Anushasana Parva: Chapter 19

ಅನುಶಾಸನ ಪರ್ವ: ದಾನಧರ್ಮ ಪರ್ವ

೧೯

ಅಷ್ಟಾವಕ್ರಾದಿಕ್ಸಂವಾದ

ಯುಧಿಷ್ಠಿರನು ದಾಂಪತ್ಯದಲ್ಲಿನ ಸಹಧರ್ಮದ ಕುರಿತು ಕೇಳಲು, ಭೀಷ್ಮನು ಅಷ್ಟಾವಕ್ರ ಮತ್ತು ದಿಕ್ಕುಗಳ ಸಂವಾದವನ್ನು ಉದಾಹರಿಸಿದುದು (೧-೧೦). ಅಷ್ಟಾವಕ್ರನು ವದಾನ್ಯನ ಮಗಳನ್ನು ಬಯಸಿ ಕೇಳಲು, ವದಾನ್ಯನು ಅವನಿಗೆ ಉತ್ತರ ದಿಕ್ಕಿನಲ್ಲಿ ರುದ್ರನ ಸ್ಥಾನವನ್ನು ದಾಟಿ ವನಪ್ರದೇಶದಲ್ಲಿರುವ ವೃದ್ಧ ತಪಸ್ವಿನಿಯನ್ನು ಪೂಜಿಸಿ ಬಂದರೆ ತನ್ನ ಮಗಳು ಅಷ್ಟಾವಕ್ರನಿಗೆ ವಿವಾಹದಲ್ಲಿ ದೊರೆಯುತ್ತಾಳೆ ಎಂದುದು (೧೧-೨೫).

13019001 ಯುಧಿಷ್ಠಿರ ಉವಾಚ|

13019001a ಯದಿದಂ ಸಹಧರ್ಮೇತಿ ಪ್ರೋಚ್ಯತೇ ಭರತರ್ಷಭ|

13019001c ಪಾಣಿಗ್ರಹಣಕಾಲೇ ತು ಸ್ತ್ರೀಣಾಮೇತತ್ಕಥಂ ಸ್ಮೃತಮ್||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಾಣಿಗ್ರಹಣ ಕಾಲದಲ್ಲಿ ಸ್ತ್ರೀಯರ ವಿಷಯದಲ್ಲಿ “ಸಹಧರ್ಮ[1]” ಎಂದು ಹೇಳುತ್ತಾರೆ. ಇದು ಹೇಗೆ ಬಂದಿತು?

13019002a ಆರ್ಷ ಏಷ ಭವೇದ್ಧರ್ಮಃ ಪ್ರಾಜಾಪತ್ಯೋಽಥ ವಾಸುರಃ|

13019002c ಯದೇತತ್ಸಹಧರ್ಮೇತಿ ಪೂರ್ವಮುಕ್ತಂ ಮಹರ್ಷಿಭಿಃ||

ಹಿಂದೆ ಮಹರ್ಷಿಗಳು ಈ ರೀತಿ “ಸಹಧರ್ಮ” ಎಂದು ಹೇಳಿರುವುದು ಆರ್ಷ ಧರ್ಮ[2]ವಾಗಿರಬಹುದು ಅಥವಾ ಸಂತಾನೋತ್ಪತ್ತಿ[3]ಗಾಗಿರಬಹುದು ಅಥವಾ ಅಸುರಧರ್ಮ[4]ವಾಗಿರಬಹುದು.

13019003a ಸಂದೇಹಃ ಸುಮಹಾನೇಷ ವಿರುದ್ಧ ಇತಿ ಮೇ ಮತಿಃ|

13019003c ಇಹ ಯಃ ಸಹಧರ್ಮೋ ವೈ ಪ್ರೇತ್ಯಾಯಂ ವಿಹಿತಃ ಕ್ವ ನು||

ಇದರ ಕುರಿತು ನನ್ನಲ್ಲಿ ಮಹಾ ಸಂದೇಹವೇ ಉಂಟಾಗಿದೆ. “ಸಹಧರ್ಮ” ಎನ್ನುವುದು ವಿರುದ್ಧವಾದುದು ಎಂದು ನನಗನ್ನಿಸುತ್ತದೆ. ಇಲ್ಲಿರುವ ಸಹಧರ್ಮವು ಮರಣದ ನಂತರ ಎಲ್ಲಿರುತ್ತದೆ?

13019004a ಸ್ವರ್ಗೇ ಮೃತಾನಾಂ ಭವತಿ ಸಹಧರ್ಮಃ ಪಿತಾಮಹ|

13019004c ಪೂರ್ವಮೇಕಸ್ತು ಮ್ರಿಯತೇ ಕ್ವ ಚೈಕಸ್ತಿಷ್ಠತೇ ವದ||

ಪಿತಾಮಹ! ಸಹಧರ್ಮದಲ್ಲಿದ್ದುಕೊಂಡಿರುವವರಿಗೆ ಮೃತರಾದ ನಂತರ ಸ್ವರ್ಗವು ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಪತಿ-ಪತ್ನಿಯರಲ್ಲಿ ಮೊದಲು ಒಬ್ಬರು ತೀರಿಕೊಂಡರೆ ಇಲ್ಲಿ ಏಕಾಂಗಿಯಾಗಿ ಉಳಿದಿರುವ ಇನ್ನೊಬ್ಬರಿಗೆ ಸಹಧರ್ಮವೆನ್ನುವುದು ಹೇಗೆ ಅನ್ವಯಿಸುತ್ತದೆ? ಈ ವಿಷಯದ ಕುರಿತು ಹೇಳು.

13019005a ನಾನಾಕರ್ಮಫಲೋಪೇತಾ ನಾನಾಕರ್ಮನಿವಾಸಿನಃ|

13019005c ನಾನಾನಿರಯನಿಷ್ಠಾಂತಾ ಮಾನುಷಾ ಬಹವೋ ಯದಾ||

ಮನುಷ್ಯರು ನಾನಾ ಕರ್ಮಫಲಗಳನ್ನು ಪಡೆಯುತ್ತಿರುವಾಗ, ನಾನಾ ಕರ್ಮಗಳಲ್ಲಿ ತೊಡಗಿರುವಾಗ ಮತ್ತು ನಾನಾ ಅವಸ್ಥೆಗಳನ್ನು ಹೊಂದುವಾಗ ಸ್ತ್ರೀ-ಪುರುಷರಲ್ಲಿ ಸಹಧರ್ಮದ ನಿರ್ವಾಹವು ಹೇಗೆ ಸಾಧ್ಯವಾಗುತ್ತದೆ?

13019006a ಅನೃತಾಃ ಸ್ತ್ರಿಯ ಇತ್ಯೇವಂ ಸೂತ್ರಕಾರೋ ವ್ಯವಸ್ಯತಿ|

13019006c ಯದಾನೃತಾಃ ಸ್ತ್ರಿಯಸ್ತಾತ ಸಹಧರ್ಮಃ ಕುತಃ ಸ್ಮೃತಃ||

ಸ್ತ್ರೀಯರು ಸುಳ್ಳುಹೇಳುವವರು ಎಂದು ಸೂತ್ರಕಾರರು ನಿಶ್ಚಯಿಸಿದ್ದಾರೆ[5]. ಅಯ್ಯಾ! ಸ್ತ್ರೀಯರು ಅನೃತರೆಂದಾದರೆ ಅವರೊಡನೆ ಸಹಧರ್ಮವು ಹೇಗೆ ಸಾಧ್ಯ?

13019007a ಅನೃತಾಃ ಸ್ತ್ರಿಯ ಇತ್ಯೇವಂ ವೇದೇಷ್ವಪಿ ಹಿ ಪಠ್ಯತೇ|

13019007c ಧರ್ಮೋಽಯಂ ಪೌರ್ವಿಕೀ ಸಂಜ್ಞಾ ಉಪಚಾರಃ ಕ್ರಿಯಾವಿಧಿಃ||

ಸ್ತ್ರೀಯರು ಅಸತ್ಯರು ಎಂದು ವೇದಗಳೂ ಹೇಳುತ್ತವೆ. ಈ ಸಹಧರ್ಮ ಎನ್ನುವುದು ಔಪಚಾರಿಕವಾಗಿ ದಾಂಪತ್ಯಕ್ಕೆ ಕೊಟ್ಟಿರುವ ಸಂಜ್ಞೆಯೇ ಹೊರತು ಅದರಲ್ಲಿ ಧರ್ಮದ ಅಂಶವ್ಯಾವುದೂ ಇಲ್ಲ.

13019008a ಗಹ್ವರಂ ಪ್ರತಿಭಾತ್ಯೇತನ್ಮಮ ಚಿಂತಯತೋಽನಿಶಮ್|

13019008c ನಿಃಸಂದೇಹಮಿದಂ ಸರ್ವಂ ಪಿತಾಮಹ ಯಥಾ ಶ್ರುತಿಃ||

ಪಿತಾಮಹ! ಯಾವಾಗಲೂ ಚಿಂತಿಸುತ್ತಿರುವ ಈ ವಿಷಯವು ಇನ್ನೂ ಗಹನವಾಗುತ್ತಾ ಹೋಗುವುದೇ ಹೊರತು ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಆದುದರಿಂದ ಈ ವಿಷಯದಲ್ಲಿ ಶ್ರುತಿಯ ಅಭಿಮತವು ಹೇಗಿರುವುದೋ ಹಾಗೆ ಎಲ್ಲವನ್ನೂ ಹೇಳಿ ನನ್ನ ಈ ಸಂದೇಹವನ್ನು ದೂರಗೊಳಿಸು!

13019009a ಯದೇತದ್ಯಾದೃಶಂ ಚೈತದ್ಯಥಾ ಚೈತತ್ಪ್ರವರ್ತಿತಮ್|

13019009c ನಿಖಿಲೇನ ಮಹಾಪ್ರಾಜ್ಞ ಭವಾನೇತದ್ಬ್ರವೀತು ಮೇ||

ಮಹಾಪ್ರಾಜ್ಞ! ಈ ಸಹಧರ್ಮವೆನ್ನುವುದು ಎಂದಿನಿಂದ ಪ್ರಚಲಿತವಾಯಿತು? ಯಾವರೀತಿಯಲ್ಲಿ ಆಚಾರಕ್ಕೆ ಬಂದಿತು? ಇವುಗಳನ್ನು ಸಂಪೂರ್ಣವಾಗಿ ನನಗೆ ಹೇಳಬೇಕು!”

13019010 ಭೀಷ್ಮ ಉವಾಚ|

13019010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13019010c ಅಷ್ಟಾವಕ್ರಸ್ಯ ಸಂವಾದಂ ದಿಶಯಾ ಸಹ ಭಾರತ||

ಭೀಷ್ಮನು ಹೇಳಿದನು: “ಭಾರತ! ಇದರ ಸಂಬಂಧವಾಗಿ ದಿಕ್ಕುಗಳೊಡನೆ ಅಷ್ಟಾವಕ್ರನ ಸಂವಾದದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

13019011a ನಿವೇಷ್ಟುಕಾಮಸ್ತು ಪುರಾ ಅಷ್ಟಾವಕ್ರೋ ಮಹಾತಪಾಃ|

13019011c ಋಷೇರಥ ವದಾನ್ಯಸ್ಯ ಕನ್ಯಾಂ ವವ್ರೇ ಮಹಾತ್ಮನಃ||

ಹಿಂದೆ ವಿವಾಹವಾಗಲು ಬಯಸಿ ಮಹಾತಪಸ್ವಿ ಮಹಾತ್ಮ ಅಷ್ಟಾವಕ್ರನು ಋಷಿ ವದಾನ್ಯನ ಕನ್ಯೆಯನ್ನು ಕೇಳಿದನು.

13019012a ಸುಪ್ರಭಾಂ ನಾಮ ವೈ ನಾಮ್ನಾ ರೂಪೇಣಾಪ್ರತಿಮಾಂ ಭುವಿ|

13019012c ಗುಣಪ್ರಬರ್ಹಾಂ ಶೀಲೇನ ಸಾಧ್ವೀಂ ಚಾರಿತ್ರಶೋಭನಾಮ್||

ಸುಪ್ರಭಾ ಎಂಬ ಹೆಸರಿದ್ದ ಅವಳು ರೂಪದಲ್ಲಿ ಭೂಮಿಯಲ್ಲಿಯೇ ಅಪ್ರತಿಮಳಾಗಿದ್ದಳು. ಅವಳು ಗುಣ-ಪ್ರಭಾವ-ಶೀಲ ಮತ್ತು ಚಾರಿತ್ರ್ಯಗಳಿಂದ ಸುಶೋಭಿತಳಾಗಿದ್ದಳು.

13019013a ಸಾ ತಸ್ಯ ದೃಷ್ಟ್ವೈವ ಮನೋ ಜಹಾರ ಶುಭಲೋಚನಾ|

13019013c ವನರಾಜೀ ಯಥಾ ಚಿತ್ರಾ ವಸಂತೇ ಕುಸುಮಾಚಿತಾ||

ವಸಂತದಲ್ಲಿ ಬಣ್ಣ ಬಣ್ಣದ ಕುಸುಮಗಳಿಂದ ತುಂಬಿದ ವನರಾಜಿಯು ಚಿತ್ತವನ್ನು ಹೇಗೋ ಹಾಗೆ ನೋಡಿದೊಡನೆಯೇ ಆ ಶುಭಲೋಚನೆಯು ಅವನ ಮನಸ್ಸನ್ನು ಕದ್ದಳು.

13019014a ಋಷಿಸ್ತಮಾಹ ದೇಯಾ ಮೇ ಸುತಾ ತುಭ್ಯಂ ಶೃಣುಷ್ವ ಮೇ|

13019014c ಗಚ್ಚ ತಾವದ್ದಿಶಂ ಪುಣ್ಯಾಮುತ್ತರಾಂ ದ್ರಕ್ಷ್ಯಸೇ ತತಃ||

ಆ ಋಷಿಯು ಅವನಿಗೆ ಹೇಳಿದನು: “ನಿನಗೆ ನಾನು ನನ್ನ ಮಗಳನ್ನು ಕೊಡುತ್ತೇನೆ. ಆದರೆ ನನ್ನ ಮಾತನ್ನು ಕೇಳು. ಪುಣ್ಯ ಉತ್ತರ ದಿಶೆಯಲ್ಲಿ ಹೋಗು! ಅಲ್ಲಿ ನಿನಗೆ ಅವಳು ದೊರೆಯುತ್ತಾಳೆ!”

13019015 ಅಷ್ಟಾವಕ್ರ ಉವಾಚ|

13019015a ಕಿಂ ದ್ರಷ್ಟವ್ಯಂ ಮಯಾ ತತ್ರ ವಕ್ತುಮರ್ಹತಿ ಮೇ ಭವಾನ್|

13019015c ತಥೇದಾನೀಂ ಮಯಾ ಕಾರ್ಯಂ ಯಥಾ ವಕ್ಷ್ಯತಿ ಮಾಂ ಭವಾನ್||

ಅಷ್ಟಾವಕ್ರನು ಹೇಳಿದನು: “ಅಲ್ಲಿ ನಾನು ಯಾರನ್ನು ನೋಡಬೇಕು ಎಂದು ನನಗೆ ಹೇಳು! ನಾನು ಈ ಕಾರ್ಯವನ್ನು ಹೇಗೆ ಮಾಡಬೇಕು ಎನ್ನುವುದನ್ನು ಹೇಳು!”

13019016 ವದಾನ್ಯ ಉವಾಚ|

13019016a ಧನದಂ ಸಮತಿಕ್ರಮ್ಯ ಹಿಮವಂತಂ ತಥೈವ ಚ|

13019016c ರುದ್ರಸ್ಯಾಯತನಂ ದೃಷ್ಟ್ವಾ ಸಿದ್ಧಚಾರಣಸೇವಿತಮ್||

ವದಾನ್ಯನು ಹೇಳಿದನು: “ಧನದ ಕುಬೇರನ ಪ್ರದೇಶವನ್ನೂ ಹಿಮತ್ಪರ್ವತವನ್ನೂ ದಾಟಿದ ನಂತರ ಸಿದ್ಧಚಾರಣರಿಂದ ಸೇವಿತವಾಗಿರುವ ರುದ್ರನ ಸ್ಥಾನವು ಕಾಣುತ್ತದೆ.

13019017a ಪ್ರಹೃಷ್ಟೈಃ ಪಾರ್ಷದೈರ್ಜುಷ್ಟಂ ನೃತ್ಯದ್ಭಿರ್ವಿವಿಧಾನನೈಃ|

13019017c ದಿವ್ಯಾಂಗರಾಗೈಃ ಪೈಶಾಚೈರ್ವನ್ಯೈರ್ನಾನಾವಿಧೈಸ್ತಥಾ||

13019018a ಪಾಣಿತಾಲಸತಾಲೈಶ್ಚ ಶಮ್ಯಾತಾಲೈಃ ಸಮೈಸ್ತಥಾ|

13019018c ಸಂಪ್ರಹೃಷ್ಟೈಃ ಪ್ರನೃತ್ಯದ್ಭಿಃ ಶರ್ವಸ್ತತ್ರ ನಿಷೇವ್ಯತೇ||

ಅಲ್ಲಿ ನಾನಾ ತರಹದ ಮುಖವುಳ್ಳ, ದಿವ್ಯ ಅಂಗಾಂಗಳುಳ್ಳ ಪಿಶಾಚಿ-ಭೂತ-ಬೇತಾಳಾದಿ ಶಿವನ ಪಾರ್ಷದರು ಸಂಹೃಷ್ಟರಾಗಿ ಉಲ್ಲಾಸದಿಂದ ನರ್ತನ ಮಾಡುತ್ತಾ, ಚಪ್ಪಾಳೆ-ಕಂಚಿನತಾಳ-ವಿದ್ಯುತ್ತಿನಂತೆ ಥಳಥಳಿಸುವ ತಾಳಗಳಿಗೆ ತಕ್ಕಂತೆ ನೃತ್ಯಮಾಡುತ್ತಾ ಶರ್ವನ ಸೇವೆಗೈಯುತ್ತಿರುತ್ತಾರೆ.

13019019a ಇಷ್ಟಂ ಕಿಲ ಗಿರೌ ಸ್ಥಾನಂ ತದ್ದಿವ್ಯಮನುಶುಶ್ರುಮ|

13019019c ನಿತ್ಯಂ ಸನ್ನಿಹಿತೋ ದೇವಸ್ತಥಾ ಪಾರಿಷದಾಃ ಶುಭಾಃ||

ಗಿರಿಯ ಆ ದಿವ್ಯ ಸ್ಥಾನವು ಶಿವನಿಗೆ ಇಷ್ಟವಾದುದೆಂದು ಕೇಳಿದ್ದೇವಲ್ಲವೇ? ಅಲ್ಲಿ ನಿತ್ಯವೂ ದೇವನು ಶುಭ ಪಾರಿಷದರೊಂದಿಗೆ ಸನ್ನಿಹಿತನಾಗಿರುತ್ತಾನೆ.

13019020a ತತ್ರ ದೇವ್ಯಾ ತಪಸ್ತಪ್ತಂ ಶಂಕರಾರ್ಥಂ ಸುದುಶ್ಚರಮ್|

13019020c ಅತಸ್ತದಿಷ್ಟಂ ದೇವಸ್ಯ ತಥೋಮಾಯಾ ಇತಿ ಶ್ರುತಿಃ||

ಅಲ್ಲಿಯೇ ಶಂಕರನ ಸಲುವಾಗಿ ದೇವಿಯು ಸುದುಶ್ಚರ ತಪಸ್ಸನ್ನು ತಪಿಸಿದಳು. ಆದುದರಿಂದ ಅದು ಉಮಾ ಮತ್ತು ದೇವನಿಗೆ ಇಷ್ಟವಾದುದೆಂದು ಕೇಳಿದ್ದೇವೆ.

13019021a ತತ್ರ ಕೂಪೋ ಮಹಾನ್ಪಾರ್ಶ್ವೇ ದೇವಸ್ಯೋತ್ತರತಸ್ತಥಾ|

13019021c ಋತವಃ ಕಾಲರಾತ್ರಿಶ್ಚ ಯೇ ದಿವ್ಯಾ ಯೇ ಚ ಮಾನುಷಾಃ||

13019022a ಸರ್ವೇ ದೇವಮುಪಾಸಂತೇ ರೂಪಿಣಃ ಕಿಲ ತತ್ರ ಹ|

13019022c ತದತಿಕ್ರಮ್ಯ ಭವನಂ ತ್ವಯಾ ಯಾತವ್ಯಮೇವ ಹಿ||

ಅದರ ಪೂರ್ವಭಾಗದಲ್ಲಿರುವ ಮಹಾಪಾರ್ಶ್ವವೆಂಬ ಪರ್ವತದಲ್ಲಿಯೂ ಮತ್ತು ಅದರ ಉತ್ತರ ಭಾಗದಲ್ಲಿಯೂ ಋತುಗಳು, ಕಾಲರಾತ್ರಿ, ಮತ್ತು ಮನುಷ್ಯ-ದೇವ ಭಾವಗಳು ಎಲ್ಲವೂ ಮೂರ್ತಿಮತ್ತಾಗಿ ದೇವನನ್ನು ಪೂಜಿಸುತ್ತವೆಯಲ್ಲವೇ? ಆ ಭವನವನ್ನೂ ದಾಟಿ ನೀನು ಮುಂದೆ ಹೋಗಬೇಕು.

13019023a ತತೋ ನೀಲಂ ವನೋದ್ದೇಶಂ ದ್ರಕ್ಷ್ಯಸೇ ಮೇಘಸನ್ನಿಭಮ್|

13019023c ರಮಣೀಯಂ ಮನೋಗ್ರಾಹಿ ತತ್ರ ದ್ರಕ್ಷ್ಯಸಿ ವೈ ಸ್ತ್ರಿಯಮ್||

13019024a ತಪಸ್ವಿನೀಂ ಮಹಾಭಾಗಾಂ ವೃದ್ಧಾಂ ದೀಕ್ಷಾಮನುಷ್ಠಿತಾಮ್|

ಬಳಿಕ ನೀನು ಮೇಘಸದೃಶವಾದ ನೀಲವರ್ಣದ ರಮಣೀಯ ಮನೋಹರ ವನಪ್ರದೇಶವನ್ನು ಕಾಣುವೆ. ಅಲ್ಲಿ ಮಹಾಭಾಗೆ ದೀಕ್ಷಾಪರಾಯಣಿ ವೃದ್ಧ ತಪಸ್ವಿನಿ ಸ್ತ್ರೀಯನ್ನು ನೋಡುವೆ.

13019024c ದ್ರಷ್ಟವ್ಯಾ ಸಾ ತ್ವಯಾ ತತ್ರ ಸಂಪೂಜ್ಯಾ ಚೈವ ಯತ್ನತಃ||

13019025a ತಾಂ ದೃಷ್ಟ್ವಾ ವಿನಿವೃತ್ತಸ್ತ್ವಂ ತತಃ ಪಾಣಿಂ ಗ್ರಹೀಷ್ಯಸಿ|

13019025c ಯದ್ಯೇಷ ಸಮಯಃ ಸತ್ಯಃ ಸಾಧ್ಯತಾಂ ತತ್ರ ಗಮ್ಯತಾಮ್||

ಅವಳನ್ನು ನೋಡಿ ನೀನು ಅಲ್ಲಿ ಪಯತ್ನಪೂರ್ವಕವಾಗಿ ಅವಳನ್ನು ಪೂಜಿಸಬೇಕು. ಅವಳನ್ನು ಸಂದರ್ಶಿಸಿ ಹಿಂದಿರುಗಿದ ನಂತರ ನೀನು ನನ್ನ ಮಗಳನ್ನು ಪಾಣಿಗ್ರಹಣ ಮಾಡಿಕೊಳ್ಳಬಹುದು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಷ್ಟಾವಕ್ರಾದಿಕ್ಸಂವಾದೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಷ್ಟಾವಕ್ರಾದಿಕ್ಸಂವಾದ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

Image result for indian motifs

[1] ಸಹೋಭೌ ಚರತಾಂ ಧರ್ಮಂ” ಎಂಬ ಮಂತ್ರವನ್ನು ವಿವಾಹಕಾಲದಲ್ಲಿ ಹೇಳುತ್ತಾರೆ.

[2] ಋಷಿಗಳು ಈ ಪದವನ್ನು ವೇದಮಂತ್ರಗಳ ರೂಪವಾಗಿ ಹೇಳಿರಬಹುದು.

[3] ಸಹಧರ್ಮವು – ನಾಪುತ್ರಸ್ಯ ಲೋಕೋಽಸ್ತಿ – ಎಂಬ ಸ್ಮೃತಿಯನ್ನು ಅವಲಂಬಿಸಿ ಪ್ರಜೋತ್ಪತ್ತಿಗಾಗಿಯೇ ಹೇಳಿದ್ದಿರಬಹುದು.

[4] ಅಸುಷು ರಮತೇ ತೇಽಸುರಾಃ ತೇಷಾಮಯಂ ಅಸುರಃ – ಎಂಬ ವ್ಯುತ್ಪತ್ತಿಯಂತೆ ಅಸುರ ಶಬ್ಧಕ್ಕೆ ಇಂದ್ರಿಯಗಳೆಂಬ ಅರ್ಥವಿದೆ. ಸಹಧರ್ಮವೆಂಬ ಈ ಪದವು ಕೇವಲ ಇಂದ್ರಿಯ ತೃಪ್ತಿಗಾಗಿ ಹೇಳಲ್ಪಟ್ಟಿರಬಹುದು.

[5] ಸ್ತ್ರೀಯರ ಸ್ವಭಾವಧರ್ಮವನ್ನು ವರ್ಣಿಸುವಾಗ ಸೂತ್ರಕಾರರು – ಅನೃತಂ ಸಾಹಸಂ ಮಾಯಾ ಮೂರ್ಖತ್ವಮತಿಲೋಭಿತಾ – ಎಂದು ಹೇಳಿದ್ದಾರೆ.

Comments are closed.