ಅನುಶಾಸನ ಪರ್ವ: ದಾನಧರ್ಮ ಪರ್ವ
೩೩
ಬ್ರಾಹ್ಮಣಪ್ರಶಂಸಾ
ರಾಜನ ಪ್ರಮುಖ ಕರ್ತವ್ಯವೇನೆಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಬ್ರಾಹ್ಮಣರನ್ನು ಪೂಜಿಸುವುದೇ ರಾಜನ ಪರಮ ಕರ್ತವ್ಯವೆನ್ನುವುದು (೧-೨೫).
[1]13033001 ಯುಧಿಷ್ಠಿರ ಉವಾಚ|
13033001a ಕಿಂ ರಾಜ್ಞಃ ಸರ್ವಕೃತ್ಯಾನಾಂ ಗರೀಯಃ ಸ್ಯಾತ್ಪಿತಾಮಹ|
13033001c ಕಿಂ ಕುರ್ವನ್ಕರ್ಮ ನೃಪತಿರುಭೌ ಲೋಕೌ ಸಮಶ್ನುತೇ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ರಾಜನಿಗೆ ಸರ್ವಕಾರ್ಯಗಳಲ್ಲಿ ಅತಿಮುಖ್ಯವಾದುದು ಯಾವುದು? ನೃಪತಿಯು ಯಾವ ಕರ್ಮವನ್ನು ಮಾಡಿ ಎರಡೂ ಲೋಕಗಳಲ್ಲಿ ಫಲವನ್ನು ಪಡೆಯುತ್ತಾನೆ?”
13033002 ಭೀಷ್ಮ ಉವಾಚ|
13033002a ಏತದ್ರಾಜ್ಞಃ ಕೃತ್ಯತಮಮಭಿಷಿಕ್ತಸ್ಯ ಭಾರತ|
13033002c ಬ್ರಾಹ್ಮಣಾನಾಮನುಷ್ಠಾನಮತ್ಯಂತಂ ಸುಖಮಿಚ್ಚತಾ|
13033002e ಶ್ರೋತ್ರಿಯಾನ್ಬ್ರಾಹ್ಮಣಾನ್ವೃದ್ಧಾನ್ನಿತ್ಯಮೇವಾಭಿಪೂಜಯೇತ್||
ಭೀಷ್ಮನು ಹೇಳಿದನು: “ಭಾರತ! ಅತ್ಯಂತ ಸುಖವನ್ನು ಇಚ್ಛಿಸುವ ಅಭಿಷಿಕ್ತ ರಾಜನು ಮಾಡಬೇಕಾದ ಅತಿ ಮುಖ್ಯ ಕಾರ್ಯವು ಬ್ರಾಹ್ಮಣರನ್ನು ಸತ್ಕರಿಸುವುದು. ಅವನು ನಿತ್ಯವೂ ಶ್ರೋತ್ರಿ ವೃದ್ಧ ಬ್ರಾಹ್ಮಣರನ್ನು ಪೂಜಿಸಬೇಕು.
13033003a ಪೌರಜಾನಪದಾಂಶ್ಚಾಪಿ ಬ್ರಾಹ್ಮಣಾಂಶ್ಚ ಬಹುಶ್ರುತಾನ್|
13033003c ಸಾಂತ್ವೇನ ಭೋಗದಾನೇನ ನಮಸ್ಕಾರೈಸ್ತಥಾರ್ಚಯೇತ್||
ನಗರ-ಗ್ರಾಮ ಪ್ರದೇಶಗಳಲ್ಲಿರುವ ಬಹುಶ್ರುತ ಬ್ರಾಹ್ಮಣರನ್ನು ಸಂತವಿಸಿ ಭೋಗದಾನಗಳಿಂದ ಮತ್ತು ನಮಸ್ಕಾರಗಳಿಂದ ಅರ್ಚಿಸಬೇಕು.
13033004a ಏತತ್ಕೃತ್ಯತಮಂ ರಾಜ್ಞೋ ನಿತ್ಯಮೇವೇತಿ ಲಕ್ಷಯೇತ್|
13033004c ಯಥಾತ್ಮಾನಂ ಯಥಾ ಪುತ್ರಾಂಸ್ತಥೈತಾನ್ಪರಿಪಾಲಯೇತ್||
ತನ್ನನ್ನು ಮತ್ತು ತನ್ನ ಪುತ್ರರನ್ನು ಹೇಗೋ ಹಾಗೆ ಅವರನ್ನು ಪರಿಪಾಲಿಸಬೇಕು. ನಿತ್ಯವೂ ಅವರ ಕಡೆ ಲಕ್ಷವಹಿಸಬೇಕು. ಇದು ರಾಜನ ಪರಮ ಕರ್ತವ್ಯವು.
13033005a ಯೇ ಚಾಪ್ಯೇಷಾಂ ಪೂಜ್ಯತಮಾಸ್ತಾದೃಢಂ ಪ್ರತಿಪೂಜಯೇತ್|
13033005c ತೇಷು ಶಾಂತೇಷು ತದ್ರಾಷ್ಟ್ರಂ ಸರ್ವಮೇವ ವಿರಾಜತೇ||
ಅವರಲ್ಲಿಯೇ ಪೂಜ್ಯತಮರನ್ನು ದೃಢವಾಗಿ ಪ್ರತಿಪೂಜಿಸಬೇಕು. ಅವರು ಶಾಂತರಾಗಿದ್ದರೆ ರಾಷ್ಟ್ರವೆಲ್ಲವೂ ವಿರಾಜಿಸುತ್ತದೆ.
13033006a ತೇ ಪೂಜ್ಯಾಸ್ತೇ ನಮಸ್ಕಾರ್ಯಾಸ್ತೇ ರಕ್ಷ್ಯಾಃ ಪಿತರೋ ಯಥಾ|
13033006c ತೇಷ್ವೇವ ಯಾತ್ರಾ ಲೋಕಸ್ಯ ಭೂತಾನಾಮಿವ ವಾಸವೇ||
ಪಿತೃಗಳಂತೆ ಅವರು ರಾಜರಿಗೆ ಪೂಜ್ಯರು. ನಮಸ್ಕಾರ್ಯರು. ರಕ್ಷಕರು. ಭೂತಗಳು ವಾಸವನನ್ನು ಹೇಗೋ ಹಾಗೆ ಲೋಕದ ಯಾತ್ರೆಯು ಇವರನ್ನೇ ಅವಲಂಬಿಸಿದೆ.
13033007a ಅಭಿಚಾರೈರುಪಾಯೈಶ್ಚ ದಹೇಯುರಪಿ ತೇಜಸಾ|
13033007c ನಿಃಶೇಷಂ ಕುಪಿತಾಃ ಕುರ್ಯುರುಗ್ರಾಃ ಸತ್ಯಪರಾಕ್ರಮಾಃ||
ಈ ಸತ್ಯಪರಾಕ್ರಮಿಗಳು ಕುಪಿತರಾದರೆ ಅಭಿಚಾರಗಳಿಂದ ಮತ್ತು ಉಪಾಯಗಳಿಂದ ತೇಜಸ್ಸಿನಿಂದ ದಹಿಸಿ ಬಿಡುತ್ತಾರೆ. ಕುಪಿತರಾಗಿ ಎಲ್ಲವನ್ನೂ ನಿಃಶೇಷವನ್ನಾಗಿಸಿಬಿಡುವರು.
13033008a ನಾಂತಮೇಷಾಂ ಪ್ರಪಶ್ಯಾಮಿ ನ ದಿಶಶ್ಚಾಪ್ಯಪಾವೃತಾಃ|
13033008c ಕುಪಿತಾಃ ಸಮುದೀಕ್ಷಂತೇ ದಾವೇಷ್ವಗ್ನಿಶಿಖಾ ಇವ||
ಅವರ ಕೋಪಕ್ಕೆ ಅಂತ್ಯವು ಕಾಣುವುದಿಲ್ಲ. ದಿಕ್ಕುಗಳೂ ಅದನ್ನು ತಡೆಯಲಾರವು. ಕುಪಿತರಾದ ಅವರ ದೃಷ್ಟಿಯು ದಾವಾಗ್ನಿಯ ಜ್ವಾಲೆಗಳಂತೆ.
13033009a ವಿದ್ಯನ್ತೇಷಾಂ ಸಾಹಸಿಕಾ ಗುಣಾಸ್ತೇಷಾಮತೀವ ಹಿ|
13033009c ಕೂಪಾ ಇವ ತೃಣಚ್ಚನ್ನಾ ವಿಶುದ್ಧಾ ದ್ಯೌರಿವಾಪರೇ||
ಅತೀವ ಗುಣಶಾಲಿಗಳಾಗಿರುವ ಅವರನ್ನು ಸಾಹಸಿಗಳೂ ತಿಳಿದುಕೊಂಡಿರಬೇಕು. ಕೆಲವರು ಹುಲ್ಲುಮುಚ್ಚಿದ ಬಾವಿಗಳಂತಿದ್ದರೆ ಅನ್ಯರು ಆಕಾಶದಂತೆ ವಿಶುದ್ಧರಾಗಿರುತ್ತಾರೆ.
13033010a ಪ್ರಸಹ್ಯಕಾರಿಣಃ ಕೇ ಚಿತ್ಕಾರ್ಪಾಸಮೃದವೋಽಪರೇ|
13033010c ಸಂತಿ ಚೈಷಾಮತಿಶಠಾಸ್ತಥಾನ್ಯೇಽತಿತಪಸ್ವಿನಃ||
ಕೆಲವರು ಶಪಥಮಾಡುತ್ತಾರೆ. ಕೆಲವರು ಹತ್ತಿಯಂತೆ ಮೃದುವಾಗಿರುತ್ತಾರೆ. ಕೆಲವರು ಉದ್ಧಟರಾಗಿರುತ್ತಾರೆ. ಅನ್ಯರು ಅತಿ ತಪಸ್ವಿಗಳಾಗಿರುತ್ತಾರೆ.
13033011a ಕೃಷಿಗೋರಕ್ಷ್ಯಮಪ್ಯನ್ಯೇ ಭೈಕ್ಷಮನ್ಯೇಽಪ್ಯನುಷ್ಠಿತಾಃ|
13033011c ಚೋರಾಶ್ಚಾನ್ಯೇಽನೃತಾಶ್ಚಾನ್ಯೇ ತಥಾನ್ಯೇ ನಟನರ್ತಕಾಃ||
ಅವರಲ್ಲಿ ಕೆಲವರು ಕೃಷಿ-ಗೋರಕ್ಷಣೆಯಲ್ಲಿರುತ್ತಾರೆ. ಅನ್ಯರು ಭಿಕ್ಷಾವೃತ್ತಿಯಲ್ಲಿರುತ್ತಾರೆ. ಅನ್ಯರು ಚೋರರಾಗಿದ್ದರೆ ಅನ್ಯರು ಸುಳ್ಳುಗಾರರಾಗಿರಬಹುದು. ಅನ್ಯರು ನಟನರ್ತಕರಾಗಿರಬಹುದು.
13033012a ಸರ್ವಕರ್ಮಸು ದೃಶ್ಯಂತೇ ಪ್ರಶಾಂತೇಷ್ವಿತರೇಷು ಚ|
13033012c ವಿವಿಧಾಚಾರಯುಕ್ತಾಶ್ಚ ಬ್ರಾಹ್ಮಣಾ ಭರತರ್ಷಭ||
ಭರತರ್ಷಭ! ಪ್ರಾಶಾಂತರಾಗಿರಲಿ ಇಲ್ಲದಿರಲಿ ಅವರು ಸರ್ವಕರ್ಮಗಳಲ್ಲಿ ಕಾಣುತ್ತಾರೆ. ಬ್ರಾಹ್ಮಣರು ವಿವಿಧ ಆಕಾರಯುಕ್ತರಾಗಿರುತ್ತಾರೆ.
13033013a ನಾನಾಕರ್ಮಸು ಯುಕ್ತಾನಾಂ ಬಹುಕರ್ಮೋಪಜೀವಿನಾಮ್|
13033013c ಧರ್ಮಜ್ಞಾನಾಂ ಸತಾಂ ತೇಷಾಂ ನಿತ್ಯಮೇವಾನುಕೀರ್ತಯೇತ್||
ನಾನಾ ಕರ್ಮಗಳಲ್ಲಿ ಯುಕ್ತರಾಗಿರುವ ಮತ್ತು ಬಹುಕರ್ಮಗಳಿಂದ ಉಪಜೀವನವನ್ನು ನಡೆಸುವ ಆ ಧರ್ಮಜ್ಞ ಸಂತರನ್ನು ನಿತ್ಯವೂ ಅನುಕೀರ್ತನ ಮಾಡಬೇಕು.
13033014a ಪಿತೄಣಾಂ ದೇವತಾನಾಂ ಚ ಮನುಷ್ಯೋರಗರಕ್ಷಸಾಮ್|
13033014c ಪುರೋಹಿತಾ ಮಹಾಭಾಗಾ ಬ್ರಾಹ್ಮಣಾ ವೈ ನರಾಧಿಪ||
ನರಾಧಿಪ! ಪಿತೃಗಳ, ದೇವತೆಗಳ, ಮನುಷ್ಯರ, ಉರಗ-ರಾಕ್ಷಸರ ಪುರೋಹಿತರು ಮಹಾಭಾಗ ಬ್ರಾಹ್ಮಣರೇ.
13033015a ನೈತೇ ದೇವೈರ್ನ ಪಿತೃಭಿರ್ನ ಗಂಧರ್ವೈರ್ನ ರಾಕ್ಷಸೈಃ|
13033015c ನಾಸುರೈರ್ನ ಪಿಶಾಚೈಶ್ಚ ಶಕ್ಯಾ ಜೇತುಂ ದ್ವಿಜಾತಯಃ||
ದೇವತೆಗಳಾಗಲೀ, ಪಿತೃಗಳಾಗಲೀ, ಗಂಧರ್ವರಾಗಲೀ, ರಾಕ್ಷಸರಾಗಲೀ, ಅಸುರರಾಗಲೀ, ಪಿಶಾಚಿಗಳಾಗಲೀ ದ್ವಿಜಾತಿಯವರನ್ನು ಗೆಲ್ಲಲು ಶಕ್ಯರಲ್ಲ.
13033016a ಅದೈವಂ ದೈವತಂ ಕುರ್ಯುರ್ದೈವತಂ ಚಾಪ್ಯದೈವತಮ್|
13033016c ಯಮಿಚ್ಚೇಯುಃ ಸ ರಾಜಾ ಸ್ಯಾದ್ಯಂ ದ್ವಿಷ್ಯುಃ ಸ ಪರಾಭವೇತ್||
ಬ್ರಾಹ್ಮಣರು ಇಚ್ಛಿಸಿದರೆ ದೇವತೆಗಳಲ್ಲದವರನ್ನು ದೇವತೆಗಳನ್ನಾಗಿಯೂ, ದೇವತೆಗಳನ್ನು ದೇವತೆಗಳಲ್ಲದಂತೆಯೂ ಮಾಡಬಲ್ಲರು. ರಾಜನನ್ನಾಗಿಸಬಲ್ಲರು, ರಾಜನನ್ನು ಪರಾಜಯಗೊಳಿಸಲೂ ಬಲ್ಲರು.
13033017a ಪರಿವಾದಂ ಚ ಯೇ ಕುರ್ಯುರ್ಬ್ರಾಹ್ಮಣಾನಾಮಚೇತಸಃ|
13033017c ನಿಂದಾಪ್ರಶಂಸಾಕುಶಲಾಃ ಕೀರ್ತ್ಯಕೀರ್ತಿಪರಾವರಾಃ|
13033017e ಪರಿಕುಪ್ಯಂತಿ ತೇ ರಾಜನ್ಸತತಂ ದ್ವಿಷತಾಂ ದ್ವಿಜಾಃ||
ಬ್ರಾಹ್ಮಣರನ್ನು ನಿಂದಿಸುವವರು ಮಂದಬುದ್ಧಿಯುಳ್ಳವರು. ರಾಜನ್! ನಿಂದನೆ-ಪ್ರಶಂಸೆಗಳಲ್ಲಿ ಕುಶಲರಾದ, ಕೀರ್ತಿ-ಅಕೀರ್ತಿಗಳನ್ನು ತರಬಲ್ಲ ದ್ವಿಜರು ಅವರನ್ನು ದ್ವೇಷಿಸುವವರ ಮೇಲೆ ಕುಪಿತರಾಗುತ್ತಾರೆ.
13033018a ಬ್ರಾಹ್ಮಣಾ ಯಂ ಪ್ರಶಂಸಂತಿ ಪುರುಷಃ ಸ ಪ್ರವರ್ಧತೇ|
13033018c ಬ್ರಾಹ್ಮಣೈರ್ಯಃ ಪರಾಕ್ರುಷ್ಟಃ ಪರಾಭೂಯಾತ್ಕ್ಷಣಾದ್ಧಿ ಸಃ||
ಬ್ರಾಹ್ಮಣರು ಯಾರನ್ನು ಪ್ರಶಂಸಿಸುವರೋ ಆ ಪುರುಷನು ವರ್ಧಿಸುತ್ತಾನೆ. ಬ್ರಾಹ್ಮಣನ ಕೋಪಕ್ಕೊಳಗಾದವನು ಕ್ಷಣದಲ್ಲಿಯೇ ನಾಶಹೊಂದುತ್ತಾನೆ.
13033019a ಶಕಾ ಯವನಕಾಂಬೋಜಾಸ್ತಾಸ್ತಾಃ ಕ್ಷತ್ರಿಯಜಾತಯಃ|
13033019c ವೃಷಲತ್ವಂ ಪರಿಗತಾ ಬ್ರಾಹ್ಮಣಾನಾಮದರ್ಶನಾತ್||
ಶಕ, ಯವನ, ಮತ್ತು ಕಾಂಬೋಜದ ಕ್ಷತ್ರಿಯಜಾತಿಯವರು ಬ್ರಾಹ್ಮಣರ ದರ್ಶನಮಾಡದೇ ಶೂದ್ರತ್ವವನ್ನು ಹೊಂದಿದರು.
13033020a ದ್ರಮಿಳಾಶ್ಚ ಕಲಿಂಗಾಶ್ಚ ಪುಲಿಂದಾಶ್ಚಾಪ್ಯುಶೀನರಾಃ|
13033020c ಕೌಲಾಃ ಸರ್ಪಾ ಮಾಹಿಷಕಾಸ್ತಾಸ್ತಾಃ ಕ್ಷತ್ರಿಯಜಾತಯಃ||
13033021a ವೃಷಲತ್ವಂ ಪರಿಗತಾ ಬ್ರಾಹ್ಮಣಾನಾಮದರ್ಶನಾತ್|
13033021c ಶ್ರೇಯಾನ್ಪರಾಜಯಸ್ತೇಭ್ಯೋ ನ ಜಯೋ ಜಯತಾಂ ವರ||
ವಿಜಯಿಗಳಲ್ಲಿ ಶ್ರೇಷ್ಠ! ಕ್ಷತ್ರಿಯಜಾತಿಯ ದ್ರಮಿಳರು, ಕಲಿಂಗರು, ಪುಲಿಂದರು, ಉಶೀನರರು, ಕೌಲರು, ಸರ್ಪರು, ಮಾಹೀಷಕರು ಬ್ರಾಹ್ಮಣರ ದರ್ಶನ ಮಾಡದೇ ಶೂದ್ರತ್ವವನ್ನು ಪಡೆದರು. ಆ ರಾಜರಿಗೆ ಶ್ರೇಯಸ್ಸೂ ಜಯವೂ ಆಗಲಿಲ್ಲ.
13033022a ಯಸ್ತು ಸರ್ವಮಿದಂ ಹನ್ಯಾದ್ಬ್ರಾಹ್ಮಣಂ ಚ ನ ತತ್ಸಮಮ್|
13033022c ಬ್ರಹ್ಮವಧ್ಯಾ ಮಹಾನ್ದೋಷ ಇತ್ಯಾಹುಃ ಪರಮರ್ಷಯಃ||
ಈ ಎಲ್ಲವನ್ನೂ ನಾಶಮಾಡುವುದು ಮತ್ತು ಬ್ರಾಹ್ಮಣಹತ್ಯೆ ಇವೆರಡೂ ಸಮನಲ್ಲ. ಬ್ರಹ್ಮವಧೆಯು ಮಹಾದೋಷವೆಂದು ಪರಮ ಋಷಿಗಳು ಹೇಳುತ್ತಾರೆ.
13033023a ಪರಿವಾದೋ ದ್ವಿಜಾತೀನಾಂ ನ ಶ್ರೋತವ್ಯಃ ಕಥಂ ಚನ|
13033023c ಆಸೀತಾಧೋಮುಖಸ್ತೂಷ್ಣೀಂ ಸಮುತ್ಥಾಯ ವ್ರಜೇತ ವಾ||
ದ್ವಿಜಾತಿಯವರ ನಿಂದನೆಯನ್ನು ಯಾವಾಗಲೂ ಕೇಳಬಾರದು. ಅವರ ನಿಂದನೆಯಾಗುತ್ತಿರುವಲ್ಲಿ ತಲೆತಗ್ಗಿಸಿ ಸುಮ್ಮನಿರಬೇಕು ಅಥವಾ ಮೇಲೆದ್ದು ಅಲ್ಲಿಂದ ಹೋಗಬೇಕು.
13033024a ನ ಸ ಜಾತೋ ಜನಿಷ್ಯೋ ವಾ ಪೃಥಿವ್ಯಾಮಿಹ ಕಶ್ಚನ|
13033024c ಯೋ ಬ್ರಾಹ್ಮಣವಿರೋಧೇನ ಸುಖಂ ಜೀವಿತುಮುತ್ಸಹೇತ್||
ಬ್ರಾಹ್ಮಣರನ್ನು ವಿರೋಧಿಸಿ ಸುಖವಾಗಿ ಜೀವಿಸಲು ಬಯಸುವವನು ಈ ಪೃಥ್ವಿಯಲ್ಲಿ ಎಂದೂ ಹುಟ್ಟಿಲ್ಲ ಅಥವಾ ಮುಂದೆ ಹುಟ್ಟುವುದಿಲ್ಲ.
13033025a ದುರ್ಗ್ರಹೋ ಮುಷ್ಟಿನಾ ವಾಯುರ್ದುಃಸ್ಪರ್ಶಃ ಪಾಣಿನಾ ಶಶೀ|
13033025c ದುರ್ಧರಾ ಪೃಥಿವೀ ಮೂರ್ಧ್ನಾ ದುರ್ಜಯಾ ಬ್ರಾಹ್ಮಣಾ ಭುವಿ||
ವಾಯುವನ್ನು ಮುಷ್ಟಿಯಲ್ಲಿ ಹಿಡಿದಿಡುವುದು ದುಃಸಾಧ್ಯ. ಚಂದ್ರನನ್ನು ಕೈಗಳಿಂದ ಮುಟ್ಟುವುದು ಅಸಾಧ್ಯ. ಪೃಥ್ವಿಯನ್ನು ತಲೆಯ ಮೇಲೆ ಹೊತ್ತುಕೊಳ್ಳುವುದು ದುಃಸಾಧ್ಯ. ಹಾಗೆಯೇ ಭುವಿಯಲ್ಲಿ ಬ್ರಾಹ್ಮಣರನ್ನು ಗೆಲ್ಲುವುದು ಅಸಾಧ್ಯ.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಾಹ್ಮಣಪ್ರಶಂಸಾ ನಾಮ ತ್ರ್ಯಸ್ತ್ರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಾಹ್ಮಣಪ್ರಶಂಸಾ ಎನ್ನುವ ಮೂವತ್ಮೂರನೇ ಅಧ್ಯಾಯವು.
[1] ಭಾರತ ದರ್ಶನದಲ್ಲಿ ಈ ಅಧ್ಯಾಯಕ್ಕೆ ಮೊದಲು ರಾಜರ್ಷಿ ವೃಷದರ್ಭನು ಶರಣುಬಂದ ಕಪೋತವನ್ನು ರಕ್ಷಿಸಿದ ಕಥೆಯ ಒಂದು ಅಧ್ಯಾಯವಿದೆ. ಈ ಅಧಿಕ ಅಧ್ಯಾಯವು ಆರಣ್ಯಕ ಪರ್ವದ ಅಧ್ಯಾಯ ೧೩೧ರಂತೆಯೇ ಇದೆ.