Anushasana Parva: Chapter 46

ಅನುಶಾಸನ ಪರ್ವ: ದಾನಧರ್ಮ ಪರ್ವ

೪೬

ಸ್ತ್ರೀಯರನ್ನು ವಸ್ತ್ರಾಭರಣಗಳಿಂದ ಸತ್ಕಾರ ಮಾಡುವುದರ ಅವಶ್ಯಕತೆಯ ಪ್ರತಿಪಾದನ (೧-೧೪).

13046001 ಭೀಷ್ಮ ಉವಾಚ|

13046001a ಪ್ರಾಚೇತಸಸ್ಯ ವಚನಂ ಕೀರ್ತಯಂತಿ ಪುರಾವಿದಃ|

13046001c ಯಸ್ಯಾಃ ಕಿಂ ಚಿನ್ನಾದದತೇ ಜ್ಞಾತಯೋ ನ ಸ ವಿಕ್ರಯಃ||

13046002a ಅರ್ಹಣಂ ತತ್ಕುಮಾರೀಣಾಮಾನೃಶಂಸ್ಯತಮಂ ಚ ತತ್|

13046002c ಸರ್ವಂ ಚ ಪ್ರತಿದೇಯಂ ಸ್ಯಾತ್ಕನ್ಯಾಯೈ ತದಶೇಷತಃ||

ಭೀಷ್ಮನು ಹೇಳಿದನು: “ಹಿಂದಿನದನ್ನು ತಿಳಿದವರು ಪ್ರಾಚೇತಸ ಪ್ರಜಾಪತಿ ದಕ್ಷನ ವಚನವನ್ನು ಕೀರ್ತನಮಾಡುತ್ತಾರೆ. ಯಾರ ಏನನ್ನೂ ತೆಗೆದುಕೊಳ್ಳದೇ ಇದ್ದರೆ ಅದು ವಿಕ್ರಯವಾಯಿತೆಂದಾಗುವುದಿಲ್ಲ. ಉದಾಹರಣೆಗೆ ಕನ್ಯೆಯ ಸಹೋದರ ಅಥವಾ ಬಂಧುವು ಅವಳ ವಸ್ತ್ರಾಲಂಕಾರಗಳಿಗೆ ಧನವನ್ನು ಸ್ವೀಕರಿಸಿ ಅದರಿಂದ ಸ್ವಂತಕ್ಕಾಗಿ ಏನನ್ನೂ ಬಳಸದೇ ಇದ್ದರೆ ಆಗ ಕನ್ಯೆಯ ವಿಕ್ರಯವು ನಡೆಯಲಿಲ್ಲ. ಅದು ಆ ಕನ್ಯೆಯ ಸತ್ಕಾರವೆಂದು ತಿಳಿಯಲಾಗುತ್ತದೆ. ಅದು ಪರಮ ದಯಾಲುತ್ವಪೂರ್ಣ ಕಾರ್ಯ. ಕನ್ಯೆಗಾಗಿ ಪ್ರಾಪ್ತಗೊಳಿಸಿದ್ದ ಧನವನ್ನು ಸಂಪೂರ್ಣವಾಗಿ ಅವಳಿಗೇ ಅರ್ಪಿಸಬೇಕು.

13046003a ಪಿತೃಭಿರ್ಭ್ರಾತೃಭಿಶ್ಚೈವ ಶ್ವಶುರೈರಥ ದೇವರೈಃ|

13046003c ಪೂಜ್ಯಾ ಲಾಲಯಿತವ್ಯಾಶ್ಚ ಬಹುಕಲ್ಯಾಣಮೀಪ್ಸುಭಿಃ||

ಕಲ್ಯಾಣವು ವಿಜೃಂಭಣೆಯಿಂದ ಆಗಲಿ ಎಂದು ಇಚ್ಛಿಸುವ ತಂದೆ, ಸಹೋದರ, ಮಾವ ಮತ್ತು ಗಂಡನ ಸಹೋದರ – ಇವರು ನವವಧುವಿನ ಪೂಜನೆಯನ್ನು ವಸ್ತ್ರಾಭರಣ-ಸತ್ಕಾರಗಳೊಂದಿಗೆ ಮಾಡಬೇಕು.

13046004a ಯದಿ ವೈ ಸ್ತ್ರೀ ನ ರೋಚೇತ ಪುಮಾಂಸಂ ನ ಪ್ರಮೋದಯೇತ್|

13046004c ಅಮೋದನಾತ್ಪುನಃ ಪುಂಸಃ ಪ್ರಜನಂ ನ ಪ್ರವರ್ಧತೇ||

13046005a ಪೂಜ್ಯಾ ಲಾಲಯಿತವ್ಯಾಶ್ಚ ಸ್ತ್ರಿಯೋ ನಿತ್ಯಂ ಜನಾಧಿಪ|

ಜನಾಧಿಪ! ಒಂದುವೇಳೆ ಸ್ತ್ರೀಯನ್ನು ಸಂಪೂರ್ಣವಾಗಿ ರಂಜಿಸದೇ ಇದ್ದರೆ ಅವಳು ತನ್ನ ಪತಿಯನ್ನು ಪ್ರಸನ್ನಗೊಳಿಸಲಾರಳು ಮತ್ತು ಅವನ ಸಂತಾನವು ವೃದ್ಧಿಯಾಗುವುದಿಲ್ಲ. ಆದುದರಿಂದ ನಿತ್ಯವೂ ಸ್ತ್ರೀಯರನ್ನು ಪೂಜಿಸಬೇಕು ಮತ್ತು ಪ್ರೀತಿಸಬೇಕು.

[1]13046005c ಅಪೂಜಿತಾಶ್ಚ ಯತ್ರೈತಾಃ ಸರ್ವಾಸ್ತತ್ರಾಫಲಾಃ ಕ್ರಿಯಾಃ|

13046005e ತದೈವ ತತ್ಕುಲಂ ನಾಸ್ತಿ ಯದಾ ಶೋಚಂತಿ ಜಾಮಯಃ||

ಎಲ್ಲಿ ಅವರ ಅನಾದರಣೆಯು ನಡೆಯುತ್ತದೆಯೋ ಅಲ್ಲಿ ಸರ್ವ ಕ್ರಿಯೆಗಳೂ ನಿಷ್ಪಲವಾಗುತ್ತವೆ. ಹೆಣ್ಣುಮಕ್ಕಳು ಶೋಕಿಸುವ ಕುಲವು ಉಳಿಯುವುದಿಲ್ಲ.

13046006a ಜಾಮೀಶಪ್ತಾನಿ ಗೇಹಾನಿ ನಿಕೃತ್ತಾನೀವ ಕೃತ್ಯಯಾ|

13046006c ನೈವ ಭಾಂತಿ ನ ವರ್ಧಂತೇ ಶ್ರಿಯಾ ಹೀನಾನಿ ಪಾರ್ಥಿವ||

ಪಾರ್ಥಿವ! ಯಾವ ಕುಲವನ್ನು ಖಿನ್ನರಾದ ಸ್ತ್ರೀಯರು ಶಪಿಸುತ್ತಾರೋ ಆ ಕುಲವು ಖಡ್ಗದಿಂದ ತುಂಡಾದಂತೆ ಕತ್ತರಿಸಿಹೋಗುತ್ತದೆ. ಅಂಥಹ ಶ್ರೀಹೀನ ಗೃಹವು ಶೋಭೆಯನ್ನು ಹೊಂದುವುದಿಲ್ಲ ಮತ್ತು ವೃದ್ಧಿಯೂ ಆಗುವುದಿಲ್ಲ.

13046007a ಸ್ತ್ರಿಯಃ ಪುಂಸಾಂ ಪರಿದದೇ ಮನುರ್ಜಿಗಮಿಷುರ್ದಿವಮ್|

13046007c ಅಬಲಾಃ ಸ್ವಲ್ಪಕೌಪೀನಾಃ ಸುಹೃದಃ ಸತ್ಯಜಿಷ್ಣವಃ||

13046008a ಈರ್ಷ್ಯವೋ ಮಾನಕಾಮಾಶ್ಚ ಚಂಡಾ ಅಸುಹೃದೋಽಬುಧಾಃ|

13046008c ಸ್ತ್ರಿಯೋ ಮಾನನಮರ್ಹಂತಿ ತಾ ಮಾನಯತ ಮಾನವಾಃ||

13046009a ಸ್ತ್ರೀಪ್ರತ್ಯಯೋ ಹಿ ವೋ ಧರ್ಮೋ ರತಿಭೋಗಾಶ್ಚ ಕೇವಲಾಃ|

13046009c ಪರಿಚರ್ಯಾನ್ನಸಂಸ್ಕಾರಾಸ್ತದಾಯತ್ತಾ ಭವಂತು ವಃ||

ಮಹಾರಾಜ ಮನುವು ಸ್ವರ್ಗಕ್ಕೆ ಹೋಗುವಾಗ ಅವನು ಸ್ತ್ರೀಯರನ್ನು ಪುರುಷರ ಕೈಯಲ್ಲಿ ಸೋಂಪಿಸಿ ಹೇಳಿದ್ದನು: “ಮನುಷ್ಯರೇ! ಸ್ತ್ರೀಯರು ಅಬಲೆಯರೂ, ಸ್ವಲ್ಪವೇ ವಸ್ತ್ರಗಳಲ್ಲಿ ಜೀವನ ನಡೆಸುವವರೂ, ಸುಹೃದರೂ, ಸತ್ಯವನ್ನು ಗೆಲ್ಲುವವರೂ, ಕುಪಿತರೂ, ಅಸುಹೃದರೂ, ಮುಗ್ಧರೂ ಆಗಿರುವರು. ಸ್ತ್ರೀಯರು ಸಮ್ಮಾನಕ್ಕೆ ಯೋಗ್ಯರು. ನೀವೆಲ್ಲರೂ ಅವರನ್ನು ಸಮ್ಮಾನಿಸಿರಿ. ಏಕೆಂದರೆ ಸ್ತ್ರೀಯೇ ಧರ್ಮಸಿದ್ಧಿಯ ಮೂಲಕಾರಣಳು. ನಿಮ್ಮ ರತಿಭೋಗ, ಪರಿಚರ್ಯೆ ಮತ್ತು ಅನ್ನಸಂಸ್ಕಾರವು ಅವಳದ್ದೇ ಅಧೀನದಲ್ಲಿರುತ್ತವೆ. 

13046010a ಉತ್ಪಾದನಮಪತ್ಯಸ್ಯ ಜಾತಸ್ಯ ಪರಿಪಾಲನಮ್|

13046010c ಪ್ರೀತ್ಯರ್ಥಂ ಲೋಕಯಾತ್ರಾ ಚ ಪಶ್ಯತ ಸ್ತ್ರೀನಿಬಂಧನಮ್||

13046011a ಸಂಮಾನ್ಯಮಾನಾಶ್ಚೈತಾಭಿಃ ಸರ್ವಕಾರ್ಯಾಣ್ಯವಾಪ್ಸ್ಯಥ|

ಸಂತಾನದ ಉತ್ಪಾದನೆ, ಹುಟ್ಟಿದವರ ಪರಿಪಾಲನೆ, ಸಂತೋಷದ ಲೋಕಯಾತ್ರೆ – ಇವು ಸ್ತ್ರೀಯರನ್ನು ಅವಲಂಬಿಸಿವೆ. ಅವರನ್ನು ಸಮ್ಮಾನಿಸಿದರೆ ನಿಮ್ಮ ಸರ್ವಕಾರ್ಯಗಳೂ ಸಿದ್ಧಿಯಾಗುತ್ತವೆ.”

13046011c ವಿದೇಹರಾಜದುಹಿತಾ ಚಾತ್ರ ಶ್ಲೋಕಮಗಾಯತ||

13046012a ನಾಸ್ತಿ ಯಜ್ಞಃ ಸ್ತ್ರಿಯಃ ಕಶ್ಚಿನ್ನ ಶ್ರಾದ್ಧಂ ನೋಪವಾಸಕಮ್|

13046012c ಧರ್ಮಸ್ತು ಭರ್ತೃಶುಶ್ರೂಷಾ ತಯಾ ಸ್ವರ್ಗಂ ಜಯತ್ಯುತ||

ಇದಕ್ಕೆ ಸಂಬಂಧಿಸಿದಂತೆ ವಿದೇಹರಾಜಕುಮಾರಿಯು ಈ ಶ್ಲೋಕವನ್ನು ಹಾಡಿದ್ದಳು: “ಸ್ತ್ರೀಗೆ ಯಾವುದೇ ಯಜ್ಞ, ಶ್ರಾದ್ಧ ಅಥವಾ ಉಪವಾಸವನ್ನು ಮಾಡಬೇಕಾಗಿಲ್ಲ. ಅವಳ ಧರ್ಮವಾದರೋ ಪತಿಶುಶ್ರೂಷಾ. ಅದರಿಂದಲೇ ಅವಳು ಸ್ವರ್ಗವನ್ನು ಜಯಿಸುತ್ತಾಳೆ ಎಂದು ಹೇಳುತ್ತಾರೆ.”

13046013a ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ|

13046013c ಪುತ್ರಾಸ್ತು ಸ್ಥವಿರೀಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ||

ಕುಮಾರಾವಸ್ಥೆಯಲ್ಲಿ ಅವಳನ್ನು ತಂದೆಯು ರಕ್ಷಿಸುತ್ತಾನೆ. ಯೌವನದಲ್ಲಿ ಪತಿಯು ರಕ್ಷಿಸುತ್ತಾನೆ. ವೃದ್ಧಾಪ್ಯದಲ್ಲಿ ಪುತ್ರನು ರಕ್ಷಿಸುತ್ತಾನೆ. ಸ್ತ್ರೀಯು ಸಾತಂತ್ರ್ಯಕ್ಕೆ ಅರ್ಹಳಲ್ಲ.

13046014a ಶ್ರಿಯ ಏತಾಃ ಸ್ತ್ರಿಯೋ ನಾಮ ಸತ್ಕಾರ್ಯಾ ಭೂತಿಮಿಚ್ಚತಾ|

13046014c ಲಾಲಿತಾ ನಿಗೃಹೀತಾ ಚ ಸ್ತ್ರೀ ಶ್ರೀರ್ಭವತಿ ಭಾರತ||

ಇವರು ಮನೆಯ ಲಕ್ಷ್ಮಿಯರು. ಉನ್ನತಿಯನ್ನು ಬಯಸುವವರು ಅವರನ್ನು ಸತ್ಕರಿಸಬೇಕು. ಭಾರತ! ತನ್ನ ವಶದಲ್ಲಿ ಇಟ್ಟುಕೊಂಡು ಪಾಲನೆ ಮಾಡುವುದರಿಂದ ಸ್ತ್ರೀಯು ಶ್ರೀಯ ಸ್ವರೂಪಳಾಗುತ್ತಾಳೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮೇ ಸ್ತ್ರೀಪ್ರಶಂಸಾ ನಾಮ ಷಟ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮೇ ಸ್ತ್ರೀಪ್ರಶಂಸಾ ಎನ್ನುವ ನಲ್ವತ್ತಾರನೇ ಅಧ್ಯಾಯವು.

Related image

[1] ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲು ಸ್ತ್ರಿಯೋ ಯತ್ರ ಚ ಪೂಜ್ಯಂತೇ ರಮಂತೇ ತತ್ರ ದೇವತಾಃ| ಎಂಬ ಶ್ಲೋಕಾರ್ಧವಿದೆ.

Comments are closed.