Anushasana Parva: Chapter 51

ಅನುಶಾಸನ ಪರ್ವ: ದಾನಧರ್ಮ ಪರ್ವ

೫೧

ಚ್ಯವನ-ನಹುಷ ಸಂವಾದ

“ಮೀನುಗಳೊಂದಿಗೆ ನನ್ನನ್ನು ಇವರಿಂದ ಕೇಳಿ ಖರೀದಿಸು” ಎಂದು ಚ್ಯವನನು ನಹುಷನಿಗೆ ಹೇಳಿದ್ದುದು (೧-೫). ಚ್ಯವನನ ಸರಿಯಾದ ಮೌಲ್ಯದ ಕುರಿತು ನಹುಷ-ಚ್ಯವನರ ಸಂವಾದ (೬-೧೩). ಗೋವಿಗೆ ಬೆಲೆಕಟ್ಟಲಾಗುವುದಿಲ್ಲವಾದುದರಿಂದ ಗೋವೇ ಚ್ಯವನನ ಮೌಲ್ಯವೆಂದು ಓರ್ವ ಮುನಿಯ ಸಹಾಯದಿಂದ ನಿರ್ಧರಿಸಿ ನಹುಷನು ಬೆಸ್ತರಿಗೆ ಗೋವನ್ನು ನೀಡಿದುದು (೧೪-೨೫). ಚ್ಯವನನು ಗೋವಿನ ಮಹಾತ್ಮೆಯನ್ನು ತಿಳಿಸಿ, ಆಶ್ರಮಕ್ಕೆ ತೆರಳಿದುದು (೨೬-೪೮).

13051001 ಭೀಷ್ಮ ಉವಾಚ|

13051001a ನಹುಷಸ್ತು ತತಃ ಶ್ರುತ್ವಾ ಚ್ಯವನಂ ತಂ ತಥಾಗತಮ್|

13051001c ತ್ವರಿತಃ ಪ್ರಯಯೌ ತತ್ರ ಸಹಾಮಾತ್ಯಪುರೋಹಿತಃ||

ಭೀಷ್ಮನು ಹೇಳಿದನು: “ಚ್ಯವನನ ಆ ಅವಸ್ಥೆಯನ್ನು ಕೇಳಿದ ನಹುಷನಾದರೋ ತನ್ನ ಅಮಾತ್ಯ-ಪುರೋಹಿತರನ್ನೊಡಗೂಡಿಕೊಂಡು ತ್ವರೆಮಾಡಿ ಅಲ್ಲಿಗೆ ಆಗಮಿಸಿದನು.

13051002a ಶೌಚಂ ಕೃತ್ವಾ ಯಥಾನ್ಯಾಯಂ ಪ್ರಾಂಜಲಿಃ ಪ್ರಯತೋ ನೃಪಃ|

13051002c ಆತ್ಮಾನಮಾಚಚಕ್ಷೇ ಚ ಚ್ಯವನಾಯ ಮಹಾತ್ಮನೇ||

ಯಥಾನ್ಯಾಯವಾಗಿ ಶುಚಿಮಾಡಿಕೊಂಡು ಅಂಜಲೀಬದ್ಧನಾಗಿ ನೃಪನು ಮಹಾತ್ಮ ಚ್ಯವನನಿಗೆ ತನ್ನ ಪರಿಚಯ ಮಾಡಿಕೊಂಡನು.

13051003a ಅರ್ಚಯಾಮಾಸ ತಂ ಚಾಪಿ ತಸ್ಯ ರಾಜ್ಞಃ ಪುರೋಹಿತಃ|

13051003c ಸತ್ಯವ್ರತಂ ಮಹಾಭಾಗಂ ದೇವಕಲ್ಪಂ ವಿಶಾಂ ಪತೇ||

ವಿಶಾಂಪತೇ! ರಾಜನ ಪುರೋಹಿತನೂ ಕೂಡ ದೇವಕಲ್ಪ ಮಹಾಭಾಗ ಸತ್ಯವ್ರತ ಚ್ಯವನನನ್ನು ಅರ್ಚಿಸಿದನು.

13051004 ನಹುಷ ಉವಾಚ|

13051004a ಕರವಾಣಿ ಪ್ರಿಯಂ ಕಿಂ ತೇ ತನ್ಮೇ ವ್ಯಾಖ್ಯಾತುಮರ್ಹಸಿ|

13051004c ಸರ್ವಂ ಕರ್ತಾಸ್ಮಿ ಭಗವನ್ಯದ್ಯಪಿ ಸ್ಯಾತ್ಸುದುಷ್ಕರಮ್||

ನಹುಷನು ಹೇಳಿದನು: “ಭಗವನ್! ನಿನಗೆ ಪ್ರಿಯವಾದುದನ್ನು ಏನನ್ನು ಮಾಡಬೇಕು. ಅದನ್ನು ನನಗೆ ಹೇಳಬೇಕು. ದುಷ್ಕರವೆನಿಸಿದ್ದರೂ ಅವೆಲ್ಲವನ್ನೂ ಮಾಡುತ್ತೇನೆ.”

13051005 ಚ್ಯವನ ಉವಾಚ|

13051005a ಶ್ರಮೇಣ ಮಹತಾ ಯುಕ್ತಾಃ ಕೈವರ್ತಾ ಮತ್ಸ್ಯಜೀವಿನಃ|

13051005c ಮಮ ಮೂಲ್ಯಂ ಪ್ರಯಚ್ಚೈಭ್ಯೋ ಮತ್ಸ್ಯಾನಾಂ ವಿಕ್ರಯೈಃ ಸಹ||

ಚ್ಯವನನು ಹೇಳಿದನು: “ಬಹಳ ಶ್ರಮಪಟ್ಟು ಈ ಬೆಸ್ತರು ನನ್ನನ್ನು ಮೇಲಕ್ಕೆ ಎಳೆದಿದ್ದಾರೆ. ಮೀನುಗಳೊಂದಿಗೆ ನನ್ನನ್ನು ಇವರಿಂದ ಕೇಳಿ ಖರೀದಿಸು.”

13051006 ನಹುಷ ಉವಾಚ|

13051006a ಸಹಸ್ರಂ ದೀಯತಾಂ ಮೂಲ್ಯಂ ನಿಷಾದೇಭ್ಯಃ ಪುರೋಹಿತ|

13051006c ನಿಷ್ಕ್ರಯಾರ್ಥಂ ಭಗವತೋ ಯಥಾಹ ಭೃಗುನಂದನಃ||

ನಹುಷನು ಹೇಳಿದನು: “ಪುರೋಹಿತ! ಭಗವಾನ್ ಭೃಗುನಂದನನು ಹೇಳಿದಂತೆ ಇವರನ್ನು ಕೊಂಡುಕೊಳ್ಳಲು ಬೆಸ್ತರಿಗೆ ಸಹಸ್ರ ನಾಣ್ಯಗಳನ್ನು ಕೊಡಿ!”

13051007 ಚ್ಯವನ ಉವಾಚ|

13051007a ಸಹಸ್ರಂ ನಾಹಮರ್ಹಾಮಿ ಕಿಂ ವಾ ತ್ವಂ ಮನ್ಯಸೇ ನೃಪ|

13051007c ಸದೃಶಂ ದೀಯತಾಂ ಮೂಲ್ಯಂ ಸ್ವಬುದ್ಧ್ಯಾ ನಿಶ್ಚಯಂ ಕುರು||

ಚ್ಯವನನು ಹೇಳಿದನು: “ನೃಪ! ಸಹಸ್ರ ನಾಣ್ಯಗಳಿಗೆ ನಾನು ಸಿಗತಕ್ಕವನಲ್ಲ. ನಾನು ಅಷ್ಟೊಂದು ಕಡಿಮೆ ಬೆಲೆಯವನು ಎಂದು ತಿಳಿದುಕೊಂಡೆಯಾ? ನನ್ನ ಸದೃಶವಾದ ಬೆಲೆಯನ್ನು ಕೊಡಬೇಕು. ಸ್ವಬುದ್ಧಿಯಿಂದ ನಿಶ್ಚಯಿಸು.”

13051008 ನಹುಷ ಉವಾಚ|

13051008a ಸಹಸ್ರಾಣಾಂ ಶತಂ ಕ್ಷಿಪ್ರಂ ನಿಷಾದೇಭ್ಯಃ ಪ್ರದೀಯತಾಮ್|

13051008c ಸ್ಯಾದೇತತ್ತು ಭವೇನ್ಮೂಲ್ಯಂ ಕಿಂ ವಾನ್ಯನ್ಮನ್ಯತೇ ಭವಾನ್||

ನಹುಷನು ಹೇಳಿದನು: “ಒಂದು ಲಕ್ಷ ನಾಣ್ಯಗಳನ್ನು ಬೇಗನೇ ಬೆಸ್ತರಿಗೆ ಕೊಡಿ. ಈ ಮೌಲ್ಯವು ಸಾಕಾಗಬಹುದೇ? ಅಥವಾ ಬೇರೆ ಹೆಚ್ಚಿನದನ್ನು ಯೋಚಿಸುತ್ತಿರುವಿರೇ?”

13051009 ಚ್ಯವನ ಉವಾಚ|

13051009a ನಾಹಂ ಶತಸಹಸ್ರೇಣ ನಿಮೇಯಃ ಪಾರ್ಥಿವರ್ಷಭ|

13051009c ದೀಯತಾಂ ಸದೃಶಂ ಮೂಲ್ಯಮಮಾತ್ಯೈಃ ಸಹ ಚಿಂತಯ||

ಚ್ಯವನನು ಹೇಳಿದನು: “ಪಾರ್ಥಿವರ್ಷಭ! ಒಂದು ನೂರು ಸಾವಿರಕ್ಕೆ ನಾನು ದೊರೆಯುವವನಲ್ಲ. ಅಮಾತ್ಯರೊಂದಿಗೆ ಚಿಂತಿಸಿ ಸದೃಶ ಮೌಲ್ಯವನ್ನು ಕೊಡಬೇಕು.”

13051010 ನಹುಷ ಉವಾಚ|

13051010a ಕೋಟಿಃ ಪ್ರದೀಯತಾಂ ಮೂಲ್ಯಂ ನಿಷಾದೇಭ್ಯಃ ಪುರೋಹಿತ|

13051010c ಯದೇತದಪಿ ನೌಪಮ್ಯಮತೋ ಭೂಯಃ ಪ್ರದೀಯತಾಮ್||

ನಹುಷನು ಹೇಳಿದನು: “ಪುರೋಹಿತ! ನಿಷಾದರಿಗೆ ಕೋಟಿ ನಾಣ್ಯಗಳನ್ನು ನೀಡಿರಿ. ಇದೂ ತಕ್ಕುದಾದ ಮೌಲ್ಯವಾಗದಿದ್ದರೆ ಇನ್ನೂ ಹೆಚ್ಚು ನಾಣ್ಯಗಳನ್ನು ಕೊಡಿರಿ.”

13051011 ಚ್ಯವನ ಉವಾಚ|

13051011a ರಾಜನ್ನಾರ್ಹಾಮ್ಯಹಂ ಕೋಟಿಂ ಭೂಯೋ ವಾಪಿ ಮಹಾದ್ಯುತೇ|

13051011c ಸದೃಶಂ ದೀಯತಾಂ ಮೂಲ್ಯಂ ಬ್ರಾಹ್ಮಣೈಃ ಸಹ ಚಿಂತಯ||

ಚ್ಯವನನು ಹೇಳಿದನು: “ಮಹಾದ್ಯುತೇ! ರಾಜನ್! ಕೋಟಿನಾಣ್ಯಗಳಿಂದಲೂ ನಾನು ವಿನಿಮಯಿಸಲ್ಪಡತಕ್ಕವನಲ್ಲ. ಅದಕ್ಕಿಂತಲೂ ಹೆಚ್ಚಿನ ನಾಣ್ಯಗಳಿಂದಲೂ ನನ್ನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಬ್ರಾಹ್ಮಣರೊಂದಿಗೆ ಸಮಾಲೋಚಿಸಿ ನನ್ನ ಮೌಲ್ಯವು ಎಷ್ಟೆಂದು ನಿಶ್ಚಯಿಸು.”

13051012 ನಹುಷ ಉವಾಚ|

13051012a ಅರ್ಧರಾಜ್ಯಂ ಸಮಗ್ರಂ ವಾ ನಿಷಾದೇಭ್ಯಃ ಪ್ರದೀಯತಾಮ್|

13051012c ಏತನ್ಮೂಲ್ಯಮಹಂ ಮನ್ಯೇ ಕಿಂ ವಾನ್ಯನ್ಮನ್ಯಸೇ ದ್ವಿಜ||

ನಹುಷನು ಹೇಳಿದನು: “ನಿಷಾದರಿಗೆ ಅರ್ಧರಾಜ್ಯ ಅಥವಾ ಸಮಗ್ರ ರಾಜ್ಯವನ್ನು ನೀಡಿರಿ. ದ್ವಿಜ! ಇದು ನಿನಗೆ ಸರಿಯಾದ ಬೆಲೆಯೆಂದೇ ಭಾವಿಸುತ್ತೇನೆ. ಅಥವಾ ನೀನು ಅನ್ಯವಾಗಿ ಯೋಚಿಸುತ್ತಿರುವೆಯಾ?”

13051013 ಚ್ಯವನ ಉವಾಚ|

13051013a ಅರ್ಧರಾಜ್ಯಂ ಸಮಗ್ರಂ ವಾ ನಾಹಮರ್ಹಾಮಿ ಪಾರ್ಥಿವ|

13051013c ಸದೃಶಂ ದೀಯತಾಂ ಮೂಲ್ಯಮೃಷಿಭಿಃ ಸಹ ಚಿಂತ್ಯತಾಮ್||

ಚ್ಯವನನು ಹೇಳಿದನು: “ಪಾರ್ಥಿವ! ಅರ್ಧರಾಜ್ಯವಾಗಲೀ ಪೂರ್ಣರಾಜ್ಯವಾಗಲೀ ನನ್ನ ಬೆಲೆಯಾಗುವುದಿಲ್ಲ. ಋಷಿಗಳೊಂದಿಗೆ ಸಮಾಲೋಚಿಸಿ ನನ್ನ ಸದೃಶ ಮೌಲ್ಯವನ್ನು ಕೊಡು.””

13051014 ಭೀಷ್ಮ ಉವಾಚ|

13051014a ಮಹರ್ಷೇರ್ವಚನಂ ಶ್ರುತ್ವಾ ನಹುಷೋ ದುಃಖಕರ್ಶಿತಃ|

13051014c ಸ ಚಿಂತಯಾಮಾಸ ತದಾ ಸಹಾಮಾತ್ಯಪುರೋಹಿತಃ||

ಭೀಷ್ಮನು ಹೇಳಿದನು: “ಮಹರ್ಷಿಯ ವಚನವನ್ನು ಕೇಳಿ ನಹುಷನು ದುಃಖಕರ್ಶಿತನಾದನು. ಆಗ ಅವನು ಅಮಾತ್ಯ-ಪುರೋಹಿತರೊಡನೆ ಸಮಾಲೋಚಿಸತೊಡಗಿದನು.

13051015a ತತ್ರ ತ್ವನ್ಯೋ ವನಚರಃ ಕಶ್ಚಿನ್ಮೂಲಫಲಾಶನಃ|

13051015c ನಹುಷಸ್ಯ ಸಮೀಪಸ್ಥೋ ಗವಿಜಾತೋಽಭವನ್ಮುನಿಃ||

ಆಗ ಅಲ್ಲಿ ನಹುಷನ ಬಳಿಗೆ ವನಗಳಲ್ಲಿ ಸಂಚರಿಸುತ್ತಿದ್ದ ಫಲಮೂಲಗಳನ್ನು ಸೇವಿಸುತ್ತಿದ್ದ ಗೋವಿನಲ್ಲಿ ಹುಟ್ಟಿದ್ದ ಓರ್ವ ಮುನಿಯು ಆಗಮಿಸಿದನು.

13051016a ಸ ಸಮಾಭಾಷ್ಯ ರಾಜಾನಮಬ್ರವೀದ್ದ್ವಿಜಸತ್ತಮಃ|

13051016c ತೋಷಯಿಷ್ಯಾಮ್ಯಹಂ ವಿಪ್ರಂ ಯಥಾ ತುಷ್ಟೋ ಭವಿಷ್ಯತಿ||

ಆ ದ್ವಿಜಸತ್ತಮನು ರಾಜನನ್ನು ಉದ್ದೇಶಿಸಿ ಹೇಳಿದನು: “ವಿಪ್ರನು ಹೇಗೆ ತೃಪ್ತನಾಗುವನೋ ಹಾಗೆ ನಾನು ಅವನನ್ನು ತೃಪ್ತಿಗೊಳಿಸುತ್ತೇನೆ.

13051017a ನಾಹಂ ಮಿಥ್ಯಾವಚೋ ಬ್ರೂಯಾಂ ಸ್ವೈರೇಷ್ವಪಿ ಕುತೋಽನ್ಯಥಾ|

13051017c ಭವತೋ ಯದಹಂ ಬ್ರೂಯಾಂ ತತ್ಕಾರ್ಯಮವಿಶಂಕಯಾ||

ನಾನು ಪರಿಹಾಸಕ್ಕೂ ಸುಳ್ಳನ್ನು ಹೇಳುವುದಿಲ್ಲ. ಈಗ ಹೇಗೆ ಸುಳ್ಳನ್ನು ಹೇಳಲಿ? ನಾನು ಹೇಳುವ ಕಾರ್ಯವನ್ನು ನೀನು ನಿಃಶಂಕನಾಗಿ ಮಾಡಬೇಕು.”

13051018 ನಹುಷ ಉವಾಚ|

13051018a ಬ್ರವೀತು ಭಗವಾನ್ಮೂಲ್ಯಂ ಮಹರ್ಷೇಃ ಸದೃಶಂ ಭೃಗೋಃ|

13051018c ಪರಿತ್ರಾಯಸ್ವ ಮಾಮಸ್ಮಾದ್ವಿಷಯಂ ಚ ಕುಲಂ ಚ ಮೇ||

ನಹುಷನು ಹೇಳಿದನು: “ಭಗವನ್! ಭೃಗು ಮಹರ್ಷಿಯ ಸದೃಶ ಮೌಲ್ಯವನ್ನು ಹೇಳಿ ನನ್ನ ಈ ರಾಷ್ಟ್ರ, ಕುಲ ಮತ್ತು ನನ್ನನ್ನೂ ಪರಿಪಾಲಿಸು.

13051019a ಹನ್ಯಾದ್ಧಿ ಭಗವಾನ್ಕ್ರುದ್ಧಸ್ತ್ರೈಲೋಕ್ಯಮಪಿ ಕೇವಲಮ್|

13051019c ಕಿಂ ಪುನರ್ಮಾಂ ತಪೋಹೀನಂ ಬಾಹುವೀರ್ಯಪರಾಯಣಮ್||

ಈ ಭಗವಾನನು ಕ್ರುದ್ಧನಾದರೆ ಮೂರುಲೋಕಗಳನ್ನೂ ಭಸ್ಮಮಾಡಬಲ್ಲನು. ಇನ್ನು ತಪೋಹೀನನಾಗಿರುವ ಮತ್ತು ಕೇವಲ ಬಾಹುವೀರ್ಯವನ್ನು ಅವಲಂಬಿಸಿರುವ ನಾನೇನು?

13051020a ಅಗಾಧೇಽಂಭಸಿ ಮಗ್ನಸ್ಯ ಸಾಮಾತ್ಯಸ್ಯ ಸಹರ್ತ್ವಿಜಃ|

13051020c ಪ್ಲವೋ ಭವ ಮಹರ್ಷೇ ತ್ವಂ ಕುರು ಮೂಲ್ಯವಿನಿಶ್ಚಯಮ್||

ಮಹರ್ಷೇ! ಅಮಾತ್ಯರು ಮತ್ತು ಪುರೋಹಿತರೊಂದಿಗೆ ಅಗಾಧ ಶೋಕಸಾಗರದಲ್ಲಿ ಮುಳುಗಿರುವ ನನಗೆ ಮೌಲ್ಯವನ್ನು ನಿಶ್ಚಯಿಸಿ ದೋಣಿಯಂತಾಗು.””

13051021 ಭೀಷ್ಮ ಉವಾಚ|

13051021a ನಹುಷಸ್ಯ ವಚಃ ಶ್ರುತ್ವಾ ಗವಿಜಾತಃ ಪ್ರತಾಪವಾನ್|

13051021c ಉವಾಚ ಹರ್ಷಯನ್ಸರ್ವಾನಮಾತ್ಯಾನ್ಪಾರ್ಥಿವಂ ಚ ತಮ್||

ಭೀಷ್ಮನು ಹೇಳಿದನು: “ನಹುಷನ ಮಾತನ್ನು ಕೇಳಿ ಗೋವಿನಲ್ಲಿ ಹುಟ್ಟಿದ್ದ ಆ ಪ್ರತಾಪವಾನನು ಹರ್ಷದಿಂದ ಎಲ್ಲ ಅಮಾತ್ಯರು ಮತ್ತು ಪಾರ್ಥಿವನಿಗೆ ಹೇಳಿದನು:

13051022a ಅನರ್ಘೇಯಾ ಮಹಾರಾಜ ದ್ವಿಜಾ ವರ್ಣಮಹತ್ತಮಾಃ|

13051022c ಗಾವಶ್ಚ ಪೃಥಿವೀಪಾಲ ಗೌರ್ಮೂಲ್ಯಂ ಪರಿಕಲ್ಪ್ಯತಾಮ್||

“ಮಹಾರಾಜ! ಪೃಥಿವೀಪಾಲ! ಮಹತ್ತರ ವರ್ಣದವರಾದ ದ್ವಿಜರಿಗೂ ಮತ್ತೂ ಗೋವುಗಳಿಗೂ ಬೆಲೆಕಟ್ಟಲು ಸಾಧ್ಯವಿಲ್ಲ. ಆದುದರಿಂದ ಇವನ ಮೌಲ್ಯವು ಗೋವು ಎಂದೇ ಪರಿಕಲ್ಪಿಸಬೇಕು.”

13051023a ನಹುಷಸ್ತು ತತಃ ಶ್ರುತ್ವಾ ಮಹರ್ಷೇರ್ವಚನಂ ನೃಪ|

13051023c ಹರ್ಷೇಣ ಮಹತಾ ಯುಕ್ತಃ ಸಹಾಮಾತ್ಯಪುರೋಹಿತಃ||

13051024a ಅಭಿಗಮ್ಯ ಭೃಗೋಃ ಪುತ್ರಂ ಚ್ಯವನಂ ಸಂಶಿತವ್ರತಮ್|

13051024c ಇದಂ ಪ್ರೋವಾಚ ನೃಪತೇ ವಾಚಾ ಸಂತರ್ಪಯನ್ನಿವ||

ನೃಪ! ನೃಪತೇ! ಮಹರ್ಷಿಯ ವಚನವನ್ನು ಕೇಳಿದ ನಹುಷನು ಮಹಾ ಹರ್ಷದಿಂದ ತನ್ನ ಅಮಾತ್ಯ-ಪುರೋಹಿತರನ್ನೊಡಗೂಡಿ ಸಂಶಿತವ್ರತ ಭೃಗುವಿನ ಪುತ್ರ ಚ್ಯವನನ ಬಳಿಸಾರಿ ತೃಪ್ತಿಗೊಳಿಸುವ ಮಾತಿನಿಂದ ಇದನ್ನು ಹೇಳಿದನು:

13051025a ಉತ್ತಿಷ್ಠೋತ್ತಿಷ್ಠ ವಿಪ್ರರ್ಷೇ ಗವಾ ಕ್ರೀತೋಽಸಿ ಭಾರ್ಗವ|

13051025c ಏತನ್ಮೂಲ್ಯಮಹಂ ಮನ್ಯೇ ತವ ಧರ್ಮಭೃತಾಂ ವರ||

“ವಿಪ್ರರ್ಷೇ! ಭಾರ್ಗವ! ಧರ್ಮಭೃತರಲ್ಲಿ ಶ್ರೇಷ್ಠ! ಮೇಲೇಳು. ಗೋವಿನಿಂದ ನಿನ್ನನ್ನು ಕೊಂಡುಕೊಳ್ಳುತ್ತೇನೆ. ಇದೇ ನಿನ್ನ ಮೌಲ್ಯವೆಂದು ನಿರ್ಧರಿಸಿದ್ದೇನೆ.”

13051026 ಚ್ಯವನ ಉವಾಚ|

13051026a ಉತ್ತಿಷ್ಠಾಮ್ಯೇಷ ರಾಜೇಂದ್ರ ಸಮ್ಯಕ್ಕ್ರೀತೋಽಸ್ಮಿ ತೇಽನಘ|

13051026c ಗೋಭಿಸ್ತುಲ್ಯಂ ನ ಪಶ್ಯಾಮಿ ಧನಂ ಕಿಂ ಚಿದಿಹಾಚ್ಯುತ||

ಚ್ಯವನನು ಹೇಳಿದನು: “ರಾಜೇಂದ್ರ! ಅನಘ! ಈಗ ಏಳುತ್ತೇನೆ. ನೀನು ಸರಿಯಾದ ಬೆಲೆಗೆ ನನ್ನನ್ನು ಕೊಂಡುಕೊಂಡಿದ್ದೀಯೆ. ಗೋವಿಗೆ ಸಮನಾದ ಧನವನ್ನು ನಾನು ಇದೂವರೆಗೆ ನೋಡಿದ್ದಿಲ್ಲ.

13051027a ಕೀರ್ತನಂ ಶ್ರವಣಂ ದಾನಂ ದರ್ಶನಂ ಚಾಪಿ ಪಾರ್ಥಿವ|

13051027c ಗವಾಂ ಪ್ರಶಸ್ಯತೇ ವೀರ ಸರ್ವಪಾಪಹರಂ ಶಿವಮ್||

ಪಾರ್ಥಿವ! ವೀರ! ಗೋವುಗಳ ಕೀರ್ತನ, ಶ್ರವಣ, ದಾನ ಮತ್ತು ದರ್ಶನ ಇವುಗಳು ಸರ್ವಪಾಪಗಳನ್ನೂ ಕಳೆಯುತ್ತವೆ ಮತ್ತು ಮಂಗಳಕರವು ಎಂದು ಪ್ರಶಂಸಿಸುತ್ತಾರೆ.

13051028a ಗಾವೋ ಲಕ್ಷ್ಮ್ಯಾಃ ಸದಾ ಮೂಲಂ ಗೋಷು ಪಾಪ್ಮಾ ನ ವಿದ್ಯತೇ|

13051028c ಅನ್ನಮೇವ ಸದಾ ಗಾವೋ ದೇವಾನಾಂ ಪರಮಂ ಹವಿಃ||

ಗೋವುಗಳು ಸಂಪತ್ತಿನ ಮೂಲ. ಗೋವುಗಳಲ್ಲಿ ಪಾಪವೆಂಬುದೇ ಇಲ್ಲ. ಗೋವುಗಳು ಸದಾ ಅನ್ನಸ್ವರೂಪವು. ಗೋವುಗಳು ದೇವತೆಗಳ ಪರಮ ಹವಿಸ್ಸು ಕೂಡ.

13051029a ಸ್ವಾಹಾಕಾರವಷಟ್ಕಾರೌ ಗೋಷು ನಿತ್ಯಂ ಪ್ರತಿಷ್ಠಿತೌ|

13051029c ಗಾವೋ ಯಜ್ಞಪ್ರಣೇತ್ರ್ಯೋ ವೈ ತಥಾ ಯಜ್ಞಸ್ಯ ತಾ ಮುಖಮ್||

ಸ್ವಾಹಾಕಾರ-ವಷಟ್ಕಾರಗಳು ನಿತ್ಯವೂ ಗೋವುಗಳಲ್ಲಿ ಪ್ರತಿಷ್ಠಿತವಾಗಿವೆ. ಗೋವುಗಳು ಯಜ್ಞಗಳ ನಾಯಕಿಯರು ಮತ್ತು ಅವುಗಳು ಯಜ್ಞಗಳ ಮುಖಗಳು.

13051030a ಅಮೃತಂ ಹ್ಯಕ್ಷಯಂ ದಿವ್ಯಂ ಕ್ಷರಂತಿ ಚ ವಹಂತಿ ಚ|

13051030c ಅಮೃತಾಯತನಂ ಚೈತಾಃ ಸರ್ವಲೋಕನಮಸ್ಕೃತಾಃ||

ಕರೆದರೆ ಅಕ್ಷಯವಾದ ದಿವ್ಯ ಅಮೃತವನ್ನೇ ಸುರಿಸುತ್ತವೆ. ಸರ್ವಲೋಕನಮಸ್ಕೃತ ಗೋವುಗಳು ಅಮೃತಕ್ಕೆ ವಾಸಸ್ಥಾನಗಳು.

13051031a ತೇಜಸಾ ವಪುಷಾ ಚೈವ ಗಾವೋ ವಹ್ನಿಸಮಾ ಭುವಿ|

13051031c ಗಾವೋ ಹಿ ಸುಮಹತ್ತೇಜಃ ಪ್ರಾಣಿನಾಂ ಚ ಸುಖಪ್ರದಾಃ||

ತೇಜಸ್ಸು ಮತ್ತು ಕಾಂತಿಯಿಂದ ಗೋವುಗಳು ಭುವಿಯಲ್ಲಿ ಅಗ್ನಿಯ ಸಮರು. ಮಹಾತೇಜಸ್ಸುಳ್ಳ ಗೋವುಗಳು ಪ್ರಾಣಿಗಳಿಗೆ ಸುಖವನ್ನೀಯುತ್ತವೆ.

13051032a ನಿವಿಷ್ಟಂ ಗೋಕುಲಂ ಯತ್ರ ಶ್ವಾಸಂ ಮುಂಚತಿ ನಿರ್ಭಯಮ್|

13051032c ವಿರಾಜಯತಿ ತಂ ದೇಶಂ ಪಾಪ್ಮಾನಂ ಚಾಪಕರ್ಷತಿ||

ಗೋವುಗಳು ನಿರ್ಭಯರಾಗಿ ಶ್ವಾಸಬಿಡುವ ಸ್ಥಳವು ವಿರಾಜಿಸುತ್ತದೆ. ಅಲ್ಲಿರುವ ಪಾಪಗಳನ್ನು ಎಳೆದುಕೊಳ್ಳುತ್ತವೆ.

13051033a ಗಾವಃ ಸ್ವರ್ಗಸ್ಯ ಸೋಪಾನಂ ಗಾವಃ ಸ್ವರ್ಗೇಽಪಿ ಪೂಜಿತಾಃ|

13051033c ಗಾವಃ ಕಾಮದುಘಾ ದೇವ್ಯೋ ನಾನ್ಯತ್ಕಿಂ ಚಿತ್ಪರಂ ಸ್ಮೃತಮ್||

ಗೋವುಗಳು ಸ್ವರ್ಗದ ಸೋಪಾನ. ಗೋವುಗಳು ಸ್ವರ್ಗದಲ್ಲಿಯೂ ಪೂಜಿಸಲ್ಪಡುತ್ತವೆ. ಗೋವುಗಳು ಕಾಮಗಳನ್ನು ಪೂರೈಸುವ ದೇವತೆಗಳು. ಅವುಗಳಿಗಿಂತ ಶ್ರೇಷ್ಠವಾದವು ಬೇರೆ ಯಾವುದೂ ಇಲ್ಲ.

13051034a ಇತ್ಯೇತದ್ಗೋಷು ಮೇ ಪ್ರೋಕ್ತಂ ಮಾಹಾತ್ಮ್ಯಂ ಪಾರ್ಥಿವರ್ಷಭ|

13051034c ಗುಣೈಕದೇಶವಚನಂ ಶಕ್ಯಂ ಪಾರಾಯಣಂ ನ ತು||

ಪಾರ್ಥಿವರ್ಷಭ! ಇದೋ ನಾನು ನಿನಗೆ ಗೋವುಗಳ ಮಹಾತ್ಮೆಯನ್ನು ಹೇಳಿದ್ದೇನೆ. ಅವುಗಳಲ್ಲಿರುವ ಕೆಲವೇ ಗುಣಗಳನ್ನು ಹೇಳಿದ್ದೇನೆ. ಸಂಪೂರ್ಣಗುಣಗಳನ್ನು ಹೇಳಲು ಶಕ್ಯವಿಲ್ಲ.”

13051035 ನಿಷಾದಾ ಊಚುಃ|

13051035a ದರ್ಶನಂ ಕಥನಂ ಚೈವ ಸಹಾಸ್ಮಾಭಿಃ ಕೃತಂ ಮುನೇ|

13051035c ಸತಾಂ ಸಪ್ತಪದಂ ಮಿತ್ರಂ ಪ್ರಸಾದಂ ನಃ ಕುರು ಪ್ರಭೋ||

ನಿಷಾದರು ಹೇಳಿದರು: “ಮುನೇ! ಸಂತರೊಂದಿಗೆ ಏಳು ಹೆಜ್ಜೆ ನಡೆದರೂ ಮಿತ್ರತ್ವವುಂಟಾಗುತ್ತದೆ. ನಾವು ನಿನ್ನನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಪ್ರಭೋ! ನಮ್ಮ ಮೇಲೆ ಪ್ರಸನ್ನನಾಗು.

13051036a ಹವೀಂಷಿ ಸರ್ವಾಣಿ ಯಥಾ ಹ್ಯುಪಭುಂಕ್ತೇ ಹುತಾಶನಃ|

13051036c ಏವಂ ತ್ವಮಪಿ ಧರ್ಮಾತ್ಮನ್ಪುರುಷಾಗ್ನಿಃ ಪ್ರತಾಪವಾನ್||

ಹುತಾಶನನು ಹೇಗೆ ಸರ್ವ ಹವಿಸ್ಸುಗಳನ್ನೂ ಸುಟ್ಟು ನುಂಗುತ್ತಾನೋ ಹಾಗೆ ಪ್ರತಾಪವಾನನಾದ ಮತ್ತು ಧರ್ಮಾತ್ಮನಾದ ನೀನೂ ಕೂಡ ಪಾಪಗಳನ್ನು ಸುಟ್ಟುಬಿಡುವ ಪುರುಷಾಗ್ನಿಯು.

13051037a ಪ್ರಸಾದಯಾಮಹೇ ವಿದ್ವನ್ಭವಂತಂ ಪ್ರಣತಾ ವಯಮ್|

13051037c ಅನುಗ್ರಹಾರ್ಥಮಸ್ಮಾಕಮಿಯಂ ಗೌಃ ಪ್ರತಿಗೃಹ್ಯತಾಮ್||

ವಿದ್ವನ್! ತಲೆಬಾಗಿ ನಮಸ್ಕರಿಸಿ ನಿನ್ನನ್ನು ಪ್ರಸನ್ನಗೊಳಿಸುತ್ತಿದ್ದೇವೆ. ನಮ್ಮ ಮೇಲಿನ ಅನುಗ್ರಹಕ್ಕಾಗಿ ಈ ಗೋವನ್ನು ಸ್ವೀಕರಿಸಬೇಕು.”

13051038 ಚ್ಯವನ ಉವಾಚ|

13051038a ಕೃಪಣಸ್ಯ ಚ ಯಚ್ಚಕ್ಷುರ್ಮುನೇರಾಶೀವಿಷಸ್ಯ ಚ|

13051038c ನರಂ ಸಮೂಲಂ ದಹತಿ ಕಕ್ಷಮಗ್ನಿರಿವ ಜ್ವಲನ್||

ಚ್ಯವನನು ಹೇಳಿದನು: “ದರಿದ್ರ, ಮುನಿ ಮತ್ತು ವಿಷಸರ್ಪದ ಕಣ್ಣುಗಳು ಪ್ರಜ್ವಲಿಸಿ ಹುಲ್ಲುಮೆದೆಯನ್ನು ದಹಿಸುವಂತೆ ಮನುಷ್ಯನನ್ನು ಸುಟ್ಟುಹಾಕುತ್ತವೆ.

13051039a ಪ್ರತಿಗೃಹ್ಣಾಮಿ ವೋ ಧೇನುಂ ಕೈವರ್ತಾ ಮುಕ್ತಕಿಲ್ಬಿಷಾಃ|

13051039c ದಿವಂ ಗಚ್ಚತ ವೈ ಕ್ಷಿಪ್ರಂ ಮತ್ಸ್ಯೈರ್ಜಾಲೋದ್ಧೃತೈಃ ಸಹ||

ಕೈವರ್ತರೇ! ಈ ಗೋವನ್ನು ಸ್ವೀಕರಿಸುತ್ತೇನೆ. ಪಾಪಗಳಿಂದ ಮುಕ್ತರಾಗಿರುವಿರಿ. ಈಗಲೇ ನೀವು ನೀರಿನಲ್ಲಿ ಹುಟ್ಟಿದ ಈ ಮೀನುಗಳೊಂದಿಗೆ ಸ್ವರ್ಗಕ್ಕೆ ಹೋಗಿ!””

13051040 ಭೀಷ್ಮ ಉವಾಚ|

13051040a ತತಸ್ತಸ್ಯ ಪ್ರಸಾದಾತ್ತೇ ಮಹರ್ಷೇರ್ಭಾವಿತಾತ್ಮನಃ|

13051040c ನಿಷಾದಾಸ್ತೇನ ವಾಕ್ಯೇನ ಸಹ ಮತ್ಸ್ಯೈರ್ದಿವಂ ಯಯುಃ||

ಭೀಷ್ಮನು ಹೇಳಿದನು: “ಭಾವಿತಾತ್ಮ ಮಹರ್ಷಿಯ ಪ್ರಸನ್ನ ಮಾತುಗಳಿಂದ ಆ ಬೆಸ್ತರು ಮೀನುಗಳೊಂದಿಗೆ ಸ್ವರ್ಗಕ್ಕೆ ಹೋದರು.

13051041a ತತಃ ಸ ರಾಜಾ ನಹುಷೋ ವಿಸ್ಮಿತಃ ಪ್ರೇಕ್ಷ್ಯ ಧೀವರಾನ್|

13051041c ಆರೋಹಮಾಣಾಂಸ್ತ್ರಿದಿವಂ ಮತ್ಸ್ಯಾಂಶ್ಚ ಭರತರ್ಷಭ||

ಭರತರ್ಷಭ! ಆಗ ಬೆಸ್ತರೂ ಮೀನುಗಳೂ ಸ್ವರ್ಗಕ್ಕೆ ಏರಿದುದನ್ನು ನೋಡಿದ ರಾಜಾ ನಹುಷನು ವಿಸ್ಮಿತನಾದನು.

13051042a ತತಸ್ತೌ ಗವಿಜಶ್ಚೈವ ಚ್ಯವನಶ್ಚ ಭೃಗೂದ್ವಹಃ|

13051042c ವರಾಭ್ಯಾಮನುರೂಪಾಭ್ಯಾಂ ಚಂದಯಾಮಾಸತುರ್ನೃಪಮ್||

ಆಗ ಗೋವಿನಲ್ಲಿ ಹುಟ್ಟಿದ ವಿಪ್ರ ಮತ್ತು ಭೃಗೂದ್ವಹ ಚ್ಯವನ ಇಬ್ಬರೂ ಆ ರಾಜನಿಗೆ ಅನುರೂಪ ವರಗಳನ್ನು ನೀಡಲು ಬಯಸಿದರು.

13051043a ತತೋ ರಾಜಾ ಮಹಾವೀರ್ಯೋ ನಹುಷಃ ಪೃಥಿವೀಪತಿಃ|

13051043c ಪರಮಿತ್ಯಬ್ರವೀತ್ಪ್ರೀತಸ್ತದಾ ಭರತಸತ್ತಮ||

ಭರತಸತ್ತಮ! ಆಗ ಮಹಾವೀರ್ಯ ಪೃಥಿವೀಪತಿ ರಾಜಾ ನಹುಷನು “ನಿಮ್ಮ ಪ್ರೀತಿಯೇ ನನಗೆ ಪರಮ ವರವಾಗಿದೆ” ಎಂದನು.

13051044a ತತೋ ಜಗ್ರಾಹ ಧರ್ಮೇ ಸ ಸ್ಥಿತಿಮಿಂದ್ರನಿಭೋ ನೃಪಃ|

13051044c ತಥೇತಿ ಚೋದಿತಃ ಪ್ರೀತಸ್ತಾವೃಷೀ ಪ್ರತ್ಯಪೂಜಯತ್||

ಇನ್ನೂ ಒತ್ತಾಯಕ್ಕೊಳಗಾದ ಇಂದ್ರ ಸದೃಶ ಆ ನೃಪನು “ಧರ್ಮದಲ್ಲಿ ಸ್ಥಿತನಾಗಿರಲಿ” ಎಂಬ ವರವನ್ನು ಕೇಳಿದನು. “ಹಾಗೆಯೇ ಆಗಲಿ!” ಎಂದು ಪ್ರೀತಿಯಿಂದ ಹೇಳಲು, ರಾಜನು ಅವರನ್ನು ಪೂಜಿಸಿದನು.

13051045a ಸಮಾಪ್ತದೀಕ್ಷಶ್ಚ್ಯವನಸ್ತತೋಽಗಚ್ಚತ್ಸ್ವಮಾಶ್ರಮಮ್|

13051045c ಗವಿಜಶ್ಚ ಮಹಾತೇಜಾಃ ಸ್ವಮಾಶ್ರಮಪದಂ ಯಯೌ||

ದೀಕ್ಷೆಯನ್ನು ಸಮಾಪ್ತಗೊಳಿಸಿದ ಚ್ಯವನನು ತನ್ನ ಆಶ್ರಮಕ್ಕೆ ಹೊರಟುಹೋದನು. ಮಹಾತೇಜಸ್ವಿ ಗವಿಜನೂ ಕೂಡ ತನ್ನ ಆಶ್ರಮಪದಕ್ಕೆ ಹೋದನು.

13051046a ನಿಷಾದಾಶ್ಚ ದಿವಂ ಜಗ್ಮುಸ್ತೇ ಚ ಮತ್ಸ್ಯಾ ಜನಾಧಿಪ|

13051046c ನಹುಷೋಽಪಿ ವರಂ ಲಬ್ಧ್ವಾ ಪ್ರವಿವೇಶ ಪುರಂ ಸ್ವಕಮ್||

ಜನಾಧಿಪ! ನಿಷಾದರೂ ಮೀನುಗಳೂ ದಿವಕ್ಕೆ ಹೋದರು. ನಹುಷನಾದರೋ ವರವನ್ನು ಪಡೆದುಕೊಂಡು ಸ್ವಪುರವನ್ನು ಪ್ರವೇಶಿಸಿದನು.

13051047a ಏತತ್ತೇ ಕಥಿತಂ ತಾತ ಯನ್ಮಾಂ ತ್ವಂ ಪರಿಪೃಚ್ಚಸಿ|

13051047c ದರ್ಶನೇ ಯಾದೃಶಃ ಸ್ನೇಹಃ ಸಂವಾಸೇ ಚ ಯುಧಿಷ್ಠಿರ||

13051048a ಮಹಾಭಾಗ್ಯಂ ಗವಾಂ ಚೈವ ತಥಾ ಧರ್ಮವಿನಿಶ್ಚಯಮ್|

13051048c ಕಿಂ ಭೂಯಃ ಕಥ್ಯತಾಂ ವೀರ ಕಿಂ ತೇ ಹೃದಿ ವಿವಕ್ಷಿತಮ್||

ಅಯ್ಯಾ! ಯುಧಿಷ್ಠಿರ! ನೀನು ನನಗೆ ಕೇಳಿದಂತೆ ನೋಡುವುದರಿಂದ ಮತ್ತು ಸಹವಾಸದಿಂದ ಹೇಗೆ ಸ್ನೇಹವುಂಟಾಗುತ್ತದೆ ಎನ್ನುವುದನ್ನೂ ಹಾಗೆಯೇ ಗೋವುಗಳ ಮಹಾಭಾಗ್ಯದ ಕುರಿತಾದ ಧರ್ಮವಿನಿಶ್ಚಯವನ್ನೂ ಹೇಳಿದ್ದೇನೆ. ವೀರ! ನಿನ್ನ ಹೃದಯದಲ್ಲಿ ಬೇರೆ ಯಾವ ಪ್ರಶ್ನೆಗಳಿವೆ? ಇನ್ನೂ ಏನನ್ನು ಹೇಳಬೇಕು?”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನೋಪಾಖ್ಯಾನೇ ಏಕಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನೋಪಾಖ್ಯಾನ ಎನ್ನುವ ಐವತ್ತೊಂದನೇ ಅಧ್ಯಾಯವು.

Image result for indian motifs cows

Comments are closed.