ಅನುಶಾಸನ ಪರ್ವ: ದಾನಧರ್ಮ ಪರ್ವ
೧೫
ಉಪಮನ್ಯುವಿನಿಂದ ದೀಕ್ಷೆಯನ್ನು ಪಡೆದು ಕೃಷ್ಣನು ಶಿವನ ಕುರಿತು ತಪಸ್ಸನ್ನು ತಪಿಸಿದುದು (೧-೫). ಕೃಷ್ಣನಿಗೆ ಶಿವನ ದರ್ಶನ (೬-೨೯). ಕೃಷ್ಣನಿಂದ ಶಿವಸ್ತುತಿ (೩೦-೪೫) ಶಿವನು ಕೃಷ್ಣನಿಗೆ ವರವನ್ನಿತ್ತಿದುದು (೪೬-೫೧).
13015001 ಉಪಮನ್ಯುರುವಾಚ|
13015001a ಏತಾನ್ಸಹಸ್ರಶಶ್ಚಾನ್ಯಾನ್ಸಮನುಧ್ಯಾತವಾನ್ ಹರಃ|
13015001c ಕಸ್ಮಾತ್ಪ್ರಸಾದಂ ಭಗವಾನ್ನ ಕುರ್ಯಾತ್ತವ ಮಾಧವ||
ಉಪಮನ್ಯುವು ಹೇಳಿದನು: “ಮಾಧವ! ಇಲ್ಲಿರುವ ಸಹಸ್ರ ಮುನಿಗಳನ್ನೂ ಭಗವಾನ್ ಹರನು ಚೆನ್ನಾಗಿ ಪರಿಶೀಲಿಸಿ ಅನುಗ್ರಹಿಸಿರುವನು. ನಿನ್ನ ಮೇಲೆ ಹೇಗೆ ಅವನು ಪ್ರಸನ್ನನಾಗುವುದಿಲ್ಲ?
13015002a ತ್ವಾದೃಶೇನ ಹಿ ದೇವಾನಾಂ ಶ್ಲಾಘನೀಯಃ ಸಮಾಗಮಃ|
13015002c ಬ್ರಹ್ಮಣ್ಯೇನಾನೃಶಂಸೇನ ಶ್ರದ್ದಧಾನೇನ ಚಾಪ್ಯುತ|
13015002e ಜಪ್ಯಂ ಚ ತೇ ಪ್ರದಾಸ್ಯಾಮಿ ಯೇನ ದ್ರಕ್ಷ್ಯಸಿ ಶಂಕರಮ್||
ಬ್ರಹ್ಮಣ್ಯನೂ, ಕೋಮಲಸ್ವಭಾವದವನೂ, ಶ್ರದ್ದಧಾನನೂ ಆಗಿರುವ ನಿನ್ನೊಡನೆಯ ಸಮಾಗಮವು ದೇವತೆಗಳಿಗೂ ಶ್ಲಾಘನೀಯವೇ ಸರಿ! ನಿನಗೆ ಈ ಮಂತ್ರವನ್ನು ನೀಡುತ್ತೇನೆ. ಇದನ್ನು ಜಪಿಸಿ ನೀನು ಶಂಕರನನ್ನು ಕಾಣುತ್ತೀಯೆ!””
13015003 ಕೃಷ್ಣ ಉವಾಚ|
13015003a ಅಬ್ರುವಂ ತಮಹಂ ಬ್ರಹ್ಮಂಸ್ತ್ವತ್ಪ್ರಸಾದಾನ್ಮಹಾಮುನೇ|
13015003c ದ್ರಕ್ಷ್ಯೇ ದಿತಿಜಸಂಘಾನಾಂ ಮರ್ದನಂ ತ್ರಿದಶೇಶ್ವರಮ್||
ಕೃಷ್ಣನು ಹೇಳಿದನು: “ಆಗ ನಾನು ಆ ಬ್ರಾಹ್ಮಣನಿಗೆ ಹೇಳಿದೆನು: “ಮಹಾಮುನೇ! ನಿನ್ನ ಅನುಗ್ರಹದಿಂದಲೇ ನಾನು ಆ ದಿತಿಜಸಂಘಗಳನ್ನು ಮರ್ದಿಸಿದ ತ್ರಿದಶೇಶ್ವರನನ್ನು ನೋಡಬಲ್ಲೆ.”
13015004a ದಿನೇಽಷ್ಟಮೇ ಚ ವಿಪ್ರೇಣ ದೀಕ್ಷಿತೋಽಹಂ ಯಥಾವಿಧಿ|
13015004c ದಂಡೀ ಮುಂಡೀ ಕುಶೀ ಚೀರೀ ಘೃತಾಕ್ತೋ ಮೇಖಲೀ ತಥಾ||
ಎಂಟನೇ ದಿನದಂದು ನಾನು ವಿಪ್ರನಿಂದ ಯಥಾವಿಧಿಯಾಗಿ ಮುಂಡನ ಮಾಡಿಕೊಂಡು, ದಂಡವನ್ನು ಹಿಡಿದು, ಶರೀರಕ್ಕೆ ತುಪ್ಪವನ್ನು ಲೇಪಿಸಿಕೊಂಡು, ನಾರುಮಡಿಯನ್ನುಟ್ಟು, ಮೌಂಜಿಯನ್ನು ಧಾರಣೆಮಾಡಿ ದೀಕ್ಷಿತನಾದೆನು.
13015005a ಮಾಸಮೇಕಂ ಫಲಾಹಾರೋ ದ್ವಿತೀಯಂ ಸಲಿಲಾಶನಃ|
13015005c ತೃತೀಯಂ ಚ ಚತುರ್ಥಂ ಚ ಪಂಚಮಂ ಚಾನಿಲಾಶನಃ||
ಮೊದಲನೆಯ ತಿಂಗಳು ಫಲಾಹಾರಿಯಾಗಿದ್ದೆ. ಎರಡನೆಯ ತಿಂಗಳು ಕೇವಲ ನೀರನ್ನು ಕುಡಿಯುತ್ತಿದ್ದೆ. ಮೂರು, ನಾಲ್ಕು ಮತ್ತು ಐದನೆಯ ತಿಂಗಳುಗಳಲ್ಲಿ ಕೇವಲ ಗಾಳಿಯನ್ನೇ ಸೇವಿಸುತ್ತಿದ್ದೆ.
13015006a ಏಕಪಾದೇನ ತಿಷ್ಠಂಶ್ಚ ಊರ್ಧ್ವಬಾಹುರತಂದ್ರಿತಃ|
13015006c ತೇಜಃ ಸೂರ್ಯಸಹಸ್ರಸ್ಯ ಅಪಶ್ಯಂ ದಿವಿ ಭಾರತ||
ಭಾರತ! ಒಂದೇ ಕಾಲಿನಮೇಲೆ ನಿಂತು ಬಾಹುಗಳನ್ನು ಮೇಲಕ್ಕೆತ್ತಿ ಆಲಸಿಕೆಯಿಲ್ಲದೇ ತಪಸ್ಸನ್ನಾಚರಿಸುತ್ತಿರಲು ದಿವಿಯಲ್ಲಿ ಸಹಸ್ರ ಸೂರ್ಯರ ತೇಜಸ್ಸನ್ನು ಕಂಡೆನು.
13015007a ತಸ್ಯ ಮಧ್ಯಗತಂ ಚಾಪಿ ತೇಜಸಃ ಪಾಂಡುನಂದನ|
13015007c ಇಂದ್ರಾಯುಧಪಿನದ್ಧಾಂಗಂ ವಿದ್ಯುನ್ಮಾಲಾಗವಾಕ್ಷಕಮ್|
13015007e ನೀಲಶೈಲಚಯಪ್ರಖ್ಯಂ ಬಲಾಕಾಭೂಷಿತಂ ಘನಮ್||
ಪಾಂಡುನಂದನ! ಅದರ ಮಧ್ಯದಲ್ಲಿದ್ದ ತೇಜಸ್ಸಿನ ಸಮಸ್ತ ಅಂಗಗಳೂ ಕಾಮನ ಬಿಲ್ಲಿನಿಂದ ಸುತ್ತುವರೆಯಲ್ಪಟ್ಟಿದ್ದವು. ವಿದ್ಯುತ್ತಿನ ಮಾಲೆಯು ಅದರ ಗವಾಕ್ಷಿಯಾಗಿತ್ತು. ಅದು ನೀಲಶೈಲದಂತೆ ಪ್ರಕಾಶಿಸುತ್ತಿತ್ತು. ಬೆಳ್ಳಕ್ಕಿಗಳಿಂದ ತುಂಬಿದ ಘನ ಆಕಾಶದಂತೆ ಕಾಣುತ್ತಿತ್ತು.
13015008a ತಮಾಸ್ಥಿತಶ್ಚ ಭಗವಾನ್ದೇವ್ಯಾ ಸಹ ಮಹಾದ್ಯುತಿಃ|
13015008c ತಪಸಾ ತೇಜಸಾ ಕಾಂತ್ಯಾ ದೀಪ್ತಯಾ ಸಹ ಭಾರ್ಯಯಾ||
ಅಲ್ಲಿ ದೇವಿಯ ಸಹಿತ ಭಗವಾನ್ ಮಹಾದ್ಯುತಿಯು ನಿಂತಿದ್ದನು. ಭಾರ್ಯೆಯೊಂದಿಗೆ ಅವನು ತಪಸ್ಸಿನ ತೇಜಸ್ಸು ಕಾಂತಿಗಳಿಂದ ಬೆಳಗುತ್ತಿದ್ದನು.
13015009a ರರಾಜ ಭಗವಾಂಸ್ತತ್ರ ದೇವ್ಯಾ ಸಹ ಮಹೇಶ್ವರಃ|
13015009c ಸೋಮೇನ ಸಹಿತಃ ಸೂರ್ಯೋ ಯಥಾ ಮೇಘಸ್ಥಿತಸ್ತಥಾ||
ಅಲ್ಲಿ ದೇವಿಯ ಸಹಿತ ಭಗವಾನ್ ಮಹೇಶ್ವರನು ಮೇಘವನ್ನೇರಿದ ಸೂರ್ಯನು ಚಂದ್ರನೊಂದಿಗೆ ಹೇಗೋ ಹಾಗೆ ರಾರಾಜಿಸಿದನು.
13015010a ಸಂಹೃಷ್ಟರೋಮಾ ಕೌಂತೇಯ ವಿಸ್ಮಯೋತ್ಫುಲ್ಲಲೋಚನಃ|
13015010c ಅಪಶ್ಯಂ ದೇವಸಂಘಾನಾಂ ಗತಿಮಾರ್ತಿಹರಂ ಹರಮ್||
ಕೌಂತೇಯ! ರೋಮಸಂಹೃಷ್ಟನಾಗಿ ವಿಸ್ಮಯದಿಂದ ಕಣ್ಣುಗಳನ್ನು ಅಗಲಿಸಿ ನಾನು ದೇವಸಂಘಗಳ ಗತಿ, ಆರ್ತಿಹರ ಹರನನ್ನು ಕಂಡೆನು.
13015011a ಕಿರೀಟಿನಂ ಗದಿನಂ ಶೂಲಪಾಣಿಂ
ವ್ಯಾಘ್ರಾಜಿನಂ ಜಟಿಲಂ ದಂಡಪಾಣಿಮ್|
13015011c ಪಿನಾಕಿನಂ ವಜ್ರಿಣಂ ತೀಕ್ಷ್ಣದಂಷ್ಟ್ರಂ
ಶುಭಾಂಗದಂ ವ್ಯಾಲಯಜ್ಞೋಪವೀತಮ್||
13015012a ದಿವ್ಯಾಂ ಮಾಲಾಮುರಸಾನೇಕವರ್ಣಾಂ
ಸಮುದ್ವಹಂತಂ ಗುಲ್ಫದೇಶಾವಲಂಬಾಮ್|
13015012c ಚಂದ್ರಂ ಯಥಾ ಪರಿವಿಷ್ಟಂ ಸಸಂಧ್ಯಂ
ವರ್ಷಾತ್ಯಯೇ ತದ್ವದಪಶ್ಯಮೇನಮ್||
ಕಿರೀಟವನ್ನು ಧರಿಸಿದ್ದ, ಗದೆ-ಶೂಲಗಳನ್ನು ಹಿಡಿದಿದ್ದ, ವ್ಯಾಘ್ರಚರ್ಮವನ್ನು ಧರಿಸಿದ್ದ, ಜಟಾಜೂಟಧರ, ಕೈಯಲ್ಲಿ ದಂಡವನ್ನು ಹಿಡಿದಿದ್ದ, ಸರ್ಪವನ್ನೇ ಯಜ್ಞೋಪವೀತವನ್ನಾಗಿ ಧರಿಸಿದ್ದ, ಕಾಲುಗಳ ವರೆಗೂ ಇಳಿಬಿದ್ದಿದ್ದ ಅನೇಕವರ್ಣಗಳ ದಿವ್ಯ ಮಾಲೆಯನ್ನು ಧರಿಸಿದ್ದ, ಮಳೆಗಾಲದ ಅಂತ್ಯದಲ್ಲಿ ಸಂಧ್ಯೆಯಿಂದ ಪರಿವೃತನಾದ ಚಂದ್ರನಂತೆಯೇ ಕಾಣುತ್ತಿದ್ದ ಆ ಪಿನಾಕಿ, ವಜ್ರಿ, ತೀಕ್ಷ್ಣದಂಷ್ಟ್ರ, ಶುಭಾಂಗದನನ್ನು ನಾನು ನೋಡಿದೆನು.
13015013a ಪ್ರಮಥಾನಾಂ ಗಣೈಶ್ಚೈವ ಸಮಂತಾತ್ಪರಿವಾರಿತಮ್|
13015013c ಶರದೀವ ಸುದುಷ್ಪ್ರೇಕ್ಷ್ಯಂ ಪರಿವಿಷ್ಟಂ ದಿವಾಕರಮ್||
ಎಲ್ಲ ಕಡೆ ಪ್ರಮಥ ಗಣಗಳಿಂದ ಪರಿವೃತನಾಗಿದ್ದ, ಶರದ್ಕಾಲದ ದಿವಾಕರನಂತೆ ನೋಡಲು ದುಃಸಾಧ್ಯನಾಗಿದ್ದ ಆ ಪರಿವಿಷ್ಟನನ್ನು ನೋಡಿದೆನು.
13015014a ಏಕಾದಶ ತಥಾ ಚೈನಂ ರುದ್ರಾಣಾಂ ವೃಷವಾಹನಮ್|
13015014c ಅಸ್ತುವನ್ನಿಯತಾತ್ಮಾನಃ ಕರ್ಮಭಿಃ ಶುಭಕರ್ಮಿಣಮ್||
ಆ ಏಕಾದಶ ರುದ್ರರನ್ನೂ, ವೃಷಭವಾಹನನನ್ನೂ ಮತ್ತು ಶುಭಕರ್ಮಿಣಿಯನ್ನೂ ನಿಯತಾತ್ಮರು ಕರ್ಮಗಳಿಂದ ಸ್ತುತಿಸುತ್ತಿದ್ದರು.
13015015a ಆದಿತ್ಯಾ ವಸವಃ ಸಾಧ್ಯಾ ವಿಶ್ವೇದೇವಾಸ್ತಥಾಶ್ವಿನೌ|
13015015c ವಿಶ್ವಾಭಿಃ ಸ್ತುತಿಭಿರ್ದೇವಂ ವಿಶ್ವದೇವಂ ಸಮಸ್ತುವನ್||
ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವರು, ಅಶ್ವಿನರು, ಮತ್ತು ವಿಶ್ವವೇ ಆ ದೇವ ವಿಶ್ವದೇವನನ್ನು ಸ್ತುತಿಗಳಿಂದ ನಮಸ್ಕರಿಸುತ್ತಿದ್ದರು.
13015016a ಶತಕ್ರತುಶ್ಚ ಭಗವಾನ್ವಿಷ್ಣುಶ್ಚಾದಿತಿನಂದನೌ|
13015016c ಬ್ರಹ್ಮಾ ರಥಂತರಂ ಸಾಮ ಈರಯಂತಿ ಭವಾಂತಿಕೇ||
ಅದಿತಿನಂದನರಾದ ಶತಕ್ರತುವೂ, ಭಗವಾನ್ ವಿಷ್ಣುವೂ ಮತ್ತು ಬ್ರಹ್ಮನೂ ಭವನ ಬಳಿ ರಥಂತರ ಸಾಮವನ್ನು ಹಾಡುತ್ತಿದ್ದರು.
13015017a ಯೋಗೀಶ್ವರಾಃ ಸುಬಹವೋ ಯೋಗದಂ ಪಿತರಂ ಗುರುಮ್|
13015017c ಬ್ರಹ್ಮರ್ಷಯಶ್ಚ ಸಸುತಾಸ್ತಥಾ ದೇವರ್ಷಯಶ್ಚ ವೈ||
13015018a ಪೃಥಿವೀ ಚಾಂತರಿಕ್ಷಂ ಚ ನಕ್ಷತ್ರಾಣಿ ಗ್ರಹಾಸ್ತಥಾ|
13015018c ಮಾಸಾರ್ಧಮಾಸಾ ಋತವೋ ರಾತ್ರ್ಯಃ ಸಂವತ್ಸರಾಃ ಕ್ಷಣಾಃ||
13015019a ಮುಹೂರ್ತಾಶ್ಚ ನಿಮೇಷಾಶ್ಚ ತಥೈವ ಯುಗಪರ್ಯಯಾಃ|
13015019c ದಿವ್ಯಾ ರಾಜನ್ನಮಸ್ಯಂತಿ ವಿದ್ಯಾಃ ಸರ್ವಾ ದಿಶಸ್ತಥಾ||
ರಾಜನ್! ಅನೇಕ ಯೋಗೀಶ್ವರರೂ, ಸುತರೊಂದಿಗೆ ಬ್ರಹ್ಮರ್ಷಿಗಳೂ, ದೇವರ್ಷಿಗಳು, ಪೃಥ್ವೀ, ಅಂತರಿಕ್ಷ, ನಕ್ಷತ್ರಗಳು, ಗ್ರಹಗಳು, ಮಾಸ, ಪಕ್ಷ, ಋತು, ರಾತ್ರಿ, ಸಂವತ್ಸರ, ಕ್ಷಣ, ಮುಹೂರ್ತ, ನಿಮಿಷಗಳೂ, ಹಾಗೆಯೇ ಯುಗಪರ್ಯಯಗಳೂ, ದಿವ್ಯ ವಿದ್ಯೆಗಳೂ ಆ ಯೋಗಪಿತೃ ಗುರುವನ್ನು ಎಲ್ಲ ದಿಕ್ಕುಗಳಲ್ಲಿಯೂ ನಮಸ್ಕರಿಸುತ್ತಿದ್ದರು.
13015020a ಸನತ್ಕುಮಾರೋ ವೇದಾಶ್ಚ ಇತಿಹಾಸಾಸ್ತಥೈವ ಚ|
13015020c ಮರೀಚಿರಂಗಿರಾ ಅತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ||
13015021a ಮನವಃ ಸಪ್ತಸೋಮಶ್ಚ ಅಥರ್ವಾ ಸಬೃಹಸ್ಪತಿಃ|
13015021c ಭೃಗುರ್ದಕ್ಷಃ ಕಶ್ಯಪಶ್ಚ ವಸಿಷ್ಠಃ ಕಾಶ್ಯ ಏವ ಚ||
3015022a ಚಂದಾಂಸಿ ದೀಕ್ಷಾ ಯಜ್ಞಾಶ್ಚ ದಕ್ಷಿಣಾಃ ಪಾವಕೋ ಹವಿಃ|
13015022c ಯಜ್ಞೋಪಗಾನಿ ದ್ರವ್ಯಾಣಿ ಮೂರ್ತಿಮಂತಿ ಯುಧಿಷ್ಠಿರ||
ಯುಧಿಷ್ಠಿರ! ಸನತ್ಕುಮಾರರು, ವೇದಗಳು, ಇತಿಹಾಸಗಳು, ಮರೀಚಿ, ಅಂಗೀರಸ, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ಮನುಗಳು, ಸಪ್ತಸೋಮರು, ಅಥರ್ವ, ಬೃಹಸ್ಪತಿ, ಭೃಗು, ದಕ್ಷ, ಕಶ್ಯಪ, ವಸಿಷ್ಠ, ಕಾಶ್ಯ, ಚಂಧಗಳು, ದೀಕ್ಷೆ, ಯಜ್ಞಗಳು, ದಕ್ಷಿಣೆಗಳು, ಪಾವಕ, ಹವಿಸ್ಸು, ಯಜ್ಞೋಪ ದ್ರವ್ಯಗಳು ಅಲ್ಲಿ ಮೂರ್ತಿಮತ್ತರಾಗಿದ್ದರು.
13015023a ಪ್ರಜಾನಾಂ ಪತಯಃ ಸರ್ವೇ ಸರಿತಃ ಪನ್ನಗಾ ನಗಾಃ|
13015023c ದೇವಾನಾಂ ಮಾತರಃ ಸರ್ವಾ ದೇವಪತ್ನ್ಯಃ ಸಕನ್ಯಕಾಃ||
13015024a ಸಹಸ್ರಾಣಿ ಮುನೀನಾಂ ಚ ಅಯುತಾನ್ಯರ್ಬುದಾನಿ ಚ|
13015024c ನಮಸ್ಯಂತಿ ಪ್ರಭುಂ ಶಾಂತಂ ಪರ್ವತಾಃ ಸಾಗರಾ ದಿಶಃ||
ಪ್ರಜಾಪತಿಗಳೆಲ್ಲರೂ, ನದಿಗಳು, ಪನ್ನಗಗಳು, ಆನೆಗಳು, ದೇವಮಾತರರೆಲ್ಲರೂ, ಕನ್ಯೆಯರೊಂದಿಗೆ ದೇವಪತ್ನಿಯರು, ಸಹಸ್ರಾರು ಸಾವಿರ ಅರ್ಬುದ ಮುನಿಗಳು, ಪರ್ವತಗಳು, ಸಾಗರಗಳು, ದಿಕ್ಕುಗಳು ಆ ಪ್ರಭು ಶಾಂತನನ್ನು ನಮಸ್ಕರಿಸುತ್ತಿದ್ದರು.
13015025a ಗಂಧರ್ವಾಪ್ಸರಸಶ್ಚೈವ ಗೀತವಾದಿತ್ರಕೋವಿದಾಃ|
13015025c ದಿವ್ಯತಾನೇನ ಗಾಯಂತಃ ಸ್ತುವಂತಿ ಭವಮದ್ಭುತಮ್|
13015025e ವಿದ್ಯಾಧರಾ ದಾನವಾಶ್ಚ ಗುಹ್ಯಕಾ ರಾಕ್ಷಸಾಸ್ತಥಾ||
ಗೀತವಾದಿತ್ರ ಕೋವಿದರಾದ ಗಂಧರ್ವರು, ಅಪ್ಸರೆಯರು, ವಿದ್ಯಾಧರರು, ದಾನವರು, ಗುಹ್ಯಕರು, ರಾಕ್ಷಸರು ದಿವ್ಯತಾನದಿಂದ ಹಾಡುತ್ತಾ ಆ ಅದ್ಭುತ ಭವನನ್ನು ಸ್ತುತಿಸುತ್ತಿದ್ದರು.
13015026a ಸರ್ವಾಣಿ ಚೈವ ಭೂತಾನಿ ಸ್ಥಾವರಾಣಿ ಚರಾಣಿ ಚ|
13015026c ನಮಸ್ಯಂತಿ ಮಹಾರಾಜ ವಾಙ್ಮನಃಕರ್ಮಭಿರ್ವಿಭುಮ್|
13015026e ಪುರಸ್ತಾದ್ವಿಷ್ಠಿತಃ ಶರ್ವೋ ಮಮಾಸೀತ್ತ್ರಿದಶೇಶ್ವರಃ||
ಮಹಾರಾಜ! ಸ್ಥಾವರ-ಚರ ಸರ್ವ ಭೂತಗಳೂ ವಾಕ್-ಮನಸ್ಸು ಮತ್ತು ಕರ್ಮಗಳಿಂದ ವಿಭುವನ್ನು ನಮಸ್ಕರಿಸುತ್ತವೆ. ತ್ರಿದಶೇಶ್ವರ ಶರ್ವನು ನನ್ನ ಎದುರಿಗೇ ನಿಂತಿದ್ದನು.
13015027a ಪುರಸ್ತಾದ್ವಿಷ್ಠಿತಂ ದೃಷ್ಟ್ವಾ ಮಮೇಶಾನಂ ಚ ಭಾರತ|
13015027c ಸಪ್ರಜಾಪತಿಶಕ್ರಾಂತಂ ಜಗನ್ಮಾಮಭ್ಯುದೈಕ್ಷತ||
ಭಾರತ! ನನ್ನ ಎದುರಿಗಿದ್ದ ಈಶಾನನನ್ನು ನೋಡಿ ಪ್ರಜಾಪತಿಯಿಂದ ಮೊದಲ್ಗೊಂಡ ಶಕ್ರನವರೆಗೆ ಎಲ್ಲರೂ ನನ್ನನ್ನೇ ನೋಡತೊಡಗಿದರು.
13015028a ಈಕ್ಷಿತುಂ ಚ ಮಹಾದೇವಂ ನ ಮೇ ಶಕ್ತಿರಭೂತ್ತದಾ|
13015028c ತತೋ ಮಾಮಬ್ರವೀದ್ದೇವಃ ಪಶ್ಯ ಕೃಷ್ಣ ವದಸ್ವ ಚ||
ಮಹಾದೇವನನ್ನು ವೀಕ್ಷಿಸಲು ನನ್ನಲ್ಲಿ ಶಕ್ತಿಯೇ ಇಲ್ಲವಾಗಿತ್ತು. ಆಗ ದೇವನು “ಕೃಷ್ಣ! ನನ್ನನ್ನು ನೋಡು ಮತ್ತು ಮಾತನಾಡು!” ಎಂದು ನನಗೆ ಹೇಳಿದನು.
13015029a ಶಿರಸಾ ವಂದಿತೇ ದೇವೇ ದೇವೀ ಪ್ರೀತಾ ಉಮಾಭವತ್|
13015029c ತತೋಽಹಮಸ್ತುವಂ ಸ್ಥಾಣುಂ ಸ್ತುತಂ ಬ್ರಹ್ಮಾದಿಭಿಃ ಸುರೈಃ||
ದೇವನಿಗೆ ನಾನು ಶಿರಸಾ ವಂದಿಸಲು ದೇವೀ ಉಮೆಯು ಪ್ರೀತಳಾದಳು. ಬ್ರಹ್ಮಾದಿ ಸುರರಿಂದ ಸ್ತುತಿಸಲ್ಪಡುತ್ತಿದ್ದ ಸ್ಥಾಣುವನ್ನು ನಾನೂ ಸ್ತುತಿಸಿದೆನು.
13015030a ನಮೋಽಸ್ತು ತೇ ಶಾಶ್ವತ ಸರ್ವಯೋನೇ
ಬ್ರಹ್ಮಾಧಿಪಂ ತ್ವಾಮೃಷಯೋ ವದಂತಿ|
13015030c ತಪಶ್ಚ ಸತ್ತ್ವಂ ಚ ರಜಸ್ತಮಶ್ಚ
ತ್ವಾಮೇವ ಸತ್ಯಂ ಚ ವದಂತಿ ಸಂತಃ||
“ಶಾಶ್ವತ! ಸರ್ವಯೋನೇ! ನಿನಗೆ ನಮಸ್ಕಾರ! ಋಷಿಗಳು ನಿನ್ನನ್ನು ಬ್ರಹ್ಮಾಧಿಪನೆಂದು ಕರೆಯುತ್ತಾರೆ. ಸಂತರು ನೀನೇ ತಪಸ್ಸು, ಸತ್ತ್ವ, ರಜ, ತಮಸ್ಸು ಮತ್ತು ಸತ್ಯ ಎಂದು ಹೇಳುತ್ತಾರೆ.
13015031a ತ್ವಂ ವೈ ಬ್ರಹ್ಮಾ ಚ ರುದ್ರಶ್ಚ ವರುಣೋಽಗ್ನಿರ್ಮನುರ್ಭವಃ|
13015031c ಧಾತಾ ತ್ವಷ್ಟಾ ವಿಧಾತಾ ಚ ತ್ವಂ ಪ್ರಭುಃ ಸರ್ವತೋಮುಖಃ||
ನೀನೇ ಬ್ರಹ್ಮ, ರುದ್ರ, ವರುಣ, ಅಗ್ನಿ, ಮನು, ಭವ, ಧಾತಾ, ತ್ವಷ್ಟಾ, ವಿಧಾತಾ. ಮತ್ತು ನೀನೇ ಸರ್ವತೋಮುಖ ಪ್ರಭು.
13015032a ತ್ವತ್ತೋ ಜಾತಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
13015032c ತ್ವಮಾದಿಃ ಸರ್ವಭೂತಾನಾಂ ಸಂಹಾರಶ್ಚ ತ್ವಮೇವ ಹಿ||
ಸ್ಥಾವರ-ಚರ ಭೂತಗಳು ನಿನ್ನಿಂದಲೇ ಹುಟ್ಟುತ್ತವೆ. ನೀನೇ ಸರ್ವಭೂತಗಳ ಆದಿ. ಅವುಗಳ ಸಂಹಾರಕನೂ ನೀನೇ.
13015033a ಯೇ ಚೇಂದ್ರಿಯಾರ್ಥಾಶ್ಚ ಮನಶ್ಚ ಕೃತ್ಸ್ನಂ
ಯೇ ವಾಯವಃ ಸಪ್ತ ತಥೈವ ಚಾಗ್ನಿಃ|
13015033c ಯೇ ವಾ ದಿವಿಸ್ಥಾ ದೇವತಾಶ್ಚಾಪಿ ಪುಂಸಾಂ
ತಸ್ಮಾತ್ಪರಂ ತ್ವಾಮೃಷಯೋ ವದಂತಿ||
ಇರುವ ಇಂದ್ರಿಯಗಳು, ಅರ್ಥಗಳು, ಮನಸ್ಸು ಎಲ್ಲವೂ ಹಾಗೆಯೇ ಸಪ್ತವಾಯುಗಳು, ಸಪ್ತಾಗ್ನಿಗಳು, ದಿವಿಯಲ್ಲಿರುವ ದೇವತಾ ಪುರುಷರಿಗೂ ಮೀರಿದವನು ನೀನು ಎಂದು ಋಷಿಗಳು ಹೇಳುತ್ತಾರೆ.
13015034a ವೇದಾ ಯಜ್ಞಾಶ್ಚ ಸೋಮಶ್ಚ ದಕ್ಷಿಣಾ ಪಾವಕೋ ಹವಿಃ|
13015034c ಯಜ್ಞೋಪಗಂ ಚ ಯತ್ಕಿಂ ಚಿದ್ಭಗವಾಂಸ್ತದಸಂಶಯಮ್||
ವೇದಗಳು, ಯಜ್ಞಗಳು, ಸೋಮ, ದಕ್ಷಿಣೆಗಳು, ಪಾವಕ, ಹವಿಸ್ಸು, ಯಜ್ಞಕ್ಕೆ ಸಂಬಂಧಿಸಿದ ಯಾವುದೆಲ್ಲ ಇವೆಯೋ ಅವೆಲ್ಲವೂ ನೀನೇ ಎನ್ನುವುದರಲ್ಲಿ ಸಂಶಯವಿಲ್ಲ.
13015035a ಇಷ್ಟಂ ದತ್ತಮಧೀತಂ ಚ ವ್ರತಾನಿ ನಿಯಮಾಶ್ಚ ಯೇ|
13015035c ಹ್ರೀಃ ಕೀರ್ತಿಃ ಶ್ರೀರ್ದ್ಯುತಿಸ್ತುಷ್ಟಿಃ ಸಿದ್ಧಿಶ್ಚೈವ ತ್ವದರ್ಪಣಾ||
ಇಷ್ಟಿ, ದಾನ, ಅಧ್ಯಯನ, ವ್ರತ, ನಿಯಮಗಳು, ಲಜ್ಜೆ, ಕೀರ್ತಿ, ಶ್ರೀ, ದ್ಯುತಿ, ತುಷ್ಟಿ ಮತ್ತು ಸಿದ್ದಿಗಳೂ ಕೂಡ ನಿನ್ನ ಅರ್ಪಣೆಗಳು.
13015036a ಕಾಮಃ ಕ್ರೋಧೋ ಭಯಂ ಲೋಭೋ ಮದಃ ಸ್ತಂಭೋಽಥ ಮತ್ಸರಃ|
13015036c ಆಧಯೋ ವ್ಯಾಧಯಶ್ಚೈವ ಭಗವಂಸ್ತನಯಾಸ್ತವ||
ಕಾಮ, ಕ್ರೋಧ, ಭಯ, ಲೋಭ, ಮದ, ಸ್ತಂಭ, ಮತ್ಸರ, ಆಧಿ ಮತ್ತು ವ್ಯಾಧಿಗಳು ನಿನ್ನ ಶರೀರಗಳೇ ಆಗಿವೆ.
13015037a ಕೃತಿರ್ವಿಕಾರಃ ಪ್ರಲಯಃ ಪ್ರಧಾನಂ ಪ್ರಭವೋಽವ್ಯಯಃ|
13015037c ಮನಸಃ ಪರಮಾ ಯೋನಿಃ ಸ್ವಭಾವಶ್ಚಾಪಿ ಶಾಶ್ವತಃ|
13015037e ಅವ್ಯಕ್ತಃ ಪಾವನ ವಿಭೋ ಸಹಸ್ರಾಂಶೋ ಹಿರಣ್ಮಯಃ||
ನೀನು ಕೃತಿ. ವಿಕಾರ. ಪ್ರಲಯ. ಪ್ರಧಾನ. ಅವ್ಯಯ ಬೀಜ. ಮನಸ್ಸಿನ ಪರಮ ಯೋನಿಯು ನೀನು. ಶಾಶ್ವತವೇ ನಿನ್ನ ಸ್ವಭಾವ.
13015038a ಆದಿರ್ಗುಣಾನಾಂ ಸರ್ವೇಷಾಂ ಭವಾನ್ವೈ ಜೀವನಾಶ್ರಯಃ|
13015038c ಮಹಾನಾತ್ಮಾ ಮತಿರ್ಬ್ರಹ್ಮಾ ವಿಶ್ವಃ ಶಂಭುಃ ಸ್ವಯಂಭುವಃ||
ಎಲ್ಲ ಗುಣಗಳ ಆದಿಯೂ ನೀನೇ. ಜೀವನಾಶ್ರಯನೂ ನೀನೇ. ನೀನೇ ಮಹಾತ್ಮರ ಮತಿ, ಬ್ರಹ್ಮ, ವಿಶ್ವ, ಶಂಭು ಮತ್ತು ಸ್ವಯಂಭುವ.
13015039a ಬುದ್ಧಿಃ ಪ್ರಜ್ಞೋಪಲಬ್ಧಿಶ್ಚ ಸಂವಿತ್ಖ್ಯಾತಿರ್ಧೃತಿಃ ಸ್ಮೃತಿಃ|
13015039c ಪರ್ಯಾಯವಾಚಕೈಃ ಶಬ್ದೈರ್ಮಹಾನಾತ್ಮಾ ವಿಭಾವ್ಯಸೇ||
ಬುದ್ಧಿ, ಪ್ರಜ್ಞೆ, ಉಪಲಬ್ಧಿ, ಸಂವಿತ್, ಖ್ಯಾತಿ, ಧೃತಿ, ಸ್ಮೃತಿ – ಈ ಪರ್ಯಾಯ ವಾಚಕ ಶಬ್ಧಗಳಿಂದ ಮಹಾನ್ ಆತ್ಮನಾದ ನೀನು ತಿಳಿಯಲ್ಪಡುತ್ತೀಯೆ.
13015040a ತ್ವಾಂ ಬುದ್ಧ್ವಾ ಬ್ರಾಹ್ಮಣೋ ವಿದ್ವಾನ್ನ ಪ್ರಮೋಹಂ ನಿಗಚ್ಚತಿ|
13015040c ಹೃದಯಂ ಸರ್ವಭೂತಾನಾಂ ಕ್ಷೇತ್ರಜ್ಞಸ್ತ್ವಮೃಷಿಷ್ಟುತಃ||
ನಿನ್ನನ್ನು ತಿಳಿದುಕೊಂಡು ವಿದ್ವಾನ್ ಬ್ರಾಹ್ಮಣರು ಪ್ರಮೋಹಗೊಳ್ಳದೇ ಮುಂದುವರೆಯುತ್ತಾರೆ. ಋಷಿಗಳಿಂದ ಸ್ತುತನಾದ ನೀನು ಸರ್ವಭೂತಗಳ ಹೃದಯ. ಕ್ಷೇತ್ರಜ್ಞ.
13015041a ಸರ್ವತಃಪಾಣಿಪಾದಸ್ತ್ವಂ ಸರ್ವತೋಕ್ಷಿಶಿರೋಮುಖಃ|
13015041c ಸರ್ವತಃಶ್ರುತಿಮಾಽಲ್ಲೋಕೇ ಸರ್ವಮಾವೃತ್ಯ ತಿಷ್ಠಸಿ||
ನಿನಗೆ ಎಲ್ಲ ಕಡೆಗಳಲ್ಲಿ ಕೈಗಳು, ಕಾಲುಗಳು, ಶಿರಸ್ಸುಗಳು ಮತ್ತು ಮುಖಗಳಿವೆ. ಲೋಕದಲ್ಲಿ ಎಲ್ಲವನ್ನೂ ಕೇಳುತ್ತಾ ಸರ್ವವನ್ನೂ ಆವರಿಸಿ ನಿಂತಿರುವೆ.
13015042a ಫಲಂ ತ್ವಮಸಿ ತಿಗ್ಮಾಂಶೋ ನಿಮೇಷಾದಿಷು ಕರ್ಮಸು|
13015042c ತ್ವಂ ವೈ ಪ್ರಭಾರ್ಚಿಃ ಪುರುಷಃ ಸರ್ವಸ್ಯ ಹೃದಿ ಸಂಸ್ಥಿತಃ||
13015042e ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ||
ತಿಗ್ಮಾಂಶುವೇ! ಕಣ್ಣು ಮುಚ್ಚಿ-ತೆರೆಯುವ ಎಲ್ಲ ಕರ್ಮಗಳಿಗೂ ನೀನು ಫಲವನ್ನು ನೀಡುತ್ತೀಯೆ. ನೀನು ಸರ್ವರ ಹೃದಯದಲ್ಲಿರುವ ಪ್ರಭೆಯನ್ನು ಸೂಸುವ ಪುರುಷನು. ಅಣಿಮಾ-ಲಘಿಮಾಗಳ ಪ್ರಾಪ್ತಿಯೂ ಈಶಾನನೂ ಅವ್ಯಯ ಜ್ಯೋತಿಯೂ ನೀನೇ.
13015043a ತ್ವಯಿ ಬುದ್ಧಿರ್ಮತಿರ್ಲೋಕಾಃ ಪ್ರಪನ್ನಾಃ ಸಂಶ್ರಿತಾಶ್ಚ ಯೇ|
13015043c ಧ್ಯಾನಿನೋ ನಿತ್ಯಯೋಗಾಶ್ಚ ಸತ್ಯಸಂಧಾ ಜಿತೇಂದ್ರಿಯಾಃ||
ನಿನ್ನಲ್ಲಿ ಬುದ್ಧಿ, ಮತಿ ಮತ್ತು ಲೋಕಗಳು ಪ್ರಪನ್ನಗೊಂಡು ಆಶ್ರಯಿಸಿವೆ. ನಿನ್ನಲ್ಲಿಯೇ ಧ್ಯಾನಿಗಳೂ, ನಿತ್ಯಯೋಗಿಗಳೂ, ಸತ್ಯಸಂಧ ಜಿತೇಂದ್ರಿಯರೂ ಆಶ್ರಿತರಾಗಿದ್ದಾರೆ.
13015044a ಯಸ್ತ್ವಾಂ ಧ್ರುವಂ ವೇದಯತೇ ಗುಹಾಶಯಂ
ಪ್ರಭುಂ ಪುರಾಣಂ ಪುರುಷಂ ವಿಶ್ವರೂಪಮ್|
13015044c ಹಿರಣ್ಮಯಂ ಬುದ್ಧಿಮತಾಂ ಪರಾಂ ಗತಿಂ
ಸ ಬುದ್ಧಿಮಾನ್ಬುದ್ಧಿಮತೀತ್ಯ ತಿಷ್ಠತಿ||
ಯಾರು ನಿನ್ನನ್ನು ಗುಹಾಶಯನಾಗಿರುವ ಧ್ರುವ, ಪ್ರಭು, ಪುರಾಣ, ಪುರುಷ, ವಿಶ್ವರೂಪ, ಹಿರಣ್ಮಯ, ಮತ್ತು ಬುದ್ಧಿವಂತರ ಪರಮಗತಿಯೆಂದು ತಿಳಿದುಕೊಳ್ಳುತ್ತಾನೋ ಆ ಬುದ್ಧಿವಂತನು ಬುದ್ಧಿಯನ್ನು ದಾಟಿ ನಿಲ್ಲುತ್ತಾನೆ.
13015045a ವಿದಿತ್ವಾ ಸಪ್ತ ಸೂಕ್ಷ್ಮಾಣಿ ಷಡಂಗಂ ತ್ವಾಂ ಚ ಮೂರ್ತಿತಃ|
13015045c ಪ್ರಧಾನವಿಧಿಯೋಗಸ್ಥಸ್ತ್ವಾಮೇವ ವಿಶತೇ ಬುಧಃ||
ನಿನ್ನ ಸಪ್ತಸೂಕ್ಷ್ಮಗಳನ್ನೂ[1], ಷಡಂಗಗಳನ್ನೂ[2] ತಿಳಿದ ಬುಧನು ಪ್ರಧಾನವಿಧಿಯೋಗಸ್ಥನಾಗಿ ಮೂರ್ತಿತಃ ನಿನ್ನನ್ನೇ ಪ್ರವೇಶಿಸುತ್ತಾನೆ.”
13015046a ಏವಮುಕ್ತೇ ಮಯಾ ಪಾರ್ಥ ಭವೇ ಚಾರ್ತಿವಿನಾಶನೇ|
13015046c ಚರಾಚರಂ ಜಗತ್ಸರ್ವಂ ಸಿಂಹನಾದಮಥಾಕರೋತ್||
ಪಾರ್ಥ! ಆರ್ತಿವಿನಾಶನ ಭವನಿಗೆ ನಾನು ಹೀಗೆ ಹೇಳಲು ಚರಾಚರಜಗತ್ಸರ್ವವೂ ಸಿಂಹನಾದಗೈಯಿತು.
13015047a ಸವಿಪ್ರಸಂಘಾಶ್ಚ ಸುರಾಸುರಾಶ್ಚ
ನಾಗಾಃ ಪಿಶಾಚಾಃ ಪಿತರೋ ವಯಾಂಸಿ|
13015047c ರಕ್ಷೋಗಣಾ ಭೂತಗಣಾಶ್ಚ ಸರ್ವೇ
ಮಹರ್ಷಯಶ್ಚೈವ ತಥಾ ಪ್ರಣೇಮುಃ||
ವಿಪ್ರಸಂಘಗಳೂ, ಸುರಾಸುರರೂ, ನಾಗಗಳೂ, ಪಿಶಾಚರೂ, ಪಿತೃಗಳೂ, ಪಕ್ಷಿಗಳೂ, ರಾಕ್ಷಸಗಣಗಳೂ, ಭೂತಗಣಗಳೂ, ಸರ್ವ ಮಹರ್ಷಿಗಳೂ ಈಶ್ವರನನ್ನು ನಮಸ್ಕರಿದವು.
13015048a ಮಮ ಮೂರ್ಧ್ನಿ ಚ ದಿವ್ಯಾನಾಂ ಕುಸುಮಾನಾಂ ಸುಗಂಧಿನಾಮ್|
13015048c ರಾಶಯೋ ನಿಪತಂತಿ ಸ್ಮ ವಾಯುಶ್ಚ ಸುಸುಖೋ ವವೌ||
ಸುಗಂಧಯುಕ್ತ ದಿವ್ಯ ಕುಸುಮಗಳ ರಾಶಿಗಳು ನನ್ನ ನೆತ್ತಿಯ ಮೇಲೆ ಸುರಿದವು. ಸುಖಾವಹ ಗಾಳಿಯು ಬೀಸಿತು.
13015049a ನಿರೀಕ್ಷ್ಯ ಭಗವಾನ್ದೇವೀಮುಮಾಂ ಮಾಂ ಚ ಜಗದ್ಧಿತಃ|
13015049c ಶತಕ್ರತುಂ ಚಾಭಿವೀಕ್ಷ್ಯ ಸ್ವಯಂ ಮಾಮಾಹ ಶಂಕರಃ||
ಭಗವಾನ್ ಜಗದ್ಧಿತ ಶಂಕರನು ದೇವೀ ಉಮೆಯನ್ನೂ, ನನ್ನನ್ನೂ, ಶತಕ್ರತುವನ್ನೂ ವೀಕ್ಷಿಸಿ ಸ್ವಯಂ ನನಗೆ ಇಂದೆಂದನು:
13015050a ವಿದ್ಮಃ ಕೃಷ್ಣ ಪರಾಂ ಭಕ್ತಿಮಸ್ಮಾಸು ತವ ಶತ್ರುಹನ್|
13015050c ಕ್ರಿಯತಾಮಾತ್ಮನಃ ಶ್ರೇಯಃ ಪ್ರೀತಿರ್ಹಿ ಪರಮಾ ತ್ವಯಿ||
“ಕೃಷ್ಣ! ಶತ್ರುಹನ್! ನಿನಗೆ ನಮ್ಮ ಮೇಲಿರುವ ಪರಮ ಭಕ್ತಿಯನ್ನು ತಿಳಿದಿದ್ದೇವೆ. ನಿನಗೆ ಶ್ರೇಯವಾದುದನ್ನು ಮಾಡಿಸಿಕೋ! ನಿನ್ನಮೇಲೆ ಪರಮ ಪ್ರೀತಿಯಿದೆ.
13015051a ವೃಣೀಷ್ವಾಷ್ಟೌ ವರಾನ್ಕೃಷ್ಣ ದಾತಾಸ್ಮಿ ತವ ಸತ್ತಮ|
3015051c ಬ್ರೂಹಿ ಯಾದವಶಾರ್ದೂಲ ಯಾನಿಚ್ಚಸಿ ಸುದುರ್ಲಭಾನ್||
ಕೃಷ್ಣ! ಸತ್ತಮ! ಎಂಟು ವರಗಳನ್ನು ಕೇಳಿಕೋ! ನಿನಗೆ ನೀಡುತ್ತೇನೆ. ಯಾದವಶಾರ್ದೂಲ! ಸುದುರ್ಲಭವಾದ ಏನನ್ನು ಬಯಸುತ್ತೀಯೋ ಅದನ್ನು ಹೇಳು!””
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮೇಘವಾಹನಪರ್ವಾಖ್ಯಾನೇ ಪಂಚದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮೇಘವಾಹನಪರ್ವಾಖ್ಯಾನ ಎನ್ನುವ ಹದಿನೈದನೇ ಅಧ್ಯಾಯವು.
[1] ಮಹತ್ತತ್ವ, ಅಹಂಕಾರ ಮತ್ತು ಮಂಚತನ್ಮಾತ್ರಗಳೇ ಮಹೇಶ್ವರನ ಏಳು ಸೂಕ್ಷ್ಮಗಳು.
[2] ಸರ್ವಜ್ಞತೆ, ತೃಪ್ತಿ, ಅನಾದಿಬೋಧ, ಸ್ವತಂತ್ರತೆ, ಅಲುಪ್ತಶಕ್ತಿ, ಮತ್ತು ಅನಂತಶಕ್ತಿ ಇವು ಮಹೇಶ್ವರನ ಷಡಂಗಗಳು.