Anushasana Parva: Chapter 18

ಅನುಶಾಸನ ಪರ್ವ: ದಾನಧರ್ಮ ಪರ್ವ

೧೮

ಶಿವಸ್ತುತಿಮಹಾತ್ಮೆ

ಯುಧಿಷ್ಠಿರನಿಗೆ ಶಿವಸ್ತುತಿಯ ಮಹಾತ್ಮೆಯ ಕುರಿತು ವ್ಯಾಸ, ಚತುಃಶೀರ್ಷ, ವಾಲ್ಮೀಕಿ, ಪರಶುರಾಮ, ಅಸಿತ ದೇವಲ, ಗೃತ್ಸಮದ, ಪರಾಶರ, ಜೈಗೀಷವ್ಯ, ಗಾರ್ಗ್ಯ, ಗಾಲವ, ಮಾಂಡವ್ಯ ಮೊದಲಾದ ಮುನಿಗಳು ತಮ್ಮ ಅದ್ಭುತ ಅನುಭವಗಳ ಮೂಲಕ ತಿಳಿಸಿದುದು (೧-೪೫). ಕೃಷ್ಣನು ಶಿವನಾಮಾವಳಿಗಳ ಕಥನವನ್ನು ಫಲಶೃತಿಯೊಂದಿಗೆ ಸಮಾಪ್ತಗೊಳಿಸಿದುದು (೪೬-೫೯).

13018001 ವೈಶಂಪಾಯನ ಉವಾಚ|

13018001a ಮಹಾಯೋಗೀ ತತಃ ಪ್ರಾಹ ಕೃಷ್ಣದ್ವೈಪಾಯನೋ ಮುನಿಃ|

13018001c ಪಠಸ್ವ ಪುತ್ರ ಭದ್ರಂ ತೇ ಪ್ರೀಯತಾಂ ತೇ ಮಹೇಶ್ವರಃ||

ವೈಶಂಪಾಯನನು ಹೇಳಿದನು: “ಆಗ ಮಹಾಯೋಗೀ ಕೃಷ್ಣದ್ವೈಪಾಯನ ಮುನಿಯು ಹೇಳಿದನು: “ಪುತ್ರ! ನಿನಗೆ ಮಂಗಳವಾಗಲಿ! ಶಿವಸಹಸ್ರನಾಮ ಸ್ತೋತ್ರವನ್ನು ಪಠಿಸು. ನಿನ್ನ ವಿಷಯದಲ್ಲಿಯೂ ಮಹೇಶ್ವರನು ಸುಪ್ರೀತನಾಗಲಿ.

13018002a ಪುರಾ ಪುತ್ರ ಮಯಾ ಮೇರೌ ತಪ್ಯತಾ ಪರಮಂ ತಪಃ|

13018002c ಪುತ್ರಹೇತೋರ್ಮಹಾರಾಜ ಸ್ತವ ಏಷೋಽನುಕೀರ್ತಿತಃ||

ಪುತ್ರ! ಮಹಾರಾಜ! ಹಿಂದೆ ನಾನು ಮೇರುಪರ್ವತದಲ್ಲಿ ಪರಮ ತಪಸ್ಸನ್ನು ತಪಿಸಿದೆನು. ಪುತ್ರಪ್ರಾಪ್ತಿಗಾಗಿ ನಾನು ಈ ಸ್ತವವನ್ನು ಸ್ತುತಿಸಿದನು.

13018003a ಲಬ್ಧವಾನಸ್ಮಿ ತಾನ್ಕಾಮಾನಹಂ ವೈ ಪಾಂಡುನಂದನ|

13018003c ತಥಾ ತ್ವಮಪಿ ಶರ್ವಾದ್ಧಿ ಸರ್ವಾನ್ಕಾಮಾನವಾಪ್ಸ್ಯಸಿ||

ಪಾಂಡುನಂದನ! ಅದರಿಂದ ನನ್ನ ಆ ಕಾಮನೆಯನ್ನು ಪಡೆದುಕೊಂಡೆನು. ಹಾಗೆಯೇ ನೀನೂ ಕೂಡ ಶರ್ವನನ್ನು ಸ್ತುತಿಸಿ ಸರ್ವ ಕಾಮನೆಗಳನ್ನೂ ಪಡೆದುಕೊಳ್ಳುತ್ತೀಯೆ.”

13018004a ಚತುಃಶೀರ್ಷಸ್ತತಃ ಪ್ರಾಹ ಶಕ್ರಸ್ಯ ದಯಿತಃ ಸಖಾ|

13018004c ಆಲಂಬಾಯನ ಇತ್ಯೇವ ವಿಶ್ರುತಃ ಕರುಣಾತ್ಮಕಃ||

ಅನಂತರ ಶಕ್ರನ ಪ್ರಿಯ ಸಖ, ಕರುಣಾತ್ಮಕ, ಆಲಂಬಾಯನನೆಂದು ವಿಶ್ರುತನಾಗಿದ್ದ ಚತುಃಶೀರ್ಷನು ಹೇಳಿದನು:

13018005a ಮಯಾ ಗೋಕರ್ಣಮಾಸಾದ್ಯ ತಪಸ್ತಪ್ತ್ವಾ ಶತಂ ಸಮಾಃ|

13018005c ಅಯೋನಿಜಾನಾಂ ದಾಂತಾನಾಂ ಧರ್ಮಜ್ಞಾನಾಂ ಸುವರ್ಚಸಾಮ್||

13018006a ಅಜರಾಣಾಮದುಃಖಾನಾಂ ಶತವರ್ಷಸಹಸ್ರಿಣಾಮ್|

13018006c ಲಬ್ಧಂ ಪುತ್ರಶತಂ ಶರ್ವಾತ್ಪುರಾ ಪಾಂಡುನೃಪಾತ್ಮಜ||

“ಪಾಂಡುನೃಪಾತ್ಮಜ! ಹಿಂದೆ ನಾನು ಗೋಕರ್ಣಕ್ಕೆ ಹೋಗಿ ನೂರು ವರ್ಷಗಳ ತಪಸ್ಸನ್ನು ಆಚರಿಸಿ ಶರ್ವನಿಂದ ಅಯೋನಿಜರೂ, ದಾಂತರೂ, ಧರ್ಮಜ್ಞರೂ, ಸುವರ್ಚಸರೂ, ನೂರು ಸಹಸ್ರ ವರ್ಷಗಳವರೆಗೆ ಮುಪ್ಪು-ದುಃಖಗಳನ್ನು ಹೊಂದಿರದೇ ಇದ್ದ ನೂರು ಮಕ್ಕಳನ್ನು ಪಡೆದೆನು.”

13018007a ವಾಲ್ಮೀಕಿಶ್ಚಾಪಿ ಭಗವಾನ್ಯುಧಿಷ್ಠಿರಮಭಾಷತ|

13018007c ವಿವಾದೇ ಸಾಮ್ನಿ ಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ|

13018007e ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ||

ಭಗವಾನ್ ವಾಲ್ಮೀಕಿಯೂ ಕೂಡ ಯುಧಿಷ್ಠಿರನಿಗೆ ಹೇಳಿದನು: “ಭಾರತ! ಮುನಿಗಳೊಂದಿಗೆ ವಿವಾದದಲ್ಲಿ ತೊಡಗಿದ್ದಾಗ ಬ್ರಹ್ಮಘ್ನನಾಗೆಂದು ನನಗೆ ಅವರು ಶಾಪವನ್ನಿತ್ತರು. ತಕ್ಷಣವೇ ನಾನು ಆ ಅಧರ್ಮದಲ್ಲಿ ತೊಡಗಿದೆನು.

13018008a ಸೋಽಹಮೀಶಾನಮನಘಮಸ್ತೌಷಂ ಶರಣಂ ಗತಃ|

13018008c ಮುಕ್ತಶ್ಚಾಸ್ಮ್ಯವಶಃ ಪಾಪಾತ್ತತೋ ದುಃಖವಿನಾಶನಃ|

13018008e ಆಹ ಮಾಂ ತ್ರಿಪುರಘ್ನೋ ವೈ ಯಶಸ್ತೇಽಗ್ರ್ಯಂ ಭವಿಷ್ಯತಿ||

ಆಗ ನಾನು ಈಶಾನ, ಅನಘ, ಪಾಪರಹಿತ ಶಿವನನ್ನು ಶರಣುಹೊಕ್ಕೆನು. ಅವನ ಅನುಗ್ರಹದಿಂದ ನಾನು ಆ ಪಾಪದಿಂದ ಮುಕ್ತನಾದೆನು. ನನ್ನ ದುಃಖವನ್ನು ನಾಶಗೊಳಿಸಿದ ತ್ರಿಪುರಘ್ನನು “ಮುಂದೆ ನಿನಗೆ ಯಶಸ್ಸು ದೊರೆಯುತ್ತದೆ” ಎಂದನು.”

13018009a ಜಾಮದಗ್ನ್ಯಶ್ಚ ಕೌಂತೇಯಮಾಹ ಧರ್ಮಭೃತಾಂ ವರಃ|

13018009c ಋಷಿಮಧ್ಯೇ ಸ್ಥಿತಸ್ತಾತ ತಪನ್ನಿವ ವಿಭಾವಸುಃ||

ಅಯ್ಯಾ! ಆಗ ಋಷಿಮಧ್ಯದಲ್ಲಿ ಸುಡುವ ವಿಭಾವಸುವಿನಂತೆ ನಿಂತಿದ್ದ ಧರ್ಮಭೃತರಲ್ಲಿ ಶ್ರೇಷ್ಠ ಜಾಮದಗ್ನಿ ರಾಮನು ಕೌಂತೇಯನಿಗೆ ಹೇಳಿದನು:

13018010a ಪಿತೃವಿಪ್ರವಧೇನಾಹಮಾರ್ತೋ ವೈ ಪಾಂಡವಾಗ್ರಜ|

13018010c ಶುಚಿರ್ಭೂತ್ವಾ ಮಹಾದೇವಂ ಗತವಾನ್ ಶರಣಂ ನೃಪ||

“ನೃಪ! ಪಾಂಡವಾಗ್ರಜ! ತಂದೆಯ ಮತ್ತು ವಿಪ್ರರ ವಧೆಯಿಂದ ಆರ್ತನಾಗಿದ್ದ ನಾನು ಶುಚಿರ್ಭೂತನಾಗಿ ಮಹಾದೇವನ ಶರಣು ಹೊಕ್ಕಿದ್ದೆನು.

13018011a ನಾಮಭಿಶ್ಚಾಸ್ತುವಂ ದೇವಂ ತತಸ್ತುಷ್ಟೋಽಭವದ್ಭವಃ|

13018011c ಪರಶುಂ ಚ ದದೌ ದೇವೋ ದಿವ್ಯಾನ್ಯಸ್ತ್ರಾಣಿ ಚೈವ ಮೇ||

ನಾಮಗಳಿಂದ ದೇವನನ್ನು ಸ್ತುತಿಸಲು ಭವನು ತುಷ್ಟನಾದನು. ಆ ದೇವನು ನನಗೆ ಪರಶುವನ್ನೂ ಅನ್ಯ ದಿವ್ಯಾಸ್ತ್ರಗಳನ್ನೂ ನೀಡಿದನು.

13018012a ಪಾಪಂ ನ ಭವಿತಾ ತೇಽದ್ಯ ಅಜೇಯಶ್ಚ ಭವಿಷ್ಯಸಿ|

13018012c ನ ತೇ ಪ್ರಭವಿತಾ ಮೃತ್ಯುರ್ಯಶಸ್ವೀ ಚ ಭವಿಷ್ಯಸಿ||

13018013a ಆಹ ಮಾಂ ಭಗವಾನೇವಂ ಶಿಖಂಡೀ ಶಿವವಿಗ್ರಹಃ|

13018013c ಯದವಾಪ್ತಂ ಚ ಮೇ ಸರ್ವಂ ಪ್ರಸಾದಾತ್ತಸ್ಯ ಧೀಮತಃ||

“ನಿನ್ನಿಂದ ಪಾಪವುಂಟಾಗುವುದಿಲ್ಲ. ಇಂದಿನಿಂದ ನೀನು ಅಜೇಯನೂ ಆಗುತ್ತೀಯೆ. ಮೃತ್ಯುವು ನಿನಗೆ ಏನನ್ನೂ ಮಾಡಲಾರದು. ಮತ್ತು ಯಶಸ್ವಿಯಾಗುತ್ತೀಯೆ!” ಹೀಗೆ ಶಿವವಿಗ್ರಹನಾದ ಜಟಾಧಾರಿಯಾದ ಭಗವಂತನು ನನಗೆ ಹೇಳಿದನು. ನಾನು ಏನೆಲ್ಲ ಪಡೆದುಕೊಂಡಿದ್ದೇನೋ ಎಲ್ಲವೂ ಆ ಧೀಮತನ ಪ್ರಸಾದದಿಂದಲೇ!”

13018014a ಅಸಿತೋ ದೇವಲಶ್ಚೈವ ಪ್ರಾಹ ಪಾಂಡುಸುತಂ ನೃಪಮ್|

13018014c ಶಾಪಾಚ್ಚಕ್ರಸ್ಯ ಕೌಂತೇಯ ಚಿತೋ ಧರ್ಮೋಽನಶನ್ಮಮ|

13018014e ತನ್ಮೇ ಧರ್ಮಂ ಯಶಶ್ಚಾಗ್ರ್ಯಮಾಯುಶ್ಚೈವಾದದದ್ಭವಃ||

ಅಸಿತ ದೇವಲನೂ ಕೂಡ ನೃಪ ಪಾಂಡುಸುತನಿಗೆ ಹೇಳಿದನು: “ಕೌಂತೇಯ! ಶಕ್ರನ ಶಾಪದಿಂದಾಗಿ ನನ್ನ ಧರ್ಮವು ನಷ್ಟವಾಗಿ ಹೋಯಿತು. ಆಗ ಭವನಿಂದ ನನಗೆ ಧರ್ಮವೂ, ಯಶಸ್ಸೂ ಮತ್ತು ಆಯುಷ್ಯವೂ ದೊರಕಿತು.”

13018015a ಋಷಿರ್ಗೃತ್ಸಮದೋ ನಾಮ ಶಕ್ರಸ್ಯ ದಯಿತಃ ಸಖಾ|

13018015c ಪ್ರಾಹಾಜಮೀಢಂ ಭಗವಾನ್ಬೃಹಸ್ಪತಿಸಮದ್ಯುತಿಃ||

ಆಗ ಶಕ್ರನ ಪ್ರಿಯ ಸಖ, ಬೃಹಸ್ಪತಿಯ ಸಮದ್ಯುತಿ, ಗೃತ್ಸಮದನೆಂಬ ಹೆಸರಿನ ಭಗವಾನ್ ಋಷಿಯು ಅಜಮೀಢನಿಗೆ ಹೇಳಿದನು:

13018016a ವಸಿಷ್ಠೋ ನಾಮ ಭಗವಾಂಶ್ಚಾಕ್ಷುಷಸ್ಯ ಮನೋಃ ಸುತಃ|

13018016c ಶತಕ್ರತೋರಚಿಂತ್ಯಸ್ಯ ಸತ್ರೇ ವರ್ಷಸಹಸ್ರಿಕೇ|

13018016e ವರ್ತಮಾನೇಽಬ್ರವೀದ್ವಾಕ್ಯಂ ಸಾಮ್ನಿ ಹ್ಯುಚ್ಚಾರಿತೇ ಮಯಾ||

“ಭಗವಾನ್ ಚಕ್ಷುಷ ಮನುವಿನ ವಸಿಷ್ಠ ಎಂಬ ಹೆಸರಿನ ಮಗನು ಅಚಿಂತ್ಯ ಶತಕ್ರತುವಿನ ಸಹಸ್ರವಾರ್ಷಿಕ ಸತ್ರದಲ್ಲಿ ನಾನು ಸಾಮವನ್ನು ಹಾಡುತ್ತಿದ್ದಾಗ ನನಗೆ ಈ ರೀತಿ ಹೇಳಿದ್ದನು:

13018017a ರಥಂತರಂ ದ್ವಿಜಶ್ರೇಷ್ಠ ನ ಸಮ್ಯಗಿತಿ ವರ್ತತೇ|

13018017c ಸಮೀಕ್ಷಸ್ವ ಪುನರ್ಬುದ್ಧ್ಯಾ ಹರ್ಷಂ ತ್ಯಕ್ತ್ವಾ ದ್ವಿಜೋತ್ತಮ|

13018017e ಅಯಜ್ಞವಾಹಿನಂ ಪಾಪಮಕಾರ್ಷೀಸ್ತ್ವಂ ಸುದುರ್ಮತೇ||

“ದ್ವಿಜಶ್ರೇಷ್ಠ! ದ್ವಿಜೋತ್ತಮ! ನೀನು ಹಾಡುತ್ತಿರುವ ರಥಂತರ ಸಾಮವು ಸರಿಯಾಗಿಲ್ಲ. ಹರ್ಷವನ್ನು ತ್ಯಜಿಸಿ ಪುನಃ ಬುದ್ಧಿಪೂರ್ವಕವಾಗಿ ಯೋಚಿಸು! ಸುದುರ್ಮತೇ! ನೀನು ಈ ಯಜ್ಞವನ್ನೇ ನಿಷ್ಫಲವನ್ನಾಗಿಸುವ ಪಾಪವನ್ನೆಸಗಿರುವೆ!”

13018018a ಏವಮುಕ್ತ್ವಾ ಮಹಾಕ್ರೋಧಾತ್ಪ್ರಾಹ ರುಷ್ಟಃ ಪುನರ್ವಚಃ|

13018018c ಪ್ರಜ್ಞಯಾ ರಹಿತೋ ದುಃಖೀ ನಿತ್ಯಂ ಭೀತೋ ವನೇಚರಃ|

13018018e ದಶ ವರ್ಷಸಹಸ್ರಾಣಿ ದಶಾಷ್ಟೌ ಚ ಶತಾನಿ ಚ||

13018019a ನಷ್ಟಪಾನೀಯಯವಸೇ ಮೃಗೈರನ್ಯೈಶ್ಚ ವರ್ಜಿತೇ|

13018019c ಅಯಜ್ಞೀಯದ್ರುಮೇ ದೇಶೇ ರುರುಸಿಂಹನಿಷೇವಿತೇ|

13018019e ಭವಿತಾ ತ್ವಂ ಮೃಗಃ ಕ್ರೂರೋ ಮಹಾದುಃಖಸಮನ್ವಿತಃ||

ಹೀಗೆ ಹೇಳಿ ಮಹಾಕ್ರೋಧದಿಂದ ಪುನಃ ಈ ಕಠೋರ ಮಾತುಗಳನ್ನಾಡಿದನು: “ನೀನು ಹನ್ನೊಂದು ಸಾವಿರದ ಎಂಟು ನೂರು ವರ್ಷಗಳ ಪರ್ಯಂತ ನೀರು-ಗಾಳಿಗಳಿಲ್ಲದ, ಅನ್ನಪಶುಗಳಿಂದ ಪರಿತ್ಯಕ್ತವಾದ, ರುರು ಮತ್ತು ಸಿಂಹಗಳಿಂದ ಮಾತ್ರವೇ ಸಂಸೇವಿತವಾದ, ಯಜ್ಞಕ್ಕೆ ಪ್ರಶಸ್ತವಲ್ಲದ, ವೃಕ್ಷಗಳಿಂದಲೇ ತುಂಬಿಹೋಗಿರುವ, ವಿಶಾಲ ಅರಣ್ಯದಲ್ಲಿ ಬುದ್ಧಿಶೂನ್ಯನಾಗಿ ದುಃಖಿಯಾಗಿ ಸರ್ವದಾ ಭಯಭೀತನಾಗಿ ವನಚರನಾಗಿ ಮಹಾಕಷ್ಟದಲ್ಲಿ ಮುಳ್ಗಿ ಕ್ರೂರಸ್ವಭಾವದ ಪಶುವಾಗಿ ಹುಟ್ಟುವೆ!”

13018020a ತಸ್ಯ ವಾಕ್ಯಸ್ಯ ನಿಧನೇ ಪಾರ್ಥ ಜಾತೋ ಹ್ಯಹಂ ಮೃಗಃ|

13018020c ತತೋ ಮಾಂ ಶರಣಂ ಪ್ರಾಪ್ತಂ ಪ್ರಾಹ ಯೋಗೀ ಮಹೇಶ್ವರಃ||

ಪಾರ್ಥ! ಅವನ ಮಾತು ಮುಗಿಯುತ್ತಿದ್ದಂತೆಯೇ ನಾನು ಅಲ್ಲಿಯೇ ಆ ಮೃಗವಾಗಿ ಜನಿಸಿದೆನು. ಆಗ ನಾನು ಶರಣು ಹೋದ ಯೋಗೀ ಮಹೇಶ್ವರನು ನನಗೆ ಹೇಳಿದನು:

13018021a ಅಜರಶ್ಚಾಮರಶ್ಚೈವ ಭವಿತಾ ದುಃಖವರ್ಜಿತಃ|

13018021c ಸಾಮ್ಯಂ ಸಮಸ್ತು ತೇ ಸೌಖ್ಯಂ ಯುವಯೋರ್ವರ್ಧತಾಂ ಕ್ರತುಃ||

“ನೀನು ಮುಪ್ಪು-ಸಾವುಗಳಿಲ್ಲದವನೂ, ದುಃಖವರ್ಜಿತನೂ ಆಗುವೆ. ನಿನಗೆ ನನ್ನ ಸಾಮ್ಯತೆಯೂ ಸೌಖ್ಯವೂ ದೊರೆಯುತ್ತದೆ. ನೀವು ಮಾಡುತ್ತಿರುವ ಯಜ್ಞವು ವೃದ್ಧಿಯಾಗಲಿ!”

13018022a ಅನುಗ್ರಹಾನೇವಮೇಷ ಕರೋತಿ ಭಗವಾನ್ವಿಭುಃ|

13018022c ಪರಂ ಧಾತಾ ವಿಧಾತಾ ಚ ಸುಖದುಃಖೇ ಚ ಸರ್ವದಾ||

ಭಗವಾನ್ ವಿಭುವು ಈ ರೀತಿಯ ಅನುಗ್ರಹವನ್ನೇ ಮಾಡುತ್ತಾನೆ. ಅವನು ಸರ್ವದಾ ಸುಖ-ದುಃಖಗಳಲ್ಲಿ ಪರಮ ಧಾತಾ ಮತ್ತು ವಿಧಾತನಾಗಿರುತ್ತಾನೆ.

13018023a ಅಚಿಂತ್ಯ ಏಷ ಭಗವಾನ್ಕರ್ಮಣಾ ಮನಸಾ ಗಿರಾ|

13018023c ನ ಮೇ ತಾತ ಯುಧಿಶ್ರೇಷ್ಠ ವಿದ್ಯಯಾ ಪಂಡಿತಃ ಸಮಃ||

ಯುಧಿಶ್ರೇಷ್ಠ! ಅಚಿಂತ್ಯನಾಗಿರುವ ಈ ಭಗವಾನನು ಕರ್ಮ-ಮನಸ್ಸು-ಮತುಗಳಿಂದ ಆರಾಧಿಸಲು ಯೋಗ್ಯನಾಗಿದ್ದಾನೆ. ಅವನಿಂದಲೇ ನಾನು ನನ್ನ ಸಮನಾದ ಪಂಡಿತರಿಲ್ಲದಂತಾಗಿದ್ದೇನೆ!”

13018024 ಜೈಗೀಷವ್ಯ ಉವಾಚ|

13018024a ಮಮಾಷ್ಟಗುಣಮೈಶ್ವರ್ಯಂ ದತ್ತಂ ಭಗವತಾ ಪುರಾ|

13018024c ಯತ್ನೇನಾಲ್ಪೇನ ಬಲಿನಾ ವಾರಾಣಸ್ಯಾಂ ಯುಧಿಷ್ಠಿರ||

ಜೈಗೀಷವ್ಯನು ಹೇಳಿದನು: “ಯುಧಿಷ್ಠಿರ! ಹಿಂದೆ ವಾರಾಣಸಿಯಲ್ಲಿ ಭಗವಂತನು ಅಲ್ಪ ಯತ್ನ-ಬಲಿಗಳಿಂದ ತುಷ್ಟನಾಗಿ ನನಗೆ ಅಷ್ಟಗುಣೈಶ್ವರ್ಯಗಳನ್ನು ದಯಪಾಲಿಸಿದನು!”

13018025 ಗಾರ್ಗ್ಯ ಉವಾಚ|

13018025a ಚತುಃಷಷ್ಟ್ಯಂಗಮದದಾತ್ಕಾಲಜ್ಞಾನಂ ಮಮಾದ್ಭುತಮ್|

13018025c ಸರಸ್ವತ್ಯಾಸ್ತಟೇ ತುಷ್ಟೋ ಮನೋಯಜ್ಞೇನ ಪಾಂಡವ||

ಗಾರ್ಗ್ಯನು ಹೇಳಿದನು: “ಪಾಂಡವ! ಸರಸ್ವತೀ ತಟದಲ್ಲಿ ನನ್ನ ಮನೋಯಜ್ಞದಿಂದ ತುಷ್ಟನಾದ ಶಿವನು ನನಗೆ ಅರವತ್ನಾಲ್ಕು ಕಲೆಗಳ ಅದ್ಭುತ ಜ್ಞಾನವನ್ನಿತ್ತನು!

13018026a ತುಲ್ಯಂ ಮಮ ಸಹಸ್ರಂ ತು ಸುತಾನಾಂ ಬ್ರಹ್ಮವಾದಿನಾಮ್|

13018026c ಆಯುಶ್ಚೈವ ಸಪುತ್ರಸ್ಯ ಸಂವತ್ಸರಶತಾಯುತಮ್||

ನನ್ನ ಸಮಾನರಾದ ಒಂದು ಸಾವಿರ ಬ್ರಹ್ಮವಾದಿ ಪುತ್ರರನ್ನೂ, ಆ ಪುತ್ರರೊಂದಿಗೆ ನನಗೆ ಒಂದು ಲಕ್ಷ ವರ್ಷಗಳ ಆಯುವನ್ನೂ ಅವನು ದಯಪಾಲಿಸಿದನು.”

13018027 ಪರಾಶರ ಉವಾಚ|

13018027a ಪ್ರಸಾದ್ಯಾಹಂ ಪುರಾ ಶರ್ವಂ ಮನಸಾಚಿಂತಯಂ ನೃಪ|

13018027c ಮಹಾತಪಾ ಮಹಾತೇಜಾ ಮಹಾಯೋಗೀ ಮಹಾಯಶಾಃ|

13018027e ವೇದವ್ಯಾಸಃ ಶ್ರಿಯಾವಾಸೋ ಬ್ರಹ್ಮಣ್ಯಃ ಕರುಣಾತ್ಮಕಃ||

13018028a ಅಪಿ ನಾಮೇಪ್ಸಿತಃ ಪುತ್ರೋ ಮಮ ಸ್ಯಾದ್ವೈ ಮಹೇಶ್ವರಾತ್|

13018028c ಇತಿ ಮತ್ವಾ ಹೃದಿ ಮತಂ ಪ್ರಾಹ ಮಾಂ ಸುರಸತ್ತಮಃ||

ಪರಾಶರನು ಹೇಳಿದನು: “ನೃಪ! ಹಿಂದೆ ನಾನು ಶರ್ವನನ್ನು ಪ್ರಸನ್ನಗೊಳಿಸಲು ಮನಸಾ ಅವನನ್ನು ಧ್ಯಾನಿಸಿದೆನು. ಮಹಾತಪಸ್ವಿಯೂ, ಮಹಾತೇಜಸ್ವಿಯೂ, ಮಹಾಯೋಗಿಯೂ, ಮಹಾಯಶಸ್ವಿಯೂ, ವೇದಗಳನ್ನು ವಿಂಗಡಿಸುವವನೂ, ಶ್ರಿಸಂಪನ್ನನೂ, ಬ್ರಹ್ಮಣ್ಯನೂ, ಕರುಣಾತ್ಮಕನೂ ಆದ ಪುತ್ರನು ನನಗಾಗಲಿ ಎಂಬ ಉದ್ದೇಶದಿಂದಲೇ ನಾನು ಮಹೇಶ್ವರನನ್ನು ಧ್ಯಾನಿಸಿದ್ದೆನು. ನನ್ನ ಹೃದಯದಲ್ಲಿರುವ ಮತವನ್ನು ತಿಳಿದ ಆ ಸುರಸತ್ತಮನು ನನಗೆ ಹೀಗೆ ಹೇಳಿದನು:

13018029a ಮಯಿ ಸಂಭವತಸ್ತಸ್ಯ ಫಲಾತ್ಕೃಷ್ಣೋ ಭವಿಷ್ಯತಿ|

13018029c ಸಾವರ್ಣಸ್ಯ ಮನೋಃ ಸರ್ಗೇ ಸಪ್ತರ್ಷಿಶ್ಚ ಭವಿಷ್ಯತಿ||

13018030a ವೇದಾನಾಂ ಚ ಸ ವೈ ವ್ಯಸ್ತಾ ಕುರುವಂಶಕರಸ್ತಥಾ|

13018030c ಇತಿಹಾಸಸ್ಯ ಕರ್ತಾ ಚ ಪುತ್ರಸ್ತೇ ಜಗತೋ ಹಿತಃ||

13018031a ಭವಿಷ್ಯತಿ ಮಹೇಂದ್ರಸ್ಯ ದಯಿತಃ ಸ ಮಹಾಮುನಿಃ|

13018031c ಅಜರಶ್ಚಾಮರಶ್ಚೈವ ಪರಾಶರ ಸುತಸ್ತವ||

“ಪರಾಶರ! ನನ್ನ ವಿಷಯದಲ್ಲಿ ನೀನು ಇಟ್ಟುಕೊಂಡಿರುವ ಪೂಜ್ಯ ಭಾವನೆಯಿಂದಾಗಿ ನಿನಗೆ ಕೃಷ್ಣ ಎಂಬ ಮಗನು ಹುಟ್ಟುತ್ತಾನೆ. ಸಾವರ್ಣಿಕ ಮನ್ವಂತರದ ಸೃಷ್ಟಿಯಲ್ಲಿ ನಿನ್ನ ಮಗನು ಸಪ್ತರ್ಷಿಗಳಲ್ಲೊಬ್ಬನಾಗುತ್ತಾನೆ. ವೈವಸ್ವತ ಮನ್ವಂತರದಲ್ಲಿ ಅವನು ವೇದಗಳ ವಿಭಾಗಕಾರನೂ, ಕುರುವಂಶಕರನೂ, ಇತಿಹಾಸ ಕಾರನೂ, ಜಗತ್ತಿನ ಹಿತೈಷಿಯೂ, ಇಂದ್ರನಿಗೆ ಪರಮ ಪ್ರಿಯನೂ ಆಗುತ್ತಾನೆ. ನಿನ್ನ ಮಗ ಆ ಮಹಾಮುನಿಯು ಅಜರನೂ ಅಮರನೂ ಆಗುತ್ತಾನೆ!”

13018032a ಏವಮುಕ್ತ್ವಾ ಸ ಭಗವಾಂಸ್ತತ್ರೈವಾಂತರಧೀಯತ|

13018032c ಯುಧಿಷ್ಠಿರ ಮಹಾಯೋಗೀ ವೀರ್ಯವಾನಕ್ಷಯೋಽವ್ಯಯಃ||

ಯುಧಿಷ್ಠಿರ! ಹೀಗೆ ಹೇಳಿ ಆ ಭಗವಾನ್ ಮಹಾಯೋಗೀ ವೀರ್ಯವಾನ್ ಅಕ್ಷಯ ಅವ್ಯಯನು ಅಲ್ಲಿಯೇ ಅಂತರ್ಧಾನನಾದನು.”

13018033 ಮಾಂಡವ್ಯ ಉವಾಚ|

13018033a ಅಚೌರಶ್ಚೌರಶಂಕಾಯಾಂ ಶೂಲೇ ಭಿನ್ನೋ ಹ್ಯಹಂ ಯದಾ|

13018033c ತತ್ರಸ್ಥೇನ ಸ್ತುತೋ ದೇವಃ ಪ್ರಾಹ ಮಾಂ ವೈ ಮಹೇಶ್ವರಃ||

ಮಾಂಡವ್ಯನು ಹೇಳಿದನು: “ಕಳ್ಳನಾಗಿರದಿದ್ದರೂ ಕಳ್ಳನೆಂಬ ಶಂಕೆಯಿಂದ ನನ್ನನ್ನು ಶೂಲಕ್ಕೇರಿಸಿದ್ದಾಗ ಅಲ್ಲಿಯೇ ನನ್ನಿಂದ ಸ್ತುತಿಸಲ್ಪಟ್ಟ ದೇವ ಮಹೇಶ್ವರನು ನನಗೆ ಹೀಗೆ ಹೇಳಿದ್ದನು:

13018034a ಮೋಕ್ಷಂ ಪ್ರಾಪ್ಸ್ಯಸಿ ಶೂಲಾಚ್ಚ ಜೀವಿಷ್ಯಸಿ ಸಮಾರ್ಬುದಮ್|

13018034c ರುಜಾ ಶೂಲಕೃತಾ ಚೈವ ನ ತೇ ವಿಪ್ರ ಭವಿಷ್ಯತಿ||

13018034e ಆಧಿಭಿರ್ವ್ಯಾಧಿಭಿಶ್ಚೈವ ವರ್ಜಿತಸ್ತ್ವಂ ಭವಿಷ್ಯಸಿ||

“ಶೂಲದಿಂದ ಮೋಕ್ಷವನ್ನು ಹೊಂದುವೆ ಮತ್ತು ಹತ್ತು ಕೋಟಿ ವರ್ಷಗಳು ಜೀವಿಸುವೆ. ವಿಪ್ರ! ಶೂಲದಿಂದುಂಟಾದ ಈ ಗಾಯವೂ ಇರುವುದಿಲ್ಲ. ಮಾನಸಿಕ ಆಧಿಗಳಿಂದಲೂ ಶಾರೀರಿಕ ವ್ಯಾಧಿಗಳಿಂದಲೂ ನೀನು ವರ್ಜಿತನಾಗುವೆ!

13018035a ಪಾದಾಚ್ಚತುರ್ಥಾತ್ಸಂಭೂತ ಆತ್ಮಾ ಯಸ್ಮಾನ್ಮುನೇ ತವ|

13018035c ತ್ವಂ ಭವಿಷ್ಯಸ್ಯನುಪಮೋ ಜನ್ಮ ವೈ ಸಫಲಂ ಕುರು||

ನೀನು ಯಾರ ಆತ್ಮದ ನಾಲ್ಕನೇ ಒಂದು ಭಾಗದಿಂದ ಜನಿಸಿದ್ದೀಯೋ ಭವಿಷ್ಯದಲ್ಲಿ ಅವನ ಅನುಪಮನಾಗುತ್ತೀಯೆ. ನಿನ್ನ ಜನ್ಮವನ್ನು ಸಫಲಗೊಳಿಸಿಕೋ!

13018036a ತೀರ್ಥಾಭಿಷೇಕಂ ಸಫಲಂ ತ್ವಮವಿಘ್ನೇನ ಚಾಪ್ಸ್ಯಸಿ|

13018036c ಸ್ವರ್ಗಂ ಚೈವಾಕ್ಷಯಂ ವಿಪ್ರ ವಿದಧಾಮಿ ತವೋರ್ಜಿತಮ್||

ಯಾವ ವಿಘ್ನಗಳೂ ಇಲ್ಲದೇ ತೀರ್ಥಸ್ನಾನದ ಫಲವನ್ನು ಪಡೆಯುತ್ತೀಯೆ. ವಿಪ್ರ! ನೀನು ಗಳಿಸಿರುವ ಅಕ್ಷಯ ಸ್ವರ್ಗವನ್ನು ನಿನಗೆ ನೀಡುತ್ತೇನೆ!”

13018037a ಏವಮುಕ್ತ್ವಾ ತು ಭಗವಾನ್ವರೇಣ್ಯೋ ವೃಷವಾಹನಃ|

13018037c ಮಹೇಶ್ವರೋ ಮಹಾರಾಜ ಕೃತ್ತಿವಾಸಾ ಮಹಾದ್ಯುತಿಃ|

13018037e ಸಗಣೋ ದೈವತಶ್ರೇಷ್ಠಸ್ತತ್ರೈವಾಂತರಧೀಯತ||

ಮಹಾರಾಜ! ಹೀಗೆ ಹೇಳಿ ಆ ಭಗವಾನ್, ವರೇಣ್ಯ, ವೃಷವಾಹನ, ಮಹೇಶ್ವರ, ಕೃತ್ತಿವಾಸಾ, ಮಹಾದ್ಯುತಿ, ದೈವತಶ್ರೇಷ್ಠನು ಗಣಗಳೊಂದಿಗೆ ಅಲ್ಲಿಯೇ ಅಂತರ್ಧಾನನಾದನು.”

13018038 ಗಾಲವ ಉವಾಚ|

13018038a ವಿಶ್ವಾಮಿತ್ರಾಭ್ಯನುಜ್ಞಾತೋ ಹ್ಯಹಂ ಪಿತರಮಾಗತಃ|

13018038c ಅಬ್ರವೀನ್ಮಾಂ ತತೋ ಮಾತಾ ದುಃಖಿತಾ ರುದತೀ ಭೃಶಮ್||

ಗಾಲವನು ಹೇಳಿದನು: “ವಿಶ್ವಾಮಿತ್ರನಿಂದ ಅನುಜ್ಞೆಯನ್ನು ಪಡೆದು ನಾನು ತಂದೆಯನ್ನು ನೋಡಲು ಬಂದಾಗ ನನ್ನ ಮಾತೆಯು ದುಃಖಿತಳಾಗಿ ಬಹಳವಾಗಿ ರೋದಿಸುತ್ತಾ ನನಗೆ ಹೇಳಿದಳು:

13018039a ಕೌಶಿಕೇನಾಭ್ಯನುಜ್ಞಾತಂ ಪುತ್ರಂ ವೇದವಿಭೂಷಿತಮ್|

13018039c ನ ತಾತ ತರುಣಂ ದಾಂತಂ ಪಿತಾ ತ್ವಾಂ ಪಶ್ಯತೇಽನಘ||

“ಅನಘ! ಮಗೂ! ಕೌಶಿಕನಿಂದ ಅನುಜ್ಞೆಯನ್ನು ಪಡೆದು ಬಂಡ ವೇದವಿಭೂಷಿತ ತರುಣ ಪುತ್ರ ನಿನ್ನನ್ನು ನಿನ್ನ ತಂದೆಯು ನೋಡಲಾರದಂತಾಯಿತಲ್ಲ!”

13018040a ಶ್ರುತ್ವಾ ಜನನ್ಯಾ ವಚನಂ ನಿರಾಶೋ ಗುರುದರ್ಶನೇ|

13018040c ನಿಯತಾತ್ಮಾ ಮಹಾದೇವಮಪಶ್ಯಂ ಸೋಽಬ್ರವೀಚ್ಚ ಮಾಮ್||

ಜನನಿಯ ಮಾತನ್ನು ಕೇಳಿ ತಂದೆಯ ದರ್ಶನವಿಲ್ಲದೇ ನಿರಾಶನಾದ ನಾನು ನಿಯತಾತ್ಮನಾಗಿ ಮಹಾದೇವನ ಶರಣುಹೊಕ್ಕೆನು. ಅವನು ನನಗೆ ಕಾಣಿಸಿಕೊಂಡು ಹೀಗೆಂದನು:

13018041a ಪಿತಾ ಮಾತಾ ಚ ತೇ ತ್ವಂ ಚ ಪುತ್ರ ಮೃತ್ಯುವಿವರ್ಜಿತಾಃ|

13018041c ಭವಿಷ್ಯಥ ವಿಶ ಕ್ಷಿಪ್ರಂ ದ್ರಷ್ಟಾಸಿ ಪಿತರಂ ಕ್ಷಯೇ||

“ಪುತ್ರ! ನಿನ್ನ ತಂದೆ, ತಾಯಿ ಮತ್ತು ನೀನೂ ಕೂಡ ಮೃತ್ಯುವಿವರ್ಜಿತರಾಗುವಿರಿ! ಕೂಡಲೇ ನಿನ್ನ ಮನೆಗೆ ಹೋಗು. ಅಲ್ಲಿ ನಿನ್ನ ತಂದೆಯನ್ನು ಕಾಣುವೆ!”

13018042a ಅನುಜ್ಞಾತೋ ಭಗವತಾ ಗೃಹಂ ಗತ್ವಾ ಯುಧಿಷ್ಠಿರ|

13018042c ಅಪಶ್ಯಂ ಪಿತರಂ ತಾತ ಇಷ್ಟಿಂ ಕೃತ್ವಾ ವಿನಿಃಸೃತಮ್||

ಯುಧಿಷ್ಠಿರ! ಅಯ್ಯಾ! ಭಗವಂತನಿಂದ ಅನುಜ್ಞೆಯನ್ನು ಪಡೆದು ಮನೆಗೆ ಹೋಗಿ, ಅದಾಗಲೇ ಇಷ್ಟಿಯನ್ನು ಮುಗಿಸಿ ಬರುತ್ತಿದ್ದ ನನ್ನ ತಂದೆಯನ್ನು ಕಂಡೆನು!

13018043a ಉಪಸ್ಪೃಶ್ಯ ಗೃಹೀತ್ವೇಧ್ಮಂ ಕುಶಾಂಶ್ಚ ಶರಣಾದ್ಗುರೂನ್|

13018043c ತಾನ್ವಿಸೃಜ್ಯ ಚ ಮಾಂ ಪ್ರಾಹ ಪಿತಾ ಸಾಸ್ರಾವಿಲೇಕ್ಷಣಃ||

13018044a ಪ್ರಣಮಂತಂ ಪರಿಷ್ವಜ್ಯ ಮೂರ್ಧ್ನಿ ಚಾಘ್ರಾಯ ಪಾಂಡವ|

13018044c ದಿಷ್ಟ್ಯಾ ದೃಷ್ಟೋಽಸಿ ಮೇ ಪುತ್ರ ಕೃತವಿದ್ಯ ಇಹಾಗತಃ||

ಪಾಂಡವ! ಕೈಗಳಲ್ಲಿ ಸಮಿತ್ತನ್ನೂ, ದರ್ಭೆಗಳನ್ನೂ, ವೃಕ್ಷಗಳಿಂದ ತಾನೇ ತಾನಾಗಿ ಗಳಿತಿದ್ದ ಫಲಗಳನ್ನೂ ಕೆಳಗಿಟ್ಟು ನಮಸ್ಕರಿಸುತ್ತಿದ್ದ ನನ್ನ ನೆತ್ತಿಯನ್ನು ಆಘ್ರಾಣಿಸಿ “ಪುತ್ರ! ಸೌಭಾಗ್ಯವಶಾತ್ ಪೂರ್ಣವಿದ್ಯಾವಂತನಾಗಿ ಹಿಂದಿರುಗಿರುವುದನ್ನು ನಾನು ನೋಡುತ್ತಿದ್ದೇನೆ!” ಎಂದನು.””

13018045 ವೈಶಂಪಾಯನ ಉವಾಚ|

13018045a ಏತಾನ್ಯತ್ಯದ್ಭುತಾನ್ಯೇವ ಕರ್ಮಾಣ್ಯಥ ಮಹಾತ್ಮನಃ|

13018045c ಪ್ರೋಕ್ತಾನಿ ಮುನಿಭಿಃ ಶ್ರುತ್ವಾ ವಿಸ್ಮಯಾಮಾಸ ಪಾಂಡವಃ||

ವೈಶಂಪಾಯನನು ಹೇಳಿದನು: “ಹೀಗೆ ಮಹಾತ್ಮ ಮುನಿಗಳು ಹೇಳಿದ ಅತ್ಯದ್ಭುತ ಕರ್ಮಗಳನ್ನು ಕೇಳಿ ಪಾಂಡವನು ವಿಸ್ಮಿತನಾದನು.

13018046a ತತಃ ಕೃಷ್ಣೋಽಬ್ರವೀದ್ವಾಕ್ಯಂ ಪುನರ್ಮತಿಮತಾಂ ವರಃ|

13018046c ಯುಧಿಷ್ಠಿರಂ ಧರ್ಮನಿತ್ಯಂ ಪುರುಹೂತಮಿವೇಶ್ವರಃ||

ಆಗ ಮತಿವಂತರಲ್ಲಿ ಶ್ರೇಷ್ಠ ಕೃಷ್ಣನು ಧರ್ಮನಿತ್ಯ ಯುಧಿಷ್ಠಿರನಿಗೆ ಈಶ್ವರನು ಇಂದ್ರನಿಗೆ ಹೇಳುವಂತೆ ಈ ಮಾತುಗಳನ್ನಾಡಿದನು:

13018047a ಆದಿತ್ಯಚಂದ್ರಾವನಿಲಾನಲೌ ಚ

ದ್ಯೌರ್ಭೂಮಿರಾಪೋ ವಸವೋಽಥ ವಿಶ್ವೇ|

13018047c ಧಾತಾರ್ಯಮಾ ಶುಕ್ರಬೃಹಸ್ಪತೀ ಚ

ರುದ್ರಾಃ ಸಸಾಧ್ಯಾ ವರುಣೋ ವಿತ್ತಗೋಪಃ||

13018048a ಬ್ರಹ್ಮಾ ಶಕ್ರೋ ಮಾರುತೋ ಬ್ರಹ್ಮ ಸತ್ಯ

ವೇದಾ ಯಜ್ಞಾ ದಕ್ಷಿಣಾ ವೇದವಾಹಾಃ|

13018048c ಸೋಮೋ ಯಷ್ಟಾ ಯಚ್ಚ ಹವ್ಯಂ ಹವಿಶ್ಚ

ರಕ್ಷಾ ದೀಕ್ಷಾ ನಿಯಮಾ ಯೇ ಚ ಕೇ ಚಿತ್||

13018049a ಸ್ವಾಹಾ ವಷಡ್ಬ್ರಾಹ್ಮಣಾಃ ಸೌರಭೇಯಾ

ಧರ್ಮಂ ಚಕ್ರಂ ಕಾಲಚಕ್ರಂ ಚರಂ ಚ|

13018049c ಯಶೋ ದಮೋ ಬುದ್ಧಿಮತೀ ಸ್ಥಿತಿಶ್ಚ

ಶುಭಾಶುಭಂ ಮುನಯಶ್ಚೈವ ಸಪ್ತ||

13018050a ಅಗ್ರ್ಯಾ ಬುದ್ಧಿರ್ಮನಸಾ ದರ್ಶನೇ ಚ

ಸ್ಪರ್ಶೇ ಸಿದ್ಧಿಃ ಕರ್ಮಣಾಂ ಯಾ ಚ ಸಿದ್ಧಿಃ|

13018050c ಗಣಾ ದೇವಾನಾಮೂಷ್ಮಪಾಃ ಸೋಮಪಾಶ್ಚ

ಲೇಖಾಃ ಸುಯಾಮಾಸ್ತುಷಿತಾ ಬ್ರಹ್ಮಕಾಯಾಃ||

13018051a ಆಭಾಸ್ವರಾ ಗಂಧಪಾ ದೃಷ್ಟಿಪಾಶ್ಚ

ವಾಚಾ ವಿರುದ್ಧಾಶ್ಚ ಮನೋವಿರುದ್ಧಾಃ|

13018051c ಶುದ್ಧಾಶ್ಚ ನಿರ್ವಾಣರತಾಶ್ಚ ದೇವಾಃ

ಸ್ಪರ್ಶಾಶನಾ ದರ್ಶಪಾ ಆಜ್ಯಪಾಶ್ಚ||

13018052a ಚಿಂತಾಗತಾ ಯೇ ಚ ದೇವೇಷು ಮುಖ್ಯಾ

ಯೇ ಚಾಪ್ಯನ್ಯೇ ದೇವತಾಶ್ಚಾಜಮೀಢ|

13018052c ಸುಪರ್ಣಗಂಧರ್ವಪಿಶಾಚದಾನವಾ

ಯಕ್ಷಾಸ್ತಥಾ ಪನ್ನಗಾಶ್ಚಾರಣಾಶ್ಚ||

13018053a ಸೂಕ್ಷ್ಮಂ ಸ್ಥೂಲಂ ಮೃದು ಯಚ್ಚಾಪ್ಯಸೂಕ್ಷ್ಮಂ

ಸುಖಂ ದುಃಖಂ ಸುಖದುಃಖಾಂತರಂ ಚ|

13018053c ಸಾಂಖ್ಯಂ ಯೋಗಂ ಯತ್ಪರಾಣಾಂ ಪರಂ ಚ

ಶರ್ವಾಜ್ಜಾತಂ ವಿದ್ಧಿ ಯತ್ಕೀರ್ತಿತಂ ಮೇ||

“ಆಜಮೀಢ! ಸೂರ್ಯ, ಚಂದ್ರ, ವಾಯು, ಅಗ್ನಿ, ಆಕಾಶ, ಭೂಮಿ, ಜಲ, ವಸುಗಳು, ವಿಶ್ವೇದೇವರು, ಧಾತಾ, ಆರ್ಯಮಾ, ಶುಕ್ರ, ಬೃಹಸ್ಪತೀ, ರುದ್ರರು, ಸಾಧ್ಯರು, ವರುಣ, ಕುಬೇರ, ಬ್ರಹ್ಮ, ಶಕ್ರ, ಮಾರುತ, ಓಂಕಾರ, ವೇದಗಳು, ಯಜ್ಞ, ದಕ್ಷಿಣೆ, ವೇದಪಾಠಿಗಳು, ಸೋಮ, ಯಜಮಾನ, ಹವಿಸ್ಸು, ರಕ್ಷ, ದೀಕ್ಷ, ಏನೆಲ್ಲ ನಿಯಮಗಳಿವೆಯೋ ಅವು, ಸ್ವಾಹಾ, ವಷಟ್, ಬ್ರಾಹ್ಮಣರು, ಗೋವುಗಳು, ತಿರುಗುತ್ತಿರುವ ಧರ್ಮಚಕ್ರ-ಕಾಲಚಕ್ರಗಳು, ಯಶಸ್ಸು, ದಮ, ಬುದ್ಧಿವಂತರ ಸ್ಥಿತಿ, ಶುಭಾಶುಭಗಳು, ಸಪ್ತರ್ಷಿಗಳು, ಆಧ್ಯಾತ್ಮದರ್ಶನದಲ್ಲಿ ತೊಡಗುವ, ಮನಸ್ಸಿನ ಮೊದಲಾದ ಬುದ್ಧಿ, ಸ್ಪರ್ಶಸಿದ್ಧಿ, ಕರ್ಮಗಳ ಸಿದ್ಧಿ, ದೇವಗಣಗಳು, ಊಷ್ಮಪರು, ಸೋಮಪರು, ಲೇಖರು, ಸುಯಾಮರು, ತುಷಿತರು, ಬ್ರಹ್ಮಕಾಯರು, ದೀಪ್ತಿಮಂತ ಗಂಧಪರು, ದೃಷ್ಟಿಪರು, ವಾಗ್ವಿರುದ್ಧ-ಮನೋವಿರುದ್ಧ ಭಾವಗಳು, ನಿರ್ವಾಣರತರಾದ ಶುದ್ಧ ದೇವತೆಗಳು, ಸ್ಪರ್ಶಮಾತ್ರದಿಂದಲೇ ಭೋಜನಮಾಡುವವರು, ದರ್ಶನ ಮಾತ್ರದಿಂದಲೇ ಪಾನಮಾಡುವವರು, ತುಪ್ಪವನ್ನು ಕುಡಿಯುವವರು, ಸಂಕಲ್ಪಮಾತ್ರದಿಂದಲೇ ಅಭೀಷ್ಟ ವಸ್ತುಗಳನ್ನು ಪಡೆದುಕೊಳ್ಳುವವರು, ದೇವತೆಗಳ ಮುಖ್ಯರು, ಇತರ ದೇವತೆಗಳು, ಸುಪರ್ಣರು, ಗಂಧರ್ವರು, ಪಿಶಾಚರು, ದಾನವರು, ಯಕ್ಷರು, ಚಾರಣರು, ನಾಗಗಳು, ಸ್ಥೂಲ-ಸೂಕ್ಷ್ಮ-ಕೋಮಲ-ಅಸೂಕ್ಷ್ಮ ಇಹಲೋಕದ ಸುಖ-ದುಃಖಗಳು, ಪರಲೋಕದ ಸುಖ-ದುಃಖಗಳು, ಸಾಂಖ್ಯ, ಯೋಗ, ಪುರುಷಾರ್ಥಗಳಲ್ಲಿ ಶ್ರೇಷ್ಠ ಮೋಕ್ಷರೂಪ ಪರಮಪುರುಷಾರ್ಥ – ಇವೆಲ್ಲವೂ ಮಹಾದೇವನಿಂದಲೇ ಹುಟ್ಟಿದವೆಂದು ತಿಳಿ!  

13018054a ತತ್ಸಂಭೂತಾ ಭೂತಕೃತೋ ವರೇಣ್ಯಾಃ

ಸರ್ವೇ ದೇವಾ ಭುವನಸ್ಯಾಸ್ಯ ಗೋಪಾಃ|

13018054c ಆವಿಶ್ಯೇಮಾಂ ಧರಣೀಂ ಯೇಽಭ್ಯರಕ್ಷನ್

ಪುರಾತನೀಂ ತಸ್ಯ ದೇವಸ್ಯ ಸೃಷ್ಟಿಮ್||

ಈ ಧರಣಿಯನ್ನು ಪ್ರವೇಶಿಸಿ ಮಹಾದೇವನ ಪುರಾತನ ಸೃಷ್ಟಿಯನ್ನು ರಕ್ಷಿಸುತ್ತಿರುವ, ಈ ಭುವನವನ್ನು ರಕ್ಷಿಸುವ ಭೂತಗಳನ್ನೂ ಸೃಷ್ಟಿಸುವ ಶ್ರೇಷ್ಠ ದೇವತೆಗಳೆಲ್ಲರೂ ಆ ದೇವನಿಂದಲೇ ಹುಟ್ಟಿದವರು.

13018055a ವಿಚಿನ್ವಂತಂ ಮನಸಾ ತೋಷ್ಟುವೀಮಿ

ಕಿಂ ಚಿತ್ತತ್ತ್ವಂ ಪ್ರಾಣಹೇತೋರ್ನತೋಽಸ್ಮಿ|

13018055c ದದಾತು ದೇವಃ ಸ ವರಾನಿಹೇಷ್ಟಾನ್

ಅಭಿಷ್ಟುತೋ ನಃ ಪ್ರಭುರವ್ಯಯಃ ಸದಾ||

ಪ್ರಾಣಗಳ ರಕ್ಷಣೆಗಾಗಿ ಆ ಅನಿರ್ವಚನೀಯ ವಿಚಿನ್ವಂತನನ್ನು ಮನಸಾ ನಮಸ್ಕರಿಸುತ್ತೇನೆ. ಆ ಪ್ರಭು ಅವ್ಯಯ ದೇವನು ಸದಾ ನನಗೆ ಇಷ್ಟವಾದ ವರಗಳನ್ನು ದಯಪಾಲಿಸಲಿ!  

13018056a ಇಮಂ ಸ್ತವಂ ಸನ್ನಿಯಮ್ಯೇಂದ್ರಿಯಾಣಿ

ಶುಚಿರ್ಭೂತ್ವಾ ಯಃ ಪುರುಷಃ ಪಠೇತ|

13018056c ಅಭಗ್ನಯೋಗೋ ನಿಯತೋಽಬ್ಧಮೇಕಂ

ಸ ಪ್ರಾಪ್ನುಯಾದಶ್ವಮೇಧೇ ಫಲಂ ಯತ್||

ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು, ಶುಚಿಯಾಗಿರುವ ಯಾವ ಪುರುಷನು ಈ ಸ್ತವವನ್ನು ನಿಯತನಾಗಿ ಅವಿಚ್ಛಿನ್ನವಾಗಿ ಒಂದು ತಿಂಗಳು ಪಠಿಸುವನೋ ಅವನು ಅಶ್ವಮೇಧಯಾಗದ ಫಲವನ್ನು ಪಡೆದುಕೊಳ್ಳುತ್ತಾನೆ.

13018057a ವೇದಾನ್ ಕೃತ್ಸ್ನಾನ್ಬ್ರಾಹ್ಮಣಃ ಪ್ರಾಪ್ನುಯಾಚ್ಚ

ಜಯೇದ್ರಾಜಾ ಪೃಥಿವೀಂ ಚಾಪಿ ಕೃತ್ಸ್ನಾಮ್|

13018057c ವೈಶ್ಯೋ ಲಾಭಂ ಪ್ರಾಪ್ನುಯಾನ್ನೈಪುಣಂ ಚ

ಶೂದ್ರೋ ಗತಿಂ ಪ್ರೇತ್ಯ ತಥಾ ಸುಖಂ ಚ||

ಬ್ರಾಹ್ಮಣನು ಸಂಪೂರ್ಣ ವೇದಗಳನ್ನೂ ಪಡೆದುಕೊಳ್ಳುತ್ತಾನೆ. ರಾಜನು ಇಡೀ ಭೂಮಿಯನ್ನು ಜಯಿಸುತ್ತಾನೆ. ವೈಶ್ಯನು ನೈಪುಣ್ಯತೆಯನ್ನೂ ಲಾಭವನ್ನೂ ಪಡೆಯುತ್ತಾನೆ. ಶೂದ್ರನು ಇಹದಲ್ಲಿ ಸುಖವನ್ನೂ ಪರದಲ್ಲಿ ಸದ್ಗತಿಯನ್ನೂ ಪಡೆಯುತ್ತಾನೆ.

13018058a ಸ್ತವರಾಜಮಿಮಂ ಕೃತ್ವಾ ರುದ್ರಾಯ ದಧಿರೇ ಮನಃ|

13018058c ಸರ್ವದೋಷಾಪಹಂ ಪುಣ್ಯಂ ಪವಿತ್ರಂ ಚ ಯಶಸ್ವಿನಮ್||

ಸರ್ವದೋಷಗಳನ್ನು ಕಳೆಯುವ ಪುಣ್ಯವೂ ಪವಿತ್ರವೂ ಆದ ಈ ರುದ್ರನ ಸ್ತವರಾಜವನ್ನು ಮನಸ್ಸಿನಲ್ಲಿ ಧರಿಸಿರುವವರು ಯಶೋವಂತರಾಗುತ್ತಾರೆ.

13018059a ಯಾವಂತ್ಯಸ್ಯ ಶರೀರೇಷು ರೋಮಕೂಪಾಣಿ ಭಾರತ|

13018059c ತಾವದ್ವರ್ಷಸಹಸ್ರಾಣಿ ಸ್ವರ್ಗೇ ವಸತಿ ಮಾನವಃ||

ಭಾರತ! ಇದನ್ನು ಪಠಿಸಿದ ಮಾನವನು ಅವನ ಶರೀರಗಳಲ್ಲಿ ಎಷ್ಟು ರೂಪಕೂಪಗಳಿವೆಯೋ ಅಷ್ಟು ಸಹಸ್ರ ವರ್ಷಗಳ ಕಾಲ ಸ್ವರ್ಗದಲ್ಲಿ ವಾಸಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮೇಘವಾಹನಪರ್ವಕಥನೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮೇಘವಾಹನಪರ್ವಕಥನ ಎನ್ನುವ ಹದಿನೆಂಟನೇ ಅಧ್ಯಾಯವು.

Comments are closed.