ಅನುಶಾಸನ ಪರ್ವ: ದಾನಧರ್ಮ ಪರ್ವ
೪೩
ದೇವಶರ್ಮನು ವಿಪುಲನು ನಿರ್ದೋಷಿಯೆಂದು ಹೇಳಿದುದು (೧-೧೫). ಭೀಷ್ಮನು ಸ್ತ್ರೀಸ್ವಭಾವಕಥನವನ್ನು ಪೂರೈಸಿದುದು (೧೬-೨೬).
13043001 ಭೀಷ್ಮ ಉವಾಚ|
13043001a ತಮಾಗತಮಭಿಪ್ರೇಕ್ಷ್ಯ ಶಿಷ್ಯಂ ವಾಕ್ಯಮಥಾಬ್ರವೀತ್|
13043001c ದೇವಶರ್ಮಾ ಮಹಾತೇಜಾ ಯತ್ತಚ್ಚೃಣು ನರಾಧಿಪ||
ಭೀಷ್ಮನು ಹೇಳಿದನು: “ನರಾಧಿಪ! ಶಿಷ್ಯನು ಬಂದುದನ್ನು ನೋಡಿ ಮಹಾತೇಜಸ್ವೀ ದೇವಶರ್ಮನು ಈ ಮಾತನ್ನಾಡಿದನು. ಅದನ್ನು ಕೇಳು.”
13043002 ದೇವಶರ್ಮೋವಾಚ|
13043002a ಕಿಂ ತೇ ವಿಪುಲ ದೃಷ್ಟಂ ವೈ ತಸ್ಮಿನ್ನದ್ಯ ಮಹಾವನೇ|
13043002c ತೇ ತ್ವಾ ಜಾನಂತಿ ನಿಪುಣ ಆತ್ಮಾ ಚ ರುಚಿರೇವ ಚ||
ದೇವಶರ್ಮನು ಹೇಳಿದನು: “ವಿಪುಲ! ಇಂದು ಆ ಮಹಾವನದಲ್ಲಿ ಏನನ್ನು ನೋಡಿದೆ? ಆ ನಿಪುಣರು ನಿನ್ನನ್ನೂ ಮತ್ತು ರುಚಿಯ ಅಂತರಾತ್ಮಗಳನ್ನು ತಿಳಿದಿರುತ್ತಾರೆ.”
13043003 ವಿಪುಲ ಉವಾಚ|
13043003a ಬ್ರಹ್ಮರ್ಷೇ ಮಿಥುನಂ ಕಿಂ ತತ್ಕೇ ಚ ತೇ ಪುರುಷಾ ವಿಭೋ|
13043003c ಯೇ ಮಾಂ ಜಾನಂತಿ ತತ್ತ್ವೇನ ತಾಂಶ್ಚ ಮೇ ವಕ್ತುಮರ್ಹಸಿ||
ವಿಪುಲನು ಹೇಳಿದನು: “ವಿಭೋ! ಬ್ರಹ್ಮರ್ಷೇ! ತತ್ತ್ವತಃ ನನ್ನನ್ನು ತಿಳಿದುಕೊಂಡಿದ್ದ ಆ ದಂಪತಿಗಳು ಯಾರು ಮತ್ತು ಆ ಪುರುಷರು ಯಾರು? ಅದನ್ನು ನನಗೆ ಹೇಳಬೇಕು.”
13043004 ದೇವಶರ್ಮೋವಾಚ|
13043004a ಯದ್ವೈ ತನ್ಮಿಥುನಂ ಬ್ರಹ್ಮನ್ನಹೋರಾತ್ರಂ ಹಿ ವಿದ್ಧಿ ತತ್|
13043004c ಚಕ್ರವತ್ಪರಿವರ್ತೇತ ತತ್ತೇ ಜಾನಾತಿ ದುಷ್ಕೃತಮ್||
ದೇವಶರ್ಮನು ಹೇಳಿದನು: “ಚಕ್ರದಂತೆ ತಿರುಗುತ್ತಿದ್ದ ಆ ದಂಪತಿಗಳು ಹಗಲು-ರಾತ್ರಿಗಳೆಂದು ತಿಳಿ. ಅವರಿಗೆ ನಿನ್ನ ದುಷ್ಕೃತವು ತಿಳಿದಿದೆ.
13043005a ಯೇ ಚ ತೇ ಪುರುಷಾ ವಿಪ್ರ ಅಕ್ಷೈರ್ದೀವ್ಯಂತಿ ಹೃಷ್ಟವತ್|
13043005c ಋತೂಂಸ್ತಾನಭಿಜಾನೀಹಿ ತೇ ತೇ ಜಾನಂತಿ ದುಷ್ಕೃತಮ್||
ವಿಪ್ರ! ಸಂತೋಷದಿಂದ ದಾಳಗಳನ್ನು ಹಿಡಿದು ಜೂಜಾಡುತ್ತಿದ್ದ ಆ ಪುರುಷರು ಋತುಗಳೆಂದು ತಿಳಿ. ಅವರಿಗೂ ನಿನ್ನ ದುಷ್ಕೃತವು ತಿಳಿದಿದೆ.
13043006a ನ ಮಾಂ ಕಶ್ಚಿದ್ವಿಜಾನೀತ ಇತಿ ಕೃತ್ವಾ ನ ವಿಶ್ವಸೇತ್|
13043006c ನರೋ ರಹಸಿ ಪಾಪಾತ್ಮಾ ಪಾಪಕಂ ಕರ್ಮ ವೈ ದ್ವಿಜ||
ದ್ವಿಜ! ಪಾಪಾತ್ಮ ನರನು ರಹಸ್ಯದಲ್ಲಿ ಪಾಪಕರ್ಮವನ್ನು ಮಾಡಿ ನನ್ನನ್ನು ಯಾರೂ ತಿಳಿಯಲಾರರು ಎಂಬ ವಿಶ್ವಾಸವನ್ನು ತಳೆಯಬಾರದು.
13043007a ಕುರ್ವಾಣಂ ಹಿ ನರಂ ಕರ್ಮ ಪಾಪಂ ರಹಸಿ ಸರ್ವದಾ|
13043007c ಪಶ್ಯಂತಿ ಋತವಶ್ಚಾಪಿ ತಥಾ ದಿನನಿಶೇಽಪ್ಯುತ||
ರಹಸ್ಯದಲ್ಲಿ ನರನು ಮಾಡುವ ಪಾಪ ಕರ್ಮಗಳನ್ನು ಸರ್ವದಾ ಋತುಗಳು ಮತ್ತು ದಿನ-ರಾತ್ರಿಗಳು ನೋಡುತ್ತಲೇ ಇರುತ್ತವೆ.
13043008a ತೇ ತ್ವಾಂ ಹರ್ಷಸ್ಮಿತಂ ದೃಷ್ಟ್ವಾ ಗುರೋಃ ಕರ್ಮಾನಿವೇದಕಮ್|
13043008c ಸ್ಮಾರಯಂತಸ್ತಥಾ ಪ್ರಾಹುಸ್ತೇ ಯಥಾ ಶ್ರುತವಾನ್ಭವಾನ್||
ಗುರುವಿಗೆ ನಿನ್ನ ಕರ್ಮವನ್ನು ಹೇಳದೇ ಹರ್ಷಪಡುತ್ತಿದ್ದ ನಿನ್ನನ್ನು ನೋಡಿ ಅವರು ನಿನಗೆ ನೆನಪಿಸಲೋಸುಗ ಹಾಗೆ ಮಾತನಾಡುತ್ತಿರುವುದನ್ನು ನೀನು ಕೇಳಿದೆ.
13043009a ಅಹೋರಾತ್ರಂ ವಿಜಾನಾತಿ ಋತವಶ್ಚಾಪಿ ನಿತ್ಯಶಃ|
13043009c ಪುರುಷೇ ಪಾಪಕಂ ಕರ್ಮ ಶುಭಂ ವಾ ಶುಭಕರ್ಮಣಃ||
ಹಗಲು-ರಾತ್ರಿಗಳು ಮತ್ತು ಋತುಗಳೂ ಕೂಡ ನಿತ್ಯವೂ ಪುರುಷನ ಪಾಪಕರ್ಮಗಳನ್ನು ಅಥವಾ ಶುಭಕರ್ಮಗಳ ಶುಭವನ್ನು ತಿಳಿದಿರುತ್ತವೆ.
13043010a ತತ್ತ್ವಯಾ ಮಮ ಯತ್ಕರ್ಮ ವ್ಯಭಿಚಾರಾದ್ಭಯಾತ್ಮಕಮ್|
13043010c ನಾಖ್ಯಾತಮಿತಿ ಜಾನಂತಸ್ತೇ ತ್ವಾಮಾಹುಸ್ತಥಾ ದ್ವಿಜ||
ದ್ವಿಜ! ನೀನು ನನಗಾಗಿ ಮಾಡಿದ ಕರ್ಮವು ವ್ಯಭಿಚಾರದಿಂದಾಗಿ ಭಯಾತ್ಮಕವಾಗಿತ್ತು. ಅದನ್ನು ನಿನಗೆ ಹೇಳಲಿಕ್ಕಾಗಲಿಲ್ಲವೆಂದು ತಿಳಿದು ಆಹೋರಾತ್ರಿಗಳು ಮತ್ತು ಋತುಗಳು ಅದನ್ನು ನಿನಗೆ ಹೇಳಿದವು.
13043011a ತೇ ಚೈವ ಹಿ ಭವೇಯುಸ್ತೇ ಲೋಕಾಃ ಪಾಪಕೃತೋ ಯಥಾ|
13043011c ಕೃತ್ವಾ ನಾಚಕ್ಷತಃ ಕರ್ಮ ಮಮ ಯಚ್ಚ ತ್ವಯಾ ಕೃತಮ್||
ಪಾಪಕರ್ಮಿಗಳು ತಾವು ಮಾಡಿದ ಕರ್ಮಗಳನ್ನು ಹೇಗೆ ಬೇರೆಯವರೊಡನೆ ಹೇಳಿಕೊಳ್ಳುವುದಿಲ್ಲವೋ ಹಾಗೆ ನೀನೂ ಕೂಡ ನೀನು ಮಾಡಿದುದನ್ನು ನನ್ನಲ್ಲಿ ಹೇಳಲಿಲ್ಲ. ಆದುದರಿಂದ ನಿನಗೆ ಪಾಪಕರ್ಮಿಗಳಿಗೆ ದೊರೆಯುವ ಲೋಕಗಳು ದೊರೆಯುತ್ತವೆ.
13043012a ತಥಾ ಶಕ್ಯಾ ಚ ದುರ್ವೃತ್ತಾ ರಕ್ಷಿತುಂ ಪ್ರಮದಾ ದ್ವಿಜ|
13043012c ನ ಚ ತ್ವಂ ಕೃತವಾನ್ಕಿಂ ಚಿದಾಗಃ ಪ್ರೀತೋಽಸ್ಮಿ ತೇನ ತೇ||
ದ್ವಿಜ! ಆ ಕರ್ಮಮಾತ್ರದಿಂದಲೇ ನೀನು ದುರ್ವೃತ್ತ ಪ್ರಮದೆಯನ್ನು ರಕ್ಷಿಸಲು ಶಕ್ಯನಾಗಿದ್ದೆ. ಆದರೂ ನೀನು ಅವಳೊಡನೆ ಯಾವ ದುಷ್ಕರ್ಮವನ್ನೂ ಎಸಗಲಿಲ್ಲ. ಆದುದರಿಂದ ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ.
13043013a ಯದಿ ತ್ವಹಂ ತ್ವಾ ದುರ್ವೃತ್ತಮದ್ರಾಕ್ಷಂ ದ್ವಿಜಸತ್ತಮ|
13043013c ಶಪೇಯಂ ತ್ವಾಮಹಂ ಕ್ರೋಧಾನ್ನ ಮೇಽತ್ರಾಸ್ತಿ ವಿಚಾರಣಾ||
ದ್ವಿಜಸತ್ತಮ! ಒಂದು ವೇಳೆ ನೀನು ಕೆಟ್ಟದ್ದಾಗಿ ನಡೆದುಕೊಂಡಿದ್ದೆಯೆಂದು ದಿವ್ಯದೃಷ್ಠಿಯಿಂದ ತಿಳಿದಿದ್ದರೆ ನಾನು ನಿನ್ನನ್ನು ಕ್ರೋಧದಿಂದ ಶಪಿಸುತ್ತಿದ್ದೆ. ಅದರಲ್ಲಿ ಸ್ವಲ್ಪವೂ ವಿಚಾರಮಾಡುತ್ತಿರಲಿಲ್ಲ.
13043014a ಸಜ್ಜಂತಿ ಪುರುಷೇ ನಾರ್ಯಃ ಪುಂಸಾಂ ಸೋಽರ್ಥಶ್ಚ ಪುಷ್ಕಲಃ|
13043014c ಅನ್ಯಥಾ ರಕ್ಷತಃ ಶಾಪೋಽಭವಿಷ್ಯತ್ತೇ ಗತಿಶ್ಚ ಸಾ||
ನಾರಿಯರು ಪುರುಷರಲ್ಲಿ ಆಸಕ್ತಿಯನ್ನಿಟ್ಟಿರುತ್ತಾರೆ. ಹಾಗೆ ಪುರುಷರೂ ಕೂಡ ನಾರಿಯರಲ್ಲಿ ಪುಷ್ಕಲ ಆಸಕ್ತಿಯನ್ನಿಟ್ಟಿರುತ್ತಾರೆ. ನೀನು ಅವಳನ್ನು ಅನ್ಯಥಾ ರಕ್ಷಿಸಿದ್ದೇ ಆಗಿದ್ದರೆ ನಿನಗೆ ಶಾಪವೂ ದುರ್ಗತಿಯೂ ತಪ್ಪುತ್ತಿರಲಿಲ್ಲ.
13043015a ರಕ್ಷಿತಾ ಸಾ ತ್ವಯಾ ಪುತ್ರ ಮಮ ಚಾಪಿ ನಿವೇದಿತಾ|
13043015c ಅಹಂ ತೇ ಪ್ರೀತಿಮಾಂಸ್ತಾತ ಸ್ವಸ್ತಿ ಸ್ವರ್ಗಂ ಗಮಿಷ್ಯಸಿ||
ಪುತ್ರ! ಅವಳನ್ನು ನೀನು ರಕ್ಷಿಸಿ ನನಗೊಪ್ಪಿಸಿದೆ. ಅಯ್ಯಾ! ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ. ಸ್ವರ್ಗಕ್ಕೆ ಹೋಗುತ್ತೀಯೆ.””
13043016 ಭೀಷ್ಮ ಉವಾಚ|
13043016a ಇತ್ಯುಕ್ತ್ವಾ ವಿಪುಲಂ ಪ್ರೀತೋ ದೇವಶರ್ಮಾ ಮಹಾನೃಷಿಃ|
13043016c ಮುಮೋದ ಸ್ವರ್ಗಮಾಸ್ಥಾಯ ಸಹಭಾರ್ಯಃ ಸಶಿಷ್ಯಕಃ||
ಭೀಷ್ಮನು ಹೇಳಿದನು: “ಹೀಗೆ ವಿಪುಲನಿಗೆ ಹೇಳಿ ಪ್ರೀತನಾದ ಮಹಾನೃಷಿ ದೇವಶರ್ಮನು ಸ್ವರ್ಗವನ್ನು ಸೇರಿ ಭಾರ್ಯೆ ಮತ್ತು ಶಿಷ್ಯನೊಂದಿಗೆ ಮೋದಿಸಿದನು.
13043017a ಇದಮಾಖ್ಯಾತವಾಂಶ್ಚಾಪಿ ಮಮಾಖ್ಯಾನಂ ಮಹಾಮುನಿಃ|
13043017c ಮಾರ್ಕಂಡೇಯಃ ಪುರಾ ರಾಜನ್ಗಂಗಾಕೂಲೇ ಕಥಾಂತರೇ||
ರಾಜನ್! ಹಿಂದೆ ಗಂಗಾಕೂಲದಲ್ಲಿ ಮಾತುಕಥೆಗಳ ಮಧ್ಯೆ ಈ ಆಖ್ಯಾನವನ್ನು ಮಹಾಮುನಿ ಮಾರ್ಕಂಡೇಯನು ನನಗೆ ಹೇಳಿದ್ದನು.
13043018a ತಸ್ಮಾದ್ಬ್ರವೀಮಿ ಪಾರ್ಥ ತ್ವಾ ಸ್ತ್ರಿಯಃ ಸರ್ವಾಃ ಸದೈವ ಚ|
13043018c ಉಭಯಂ ದೃಶ್ಯತೇ ತಾಸು ಸತತಂ ಸಾಧ್ವಸಾಧು ಚ||
ಪಾರ್ಥ! ಆದುದರಿಂದ ನೀನು ಎಲ್ಲ ಸ್ತ್ರೀಯರನ್ನೂ ಸದೈವ ರಕ್ಷಿಸಬೇಕೆಂದು ಹೇಳುತ್ತೇನೆ. ಅವರಲ್ಲಿ ಸತತವೂ ಸಾಧು ಮತ್ತು ಅಸಾಧು ಎರಡೂ ಕಂಡುಬರುತ್ತವೆ.
13043019a ಸ್ತ್ರಿಯಃ ಸಾಧ್ವ್ಯೋ ಮಹಾಭಾಗಾಃ ಸಂಮತಾ ಲೋಕಮಾತರಃ|
13043019c ಧಾರಯಂತಿ ಮಹೀಂ ರಾಜನ್ನಿಮಾಂ ಸವನಕಾನನಾಮ್||
ರಾಜನ್! ಮಹಾಭಾಗ ಸಾಧ್ವಿ ಸ್ತ್ರೀಯರು ಲೋಕಮಾತರರೆಂದು ಸನ್ಮಾನಿಸಲ್ಪಟ್ಟು ಈ ವನಕಾನನಗಳೊಂದಿಗೆ ಇಡೀ ಭೂಮಿಯನ್ನೇ ಧರಿಸುತ್ತಾರೆ.
13043020a ಅಸಾಧ್ವ್ಯಶ್ಚಾಪಿ ದುರ್ವೃತ್ತಾಃ ಕುಲಘ್ನ್ಯಃ ಪಾಪನಿಶ್ಚಯಾಃ|
13043020c ವಿಜ್ಞೇಯಾ ಲಕ್ಷಣೈರ್ದುಷ್ಟೈಃ ಸ್ವಗಾತ್ರಸಹಜೈರ್ನೃಪ||
ನೃಪ! ಪಾಪನಿಶ್ಚಯರೂ ದುರ್ವೃತ್ತರೂ ಆದ ಅಸಾಧ್ವಿಯರು ಕುಲವನ್ನು ನಾಶಮಾಡುತ್ತಾರೆ. ಅವರ ಸಹಜವಾದ ಶರೀರ ಲಕ್ಷಣಗಳಿಂದ ದುಷ್ಟತನವನ್ನು ತಿಳಿದುಕೊಳ್ಳಬೇಕು.
13043021a ಏವಮೇತಾಸು ರಕ್ಷಾ ವೈ ಶಕ್ಯಾ ಕರ್ತುಂ ಮಹಾತ್ಮಭಿಃ|
13043021c ಅನ್ಯಥಾ ರಾಜಶಾರ್ದೂಲ ನ ಶಕ್ಯಾ ರಕ್ಷಿತುಂ ಸ್ತ್ರಿಯಃ||
ಅಂತಹ ಸ್ತ್ರೀಯರನ್ನು ಮಹಾತ್ಮರು ಮಾತ್ರ ರಕ್ಷಿಸಲು ಶಕ್ಯರು. ರಾಜಶಾರ್ದೂಲ! ಅನ್ಯಥಾ ಅಂತಹ ಸ್ತ್ರೀಯರನ್ನು ರಕ್ಷಿಸುವುದು ಶಕ್ಯವಿಲ್ಲ.
13043022a ಏತಾ ಹಿ ಮನುಜವ್ಯಾಘ್ರ ತೀಕ್ಷ್ಣಾಸ್ತೀಕ್ಷ್ಣಪರಾಕ್ರಮಾಃ|
13043022c ನಾಸಾಮಸ್ತಿ ಪ್ರಿಯೋ ನಾಮ ಮೈಥುನೇ ಸಂಗಮೇ ನೃಭಿಃ||
ಮನುಜವ್ಯಾಘ್ರ! ಅಸಾಧ್ವಿಯರು ಅತಿ ತೀಕ್ಷ್ಣ ಪರಾಕ್ರಮವುಳ್ಳವರು. ಅವರಿಗೆ ಪ್ರಿಯನೆಂಬುವವನು ಯಾರೂ ಇರುವುದಿಲ್ಲ. ಎಲ್ಲರೂ ಮೈಥುನ ಸಂಬಂಧದಲ್ಲಿ ಮಾತ್ರ ಪ್ರಿಯರಾಗಿರುತ್ತಾರೆ.
13043023a ಏತಾಃ ಕೃತ್ಯಾಶ್ಚ ಕಾರ್ಯಾಶ್ಚ ಕೃತಾಶ್ಚ ಭರತರ್ಷಭ|
13043023c ನ ಚೈಕಸ್ಮಿನ್ರಮಂತ್ಯೇತಾಃ ಪುರುಷೇ ಪಾಂಡುನಂದನ||
ಭರತರ್ಷಭ! ಪಾಂಡುನಂದನ! ಇಂಥವರು ಮಾಟದ ಬೊಂಬೆಯಂತೆ. ಮಾಟದ ಕಾರ್ಯವನ್ನು ಮಾಡುತ್ತಾರೆ. ಒಬ್ಬನೇ ಪುರುಷನಲ್ಲಿ ಇವರು ಯಾವಾಗಲೂ ರಮಿಸುವುದಿಲ್ಲ.
13043024a ನಾಸು ಸ್ನೇಹೋ ನೃಭಿಃ ಕಾರ್ಯಸ್ತಥೈವೇರ್ಷ್ಯಾ ಜನೇಶ್ವರ|
13043024c ಖೇದಮಾಸ್ಥಾಯ ಭುಂಜೀತ ಧರ್ಮಮಾಸ್ಥಾಯ ಚೈವ ಹಿ||
ಜನೇಶ್ವರ! ಅಂಥವರಲ್ಲಿ ಸ್ನೇಹವನ್ನಿಟ್ಟುಕೊಂಡಿರಬಾರದು. ಅಸಹನೆಯನ್ನೂ ತೋರಿಸಬಾರದು. ನಿರಾಸಕ್ತನಾಗಿ ಧರ್ಮದ ಪ್ರಕಾರವೇ ಅವರನ್ನು ಭೋಗಿಸಬೇಕು.
13043025a ವಿಹನ್ಯೇತಾನ್ಯಥಾ ಕುರ್ವನ್ನರಃ ಕೌರವನಂದನ|
13043025c ಸರ್ವಥಾ ರಾಜಶಾರ್ದೂಲ ಯುಕ್ತಿಃ ಸರ್ವತ್ರ ಪೂಜ್ಯತೇ||
ಕೌರವನಂದನ! ರಾಜಶರ್ದೂಲ! ಇದಕ್ಕಿಂತಲೂ ಬೇರೆ ರೀತಿಯಲ್ಲಿ ವರ್ತಿಸುವ ಮನುಷ್ಯನು ವಿನಾಶನಾಗುತ್ತಾನೆ. ಆದುದರಿಂದ ನಿರಾಸಕ್ತಿಯು ಸರ್ವತ್ರ ಸರ್ವಥಾ ಪೂಜಿಸಲ್ಪಡುತ್ತದೆ.
13043026a ತೇನೈಕೇನ ತು ರಕ್ಷಾ ವೈ ವಿಪುಲೇನ ಕೃತಾ ಸ್ತ್ರಿಯಾಃ|
13043026c ನಾನ್ಯಃ ಶಕ್ತೋ ನೃಲೋಕೇಽಸ್ಮಿನ್ರಕ್ಷಿತುಂ ನೃಪ ಯೋಷಿತಃ||
ನೃಪ! ವಿಪುಲನೊಬ್ಬನೇ ಸ್ತ್ರೀಯ ರಕ್ಷಣೆಯನ್ನು ಮಾಡಿದನು. ಸ್ವೇಚ್ಛಾ ಚಾರಿಣೀ ಸ್ತ್ರೀಯರನ್ನು ರಕ್ಷಿಸಲು ಈ ಲೋಕದಲ್ಲಿ ಬೇರೆ ಯಾರಿಗೂ ಸಾಧ್ಯವಿಲ್ಲ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ತ್ರಿಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ಮೂರನೇ ಅಧ್ಯಾಯವು.