ಅನುಶಾಸನ ಪರ್ವ: ದಾನಧರ್ಮ ಪರ್ವ
೧೪೪
ದುರ್ವಾಸಮಹಾತ್ಮೆ
ಕೃಷ್ಣನು ಯುಧಿಷ್ಠಿರನಿಗೆ ತಾನು ಪ್ರದ್ಯುಮ್ನನಿಗೆ ಹೇಳಿದ ದುರ್ವಾಸನ ಮಹಾತ್ಮೆಯನ್ನು ತಿಳಿಸಿದುದು (೧-೫೧).
13144001 ಯುಧಿಷ್ಠಿರ ಉವಾಚ|
13144001a ಬ್ರೂಹಿ ಬ್ರಾಹ್ಮಣಪೂಜಾಯಾಂ ವ್ಯುಷ್ಟಿಂ ತ್ವಂ ಮಧುಸೂದನ|
13144001c ವೇತ್ತಾ ತ್ವಮಸ್ಯ ಚಾರ್ಥಸ್ಯ ವೇದ ತ್ವಾಂ ಹಿ ಪಿತಾಮಹಃ||
ಯುಧಿಷ್ಠಿರನು ಹೇಳಿದನು: “ಮಧುಸೂದನ! ಬ್ರಾಹ್ಮಣಪೂಜೆಯ ಫಲದ ಕುರಿತು ಹೇಳು. ನೀನು ಇದರ ಅರ್ಥವನ್ನು ಚೆನ್ನಾಗಿ ತಿಳಿದುಕೊಂಡಿರುವೆ. ಇದು ಪಿತಾಮಹನಿಗೂ ಗೊತ್ತು.”
13144002 ವಾಸುದೇವ ಉವಾಚ|
13144002a ಶೃಣುಷ್ವಾವಹಿತೋ ರಾಜನ್ ದ್ವಿಜಾನಾಂ ಭರತರ್ಷಭ|
13144002c ಯಥಾತತ್ತ್ವೇನ ವದತೋ ಗುಣಾನ್ಮೇ ಕುರುಸತ್ತಮ||
ವಾಸುದೇವನು ಹೇಳಿದನು: “ರಾಜನ್! ಭರತರ್ಷಭ! ಕುರುಸತ್ತಮ! ಏಕಾಗ್ರಚಿತ್ತನಾಗಿ ಬ್ರಾಹ್ಮಣರ ಗುಣಗಳನ್ನು ಕೇಳು. ಯಥಾತತ್ತ್ವವಾಗಿ ಹೇಳುತ್ತೇನೆ.
13144003a ಪ್ರದ್ಯುಮ್ನಃ ಪರಿಪಪ್ರಚ್ಚ ಬ್ರಾಹ್ಮಣೈಃ ಪರಿಕೋಪಿತಃ|
13144003c ಕಿಂ ಫಲಂ ಬ್ರಾಹ್ಮಣೇಷ್ವಸ್ತಿ ಪೂಜಾಯಾಂ ಮಧುಸೂದನ|
ಬ್ರಾಹ್ಮಣರಿಂದ ಪರಿಕೋಪಿತನಾದ ಪ್ರದ್ಯುಮ್ನನು ಕೇಳಿದ್ದನು: “ಮಧುಸೂದನ! ಬ್ರಾಹ್ಮಣರನ್ನು ಪೂಜಿಸುವುದರಿಂದ ಏನು ಫಲ?
13144003e ಈಶ್ವರಸ್ಯ ಸತಸ್ತಸ್ಯ ಇಹ ಚೈವ ಪರತ್ರ ಚ[1]||
13144004a ಸದಾ ದ್ವಿಜಾತೀನ್ ಸಂಪೂಜ್ಯ ಕಿಂ ಫಲಂ ತತ್ರ ಮಾನದ|
13144004c ಏತದ್ಬ್ರೂಹಿ ಪಿತಃ ಸರ್ವಂ ಸುಮಹಾನ್ಸಂಶಯೋಽತ್ರ ಮೇ||
ಮಾನದ! ಇಹದಲ್ಲಿ ಮತ್ತು ಪರದಲ್ಲಿ ಅವರ ಈಶ್ವರತ್ವವು ಹೇಗೆ? ಸದಾ ಬ್ರಾಹ್ಮಣರನ್ನು ಪೂಜಿಸುವುದರಿಂದ ಫಲವೇನು? ತಂದೆಯೇ! ಇದರ ಕುರಿತು ಸರ್ವವನ್ನೂ ಹೇಳು. ಇದರಲ್ಲಿ ನನಗೆ ಮಹಾ ಸಂಶಯವುಂಟಾಗಿದೆ.”
13144005a ಇತ್ಯುಕ್ತವಚನಸ್ತೇನ ಪ್ರದ್ಯುಮ್ನೇನ ತದಾ ತ್ವಹಮ್|
13144005c ಪ್ರತ್ಯಬ್ರುವಂ ಮಹಾರಾಜ ಯತ್ತಚ್ಚೃಣು ಸಮಾಹಿತಃ||
ಪ್ರದ್ಯುಮ್ನನು ಹೀಗೆ ಹೇಳಲು ನಾನು ಅವನಿಗೆ ಉತ್ತರಿಸಿದೆ. ಮಹಾರಾಜ! ಸಮಾಹಿತನಾಗಿ ಅದನ್ನು ಕೇಳು.
13144006a ವ್ಯುಷ್ಟಿಂ ಬ್ರಾಹ್ಮಣಪೂಜಾಯಾಂ ರೌಕ್ಮಿಣೇಯ ನಿಬೋಧ ಮೇ|
13144006c ಏತೇ ಹಿ ಸೋಮರಾಜಾನ ಈಶ್ವರಾಃ ಸುಖದುಃಖಯೋಃ||
13144007a ಅಸ್ಮಿಽಲ್ಲೋಕೇ ರೌಕ್ಮಿಣೇಯ ತಥಾಮುಷ್ಮಿಂಶ್ಚ ಪುತ್ರಕ|
“ರೌಕ್ಮಿಣೇಯ! ಬ್ರಾಹ್ಮಣಪೂಜೆಯ ಫಲವನ್ನು ಕೇಳು. ರೌಕ್ಮಿಣೇಯ! ಪುತ್ರಕ! ಸೋಮನನ್ನು ರಾಜನನ್ನಾಗಿ ಪಡೆದಿರುವ ಬ್ರಾಹ್ಮಣರು ಈ ಲೋಕದಲ್ಲಿ ಮತ್ತು ಪರ ಲೋಕದಲ್ಲಿ ಸುಖದುಃಖಗಳ ಈಶ್ವರರು.
13144007c ಬ್ರಾಹ್ಮಣಪ್ರಮುಖಂ ಸೌಖ್ಯಂ[2] ನ ಮೇಽತ್ರಾಸ್ತಿ ವಿಚಾರಣಾ||
13144008a ಬ್ರಾಹ್ಮಣಪ್ರಮುಖಂ ವೀರ್ಯಮಾಯುಃ[3] ಕೀರ್ತಿರ್ಯಶೋ ಬಲಮ್|
13144008c ಲೋಕಾ ಲೋಕೇಶ್ವರಾಶ್ಚೈವ ಸರ್ವೇ ಬ್ರಾಹ್ಮಣಪೂರ್ವಕಾಃ||[4]
ಸುಖದಲ್ಲಿ ಬ್ರಾಹ್ಮಣರೇ ಪ್ರಮುಖರು. ಅದರಲ್ಲಿ ವಿಚಾರಿಸುವುದೇನೂ ಇಲ್ಲ. ಬ್ರಾಹ್ಮಣರನ್ನು ಪ್ರಮುಖದಲ್ಲಿಟ್ಟುಕೊಳ್ಳುವವನು ವೀಯ, ಆಯಸ್ಸು, ಕೀರ್ತಿ, ಯಶಸ್ಸು ಮತ್ತು ಬಲಗಳನ್ನು ಪಡೆದುಕೊಳ್ಳುತ್ತಾನೆ. ಲೋಕದವರೂ ಮತ್ತು ಲೋಕೇಶ್ವರರೂ ಎಲ್ಲರೂ ಬ್ರಾಹ್ಮಣರನ್ನೇ ಮುಂದಿಡುತ್ತಾರೆ.
[5]13144009a ತತ್ಕಥಂ ನಾದ್ರಿಯೇಯಂ ವೈ ಈಶ್ವರೋಽಸ್ಮೀತಿ ಪುತ್ರಕ|
13144009c ಮಾ ತೇ ಮನ್ಯುರ್ಮಹಾಬಾಹೋ ಭವತ್ವತ್ರ ದ್ವಿಜಾನ್ ಪ್ರತಿ||
ಪುತ್ರಕ! ಮಹಾಬಾಹೋ! ಅವರನ್ನು ನಾನು ಹೇಗೆ ಆದರಿಸದೇ ಇರಲಿ? ನಾನು ಈಶ್ವರ ಎಂಬ ಭಾವನೆಯಿಂದ ನಿನಗೆ ದ್ವಿಜರ ಮೇಲೆ ಕೋಪವುಂಟಾಗದಿರಲಿ.
13144010a ಬ್ರಾಹ್ಮಣೋ ಹಿ ಮಹದ್ ಭೂತಮಸ್ಮಿಽಲ್ಲೋಕೇ ಪರತ್ರ ಚ|
13144010c ಭಸ್ಮ ಕುರ್ಯುರ್ಜಗದಿದಂ ಕ್ರುದ್ಧಾಃ ಪ್ರತ್ಯಕ್ಷದರ್ಶಿನಃ||
ಇಲ್ಲಿ ಮತ್ತು ಪರಲೋಕದಲ್ಲಿ ಬ್ರಾಹ್ಮಣನೇ ಒಂದು ಮಹಾಭೂತ. ಪ್ರತ್ಯಕ್ಷದರ್ಶಿಗಳಾದ ಅವರು ಕ್ರುದ್ಧರಾದರೆ ಈ ಜಗತ್ತನೇ ಭಸ್ಮಮಾಡಬಲ್ಲರು.
13144011a ಅನ್ಯಾನಪಿ ಸೃಜೇಯುಶ್ಚ ಲೋಕಾಽಲ್ಲೋಕೇಶ್ವರಾಂಸ್ತಥಾ|
13144011c ಕಥಂ ತೇಷು ನ ವರ್ತೇಯ ಸಮ್ಯಗ್ ಜ್ಞಾನಾತ್ಸುತೇಜಸಃ||
ಅವರು ಬೇರೆಯೇ ಲೋಕಗಳನ್ನು ಮತ್ತು ಲೋಕೇಶ್ವರರನ್ನು ಸೃಷ್ಟಿಸಬಲ್ಲರು. ಅವರ ತೇಜಸ್ಸನ್ನು ತಿಳಿದವರು ಹೇಗೆ ತಾನೇ ಅವರೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಇರುವರು?
13144012a ಅವಸನ್ಮದ್ಗೃಹೇ ತಾತ ಬ್ರಾಹ್ಮಣೋ ಹರಿಪಿಂಗಲಃ|
13144012c ಚೀರವಾಸಾ ಬಿಲ್ವದಂಡೀ ದೀರ್ಘಶ್ಮಶ್ರುನಖಾದಿಮಾನ್|
ಮಗೂ! ಹಿಂದೊಮ್ಮೆ ನನ್ನ ಮನೆಯಲ್ಲಿ ಕಂದು-ಹಳದೀ ಬಣ್ನದ ಬ್ರಾಹ್ಮಣನು ವಾಸಿಸುತ್ತಿದ್ದನು. ನಾರುಬಟ್ಟೆಯನ್ನುಟ್ಟು ಬಿಲ್ವದಂಡವನ್ನು ಹಿಡಿದಿದ್ದ ಅವನ ಮೀಸೆ-ಗಡ್ಡಗಳು ನೀಳವಾಗಿದ್ದವು ಮತ್ತು ಅವನು ಅತ್ಯಂತ ಕೃಶನಾಗಿದ್ದನು.
13144012e ದೀರ್ಘೇಭ್ಯಶ್ಚ ಮನುಷ್ಯೇಭ್ಯಃ ಪ್ರಮಾಣಾದಧಿಕೋ ಭುವಿ||
13144013a ಸ ಸ್ಮ ಸಂಚರತೇ ಲೋಕಾನ್ಯೇ ದಿವ್ಯಾ ಯೇ ಚ ಮಾನುಷಾಃ|
13144013c ಇಮಾ ಗಾಥಾ ಗಾಯಮಾನಶ್ಚತ್ವರೇಷು ಸಭಾಸು ಚ||
13144014a ದುರ್ವಾಸಸಂ ವಾಸಯೇತ್ಕೋ ಬ್ರಾಹ್ಮಣಂ ಸತ್ಕೃತಂ ಗೃಹೇ|
ಭುವಿಯಲ್ಲಿರುವ ಅತಿ ಎತ್ತರ ಮನುಷ್ಯರಗಿಂತಲೂ ಅಧಿಕ ಎತ್ತರದವನಾಗಿದ್ದನು. ದಿವ್ಯಲೋಕಗಳನ್ನೂ ಮನುಷ್ಯ ಲೋಕಗಳನ್ನೂ ಸಂಚರಿಸುತ್ತಿದ್ದ ಅವನು ನಾಲ್ಕು ಬೀದಿಗಳು ಕೂಡುವಲ್ಲಿ ಮತ್ತು ಸಭೆಗಳಲ್ಲಿ ಈ ಮಾತನ್ನು ಹೇಳುತ್ತಿದ್ದನು: “ಬ್ರಾಹ್ಮಣನಾದ ಈ ದುರ್ವಾಸನನ್ನು ತನ್ನ ಮನೆಯಲ್ಲಿಟ್ಟುಕೊಂಡು ಸತ್ಕರಿಸುವವರು ಯಾರಿದ್ದಾರೆ?
[6]13144014c ಪರಿಭಾಷಾಂ ಚ ಮೇ ಶ್ರುತ್ವಾ ಕೋ ನು ದದ್ಯಾತ್ಪ್ರತಿಶ್ರಯಮ್|
13144014e ಯೋ ಮಾಂ ಕಶ್ಚಿದ್ವಾಸಯೇತ ನ ಸ ಮಾಂ ಕೋಪಯೇದಿಹ||
ನನ್ನ ಈ ಮಾತನ್ನು ಕೇಳಿಯೂ ಕೂಡ ಯಾರು ನನಗೆ ಆಶ್ರಯವನ್ನು ನೀಡಬಲ್ಲರು? ಯಾರು ನನ್ನನ್ನು ತಮ್ಮ ಮನೆಯಲ್ಲಿ ವಾಸಿಸಲು ಬಯಸುತ್ತಾರೋ ಅವರು ನನಗೆ ಕೋಪಬರುವಂತೆ ನಡೆದುಕೊಳ್ಳಬಾರದು.”
13144015a ತಂ ಸ್ಮ ನಾದ್ರಿಯತೇ ಕಶ್ಚಿತ್ತತೋಽಹಂ ತಮವಾಸಯಮ್|
ಯಾರೂ ಅವನನ್ನು ಸತ್ಕರಿಸದೇ ಇದ್ದಾಅಗ ನಾನು ಅವನಿಗೆ ನಮ್ಮ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಿದೆನು.
13144016a ಸ ಸ್ಮ ಭುಂಕ್ತೇ ಸಹಸ್ರಾಣಾಂ ಬಹೂನಾಮನ್ನಮೇಕದಾ|
13144016c ಏಕದಾ ಸ್ಮಾಲ್ಪಕಂ ಭುಂಕ್ತೇ ನ ವೈತಿ ಚ ಪುನರ್ಗೃಹಾನ್||
ಅವನು ಒಮ್ಮೆ ಅನೇಕ ಸಹಸ್ರಾರು ಜನರ ಊಟವನ್ನು ಒಂದೇ ಸಾರಿ ಉಣ್ಣುತ್ತಿದ್ದನು. ಇನ್ನೊಮ್ಮೆ ಅಲ್ಪವನ್ನೇ ತಿನ್ನುತ್ತಿದ್ದನು. ಒಮ್ಮೆ ಮನೆಯನ್ನು ಬಿಟ್ಟುಹೋದನೆಂದರೆ ಪುನಃ ಅನೇಕ ದಿವಸಗಳ ವರೆಗೆ ಮನೆಗೆ ಹಿಂದಿರುಗುತ್ತಲೇ ಇರಲಿಲ್ಲ.
13144017a ಅಕಸ್ಮಾಚ್ಚ ಪ್ರಹಸತಿ ತಥಾಕಸ್ಮಾತ್ ಪ್ರರೋದಿತಿ|
13144017c ನ ಚಾಸ್ಯ ವಯಸಾ ತುಲ್ಯಃ ಪೃಥಿವ್ಯಾಮಭವತ್ತದಾ||
ಅಕಸ್ಮಾತ್ತಾಗಿ ನಗುತ್ತಿದ್ದನು. ಅಕಸ್ಮಾತ್ತಾಗಿ ರೋದಿಸುತ್ತಿದನು. ಆಗ ಪೃಥ್ವಿಯಲ್ಲಿ ಅವನ ಸಮವಯಸ್ಕರು ಯಾರೂ ಇರಲಿಲ್ಲ.
13144018a ಸೋಽಸ್ಮದಾವಸಥಂ ಗತ್ವಾ ಶಯ್ಯಾಶ್ಚಾಸ್ತರಣಾನಿ ಚ|
13144018c ಕನ್ಯಾಶ್ಚಾಲಂಕೃತಾ ದಗ್ಧ್ವಾ ತತೋ ವ್ಯಪಗತಃ ಸ್ವಯಮ್||
ಬಹುದಿನಗಳ ವರೆಗೆ ಹೊರಗೆ ಹೋಗಿದ್ದ ಅವನು ಒಂದು ದಿನ ತನ್ನ ಬಿಡಾರಕ್ಕೆ ಹೋಗಿ ಅಲ್ಲಿದ್ದ ಹಾಸಿಗೆಯನ್ನೂ, ಹಚ್ಚಡವನ್ನೂ, ಆಭರಗಳೀಮ್ದ ಅಲಂಕೃತೆಯರಾಗಿ ಸೇವೆಗೆ ಸಿದ್ಧರಾಗಿದ್ದ ಕನ್ಯೆಯರನ್ನೂ ಸುಟ್ಟು ಭಸ್ಮಮಾಡಿ ಪುನಃ ಹೊರಟುಹೋದನು.
13144019a ಅಥ ಮಾಮಬ್ರವೀದ್ ಭೂಯಃ ಸ ಮುನಿಃ ಸಂಶಿತವ್ರತಃ|
13144019c ಕೃಷ್ಣ ಪಾಯಸಮಿಚ್ಚಾಮಿ ಭೋಕ್ತುಮಿತ್ಯೇವ ಸತ್ವರಃ||
ಮತ್ತೊಮ್ಮೆ ನನ್ನ ಬಳಿಬಂದು ಆ ಸಂಶಿತವ್ರತ ಮುನಿಯು “ಕೃಷ್ಣ! ಈಗಲೇ ನಾನು ಪಾಯಸವನ್ನು ತಿನ್ನಲು ಬಯಸುತ್ತೇನೆ” ಎಂದನು.
13144020a ಸದೈವ ತು ಮಯಾ ತಸ್ಯ ಚಿತ್ತಜ್ಞೇನ ಗೃಹೇ ಜನಃ|
13144020c ಸರ್ವಾಣ್ಯೇವಾನ್ನಪಾನಾನಿ ಭಕ್ಷ್ಯಾಶ್ಚೋಚ್ಚಾವಚಾಸ್ತಥಾ|
13144020e ಭವಂತು ಸತ್ಕೃತಾನೀತಿ ಪೂರ್ವಮೇವ ಪ್ರಚೋದಿತಃ||
13144021a ತತೋಽಹಂ ಜ್ವಲಮಾನಂ ವೈ ಪಾಯಸಂ ಪ್ರತ್ಯವೇದಯಮ್|
ಅವನ ಮನಸ್ಸನ್ನು ತಿಳಿದಿದ್ದ ನಾನು ನನ್ನ ಮನೆಯ ಜನರಿಗೆ ಸರ್ವ ಅನ್ನ-ಪಾನೀಯಗಳನ್ನೂ, ಭಕ್ಷ್ಯಗಳನ್ನೂ ಮಾಡಿರಬೇಕೆಂದು ಹೇಳಿದ್ದೆನು. ನಾನು ಹೇಳಿದ್ದಂತೆಯೇ ಅವೆಲ್ಲವೂ ಸಿದ್ಧವಾಗಿಯೇ ಇದ್ದವು. ಆದುಅರಿಂದ ನಾನು ಅವನಿಗೆ ಬಿಸಿ ಬಿಸಿ ಪಾಯಸವನ್ನು ಅರ್ಪಿಸಿದೆನು.
13144021c ತದ್ಭುಕ್ತ್ವೈವ ತು ಸ ಕ್ಷಿಪ್ರಂ ತತೋ ವಚನಮಬ್ರವೀತ್|
13144021e ಕ್ಷಿಪ್ರಮಂಗಾನಿ ಲಿಂಪಸ್ವ ಪಾಯಸೇನೇತಿ ಸ ಸ್ಮ ಹ||
ಬೇಗನೇ ಆ ಪಾಯಸವನ್ನು ಕುಡಿದು ಅವನು ನನಗೆ ಈ ಮಾತನ್ನಾಡಿದನು: “ಬೇಗನೇ ಈ ಪಾಯಸವನ್ನು ಲೇಪಿಸಿಕೋ!”
13144022a ಅವಿಮೃಶ್ಯೈವ ಚ ತತಃ ಕೃತವಾನಸ್ಮಿ ತತ್ತಥಾ|
13144022c ತೇನೋಚ್ಚಿಷ್ಟೇನ ಗಾತ್ರಾಣಿ ಶಿರಶ್ಚೈವಾಭ್ಯಮೃಕ್ಷಯಮ್||
ಅದನ್ನು ಮಾಡಬೇಕೋ ಬೇಡವೋ ಎಂದು ವಿವರ್ಶಿಸದೇ ನಾನು ಆ ಎಂಜಲನ್ನು ನನ್ನ ಶರೀರಕ್ಕೂ ತಲೆಗೂ ಲೇಪಿಸಿಕೊಂಡೆನು.
13144023a ಸ ದದರ್ಶ ತದಾಭ್ಯಾಶೇ ಮಾತರಂ ತೇ ಶುಭಾನನಾಮ್|
13144023c ತಾಮಪಿ ಸ್ಮಯಮಾನಃ ಸ ಪಾಯಸೇನಾಭ್ಯಲೇಪಯತ್||
ಪಕ್ಕದಲ್ಲಿಯೇ ಇದ್ದ ನಿನ್ನ ತಾಯಿ ಶುಭಾನನೆಯನ್ನು ಅವನು ನೋಡಿದನು. ನಸುನಗುತ್ತಾ ಅವನು ಆ ಪಾಯಸವನ್ನು ಅವಳಿಗೂ ಕೂಡ ಲೇಪಿಸುವಂತೆ ಮಾಡಿದನು.
13144024a ಮುನಿಃ ಪಾಯಸದಿಗ್ಧಾಂಗೀಂ ರಥೇ ತೂರ್ಣಮಯೋಜಯತ್|
13144024c ತಮಾರುಹ್ಯ ರಥಂ ಚೈವ ನಿರ್ಯಯೌ ಸ ಗೃಹಾನ್ಮಮ||
ಆ ಮುನಿಯು ಕೂಡಲೇ ಪಾಯಸದಿಂದ ನೆನೆದು ಹೋಗಿದ್ದ ಅವಳನ್ನು ರಥಕ್ಕೆ ಕಟ್ಟಿದನು. ಆ ಅಥವನ್ನೇರಿ ನನ್ನ ಮನೆಯಿಂದ ಅವನು ಹೊರಟನು.
13144025a ಅಗ್ನಿವರ್ಣೋ ಜ್ವಲನ್ಧೀಮಾನ್ಸ ದ್ವಿಜೋ ರಥಧುರ್ಯವತ್|
13144025c ಪ್ರತೋದೇನಾತುದದ್ಬಾಲಾಂ ರುಕ್ಮಿಣೀಂ ಮಮ ಪಶ್ಯತಃ||
ಅಗ್ನಿವರ್ಣದಿಂದ ಪ್ರಜ್ವಲಿಸುತ್ತಿದ್ದ ಆ ದೀಮಾನ್ ದ್ವಿಜನು ರಥವನ್ನು ನಡೆಸುತ್ತಾ ಬಾಲೆ ರುಕ್ಮಿಣಿಯನ್ನು ಚಾವಟಿಯಿಂದ ಹೊಡೆಯುತ್ತಿದ್ದುದನ್ನು ನಾನು ನೋಡಿದೆ.
13144026a ನ ಚ ಮೇ ಸ್ತೋಕಮಪ್ಯಾಸೀದ್ದುಃಖಮೀರ್ಷ್ಯಾಕೃತಂ ತದಾ|
13144026c ತತಃ ಸ ರಾಜಮಾರ್ಗೇಣ ಮಹತಾ ನಿರ್ಯಯೌ ಬಹಿಃ||
ಆಗ ನನಗೆ ಅವನು ಮಾಡಿದ ಕಾರ್ಯದಿಂದ ದುಃಖವಾಗಲೀ ಈರ್ಷೆಯಾಗಲೀ ಉಂಟಾಗಲಿಲ್ಲ. ಅನಂತರ ಅವನು ಮಹಾ ರಾಜಮಾರ್ಗದಿಂದ ಹೊರಕ್ಕೆ ಹೋದನು.
13144027a ತದ್ದೃಷ್ಟ್ವಾ ಮಹದಾಶ್ಚರ್ಯಂ ದಾಶಾರ್ಹಾ ಜಾತಮನ್ಯವಃ|
13144027c ತತ್ರಾಜಲ್ಪನ್ಮಿಥಃ ಕೇ ಚಿತ್ಸಮಾಭಾಷ್ಯ ಪರಸ್ಪರಮ್||
ಆ ಮಹದಾಶ್ಚರ್ಯವನ್ನು ನೋಡಿ ದಾಶಾರ್ಹರು ಕುಪಿತರಾದರು. ಅವರಲ್ಲಿ ಕೆಲವರು ಪರಸ್ಪರ ಮಾತನಾಡಿಕೊಂಡರು:
13144028a ಬ್ರಾಹ್ಮಣಾ ಏವ ಜಾಯೇರನ್ನಾನ್ಯೋ ವರ್ಣಃ ಕಥಂ ಚನ|
13144028c ಕೋ ಹ್ಯೇನಂ ರಥಮಾಸ್ಥಾಯ ಜೀವೇದನ್ಯಃ ಪುಮಾನಿಹ||
“ಬ್ರಾಹ್ಮಣರಾಗಿ ಮಾತ್ರ ಹುಟ್ಟಬೇಕು. ಬೇರೆ ಯಾವ ವರ್ಣದವರಾಗಿಯೂ ಹುಟ್ಟಬಾರದು. ಇವನಲ್ಲದೇ ಬೇರೆ ಯಾರು ತಾನೇ ಆ ರಥವನ್ನೇರಿ ಜೀವಿಸಿಯಿದ್ದಾನು?
13144029a ಆಶೀವಿಷವಿಷಂ ತೀಕ್ಷ್ಣಂ ತತಸ್ತೀಕ್ಷ್ಣತರಂ ವಿಷಮ್[7]|
13144029c ಬ್ರಹ್ಮಾಶೀವಿಷದಗ್ಧಸ್ಯ ನಾಸ್ತಿ ಕಶ್ಚಿಚ್ಚಿಕಿತ್ಸಕಃ||
ಸರ್ಪದ ವಿಷವು ತೀಕ್ಷ್ಣ. ವಿಷಕ್ಕಿಂತಲೂ ತೀಕ್ಷ್ಣನು ಬ್ರಾಹ್ಮಣ. ಬ್ರಾಹ್ಮಣರೂಪೀ ವಿಷಸರ್ಪದಿಂದ ಸುಡಲ್ಪಟ್ಟವನಿಗೆ ಯಾವ ಚಿಕಿತ್ಸೆಯೂ ಇಲ್ಲ.”
13144030a ತಸ್ಮಿನ್ವ್ರಜತಿ ದುರ್ಧರ್ಷೇ ಪ್ರಾಸ್ಖಲದ್ರುಕ್ಮಿಣೀ ಪಥಿ|
13144030c ತಾಂ ನಾಮರ್ಷಯತ ಶ್ರೀಮಾಂಸ್ತತಸ್ತೂರ್ಣಮಚೋದಯತ್||
ಆ ದುರ್ಧರ್ಷನು ಹೇಗೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ರುಕ್ಮಿಣಿಯು ಎಡವಿದಳು. ಅದನ್ನು ಸಹಿಸಿಕೊಳ್ಳಲಾರದೇ ಆ ಶ್ರೀಮಾನನು ತಕ್ಷಣವೇ ಅವಳನ್ನು ಚಾವಟಿಯಿಂದ ಹೊಡೆದನು.
13144031a ತತಃ ಪರಮಸಂಕ್ರುದ್ಧೋ ರಥಾತ್ ಪ್ರಸ್ಕಂದ್ಯ ಸ ದ್ವಿಜಃ|
13144031c ಪದಾತಿರುತ್ಪಥೇನೈವ ಪ್ರಾಧಾವದ್ದಕ್ಷಿಣಾಮುಖಃ||
ಅನಂತರ ಪರಮಸಂಕ್ರುದ್ಧನಾದ ಆ ದ್ವಿಜನು ರಥದಿಂದ ಹಾರಿ ಪದಾತಿಯಾಗಿಯೇ ದಕ್ಷಿಣಾಮುಖವಾಗಿ ಓಡತೊಡಗಿದನು.
13144032a ತಮುತ್ಪಥೇನ ಧಾವಂತಮನ್ವಧಾವಂ ದ್ವಿಜೋತ್ತಮಮ್|
13144032c ತಥೈವ ಪಾಯಸಾದಿಗ್ಧಃ ಪ್ರಸೀದ ಭಗವನ್ನಿತಿ||
ಓಡಿ ಹೋಗುತ್ತಿರುವ ಆ ದ್ವಿಜೋತ್ತಮನನ್ನು ಪಾಯಸದಿಂದ ಒದ್ದೆಯಾಗಿದ್ದ ನಾನೂ ಕೂಡ ಓಡುತ್ತಾ ಹಿಂಬಾಲಿಸಿ ಹೋಗಿ “ಭಗವನ್! ಪ್ರಸೀದನಾಗು!” ಎಂದು ಹೇಳಿದೆನು.
13144033a ತತೋ ವಿಲೋಕ್ಯ ತೇಜಸ್ವೀ ಬ್ರಾಹ್ಮಣೋ ಮಾಮುವಾಚ ಹ|
13144033c ಜಿತಃ ಕ್ರೋಧಸ್ತ್ವಯಾ ಕೃಷ್ಣ ಪ್ರಕೃತ್ಯೈವ ಮಹಾಭುಜ||
ಆಗ ಆ ತೇಜಸ್ವೀ ಬ್ರಾಹ್ಮಣನು ಹಿಂದೆ ನೋಡಿ ನನಗೆ ಹೇಳಿದನು: “ಮಹಾಭುಜ! ಕೃಷ್ಣ! ಸ್ವಾಭಾವಿಕವಾಗಿಯೇ ನೀನು ಕ್ರೋಧವನ್ನು ಗೆದ್ದಿದ್ದೀಯೆ.
13144034a ನ ತೇಽಪರಾಧಮಿಹ ವೈ ದೃಷ್ಟವಾನಸ್ಮಿ ಸುವ್ರತ|
13144034c ಪ್ರೀತೋಽಸ್ಮಿ ತವ ಗೋವಿಂದ ವೃಣು ಕಾಮಾನ್ಯಥೇಪ್ಸಿತಾನ್|
13144034e ಪ್ರಸನ್ನಸ್ಯ ಚ ಮೇ ತಾತ ಪಶ್ಯ ವ್ಯುಷ್ಟಿರ್ಯಥಾವಿಧಾ||
ಸುವ್ರತ! ನಿನ್ನಲ್ಲಿ ನಾನು ಯಾವ ಅಪರಾಧವನ್ನೂ ಕಾಣಲಿಲ್ಲ. ಗೋವಿಂದ! ನಿನ್ನ ಮೇಲೆ ನಾನು ಪ್ರೀತನಾಗಿದ್ದೇನೆ. ಬಯಸಿದ ವರವನ್ನು ಕೇಳಿಕೋ! ಅಯ್ಯಾ! ನಾನು ಪ್ರಸನ್ನನಾಗಿರುವುದರಿಂದ ನಿನಗೆ ಯಾವ ವಿಧವಾದ ಫಲವು ದೊರೆಯುತ್ತದೆ ಎನ್ನುವುದನ್ನು ನೋಡು.
13144035a ಯಾವದೇವ ಮನುಷ್ಯಾಣಾಮನ್ನೇ ಭಾವೋ ಭವಿಷ್ಯತಿ|
13144035c ಯಥೈವಾನ್ನೇ ತಥಾ ತೇಷಾಂ ತ್ವಯಿ ಭಾವೋ ಭವಿಷ್ಯತಿ||
ಎಲ್ಲಿಯವರೆಗೆ ಮನುಷ್ಯರಲ್ಲಿ ಅನ್ನದ ಮೇಲೆ ಪ್ರೀತಿಯಿರುತ್ತದೆಯೋ ಅಲ್ಲಿಯವರೆಗೆ ಅನ್ನದಂತೆ ನಿನ್ನ ಮೇಲೆಯೂ ಪ್ರೀತಿಯನ್ನಿಡುತ್ತಾರೆ.
13144036a ಯಾವಚ್ಚ ಪುಣ್ಯಾ ಲೋಕೇಷು ತ್ವಯಿ ಕೀರ್ತಿರ್ಭವಿಷ್ಯತಿ|
13144036c ತ್ರಿಷು ಲೋಕೇಷು ತಾವಚ್ಚ ವೈಶಿಷ್ಟ್ಯಂ ಪ್ರತಿಪತ್ಸ್ಯಸೇ|
13144036e ಸುಪ್ರಿಯಃ ಸರ್ವಲೋಕಸ್ಯ ಭವಿಷ್ಯಸಿ ಜನಾರ್ದನ||
ಜನಾರ್ದನ! ಎಲ್ಲಿಯವರೆಗೆ ಪುಣ್ಯ ಲೋಕಗಳಲ್ಲಿ ನಿನ್ನ ಕೀರ್ತಿಯು ಇರುತ್ತದೆಯೋ ಅಲ್ಲಿಯವರೆಗೆ ನೀನು ಮೂರು ಲೋಕಗಳಲ್ಲಿ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತೀಯೆ. ಸರ್ವಲೋಕದ ಸುಪ್ರಿಯನಾಗುತ್ತೀಯೆ.
13144037a ಯತ್ತೇ ಭಿನ್ನಂ ಚ ದಗ್ಧಂ ಚ ಯಚ್ಚ ಕಿಂ ಚಿದ್ವಿನಾಶಿತಮ್|
13144037c ಸರ್ವಂ ತಥೈವ ದ್ರಷ್ಟಾಸಿ ವಿಶಿಷ್ಟಂ ವಾ ಜನಾರ್ದನ||
ಜನಾರ್ದನ! ಯಾವುದು ಒಡೆದುಹೋಗಿದೆಯೋ, ಸುಟ್ಟುಹೋಗಿದೆಯೋ ಮತ್ತು ವಿನಾಶವಾಗಿದೆಯೋ ಅವೆಲ್ಲವನ್ನೂ ಹಾಗೆಯೇ ಮತ್ತು ಇನ್ನೂ ವಿಶಿಷ್ಟವಾಗಿರುವುದನ್ನು ನೀನು ನೋಡುತ್ತೀಯೆ.
13144038a ಯಾವದೇತತ್ ಪ್ರಲಿಪ್ತಂ ತೇ ಗಾತ್ರೇಷು ಮಧುಸೂದನ|
13144038c ಅತೋ ಮೃತ್ಯುಭಯಂ ನಾಸ್ತಿ ಯಾವದಿಚ್ಚಾ ತವಾಚ್ಯುತ||
ಮಧುಸೂದನ! ನೀನು ಇದನ್ನು ನಿನ್ನ ಶರೀರದಲ್ಲಿ ಬಳಿದುಕೊಂಡಿರುವರಿಂದ ನಿನಗೆ ಮೃತ್ಯುಭಯವಿರುವುದಿಲ್ಲ. ಅಚ್ಯುತ! ನಿನಗೆ ಇಚ್ಛೆಯಾದಾಗ ಮೃತ್ಯುವನ್ನು ಹೊಂದುತ್ತೀಯೆ.
13144039a ನ ತು ಪಾದತಲೇ ಲಿಪ್ತೇ ಕಸ್ಮಾತ್ತೇ ಪುತ್ರಕಾದ್ಯ ವೈ|
13144039c ನೈತನ್ಮೇ ಪ್ರಿಯಮಿತ್ಯೇವ ಸ ಮಾಂ ಪ್ರೀತೋಽಬ್ರವೀತ್ತದಾ|
13144039e ಇತ್ಯುಕ್ತೋಽಹಂ ಶರೀರಂ ಸ್ವಮಪಶ್ಯಂ ಶ್ರೀಸಮಾಯುತಮ್||
ಆದರೆ ಪುತ್ರಕ! ಇಂದು ನೀನು ಏಕೆ ಇದನ್ನು ಅಂಗಾಲುಗಳಿಗೆ ಲೇಪಿಸಿಕೊಳ್ಳಲಿಲ್ಲ!” ಇದನ್ನು ನನಗೆ ಪ್ರೀತನಾದ ಅವನು ಪ್ರೀತಿಯಿಂದಲೇ ಹೇಳಿದನು. ಇದನ್ನು ಹೇಳಿದೊಡನೆಯೇ ನನ್ನ ಶರೀರವು ಅತ್ಯಂತ ಕಾಂತಿಯುಕ್ತವಾದುದನ್ನು ನೋಡಿದೆನು.
13144040a ರುಕ್ಮಿಣೀಂ ಚಾಬ್ರವೀತ್ ಪ್ರೀತಃ ಸರ್ವಸ್ತ್ರೀಣಾಂ ವರಂ ಯಶಃ|
13144040c ಕೀರ್ತಿಂ ಚಾನುತ್ತಮಾಂ ಲೋಕೇ ಸಮವಾಪ್ಸ್ಯಸಿ ಶೋಭನೇ||
ಪ್ರೀತನಾಗಿ ಸರ್ವಸ್ತ್ರೀಯರಲ್ಲಿ ಶ್ರೇಷ್ಠಳಾದ ರುಕ್ಮಿಣಿಗೆ ಹೇಳಿದನು: “ಶೋಭನೇ! ಯಶಸ್ಸು, ಕೀರ್ತಿ ಮತ್ತು ಉತ್ತಮ ಲೋಕವನ್ನು ಪಡೆಯುತ್ತೀಯೆ.
13144041a ನ ತ್ವಾಂ ಜರಾ ವಾ ರೋಗೋ ವಾ ವೈವರ್ಣ್ಯಂ ಚಾಪಿ ಭಾಮಿನಿ|
13144041c ಸ್ಪ್ರಕ್ಷ್ಯಂತಿ ಪುಣ್ಯಗಂಧಾ ಚ ಕೃಷ್ಣಮಾರಾಧಯಿಷ್ಯಸಿ||
ಭಾಮಿನೀ! ಮುಪ್ಪಾಗಲೀ, ರೋಗವಾಗಲೀ ಮತ್ತು ವೈವರ್ಣ್ಯವಾಗಲೀ ನಿನ್ನ ಬಳಿ ಬರುವುದಿಲ್ಲ. ಪುಣ್ಯಗಂಧಯುಕ್ತಳಾಗಿ ಕೃಷ್ಣನನ್ನು ಆರಾಧಿಸುತ್ತೀಯೆ.
13144042a ಷೋಡಶಾನಾಂ ಸಹಸ್ರಾಣಾಂ ವಧೂನಾಂ ಕೇಶವಸ್ಯ ಹ|
13144042c ವರಿಷ್ಠಾ ಸಹಲೋಕ್ಯಾ ಚ[8] ಕೇಶವಸ್ಯ ಭವಿಷ್ಯಸಿ||
ಕೇಶವನ ಹದಿನಾರು ಸಾವಿರ ಪತ್ನಿಯರಲ್ಲಿ ನೀನು ಶ್ರೇಷ್ಠಳೂ ಸಹಲೋಕಳೂ ಆಗುವೆ.”
13144043a ತವ ಮಾತರಮಿತ್ಯುಕ್ತ್ವಾ ತತೋ ಮಾಂ ಪುನರಬ್ರವೀತ್|
13144043c ಪ್ರಸ್ಥಿತಃ ಸುಮಹಾತೇಜಾ ದುರ್ವಾಸಾ ವಹ್ನಿವಜ್ಜ್ವಲನ್||
ನಿನ್ನ ತಾಯಿಗೆ ಹೀಗೆ ಹೇಳಿ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಮಹಾತೇಜಸ್ವೀ ದುರ್ವಾಸನು ಹೊರಡುವಾಗ ಪುನಃ ನನಗೆ ಹೇಳಿದನು:
13144044a ಏಷೈವ ತೇ ಬುದ್ಧಿರಸ್ತು ಬ್ರಾಹ್ಮಣಾನ್ ಪ್ರತಿ ಕೇಶವ|
13144044c ಇತ್ಯುಕ್ತ್ವಾ ಸ ತದಾ ಪುತ್ರ ತತ್ರೈವಾಂತರಧೀಯತ||
“ಕೇಶವ! ಬ್ರಾಹ್ಮಣರೊಡನೆ ನಿನಗೆ ಇದೇ ಬುದ್ಧಿಯು ಇರಲಿ!” ಪುತ್ರ! ಹೀಗೆ ಹೇಳಿ ಅವನು ಅಲ್ಲಿಯೇ ಅಂತರ್ಧಾನನಾದನು.
13144045a ತಸ್ಮಿನ್ನಂತರ್ಹಿತೇ ಚಾಹಮುಪಾಂಶುವ್ರತಮಾದಿಶಮ್|
13144045c ಯತ್ಕಿಂ ಚಿದ್ಬ್ರಾಹ್ಮಣೋ ಬ್ರೂಯಾತ್ಸರ್ವಂ ಕುರ್ಯಾಮಿತಿ ಪ್ರಭೋ||
ಅಂದಿನಿಂದ ನಾನು ರಹಸ್ಯವಾಗಿ “ಯಾವುದೇ ಬ್ರಾಹ್ಮಣನು ಏನೇ ಹೇಳಿದರೂ ಅವೆಲ್ಲವನ್ನೂ ಮಾಡುತ್ತೇನೆ” ಎಂಬ ಈ ವ್ರತವನ್ನು ಕೈಗೊಂಡೆನು.
13144046a ಏತದ್ವ್ರತಮಹಂ ಕೃತ್ವಾ ಮಾತ್ರಾ ತೇ ಸಹ ಪುತ್ರಕ|
13144046c ತತಃ ಪರಮಹೃಷ್ಟಾತ್ಮಾ ಪ್ರಾವಿಶಂ ಗೃಹಮೇವ ಚ||
ಪುತ್ರಕ! ಹೀಗೆ ವ್ರತವನ್ನು ಕೈಗೊಂಡು ನಿನ್ನ ಮಾತೆಯೊಂದಿಗೆ ಪರಮ ಹೃಷ್ಟಾತ್ಮನಾಗಿ ನನ್ನ ಮನೆಯನ್ನು ಪ್ರವೇಶಿಸಿದೆನು.
13144047a ಪ್ರವಿಷ್ಟಮಾತ್ರಶ್ಚ ಗೃಹೇ ಸರ್ವಂ ಪಶ್ಯಾಮಿ ತನ್ನವಮ್|
13144047c ಯದ್ಭಿನ್ನಂ ಯಚ್ಚ ವೈ ದಗ್ಧಂ ತೇನ ವಿಪ್ರೇಣ ಪುತ್ರಕ||
ಪುತ್ರಕ! ಮನೆಯನ್ನು ಪ್ರವೇಶಿದ ಕೂಡಲೇ ಆ ವಿಪ್ರನು ಒಡೆದುಹಾಕಿದ್ದ ಮತ್ತು ಸುಟ್ಟುಹಾಕಿದ್ದ ಎಲ್ಲವೂ ಹೊಸತಾಗಿರುವುದನ್ನು ನಾನು ನೋಡಿದೆನು.
13144048a ತತೋಽಹಂ ವಿಸ್ಮಯಂ ಪ್ರಾಪ್ತಃ ಸರ್ವಂ ದೃಷ್ಟ್ವಾ ನವಂ ದೃಢಮ್|
13144048c ಅಪೂಜಯಂ ಚ ಮನಸಾ ರೌಕ್ಮಿಣೇಯ ದ್ವಿಜಂ ತದಾ||
ಅವೆಲ್ಲವೂ ದೃಢವಾಗಿರುವುದನ್ನೂ ಹೊಸದಾಗಿರುವುದನ್ನೂ ನೋಡಿ ವಿಸ್ಮಿತನಾದೆನು. ರೌಕ್ಮಿಣೇಯ! ಆಗ ಮನಸ್ಸಿನಲ್ಲಿಯೇ ನಾನು ಆ ದ್ವಿಜನನ್ನು ಪೂಜಿಸಿದೆನು.”
13144049a ಇತ್ಯಹಂ ರೌಕ್ಮಿಣೇಯಸ್ಯ ಪೃಚ್ಚತೋ ಭರತರ್ಷಭ|
13144049c ಮಾಹಾತ್ಮ್ಯಂ ದ್ವಿಜಮುಖ್ಯಸ್ಯ ಸರ್ವಮಾಖ್ಯಾತವಾಂಸ್ತದಾ||
ಭರತರ್ಷಭ! ರೌಕ್ಮಿನೇಯನು ಕೇಳಿದುದಕ್ಕೆ ನಾನು ಇದನ್ನು ಹೇಳಿದೆನು. ದ್ವಿಜಮುಖ್ಯನ ಮಾಹಾತ್ಮ್ಯೆಯೆಲ್ಲವನ್ನೂ ಆಗ ಹೇಳಿದೆನು.
13144050a ತಥಾ ತ್ವಮಪಿ ಕೌಂತೇಯ ಬ್ರಾಹ್ಮಣಾನ್ಸತತಂ ಪ್ರಭೋ|
13144050c ಪೂಜಯಸ್ವ ಮಹಾಭಾಗಾನ್ವಾಗ್ಭಿರ್ದಾನೈಶ್ಚ ನಿತ್ಯದಾ||
ಕೌಂತೇಯ! ಪ್ರಭೋ! ಹಾಗೆಯೇ ನೀನೂ ಕೂಡ ಸತತವೂ ಮಹಾಭಾಗ ಬ್ರಾಹ್ಮಣರನ್ನು ನಿತ್ಯವೂ ಮಾತು-ದಾನಗಳಿಂದ ಪೂಜಿಸು.
13144051a ಏವಂ ವ್ಯುಷ್ಟಿಮಹಂ ಪ್ರಾಪ್ತೋ ಬ್ರಾಹ್ಮಣಾನಾಂ ಪ್ರಸಾದಜಾಮ್|
13144051c ಯಚ್ಚ ಮಾಮಾಹ ಭೀಷ್ಮೋಽಯಂ ತತ್ಸತ್ಯಂ ಭರತರ್ಷಭ||
ಭರತರ್ಷಭ! ಈ ರೀತಿ ನಾನು ಬ್ರಾಹ್ಮಣರ ಪ್ರಸನ್ನತೆಯಿಂದ ಹುಟ್ಟಿದ ಫಲವನ್ನು ಪಡೆದುಕೊಂಡಿದ್ದೇನೆ. ಭೀಷ್ಮನು ಹೇಳಿರುವುದು ಸತ್ಯ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ದುರ್ವಾಸೋಭಿಕ್ಷಾ ನಾಮ ಚತುಶ್ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ದುರ್ವಾಸೋಭಿಕ್ಷಾ ಎನ್ನುವ ನೂರಾನಲ್ವತ್ನಾಲ್ಕನೇ ಅಧ್ಯಾಯವು.
[1] ಈಶ್ವರತ್ವಂ ಕುತಸ್ತೇಷಾಮಿಹೈವ ಚ ಪರತ್ರ ಚ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಸೌಮ್ಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಬ್ರಾಹ್ಮಣಪ್ರತಿಪೂಜಾಯಾಮಾಯುಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಬ್ರಾಹ್ಮಣಪೂಜಕಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ತ್ರಿವರ್ಗೇ ಚಾಪವರ್ಗೇ ಚ ಯಶಃಸ್ತ್ರೀರೋಗಶಾಂತಿಷು| ದೇವತಾಪಿತೃಪೂಜಾಸು ಸಂತೋಷ್ಯಾಶ್ಚೈವ ನೋ ದ್ವಿಜಾಃ||
[6] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ರೋಷಣಃ ಸರ್ವಭೂತಾನಾಂ ಸೂಕ್ಷ್ಮೇಽಪ್ಯಪಕೃತೇ ಕೃತೇ|
[7] ತತಸ್ತೀಕ್ಷ್ಣತರೋ ದ್ವಿಜಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[8] ವರಿಷ್ಠಾ ಚ ಸಲೋಕ್ಯಾ ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).