Anushasana Parva: Chapter 3

ಅನುಶಾಸನ ಪರ್ವ: ದಾನಧರ್ಮ ಪರ್ವ

ವಿಶ್ವಾಮಿತ್ರೋಪಾಽಖ್ಯಾನ

ಬೇರೆ ದೇಹವನ್ನು ಧರಿಸದೆಯೇ ವಿಶ್ವಾಮಿತ್ರನಿಗೆ ಹೇಗೆ ಬ್ರಾಹ್ಮಣತ್ವವು ಪ್ರಾಪ್ತವಾಯಿತು ಎಂದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸುವುದು (೧-೧೯).

13003001 ಯುಧಿಷ್ಠಿರ ಉವಾಚ|

13003001a ಬ್ರಾಹ್ಮಣ್ಯಂ ಯದಿ ದುಷ್ಪ್ರಾಪಂ ತ್ರಿಭಿರ್ವರ್ಣೈರ್ನರಾಧಿಪ|

13003001c ಕಥಂ ಪ್ರಾಪ್ತಂ ಮಹಾರಾಜ ಕ್ಷತ್ರಿಯೇಣ ಮಹಾತ್ಮನಾ||

13003002a ವಿಶ್ವಾಮಿತ್ರೇಣ ಧರ್ಮಾತ್ಮನ್ಬ್ರಾಹ್ಮಣತ್ವಂ ನರರ್ಷಭ|

13003002c ಶ್ರೋತುಮಿಚ್ಚಾಮಿ ತತ್ತ್ವೇನ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ನರಾಧಿಪ! ಮಹಾರಾಜ! ಒಂದುವೇಳೆ ಕ್ಷತ್ರಿಯ-ವೈಶ್ಯ-ಶೂದ್ರ ಈ ಮೂರು ವರ್ಣದವರಿಗೆ ಬ್ರಾಹ್ಮಣ್ಯವನ್ನು ಪಡೆಯುವುದು ಅಸಾಧ್ಯವಾದರೆ ಮಹಾತ್ಮ ಕ್ಷತ್ರಿಯ ವಿಶ್ವಾಮಿತ್ರನು ಹೇಗೆ ಬ್ರಾಹ್ಮಣತ್ವವನ್ನು ಪಡೆದುಕೊಂಡನು? ಧರ್ಮಾತ್ಮನ್! ನರರ್ಷಭ! ಪಿತಾಮಹ! ಅದನ್ನು ಯಥಾರ್ಥವಾಗಿ ಕೇಳಬಯಸುತ್ತೇನೆ. ಅದನ್ನು ನನಗೆ ಹೇಳು.

13003003a ತೇನ ಹ್ಯಮಿತವೀರ್ಯೇಣ ವಸಿಷ್ಠಸ್ಯ ಮಹಾತ್ಮನಃ|

13003003c ಹತಂ ಪುತ್ರಶತಂ ಸದ್ಯಸ್ತಪಸಾ ಪ್ರಪಿತಾಮಹ||

ಅವನ ಅಮಿತ ವೀರ್ಯದಿಂದ ನಮ್ಮ ಪ್ರಪಿತಾಮಹ ಮಹಾತ್ಮ ತಪೋನಿರತ ವಸಿಷ್ಠನ ನೂರು ಪುತ್ರರು ಹತರಾದರು!

13003004a ಯಾತುಧಾನಾಶ್ಚ ಬಹವೋ ರಾಕ್ಷಸಾಸ್ತಿಗ್ಮತೇಜಸಃ|

13003004c ಮನ್ಯುನಾವಿಷ್ಟದೇಹೇನ ಸೃಷ್ಟಾಃ ಕಾಲಾಂತಕೋಪಮಾಃ||

ಕೋಪದಿಂದ ಆವಿಷ್ಟನಾದ ಆ ತಿಗ್ಮತೇಜಸ್ವಿಯು ಯಾತುಧಾನರು ಮತ್ತು ಅನೇಕ ಕಾಲಾಂತಕರಂತಿರುವ ರಾಕ್ಷಸರನ್ನು ಸೃಷ್ಟಿಸಿದನು.

13003005a ಮಹಾನ್ಕುಶಿಕವಂಶಶ್ಚ ಬ್ರಹ್ಮರ್ಷಿಶತಸಂಕುಲಃ|

13003005c ಸ್ಥಾಪಿತೋ ನರಲೋಕೇಽಸ್ಮಿನ್ವಿದ್ವಾನ್ಬ್ರಾಹ್ಮಣಸಂಸ್ತುತಃ||

ಅವನು ನೂರಾರು ಬ್ರಹ್ಮರ್ಷಿಗಳಿಂದ ಕೂಡಿರುವ ಮತ್ತು ವಿದ್ವಾನ್ ಬ್ರಾಹ್ಮಣರಿಂದ ಸ್ತುತಿಸಲ್ಪಡುವ ಮಹಾನ್ ಕುಶಿಕವಂಶವನ್ನು ನರಲೋಕದಲ್ಲಿ ಸ್ಥಾಪಿಸಿದನು.

13003006a ಋಚೀಕಸ್ಯಾತ್ಮಜಶ್ಚೈವ ಶುನಃಶೇಪೋ ಮಹಾತಪಾಃ|

13003006c ವಿಮೋಕ್ಷಿತೋ ಮಹಾಸತ್ರಾತ್ಪಶುತಾಮಭ್ಯುಪಾಗತಃ||

ಆ ಮಹಾತಪಸ್ವಿಯು ಮಹಾಸತ್ರವೊಂದರಲ್ಲಿ ಯಜ್ಞಪಶುವಾಗಿ ತಂದಿದ್ದ ಋಚೀಕ[1]ನ ಮಗ ಶುನಃಶೇಪನನ್ನು ವಿಮೋಚನಗೊಳಿಸಿದನು.

13003007a ಹರಿಶ್ಚಂದ್ರಕ್ರತೌ ದೇವಾಂಸ್ತೋಷಯಿತ್ವಾತ್ಮತೇಜಸಾ|

13003007c ಪುತ್ರತಾಮನುಸಂಪ್ರಾಪ್ತೋ ವಿಶ್ವಾಮಿತ್ರಸ್ಯ ಧೀಮತಃ||

ಹರಿಶ್ಚಂದ್ರನ ಕ್ರತುವಿನಲ್ಲಿ ತನ್ನ ಆತ್ಮತೇಜಸ್ಸಿನಿಂದ ದೇವತೆಗಳನ್ನು ತೃಪ್ತಿಪಡಿಸಿ ಧೀಮತ ವಿಶ್ವಾಮಿತ್ರನು ಶುನಃಶೇಪನನ್ನು ತನ್ನ ಪುತ್ರನನ್ನಾಗಿ ಮಾಡಿಕೊಂಡನು.

13003008a ನಾಭಿವಾದಯತೇ ಜ್ಯೇಷ್ಠಂ ದೇವರಾತಂ ನರಾಧಿಪ|

13003008c ಪುತ್ರಾಃ ಪಂಚಶತಾಶ್ಚಾಪಿ ಶಪ್ತಾಃ ಶ್ವಪಚತಾಂ ಗತಾಃ||

ನರಾಧಿಪ! ದೇವರಾತನೆಂದು ಖ್ಯಾತನಾದ ಶುನಃಶೇಪನನ್ನು ವಿಶ್ವಾಮಿತ್ರನ ಜ್ಯೇಷ್ಠಪುತ್ರನೆಂದು ಅವನ ಐವತ್ತು ಪುತ್ರರು ನಮಸ್ಕರಿಸದೇ ಇರಲು ವಿಶ್ವಾಮಿತ್ರನ ಶಾಪದಿಂದ ಅವರು ಚಾಂಡಾಲತ್ವವನ್ನು ಪಡೆದುಕೊಂಡರು.

13003009a ತ್ರಿಶಂಕುರ್ಬಂಧುಸಂತ್ಯಕ್ತ ಇಕ್ಷ್ವಾಕುಃ ಪ್ರೀತಿಪೂರ್ವಕಮ್|

13003009c ಅವಾಕ್ಶಿರಾ ದಿವಂ ನೀತೋ ದಕ್ಷಿಣಾಮಾಶ್ರಿತೋ ದಿಶಮ್||

ಬಂಧುಗಳಿಂದ ತ್ಯಕ್ತನಾಗಿ ದಕ್ಷಿಣದಿಕ್ಕಿನಲ್ಲಿ ತಲೆಕೆಳಗಾಗಿ ಬೀಳುತ್ತಿದ್ದ ಇಕ್ಷ್ವಾಕು ವಂಶಜ ತ್ರಿಜಂಕುವಿಗೆ ವಿಶ್ವಾಮಿತ್ರನೇ ಸ್ವರ್ಗವನ್ನು ನೀಡಿದನು.

13003010a ವಿಶ್ವಾಮಿತ್ರಸ್ಯ ವಿಪುಲಾ ನದೀ ರಾಜರ್ಷಿಸೇವಿತಾ|

13003010c ಕೌಶಿಕೀತಿ ಶಿವಾ ಪುಣ್ಯಾ ಬ್ರಹ್ಮರ್ಷಿಗಣಸೇವಿತಾ||

ರಾಜರ್ಷಿಗಳಿಂದ ಮತ್ತು ಬ್ರಹ್ಮರ್ಷಿಗಣಗಳಿಂದ ಸೇವಿತ ಮಂಗಳೆ ಪುಣ್ಯೆ ಕೌಶಿಕೀ ಎಂಬ ವಿಪುಲ ನದಿಯು ವಿಶ್ವಾಮಿತ್ರನ ಪ್ರಭಾವದಿಂದಲೇ ಪ್ರಕಟವಾದಳು.

13003011a ತಪೋವಿಘ್ನಕರೀ ಚೈವ ಪಂಚಚೂಡಾ ಸುಸಂಮತಾ|

13003011c ರಂಭಾ ನಾಮಾಪ್ಸರಾಃ ಶಾಪಾದ್ಯಸ್ಯ ಶೈಲತ್ವಮಾಗತಾ||

ಪಂಚಚೂಡಾ ಎಂದೂ ಕರೆಯಲ್ಪಡುವ ರಂಭಾ ನಾಮದ ಅಪ್ಸರೆಯು ತಪಸ್ಸನ್ನು ವಿಘ್ನಮಾಡಲು ಹೋದಾಗ ಇವನ ಶಾಪದಿಂದ ಕಲ್ಲಾದಳು.

13003012a ತಥೈವಾಸ್ಯ ಭಯಾದ್ಬದ್ಧ್ವಾ ವಸಿಷ್ಠಃ ಸಲಿಲೇ ಪುರಾ|

13003012c ಆತ್ಮಾನಂ ಮಜ್ಜಯಾಮಾಸ ವಿಪಾಶಃ ಪುನರುತ್ಥಿತಃ||

ಹಿಂದೆ ವಸಿಷ್ಟನು ತನ್ನನ್ನು ತಾನೇ ಬಂಧಿಸಿಕೊಂಡು ನೀರಿನಲ್ಲಿ ಮುಳುಗಿದಾದ ವಿಶ್ವಾಮಿತ್ರನ ಭಯದಿಂದಲೇ ನದಿಯು ಅವನ ಬಂಧನಗಳನ್ನು ಕಳಚಿ ಮೇಲೆ ತೇಲಿಸಿತ್ತು.

13003013a ತದಾಪ್ರಭೃತಿ ಪುಣ್ಯಾ ಹಿ ವಿಪಾಶಾಭೂನ್ಮಹಾನದೀ|

13003013c ವಿಖ್ಯಾತಾ ಕರ್ಮಣಾ ತೇನ ವಸಿಷ್ಠಸ್ಯ ಮಹಾತ್ಮನಃ||

ಮಹಾತ್ಮ ವಸಿಷ್ಠನ ಆ ಕರ್ಮದಿಂದಾಗಿ ಅಂದಿನಿಂದ ಆ ಮಹಾನದಿಯು ವಿಪಾಶಾ ಎಂಬ ಹೆಸರಿನ ಪುಣ್ಯ ನದಿಯಾಯಿತು.

13003014a ವಾಗ್ಭಿಶ್ಚ ಭಗವಾನ್ಯೇನ ದೇವಸೇನಾಗ್ರಗಃ ಪ್ರಭುಃ|

13003014c ಸ್ತುತಃ ಪ್ರೀತಮನಾಶ್ಚಾಸೀಚ್ಚಾಪಾಚ್ಚೈನಮಮೋಚಯತ್||

ಇವನ ವಾಣಿಗಳಿಂದ ಸ್ತುತನಾಗಿ ಪ್ರೀತನಾದ ದೇವಾಸೇನಾಗ್ರಗ ಪ್ರಭು ಭಗವಾನ್ ಇಂದ್ರನು ಇವನನ್ನು ಶಾಪಗಳಿಂದ ವಿಮೋಚನಗೊಳಿಸಿದನು[2].

13003015a ಧ್ರುವಸ್ಯೌತ್ತಾನಪಾದಸ್ಯ ಬ್ರಹ್ಮರ್ಷೀಣಾಂ ತಥೈವ ಚ|

13003015c ಮಧ್ಯೇ ಜ್ವಲತಿ ಯೋ ನಿತ್ಯಮುದೀಚೀಮಾಶ್ರಿತೋ ದಿಶಮ್||

ನಿತ್ಯವೂ ಇವನು ಉತ್ತರ ದಿಶೆಯಲ್ಲಿ ಉತ್ತಾನಪಾದನ ಮಗ ಧ್ರುವ ಮತ್ತು ಸಪ್ತ ಬ್ರಹ್ಮರ್ಷಿಗಳ ಮಧ್ಯೆ ತಾರಾರೂಪದಲ್ಲಿ ಪ್ರಜ್ವಲಿಸುತ್ತಾನೆ.

13003016a ತಸ್ಯೈತಾನಿ ಚ ಕರ್ಮಾಣಿ ತಥಾನ್ಯಾನಿ ಚ ಕೌರವ|

13003016c ಕ್ಷತ್ರಿಯಸ್ಯೇತ್ಯತೋ ಜಾತಮಿದಂ ಕೌತೂಹಲಂ ಮಮ||

ಕೌರವ! ಕ್ಷತ್ರಿಯಕುಲದಲ್ಲಿ ಹುಟ್ಟಿದ್ದರೂ ವಿಶ್ವಾಮಿತ್ರನು ಇವೆಲ್ಲ ಮತ್ತು ಹಾಗೆಯೇ ಇತರ ಕರ್ಮಗಳನ್ನೂ ಮಾಡಿದ್ದಾನೆ ಎಂದರೆ ನನ್ನಲ್ಲಿ ಕುತೂಹಲವುಂಟಾಗಿದೆ.

13003017a ಕಿಮೇತದಿತಿ ತತ್ತ್ವೇನ ಪ್ರಬ್ರೂಹಿ ಭರತರ್ಷಭ|

13003017c ದೇಹಾಂತರಮನಾಸಾದ್ಯ ಕಥಂ ಸ ಬ್ರಾಹ್ಮಣೋಽಭವತ್||

ಭರತರ್ಷಭ! ಇದು ಏನು? ತತ್ತ್ವವಾಗಿ ಹೇಳು. ದೇಹಾಂತರಗೊಳ್ಳದೇ ಅವನು ಹೇಗೆ ಬ್ರಾಹ್ಮಣನಾದನು?

13003018a ಏತತ್ತತ್ತ್ವೇನ ಮೇ ರಾಜನ್ಸರ್ವಮಾಖ್ಯಾತುಮರ್ಹಸಿ|

13003018c ಮತಂಗಸ್ಯ ಯಥಾತತ್ತ್ವಂ ತಥೈವೈತದ್ಬ್ರವೀಹಿ ಮೇ||

ರಾಜನ್! ಇದನ್ನು ಯಥಾರ್ಥರೂಪದಲ್ಲಿ ಹೇಳಬೇಕು. ಮತಂಗನ ವಿಷಯದಲ್ಲಿ ಏನಾಯಿತೋ ಅದು ವಿಶ್ವಾಮಿತ್ರನ ವಿಷಯದಲ್ಲಿ ನಡೆಯಲಿಲ್ಲ. ಅದರ ಕುರಿತು ಹೇಳಬೇಕು.

13003019a ಸ್ಥಾನೇ ಮತಂಗೋ ಬ್ರಾಹ್ಮಣ್ಯಂ ನಾಲಭದ್ಭರತರ್ಷಭ|

13003019c ಚಂಡಾಲಯೋನೌ ಜಾತೋ ಹಿ ಕಥಂ ಬ್ರಾಹ್ಮಣ್ಯಮಾಪ್ನುಯಾತ್||

ಭರತರ್ಷಭ! ಚಂಡಾಲಯೋನಿಯಲ್ಲಿ ಜನಿಸಿದ್ದ ಮತಂಗನಿಗೆ ಬ್ರಾಹ್ಮಣ್ಯವು ದೊರೆಯಲಿಲ್ಲ. ಆದರೆ ವಿಶ್ವಾಮಿತ್ರನಿಗೆ ಹೇಗೆ ಬ್ರಾಹ್ಮಣ್ಯವು ದೊರೆಯಿತು?”

ಇತಿ ಶ್ರೀಮಹಾಭಾರತೇ ಅನುಶಾ ಸನಪರ್ವಣಿ ದಾನಧರ್ಮ ಪರ್ವಣಿ ವಿಶ್ವಾಮಿತ್ರೋಪಾಖ್ಯಾನೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಶ್ವಾಮಿತ್ರೋಪಾಖ್ಯಾನ ಎನ್ನುವ ಮೂರನೇ ಅಧ್ಯಾಯವು.

Related image

[1] ಅಜೀಗರ್ತ

[2] ಒಮ್ಮೆ ವಿಶ್ವಾಮಿತ್ರನು ಶಾಪದಿಂದ ಶ್ವಪಚತ್ವವನ್ನು ಹೊಂದಿದ್ದ ತ್ರಿಶಂಕುವಿನಿಂದ ಯಜ್ಞವನ್ನು ಮಾಡಿಸುತ್ತಿದ್ದನು. ಅದನ್ನು ನೋಡಿ ವಸಿಷ್ಠನ ಮಕ್ಕಳು ಶ್ವಪಚನಿಗೆ ಯಜ್ಞಮಾಡಿಸುತ್ತಿರುವವನೂ ಶ್ವಪಚನಾಗಲಿ ಎಂದು ಶಾಪವನ್ನಿತ್ತರು. ಈ ಶಾಪದ ಪರಿಣಾಮವಾಗಿ ವಿಶ್ವಾಮಿತ್ರನು ಆಪತ್ಕಾಲದಲ್ಲಿ ನಾಯಿಯ ಮಾಂಸವನ್ನು ಬೇಯಿಸುತ್ತಿದ್ದನು. ಆಗ ಇಂದ್ರನು ಗಿಡುಗನ ರೂಪವನ್ನು ಧರಿಸಿ ಮಾಂಸವನ್ನು ಅಪಹರಿಸಿದನೆಂದೂ ಮತ್ತು ಅದರಿಂದ ವಿಶ್ವಾಮಿತ್ರನ ಶಾಪವಿಮೋಚನೆಯಾಯಿತೆಂಬ ಕಥೆಯಿದೆ.

Comments are closed.