ಅನುಶಾಸನ ಪರ್ವ: ದಾನಧರ್ಮ ಪರ್ವ
೩೭
ಪಾತ್ರಪರೀಕ್ಷಾ
ದಾನಕ್ಕೆ ಪಾತ್ರರಾದವರ ಕುರಿತು ಭೀಷ್ಮನು ಯುಧಿಷ್ಠಿರನಿಗೆ ತಿಳಿಸಿದಿದು (೧-೧೯).
13037001 ಯುಧಿಷ್ಠಿರ ಉವಾಚ|
13037001a ಅಪೂರ್ವಂ ವಾ ಭವೇತ್ಪಾತ್ರಮಥ ವಾಪಿ ಚಿರೋಷಿತಮ್|
13037001c ದೂರಾದಭ್ಯಾಗತಂ ವಾಪಿ ಕಿಂ ಪಾತ್ರಂ ಸ್ಯಾತ್ಪಿತಾಮಹ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮೊದಲೇ ಪರಿಚಯವಿಲ್ಲದವನು ಅಥವಾ ಬಹುಕಾಲದಿಂದ ಪರಿಚಯವಿದ್ದವನು ಇವರಲ್ಲಿ ಯಾರು ದಾನಕ್ಕೆ ಪಾತ್ರರು? ಅಥವಾ ದೂರದಿಂದ ಆಗಮಿಸಿದ ಅಭ್ಯಾಗತನು ದಾನಕ್ಕೆ ಪಾತ್ರನೇ?”
13037002 ಭೀಷ್ಮ ಉವಾಚ|
13037002a ಕ್ರಿಯಾ ಭವತಿ ಕೇಷಾಂ ಚಿದುಪಾಂಶುವ್ರತಮುತ್ತಮಮ್|
13037002c ಯೋ ಯೋ ಯಾಚೇತ ಯತ್ಕಿಂ ಚಿತ್ಸರ್ವಂ ದದ್ಯಾಮ ಇತ್ಯುತ||
ಭೀಷ್ಮನು ಹೇಳಿದನು: “ಯಾರು ಯಾರು ಯಾವ-ಯಾವುದನ್ನು ಕೇಳುತ್ತಾರೋ ಅವೆಲ್ಲವನ್ನೂ ಕೊಡುತ್ತೇನೆ ಎಂದು ಕೆಲವರು ಉತ್ತಮ ರಹಸ್ಯ ವ್ರತವನ್ನು ಕೈಗೊಂಡಿರುತ್ತಾರೆ.
13037003a ಅಪೀಡಯನ್ಭೃತ್ಯವರ್ಗಮಿತ್ಯೇವಮನುಶುಶ್ರುಮ|
13037003c ಪೀಡಯನ್ಭೃತ್ಯವರ್ಗಂ ಹಿ ಆತ್ಮಾನಮಪಕರ್ಷತಿ||
ಆದರೆ ಭೃತ್ಯವರ್ಗಕ್ಕೆ ಪೀಡೆಯನ್ನು ತರದೇ ದಾನಮಾಡಬೇಕೆಂದು ಕೇಳಿದ್ದೇವೆ. ಭೃತ್ಯವರ್ಗವನ್ನು ಪೀಡಿಸಿ ದಾನಮಾಡಿದರೆ ತನ್ನನ್ನು ತಾನು ಅಧೋಗತಿಗೆ ಇಳಿಸಿಕೊಳ್ಳುತ್ತಾನೆ.
13037004a ಅಪೂರ್ವಂ ವಾಪಿ ಯತ್ಪಾತ್ರಂ ಯಚ್ಚಾಪಿ ಸ್ಯಾಚ್ಚಿರೋಷಿತಮ್|
13037004c ದೂರಾದಭ್ಯಾಗತಂ ಚಾಪಿ ತತ್ಪಾತ್ರಂ ಚ ವಿದುರ್ಬುಧಾಃ||
ಮೊದಲಿನಿಂದ ಪರಿಚಯವಿಲ್ಲದವನೂ, ಬಹಳ ಕಾಲದಿಂದ ಪರಿಚಯವಿದ್ದವನೂ, ಅಥವಾ ದೂರದಿಂದ ಆಗಮಿಸಿದ ಅಭ್ಯಾಗತನೂ ದಾನಕ್ಕೆ ಪಾತ್ರರೆಂದು ತಿಳಿದವರು ತಿಳಿದಿದ್ದಾರೆ.”
13037005 ಯುಧಿಷ್ಠಿರ ಉವಾಚ|
13037005a ಅಪೀಡಯಾ ಚ ಭೃತ್ಯಾನಾಂ ಧರ್ಮಸ್ಯಾಹಿಂಸಯಾ ತಥಾ|
13037005c ಪಾತ್ರಂ ವಿದ್ಯಾಮ ತತ್ತ್ವೇನ ಯಸ್ಮೈ ದತ್ತಂ ನ ಸಂತಪೇತ್||
ಯುಧಿಷ್ಠಿರನು ಹೇಳಿದನು: “ಭೃತ್ಯುವರ್ಗದವರ ಧರ್ಮಕ್ಕೆ ಹಿಂಸೆಯಾಗದ ರೀತಿಯಲ್ಲಿ ದಾನಮಾಡಬೇಕೆಂಬುದು ಸರಿಯಾಗಿಯೇ ಇದೆ. ಆದರೆ ಯಾರಿಗೂ ದಾನವನ್ನಿತ್ತು ಸಂತಾಪಪಡಬಾರದ ರೀತಿಯಲ್ಲಿ ದಾನಕ್ಕೆ ಪಾತ್ರರಾದವರನ್ನು ತತ್ತ್ವತಃ ತಿಳಿದುಕೊಳ್ಳಬೇಕು.”
13037006 ಭೀಷ್ಮ ಉವಾಚ|
13037006a ಋತ್ವಿಕ್ಪುರೋಹಿತಾಚಾರ್ಯಾಃ ಶಿಷ್ಯಾಃ ಸಂಬಂಧಿಬಾಂಧವಾಃ|
13037006c ಸರ್ವೇ ಪೂಜ್ಯಾಶ್ಚ ಮಾನ್ಯಾಶ್ಚ ಶ್ರುತವೃತ್ತೋಪಸಂಹಿತಾಃ||
ಭೀಷ್ಮನು ಹೇಳಿದನು: “ಋತ್ವಿಜರು, ಪುರೋಹಿತರು, ಆಚಾರ್ಯರು, ಶಿಷ್ಯರು, ಸಂಬಂಧಿಗಳು, ಬಾಂಧವರು ಮತ್ತು ದೋಷದೃಷ್ಟಿಯಿಲ್ಲದ ವಿದ್ವಾಂಸರು ಎಲ್ಲರೂ ಪೂಜ್ಯರೂ ಮಾನ್ಯರೂ ಆಗಿರುತ್ತಾರೆ.
13037007a ಅತೋಽನ್ಯಥಾ ವರ್ತಮಾನಾಃ ಸರ್ವೇ ನಾರ್ಹಂತಿ ಸತ್ಕ್ರಿಯಾಮ್|
13037007c ತಸ್ಮಾನ್ನಿತ್ಯಂ ಪರೀಕ್ಷೇತ ಪುರುಷಾನ್ಪ್ರಣಿಧಾಯ ವೈ||
ಅನ್ಯಥಾ ನಡೆದುಕೊಳ್ಳುವವರು ಎಲ್ಲರೂ ಸತ್ಕ್ರಿಯೆಗಳಿಗೆ ಅರ್ಹರಲ್ಲ. ಆದುದರಿಂದ ದಾನಕೊಡಲು ಪುರುಷರನ್ನು ನಿತ್ಯವೂ ಪರೀಕ್ಷಿಸುತ್ತಿರಬೇಕು.
13037008a ಅಕ್ರೋಧಃ ಸತ್ಯವಚನಮಹಿಂಸಾ ದಮ ಆರ್ಜವಮ್|
13037008c ಅದ್ರೋಹೋ ನಾತಿಮಾನಶ್ಚ ಹ್ರೀಸ್ತಿತಿಕ್ಷಾ ತಪಃ ಶಮಃ||
13037009a ಯಸ್ಮಿನ್ನೇತಾನಿ ದೃಶ್ಯಂತೇ ನ ಚಾಕಾರ್ಯಾಣಿ ಭಾರತ|
13037009c ಭಾವತೋ ವಿನಿವಿಷ್ಟಾನಿ ತತ್ಪಾತ್ರಂ ಮಾನಮರ್ಹತಿ||
ಭಾರತ! ಅಕ್ರೋಧ, ಸತ್ಯವಚನ, ಅಹಿಂಸೆ, ದಮ, ಆರ್ಜವ, ಅದ್ರೋಹ, ಅತಿಮಾನವಿಲ್ಲದಿರುವುದು, ಲಜ್ಜೆ, ಸಹನೆ, ತಪಸ್ಸು, ಮನೋನಿಗ್ರಹ ಇವೆಲ್ಲವೂ ಯಾರಲ್ಲಿ ಕಾಣುತ್ತವೆಯೋ ಮತ್ತು ಯಾರಲ್ಲಿ ಧರ್ಮಕ್ಕೆ ವಿರುದ್ಧವಾದ ಕಾರ್ಯಗಳು ಕಾಣುವುದಿಲ್ಲವೋ ಅಂತವನು ದಾನಕ್ಕೂ ಸತ್ಕಾರಕ್ಕೂ ಉತ್ತಮ ಪಾತ್ರನು.
13037010a ತಥಾ ಚಿರೋಷಿತಂ ಚಾಪಿ ಸಂಪ್ರತ್ಯಾಗತಮೇವ ಚ|
13037010c ಅಪೂರ್ವಂ ಚೈವ ಪೂರ್ವಂ ಚ ತತ್ಪಾತ್ರಂ ಮಾನಮರ್ಹತಿ||
ಹೀಗಿರುವವನು ತುಂಬಾ ಸಮಯದಿಂದ ಜೊತೆಗಿರುವವನಾಗಿದ್ದರೂ, ಆಗತಾನೇ ಆಗಮಿಸಿದ್ದವನಾಗಿದ್ದರೂ, ಪೂರ್ವಪರಿಚಯವಿಲ್ಲದಿರುವವನೂ ಅಥವಾ ಪೂರ್ವಪರಿಚಯವಿದ್ದವನೂ – ದಾನಕ್ಕೆ ಪಾತ್ರನೆಂದು ತಿಳಿದು ಮನ್ನಿಸಬೇಕು.
13037011a ಅಪ್ರಾಮಾಣ್ಯಂ ಚ ವೇದಾನಾಂ ಶಾಸ್ತ್ರಾಣಾಂ ಚಾತಿಲಂಘನಮ್|
13037011c ಸರ್ವತ್ರ ಚಾನವಸ್ಥಾನಮೇತನ್ನಾಶನಮಾತ್ಮನಃ||
ವೇದಗಳು ಪ್ರಮಾಣವಲ್ಲವೆಂದು ತಿಳಿದು ಶಾಸ್ತ್ರಗಳನ್ನು ಉಲ್ಲಂಘಿಸಿ ಅವ್ಯವಸ್ಥೆಯಿಂದ ವ್ಯವಹರಿಸುವುದು ಎಲ್ಲವೂ ಆತ್ಮನಾಶಕಗಳು.
13037012a ಭವೇತ್ಪಂಡಿತಮಾನೀ ಯೋ ಬ್ರಾಹ್ಮಣೋ ವೇದನಿಂದಕಃ|
13037012c ಆನ್ವೀಕ್ಷಿಕೀಂ ತರ್ಕವಿದ್ಯಾಮನುರಕ್ತೋ ನಿರರ್ಥಿಕಾಮ್||
13037013a ಹೇತುವಾದಾನ್ಬ್ರುವನ್ಸತ್ಸು ವಿಜೇತಾಹೇತುವಾದಿಕಃ|
13037013c ಆಕ್ರೋಷ್ಟಾ ಚಾತಿವಕ್ತಾ ಚ ಬ್ರಾಹ್ಮಣಾನಾಂ ಸದೈವ ಹಿ||
13037014a ಸರ್ವಾಭಿಶಂಕೀ ಮೂಢಶ್ಚ ಬಾಲಃ ಕಟುಕವಾಗಪಿ|
13037014c ಬೋದ್ಧವ್ಯಸ್ತಾದೃಶಸ್ತಾತ ನರಶ್ವಾನಂ ಹಿ ತಂ ವಿದುಃ||
ತನ್ನನ್ನೇ ಮಹಾಪಂಡಿತನೆಂದು ಭಾವಿಸಿಕೊಂಡು ವ್ಯರ್ಥ ತರ್ಕಶಾಸ್ತ್ರವನ್ನಾಶ್ರಯಿಸಿ ವೇದಗಳನ್ನು ನಿಂದಿಸುವ, ಕೇಳಿದುದನ್ನು ಪರೀಕ್ಷಿಸಿಯೇ ತಿಳಿಯಬೇಕೆನ್ನುವ ನಿರರ್ಥಕ ತರ್ಕದಲ್ಲಿ ಅನುರಕ್ತನಾಗಿರುವ, ಕಾರ್ಯ-ಕಾರಣಗಳನ್ನು ಪ್ರಧಾನವಾಗಿಟ್ಟುಕೊಂಡು ಹೇತುವಾದಗಳೊಂದಿಗೆ ಮಹಾಸಭೆಯಲ್ಲಿ ಸತ್ಪುರುಷರನ್ನು ಜಯಿಸಿ ಅಪಮಾನಿಸುವ, ಸಮಂಜಸ ಯುಕ್ತಿಯು ಸಿಗದಿದ್ದರೆ ಗಟ್ಟಿಯಾಗಿ ಕೂಗಿಯಾದರೂ ಎದುರಾಳಿಯನ್ನು ಸೋಲಿಸಲು ಬಯಸುವ, ಬ್ರಾಹ್ಮಣರ ವಿಷಯದಲ್ಲಿ ಮರ್ಯಾದೆಯನ್ನು ಮೀರಿ ಮಾತನಾಡುವ, ಎಲ್ಲರಲ್ಲಿಯೂ ಸಂದೇಹಪಡುವ, ಬಾಲಕನಂತೆ ಜವಾಬ್ದಾರಿಯಿಲ್ಲದೇ ವ್ಯವಹರಿಸುವ, ಕಠಿನವಾಗಿ ಮಾತನಾಡುವ ಮೂರ್ಖನನ್ನು ನಾಯಿಯಂತೆ ಅಸ್ಪೃಶ್ಯನೆಂದೇ ತಿಳಿಯಬೇಕು. ವಿದ್ವಾಂಸರು ಹಾಗೆಯೇ ಭಾವಿಸುತ್ತಾರೆ.
13037015a ಯಥಾ ಶ್ವಾ ಭಷಿತುಂ ಚೈವ ಹಂತುಂ ಚೈವಾವಸೃಜ್ಯತೇ|
13037015c ಏವಂ ಸಂಭಾಷಣಾರ್ಥಾಯ ಸರ್ವಶಾಸ್ತ್ರವಧಾಯ ಚ|
13037015e ಅಲ್ಪಶ್ರುತಾಃ ಕುತರ್ಕಾಶ್ಚ ದೃಷ್ಟಾಃ ಸ್ಪೃಷ್ಟಾಃ ಕುಪಂಡಿತಾಃ||
ಹೊಸಬರನ್ನು ಕಂಡೊಡನೆಯೇ ನಾಯಿಯು ಹೇಗೆ ಬೊಗಳಲು ಮತ್ತು ಕಚ್ಚಲು ಸಿದ್ಧವಾಗುವುದೋ ಹಾಗೆ ಅಲ್ಪಜ್ಞಾನಿ ಕುಪಂಡಿತ ಕುತರ್ಕಿಯು ಶಾಸ್ತ್ರಜ್ಞರನ್ನು ಕಂಡೊಡನೆಯೇ ಅವರು ತಿಳಿದಿರುವ ಎಲ್ಲ ಶಾಸ್ತ್ರಗಳನ್ನೂ ಖಂಡಿಸಲು ಬಯಸಿ ವಾದಿಸಲು ಸಿದ್ಧನಾಗುತ್ತಾನೆ.
13037016a ಶ್ರುತಿಸ್ಮೃತೀತಿಹಾಸಾದಿಪುರಾಣಾರಣ್ಯವೇದಿನಃ|
13037016c ಅನುರುಂಧ್ಯಾದ್ಬಹುಜ್ಞಾಂಶ್ಚ ಸಾರಜ್ಞಾಂಶ್ಚೈವ ಪಂಡಿತಾನ್||
ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ ಮತ್ತು ಅರಣ್ಯಗಳನ್ನು ತಿಳಿದಿರುವ ಬಹುಜ್ಞ ಸಾರಾಜ್ಞ ಪಂಡಿತರನ್ನು ಅನುಸರಿಸಬೇಕು.
13037017a ಲೋಕಯಾತ್ರಾ ಚ ದ್ರಷ್ಟವ್ಯಾ ಧರ್ಮಶ್ಚಾತ್ಮಹಿತಾನಿ ಚ|
13037017c ಏವಂ ನರೋ ವರ್ತಮಾನಃ ಶಾಶ್ವತೀರೇಧತೇ ಸಮಾಃ||
ಲೋಕಯಾತ್ರೆಯಲ್ಲಿ ಆತ್ಮಹಿತವಾಗಿರುವ ಧರ್ಮದ ದೃಷ್ಟಿಯನ್ನೇ ತಳೆದಿರಬೇಕು. ಹೀಗೆ ವರ್ತಿಸುವ ನರನು ಶಾಶ್ವತವಾಗಿ ಅಭಿವೃದ್ಧಿ ಹೊಂದುತ್ತಾನೆ.
13037018a ಋಣಮುನ್ಮುಚ್ಯ ದೇವಾನಾಮೃಷೀಣಾಂ ಚ ತಥೈವ ಚ|
13037018c ಪಿತೄಣಾಮಥ ವಿಪ್ರಾಣಾಮತಿಥೀನಾಂ ಚ ಪಂಚಮಮ್||
13037019a ಪರ್ಯಾಯೇಣ ವಿಶುದ್ಧೇನ ಸುನಿರ್ಣಿಕ್ತೇನ ಕರ್ಮಣಾ|
13037019c ಏವಂ ಗೃಹಸ್ಥಃ ಕರ್ಮಾಣಿ ಕುರ್ವನ್ಧರ್ಮಾನ್ನ ಹೀಯತೇ||
ದೇವತೆಗಳ, ಋಷಿಗಳ, ಪಿತೃಗಳ, ವಿಪ್ರರ ಮತ್ತು ಐದನೆಯದಾಗಿ ಅತಿಥಿಗಳ ಋಣವನ್ನು ತೀರಿಸಿ ಅನುಕ್ರಮವಾಗಿ ವಿಶುದ್ಧ ವಿನಯಯುಕ್ತ ಕರ್ಮಗಳನ್ನು ಮಾಡುವುದರಿಂದ ಗೃಹಸ್ಥನು ಯಾವಾಗಲೂ ಧರ್ಮದಿಂದ ಭ್ರಷ್ಟನಾಗುವುದಿಲ್ಲ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪಾತ್ರಪರೀಕ್ಷಾಯಾಂ ಸಪ್ತತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪಾತ್ರಪರೀಕ್ಷಾ ಎನ್ನುವ ಮೂವತ್ತೇಳನೇ ಅಧ್ಯಾಯವು.