Anushasana Parva: Chapter 34

ಅನುಶಾಸನ ಪರ್ವ: ದಾನಧರ್ಮ ಪರ್ವ

೩೪

ಬ್ರಾಹ್ಮಣರ ಪ್ರಶಂಸೆಯನ್ನು ಮುಂದುವರಿಸಿ (೧-೧೮) ಭೀಷ್ಮನು ವಾಸುದೇವ-ಪೃಥ್ವಿಯರ ಸಂವಾದವನ್ನು ಉದಾಹರಿಸಿದುದು (೧೯-೨೫).

13034001 ಭೀಷ್ಮ ಉವಾಚ|

13034001a ಬ್ರಾಹ್ಮಣಾನೇವ ಸತತಂ ಭೃಶಂ ಸಂಪ್ರತಿಪೂಜಯೇತ್|

13034001c ಏತೇ ಹಿ ಸೋಮರಾಜಾನ ಈಶ್ವರಾಃ ಸುಖದುಃಖಯೋಃ||

ಭೀಷ್ಮನು ಹೇಳಿದನು: “ಬ್ರಾಹ್ಮಣರನ್ನು ಸತತವೂ ಚೆನ್ನಾಗಿ ಪೂಜಿಸಬೇಕು. ಸೋಮನೇ ಇವರ ರಾಜನು. ಇವರು ಸುಖದುಃಖಗಳ ಈಶ್ವರರು.

13034002a ಏತೇ ಭೋಗೈರಲಂಕಾರೈರನ್ಯೈಶ್ಚೈವ ಕಿಮಿಚ್ಚಕೈಃ|

13034002c ಸದಾ ಪೂಜ್ಯಾ ನಮಸ್ಕಾರ್ಯಾ ರಕ್ಷ್ಯಾಶ್ಚ ಪಿತೃವನ್ನೃಪೈಃ|

13034002e ಅತೋ ರಾಷ್ಟ್ರಸ್ಯ ಶಾಂತಿರ್ಹಿ ಭೂತಾನಾಮಿವ ವಾಸವಾತ್||

ರಾಜರು ಅವರನ್ನು ಸದಾ ಭೋಗ-ಅಲಂಕಾರಗಳಿಂದ ಮತ್ತು ಅನ್ಯ ಇಷ್ಟಪದಾರ್ಥಗಳಿಂದ ಪೂಜಿಸಬೇಕು ಮತ್ತು ನಮಸ್ಕರಿಸಬೇಕು. ತಂದೆ-ತಾಯಿಯರಂತೆ ರಕ್ಷಿಸಬೇಕು. ಆಗಲೇ ವಾಸವನಿಂದ ಭೂತಗಳು ಹೇಗೋ ಹಾಗೆ ರಾಷ್ಟ್ರವು ಶಾಂತಿಯುತವಾಗಿರುತ್ತದೆ.

13034003a ಜಾಯತಾಂ ಬ್ರಹ್ಮವರ್ಚಸ್ವೀ ರಾಷ್ಟ್ರೇ ವೈ ಬ್ರಾಹ್ಮಣಃ ಶುಚಿಃ|

13034003c ಮಹಾರಥಶ್ಚ ರಾಜನ್ಯ ಏಷ್ಟವ್ಯಃ ಶತ್ರುತಾಪನಃ||

ರಾಷ್ಟ್ರದಲ್ಲಿ ಬ್ರಹ್ಮವರ್ಚಸ್ವೀ ಶುಚೀ ಬ್ರಾಹ್ಮಣನು ಮತ್ತು ಮಹಾರಥ ಶತ್ರುತಾಪನ ರಾಜನು ಹುಟ್ಟಲಿ ಎಂದು ಇಷ್ಟಪಡಬೇಕು.

13034004a ಬ್ರಾಹ್ಮಣಂ ಜಾತಿಸಂಪನ್ನಂ ಧರ್ಮಜ್ಞಂ ಸಂಶಿತವ್ರತಮ್|

13034004c ವಾಸಯೇತ ಗೃಹೇ ರಾಜನ್ನ ತಸ್ಮಾತ್ಪರಮಸ್ತಿ ವೈ||

ರಾಜನ್! ಜಾತಿಸಂಪನ್ನ, ಧರ್ಮಜ್ಞ, ಸಂಶಿತವ್ರತ ಬ್ರಾಹ್ಮಣನನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಅದಕ್ಕಿಂತಲೂ ಶ್ರೇಷ್ಠವಾದುದು ಇಲ್ಲ.

13034005a ಬ್ರಾಹ್ಮಣೇಭ್ಯೋ ಹವಿರ್ದತ್ತಂ ಪ್ರತಿಗೃಹ್ಣಂತಿ ದೇವತಾಃ|

13034005c ಪಿತರಃ ಸರ್ವಭೂತಾನಾಂ ನೈತೇಭ್ಯೋ ವಿದ್ಯತೇ ಪರಮ್||

ಬ್ರಾಹ್ಮಣರಿಗೆ ನೀಡಿದ ಹವಿಸ್ಸನ್ನು ದೇವತೆಗಳು ಸ್ವೀಕರಿಸುತ್ತಾರೆ. ಇವರು ಸರ್ವಭೂತಗಳಿಗೆ ಪಿತೃಸಮಾನರು. ಇವರಿಗಿಂತ ಶ್ರೇಷ್ಠರಾದವರು ಬೇರೆ ಯಾರೂ ಇಲ್ಲ.

13034006a ಆದಿತ್ಯಶ್ಚಂದ್ರಮಾ ವಾಯುರ್ಭೂಮಿರಾಪೋಽಂಬರಂ ದಿಶಃ|

13034006c ಸರ್ವೇ ಬ್ರಾಹ್ಮಣಮಾವಿಶ್ಯ ಸದಾನ್ನಮುಪಭುಂಜತೇ||

ಆದಿತ್ಯ, ಚಂದ್ರಮ, ವಾಯು, ಭೂಮಿ, ಆಪ, ಅಂಬರ, ದಿಶ ಎಲ್ಲರೂ ಸದಾ ಬ್ರಾಹ್ಮಣನನ್ನು ಆವೇಶಿಸಿ ಅನ್ನವನ್ನು ಉಪಭಂಜಿಸುತ್ತಾರೆ.

13034007a ನ ತಸ್ಯಾಶ್ನಂತಿ ಪಿತರೋ ಯಸ್ಯ ವಿಪ್ರಾ ನ ಭುಂಜತೇ|

13034007c ದೇವಾಶ್ಚಾಪ್ಯಸ್ಯ ನಾಶ್ನಂತಿ ಪಾಪಸ್ಯ ಬ್ರಾಹ್ಮಣದ್ವಿಷಃ||

ಬ್ರಾಹ್ಮಣರು ಯಾರ ಅನ್ನವನ್ನು ಸೇವಿಸುವುದಿಲ್ಲವೋ ಅವರ ಅನ್ನವನ್ನು ಪಿತೃಗಳೂ ಸೇವಿಸುವುದಿಲ್ಲ. ಬ್ರಾಹ್ಮಣದ್ವೇಷೀ ಪಾಪಿಯ ಅನ್ನವನ್ನು ದೇವತೆಗಳೂ ಸೇವಿಸುವುದಿಲ್ಲ.

13034008a ಬ್ರಾಹ್ಮಣೇಷು ತು ತುಷ್ಟೇಷು ಪ್ರೀಯಂತೇ ಪಿತರಃ ಸದಾ|

13034008c ತಥೈವ ದೇವತಾ ರಾಜನ್ನಾತ್ರ ಕಾರ್ಯಾ ವಿಚಾರಣಾ||

ರಾಜನ್! ಬ್ರಾಹ್ಮಣರು ತುಷ್ಟರಾದರೆ ಪಿತೃಗಳು ಸದಾ ಸಂತೋಷಪಡುತ್ತಾರೆ. ಹಾಗೆಯೇ ದೇವತೆಗಳೂ ಕೂಡ. ಅದರಲ್ಲಿ ವಿಚಾರಣೆ ಮಾಡಬೇಕಾಗಿಲ್ಲ.

13034009a ತಥೈವ ತೇಽಪಿ ಪ್ರೀಯಂತೇ ಯೇಷಾಂ ಭವತಿ ತದ್ಧವಿಃ|

13034009c ನ ಚ ಪ್ರೇತ್ಯ ವಿನಶ್ಯಂತಿ ಗಚ್ಚಂತಿ ಪರಮಾಂ ಗತಿಮ್||

ಅದರಿಂದಾಗಿ ಆ ಹವಿಸ್ಸನ್ನು ನೀಡಿದವರೂ ಪ್ರೀತರಾಗುತ್ತಾರೆ. ಮರಣಾನಂತರ ಅವರು ವಿನಾಶವಾಗುವುದಿಲ್ಲ. ಪರಮ ಗತಿಯನ್ನು ಪಡೆಯುತ್ತಾರೆ.

13034010a ಯೇನ ಯೇನೈವ ಹವಿಷಾ ಬ್ರಾಹ್ಮಣಾಂಸ್ತರ್ಪಯೇನ್ನರಃ|

13034010c ತೇನ ತೇನೈವ ಪ್ರೀಯಂತೇ ಪಿತರೋ ದೇವತಾಸ್ತಥಾ||

ಯಾವ ಯಾವ ಹವಿಸ್ಸಿನಿಂದ ನರನು ಬ್ರಾಹ್ಮಣರನ್ನು ತೃಪ್ತಿಗೊಳಿಸುತ್ತಾನೋ ಆಯಾ ಹವಿಸ್ಸಿನಿಂದಲೇ ಪಿತೃಗಳೂ ದೇವತೆಗಳೂ ತೃಪ್ತರಾಗುತ್ತಾರೆ.

13034011a ಬ್ರಾಹ್ಮಣಾದೇವ ತದ್ಭೂತಂ ಪ್ರಭವಂತಿ ಯತಃ ಪ್ರಜಾಃ|

13034011c ಯತಶ್ಚಾಯಂ ಪ್ರಭವತಿ ಪ್ರೇತ್ಯ ಯತ್ರ ಚ ಗಚ್ಚತಿ||

13034012a ವೇದೈಷ ಮಾರ್ಗಂ ಸ್ವರ್ಗಸ್ಯ ತಥೈವ ನರಕಸ್ಯ ಚ|

13034012c ಆಗತಾನಾಗತೇ ಚೋಭೇ ಬ್ರಾಹ್ಮಣೋ ದ್ವಿಪದಾಂ ವರಃ|

13034012e ಬ್ರಾಹ್ಮಣೋ ಭರತಶ್ರೇಷ್ಠ ಸ್ವಧರ್ಮಂ ವೇದ ಮೇಧಯಾ||

ಬ್ರಾಹ್ಮಣನಿಂದಲೇ ಪ್ರಜೆಗಳು ಹುಟ್ಟುವವು. ಜೀವನು ಎಲ್ಲಿಂದ ಹುಟ್ಟುತ್ತಾನೆ? ಅವಸಾನಾನಂತರ ಎಲ್ಲಿಗೆ ಹೋಗುತ್ತಾನೆ? ಸ್ವರ್ಗ ಮತ್ತು ನರಕಗಳ ಮಾರ್ಗಗಳು ಯಾವುವು? ಹಿಂದೆ ಆದುದು, ಮುಂದೆ ಆಗುವುದು ಎರಡೂ ದ್ವಿಪದರಲ್ಲಿ ಶ್ರೇಷ್ಠ ಬ್ರಾಹ್ಮಣನಿಗೆ ತಿಳಿದಿರುತ್ತವೆ. ಭರತಶ್ರೇಷ್ಠ! ಬ್ರಾಹ್ಮಣನಿಗೆ ಸ್ವಧರ್ಮವೂ ತಿಳಿದಿರುತ್ತದೆ.

13034013a ಯೇ ಚೈನಮನುವರ್ತಂತೇ ತೇ ನ ಯಾಂತಿ ಪರಾಭವಮ್|

13034013c ನ ತೇ ಪ್ರೇತ್ಯ ವಿನಶ್ಯಂತಿ ಗಚ್ಚಂತಿ ನ ಪರಾಭವಮ್||

ಅವರನ್ನು ಅನುಸರಿಸುವವರು ಪರಾಭವವನ್ನು ಹೊಂದುವುದಿಲ್ಲ. ಮರಣಾನಂತರವೂ ವಿನಾಶ ಹೊಂದುವುದಿಲ್ಲ. ಪರಾಭವ ಹೊಂದುವುದಿಲ್ಲ.

13034014a ಯೇ ಬ್ರಾಹ್ಮಣಮುಖಾತ್ಪ್ರಾಪ್ತಂ ಪ್ರತಿಗೃಹ್ಣಂತಿ ವೈ ವಚಃ|

13034014c ಕೃತಾತ್ಮಾನೋ ಮಹಾತ್ಮಾನಸ್ತೇ ನ ಯಾಂತಿ ಪರಾಭವಮ್||

ಬ್ರಾಹ್ಮಣನ ಮುಖದಿಂದ ಹೊರಟ ವಚನವನ್ನು ಪ್ರತಿಗ್ರಹಿಸುವ ಕೃತಾತ್ಮ ಮಹಾತ್ಮರು ಪರಾಭವವನ್ನು ಹೊಂದುವುದಿಲ್ಲ.

13034015a ಕ್ಷತ್ರಿಯಾಣಾಂ ಪ್ರತಪತಾಂ ತೇಜಸಾ ಚ ಬಲೇನ ಚ|

13034015c ಬ್ರಾಹ್ಮಣೇಷ್ವೇವ ಶಾಮ್ಯಂತಿ ತೇಜಾಂಸಿ ಚ ಬಲಾನಿ ಚ||

ಕ್ಷತ್ರಿಯರ ಉಜ್ವಲ ತೇಜಸ್ಸು ಮತ್ತು ಬಲಗಳು ಬ್ರಾಹ್ಮಣರ ತೇಜಸ್ಸು ಮತ್ತು ಬಲಗಳಿಂದಲೇ ಶಾಂತಗೊಳ್ಳುತ್ತವೆ.

13034016a ಭೃಗವೋಽಜಯಂಸ್ತಾಲಜಂಘಾನ್ನೀಪಾನಂಗಿರಸೋಽಜಯನ್|

13034016c ಭರದ್ವಾಜೋ ವೈತಹವ್ಯಾನೈಲಾಂಶ್ಚ ಭರತರ್ಷಭ||

ಭರತರ್ಷಭ! ಭೃಗುವು ತಾಲಜಂಘರನ್ನು ಜಯಿಸಿದನು. ಅಂಗಿರಸನು ನೀಪರನ್ನು ಜಯಿಸಿದನು. ಭರದ್ವಾಜನು ವೀತಹವ್ಯನ ಮಕ್ಕಳನ್ನೂ, ಇಲನ ಮಕ್ಕಳನ್ನೂ ಜಯಿಸಿದನು.

13034017a ಚಿತ್ರಾಯುಧಾಂಶ್ಚಾಪ್ಯಜಯನ್ನೇತೇ ಕೃಷ್ಣಾಜಿನಧ್ವಜಾಃ|

13034017c ಪ್ರಕ್ಷಿಪ್ಯಾಥ ಚ ಕುಂಭಾನ್ವೈ ಪಾರಗಾಮಿನಮಾರಭೇತ್||

ಚಿತ್ರಾಯುಧಗಳನ್ನು ಹಿಡಿದವರನ್ನೂ ಕೃಷ್ಣಾಜಿನಧ್ವಜರು ಸೋಲಿಸಿದರು. ಬ್ರಾಹ್ಮಣರಿಗೆ ಜಲಕುಂಭಗಳನ್ನು ದಾನಮಾಡಿಯೇ ಪರಲೌಕಿಕ ಕರ್ಮಗಳನ್ನು ಪ್ರಾರಂಭಿಸಬೇಕು.

13034018a ಯತ್ಕಿಂ ಚಿತ್ಕಥ್ಯತೇ ಲೋಕೇ ಶ್ರೂಯತೇ ಪಶ್ಯತೇಽಪಿ ವಾ|

13034018c ಸರ್ವಂ ತದ್ಬ್ರಾಹ್ಮಣೇಷ್ವೇವ ಗೂಢೋಽಗ್ನಿರಿವ ದಾರುಷು||

ಲೋಕದಲ್ಲಿ ಯಾವುದೆಲ್ಲ ಹೇಳಲ್ಪಡುತ್ತದೆಯೋ, ಕೇಳಲ್ಪಡುತ್ತದೆಯೋ ಅಥವಾ ನೋಡಲ್ಪಡುತ್ತದೆಯೋ ಅವೆಲ್ಲವೂ ಕಟ್ಟಿಗೆಯಲ್ಲಿ ಅಡಗಿರುವ ಅಗ್ನಿಯಂತೆ ಬ್ರಾಹ್ಮಣರಲ್ಲಿ ಅಡಗಿವೆ.

13034019a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13034019c ಸಂವಾದಂ ವಾಸುದೇವಸ್ಯ ಪೃಥ್ವ್ಯಾಶ್ಚ ಭರತರ್ಷಭ||

ಭರತರ್ಷಭ! ಇದರ ಕುರಿತಾಗಿ ಪುರಾತನ ಇತಿಹಾಸವಾಗಿರುವ ವಾಸುದೇವ ಮತ್ತು ಪೃಥ್ವಿಯರ ಸಂವಾದವನ್ನು ಉದಾಹರಿಸುತ್ತಾರೆ.

13034020 ವಾಸುದೇವ ಉವಾಚ|

13034020a ಮಾತರಂ ಸರ್ವಭೂತಾನಾಂ ಪೃಚ್ಚೇ ತ್ವಾ ಸಂಶಯಂ ಶುಭೇ|

13034020c ಕೇನ ಸ್ವಿತ್ಕರ್ಮಣಾ ಪಾಪಂ ವ್ಯಪೋಹತಿ ನರೋ ಗೃಹೀ||

ವಾಸುದೇವನು ಹೇಳಿದನು: “ಶುಭೇ! ಸರ್ವಭೂತಗಳ ಮಾತೆಯಾದ ನಿನ್ನಲ್ಲಿ ಒಂದು ಸಂಶಯವನ್ನು ಕೇಳುತ್ತೇನೆ. ಗೃಹಸ್ಥ ನರನು ಯಾವ ಕರ್ಮಗಳಿಂದ ತನ್ನ ಪಾಪಗಳನ್ನು ಕಳೆದುಕೊಳ್ಳುತ್ತಾನೆ?”

13034021 ಪೃಥಿವ್ಯುವಾಚ|

13034021a ಬ್ರಾಹ್ಮಣಾನೇವ ಸೇವೇತ ಪವಿತ್ರಂ ಹ್ಯೇತದುತ್ತಮಮ್|

13034021c ಬ್ರಾಹ್ಮಣಾನ್ಸೇವಮಾನಸ್ಯ ರಜಃ ಸರ್ವಂ ಪ್ರಣಶ್ಯತಿ||

ಪೃಥ್ವಿಯು ಹೇಳಿದಳು: “ಬ್ರಾಹ್ಮಣರ ಸೇವೆಗೈಯಬೇಕು. ಇದೇ ಪವಿತ್ರ ಮತ್ತು ಉತ್ತಮವಾದುದು. ಬ್ರಾಹ್ಮಣರ ಸೇವೆ ಮಾಡುವುದರಿಂದ ಸರ್ವ ಪಾಪಗಳೂ ಕಳೆದುಹೋಗುತ್ತವೆ.

13034022a ಅತೋ ಭೂತಿರತಃ ಕೀರ್ತಿರತೋ ಬುದ್ಧಿಃ ಪ್ರಜಾಯತೇ|

13034022c ಅಪರೇಷಾಂ ಪರೇಷಾಂ ಚ ಪರೇಭ್ಯಶ್ಚೈವ ಯೇ ಪರೇ||

ಅದರಿಂದ ಐಶ್ವರ್ಯ-ಕೀರ್ತಿಗಳು ಲಭಿಸುತ್ತವೆ. ಬುದ್ಧಿಯೂ ಬೆಳೆಯುತ್ತದೆ. ಹಿರಿಯರಿಗೂ ಯಾರು ಹಿರಿಯರೆಂದೆನಿಸಿಕೊಂಡಿರುವರೋ ಆ ಹಿರಿಯರಿಗೂ ಹಿರಿಯರು ಬ್ರಾಹ್ಮಣರು.

13034023a ಬ್ರಾಹ್ಮಣಾ ಯಂ ಪ್ರಶಂಸಂತಿ ಪುರುಷಃ ಸ ಪ್ರವರ್ಧತೇ|

13034023c ಅಥ ಯೋ ಬ್ರಾಹ್ಮಣಾಕ್ರುಷ್ಟಃ ಪರಾಭವತಿ ಸೋಽಚಿರಾತ್||

ಬ್ರಾಹ್ಮಣರನ್ನು ಪ್ರಶಂಸಿಸುವ ಪುರುಷನು ವರ್ಧಿಸುತ್ತಾನೆ. ಬ್ರಾಹ್ಮಣನ ಕೋಪಕ್ಕೊಳಗಾದವನು ತಕ್ಷಣವೇ ಪರಾಭವವನ್ನು ಹೊಂದುತ್ತಾನೆ.

13034024a ಯಥಾ ಮಹಾರ್ಣವೇ ಕ್ಷಿಪ್ತ ಆಮಲೋಷ್ಟೋ ವಿನಶ್ಯತಿ|

13034024c ತಥಾ ದುಶ್ಚರಿತಂ ಕರ್ಮ ಪರಾಭಾವಾಯ ಕಲ್ಪತೇ||

ಸಮುದ್ರಕ್ಕೆ ಹಾಕಿದ ಮಣ್ಣುಹೆಂಟೆಯು ನಾಶವಾಗುವಂತೆ ಬ್ರಾಹ್ಮಣರಿಗೆ ಮಾಡುವ ದುಶ್ಚರಿತ ಕರ್ಮಗಳು ಸರ್ವನಾಶಕ್ಕೆ ಕಾರಣವಾಗುತ್ತವೆ.

13034025a ಪಶ್ಯ ಚಂದ್ರೇ ಕೃತಂ ಲಕ್ಷ್ಮ ಸಮುದ್ರೇ ಲವಣೋದಕಮ್|

13034025c ತಥಾ ಭಗಸಹಸ್ರೇಣ ಮಹೇಂದ್ರಂ ಪರಿಚಿಹ್ನಿತಮ್||

13034026a ತೇಷಾಮೇವ ಪ್ರಭಾವೇನ ಸಹಸ್ರನಯನೋ ಹ್ಯಸೌ|

13034026c ಶತಕ್ರತುಃ ಸಮಭವತ್ಪಶ್ಯ ಮಾಧವ ಯಾದೃಶಮ್||

ಮಾಧವ! ಅವರ ಪ್ರಭಾವವನ್ನು ನೋಡು! ಬ್ರಾಹ್ಮಣನಿಂದಲೇ ಚಂದ್ರನಿಗೆ ಲಕ್ಷ್ಮರೋಗವುಂಟಾಯಿತು. ಸಮುದ್ರವು ಲವಣೋದಕವಾಯಿತು. ಹಾಗೆಯೇ ಮಹೇಂದ್ರನು ಸಹಸ್ರ ಭಗಗಳಿಂದ ಚಿಹ್ನಿತನಾದನು. ಅವರ ಪ್ರಭಾವದಿಂದಲೇ ಶತಕ್ರತುವು ಸಹಸ್ರನಯನನಾದನು.

13034027a ಇಚ್ಚನ್ಭೂತಿಂ ಚ ಕೀರ್ತಿಂ ಚ ಲೋಕಾಂಶ್ಚ ಮಧುಸೂದನ|

13034027c ಬ್ರಾಹ್ಮಣಾನುಮತೇ ತಿಷ್ಠೇತ್ಪುರುಷಃ ಶುಚಿರಾತ್ಮವಾನ್||

ಮಧುಸೂದನ! ಇಹದಲ್ಲಿ ಐಶ್ವರ್ಯ-ಕೀರ್ತಿಗಳನ್ನು ಮತ್ತು ಪರದಲ್ಲಿ ಉತ್ತಮ ಲೋಕಗಳನ್ನು ಅಪೇಕ್ಷಿಸುವ ಶುಚಿಯಾದ ಆತ್ಮವಂತ ಪುರುಷನು ಬ್ರಾಹ್ಮಣರ ಆಜ್ಞೆಗೆ ಒಳಪಟ್ಟಿರಬೇಕು.”

13034028a ಇತ್ಯೇತದ್ವಚನಂ ಶ್ರುತ್ವಾ ಮೇದಿನ್ಯಾ ಮಧುಸೂದನಃ|

13034028c ಸಾಧು ಸಾಧ್ವಿತ್ಯಥೇತ್ಯುಕ್ತ್ವಾ ಮೇದಿನೀಂ ಪ್ರತ್ಯಪೂಜಯತ್||

ಮೇದಿನಿಯ ಈ ಮಾತುಗಳನ್ನು ಕೇಳಿ ಮಧುಸೂದನನು “ಸಾಧು! ಸಾಧು!” ಎಂದು ಹೇಳಿ ಮೇದಿನಿಯನ್ನು ಪೂಜಿಸಿದನು.

13034029a ಏತಾಂ ಶ್ರುತ್ವೋಪಮಾಂ ಪಾರ್ಥ ಪ್ರಯತೋ ಬ್ರಾಹ್ಮಣರ್ಷಭಾನ್|

13034029c ಸತತಂ ಪೂಜಯೇಥಾಸ್ತ್ವಂ ತತಃ ಶ್ರೇಯೋಽಭಿಪತ್ಸ್ಯಸೇ||

ಈ ಉಪಮೆಯನ್ನು ಕೇಳಿ ನೀನೂ ಕೂಡ ಪ್ರಯತ್ನಪಟ್ಟು ಬ್ರಾಹ್ಮಣರ್ಷಭರನ್ನು ಸತತವೂ ಪೂಜಿಸು. ಇದರಿಂದ ಶ್ರೇಯಸ್ಸನ್ನು ಪಡೆದುಕೊಳ್ಳುತ್ತೀಯೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪೃಥ್ವೀವಾಸುದೇವಸಂವಾದೇ ಚತುಸ್ತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪೃಥ್ವೀವಾಸುದೇವಸಂವಾದ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.