ಅನುಶಾಸನ ಪರ್ವ: ದಾನಧರ್ಮ ಪರ್ವ
೨೮
ಮತಂಗೋಪಾಖ್ಯಾನ
ಬ್ರಾಹ್ಮಣ್ಯವನ್ನು ಹೇಗೆ ಪಡೆಯುವುದೆಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಮತಂಗನ ಕಥೆಯನ್ನು ಉದಾಹರಿಸುತ್ತಾನೆ (೧-೬). ಓರ್ವ ಬ್ರಾಹ್ಮಣನ ಸಾಕುಮಗನಾಗಿ ಬ್ರಾಹ್ಮಣನೆಂದೇ ತಿಳಿದುಕೊಂಡಿದ್ದ ಮತಂಗನಿಗೆ ಕತ್ತೆಯೊಂದು “ನೀನು ಬ್ರಾಹ್ಮಣಿಯಲ್ಲಿ ಶೂದ್ರನಿಂದ ಹುಟ್ಟಿದ ಚಂಡಾಲ” ಎಂದು ಹೇಳಿದುದು (೭-೧೬). ಇದನ್ನು ಕೇಳಿದ ಮತಂಗನು ಬ್ರಾಹ್ಮಣ್ಯವನ್ನು ಪಡೆಯಲು ಮಹಾತಪಸ್ಸನ್ನಾಚಿರಿಸಿದುದು (೧೭-೨೨). ವರವನ್ನು ನೀಡಲು ಬಂದಿದ್ದ ಇಂದ್ರನು ಆ ವರವು ಚಂಡಾಲನಿಗೆ ಪ್ರಾಪ್ತಿಯಾಗುವುದಿಲ್ಲ ಎನ್ನುವುದು (೨೩-೨೮).
13028001 ಯುಧಿಷ್ಠಿರ ಉವಾಚ|
13028001a ಪ್ರಜ್ಞಾಶ್ರುತಾಭ್ಯಾಂ ವೃತ್ತೇನ ಶೀಲೇನ ಚ ಯಥಾ ಭವಾನ್|
13028001c ಗುಣೈಃ ಸಮುದಿತಃ ಸರ್ವೈರ್ವಯಸಾ ಚ ಸಮನ್ವಿತಃ||
13028001E ತಸ್ಮಾದ್ಭವಂತಂ ಪೃಚ್ಚಾಮಿ ಧರ್ಮಂ ಧರ್ಮಭೃತಾಂ ವರ||
ಯುಧಿಷ್ಠಿರನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ! ನೀನು ಬುದ್ಧಿ, ವಿದ್ಯೆ, ಸದಾಚಾರ ಶೀಲ, ವಯಸ್ಸು ಮತ್ತು ಸರ್ವ ಗುಣಗಳಿಂದ ಸಮೃದ್ಧನಾಗಿರುವೆ. ಆದುದರಿಂದ ಧರ್ಮದ ಕುರಿತು ನಿನ್ನಲ್ಲಿ ಕೇಳುತ್ತೇನೆ.
13028002a ಕ್ಷತ್ರಿಯೋ ಯದಿ ವಾ ವೈಶ್ಯಃ ಶೂದ್ರೋ ವಾ ರಾಜಸತ್ತಮ|
13028002c ಬ್ರಾಹ್ಮಣ್ಯಂ ಪ್ರಾಪ್ನುಯಾತ್ಕೇನ ತನ್ಮೇ ವ್ಯಾಖ್ಯಾತುಮರ್ಹಸಿ||
ರಾಜಸತ್ತಮ! ಒಂದು ವೇಳೆ ಕ್ಷತ್ರಿಯ ಅಥವಾ ವೈಶ್ಯ ಅಥವಾ ಶೂದ್ರನು ಬ್ರಾಹ್ಮಣ್ಯವನ್ನು ಪಡೆಯಬೇಕೆಂದರೆ ಅವರು ಹೇಗೆ ಅದನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನನಗೆ ಹೇಳಬೇಕು.
13028003a ತಪಸಾ ವಾ ಸುಮಹತಾ ಕರ್ಮಣಾ ವಾ ಶ್ರುತೇನ ವಾ|
13028003c ಬ್ರಾಹ್ಮಣ್ಯಮಥ ಚೇದಿಚ್ಚೇತ್ತನ್ಮೇ ಬ್ರೂಹಿ ಪಿತಾಮಹ||
ತಪಸ್ಸಿನಿಂದ ಅಥವಾ ಮಹಾ ಕರ್ಮಗಳಿಂದ ಅಥವಾ ಶಾಸ್ತ್ರಜ್ಞಾನಗಳಿಂದ ಬ್ರಾಹ್ಮಣತ್ವವನ್ನು ಪಡೆಯಬಹುದೇ? ಅದನ್ನು ನನಗೆ ಹೇಳು ಪಿತಾಮಹ!”
13028004 ಭೀಷ್ಮ ಉವಾಚ|
13028004a ಬ್ರಾಹ್ಮಣ್ಯಂ ತಾತ ದುಷ್ಪ್ರಾಪಂ ವರ್ಣೈಃ ಕ್ಷತ್ರಾದಿಭಿಸ್ತ್ರಿಭಿಃ|
13028004c ಪರಂ ಹಿ ಸರ್ವಭೂತಾನಾಂ ಸ್ಥಾನಮೇತದ್ಯುಧಿಷ್ಠಿರ||
ಭೀಷ್ಮನು ಹೇಳಿದನು: “ಮಗೂ ಯುಧಿಷ್ಠಿರ! ಕ್ಷತ್ರಿಯಾದಿ ಮೂರೂ ವರ್ಣದವರಿಗೆ ಬ್ರಾಹ್ಮಣ್ಯವು ದುಷ್ಪ್ರಾಪ್ಯವು. ಏಕೆಂದರೆ ಬ್ರಾಹ್ಮಣ್ಯತ್ವವು ಸರ್ವಭೂತಗಳಿಗೂ ಶ್ರೇಷ್ಠ ಸ್ಥಾನವು.
13028005a ಬಹ್ವೀಸ್ತು ಸಂಸರನ್ಯೋನೀರ್ಜಾಯಮಾನಃ ಪುನಃ ಪುನಃ|
13028005c ಪರ್ಯಾಯೇ ತಾತ ಕಸ್ಮಿಂಶ್ಚಿದ್ಬ್ರಾಹ್ಮಣೋ ನಾಮ ಜಾಯತೇ||
ಮಗೂ! ಜೀವವು ಹಲವಾರು ಯೋನಿಗಳಲ್ಲಿ ಪುನಃ ಪುನಃ ಜನ್ಮವನ್ನು ತಾಳಿ ಯಾವುದೋ ಒಂದು ಕಾಲದಲ್ಲಿ ಬ್ರಾಹ್ಮಣಯೋನಿಯಲ್ಲಿ ಹುಟ್ಟುತ್ತದೆ.
13028006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13028006c ಮತಂಗಸ್ಯ ಚ ಸಂವಾದಂ ಗರ್ದಭ್ಯಾಶ್ಚ ಯುಧಿಷ್ಠಿರ||
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿ ಪುರಾತನ ಇತಿಹಾಸವಾಗಿರುವ ಮತಂಗ ಮತ್ತು ಒಂದು ಹೆಣ್ಣು ಕತ್ತೆಯ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.
13028007a ದ್ವಿಜಾತೇಃ ಕಸ್ಯ ಚಿತ್ತಾತ ತುಲ್ಯವರ್ಣಃ ಸುತಃ ಪ್ರಭುಃ|
13028007c ಮತಂಗೋ ನಾಮ ನಾಮ್ನಾಭೂತ್ಸರ್ವೈಃ ಸಮುದಿತೋ ಗುಣೈಃ||
ಮಗೂ! ಓರ್ವ ಬ್ರಾಹ್ಮಣನಿಗೆ ಮತಂಗ ಎಂಬ ಹೆಸರಿನ ಸಾಕುಮಗನಿದ್ದನು. ಸರ್ವಗುಣಗಳಿಂದ ಸಮುದಿತನಾಗಿದ್ದ ಅವನನ್ನು ಬ್ರಾಹ್ಮಣನೆಂದೇ ಎಲ್ಲರೂ ಮನ್ನಿಸುತ್ತಿದ್ದರು.
13028008a ಸ ಯಜ್ಞಕಾರಃ ಕೌಂತೇಯ ಪಿತ್ರಾ ಸೃಷ್ಟಃ ಪರಂತಪ|
13028008c ಪ್ರಾಯಾದ್ಗರ್ದಭಯುಕ್ತೇನ ರಥೇನೇಹಾಶುಗಾಮಿನಾ||
ಕೌಂತೇಯ! ಪರಂತಪ! ಒಮ್ಮೆ ತಂದೆಯ ಆಜ್ಞಾನುಸಾರವಾಗಿ ಅವನು ಯಜ್ಞಮಾಡಿಸಲು ಶೀಘ್ರವಾಗಿ ಹೋಗುವ ಕತ್ತೆಯಿಂದ ಯುಕ್ತವಾಗಿದ್ದ ರಥದಲ್ಲಿ ಕುಳಿತು ನೆರೆಯೂರಿಗೆ ಹೊರಟನು.
13028009a ಸ ಬಾಲಂ ಗರ್ದಭಂ ರಾಜನ್ವಹಂತಂ ಮಾತುರಂತಿಕೇ|
13028009c ನಿರವಿಧ್ಯತ್ಪ್ರತೋದೇನ ನಾಸಿಕಾಯಾಂ ಪುನಃ ಪುನಃ||
ರಾಜನ್! ಕತ್ತೆಯು ಇನ್ನೂ ಎಳೆಯದಾಗಿತ್ತು. ಆದುದರಿಂದ ಅದು ರಥವನ್ನು ತನ್ನ ತಾಯಿಯ ಕಡೆಯೇ ಎಳೆದುಕೊಂಡು ಹೋಗುತ್ತಿತ್ತು. ಮತಂಗನು ಚಾವಟಿಯಿಂದ ಅದರ ಮೂಗಿನ ಮೇಲೆ ಪುನಃ ಪುನಃ ಹೊಡೆಯುತ್ತಿದ್ದನು.
13028010a ತಂ ತು ತೀವ್ರವ್ರಣಂ ದೃಷ್ಟ್ವಾ ಗರ್ದಭೀ ಪುತ್ರಗೃದ್ಧಿನೀ|
13028010c ಉವಾಚ ಮಾ ಶುಚಃ ಪುತ್ರ ಚಂಡಾಲಸ್ತ್ವಾಧಿತಿಷ್ಠತಿ||
ತನ್ನ ಮಗನಿಗೆ ಆಗಿದ್ದ ತೀವ್ರ ಗಾಯವನ್ನು ನೋಡಿ ತಾಯಿ ಕತ್ತೆಯು ಮಗನನ್ನು ಸಮಾಧಾನಗೊಳಿಸುತ್ತಾ ಹೇಳಿದಳು: “ಮಗೂ! ದುಃಖಿಸಬೇಡ! ಬಂಡಿಯಲ್ಲಿ ಚಾಂಡಾಲನು ಕುಳಿತಿದ್ದಾನೆ!
13028011a ಬ್ರಾಹ್ಮಣೇ ದಾರುಣಂ ನಾಸ್ತಿ ಮೈತ್ರೋ ಬ್ರಾಹ್ಮಣ ಉಚ್ಯತೇ|
13028011c ಆಚಾರ್ಯಃ ಸರ್ವಭೂತಾನಾಂ ಶಾಸ್ತಾ ಕಿಂ ಪ್ರಹರಿಷ್ಯತಿ||
ಬ್ರಾಹ್ಮಣನಲ್ಲಿ ಕ್ರೌರ್ಯವಿರುವುದಿಲ್ಲ. ಎಲ್ಲರ ಮೇಲೂ ಮಿತ್ರಭಾವವನ್ನು ಹೊಂದಿರುವವನೇ ಬ್ರಾಹ್ಮಣನೆಂದು ಹೇಳುತ್ತಾರೆ. ಸರ್ವಭೂತಗಳ ಮೇಲೂ ಶಾಸನಮಾಡುವ ಆಚಾರ್ಯನು ಹೇಗೆ ತಾನೇ ಹೊಡೆಯುತ್ತಾನೆ?
13028012a ಅಯಂ ತು ಪಾಪಪ್ರಕೃತಿರ್ಬಾಲೇ ನ ಕುರುತೇ ದಯಾಮ್|
13028012c ಸ್ವಯೋನಿಂ ಮಾನಯತ್ಯೇಷ ಭಾವೋ ಭಾವಂ ನಿಗಚ್ಚತಿ||
ಇವನು ಪಾಪಪ್ರಕೃತಿಯುಳ್ಳವನಾಗಿರುವುದರಿಂದ ಬಾಲಕನಾದ ನಿನ್ನ ಮೇಲೆ ದಯೆಯನ್ನು ತೋರಿಸುತ್ತಿಲ್ಲ. ಇವನು ತನ್ನ ಯೋನಿಯಂತೆಯೇ ನಡೆದುಕೊಳ್ಳುತ್ತಿದ್ದಾನೆ. ಹುಟ್ಟಿನ ಸ್ವಭಾವವೇ ಯಾವಾಗಲೂ ಮನೋಭಾವವನ್ನು ನಿಯಂತ್ರಿಸುತ್ತದೆ.”
13028013a ಏತಚ್ಛ್ರುತ್ವಾ ಮತಂಗಸ್ತು ದಾರುಣಂ ರಾಸಭೀವಚಃ|
13028013c ಅವತೀರ್ಯ ರಥಾತ್ತೂರ್ಣಂ ರಾಸಭೀಂ ಪ್ರತ್ಯಭಾಷತ||
ತಾಯಿಗತ್ತೆಯ ಆ ದಾರುಣ ಮಾತನ್ನು ಕೇಳಿ ಮತಂಗನು ಕೂಡಲೇ ರಥದಿಂದ ಇಳಿದು ರಾಸಭಿಗೆ ಉತ್ತರಿಸಿದನು:
13028014a ಬ್ರೂಹಿ ರಾಸಭಿ ಕಲ್ಯಾಣಿ ಮಾತಾ ಮೇ ಯೇನ ದೂಷಿತಾ|
13028014c ಕಥಂ ಮಾಂ ವೇತ್ಸಿ ಚಂಡಾಲಂ ಕ್ಷಿಪ್ರಂ ರಾಸಭಿ ಶಂಸ ಮೇ||
“ಕಲ್ಯಾಣೀ ರಾಸಭಿಯೇ! ನನ್ನ ತಾಯಿಯನ್ನು ದೂಷಿಸುತ್ತಿರುವವಳೇ! ರಾಸಭಿ! ನನ್ನು ಚಂಡಾಲನೆಂದು ಹೇಗೆ ತಿಳಿದಿರುವೆ? ಬೇಗನೇ ನನಗೆ ಹೇಳು!
13028015a ಕೇನ ಜಾತೋಽಸ್ಮಿ ಚಂಡಾಲೋ ಬ್ರಾಹ್ಮಣ್ಯಂ ಯೇನ ಮೇಽನಶತ್[1]|
13028015c ತತ್ತ್ವೇನೈತನ್ಮಹಾಪ್ರಾಜ್ಞೇ ಬ್ರೂಹಿ ಸರ್ವಮಶೇಷತಃ||
ನಾನು ಚಂಡಾಲನೆಂದು ಯಾರಿಂದ ನಿನಗೆ ತಿಳಿಯಿತು? ಯಾವುದರಿಂದ ಬ್ರಾಹ್ಮಣ್ಯವು ನಾಶವಾಗುತ್ತದೆ? ಮಹಾಪ್ರಾಜ್ಞೆ! ಯಥಾವತ್ತಾಗಿ ಮತ್ತು ಸಂಪೂರ್ಣವಾಗಿ ಹೇಳು!”
13028016 ಗರ್ದಭ್ಯುವಾಚ|
13028016a ಬ್ರಾಹ್ಮಣ್ಯಾಂ ವೃಷಲೇನ ತ್ವಂ ಮತ್ತಾಯಾಂ ನಾಪಿತೇನ ಹ|
13028016c ಜಾತಸ್ತ್ವಮಸಿ ಚಂಡಾಲೋ ಬ್ರಾಹ್ಮಣ್ಯಂ ತೇನ ತೇಽನಶತ್||
ಗರ್ದಭಿಯು ಹೇಳಿದಳು: “ಬ್ರಾಹ್ಮಣಿಯಲ್ಲಿ ಶೂದ್ರ ಕ್ಷೌರಿಕನಿಂದ ನೀನು ಹುಟ್ಟಿರುವೆ. ಆದುದರಿಂದ ನೀನು ಹುಟ್ಟಿನಲ್ಲಿ ಚಂಡಾಲ[2]. ಇದರಿಂದಲೇ ನಿನ್ನ ಬ್ರಾಹ್ಮಣ್ಯವು ನಾಶವಾಯಿತು.”
13028017a ಏವಮುಕ್ತೋ ಮತಂಗಸ್ತು ಪ್ರತ್ಯುಪಾಯಾದ್ಗೃಹಂ ಪ್ರತಿ|
13028017c ತಮಾಗತಮಭಿಪ್ರೇಕ್ಷ್ಯ ಪಿತಾ ವಾಕ್ಯಮಥಾಬ್ರವೀತ್||
ಇದನ್ನು ಕೇಳಿ ಮತಂಗನಾದರೋ ತನ್ನ ಮನೆಯಕಡೆ ಹೊರಟನು. ಅವನು ಬಂದಿರುವುದನ್ನು ನೋಡಿ ತಂದೆಯು ಹೇಳಿದನು:
13028018a ಮಯಾ ತ್ವಂ ಯಜ್ಞಸಂಸಿದ್ಧೌ ನಿಯುಕ್ತೋ ಗುರುಕರ್ಮಣಿ|
13028018c ಕಸ್ಮಾತ್ಪ್ರತಿನಿವೃತ್ತೋಽಸಿ ಕಚ್ಚಿನ್ನ ಕುಶಲಂ ತವ||
“ನಾನು ನಿನ್ನನ್ನು ಯಜ್ಞದ ಗುರುಕಾರ್ಯದಲ್ಲಿ ನಿಯುಕ್ತಗೊಳಿಸಿದ್ದೆನು. ನೇನು ಏಕೆ ಹಿಂದಿರುಗಿ ಬಂದಿರುವೆ? ನೀನು ಕುಶಲವಾಗಿದ್ದೀಯೆ ತಾನೇ?”
13028019 ಮತಂಗ ಉವಾಚ|
13028019a ಅಯೋನಿರಗ್ರ್ಯಯೋನಿರ್ವಾ[3] ಯಃ ಸ್ಯಾತ್ಸ ಕುಶಲೀ ಭವೇತ್|
13028019c ಕುಶಲಂ ತು ಕುತಸ್ತಸ್ಯ ಯಸ್ಯೇಯಂ ಜನನೀ ಪಿತಃ||
ಮತಂಗನು ಹೇಳಿದನು: “ಚಂಡಾಲ ಯೋನಿಯಲ್ಲಿ ಹುಟ್ಟಿದವನು ಹೇಗೆ ಕುಶಲಿಯಾಗಿರಬಹುದು? ತಂದೆಯೇ! ಅಂಥಹ ತಾಯಿಯಲ್ಲಿ ಹುಟ್ಟಿದವನು ಹೇಗೆ ಕುಶಲಿಯಾಗಿರಬಹುದು?
13028020a ಬ್ರಾಹ್ಮಣ್ಯಾಂ ವೃಷಲಾಜ್ಜಾತಂ ಪಿತರ್ವೇದಯತೀಹ ಮಾಮ್|
13028020c ಅಮಾನುಷೀ ಗರ್ದಭೀಯಂ ತಸ್ಮಾತ್ತಪ್ಸ್ಯೇ ತಪೋ ಮಹತ್||
ತಂದೆಯೇ! ನಾನು ಶೂದ್ರನಿಂದ ಬ್ರಾಹ್ಮಣಿಯಲ್ಲಿ ಹುಟ್ಟಿದವನೆಂದು ಆ ಅಮಾನುಷೀ ಗಾರ್ದಭಿಯು ನನಗೆ ಹೇಳಿತು. ಆದುದರಿಂದ ನಾನು ಮಹಾ ತಪಸ್ಸನ್ನು ತಪಿಸುತ್ತೇನೆ.”
13028021a ಏವಮುಕ್ತ್ವಾ ಸ ಪಿತರಂ ಪ್ರತಸ್ಥೇ ಕೃತನಿಶ್ಚಯಃ|
13028021c ತತೋ ಗತ್ವಾ ಮಹಾರಣ್ಯಮತಪ್ಯತ ಮಹತ್ತಪಃ||
ತಂದೆಗೆ ಹೀಗೆ ಹೇಳಿ ಆ ಕೃತನಿಶ್ಚಯಿಯು ಮಹಾರಣ್ಯಕ್ಕೆ ಹೋಗಿ ಮಹಾ ತಪಸ್ಸನ್ನು ತಪಿಸಿದನು.
13028022a ತತಃ ಸಂತಾಪಯಾಮಾಸ ವಿಬುಧಾಂಸ್ತಪಸಾನ್ವಿತಃ|
13028022c ಮತಂಗಃ ಸುಸುಖಂ ಪ್ರೇಪ್ಸುಃ ಸ್ಥಾನಂ ಸುಚರಿತಾದಪಿ||
13028023a ತಂ ತಥಾ ತಪಸಾ ಯುಕ್ತಮುವಾಚ ಹರಿವಾಹನಃ|
ಇದೇ ಜನ್ಮದಲ್ಲಿಯೇ ಸುಲಭವಾಗಿ ಬ್ರಾಹ್ಮಣತ್ವವನ್ನು ಪಡೆಯಬೇಕೆಂಬ ಉದ್ದೇಶದಿಂದ ತಪಸ್ಸನ್ನಾಚರಿಸಿ ಜಗತ್ತನ್ನೇ ಸುಡುತ್ತಿದ್ದ ತಪಸಾನ್ವಿತ ಮಂತಗನಿಗೆ ಹರಿವಾಹನ ಇಂದ್ರನು ಹೇಳಿದನು:
13028023c ಮತಂಗ ತಪ್ಯಸೇ ಕಿಂ ತ್ವಂ ಭೋಗಾನುತ್ಸೃಜ್ಯ ಮಾನುಷಾನ್||
13028024a ವರಂ ದದಾನಿ ತೇ ಹಂತ ವೃಣೀಷ್ವ ತ್ವಂ ಯದಿಚ್ಚಸಿ|
13028024c ಯಚ್ಚಾಪ್ಯವಾಪ್ಯಮನ್ಯತ್ತೇ ಸರ್ವಂ ಪ್ರಬ್ರೂಹಿ ಮಾಚಿರಮ್||
“ಮತಂಗ! ಮನುಷ್ಯ ಭೋಗಗಳನ್ನು ಬಿಸುಟು ತಪಸ್ಸನ್ನೇಕೆ ತಪಿಸುತ್ತಿರುವೆ? ನಿಲ್ಲು! ನಿನಗೆ ವರವನ್ನು ನೀಡುತ್ತೇನೆ. ನಿನಗಿಷ್ಟವಾದುದನ್ನು ಕೇಳಿಕೋ! ಪಡೆಯಲು ಎಷ್ಟೇ ಅಸಾಧ್ಯವಾಗಿದ್ದರೂ ನೀನು ಬಯಸುವ ಎಲ್ಲವನ್ನೂ ಬೇಗನೇ ಹೇಳು!”
13028025 ಮತಂಗ ಉವಾಚ|
13028025a ಬ್ರಾಹ್ಮಣ್ಯಂ ಕಾಮಯಾನೋಽಹಮಿದಮಾರಬ್ಧವಾಂಸ್ತಪಃ|
13028025c ಗಚ್ಚೇಯಂ ತದವಾಪ್ಯೇಹ ವರ ಏಷ ವೃತೋ ಮಯಾ||
ಮತಂಗನು ಹೇಳಿದನು: “ಬ್ರಾಹ್ಮಣ್ಯವನ್ನು ಬಯಸಿಯೇ ನಾನು ಈ ತಪಸ್ಸನ್ನು ಆರಂಭಿಸಿದ್ದೇನೆ. ಆ ವರವನ್ನು ಪಡೆದೊಡನೆಯೇ ನಾನು ಹೊರಟುಹೋಗುತ್ತೇನೆ. ಇದೇ ನಾನು ನಿನ್ನಿಂದ ಬೇಡುವ ವರ!”
13028026a ಏತಚ್ಛ್ರುತ್ವಾ ತು ವಚನಂ ತಮುವಾಚ ಪುರಂದರಃ|
13028026c ಬ್ರಾಹ್ಮಣ್ಯಂ ಪ್ರಾರ್ಥಯಾನಸ್ತ್ವಮಪ್ರಾಪ್ಯಮಕೃತಾತ್ಮಭಿಃ||
ಅವನ ಆ ಮಾತನ್ನು ಕೇಳಿ ಪುರಂದರನು ಹೇಳಿದನು: “ಅಕೃತಾತ್ಮರಿಗೂ ಅಪ್ರಾಪ್ತವಾದ ಬ್ರಾಹ್ಮಣ್ಯವನ್ನು ನೀನು ಪ್ರಾರ್ಥಿಸುತ್ತಿದ್ದೀಯೆ!
13028027a ಶ್ರೇಷ್ಠಂ ಯತ್ಸರ್ವಭೂತೇಷು ತಪೋ ಯನ್ನಾತಿವರ್ತತೇ|
13028027c ತದಗ್ರ್ಯಂ ಪ್ರಾರ್ಥಯಾನಸ್ತ್ವಮಚಿರಾದ್ವಿನಶಿಷ್ಯಸಿ||
ಸರ್ವಭೂತಗಳಲ್ಲಿಯೇ ಶ್ರೇಷ್ಠವಾದುದು ತಪಸ್ಸಿನಿಂದ ದೊರೆಯುವುದಿಲ್ಲ. ಆ ಅಗ್ರ್ಯವನ್ನು ಪ್ರಾರ್ಥಿಸುತ್ತಿರುವೆಯಾದುದರಿಂದ ಬೇಗನೇ ನೀನು ವಿನಾಶಹೊಂದುತ್ತೀಯೆ!
13028028a ದೇವತಾಸುರಮರ್ತ್ಯೇಷು ಯತ್ಪವಿತ್ರಂ ಪರಂ ಸ್ಮೃತಮ್|
13028028c ಚಂಡಾಲಯೋನೌ ಜಾತೇನ ನ ತತ್ಪ್ರಾಪ್ಯಂ ಕಥಂ ಚನ||
ದೇವತೆಗಳು, ಅಸುರರು ಮತ್ತು ಮನುಷ್ಯರು ಯಾವುದನ್ನು ಪರಮ ಪವಿತ್ರವೆಂದು ತಿಳಿದುಕೊಂಡಿದ್ದಾರೋ ಅದನ್ನು ಚಂಡಾಲಯೋನಿಯಲ್ಲಿ ಹುಟ್ಟಿದವನಿಗೆ ಎಂದೂ ದೊರೆಯುವುದಿಲ್ಲ!””
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ಅಷ್ಟಾವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.
[1] ಕಥಂ ಮಾಂ ವೇತ್ತಿ ಚಂಡಾಲಂ ಬ್ರಾಹ್ಮಣ್ಯಂ ಯೇನ ನಶ್ಯತೇ| ಎಂಬ ಪಾಠಾಂತರವಿದೆ (ಭಾರತದರ್ಶನ).
[2] ಬ್ರಾಹ್ಮಣ್ಯಾಂ ವೃಷಲೇನ ಯಃ ಎಂದು ಬ್ರಾಹ್ಮಣಿಯಲ್ಲಿ ಶೂದ್ರನಿಂದ ಹುಟ್ಟಿದವನು ಚಂಡಾಲನೆಂದು ಅಮರಕೋಶದಲ್ಲಿಯೂ ಇದೆ.
[3] ಅಂತ್ಯಯೋನಿರಯೋನಿರ್ವಾ ಕಥಂ ಸ ಕುಶಲೀ ಭವೇತ್| ಎಂಬ ಪಾಠಾಂತರವಿದೆ (ಭಾರತದರ್ಶನ).