನ್ನು ನೀಡಿದನು. ಆ ಮಹಾತ್ಮನ ಸರ್ವ ಕ್ರಿಯೆಗಳನ್ನೂ ಮಾಡತೊಡಗಿದನು.

13052015a ತತಃ ಸ ರಾಜಾ ಚ್ಯವನಂ ಮಧುಪರ್ಕಂ ಯಥಾವಿಧಿ|

13052015c ಪ್ರತ್ಯಗ್ರಾಹಯದವ್ಯಗ್ರೋ ಮಹಾತ್ಮಾ ನಿಯತವ್ರತಃ||

ಅನಂತರ ರಾಜನು ಯಥಾವಿಧಿಯಾಗಿ ಚ್ಯವನನಿಗೆ ಮಧುಪರ್ಕವನ್ನಿತ್ತನು. ಮಹಾತ್ಮಾ ನಿಯತವ್ರತ ಅವ್ಯಗ್ರ ಚ್ಯವನನು ಅವುಗಳನ್ನು ಸ್ವೀಕರಿಸಿದನು.

13052016a ಸತ್ಕೃತ್ಯ ಸ ತಥಾ ವಿಪ್ರಮಿದಂ ವಚನಮಬ್ರವೀತ್|

13052016c ಭಗವನ್ಪರವಂತೌ ಸ್ವೋ ಬ್ರೂಹಿ ಕಿಂ ಕರವಾವಹೇ||

ಹಾಗೆ ಸತ್ಕರಿಸಿ ಅವನು ವಿಪ್ರನಿಗೆ ಈ ಮಾತನ್ನಾಡಿದನು: “ಭಗವನ್! ನಾವಿಬ್ಬರೂ ನಿನ್ನ ಅಧೀನರಾಗಿದ್ದೇವೆ. ಏನು ಮಾಡಬೇಕೆನ್ನುವುದನ್ನು ಹೇಳು.

13052017a ಯದಿ ರಾಜ್ಯಂ ಯದಿ ಧನಂ ಯದಿ ಗಾಃ ಸಂಶಿತವ್ರತ|

13052017c ಯಜ್ಞದಾನಾನಿ ಚ ತಥಾ ಬ್ರೂಹಿ ಸರ್ವಂ ದದಾಮಿ ತೇ||

ಸಂಶಿತವ್ರತ! ಒಂದು ವೇಳೆ ರಾಜ್ಯ, ಅಥವಾ ಧನ ಅಥವಾ ಗೋವುಗಳು, ಅಥವಾ ಯಜ್ಞದಾನಗಳು – ಹೇಳು. ಸರ್ವವನ್ನೂ ನಿನಗೆ ಕೊಡುತ್ತೇನೆ.

13052018a ಇದಂ ಗೃಹಮಿದಂ ರಾಜ್ಯಮಿದಂ ಧರ್ಮಾಸನಂ ಚ ತೇ|

13052018c ರಾಜಾ ತ್ವಮಸಿ ಶಾಧ್ಯುರ್ವೀಂ ಭೃತ್ಯೋಽಹಂ ಪರವಾಂಸ್ತ್ವಯಿ||

ಈ ಅರಮನೆ, ಈ ರಾಜ್ಯ, ಈ ಧರ್ಮಾಸನ ಎಲ್ಲವೂ ನಿನ್ನದೇ. ನೀನೇ ರಾಜನಾಗಿ ಈ ಭೂಮಿಯನ್ನು ಆಳು. ನಿನ್ನ ಸೇವಕನು ನಾನು. ಒಡೆಯನು ನೀನು.”

13052019a ಏವಮುಕ್ತೇ ತತೋ ವಾಕ್ಯೇ ಚ್ಯವನೋ ಭಾರ್ಗವಸ್ತದಾ|

13052019c ಕುಶಿಕಂ ಪ್ರತ್ಯುವಾಚೇದಂ ಮುದಾ ಪರಮಯಾ ಯುತಃ||

ಈ ಮಾತನ್ನು ಕೇಳಿ ಭಾರ್ಗವ ಚ್ಯವನನು ಅತ್ಯಂತ ಮುದಿತನಾಗಿ ಕುಶಿಕನಿಗೆ ಈ ಮಾತನ್ನಾಡಿದನು:

13052020a ನ ರಾಜ್ಯಂ ಕಾಮಯೇ ರಾಜನ್ನ ಧನಂ ನ ಚ ಯೋಷಿತಃ|

13052020c ನ ಚ ಗಾ ನ ಚ ತೇ ದೇಶಾನ್ನ ಯಜ್ಞಾನ್ಶ್ರೂಯತಾಮಿದಮ್||

“ರಾಜನ್! ರಾಜ್ಯ, ಧನ, ದಾಸಿಯರು, ಗೋವುಗಳು, ದೇಶ, ಯಜ್ಞಗಳು ಯಾವುದನ್ನೂ ಬಯಸುತ್ತಿಲ್ಲ. ಇದನ್ನು ಕೇಳಬೇಕು.

13052021a ನಿಯಮಂ ಕಂ ಚಿದಾರಪ್ಸ್ಯೇ ಯುವಯೋರ್ಯದಿ ರೋಚತೇ|

13052021c ಪರಿಚರ್ಯೋಽಸ್ಮಿ ಯತ್ತಾಭ್ಯಾಂ ಯುವಾಭ್ಯಾಮವಿಶಂಕಯಾ||

ನಿಮಗಿಬ್ಬರಿಗೂ ಒಪ್ಪಿಗೆಯಿದೆಯಾದರೆ ನಾನೊಂದು ನಿಯಮವ್ರತವನ್ನು ಆರಂಭಿಸುತ್ತೇನೆ. ನಾನು ವ್ರತದಲ್ಲಿರುವಾಗ ನೀವಿಬ್ಬರೂ ನಿಃಶಂಕರಾಗಿ ಪ್ರಯತ್ನಪಟ್ಟು ನನ್ನ ಸೇವೆಗೈಯಬೇಕು.”

13052022a ಏವಮುಕ್ತೇ ತದಾ ತೇನ ದಂಪತೀ ತೌ ಜಹರ್ಷತುಃ|

13052022c ಪ್ರತ್ಯಬ್ರೂತಾಂ ಚ ತಮೃಷಿಮೇವಮಸ್ತ್ವಿತಿ ಭಾರತ||

ಭಾರತ! ಇದನ್ನು ಕೇಳಿದ ಆ ದಂಪತಿಗಳು ಹರ್ಷಿತರಾದರು. ಹಾಗೆಯೇ ಆಗಲೆಂದು ಅವರು ಆ ಋಷಿಗೆ ಉತ್ತರಿಸಿದರು ಕೂಡ.

13052023a ಅಥ ತಂ ಕುಶಿಕೋ ಹೃಷ್ಟಃ ಪ್ರಾವೇಶಯದನುತ್ತಮಮ್|

13052023c ಗೃಹೋದ್ದೇಶಂ ತತಸ್ತತ್ರ ದರ್ಶನೀಯಮದರ್ಶಯತ್||

ಆಗ ಕುಶಿಕನು ಹೃಷ್ಟನಾಗಿ ಅವನನ್ನು ತನ್ನ ಅನುತ್ತಮ ಅರಮನೆಗೆ ಪ್ರವೇಶಿಸಿ ಅಲ್ಲಿದ್ದ ಸುಂದರ ಕೋಣೆಯನ್ನು ಅವನಿಗೆ ತೋರಿಸಿದನು.

13052024a ಇಯಂ ಶಯ್ಯಾ ಭಗವತೋ ಯಥಾಕಾಮಮಿಹೋಷ್ಯತಾಮ್|

13052024c ಪ್ರಯತಿಷ್ಯಾವಹೇ ಪ್ರೀತಿಮಾಹರ್ತುಂ ತೇ ತಪೋಧನ||

“ತಪೋಧನ! ಇದು ಶಯನವು. ಇಚ್ಛಾನುಸಾರವಾಗಿ ನೀನು ಇಲ್ಲಿ ಇರಬಹುದು. ನಿನ್ನ ಸಂತೋಷಕ್ಕೆ ಸತತವೂ ನಾವು ಪ್ರಯತ್ನಿಸುತ್ತೇವೆ.”

13052025a ಅಥ ಸೂರ್ಯೋಽತಿಚಕ್ರಾಮ ತೇಷಾಂ ಸಂವದತಾಂ ತಥಾ|

13052025c ಅಥರ್ಷಿಶ್ಚೋದಯಾಮಾಸ ಪಾನಮನ್ನಂ ತಥೈವ ಚ||

ಅವರು ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಸೂರ್ಯಾಸ್ತವಾಯಿತು. ಆಗ ಋಷಿಯು ಅನ್ನ-ಪಾನೀಯಗಳನ್ನು ಕೇಳಿದನು.

13052026a ತಮಪೃಚ್ಚತ್ತತೋ ರಾಜಾ ಕುಶಿಕಃ ಪ್ರಣತಸ್ತದಾ|

13052026c ಕಿಮನ್ನಜಾತಮಿಷ್ಟಂ ತೇ ಕಿಮುಪಸ್ಥಾಪಯಾಮ್ಯಹಮ್||

ರಾಜಾ ಕುಶಿಕನು ತಲೆಬಾಗಿ ನಮಸ್ಕರಿಸಿ ಚ್ಯವನನನ್ನು ಕೇಳಿದನು: “ನಿನಗೆ ಎಂತಹ ಭೋಜನವು ಇಷ್ಟವಾದುದು? ನಿನ್ನ ಸೇವೆಗಾಗಿ ಯಾವ ಪದಾರ್ಥಗಳನ್ನು ಸಿದ್ಧಪಡಿಸಲಿ?”

13052027a ತತಃ ಸ ಪರಯಾ ಪ್ರೀತ್ಯಾ ಪ್ರತ್ಯುವಾಚ ಜನಾಧಿಪಮ್|

13052027c ಔಪಪತ್ತಿಕಮಾಹಾರಂ ಪ್ರಯಚ್ಚಸ್ವೇತಿ ಭಾರತ||

ಭಾರತ! ಆಗ ಅವನು ಪರಮ ಪ್ರೀತನಾಗಿ ಜನಾಧಿಪನಿಗೆ “ಈಗ ಸದ್ಯ ನಿನ್ನ ಮನೆಯಲ್ಲಿ ಸಿದ್ಧವಾಗಿರುವ ಯಥೋಚಿತವಾದ ಆಹಾರವನ್ನೇ ತಂದುಕೊಡು” ಎಂದನು.

13052028a ತದ್ವಚಃ ಪೂಜಯಿತ್ವಾ ತು ತಥೇತ್ಯಾಹ ಸ ಪಾರ್ಥಿವಃ|

13052028c ಯಥೋಪಪನ್ನಂ ಚಾಹಾರಂ ತಸ್ಮೈ ಪ್ರಾದಾಜ್ಜನಾಧಿಪಃ||

ಅವನ ಮಾತನ್ನು ಗೌರವಿಸಿ ಪಾರ್ಥಿವನು ಹಾಗೆಯೇ ಆಗಲಿ ಎಂದನು. ಆ ಜನಾಧಿಪನು ತಯಾರಿಸಿದ್ದ ಆಹಾರವನ್ನು ಅವನಿಗೆ ನೀಡಿದನು.

13052029a ತತಃ ಸ ಭಗವಾನ್ಭುಕ್ತ್ವಾ ದಂಪತೀ ಪ್ರಾಹ ಧರ್ಮವಿತ್|

13052029c ಸ್ವಪ್ತುಮಿಚ್ಚಾಮ್ಯಹಂ ನಿದ್ರಾ ಬಾಧತೇ ಮಾಮಿತಿ ಪ್ರಭೋ||

ಪ್ರಭೋ! ಆ ಧರ್ಮವಿದು ಭಗವಾನನು ಊಟಮಾಡಿ ದಂಪತಿಗಳಿಗೆ “ಮಲಗಲು ಬಯಸುತ್ತೇನೆ. ನಿದ್ರೆಯು ನನ್ನನ್ನು ಬಾಧಿಸುತ್ತಿದೆ” ಎಂದನು.

13052030a ತತಃ ಶಯ್ಯಾಗೃಹಂ ಪ್ರಾಪ್ಯ ಭಗವಾನೃಷಿಸತ್ತಮಃ|

13052030c ಸಂವಿವೇಶ ನರೇಂದ್ರಸ್ತು ಸಪತ್ನೀಕಃ ಸ್ಥಿತೋಽಭವತ್||

ಆಗ ಭಗವಾನ್ ಋಷಿಸತ್ತಮನು ಶಯ್ಯಾಗೃಹವನ್ನು ಸೇರಿ ಮಲಗಿದನು. ನರೇಂದ್ರನಾದರೋ ಅಲ್ಲಿಯೇ ಪತ್ನಿಯಸಮೇತ ನಿಂತುಕೊಂಡನು.

13052031a ನ ಪ್ರಬೋಧ್ಯೋಽಸ್ಮಿ ಸಂಸುಪ್ತ ಇತ್ಯುವಾಚಾಥ ಭಾರ್ಗವಃ|

13052031c ಸಂವಾಹಿತವ್ಯೌ ಪಾದೌ ಮೇ ಜಾಗರ್ತವ್ಯಂ ಚ ವಾಂ ನಿಶಿ||

“ಮಲಗಿರುವ ನನ್ನನ್ನು ಎಬ್ಬಿಸಬಾರದು. ರಾತ್ರಿಯಿಡೀ ಎಚ್ಚೆತ್ತು ನೀವು ನನ್ನ ಪಾದಗಳೆರಡನ್ನೂ ಒತ್ತುತ್ತಿರಬೇಕು” ಎಂದು ಭಾರ್ಗವನು ಹೇಳಿದನು.

13052032a ಅವಿಶಂಕಶ್ಚ ಕುಶಿಕಸ್ತಥೇತ್ಯಾಹ ಸ ಧರ್ಮವಿತ್|

13052032c ನ ಪ್ರಬೋಧಯತಾಂ ತಂ ಚ ತೌ ತದಾ ರಜನೀಕ್ಷಯೇ||

ಶಂಕೆಗೊಳ್ಳದ ಧರ್ಮವಿದು ಕುಶಿಕನು ಹಾಗೆಯೇ ಆಗಲೆಂದು ಹೇಳಿದನು. ರಾತ್ರಿಯು ಕಳೆದರೂ ಅವರಿಬ್ಬರೂ ಅವನನ್ನು ಎಚ್ಚರಿಸಲಿಲ್ಲ.

13052033a ಯಥಾದೇಶಂ ಮಹರ್ಷೇಸ್ತು ಶುಶ್ರೂಷಾಪರಮೌ ತದಾ|

13052033c ಬಭೂವತುರ್ಮಹಾರಾಜ ಪ್ರಯತಾವಥ ದಂಪತೀ||

ಮಹಾರಾಜ! ಆ ದಂಪತಿಗಳಿಬ್ಬರೂ ಮಹರ್ಷಿಯ ಪಕ್ಕದಲ್ಲಿಯೇ ಅವನ ಪರಮ ಶುಶ್ರೂಷೆಯಲ್ಲಿಯೇ ನಿರತರಾಗಿದ್ದರು.

13052034a ತತಃ ಸ ಭಗವಾನ್ವಿಪ್ರಃ ಸಮಾದಿಶ್ಯ ನರಾಧಿಪಮ್|

13052034c ಸುಷ್ವಾಪೈಕೇನ ಪಾರ್ಶ್ವೇನ ದಿವಸಾನೇಕವಿಂಶತಿಮ್||

ಆ ಭಗವಾನ್ ವಿಪ್ರನು ರಾಜನಿಗೆ ಹಾಗೆ ಆದೇಶವನ್ನಿತ್ತು ಇಪ್ಪತ್ತೊಂದು ದಿವಸಗಳ ವರೆಗೆ ಒಂದೇ ಮಗ್ಗುಲಿನಲ್ಲಿ ಮಲಗಿದ್ದನು.

13052035a ಸ ತು ರಾಜಾ ನಿರಾಹಾರಃ ಸಭಾರ್ಯಃ ಕುರುನಂದನ|

13052035c ಪರ್ಯುಪಾಸತ ತಂ ಹೃಷ್ಟಶ್ಚ್ಯವನಾರಾಧನೇ ರತಃ||

ಕುರುನಂದನ! ಆ ರಾಜನಾದರೋ ಪತ್ನಿಯೊಡನೆ ನಿರಾಹಾರಿಯಾಗಿ ಸಂತೋಷದಿಂದ ಚ್ಯವನನ ಆರಾಧನೆಯಲ್ಲಿಯೇ ನಿರತನಾಗಿದ್ದನು.

13052036a ಭಾರ್ಗವಸ್ತು ಸಮುತ್ತಸ್ಥೌ ಸ್ವಯಮೇವ ತಪೋಧನಃ|

13052036c ಅಕಿಂಚಿದುಕ್ತ್ವಾ ತು ಗೃಹಾನ್ನಿಶ್ಚಕ್ರಾಮ ಮಹಾತಪಾಃ||

ಅನಂತರ ತಪೋಧನ ಮಹಾತಪಸ್ವಿ ಭಾರ್ಗವನಾದರೋ ಸ್ವಯಂ ಮೇಲೆದ್ದು ಏನನ್ನೂ ಮಾತನಾಡದೇ ಅರಮನೆಯಿಂದ ಹೊರ ಹೊರಟನು.

13052037a ತಮನ್ವಗಚ್ಚತಾಂ ತೌ ತು ಕ್ಷುಧಿತೌ ಶ್ರಮಕರ್ಶಿತೌ|

13052037c ಭಾರ್ಯಾಪತೀ ಮುನಿಶ್ರೇಷ್ಠೋ ನ ಚ ತಾವವಲೋಕಯತ್||

ಹಸಿವು ಬಳಲಿಕೆಯಿಂದ ಸೋತುಹೋಗಿದ್ದ ಆ ಪತಿಪತ್ನಿಯರಿಬ್ಬರೂ ಅವನನ್ನು ಅನುಸರಿಸಿ ಹೋದರು. ಆದರೆ ಮುನಿಶ್ರೇಷ್ಠನು ಅವರನ್ನು ನೋಡಲೂ ಇಲ್ಲ.

13052038a ತಯೋಸ್ತು ಪ್ರೇಕ್ಷತೋರೇವ ಭಾರ್ಗವಾಣಾಂ ಕುಲೋದ್ವಹಃ|

13052038c ಅಂತರ್ಹಿತೋಽಭೂದ್ರಾಜೇಂದ್ರ ತತೋ ರಾಜಾಪತತ್ಕ್ಷಿತೌ||

ರಾಜೇಂದ್ರ! ಆಗ ಅವರಿಬ್ಬರೂ ನೋಡುತ್ತಿದ್ದ ಹಾಗೆಯೇ ಭಾರ್ಗವರ ಕುಲೋದ್ವಹನು ಅಂತರ್ಹಿತನಾಗಿಬಿಟ್ಟನು. ಒಡನೆಯೇ ರಾಜನು ಭೂಮಿಯ ಮೇಲೆ ಬಿದ್ದುಬಿಟ್ಟನು.

13052039a ಸ ಮುಹೂರ್ತಂ ಸಮಾಶ್ವಸ್ಯ ಸಹ ದೇವ್ಯಾ ಮಹಾದ್ಯುತಿಃ|

13052039c ಪುನರನ್ವೇಷಣೇ ಯತ್ನಮಕರೋತ್ಪರಮಂ ತದಾ||

ಮುಹೂರ್ತದಲ್ಲಿಯೇ ಸುಧಾರಿಸಿಕೊಂಡ ಮಹಾದ್ಯುತಿಯು ದೇವಿಯೊಡಗೂಡಿ ಪುನಃ ಅವನನ್ನು ಅನ್ವೇಷಿಸಲು ಪರಮ ಯತ್ನವನ್ನು ಮಾಡಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ತೆರಡನೇ ಅಧ್ಯಾಯವು.

Related image

Comments are closed.