Anushasana Parva: Chapter 48

ಅನುಶಾಸನ ಪರ್ವ: ದಾನಧರ್ಮ ಪರ್ವ

೪೮

ವರ್ಣಸಂಕರ ಸಂತಾನಗಳ ಉತ್ಪತ್ತಿಯ ವಿಸ್ತಾರ ವರ್ಣನೆ (೧-).

13048001 ಯುಧಿಷ್ಠಿರ ಉವಾಚ|

13048001a ಅರ್ಥಾಶ್ರಯಾದ್ವಾ ಕಾಮಾದ್ವಾ ವರ್ಣಾನಾಂ ವಾಪ್ಯನಿಶ್ಚಯಾತ್|

13048001c ಅಜ್ಞಾನಾದ್ವಾಪಿ ವರ್ಣಾನಾಂ ಜಾಯತೇ ವರ್ಣಸಂಕರಃ||

ಯುಧಿಷ್ಠಿರನು ಹೇಳಿದನು: “ಧನದ ಕಾರಣದಿಂದಾಗಿ ಅಥವಾ ಕಾಮದಿಂದಾಗಿ ಅಥವಾ ಅಜ್ಞಾನದಿಂದಾಗಿ ಅಥವಾ ವರ್ಣದ ನಿಶ್ಚಯದೊರಕಿರದಾಗ ಉಚ್ಛಜಾತಿಯ ಸ್ತ್ರೀಯು ನೀಚಜಾತಿಯವನಿಂದ ಮಕ್ಕಳನ್ನು ಪಡೆದರೆ ವರ್ಣಸಂಕರವಾಗುತ್ತದೆ.

13048002a ತೇಷಾಮೇತೇನ ವಿಧಿನಾ ಜಾತಾನಾಂ ವರ್ಣಸಂಕರೇ|

13048002c ಕೋ ಧರ್ಮಃ ಕಾನಿ ಕರ್ಮಾಣಿ ತನ್ಮೇ ಬ್ರೂಹಿ ಪಿತಾಮಹ||

ಪಿತಾಮಹ! ಈ ವಿಧದಲ್ಲಿ ವರ್ಣಸಂಕರದಲ್ಲಿ ಹುಟ್ಟಿದವರ ಧರ್ಮವೇನು? ಅವರಿಗೆ ಯಾವ ಕರ್ಮಗಳು ವಿಹಿತವಾಗಿವೆ? ಅದನ್ನು ನನಗೆ ಹೇಳು.”

13048003 ಭೀಷ್ಮ ಉವಾಚ|

13048003a ಚಾತುರ್ವರ್ಣ್ಯಸ್ಯ ಕರ್ಮಾಣಿ ಚಾತುರ್ವರ್ಣ್ಯಂ ಚ ಕೇವಲಮ್|

13048003c ಅಸೃಜತ್ಸ ಹ ಯಜ್ಞಾರ್ಥೇ ಪೂರ್ವಮೇವ ಪ್ರಜಾಪತಿಃ||

ಭೀಷ್ಮನು ಹೇಳಿದನು: “ಹಿಂದೆ ಯಜ್ಞಕ್ಕಾಗಿ ಪ್ರಜಾಪತಿಯು ಕೇವಲ ನಾಲ್ಕು ವರ್ಣಗಳನ್ನು ಮತ್ತು ನಾಲ್ಕು ವರ್ಣಗಳವರಿಗೆ ಕರ್ಮಗಳನ್ನು ಸೃಷ್ಟಿಸಿದ್ದನು.

13048004a ಭಾರ್ಯಾಶ್ಚತಸ್ರೋ ವಿಪ್ರಸ್ಯ ದ್ವಯೋರಾತ್ಮಾಸ್ಯ ಜಾಯತೇ|

13048004c ಆನುಪೂರ್ವ್ಯಾದ್ದ್ವಯೋರ್ಹೀನೌ ಮಾತೃಜಾತ್ಯೌ ಪ್ರಸೂಯತಃ||

ವಿಪ್ರನ ನಾಲ್ಕು ಭಾರ್ಯೆಯರಲ್ಲಿ ಬ್ರಾಹ್ಮಣಿ ಮತ್ತು ಕ್ಷತ್ರಿಣಿಯಲ್ಲಿ ಬ್ರಾಹ್ಮಣನೇ ಹುಟ್ಟುತ್ತಾನೆ. ಉಳಿದ ವೈಶ್ಯೆ ಮತ್ತು ಶೂದ್ರಳಲ್ಲಿ ಹುಟ್ಟಿದವರು ಬ್ರಾಹ್ಮಣತ್ವಕ್ಕಿಂತ ಕ್ರಮಶಃ ತಾಯಿಯ ಜಾತಿಯಷ್ಟೇ ಹೀನರಾಗಿರುತ್ತಾರೆ.

13048005a ಪರಂ ಶವಾದ್ಬ್ರಾಹ್ಮಣಸ್ಯೈಷ ಪುತ್ರಃ

ಶೂದ್ರಾಪುತ್ರಂ ಪಾರಶವಂ ತಮಾಹುಃ|

13048005c ಶುಶ್ರೂಷಕಃ ಸ್ವಸ್ಯ ಕುಲಸ್ಯ ಸ ಸ್ಯಾತ್

ಸ್ವಂ ಚಾರಿತ್ರಂ ನಿತ್ಯಮಥೋ ನ ಜಹ್ಯಾತ್||

ಬ್ರಾಹ್ಮಣನಿಗೆ ಶೂದ್ರೆಯಲ್ಲಿ ಹುಟ್ಟಿದ ಪುತ್ರನು ಶವಕ್ಕಿಂತಲೂ ಶ್ರೇಷ್ಠನಾದುದರಿಂದ ಅವನನ್ನು “ಪಾರಶವ” ಎಂದು ಕರೆಯುತ್ತಾರೆ. ಅವನು ತನ್ನ ಕುಲದ ಶುಶ್ರೂಷೆಯನ್ನು ಮಾಡಬೇಕು ಮತ್ತು ಯಾವಾಗಲೂ ಅವನು ತನ್ನ ಈ ಚಾರಿತ್ರ್ಯವನ್ನು ತೊರೆಯಬಾರದು.

13048006a ಸರ್ವಾನುಪಾಯಾನಪಿ ಸಂಪ್ರಧಾರ್ಯ

ಸಮುದ್ಧರೇತ್ಸ್ವಸ್ಯ ಕುಲಸ್ಯ ತಂತುಮ್|

13048006c ಜ್ಯೇಷ್ಠೋ ಯವೀಯಾನಪಿ ಯೋ ದ್ವಿಜಸ್ಯ

ಶುಶ್ರೂಷವಾನ್ದಾನಪರಾಯಣಃ ಸ್ಯಾತ್||

ಶೂದ್ರಳಲ್ಲಿ ಹುಟ್ಟಿದ ಬ್ರಾಹ್ಮಣ ಪುತ್ರನು ಎಲ್ಲ ಉಪಾಯಗಳನ್ನೂ ವಿಚಾರಿಸಿ, ತನ್ನ ಕುಲದ ತಂತುವಿನ ಉದ್ಧಾರದಲ್ಲಿ ತೊಡಗಬೇಕು. ಅವನು ದ್ವಿಜನ ಜ್ಯೇಷ್ಠಪುತ್ರನಾದರೂ, ಉಳಿದ ಮೂರು ವರ್ಣದವರಲ್ಲಿ ಹುಟ್ಟಿದವರ ಸೇವೆಗೈಯುತ್ತಾ ದಾನಪರಾಯಣನಾಗಿರಬೇಕು.

13048007a ತಿಸ್ರಃ ಕ್ಷತ್ರಿಯಸಂಬಂಧಾದ್ದ್ವಯೋರಾತ್ಮಾಸ್ಯ ಜಾಯತೇ|

13048007c ಹೀನವರ್ಣಸ್ತೃತೀಯಾಯಾಂ ಶೂದ್ರ ಉಗ್ರ ಇತಿ ಸ್ಮೃತಃ||

ಕ್ಷತ್ರಿಯನಿಗೆ ಇರಬಹುದಾದ ಮೂರು ಸಂಬಂಧಗಳಲ್ಲಿ ಎರಡರಲ್ಲಿ ಅವನು ತಾನೇ ಹುಟ್ಟಿಕೊಳ್ಳುತ್ತಾನೆ. ಮೂರನೆಯ ಹೀನವರ್ಣದಲ್ಲಿ ಹುಟ್ಟಿದವನನ್ನು “ಉಗ್ರ” ಎಂದು ಕರೆಯುತ್ತಾರೆ.

13048008a ದ್ವೇ ಚಾಪಿ ಭಾರ್ಯೇ ವೈಶ್ಯಸ್ಯ ದ್ವಯೋರಾತ್ಮಾಸ್ಯ ಜಾಯತೇ|

13048008c ಶೂದ್ರಾ ಶೂದ್ರಸ್ಯ ಚಾಪ್ಯೇಕಾ ಶೂದ್ರಮೇವ ಪ್ರಜಾಯತೇ||

ವೈಶ್ಯನಿಗೆ ಎರಡು ವರ್ಣದವರ ಭಾರ್ಯೆಯರಿರಬಹುದು. ಆ ಇಬ್ಬರಲ್ಲಿಯೂ ಸ್ವಯಂ ತಾನೇ ಹುಟ್ಟಿಕೊಳ್ಳುತ್ತಾನೆ. ಶೂದ್ರಳಲ್ಲಿ ಶೂದ್ರನಿಗೆ ಹುಟ್ಟಿದವನು ಶೂದ್ರನೆಂದೇ ಆಗುತ್ತಾನೆ.

13048009a ಅತೋ ವಿಶಿಷ್ಟಸ್ತ್ವಧಮೋ ಗುರುದಾರಪ್ರಧರ್ಷಕಃ|

13048009c ಬಾಹ್ಯಂ ವರ್ಣಂ ಜನಯತಿ ಚಾತುರ್ವರ್ಣ್ಯವಿಗರ್ಹಿತಮ್||

ಅಧಮ ವರ್ಣದವನು ಹಿರಿಯ ವರ್ಣದ ಸ್ತ್ರೀಯನ್ನು ಮದುವೆಯಾದರೆ ಅವನಲ್ಲಿ ಹುಟ್ಟುವ ಪುತ್ರನು ನಾಲ್ಕೂ ವರ್ಣದವರು ನಿಂದಿಸುವ ಬೇರೆಯೇ ವರ್ಣದವನಾಗುತ್ತಾನೆ.

13048010a ಅಯಾಜ್ಯಂ ಕ್ಷತ್ರಿಯೋ ವ್ರಾತ್ಯಂ ಸೂತಂ ಸ್ತೋಮಕ್ರಿಯಾಪರಮ್|

13048010c ವೈಶ್ಯೋ ವೈದೇಹಕಂ ಚಾಪಿ ಮೌದ್ಗಲ್ಯಮಪವರ್ಜಿತಮ್||

ಕ್ಷತ್ರಿಯನಿಗೆ ಬ್ರಾಹ್ಮಣಿಯಲ್ಲಿ ಹುಟ್ಟುವವನು ಸ್ತುತಿಕ್ರಿಯೆಗಳಲ್ಲಿ ತೊಡಗುವ ಸೂತ ಜಾತಿಯವನಾಗುತ್ತಾನೆ. ವೈಶ್ಯನಿಗೆ ಬ್ರಾಹ್ಮಣಿಯಲ್ಲಿ ಹುಟ್ಟುವವನನ್ನು “ವೈದೇಹಕ” ನೆಂದೂ ಮತ್ತು “ಮೌದ್ಗಲ್ಯ” ನೆಂದೂ ಕರೆಯುತ್ತಾರೆ. ಅವನಿಗೆ ಅಂತಃಪುರವನ್ನು ಕಾಯುವುದು ಮೊದಲಾದ ಕೆಲಸಗಳಿಗೆ ತೆಗೆದುಕೊಳ್ಳಲಾಗುತ್ತದೆ.

13048011a ಶೂದ್ರಶ್ಚಂಡಾಲಮತ್ಯುಗ್ರಂ ವಧ್ಯಘ್ನಂ ಬಾಹ್ಯವಾಸಿನಮ್|

13048011c ಬ್ರಾಹ್ಮಣ್ಯಾಂ ಸಂಪ್ರಜಾಯಂತ ಇತ್ಯೇತೇ ಕುಲಪಾಂಸನಾಃ|

13048011e ಏತೇ ಮತಿಮತಾಂ ಶ್ರೇಷ್ಠ ವರ್ಣಸಂಕರಜಾಃ ಪ್ರಭೋ||

ಶೂದ್ರನಿಗೆ ಬ್ರಾಹ್ಮಣಿಯಲ್ಲಿ ಹುಟ್ಟುವವನು ಉಗ್ರ ಚಂಡಾಲನೆನಿಸಿಕೊಂಡು ಗ್ರಾಮದ ಹೊರಗೆ ವಾಸಿಸುತ್ತಾನೆ ಮತ್ತು ವಧ್ಯ ಪುರುಷರಿಗೆ ಪ್ರಾಣದಂಡಾದಿಗಳನ್ನು ನೀಡುತ್ತಾನೆ. ಪ್ರಭೋ! ಮತಿಮತರಲ್ಲಿ ಶ್ರೇಷ್ಠ! ಬ್ರಾಹ್ಮಣಿಯಲ್ಲಿ ಅನ್ಯಜಾತಿಯವರಿಂದ ಹುಟ್ಟಿದವರು ಕುಲಪಾಂಸನರಾಗಿರುತ್ತಾರೆ. ಇದಕ್ಕೆ ವರ್ಣಸಂಕರವೆಂದು ಹೇಳುತ್ತಾರೆ.

13048012a ಬಂದೀ ತು ಜಾಯತೇ ವೈಶ್ಯಾನ್ಮಾಗಧೋ ವಾಕ್ಯಜೀವನಃ|

13048012c ಶೂದ್ರಾನ್ನಿಷಾದೋ ಮತ್ಸ್ಯಘ್ನಃ ಕ್ಷತ್ರಿಯಾಯಾಂ ವ್ಯತಿಕ್ರಮಾತ್||

ವೈಶ್ಯನಿಂದ ಕ್ಷತ್ರಿಣಿಯಲ್ಲಿ ಹುಟ್ಟುವವನು ಬಂದೀ ಮತ್ತು ಮಾಗಧನಾಗುತ್ತಾನೆ. ಅವರು ರಾಜರ ಪ್ರಶಂಸೆ ಮಾಡುತ್ತಾ ಜೀವನವನ್ನು ನಡೆಸುತ್ತಾರೆ. ಶೂದ್ರನು ಕ್ಷತ್ರಿಯ ಕನ್ಯೆಯನ್ನು ಅತಿಕ್ರಮಿಸಿದರೆ ಅದರಿಂದ ಹುಟ್ಟುವವರು ಮೀನನ್ನು ಕೊಲ್ಲುವ ನಿಷಾದ ಜಾತಿಯವರಾಗುತ್ತಾರೆ.

13048013a ಶೂದ್ರಾದಾಯೋಗವಶ್ಚಾಪಿ ವೈಶ್ಯಾಯಾಂ ಗ್ರಾಮಧರ್ಮಿಣಃ|

13048013c ಬ್ರಾಹ್ಮಣೈರಪ್ರತಿಗ್ರಾಹ್ಯಸ್ತಕ್ಷಾ ಸ ವನಜೀವನಃ||

ಶೂದ್ರನು ವೈಶ್ಯೆಯೊಡನೆ ಸಂಬಂಧವನ್ನಿಟ್ಟುಕೊಂಡಾಗ ಹುಟ್ಟುವವರು “ಅಯೋಗವ” ರೆನಿಸಿಕೊಳ್ಳುತ್ತಾರೆ. ಬಡಗಿಯ ಕೆಲಸಮಾಡಿಕೊಂಡು ಜೀವಿಸುವ ಅವರಿಗೆ ಬ್ರಾಹ್ಮಣರು ದಾನನೀಡಬಾರದು.

13048014a ಏತೇಽಪಿ ಸದೃಶಂ ವರ್ಣಂ ಜನಯಂತಿ ಸ್ವಯೋನಿಷು|

13048014c ಮಾತೃಜಾತ್ಯಾಂ ಪ್ರಸೂಯಂತೇ ಪ್ರವರಾ ಹೀನಯೋನಿಷು||

ಈ ವರ್ಣಸಂಕರದಿಂದ ಹುಟ್ಟಿದವರು ತಮ್ಮದೇ ಜಾತಿಯ ಸ್ತ್ರೀಯರಲ್ಲಿ ಸಂತಾನವನ್ನು ಪಡೆದರೆ ಆ ಸಂತಾನವು ಅವರದೇ ಜಾತಿಯದ್ದಾಗುತ್ತದೆ. ಆದರೆ ತಮ್ಮದಕ್ಕಿಂತ ಹೀನ ಯೋನಿಯಲ್ಲಿ ಸಂತಾನವನ್ನು ಪಡೆದರೆ ಆ ಸಂತಾನವು ಅವರ ತಾಯಿಯ ಜಾತಿಯನ್ನು ಪಡೆದುಕೊಳ್ಳುತ್ತದೆ.

13048015a ಯಥಾ ಚತುರ್ಷು ವರ್ಣೇಷು ದ್ವಯೋರಾತ್ಮಾಸ್ಯ ಜಾಯತೇ|

13048015c ಆನಂತರ್ಯಾತ್ತು ಜಾಯಂತೇ ತಥಾ ಬಾಹ್ಯಾಃ ಪ್ರಧಾನತಃ||

ನಾಲ್ಕು ವರ್ಣದವರಲ್ಲಿ ಎರಡು ವರ್ಣದ ಸ್ತ್ರೀಯಲ್ಲಿ ಹುಟ್ಟಿದವರು ಹೇಗೆ ತಂದೆಯ ಜಾತಿಯನ್ನು ಪಡೆದುಕೊಳ್ಳುತ್ತಾರೋ ಹಾಗೆ ಉಳಿದ ವರ್ಣದ ಸ್ತ್ರೀಯಲ್ಲಿ ಹುಟ್ಟಿದವರು ತಾಯಿಯ ಜಾತಿಯನ್ನು ಪಡೆದುಕೊಳ್ಳುತ್ತಾರೆ[1].

13048016a ತೇ ಚಾಪಿ ಸದೃಶಂ ವರ್ಣಂ ಜನಯಂತಿ ಸ್ವಯೋನಿಷು|

13048016c ಪರಸ್ಪರಸ್ಯ ವರ್ತಂತೋ ಜನಯಂತಿ ವಿಗರ್ಹಿತಾನ್||

ಹೀಗೆ ವರ್ಣಸಂಕರದಲ್ಲಿ ಹುಟ್ಟಿದವರೂ ತಮ್ಮ ತಮ್ಮ ಜಾತಿಯವರಲ್ಲಿ ಸಂತಾನವನ್ನು ಪಡೆದುಕೊಂಡು ತಮ್ಮದೇ ಜಾತಿಯವರನ್ನು ಹುಟ್ಟಿಸುತ್ತಾರೆ. ಆದರೆ ಅವರು ಇತರ ವರ್ಣಸಂಕರ ಜಾತಿಯವರಲ್ಲಿ ಸಂತಾನವನ್ನು ಪಡೆದುಕೊಂಡರೆ ಆ ಸಂತಾನವು ತಂದೆಯ ಜಾತಿಗಿಂತಲೂ ನಿಂದನೀಯ ಜಾತಿಯನ್ನೇ ಪಡೆದುಕೊಳ್ಳುತ್ತದೆ.

13048017a ಯಥಾ ಚ ಶೂದ್ರೋ ಬ್ರಾಹ್ಮಣ್ಯಾಂ ಜಂತುಂ ಬಾಹ್ಯಂ ಪ್ರಸೂಯತೇ|

13048017c ಏವಂ ಬಾಹ್ಯತರಾದ್ಬಾಹ್ಯಶ್ಚಾತುರ್ವರ್ಣ್ಯಾತ್ಪ್ರಸೂಯತೇ||

ಬ್ರಾಹ್ಮಣಿಯಲ್ಲಿ ಶೂದ್ರನು ಹೇಗೆ ಬಾಹ್ಯವರ್ಣದ ಸಂತಾನವನ್ನು ಹುಟ್ಟಿಸುತ್ತಾನೋ ಹಾಗೆ ಬಾಹ್ಯವರ್ಣದವರು ಅನ್ಯ ಬಾಹ್ಯವರ್ಣದ ಸ್ತ್ರೀಯಲ್ಲಿ ಸಂತಾನ ಪಡೆದರೆ ಅವರೂ ಕೂಡ ಚಾತುರ್ವಣ್ಯದ ಬಾಹ್ಯ ವರ್ಣದ ಸಂತಾನವನ್ನು ಪಡೆದುಕೊಳ್ಳುತ್ತಾರೆ.

13048018a ಪ್ರತಿಲೋಮಂ ತು ವರ್ತಂತೋ ಬಾಹ್ಯಾದ್ಬಾಹ್ಯತರಂ ಪುನಃ|

13048018c ಹೀನಾ ಹೀನಾತ್ಪ್ರಸೂಯಂತೇ ವರ್ಣಾಃ ಪಂಚದಶೈವ ತೇ||

ಹೀಗೆ ಬಾಹ್ಯ ಮತ್ತು ಬಾಹ್ಯತರ ವರ್ಣಗಳ ಪ್ರತಿಲೋಮ ಸಂಬಂಧಗಳಿಂದ ವರ್ಣಸಂಕರವು ಹೆಚ್ಚಾಗುತ್ತದೆ. ಕ್ರಮಶಃ ಹೀನ ಮತ್ತು ಅತಿಹೀನ ಮಕ್ಕಳು ಹುಟ್ಟುತ್ತಾರೆ. ಇಂತಹ ವರ್ಣಗಳ ಸಂಖ್ಯೆ ಹದಿನೈದು.

13048019a ಅಗಮ್ಯಾಗಮನಾಚ್ಚೈವ ವರ್ತತೇ ವರ್ಣಸಂಕರಃ|

13048019c ವ್ರಾತ್ಯಾನಾಮತ್ರ ಜಾಯಂತೇ ಸೈರಂಧ್ರಾ ಮಾಗಧೇಷು ಚ|

13048019e ಪ್ರಸಾಧನೋಪಚಾರಜ್ಞಮದಾಸಂ ದಾಸಜೀವನಮ್||

ಅಗಮ್ಯ ಸ್ತ್ರೀಯೊಡನೆ ಕೂಡುವುದರಿಂದಲೇ ವರ್ಣಸಂಕರವಾಗುತ್ತದೆ. ಮಾಗಧ ಜಾತಿಯ ಸೈರಂಧ್ರೀ ಸ್ತ್ರೀಯರಲ್ಲಿ ಬ್ರಾಹ್ಮಣಪುರುಷನಿಗೆ ಹುಟ್ಟುವ ಮಗನು ರಾಜಾದಿ ಪುರುಷರ ಶೃಂಗಾರಕರ್ಮಗಳಲ್ಲಿ ನಿರತನಾಗಿದ್ದುಕೊಂಡು ದಾಸನಲ್ಲದಿದ್ದರೂ ದಾಸಜೀವನವನ್ನು ನಡೆಸುತ್ತಾನೆ.

13048020a ಅತಶ್ಚಾಯೋಗವಂ ಸೂತೇ ವಾಗುರಾವನಜೀವನಮ್|

13048020c ಮೈರೇಯಕಂ ಚ ವೈದೇಹಃ ಸಂಪ್ರಸೂತೇಽಥ ಮಾಧುಕಮ್||

ಮಾಗಧ ಜಾತಿಯ ಆವಾಂತರ ಸೈರಂಧ್ರ ಜಾತಿಯ ಸ್ತ್ರೀಯಲ್ಲಿ ಆಯೋಗವ ಜಾತಿಯ ಪುರುಷನಿಗೆ ಹುಟ್ಟುವ ಮಗನು ಕಾಡಿನಲ್ಲಿ ಬಲೆಯನ್ನು ಬೀಸಿ ಪ್ರಾಣಿಗಳನ್ನು ಹಿಡಿದು ಜೀವನ ಮಾಡುವ ಆಯೋಗವ ಜಾತಿಯವನೇ ಆಗುತ್ತಾನೆ. ಆಯೋಗವ ಜಾತಿಯ ಸ್ತ್ರೀಯಲ್ಲಿ ವೈದೇಹ ಜಾತಿಯವನಿಗೆ ಪುತ್ರನಾದರೆ ಅವನು ಮದ್ಯತಯಾರಿಸುವ ಮೈರೇಯಕ ಜಾತಿಯವನಾಗುತ್ತಾನೆ.

13048021a ನಿಷಾದೋ ಮುದ್ಗರಂ ಸೂತೇ ದಾಶಂ ನಾವೋಪಜೀವಿನಮ್|

13048021c ಮೃತಪಂ ಚಾಪಿ ಚಂಡಾಲಃ ಶ್ವಪಾಕಮತಿಕುತ್ಸಿತಮ್||

ಮಾಗಧ ಸೈರಂಧ್ರಿಯಲ್ಲಿ ನಿಷಾದ ಜಾತಿಯವನಿಗೆ ಪುತ್ರನು ಜನಿಸಿದರೆ ಅವನು ಮುದ್ಗರ ಜಾತಿಯವನಾಗುತ್ತಾನೆ. ದೋಣಿಯಿಂದ ಜೀವನ ನಡೆಸುವ ಅವರನ್ನು ದಾಶರೆಂದೂ ಕರೆಯುತ್ತಾರೆ. ಚಾಂಡಾಲ ಮತ್ತು ಮಾಗಧ ಸೈರಂಧ್ರಿಯರಲ್ಲಿ ಹುಟ್ಟುವವನು ಶ್ವಪಾಕ ಎಂಬ ಅತಿ ಕುತ್ಸಿತ ಜಾತಿಯವನಾಗುತ್ತಾನೆ.

13048022a ಚತುರೋ ಮಾಗಧೀ ಸೂತೇ ಕ್ರೂರಾನ್ಮಾಯೋಪಜೀವಿನಃ|

13048022c ಮಾಂಸಸ್ವಾದುಕರಂ ಸೂದಂ ಸೌಗಂಧಮಿತಿ ಸಂಜ್ಞಿತಮ್||

ಈ ಪ್ರಕಾರ ಮಾಗಧ ಜಾತಿಯ ಸೈರಂಧ್ರೀ ಸ್ತ್ರೀಯು ಆಯೋಗವ ಮೊದಲಾದ ನಾಲ್ಕು ಜಾತಿಯವರನ್ನು ಸೇರಿ ಮಾಯೆಯಿಂದ ಜೀವನನಡೆಸುವ ಈ ನಾಲ್ಕು ಪ್ರಕಾರದ ಕ್ರೂರ ಪುತ್ರರಿಗೆ ಜನ್ಮ ನೀಡುತ್ತಾಳೆ. ಇದಲ್ಲದೇ ಅವಳಲ್ಲಿ ಇನ್ನೂ ನಾಲ್ಕು ಪ್ರಕಾರದ ಪುತ್ರರು ಹುಟ್ಟುತ್ತಾರೆ – ಮಾಂಸ, ಸ್ವಾದುಕರ, ಸೂದ ಮತ್ತು ಸೌಗಂಧ.

13048023a ವೈದೇಹಕಾಚ್ಚ ಪಾಪಿಷ್ಠಂ ಕ್ರೂರಂ ಭಾರ್ಯೋಪಜೀವಿನಮ್|

13048023c ನಿಷಾದಾನ್ಮದ್ರನಾಭಂ ಚ ಖರಯಾನಪ್ರಯಾಯಿನಮ್||

ಆಯೋಗಾವ ಜಾತಿಯ ಪಾಪಿಷ್ಠ ಸ್ತ್ರೀಯು ವೈದೇಹ ಜಾತಿಯ ಪುರುಷನೊಡನೆ ಸಮಾಗಮಿಸಿ ಅತ್ಯಂತ ಕ್ರೂರ ಮಾಯಾಜೀವಿ ಪುತ್ರನಿಗೆ ಜನ್ಮನೀಡುತ್ತಾಳೆ. ಅವಳೇ ನಿಷಾದನ ಸಂಯೋಗದಿಂದ ಕತ್ತೆಯ ಸವಾರಿ ಮಾಡುವ ಮದ್ರನಾಭ ಎನ್ನುವ ಜಾತಿಗೆ ಜನ್ಮಕೊಡುತ್ತಾಳೆ.

13048024a ಚಂಡಾಲಾತ್ಪುಲ್ಕಸಂ ಚಾಪಿ ಖರಾಶ್ವಗಜಭೋಜಿನಮ್|

13048024c ಮೃತಚೇಲಪ್ರತಿಚ್ಚನ್ನಂ ಭಿನ್ನಭಾಜನಭೋಜಿನಮ್||

ಅದೇ ಪಾಪಿಷ್ಠ ಸ್ತ್ರೀಯು ಚಾಂಡಲನನ್ನು ಕೂಡಿದರೆ ಆಗ ಅವಳು ಕತ್ತೆ, ಕುದುರೆ, ಮತ್ತು ಆನೆಗಳ ಮಾಂಸವನ್ನು ತಿನ್ನುವ ಪುಲ್ಕಸ ಎಂಬ ಹೆಸರಿನ ಜಾತಿಗೆ ಜನ್ಮನೀಡುತ್ತಾಳೆ. ಅವರು ಮೃತಶರೀರಕ್ಕೆ ಹೊದಿಸಿದ ಬಟ್ಟೆಯನ್ನು ಉಡುತ್ತಾರೆ ಮತ್ತು ಒಡೆದ ಪಾತ್ರೆಗಳಲ್ಲಿ ಊಟಮಾಡುತ್ತಾರೆ.

13048025a ಆಯೋಗವೀಷು ಜಾಯಂತೇ ಹೀನವರ್ಣಾಸು ತೇ ತ್ರಯಃ|

13048025c ಕ್ಷುದ್ರೋ ವೈದೇಹಕಾದಂಧ್ರೋ ಬಹಿರ್ಗ್ರಾಮಪ್ರತಿಶ್ರಯಃ||

13048026a ಕಾರಾವರೋ ನಿಷಾದ್ಯಾಂ ತು ಚರ್ಮಕಾರಾತ್ಪ್ರಜಾಯತೇ|

ಈ ಪ್ರಕಾರ ಈ ಮೂರು ನೀಚಜಾತಿಯ ಮನುಷ್ಯ ಆಯೋಗವಿಯ ಸಂತಾನಗಳು. ನಿಷಾದ ಜಾತಿಯ ಸ್ತ್ರೀಯು ವೈದೇಹ ಜಾತಿಯ ಪುರುಷನ ಸಂಸರ್ಗದಿಂದ ಕ್ಷುದ್ರ, ಅಂಧ್ರ ಮತ್ತು ಕಾರಾವರ ಎಂಬ ಹೆಸರಿನ ಜಾತಿಯ ಪುತ್ರರನ್ನು ಹುಟ್ಟಿಸುತ್ತಾಳೆ. ಇವರಲ್ಲಿ ಕ್ಷುದ್ರ ಮತ್ತು ಅಂಧ್ರರು ಗ್ರಾಮದ ಹೊರಗೆ ವಾಸಿಸುತ್ತಾರೆ. ಮತ್ತು ವನ್ಯ ಮೃಗಗಳನ್ನು ಹಿಂಸಿಸಿ ಜೀವನ ನಡೆಸುತ್ತಾರೆ. ಕಾರಾವರರು ಮೃತ ಪ್ರಾಣಿಗಳ ಚರ್ಮದ ವ್ಯವಹಾರ ಮಾಡುತ್ತಾರೆ. ಇದರಿಂದಲೇ ಅವರನ್ನು ಚರ್ಮಕಾರರೆಂದು ಕರೆಯುತ್ತಾರೆ.

13048026c ಚಂಡಾಲಾತ್ಪಾಂಡುಸೌಪಾಕಸ್ತ್ವಕ್ಸಾರವ್ಯವಹಾರವಾನ್||

13048027a ಆಹಿಂಡಿಕೋ ನಿಷಾದೇನ ವೈದೇಹ್ಯಾಂ ಸಂಪ್ರಜಾಯತೇ|

13048027c ಚಂಡಾಲೇನ ತು ಸೌಪಾಕೋ ಮೌದ್ಗಲ್ಯಸಮವೃತ್ತಿಮಾನ್||

ಚಾಂಡಾಲ ಪುರುಷ ಮತ್ತು ನಿಷಾದ ಜಾತಿಯ ಸ್ತ್ರೀಯ ಸಂಯೋಗದಿಂದ ಪಾಂಡುಸೌಪಾಕ ಜಾತಿಯ ಜನ್ಮವಾಗುತ್ತದೆ. ವೈದೇಹ ಜಾತಿಯ ಸ್ತ್ರೀಯೊಡನೆ ನಿಷಾದ ಪುರುಷನ ಸಂಪರ್ಕವಾದರೆ ಆಹಿಂಡಿಕನ ಜನ್ಮವಾಗುತ್ತದೆ. ಆದರೆ ಅದೇ ಸ್ತ್ರೀ ಚಾಂಡಾಲನೊಡನೆ ಸಂಪರ್ಕಿಸಿದರೆ ಅವಳಿಂದ ಸೌಪಾಕನ ಉತ್ಪತ್ತಿಯಾಗುತ್ತದೆ. ಸೌಪಾಕನ ಜೀವವೃತ್ತಿಯು ಚಾಂಡಾಲನ ಜೀವವೃತ್ತಿಗೆ ಸಮನಾಗಿರುತ್ತದೆ.

13048028a ನಿಷಾದೀ ಚಾಪಿ ಚಂಡಾಲಾತ್ಪುತ್ರಮಂತಾವಸಾಯಿನಮ್|

13048028c ಶ್ಮಶಾನಗೋಚರಂ ಸೂತೇ ಬಾಹ್ಯೈರಪಿ ಬಹಿಷ್ಕೃತಮ್||

ನಿಷಾದ ಜಾತಿಯ ಸ್ತ್ರೀಯಲ್ಲಿ ಚಾಂಡಾಲನ ವೀರ್ಯದಿಂದ ಅಂತಾವಸಾಯಿಯ ಜನ್ಮವಾಗುತ್ತದೆ. ಈ ಜಾತಿಯ ಜನರು ಸದಾ ಶ್ಮಶಾನದಲ್ಲಿಯೇ ಇರುತ್ತಾರೆ. ನಿಷಾದ ಮೊದಲಾದ ಬಾಹ್ಯಜಾತಿಯವರೂ ಕೂಡ ಇವರನ್ನು ಬಹಿಷ್ಕೃತಗೊಳಿಸುತ್ತಾರೆ.

13048029a ಇತ್ಯೇತಾಃ ಸಂಕರೇ ಜಾತ್ಯಃ ಪಿತೃಮಾತೃವ್ಯತಿಕ್ರಮಾತ್|

13048029c ಪ್ರಚ್ಚನ್ನಾ ವಾ ಪ್ರಕಾಶಾ ವಾ ವೇದಿತವ್ಯಾಃ ಸ್ವಕರ್ಮಭಿಃ||

ಈ ಪ್ರಕಾರ ಮಾತಾ-ಪಿತೃಗಳ ವ್ಯತಿಕ್ರಮದಿಂದಾಗಿ ವರ್ಣಸಂಕರ ಜಾತಿಗಳು ಉತ್ಪನ್ನವಾಗುತ್ತವೆ. ಇವುಗಳಲ್ಲಿ ಕೆಲವು ಪ್ರಕಟವಾದರೆ ಇನ್ನು ಕೆಲವು ಗುಪ್ತವಾಗಿಯೇ ಇರುತ್ತವೆ. ಇವುಗಳನ್ನು ಇವರ ಕರ್ಮಗಳಿಂದಲೇ ಗುರಿತಿಸಬಹುದಾಗಿದೆ.

13048030a ಚತುರ್ಣಾಮೇವ ವರ್ಣಾನಾಂ ಧರ್ಮೋ ನಾನ್ಯಸ್ಯ ವಿದ್ಯತೇ|

13048030c ವರ್ಣಾನಾಂ ಧರ್ಮಹೀನೇಷು ಸಂಜ್ಞಾ ನಾಸ್ತೀಹ ಕಸ್ಯ ಚಿತ್||

ಶಾಸ್ತ್ರಗಳಲ್ಲಿ ನಾಲ್ಕೇ ವರ್ಣಗಳ ಧರ್ಮದ ಕುರಿತು ನಿಶ್ಚಯಿಸಲಾಗಿದೆ. ಅನ್ಯ ವರ್ಣಗಳದ್ದಿಲ್ಲ. ಶಾಸ್ತ್ರಗಳಲ್ಲಿ ಧರ್ಮಹೀನ ವರ್ಣಸಂಕರ ಜಾತಿಗಳಲ್ಲಿ ಯಾವುದಕ್ಕೂ ವರ್ಣಸಂಬಂಧೀ ಭೇದ ಅಥವಾ ಉಪಭೇದಗಳ ನಿಯಮಿತ ಸಂಖ್ಯೆಯಿಲ್ಲ.

13048031a ಯದೃಚ್ಚಯೋಪಸಂಪನ್ನೈರ್ಯಜ್ಞಸಾಧುಬಹಿಷ್ಕೃತೈಃ|

13048031c ಬಾಹ್ಯಾ ಬಾಹ್ಯೈಸ್ತು ಜಾಯಂತೇ ಯಥಾವೃತ್ತಿ ಯಥಾಶ್ರಯಮ್||

ಜಾತಿಯ ಕುರಿತು ವಿಚಾರಿಸದೇ ಸ್ವೇಚ್ಛಾನುಸಾರ ಅನ್ಯ ವರ್ಣದ ಸ್ತ್ರೀಯರೊಡನೆ ಸಮಾಗಮ ಮಾಡುವವರು ಯಜ್ಞಗಳ ಅಧಿಕಾರ ಮತ್ತು ಸಾಧು ಪುರುಷರಿಂದ ಬಹಿಷ್ಕೃತರಾಗಿ ವರ್ಣಬಾಹಿರರಾಗುತ್ತಾರೆ. ಇವರಿಂದಲೇ ವರ್ಣಸಂಕರ ಸಂತಾನಗಳು ಉತ್ಪನ್ನವಾಗುತ್ತವೆ. ಅವರು ತಮ್ಮ ರುಚಿಗೆ ಅನುಕೂಲವಾದ ಕರ್ಮಗಳಲ್ಲಿ ತೊಡಗಿ ಬೇರೆ-ಬೇರೆ ವಿಧಾನಗಳ ಉಪಜೀವನದ ಆಶ್ರಯವನ್ನು ಪಡೆದುಕೊಳ್ಳುತ್ತಾರೆ.

13048032a ಚತುಷ್ಪಥಶ್ಮಶಾನಾನಿ ಶೈಲಾಂಶ್ಚಾನ್ಯಾನ್ವನಸ್ಪತೀನ್|

13048032c ಯುಂಜಂತೇ ಚಾಪ್ಯಲಂಕಾರಾಂಸ್ತಥೋಪಕರಣಾನಿ ಚ||

ಇಂಥವರು ಸದಾ ಲೋಹದ ಆಭೂಷಣಗಳನ್ನು ಧರಿಸಿ ಚೌಕಗಳಲ್ಲಿ, ಶ್ಮಶಾನಗಳಲ್ಲಿ, ಗುಡ್ಡಗಳ ಮೇಲೆ ಮತ್ತು ವೃಕ್ಷಗಳಡಿಯಲ್ಲಿ, ಅಲಂಕಾರಗಳನ್ನು ಮತ್ತು ಇತರ ಉಪಕರಣಗಳನ್ನು ಮಾಡಿಕೊಂಡು ವಾಸಿಸುತ್ತಾರೆ.

13048033a ಗೋಬ್ರಾಹ್ಮಣಾರ್ಥೇ ಸಾಹಾಯ್ಯಂ ಕುರ್ವಾಣಾ ವೈ ನ ಸಂಶಯಃ|

13048033c ಆನೃಶಂಸ್ಯಮನುಕ್ರೋಶಃ ಸತ್ಯವಾಕ್ಯಮಥ ಕ್ಷಮಾ||

13048034a ಸ್ವಶರೀರೈಃ ಪರಿತ್ರಾಣಂ ಬಾಹ್ಯಾನಾಂ ಸಿದ್ಧಿಕಾರಕಮ್|

13048034c ಮನುಜವ್ಯಾಘ್ರ ಭವತಿ ತತ್ರ ಮೇ ನಾಸ್ತಿ ಸಂಶಯಃ||

ಮನುಜವ್ಯಾಘ್ರ! ಒಂದು ವೇಳೆ ಇವರು ಗೋ-ಬ್ರಾಹ್ಮಣರ ಸಹಾಯಮಾಡಿದರೆ, ಕ್ರೂರಕರ್ಮಗಳನ್ನು ತ್ಯಜಿಸಿದರೆ, ಎಲ್ಲರ ಮೇಲೆ ದಯೆತೋರಿಸಿದರೆ, ಸತ್ಯವನ್ನೇ ಹೇಳಿದರೆ, ಇತರರ ಅಪರಾಧವನ್ನು ಕ್ಷಮಿಸಿದರೆ, ಮತ್ತು ತಮ್ಮ ಶರೀರವನ್ನು ಕಷ್ಟದಲ್ಲಿ ಹಾಕಿಕೊಂಡು ಇತರರ ರಕ್ಷಣೆಯನ್ನು ಮಾಡಿದರೆ ಈ ವರ್ಣಸಂಕರ ಮನುಷ್ಯರಿಗೂ ಕೂಡ ಪಾರಮಾರ್ಥಿಕ ಉನ್ನತಿಯು ಸಾಧ್ಯವಾಗುತ್ತದೆ. ಇದರಲ್ಲಿ ಸಂಶಯವೇ ಇಲ್ಲ.

13048035a ಯಥೋಪದೇಶಂ ಪರಿಕೀರ್ತಿತಾಸು

ನರಃ ಪ್ರಜಾಯೇತ ವಿಚಾರ್ಯ ಬುದ್ಧಿಮಾನ್|

13048035c ವಿಹೀನಯೋನಿರ್ಹಿ ಸುತೋಽವಸಾದಯೇತ್

ತಿತೀರ್ಷಮಾಣಂ ಸಲಿಲೇ ಯಥೋಪಲಮ್||

ಋಷಿ-ಮುನಿಗಳ ಉಪದೇಶದಂತೆ ಬುದ್ಧಿವಂತನು ವಿಚಾರಿಸಿ ಸಂತಾನವನ್ನು ಪಡೆಯಬೇಕು. ಏಕೆಂದರೆ ನೀಚ ಯೋನಿಯಲ್ಲಿ ಹುಟ್ಟುವ ಪುತ್ರನು ಭವಸಾಗರವನ್ನು ಪಾರುಮಾಡಲು ಇಚ್ಛಿಸುವ ತಂದೆಯನ್ನು ಕುತ್ತಿಗೆಗೆ ಕಟ್ಟಿಕೊಂಡ ಕಲ್ಲುಬಂಡೆಯು ಈಸುತ್ತಿರುವವನನ್ನು ಆಳಕ್ಕೆ ಕೊಂಡೊಯ್ಯುವಂತೆ ಮುಳುಗಿಸಿಬಿಡುತ್ತಾನೆ.  

13048036a ಅವಿದ್ವಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ|

13048036c ನಯಂತೇ ಹ್ಯುತ್ಪಥಂ ನಾರ್ಯಃ ಕಾಮಕ್ರೋಧವಶಾನುಗಮ್||

ಲೋಕದಲ್ಲಿ ಮೂರ್ಖನಾಗಿರಲಿ ಅಥವಾ ವಿದ್ವಾಂಸನಾಗಿರಲಿ ಅವನು ಕಾಮಕ್ರೋಧವಶನಾದರೆ ನಾರಿಯು ಅವನನ್ನು ಅವಶ್ಯವಾಗಿ ಕುಮಾರ್ಗದಲ್ಲಿ ಕೊಂಡೊಯ್ಯುತ್ತಾಳೆ.

13048037a ಸ್ವಭಾವಶ್ಚೈವ ನಾರೀಣಾಂ ನರಾಣಾಮಿಹ ದೂಷಣಮ್|

13048037c ಇತ್ಯರ್ಥಂ ನ ಪ್ರಸಜ್ಜಂತೇ ಪ್ರಮದಾಸು ವಿಪಶ್ಚಿತಃ||

ನರರನ್ನು ದೂಷಿತಗೊಳಿಸುವುದು ನಾರಿಯರ ಸ್ವಭಾವವೇ! ಆದುದರಿಂದ ವಿವೇಕೀ ಪುರುಷನು ಯುವ ಸ್ತ್ರೀಯರಲ್ಲಿ ಅಧಿಕ ಆಸಕ್ತನಾಗಿರುವುದಿಲ್ಲ.”

13048038 ಯುಧಿಷ್ಠಿರ ಉವಾಚ|

13048038a ವರ್ಣಾಪೇತಮವಿಜ್ಞಾತಂ ನರಂ ಕಲುಷಯೋನಿಜಮ್|

13048038c ಆರ್ಯರೂಪಮಿವಾನಾರ್ಯಂ ಕಥಂ ವಿದ್ಯಾಮಹೇ ನೃಪ||

ಯುಧಿಷ್ಠಿರನು ಹೇಳಿದನು: “ನೃಪ! ನಾಲ್ಕೂ ವರ್ಣಗಳಿಂದ ಬಹಿಷ್ಕೃತ ಕಲುಷಯೋನಿಯಲ್ಲಿ ಜನಿಸಿದ್ದರೂ ನೋಡಲು ಆರ್ಯಪುರುಷನಂತೆ ಕಾಣುವವರನ್ನು ನಾವು ಹೇಗೆ ಗುರುತಿಸಬಲ್ಲೆವು?”

13048039 ಭೀಷ್ಮ ಉವಾಚ|

13048039a ಯೋನಿಸಂಕಲುಷೇ ಜಾತಂ ನಾನಾಚಾರಸಮಾಹಿತಮ್|

13048039c ಕರ್ಮಭಿಃ ಸಜ್ಜನಾಚೀರ್ಣೈರ್ವಿಜ್ಞೇಯಾ ಯೋನಿಶುದ್ಧತಾ||

ಭೀಷ್ಮನು ಹೇಳಿದನು: “ಕಲುಷ ಯೋನಿಯಲ್ಲಿ ಹುಟ್ಟಿದವನಿಗೆ ಸಜ್ಜನರಿಗೆ ಹೊರತಾದ ನಾನಾ ತರಹದ ಆಚಾರಗಳಿರುತ್ತವೆ. ಆದುದರಿಂದ ಅವನ ಕರ್ಮಗಳಿಂದಲೇ ಅವನನ್ನು ಗುರುತಿಸಬೇಕು. ಆಚಾರಗಳಿಂದಲೇ ಪುರುಷನ ಯೋನಿಶುದ್ಧತೆಯನ್ನು ತಿಳಿದುಕೊಳ್ಳಬೇಕು.

13048040a ಅನಾರ್ಯತ್ವಮನಾಚಾರಃ ಕ್ರೂರತ್ವಂ ನಿಷ್ಕ್ರಿಯಾತ್ಮತಾ|

13048040c ಪುರುಷಂ ವ್ಯಂಜಯಂತೀಹ ಲೋಕೇ ಕಲುಷಯೋನಿಜಮ್||

ಅನಾರ್ಯತ್ವ, ಅನಾಚಾರ, ಕ್ರೂರತ್ವ, ನಿಷ್ಕಿಯತೆ ಮೊದಲಾದ ದೋಷಗಳು ಕಲುಷಯೋನಿಯಲ್ಲಿ ಹುಟ್ಟುವುದರಿಂದ ಸಿದ್ಧವಾಗುತ್ತವೆ.

13048041a ಪಿತ್ರ್ಯಂ ವಾ ಭಜತೇ ಶೀಲಂ ಮಾತೃಜಂ ವಾ ತಥೋಭಯಮ್|

13048041c ನ ಕಥಂ ಚನ ಸಂಕೀರ್ಣಃ ಪ್ರಕೃತಿಂ ಸ್ವಾಂ ನಿಯಚ್ಚತಿ||

ವರ್ಣಸಂಕರ ಪುರುಷನು ತನ್ನ ತಂದೆ ಅಥವಾ ತಾಯಿ ಅಥವಾ ಇಬ್ಬರ ಸ್ವಭಾವಗಳನ್ನೂ ಅನುಸರಿಸುತ್ತಾನೆ. ಯಾವುದೇ ರೀತಿಯಲ್ಲಿಯೂ ಅವನು ತನ್ನ ಪ್ರಕೃತಿಯನ್ನು ಮುಚ್ಚಿಡಲಾರ.

13048042a ಯಥೈವ ಸದೃಶೋ ರೂಪೇ ಮಾತಾಪಿತ್ರೋರ್ಹಿ ಜಾಯತೇ|

13048042c ವ್ಯಾಘ್ರಶ್ಚಿತ್ರೈಸ್ತಥಾ ಯೋನಿಂ ಪುರುಷಃ ಸ್ವಾಂ ನಿಯಚ್ಚತಿ||

ಹೇಗೆ ಹುಲಿಯ ಚಿತ್ರ-ವಿಚಿತ್ರ ಪಟ್ಟೆಗಳ ರೂಪವು ಅದರ ತಂದೆ-ತಾಯಿಗಳ ಪಟ್ಟೆಗಳಂತೆಯೇ ಇರುತ್ತದೆಯೋ ಹಾಗೆ ಮನುಷ್ಯನೂ ತನ್ನ ಯೋನಿಯ ಅನುಸರಣೆ ಮಾಡುತ್ತಾನೆ.

13048043a ಕುಲಸ್ರೋತಸಿ ಸಂಚನ್ನೇ ಯಸ್ಯ ಸ್ಯಾದ್ಯೋನಿಸಂಕರಃ|

13048043c ಸಂಶ್ರಯತ್ಯೇವ ತಚ್ಚೀಲಂ ನರೋಽಲ್ಪಮಪಿ ವಾ ಬಹು||

ಒಂದು ವೇಳೆ ಕುಲವು ಗುಪ್ತವಾಗಿದ್ದರೂ ಯಾರ ಜನ್ಮವು ಸಂಕರ ಯೋನಿಯಲ್ಲಿ ಆಗಿದೆಯೋ ಅವನು ಹೆಚ್ಚು-ಕಡಿಮೆ ತನ್ನ ತಂದೆಯ ಸ್ವಭಾವವನ್ನೇ ಪಡೆದುಕೊಂಡಿರುತ್ತಾನೆ.

13048044a ಆರ್ಯರೂಪಸಮಾಚಾರಂ ಚರಂತಂ ಕೃತಕೇ ಪಥಿ|

13048044c ಸ್ವವರ್ಣಮನ್ಯವರ್ಣಂ ವಾ ಸ್ವಶೀಲಂ ಶಾಸ್ತಿ ನಿಶ್ಚಯೇ||

ಕೃತ್ರಿಮ ಮಾರ್ಗವನ್ನು ಅನುಸರಿಸಿ ಯಾರು ಶ್ರೇಷ್ಠ ಪುರುಷರ ಅನುರೂಪ ಆಚರಣೆಗಳನ್ನು ಮಾಡುತ್ತಾರೋ ಅವರ ತಮ್ಮದೇ ವರ್ಣದವರೋ ಅಥವಾ ಅನ್ಯ ವರ್ಣದವರೋ ಎನ್ನುವುದನ್ನು ಅವರ ಶೀಲದಿಂದ ನಿಶ್ಚಯಿಸಬಹುದು.

13048045a ನಾನಾವೃತ್ತೇಷು ಭೂತೇಷು ನಾನಾಕರ್ಮರತೇಷು ಚ|

13048045c ಜನ್ಮವೃತ್ತಸಮಂ ಲೋಕೇ ಸುಶ್ಲಿಷ್ಟಂ ನ ವಿರಜ್ಯತೇ||

ಲೋಕದಲ್ಲಿ ಪ್ರಾಣಿಗಳು ನಾನಾ ಆಚಾರಗಳಲ್ಲಿ ಮತ್ತು ನಾನಾ ಕರ್ಮಗಳಲ್ಲಿ ತೊಡಗಿರುತ್ತವೆ. ಆದುದರಿಂದ ಆಚಾರವಲ್ಲದೇ ಬೇರೆ ಯಾವುದರಿಂದಲೂ ಜನ್ಮದ ರಹಸ್ಯವು ಪ್ರಕಟವಾಗುವುದಿಲ್ಲ.

13048046a ಶರೀರಮಿಹ ಸತ್ತ್ವೇನ ನರಸ್ಯ ಪರಿಕೃಷ್ಯತೇ|

13048046c ಜ್ಯೇಷ್ಠಮಧ್ಯಾವರಂ ಸತ್ತ್ವಂ ತುಲ್ಯಸತ್ತ್ವಂ ಪ್ರಮೋದತೇ||

ಈ ಶರೀರವನ್ನು ಮನುಷ್ಯನ ಸತ್ತ್ವದಿಂದ ಬೇರ್ಪಡಿಸಲಾಗುವುದಿಲ್ಲ. ಉತ್ತಮ, ಮಧ್ಯಮ ಮತ್ತು ನಿಕೃಷ್ಟವೆಂಬ ಸ್ವಭಾವಗಳಿಂದಲೇ ಶರೀರದ ನಿರ್ಮಾಣವಾಗಿದೆ. ಹಾಗೆಯೇ ಸ್ವಭಾವವೇ ಅವನಿಗೆ ಆನಂದವನ್ನು ನೀಡುತ್ತದೆ.

13048047a ಜ್ಯಾಯಾಂಸಮಪಿ ಶೀಲೇನ ವಿಹೀನಂ ನೈವ ಪೂಜಯೇತ್|

13048047c ಅಪಿ ಶೂದ್ರಂ ತು ಸದ್ವೃತ್ತಂ ಧರ್ಮಜ್ಞಮಭಿಪೂಜಯೇತ್||

ಉಚ್ಚ ಜಾತಿಯಲ್ಲಿ ಹುಟ್ಟಿದರೂ ಶೀಲದಿಂದ ವಿಹೀನನಾದವನನ್ನು ಪೂಜಿಸಬಾರದು. ಹಾಗೆಯೇ ಸದ್ವೃತ್ತನಾದ ಧರ್ಮಜ್ಞನು ಶೂದ್ರನಾಗಿದ್ದರೂ ಅವನನ್ನು ಪೂಜಿಸಬೇಕು.

13048048a ಆತ್ಮಾನಮಾಖ್ಯಾತಿ ಹಿ ಕರ್ಮಭಿರ್ನರಃ

ಸ್ವಶೀಲಚಾರಿತ್ರಕೃತೈಃ ಶುಭಾಶುಭೈಃ|

13048048c ಪ್ರನಷ್ಟಮಪ್ಯಾತ್ಮಕುಲಂ ತಥಾ ನರಃ

ಪುನಃ ಪ್ರಕಾಶಂ ಕುರುತೇ ಸ್ವಕರ್ಮಭಿಃ||

ಮನುಷ್ಯನು ತನ್ನ ಶುಭಾಶುಭ ಕರ್ಮಗಳು, ಶೀಲ, ಆಚರಣೆ ಮತ್ತು ಕುಲದ ಮೂಲಕ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ. ಒಂದು ವೇಳೆ ಅವನ ಕುಲವು ನಷ್ಟವಾಗಿ ಹೋದರೂ ಅವನು ತನ್ನ ಕರ್ಮಗಳ ಮೂಲಕ ಪುನಃ ಶೀಘ್ರವಾಗಿ ಅದನ್ನು ಪ್ರಕಾಶಕ್ಕೆ ತರಬಹುದು.

13048049a ಯೋನಿಷ್ವೇತಾಸು ಸರ್ವಾಸು ಸಂಕೀರ್ಣಾಸ್ವಿತರಾಸು ಚ|

13048049c ಯತ್ರಾತ್ಮಾನಂ ನ ಜನಯೇದ್ಬುಧಸ್ತಾಃ ಪರಿವರ್ಜಯೇತ್||

ಈಗ ಹೇಳಿರುವ ಎಲ್ಲ ನೀಚ ಯೋನಿಗಳಲ್ಲಿ ಮತ್ತು ಅನ್ಯ ನೀಚಯೋನಿಗಳಲ್ಲಿ ವಿದ್ವಾಂಸ ಪುರುಷನು ಸಂತಾನೋತ್ಪತ್ತಿಯನ್ನು ಮಾಡಬಾರದು. ಅದನ್ನು ಸರ್ವಥಾ ಪರಿತ್ಯಜಿಸುವುದೇ ಉಚಿತವು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿವಾಹಧರ್ಮೇ ವರ್ಣಸಂಕರಕಥನೇ ಅಷ್ಟಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿವಾಹಧರ್ಮೇ ವರ್ಣಸಂಕರಕಥನ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Image result for flowers against white background

[1] ನಾಲ್ಕು ವರ್ಣಗಳಲ್ಲಿ ತಮ್ಮ ಮತ್ತು ತಮಗಿಂತ ಒಂದು ಕೆಳಗಿನ ವರ್ಣದ ಸ್ತ್ರೀಯಲ್ಲಿ ಹುಟ್ಟಿಸಿದ ಮಗನು ತಮ್ಮದೇ ವರ್ಣದವನು ಎಂದಾಗುತ್ತಾನೆ. ಆದರೆ ಕೆಳಗಿನ ಒಂದು ವರ್ಣವನ್ನು ಬಿಟ್ಟು ಅದಕ್ಕೂ ಕೆಳಗಿನ ವರ್ಣದ ಸ್ತ್ರೀಯಲ್ಲಿ ಹುಟ್ಟಿಸಿದ ಮಗನು ತನ್ನ ಪ್ರಧಾನ ವರ್ಣದಿಂದ ಹೊರಹೋಗುತ್ತಾನೆ ಮತ್ತು ತಾಯಿಯ ಜಾತಿಯವನಾಗುತ್ತಾನೆ. ಹೀಗೆ ಈ ಒಂಭತ್ತು ಮಂದಿ – ಅಂಬಷ್ಠ. ಪಾರಶವ, ಉಗ್ರ, ಸೂತ, ವೈದೇಹಕ, ಚಾಂಡಾಲ, ಮಾಗಧ, ನಿಷಾದ, ಮತ್ತು ಆಯೋಗಾವ – ತಮ್ಮ ಅಥವಾ ತಮ್ಮ ಒಂದು ಮಟ್ಟ ಕೆಳಗಿನ ವರ್ಣದವಳಲ್ಲಿ ಸಂತಾನವನ್ನು ಪಡೆದರೆ ಆ ಸಂತಾನವು ತಂದೆಯ ಜಾತಿಗೇ ಸೇರುತ್ತದೆ. ಮತ್ತು ಒಂದು ಜಾತಿಯ ಅಂತರವನ್ನಿಟ್ಟುಕೊಂಡು ನೀಚಜಾತಿಯವಳಲ್ಲಿ ಸಂತಾನವನ್ನು ಪಡೆದರೆ ಆ ಸಂತಾನವು ತಾಯಿಯ ಜಾತಿಗೆ ಸೇರುತ್ತದೆ.

Comments are closed.