Anushasana Parva: Chapter 147

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೭

ಧರ್ಮನಿರ್ಣಯ

ಧರ್ಮದ ವಿಷಯದಲ್ಲಿ ವೇದಪ್ರಮಾಣದ ಶ್ರೇಷ್ಠತೆ (1-25).

13147001 ವೈಶಂಪಾಯನ ಉವಾಚ|

13147001a ಇತ್ಯುಕ್ತವತಿ ವಾಕ್ಯಂ ತು ಕೃಷ್ಣೇ ದೇವಕಿನಂದನೇ|

13147001c ಭೀಷ್ಮಂ ಶಾಂತನವಂ ಭೂಯಃ ಪರ್ಯಪೃಚ್ಚದ್ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ದೇವಕಿನಂದನ ಕೃಷ್ಣನು ಹೀಗೆ ಹೇಳಲು ಯುಧಿಷ್ಠಿರನು ಭೀಷ್ಮ ಶಾಂತನವನನ್ನು ಪುನಃ ಕೇಳಿದನು:

13147002a ನಿರ್ಣಯೇ ವಾ ಮಹಾಬುದ್ಧೇ ಸರ್ವಧರ್ಮಭೃತಾಂ ವರ|

13147002c ಪ್ರತ್ಯಕ್ಷಮಾಗಮೋ ವೇತಿ ಕಿಂ ತಯೋಃ ಕಾರಣಂ ಭವೇತ್||

“ಮಹಾಬುದ್ಧೇ! ಸರ್ವಧರ್ಮಭೃತರಲ್ಲಿ ಶ್ರೇಷ್ಠ! ಧರ್ಮವನ್ನು ನಿರ್ಣಯಿಸುವಾಗ ಪ್ರತ್ಯಕ್ಷ ಪ್ರಮಾಣ ಮತ್ತು ಆಗಮ ಶಾಸ್ತ್ರಗಳು ಇವುಗಳಲ್ಲಿ ಯಾವುದನ್ನು ಏಕೆ ಆಶ್ರಯಿಸಬೇಕು?”

13147003 ಭೀಷ್ಮ ಉವಾಚ|

13147003a ನಾಸ್ತ್ಯತ್ರ ಸಂಶಯಃ ಕಶ್ಚಿದಿತಿ ಮೇ ವರ್ತತೇ ಮತಿಃ|

13147003c ಶೃಣು ವಕ್ಷ್ಯಾಮಿ ತೇ ಪ್ರಾಜ್ಞ ಸಮ್ಯಕ್ತ್ವಮನುಪೃಚ್ಚಸಿ||

ಭೀಷ್ಮನು ಹೇಳಿದನು: “ಪ್ರಾಜ್ಞ! ಈ ವಿಷಯದಲ್ಲಿ ಸಂಶಯವೆನ್ನುವುದೇ ಇಲ್ಲ ಎಂದು ನನ್ನ ಬುದ್ಧಿಯು ಹೇಳುತ್ತದೆ. ನಿನ್ನ ಪ್ರಶ್ನೆಯು ಚೆನ್ನಾಗಿಯೇ ಇದೆ. ಹೇಳುತ್ತೇನೆ. ಕೇಳು.

13147004a ಸಂಶಯಃ ಸುಗಮೋ ರಾಜನ್ನಿರ್ಣಯಸ್ತ್ವತ್ರ ದುರ್ಗಮಃ|

13147004c ದೃಷ್ಟಂ ಶ್ರುತಮನಂತಂ ಹಿ ಯತ್ರ ಸಂಶಯದರ್ಶನಮ್||

ರಾಜನ್! ಧರ್ಮದ ವಿಷಯದಲ್ಲಿ ಸಂಶಯಪಡುವುದು ಸುಲಭ. ಆದರೆ ಅದನ್ನು ನಿರ್ಣಯಿಸುವುದು ಕಷ್ಟಕರವಾದುದು. ಪ್ರತ್ಯಕ್ಷ ಪ್ರಮಾಣ ಮತ್ತು ಆಗಮ ಶಾಸ್ತ್ರಗಳು ಇವೆರಡೂ ಅನಂತವಾದವುಗಳು. ಇವೆರಡರ ಕುರಿತೂ ಸಂದೇಹಗಳುಂಟಾಗುತ್ತವೆ.

13147005a ಪ್ರತ್ಯಕ್ಷಂ ಕಾರಣಂ ದೃಷ್ಟಂ ಹೇತುಕಾಃ ಪ್ರಾಜ್ಞಮಾನಿನಃ|

13147005c ನಾಸ್ತೀತ್ಯೇವಂ ವ್ಯವಸ್ಯಂತಿ ಸತ್ಯಂ ಸಂಶಯಮೇವ ಚ|

13147005e ತದಯುಕ್ತಂ ವ್ಯವಸ್ಯಂತಿ ಬಾಲಾಃ ಪಂಡಿತಮಾನಿನಃ||

ತಮ್ಮನ್ನು ಪ್ರಾಜ್ಞರೆಂದು ತಿಳಿದುಕೊಳ್ಳುವ ತಾರ್ಕಿಕರು ಪ್ರತ್ಯಕ್ಷವಾಗಿ ಕಾಣುವ ಕಾರಣಗಳ ಮೇಲೇ ತಮ್ಮ ದೃಷ್ಟಿಯನ್ನಿಟ್ಟಿರುತ್ತಾರೆ. ಪರೋಕ್ಷ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸತ್ಯವಾಗಿರುವುದನ್ನೂ ನಾಸ್ತಿ ಎಂದು ಸಂಶಯಪಡುತ್ತಿರುತ್ತಾರೆ. ಆದರೆ ಅವರು ಬಾಲಕರು. ಅಹಂಕಾರವಶರಾಗಿ ತಮ್ಮನ್ನು ತಾವು ಪಂಡಿತರೆಂದು ತಿಳಿದಿರುತ್ತಾರೆ[1].

13147006a ಅಥ ಚೇನ್ಮನ್ಯಸೇ ಚೈಕಂ ಕಾರಣಂ ಕಿಂ ಭವೇದಿತಿ|

13147006c ಶಕ್ಯಂ ದೀರ್ಘೇಣ ಕಾಲೇನ ಯುಕ್ತೇನಾತಂದ್ರಿತೇನ ಚ|

13147006e ಪ್ರಾಣಯಾತ್ರಾಮನೇಕಾಂ ಚ ಕಲ್ಪಯಾನೇನ ಭಾರತ||

ಭಾರತ! ಅಪ್ರತ್ಯಕ್ಷವಾದ ಏಕಮಾತ್ರ ಬ್ರಹ್ಮವಸ್ತುವು ಎಲ್ಲಕ್ಕೂ ಕಾರಣವು ಹೇಗಾಗುತ್ತದೆ ಎಂಬ ಶಂಕೆಗೆ ಪರಿಹಾರವನ್ನು ದೀರ್ಘಕಾಲ ಆಲಸ್ಯವನ್ನು ತೊರೆದು ಯೋಗಯುಕ್ತನಾಗಿ ನಿರಂತರ ಪ್ರಯತ್ನಪಟ್ಟರೇ ಕಂಡುಕೊಳ್ಳಬಹುದು.

13147007a ತತ್ಪರೇಣೈವ ನಾನ್ಯೇನ ಶಕ್ಯಂ ಹ್ಯೇತತ್ತು ಕಾರಣಮ್|

13147007c ಹೇತೂನಾಮಂತಮಾಸಾದ್ಯ ವಿಪುಲಂ ಜ್ಞಾನಮುತ್ತಮಮ್|

13147007e ಜ್ಯೋತಿಃ ಸರ್ವಸ್ಯ ಲೋಕಸ್ಯ ವಿಪುಲಂ ಪ್ರತಿಪದ್ಯತೇ||

ಬೇರೆ ಯಾವುದೂ ಅಲ್ಲದೇ ಬ್ರಹ್ಮಸಾಕ್ಷಾತ್ಕಾರದಲ್ಲಿಯೇ ತತ್ಪರನಾಗಿದ್ದರೆ ಮಾತ್ರ ಆ ಏಕಮಾತ್ರ ಅನಂತ ಕಾರಣವನ್ನು ಕಂಡು ವಿಪುಲ ಉತ್ತಮ ಜ್ಞಾನವನ್ನು ಪಡೆಯಲು ಸಾಧ್ಯ. ಆ ಜ್ಞಾನವೇ ಸರ್ವ ಲೋಕಗಳಿಗೂ ವಿಪುಲ ಜ್ಯೋತಿಯಾಗಿದೆ.

13147008a ತತ್ತ್ವೇನಾಗಮನಂ ರಾಜನ್ ಹೇತ್ವಂತಗಮನಂ ತಥಾ|

13147008c ಅಗ್ರಾಹ್ಯಮನಿಬದ್ಧಂ ಚ ವಾಚಃ ಸಂಪರಿವರ್ಜನಮ್||

ರಾಜನ್! ತರ್ಕದಿಂದ ಪಡೆಯುವ ಜ್ಞಾನವು ನಿಶ್ಚಯವಾಗಿಯೂ ಜ್ಞಾನವೇ ಅಲ್ಲ. ಆದುದರಿಂದ ತರ್ಕಗಮ್ಯವಾದ ಜ್ಞಾನಕ್ಕೆ ಮಾನ್ಯತೆಯನ್ನು ಕೊಡಬಾರದು. ವೇದಗಳು ಪ್ರತಿಪಾದಿಸದೇ ಇರುವವುಗಳನ್ನು ಪರಿತ್ಯಜಿಸಬೇಕು.”

13147009 ಯುಧಿಷ್ಠಿರ ಉವಾಚ|

13147009a ಪ್ರತ್ಯಕ್ಷಂ ಲೋಕತಃ ಸಿದ್ಧಂ ಲೋಕಾಶ್ಚಾಗಮಪೂರ್ವಕಾಃ|

13147009c ಶಿಷ್ಟಾಚಾರೋ ಬಹುವಿಧೋ ಬ್ರೂಹಿ ತನ್ಮೇ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪ್ರತ್ಯಕ್ಷಪ್ರಮಾಣವು ಲೋಕತಃ ಸಿದ್ಧವಾಗಿದೆ. ಲೋಕಗಳಲ್ಲಿ ಆಗಮಪೂರ್ವಕ, ಶಿಷ್ಟಾಚಾರ ಮೊದಲಾದ ಅನೇಕ ವಿಧದ ಪ್ರಮಾಣಗಳೂ ಇವೆ. ಇವುಗಳಲ್ಲಿ ಯಾವುದು ಪ್ರಬಲವಾದುದು ಅದನ್ನು ನನಗೆ ಹೇಳು.”

13147010 ಭೀಷ್ಮ ಉವಾಚ|

13147010a ಧರ್ಮಸ್ಯ ಹ್ರಿಯಮಾಣಸ್ಯ ಬಲವದ್ಭಿರ್ದುರಾತ್ಮಭಿಃ|

13147010c ಸಂಸ್ಥಾ ಯತ್ನೈರಪಿ ಕೃತಾ ಕಾಲೇನ ಪರಿಭಿದ್ಯತೇ||

ಭೀಷ್ಮನು ಹೇಳಿದನು: “ಬಲಿಷ್ಠ ದುರಾತ್ಮರು ಧರ್ಮಕ್ಕೆ ಹಾನಿಯನ್ನುಂಟುಮಾಡ ತೊಡಗಿದರೆ ಸಾಮಾನ್ಯ ಜನರು ಧರ್ಮವನ್ನು ರಕ್ಷಿಸಲು ಮಾಡಿದ ಪ್ರಯತ್ನಗಳೂ ಬಹುಬೇಗ ವಿಪಲವಾಗುತ್ತವೆ.

13147011a ಅಧರ್ಮಾ ಧರ್ಮರೂಪೇಣ ತೃಣೈಃ ಕೂಪಾ ಇವಾವೃತಾಃ|

13147011c ತತಸ್ತೈರ್ಭಿದ್ಯತೇ ವೃತ್ತಂ ಶೃಣು ಚೈವ ಯುಧಿಷ್ಠಿರ||

ಯುಧಿಷ್ಠಿರ! ಹುಲ್ಲು ಮುಚ್ಚಿದ ಬಾವಿಯಂತೆ ಅಧರ್ಮವು ಧರ್ಮದ ಹೊದಿಕೆಯನ್ನು ಹೊದೆದುಕೊಂಡಿರುತ್ತದೆ. ಆಗ ದುರಾಚಾರಿಗಳು ಶಿಷ್ಟಾಚಾರಗಳನ್ನು ಒಡೆಯುತ್ತಾರೆ. ಇದರ ಕುರಿತು ಇನ್ನೂ ಕೇಳು.

13147012a ಅವೃತ್ತ್ಯಾ ಯೇ ಚ ಭಿಂದಂತಿ ಶ್ರುತತ್ಯಾಗಪರಾಯಣಾಃ|

13147012c ಧರ್ಮವಿದ್ವೇಷಿಣೋ ಮಂದಾ ಇತ್ಯುಕ್ತಸ್ತೇಷು ಸಂಶಯಃ||

ಆಚಾರಹೀನ, ವೇದ-ಶಾಸ್ತ್ರಗಳನ್ನು ತ್ಯಜಿಸಿರುವ, ಧರ್ಮದ್ವೇಷೀ ಮೂರ್ಖರು ಸಜ್ಜನರು ಅನುಸರಿಸುವ ಧರ್ಮಗಳನ್ನೂ ಶಿಷ್ಟಾಚಾರಗಳನ್ನೂ ಭಗ್ನಗೊಳಿಸುತ್ತಾರೆ.

13147013a ಅತೃಪ್ಯಂತಸ್ತು ಸಾಧೂನಾಂ ಯ ಏವಾಗಮಬುದ್ಧಯಃ|

13147013c ಪರಮಿತ್ಯೇವ ಸಂತುಷ್ಟಾಸ್ತಾನುಪಾಸ್ಸ್ವ ಚ ಪೃಚ್ಚ ಚ||

ಅಂತಹ ಸಮಯಗಳಲ್ಲಿ ಸತ್ಪುರುಷರಿಗೆ ತೃಪ್ತಿಯನ್ನುಂಟುಮಾಡುವ, ವೇದೋಕ್ತಕರ್ಮಗಳನ್ನು ಆಚರಿಸಬೇಕೆಂದಿರುವ, ವೇದೋಕ್ತಪ್ರಮಾಣವೇ ಶ್ರೇಷ್ಠವೆಂದಿರುವ, ನಿತ್ಯತೃಪ್ತ ವಿದ್ವಾಂಸರ ಉಪಾಸನೆಯನ್ನು ಮಾಡು ಮತ್ತು ಧರ್ಮದ ವಿಷಯದಲ್ಲಿ ಅವರನ್ನು ಪ್ರಶ್ನಿಸು.

13147014a ಕಾಮಾರ್ಥೌ ಪೃಷ್ಠತಃ ಕೃತ್ವಾ ಲೋಭಮೋಹಾನುಸಾರಿಣೌ|

13147014c ಧರ್ಮ ಇತ್ಯೇವ ಸಂಬುದ್ಧಾಸ್ತಾನುಪಾಸ್ಸ್ವ ಚ ಪೃಚ್ಚ ಚ||

ಲೋಭಮೋಹಗಳನ್ನು ಅನುಸರಿಸಿ ಹೋಗುವ ಅರ್ಥ-ಕಾಮಗಳನ್ನು ಹಿಂದಿಟ್ಟು ಧರ್ಮವೇ ಪರಮಶ್ರೇಷ್ಠವೆಂದು ಭಾವಿಸಿರುವ ವಿದ್ವಾಂಸರನ್ನು ಸೇವಿಸು ಮತ್ತು ಅವರನ್ನು ಧರ್ಮದ ವಿಷಯದಲ್ಲಿ ಪ್ರಶ್ನಿಸು.

13147015a ನ ತೇಷಾಂ ಭಿದ್ಯತೇ ವೃತ್ತಂ ಯಜ್ಞಸ್ವಾಧ್ಯಾಯಕರ್ಮಭಿಃ|

13147015c ಆಚಾರಃ ಕಾರಣಂ ಚೈವ ಧರ್ಮಶ್ಚೈವ ತ್ರಯಂ ಪುನಃ||

ಅಂತಹ ಸತ್ಪುರುಷರ ಆಚಾರಗಳಾಗಲೀ, ಯಜ್ಞ-ಸ್ವಾಧ್ಯಾಯಗಳಾಗಲೀ ನಾಶಹೊಂದುವುದಿಲ್ಲ. ಅವರ ಆಚಾರ, ಆಚಾರವನ್ನು ತಿಳಿಸಿಕೊಡುವ ಆಗಮ ಮತ್ತು ಧರ್ಮ ಈ ಮೂರು ಪುನಃ ಒಂದೇ ಆಗುತ್ತವೆ.”

13147016 ಯುಧಿಷ್ಠಿರ ಉವಾಚ|

13147016a ಪುನರೇವೇಹ ಮೇ ಬುದ್ಧಿಃ ಸಂಶಯೇ ಪರಿಮುಹ್ಯತೇ|

13147016c ಅಪಾರೇ ಮಾರ್ಗಮಾಣಸ್ಯ ಪರಂ ತೀರಮಪಶ್ಯತಃ||

ಯುಧಿಷ್ಠಿರನು ಹೇಳಿದನು: “ನೀನು ಎಷ್ಟು ವಿವರಿಸಿ ಹೇಳಿದರೂ ನನ್ನ ಬುದ್ಧಿಯು ಸಂಶಯದಲ್ಲಿ ಮುಳುಗಿಹೋಗಿದೆ. ಈ ಅಪಾರ ಸಂಶಯವನ್ನು ದಾಟಬೇಕೆಂದಿದ್ದರೂ ದಡವು ಕಾಣುತ್ತಿಲ್ಲ.

13147017a ವೇದಾಃ ಪ್ರತ್ಯಕ್ಷಮಾಚಾರಃ ಪ್ರಮಾಣಂ ತತ್ತ್ರಯಂ ಯದಿ|

13147017c ಪೃಥಕ್ತ್ವಂ ಲಭ್ಯತೇ ಚೈಷಾಂ ಧರ್ಮಶ್ಚೈಕಸ್ತ್ರಯಂ ಕಥಮ್||

ವೇದ, ಪ್ರತ್ಯಕ್ಷ ಮತ್ತು ಸದಾಚಾರ ಈ ಮೂರು ಧರ್ಮಕ್ಕೆ ಪ್ರಮಾಣಗಳಾದರೆ ಧರ್ಮವೂ ಅವುಗಳಿಗೆ ತಕ್ಕಂತೆ ಬೇರೆ ಬೇರೆಯಾಗಬೇಕಾಗುತ್ತದೆ. ಆದರೆ ಧರ್ಮ ಎನ್ನುವುದು ಒಂದೇ ಆದರೂ ಮೂರು ಹೇಗಾಗುತ್ತದೆ?”

13147018 ಭೀಷ್ಮ ಉವಾಚ|

13147018a ಧರ್ಮಸ್ಯ ಹ್ರಿಯಮಾಣಸ್ಯ ಬಲವದ್ಭಿರ್ದುರಾತ್ಮಭಿಃ|

13147018c ಯದ್ಯೇವಂ ಮನ್ಯಸೇ ರಾಜಂಸ್ತ್ರಿಧಾ ಧರ್ಮವಿಚಾರಣಾ||

ಭೀಷ್ಮನು ಹೇಳಿದನು: “ರಾಜನ್! ಬಲಶಾಲೀ ದುರಾತ್ಮರಿಂದ ಧರ್ಮವು ಹೀನವಾಗುತ್ತಿರುವಾಗ ಧರ್ಮವು ಪ್ರಮಾಣಬೇದದಿಂದ ಮೂರಾಯಿತೆಂದು ತಿಳಿಯಬೇಡ.

13147019a ಏಕ ಏವೇತಿ ಜಾನೀಹಿ ತ್ರಿಧಾ ತಸ್ಯ ಪ್ರದರ್ಶನಮ್|

13147019c ಪೃಥಕ್ತ್ವೇ ಚೈವ ಮೇ ಬುದ್ಧಿಸ್ತ್ರಯಾಣಾಮಪಿ ವೈ ತಥಾ||

ಧರ್ಮವು ಒಂದೇ ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೋ. ಮೂರೂ ಪ್ರಮಾಣಗಳ ಮೂಲಕ ಈ ಒಂದೇ ಧರ್ಮದ ಸಮ್ಯಗ್ದರ್ಶವಾಗುತ್ತದೆ. ಆ ಮೂರೂ ಪ್ರಮಾಣಗಳೂ ಪ್ರತ್ಯೇಕ-ಪ್ರತ್ಯೇಕವಾಗಿ ಮೂರು ಧರ್ಮಗಳನ್ನು ಪ್ರತಿಪಾದಿಸುತ್ತವೆಯೆಂದು ನನಗನಿಸುವುದಿಲ್ಲ.

13147020a ಉಕ್ತೋ ಮಾರ್ಗಸ್ತ್ರಯಾಣಾಂ ಚ ತತ್ತಥೈವ ಸಮಾಚರ|

13147020c ಜಿಜ್ಞಾಸಾ ತು ನ ಕರ್ತವ್ಯಾ ಧರ್ಮಸ್ಯ ಪರಿತರ್ಕಣಾತ್||

ಮೂರು ಪ್ರಮಾಣಗಳ ಮೂಲಕ ಪ್ರತಿಪಾದಿತವಾಗಿರುವ ಧರ್ಮಮಾರ್ಗವನ್ನೇ ಅನುಸರಿಸು. ತರ್ಕವನ್ನು ಬಳಸಿ ಧರ್ಮದ ಜಿಜ್ಞಾಸೆಮಾಡುವುದು ಸರಿಯಲ್ಲ.

13147021a ಸದೈವ ಭರತಶ್ರೇಷ್ಠ ಮಾ ತೇ ಭೂದತ್ರ ಸಂಶಯಃ|

13147021c ಅಂಧೋ ಜಡ ಇವಾಶಂಕೋ ಯದ್ಬ್ರವೀಮಿ ತದಾಚರ||

ಭರತಶ್ರೇಷ್ಠ! ನನ್ನ ಈ ಮಾತಿನಲ್ಲಿ ನಿನಗೆ ಸದೈವ ಸಂಶಯವುಂಟಾಗದಿರಲಿ. ನಾನು ಹೇಳುವುದನ್ನು ಅಂಧ ಅಥವಾ ಜಡನಂತೆ ಯಾವ ಶಂಕೆಯೂ ಇಲ್ಲದೇ ಆಚರಿಸು.

13147022a ಅಹಿಂಸಾ ಸತ್ಯಮಕ್ರೋಧೋ ದಾನಮೇತಚ್ಚತುಷ್ಟಯಮ್|

13147022c ಅಜಾತಶತ್ರೋ ಸೇವಸ್ವ ಧರ್ಮ ಏಷ ಸನಾತನಃ||

ಅಜಾತಶತ್ರೋ! ಅಹಿಂಸೆ, ಸತ್ಯ, ಅಕ್ರೋಧ ಮತ್ತು ದಾನ ಈ ನಾಲ್ಕನ್ನೂ ಸದಾ ಸೇವಿಸುತ್ತಿರು. ಇದೇ ಸನಾತನ ಧರ್ಮವಾಗಿದೆ.

13147023a ಬ್ರಾಹ್ಮಣೇಷು ಚ ವೃತ್ತಿರ್ಯಾ ಪಿತೃಪೈತಾಮಹೋಚಿತಾ|

13147023c ತಾಮನ್ವೇಹಿ ಮಹಾಬಾಹೋ ಸ್ವರ್ಗಸ್ಯೈತೇ[2] ಹಿ ದೇಶಿಕಾಃ||

ಮಹಾಬಾಹೋ! ನಿನ್ನ ಪಿತೃ-ಪಿತಾಮಹರು ಬ್ರಾಹ್ಮಣರೊಡನೆ ಹೇಗೆ ವರ್ತಿಸುತ್ತಿದ್ದರೋ ಹಾಗೆಯೇ ನೀನೂ ಕೂಡ ಅವರ ವಿಷಯದಲ್ಲಿ ವ್ಯವಹರಿಸು. ಏಕೆಂದರೆ ಬ್ರಾಹ್ಮಣರೇ ಸ್ವರ್ಗವನ್ನು ತೋರಿಸುವವರು.

13147024a ಪ್ರಮಾಣಮಪ್ರಮಾಣಂ ವೈ ಯಃ ಕುರ್ಯಾದಬುಧೋ ನರಃ|

13147024c ನ ಸ ಪ್ರಮಾಣತಾಮರ್ಹೋ ವಿವಾದಜನನೋ ಹಿ ಸಃ||

ಪ್ರಮಾಣವನ್ನು ಅಪ್ರಮಾಣವೆಂದು ತರ್ಕವನ್ನು ಬಳಸಿ ಸಾಧಿಸುವ ಮೂರ್ಖನ ಮಾತಿನಲ್ಲಿ ವಿಶ್ವಾಸವನ್ನಿಡಬಾರದು. ಏಕೆಂದರೆ ಅವನು ಯಾವಾಗಲೂ ವಿವಾದವನ್ನೇ ಉಂಟುಮಾಡುತ್ತಿರುತ್ತಾನೆ.

13147025a ಬ್ರಾಹ್ಮಣಾನೇವ ಸೇವಸ್ವ ಸತ್ಕೃತ್ಯ ಬಹುಮನ್ಯ ಚ|

13147025c ಏತೇಷ್ವೇವ ತ್ವಿಮೇ ಲೋಕಾಃ ಕೃತ್ಸ್ನಾ ಇತಿ ನಿಬೋಧ ತಾನ್||

ಬ್ರಾಹ್ಮಣರನ್ನೇ ಸತ್ಕರಿಸಿ ಗೌರವಿಸುತ್ತಾ ಅವರ ಸೇವೆಯಲ್ಲಿಯೇ ನಿರತನಾಗಿರು. ಅವರಲ್ಲಿಯೇ ಸಮಗ್ರ ಲೋಕಗಳೆಲ್ಲವೂ ಪ್ರತಿಷ್ಠಿತಗೊಂಡಿವೆಯೆಂದು ತಿಳಿ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಧರ್ಮಪ್ರಮಾಣಕಥನೇ ಸಪ್ತಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಧರ್ಮಪ್ರಮಾಣಕಥನ ಎನ್ನುವ ನೂರಾನಲ್ವತ್ತೇಳನೇ ಅಧ್ಯಾಯವು.

[1] ಆಕಾಶವನ್ನು ನೋಡಿದರೆ ಅದು ನೀಲಿಯ ಬಣ್ಣದಂತೆ ಕಾಣುತ್ತದೆ. ವಸ್ತುತಃ ಆಕಾಶಕ್ಕೆ ಬಣ್ಣವಾಗಲೀ ಆಕಾರವಾಗಲೀ ಇಲ್ಲ. ಆದುದರಿಂದ ಪ್ರತ್ಯಕ್ಷಪ್ರಮಾಣದಿಂದಲೇ ಸತ್ಯದ ನಿರ್ಣಯವಾಗುವುದಿಲ್ಲ. ಧರ್ಮ, ಈಶ್ವರ, ಮತ್ತು ಪರಲೋಕಾದಿಗಳ ವಿಷಯದಲ್ಲಿ ಆಗಮ ಪ್ರಮಾಣವೇ ಮುಖ್ಯವಾದುದು. ಏಕೆಂದರೆ ಇತರ ಪ್ರಮಾಣಗಳಿಗೆ ಅಲ್ಲಿಗೆ ಹೋಗುವ ಸಾಧ್ಯತೆಯೇ ಇಲ್ಲ. (ಭಾರತ ದರ್ಶನ)

[2] ಧರ್ಮಸ್ಯೈತೇ (ಭಾರತ ದರ್ಶನ).

Comments are closed.