ಅನುಶಾಸನ ಪರ್ವ: ದಾನಧರ್ಮ ಪರ್ವ
೧೪೯
ಯುಧಿಷ್ಠಿರ ಪ್ರಶ್ನೆ
13149001 ಯುಧಿಷ್ಠಿರ ಉವಾಚ|
13149001a ನಾಭಾಗಧೇಯಃ ಪ್ರಾಪ್ನೋತಿ ಧನಂ ಸುಬಲವಾನಪಿ|
13149001c ಭಾಗಧೇಯಾನ್ವಿತಸ್ತ್ವರ್ಥಾನ್ ಕೃಶೋ ಬಾಲಶ್ಚ ವಿಂದತಿ||
ಯುಧಿಷ್ಠಿರನು ಹೇಳಿದನು: “ನಿರ್ಭಾಗ್ಯನು ಬಲಿಷ್ಠನಾಗಿದ್ದರೂ ಧನವನ್ನು ಹೊಂದುವುದಿಲ್ಲ. ಭಾಗ್ಯಶಾಲಿಯಾದವನು ದುರ್ಬಲನಾಗಿದ್ದರೂ ಮೂರ್ಖನಾಗಿದ್ದರೂ ವಿಪುಲ ಧನವನ್ನು ಹೊಂದುತ್ತಾನೆ.
13149002a ನಾಲಾಭಕಾಲೇ ಲಭತೇ ಪ್ರಯತ್ನೇಽಪಿ ಕೃತೇ ಸತಿ|
13149002c ಲಾಭಕಾಲೇಽಪ್ರಯತ್ನೇನ ಲಭತೇ ವಿಪುಲಂ ಧನಮ್|
13149002e ಕೃತಯತ್ನಾಫಲಾಶ್ಚೈವ ದೃಶ್ಯಂತೇ ಶತಶೋ ನರಾಃ[1]||
ಲಾಭದ ಕಾಲವಲ್ಲದಿದ್ದರೆ ಎಷ್ಟೇ ಪ್ರಯತ್ನಪಟ್ಟರೂ ಅದು ದೊರಕುವುದಿಲ್ಲ. ಲಾಭದ ಕಾಲವಾಗಿದ್ದರೆ ಪ್ರಯತ್ನಪಡದಿದ್ದರೂ ವಿಪುಲ ಧನವು ದೊರೆಯುತ್ತದೆ. ಪ್ರಯತ್ನಿಸಿದರೂ ಫಲವನ್ನೇ ಹೊಂದದಿರುವ ನೂರಾರು ಜನರನ್ನು ಕಾಣುತ್ತೇವೆ.
13149003a ಯದಿ ಯತ್ನೋ ಭವೇನ್ಮರ್ತ್ಯಃ ಸ ಸರ್ವಂ ಫಲಮಾಪ್ನುಯಾತ್|
13149003c ನಾಲಭ್ಯಂ ಚೋಪಲಭ್ಯೇತ ನೃಣಾಂ ಭರತಸತ್ತಮ||
ಭರತಸತ್ತಮ! ಪ್ರಯತ್ನಮಾತ್ರದಿಂದಲೇ ಎಲ್ಲವೂ ಫಲಿಸುವುದಾಗಿದ್ದರೆ ಅಥವಾ ಪ್ರಯತ್ನಕ್ಕೆ ಫಲವು ಅನಿವಾರ್ಯವಾಗಿದ್ದರೆ ಮನುಷ್ಯನು ಎಲ್ಲ ಫಲಗಳನ್ನು ಪಡೆದುಕೊಂಡುಬಿಡುತ್ತಿದ್ದನು. ಆದರೆ ಮನುಷ್ಯನಿಗೆ ಪ್ರಾರಬ್ಧವಶದಿಂದ ಯಾವ ವಸ್ತುವು ಅಲಭ್ಯವೋ ಅದು ಬಹಳ ಪ್ರಯತ್ನಪಟ್ಟರೂ ದೊರೆಯುವುದಿಲ್ಲ.
13149004a ಯದಾ ಪ್ರಯತ್ನಂ ಕೃತವಾನ್[2] ದೃಶ್ಯತೇ ಹ್ಯಫಲೋ ನರಃ|
13149004c ಮಾರ್ಗನ್ನಯಶತೈರರ್ಥಾನಮಾರ್ಗಂಶ್ಚಾಪರಃ ಸುಖೀ||
ಪ್ರಯತ್ನಪಡುವ ನರನೂ ಅಫಲನಾಗುವುದು ಕಾಣುತ್ತದೆ. ಒಬ್ಬನು ನೂರಾರು ಮಾರ್ಗಗಳನ್ನು ಬಳಸಿದರೂ ಧನಸಂಗ್ರಹದಲ್ಲಿ ಯಶಸ್ವಿಯಾಗುವುದಿಲ್ಲ. ಇನ್ನೊಬ್ಬನು ಯಾವ ಮಾರ್ಗವನ್ನೂ ಬಳಸದೆಯೂ ಧನವನ್ನು ಪಡೆದು ಸುಖಿಯಾಗಿರುತ್ತಾನೆ.
13149005a ಅಕಾರ್ಯಮಸಕೃತ್ಕೃತ್ವಾ ದೃಶ್ಯಂತೇ ಹ್ಯಧನಾ ನರಾಃ|
13149005c ಧನಯುಕ್ತಾಸ್ತ್ವಧರ್ಮಸ್ಥಾ[3] ದೃಶ್ಯಂತೇ ಚಾಪರೇ ಜನಾಃ||
ಮಾಡಬಾರದ್ದುದನ್ನು ಮಾಡಿ ನರರು ಅಧನರಾಗಿರುವುದು ಕಾಣುತ್ತದೆ. ಇನ್ನು ಕೆಲವು ಜನರು ಸ್ವಧರ್ಮದಲ್ಲಿದ್ದುಕೊಂಡು ಧನಯುಕ್ತರಾಗಿರುವುದು ಕಾಣುತ್ತದೆ.
13149006a ಅಧೀತ್ಯ ನೀತಿಂ ಯಸ್ಮಾಚ್ಚ[4] ನೀತಿಯುಕ್ತೋ ನ ದೃಶ್ಯತೇ|
13149006c ಅನಭಿಜ್ಞಶ್ಚ ಸಾಚಿವ್ಯಂ ಗಮಿತಃ ಕೇನ ಹೇತುನಾ|
13149006e ವಿದ್ಯಾಯುಕ್ತೋ ಹ್ಯವಿದ್ಯಶ್ಚ ಧನವಾನ್ದುರ್ಗತಸ್ತಥಾ[5]||
ನೀತಿಶಾಸ್ತ್ರದಲ್ಲಿ ಪಂಡಿತನಾಗಿದ್ದವನೂ ನೀತಿಯುಕ್ತನಾಗದೇ ಇರುವುದು ಕಾಣುತ್ತದೆ. ನೀತಿಶಾಸ್ತ್ರವನ್ನು ತಿಳಿಯದೇ ಇದ್ದವನು ಸಚಿವನಾಗುತ್ತಾನೆ. ಈ ರೀತಿಯ ವಿಪರ್ಯಾಸಕ್ಕೆ ಕಾರಣವೇನು? ವಿದ್ಯಾವಂತನೂ, ಅವಿದ್ಯಾವಂತನೂ, ದುರ್ಗತಿಯುಳ್ಳವನೂ ಧನವಾನರಾಗಿರುವುದನ್ನು ನೋಡುತ್ತೇವೆ.
13149007a ಯದಿ ವಿದ್ಯಾಮುಪಾಶ್ರಿತ್ಯ ನರಃ ಸುಖಮವಾಪ್ನುಯಾತ್|
13149007c ನ ವಿದ್ವಾನ್ವಿದ್ಯಯಾ ಹೀನಂ ವೃತ್ತ್ಯರ್ಥಮುಪಸಂಶ್ರಯೇತ್||
ಒಂದುವೇಳೆ ವಿದ್ಯೆಯನ್ನಾಶ್ರಯಿಸಿ ನರನು ಸುಖವನ್ನು ಹೊಂದುತ್ತಾನೆ ಎಂದಾದರೆ ವಿದ್ವಾನನು ಅವಿದ್ಯಾವಂತನಾದ ಹೀನನನ್ನು ಜೀವನ ವೃತ್ತಿಗಾಗಿ ಆಶ್ರಯಿಸಬೇಕಾಗಿರುತ್ತಿರಲಿಲ್ಲ.
13149008a ಯಥಾ ಪಿಪಾಸಾಂ ಜಯತಿ ಪುರುಷಃ ಪ್ರಾಪ್ಯ ವೈ ಜಲಮ್|
13149008c ದೃಷ್ಟಾರ್ಥೋ ವಿದ್ಯಯಾಪ್ಯೇವಮವಿದ್ಯಾಂ ಪ್ರಜಹೇನ್ನರಃ[6]||
ಮನುಷ್ಯನು ಹೇಗೆ ನೀರನ್ನು ಪಡೆದು ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳುತ್ತಾನೋ ಹಾಗೆ ವಿದ್ಯೆಯಿಂದ ಎಲ್ಲವನ್ನೂ ಪಡೆದುಕೊಳ್ಳಬಹುದಾಗಿದ್ದರೆ ಜನರು ಮೊದಲು ಅವಿದ್ಯೆಯನ್ನು ಹೋಗಲಾಡಿಸಿಕೊಳ್ಳುತ್ತಿದ್ದರು.
13149009a ನಾಪ್ರಾಪ್ತಕಾಲೋ ಮ್ರಿಯತೇ ವಿದ್ಧಃ ಶರಶತೈರಪಿ|
13149009c ತೃಣಾಗ್ರೇಣಾಪಿ ಸಂಸ್ಪೃಷ್ಟಃ ಪ್ರಾಪ್ತಕಾಲೋ ನ ಜೀವತಿ||
ಕಾಲವು ಪ್ರಾಪ್ತವಾಗದೇ ಇದ್ದಾಗ ನೂರಾರು ಶರಗಳಿಂದ ಗಾಯಗೊಂಡರೂ ಸಾಯುವುದಿಲ್ಲ. ಆದರೆ ಕಾಲವು ಪ್ರಾಪ್ತವಾಯಿತೆಂದರೆ ಹುಲ್ಲಿನ ತುದಿಯ ಸ್ಪರ್ಷಮಾತ್ರದಿಂದಲೇ ಸತ್ತುಹೋಗುತ್ತಾನೆ.”
13149010 ಭೀಷ್ಮ ಉವಾಚ|
13149010a ಈಹಮಾನಃ ಸಮಾರಂಭಾನ್ಯದಿ ನಾಸಾದಯೇದ್ಧನಮ್|
13149010c ಉಗ್ರಂ ತಪಃ ಸಮಾರೋಹೇನ್ನ ಹ್ಯನುಪ್ತಂ ಪ್ರರೋಹತಿ||
ಭೀಷ್ಮನು ಹೇಳಿದನು: “ಧನವನ್ನಪೇಕ್ಷಿಸಿ ನಾನಾಪ್ರಕಾರದ ಕಾರ್ಯಗಳನ್ನು ಮಾಡಿಯೂ ಧನವನ್ನು ಪಡೆಯಲಾಗದಿದ್ದರೆ ಉಗ್ರ ತಪಸ್ಸನ್ನಾದರೂ ಮಾಡಬೇಕು. ಬೀಜವನ್ನು ಬಿತ್ತದೇ ಮೊಳಕೆಯಾಗುವುದಿಲ್ಲ ತಾನೇ?
13149011a ದಾನೇನ ಭೋಗೀ ಭವತಿ ಮೇಧಾವೀ ವೃದ್ಧಸೇವಯಾ|
13149011c ಅಹಿಂಸಯಾ ಚ ದೀರ್ಘಾಯುರಿತಿ ಪ್ರಾಹುರ್ಮನೀಷಿಣಃ||
ದಾನದಿಂದ ಭೋಗಿಯಾಗುತ್ತಾನೆ. ವೃದ್ಧರ ಸೇವೆಯಿಂದ ಮೇಧಾವಿಯಾಗುತ್ತಾನೆ. ಅಹಿಂಸೆಯಿಂದ ದೀರ್ಘಾಯುವಾಗುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ.
13149012a ತಸ್ಮಾದ್ದದ್ಯಾನ್ನ ಯಾಚೇತ ಪೂಜಯೇದ್ಧಾರ್ಮಿಕಾನಪಿ|
13149012c ಸ್ವಾಭಾಷೀ ಪ್ರಿಯಕೃಚ್ಚುದ್ಧಃ ಸರ್ವಸತ್ತ್ವಾವಿಹಿಂಸಕಃ||
ಆದುದರಿಂದ ದಾನಮಾಡಬೇಕು. ಯಾಚಿಸಬಾರದು. ಧಾರ್ಮಿಕರನ್ನು ಪೂಜಿಸಬೇಕು. ಎಲ್ಲರೊಡನೆಯೂ ಒಳ್ಳೆಯ ಮಾತನ್ನಾಡಬೇಕು. ಇತರರಿಗೆ ಪ್ರಿಯವಾದುದನ್ನೇ ಮಾಡಬೇಕು. ಸರ್ವಸತ್ತ್ವಗಳನ್ನೂ ಹಿಂಸಿಸಬಾರದು.
13149013a ಯದಾ ಪ್ರಮಾಣಪ್ರಭವಃ ಸ್ವಭಾವಶ್ಚ ಸುಖಾಸುಖೇ|
13149013c ಮಶಕೀಟಪಿಪೀಲಾನಾಂ ಸ್ಥಿರೋ ಭವ ಯುಧಿಷ್ಠಿರ||
ಯುಧಿಷ್ಠಿರ! ನೊಣ, ಕೀಟ, ಇರುವೆ ಮೊದಲಾದ ಜೀವಿಗಳೆಲ್ಲಕ್ಕೂ ಅವುಗಳ ಹುಟ್ಟು, ಸ್ವಭಾವ ಮತ್ತು ಸುಖ-ದುಃಖಗಳೇ ಅವುಗಳ ಕರ್ಮಕ್ಕೆ ಪ್ರಮಾಣಭೂತವಾಗಿರುವಾಗ ನೀನೇಕೆ ಈ ವಿಷಯದಲ್ಲಿ ಗೊಂದಲಕ್ಕೊಳಗಾಗಿದ್ದೀಯೆ? ಸ್ಥಿರನಾಗು!”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಧರ್ಮಪ್ರಶಂಸಾಯಾಂ ಏಕೋನಪಂಚಾಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಧರ್ಮಪ್ರಶಂಸಾ ಎನ್ನುವ ನೂರಾನಲ್ವತ್ತೊಂಭತ್ತನೇ ಅಧ್ಯಾಯವು.
[1] ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಅಯತ್ನೇನೈಧಮಾನಾಶ್ಚ ದೃಶ್ಯಂತೇ ಬಹವೋ ಜನಾಃ||
[2] ಪ್ರಯತ್ನಂ ಕೃತವಂತೋಽಪಿ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಸ್ವಕರ್ಮಸ್ಥಾ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಅಧೀತ್ಯ ನೀತಿಶಾಸ್ತ್ರಾಣಿ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಧನವಾನ್ದುರ್ಮತಿಸ್ತಥಾ ಎಂಬ ಪಾಠಾಂತರವಿದೆ (ಭರತ ದರ್ಶನ).
[6] ಇಷ್ಟಾರ್ಥೋ ವಿದ್ಯಯಾ ಹ್ಯೇವ ನ ವಿದ್ಯಾಂ ಪ್ರಜಹೇನ್ನರಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).