Anushasana Parva: Chapter 138

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೮

ವಾಯುವು ದೃಷ್ಟಾಂತಗಳೊಂದಿಗೆ ಬ್ರಾಹ್ಮಣರ ಮಹತ್ವವನ್ನು ಪ್ರತಿಪಾದಿಸಿದುದು (1-19).

13138001 ವಾಯುರುವಾಚ|

13138001a ಶೃಣು ಮೂಢ ಗುಣಾನ್ಕಾಂಶ್ಚಿದ್ಬ್ರಾಹ್ಮಣಾನಾಂ ಮಹಾತ್ಮನಾಮ್|

13138001c ಯೇ ತ್ವಯಾ ಕೀರ್ತಿತಾ ರಾಜಂಸ್ತೇಭ್ಯೋಽಥ ಬ್ರಾಹ್ಮಣೋ ವರಃ||

ವಾಯುವು ಹೇಳಿದನು: “ಮೂಢ! ಕೇಳು. ಮಹಾತ್ಮ ಬ್ರಾಹ್ಮಣರ ಕೆಲವೇ ಗುಣಗಳನ್ನು ಹೇಳುತ್ತೇನೆ. ರಾಜನ್! ನೀನು ಪೃಥ್ವಿಯೇ ಮೊದಲಾದ ಯಾವುದನ್ನು ಶ್ರೇಷ್ಠವೆಂದು ಹೇಳಿದೆಯೋ ಅವೆಲ್ಲಕ್ಕಿಂತಲೂ ಬ್ರಾಹ್ಮಣನು ಶ್ರೇಷ್ಠನು.

13138002a ತ್ಯಕ್ತ್ವಾ ಮಹೀತ್ವಂ ಭೂಮಿಸ್ತು ಸ್ಪರ್ಧಯಾಂಗನೃಪಸ್ಯ ಹ|

13138002c ನಾಶಂ ಜಗಾಮ ತಾಂ ವಿಪ್ರೋ ವ್ಯಷ್ಟಂಭಯತ ಕಶ್ಯಪಃ||

ಅಂಗನೃಪನೊಡನೆ ಸ್ಪರ್ಧಿಸಿದ ಭೂಮಿಯು ಮಹೀತ್ವವನ್ನೇ ತ್ಯಜಿಸಿ ಕುಸಿದು ಬೀಳುತ್ತಿರುವಾಗ ವಿಪ್ರ ಕಶ್ಯಪನು ಅವಳನ್ನು ಹಾಗೆಯೇ ನಿಲ್ಲಿಸಿದನು.

13138003a ಅಕ್ಷಯಾ[1] ಬ್ರಾಹ್ಮಣಾ ರಾಜನ್ದಿವಿ ಚೇಹ ಚ ನಿತ್ಯದಾ|

13138003c ಅಪಿಬತ್ತೇಜಸಾ ಹ್ಯಾಪಃ ಸ್ವಯಮೇವಾಂಗಿರಾಃ ಪುರಾ||

ರಾಜನ್! ದಿವಿಯಲ್ಲಾಗಲೀ ಅಥವಾ ಇಲ್ಲಾಗಲೀ ನಿತ್ಯವೂ ಬ್ರಾಹ್ಮಣರು ಅಕ್ಷಯರು. ಹಿಂದೆ ಅಂಗಿರಸನು ತನ್ನ ತೇಜಸ್ಸಿನಿಂದ ಜಲವೆಲ್ಲವನ್ನೂ ಕುಡಿದುಬಿಟ್ಟಿದ್ದನು.

13138004a ಸ ತಾಃ ಪಿಬನ್ ಕ್ಷೀರಮಿವ ನಾತೃಪ್ಯತ ಮಹಾತಪಾಃ|

13138004c ಅಪೂರಯನ್ಮಹೌಘೇನ ಮಹೀಂ ಸರ್ವಾಂ ಚ ಪಾರ್ಥಿವ||

ಪಾರ್ಥಿವ! ನೀರೆಲ್ಲವನ್ನೂ ಹಾಲಿನಂತೆ ಸಂಪೂರ್ಣವಾಗಿ ಕುಡಿದ ನಂತರವೂ ತೃಪ್ತನಾಗದ ಆ ಮಹಾತಪಸ್ವಿಯು ನೀರಿನ ಮಹಾಪ್ರವಾಹವನ್ನೇ ಸೃಷ್ಟಿಸಿ ಅದರಿಂದ ಭೂಮಿಯೆಲ್ಲವನ್ನೂ ತುಂಬಿಬಿಟ್ಟನು.

13138005a ತಸ್ಮಿನ್ನಹಂ ಚ ಕ್ರುದ್ಧೇ ವೈ ಜಗತ್ತ್ಯಕ್ತ್ವಾ ತತೋ ಗತಃ|

13138005c ವ್ಯತಿಷ್ಠಮಗ್ನಿಹೋತ್ರೇ ಚ ಚಿರಮಂಗಿರಸೋ ಭಯಾತ್||

ಒಮ್ಮೆ ಅವನು ನನ್ನ ಮೇಲೂ ಕೋಪಗೊಂಡಾಗ ನಾನು ಅಂಗಿರಸನ ಭಯದಿಂದ ಬಹುಕಾಲ ಜಗತ್ತನ್ನೇ ತ್ಯಜಿಸಿ ಅಗ್ನಿಹೋತ್ರದಲ್ಲಿ ಅಡಗಿಕೊಂಡಿದ್ದೆನು.

13138006a ಅಭಿಶಪ್ತಶ್ಚ ಭಗವಾನ್ಗೌತಮೇನ ಪುರಂದರಃ|

13138006c ಅಹಲ್ಯಾಂ ಕಾಮಯಾನೋ ವೈ ಧರ್ಮಾರ್ಥಂ ಚ ನ ಹಿಂಸಿತಃ||

ಅಹಲ್ಯೆಯಲ್ಲಿ ಕಾಮಾಸಕ್ತನಾಗಿದ್ದ ಪುರಂದರನನ್ನೇ ಭಗವಾನ್ ಗೌತಮನು ಶಪಿಸಿದನು. ಧರ್ಮದ ರಕ್ಷಣಾರ್ಥವಾಗಿ ಅವನು ಅವನನ್ನು ಹಿಂಸಿಸಲಿಲ್ಲ.

13138007a ತಥಾ ಸಮುದ್ರೋ ನೃಪತೇ ಪೂರ್ಣೋ ಮೃಷ್ಟೇನ ವಾರಿಣಾ|

13138007c ಬ್ರಾಹ್ಮಣೈರಭಿಶಪ್ತಃ ಸಽಲ್ಲವಣೋದಃ ಕೃತೋ ವಿಭೋ||

ವಿಭೋ! ನೃಪತೇ! ಸಮುದ್ರವು ಮೊದಲು ಸಿಹಿನೀರಿನಿಂದಲೇ ತುಂಬಿಕೊಟ್ಟಿತ್ತು. ಬ್ರಾಹ್ಮಣರ ಶಾಪದಿಂದಲೇ ಅದರ ನೀರು ಉಪ್ಪಾಯಿತು.

13138008a ಸುವರ್ಣವರ್ಣೋ ನಿರ್ಧೂಮಃ ಸಂಹತೋರ್ಧ್ವಶಿಖಃ ಕವಿಃ|

13138008c ಕ್ರುದ್ಧೇನಾಂಗಿರಸಾ ಶಪ್ತೋ ಗುಣೈರೇತೈರ್ವಿವರ್ಜಿತಃ||

ಸುವರ್ಣವರ್ಣನಾಗಿದ್ದ, ನಿರ್ಧೂಮನಾಗಿದ್ದ ಮತ್ತು ಯಾವಾಗಲೂ ಮೇಲ್ಮುಖನಾಗಿಯೇ ಉರಿಯುತ್ತಿದ್ದ ಕವಿ ಅಗ್ನಿಯು ಕ್ರುದ್ಧ ಅಂಗಿರಸನಿಂದ ಶಪಿತನಾಗಿ ಈ ಗುಣಗಳನ್ನು ಕಳೆದುಕೊಂಡನು.

13138009a ಮರುತ[2]ಶ್ಚೂರ್ಣಿತಾನ್ಪಶ್ಯ ಯೇಽಹಸಂತ ಮಹೋದಧಿಮ್|

13138009c ಸುವರ್ಣಧಾರಿಣಾ ನಿತ್ಯಮವಶಪ್ತಾ ದ್ವಿಜಾತಿನಾ||

ಮಹೋದಧಿ ಸಮುದ್ರವನ್ನು ನೋಡಿ ನಕ್ಕ ಮರುತ್ತರು ಚೂರುಚೂರಾದುದನ್ನು ನೋಡು. ಸುವರ್ಣಧಾರಿಗಳಾದ ಅವರು ನಿತ್ಯವೂ ದ್ವಿಜಾತಿಯವರಿಂದ ಶಪ್ತರಾಗಿದ್ದಾರೆ[3].

13138010a ಸಮೋ ನ ತ್ವಂ ದ್ವಿಜಾತಿಭ್ಯಃ ಶ್ರೇಷ್ಠಂ[4] ವಿದ್ಧಿ ನರಾಧಿಪ|

13138010c ಗರ್ಭಸ್ಥಾನ್ ಬ್ರಾಹ್ಮಣಾನ್ಸಮ್ಯಙ್ನಮಸ್ಯತಿ ಕಿಲ ಪ್ರಭುಃ||

ನರಾಧಿಪ! ನೀನು ಬ್ರಾಹ್ಮಣರಿಗೆ ಸಮಾನನಾಗಲಾರೆ. ಅವರು ನಿನಗಿಂತಲೂ ಶ್ರೇಷ್ಠರೆಂದು ತಿಳಿ. ರಾಜನು ಗರ್ಭದಲ್ಲಿರುವ ಬ್ರಾಹ್ಮಣರಿಗೂ ನಮಸ್ಕರಿಸುತ್ತಾನಲ್ಲವೇ?

13138011a ದಂಡಕಾನಾಂ ಮಹದ್ರಾಜ್ಯಂ ಬ್ರಾಹ್ಮಣೇನ ವಿನಾಶಿತಮ್|

13138011c ತಾಲಜಂಘಂ ಮಹತ್ಕ್ಷತ್ರಮೌರ್ವೇಣೈಕೇನ ನಾಶಿತಮ್||

ದಂಡಕರ ಮಹಾರಾಜ್ಯವು ಬ್ರಾಹ್ಮಣನಿಂದ ವಿನಾಶವಾಯಿತು. ತಾಲಜಂಘರೆಂಬ ಮಹಾ ಕ್ಷತ್ರಿಯ ಕುಲವು ಔರ್ವನೊಬ್ಬನಿಂದಲೇ ನಾಶವಾಯಿತು.

13138012a ತ್ವಯಾ ಚ ವಿಪುಲಂ ರಾಜ್ಯಂ ಬಲಂ ಧರ್ಮಃ ಶ್ರುತಂ ತಥಾ|

13138012c ದತ್ತಾತ್ರೇಯಪ್ರಸಾದೇನ ಪ್ರಾಪ್ತಂ ಪರಮದುರ್ಲಭಮ್||

ನೀನೂ ಕೂಡ ದತ್ತಾತ್ರೇಯನ ಪ್ರಸಾದದಿಂದ ಪರಮದುರ್ಲಭ ವಿಪುಲ ರಾಜ್ಯ, ಬಲ, ಧರ್ಮ ಮತ್ತು ವಿದ್ಯೆಯನ್ನು ಪಡೆದಿದ್ದೀಯೆ.

13138013a ಅಗ್ನಿಂ ತ್ವಂ ಯಜಸೇ ನಿತ್ಯಂ ಕಸ್ಮಾದರ್ಜುನ ಬ್ರಾಹ್ಮಣಮ್|

13138013c ಸ ಹಿ ಸರ್ವಸ್ಯ ಲೋಕಸ್ಯ ಹವ್ಯವಾಟ್ಕಿಂ ನ ವೇತ್ಸಿ ತಮ್||

ಅರ್ಜುನ! ನಿತ್ಯವೂ ನೀನು ಬ್ರಾಹ್ಮಣನಾದ ಅಗ್ನಿಯನ್ನು ಏಕೆ ಪೂಜಿಸುತ್ತೀಯೆ? ಅವನೇ ಸರ್ವ ಲೋಕಗಳಿಗೂ ಹವಿಸ್ಸನ್ನು ಒಯ್ಯುವವನು ಎಂದು ನಿನಗೆ ತಿಳಿದಿಲ್ಲವೇ?

13138014a ಅಥ ವಾ ಬ್ರಾಹ್ಮಣಶ್ರೇಷ್ಠಮನು ಭೂತಾನುಪಾಲಕಮ್|

13138014c ಕರ್ತಾರಂ ಜೀವಲೋಕಸ್ಯ ಕಸ್ಮಾಜ್ಜಾನನ್ವಿಮುಹ್ಯಸೇ||

ಬ್ರಾಹ್ಮಣ ಶ್ರೇಷ್ಠನು ಭೂತಗಳ ಪಾಲಕನೆಂದೂ ಅಥವಾ ಜೀವಲೋಕದ ಕರ್ತಾರನೆಂದು ತಿಳಿದೂ ನೀನು ಏಕೆ ಮೋಹಗೊಳ್ಳುತ್ತಿರುವೆ?

13138015a ತಥಾ ಪ್ರಜಾಪತಿರ್ಬ್ರಹ್ಮಾ ಅವ್ಯಕ್ತಃ ಪ್ರಭವಾಪ್ಯಯಃ[5]|

13138015c ಯೇನೇದಂ ನಿಖಿಲಂ ವಿಶ್ವಂ ಜನಿತಂ ಸ್ಥಾವರಂ ಚರಮ್||

ಸ್ಥಾವರ-ಚರದಿಂದ ಕೂಡಿದ ಈ ನಿಖಿಲ ವಿಶ್ವವೂ ಯಾರಿಂದ ಹುಟ್ಟಿದೆಯೋ ಆ ಅವ್ಯಕ್ತ ಪ್ರಭು ಅಪ್ಯಯ ಪ್ರಜಾಪತಿಯೂ ಬ್ರಾಹ್ಮಣನೇ.

13138016a ಅಂಡಜಾತಂ ತು ಬ್ರಹ್ಮಾಣಂ ಕೇ ಚಿದಿಚ್ಚಂತ್ಯಪಂಡಿತಾಃ|

13138016c ಅಂಡಾದ್ಭಿನ್ನಾದ್ಬಭುಃ ಶೈಲಾ ದಿಶೋಽಂಭಃ ಪೃಥಿವೀ ದಿವಮ್||

ಕೆಲವು ಅಪಂಡಿತರು ಬ್ರಹ್ಮನು ಅಂಡದಿಂದ ಹುಟ್ಟಿದವನೆಂದು ಹೇಳುತ್ತಾರೆ. ಆದರೆ ಒಡೆದ ಅಂಡದಿಂದ ಪರ್ವತಗಳು, ದಿಕ್ಕುಗಳು, ಜಲ, ಪೃಥ್ವೀ ಮತ್ತು ಸ್ವರ್ಗ – ಇವುಗಳು ಹೇಗೆ ಹುಟ್ಟಿಯಾವು?[6]

13138017a ದ್ರಷ್ಟವ್ಯಂ ನೈತದೇವಂ ಹಿ ಕಥಂ ಜ್ಯಾಯಸ್ತಮೋ[7] ಹಿ ಸಃ|

13138017c ಸ್ಮೃತಮಾಕಾಶಮಂಡಂ ತು ತಸ್ಮಾಜ್ಜಾತಃ ಪಿತಾಮಹಃ||

ಆದರೆ ಹಾಗೆ ಭಾವಿಸಬಾರದು. ಹೇಗೆ ತಾನೇ ಅವನು ತಮದಿಂದ ಹುಟ್ಟಿಯಾನು? ಆಕಾಶವನ್ನು ಅಂಡವೆಂದು ತಿಳಿದಿದ್ದಾರೆ. ಆಕಾಶದಿಂದ ಹುಟ್ಟಿದ ಪಿತಾಮಹನನ್ನು ಅಂಡಜ ಎನ್ನುತ್ತಾರೆ.[8]

13138018a ತಿಷ್ಠೇತ್ಕಥಮಿತಿ ಬ್ರೂಹಿ ನ ಕಿಂ ಚಿದ್ಧಿ ತದಾ ಭವೇತ್|

13138018c ಅಹಂಕಾರ ಇತಿ ಪ್ರೋಕ್ತಃ ಸರ್ವತೇಜೋಗತಃ ಪ್ರಭುಃ||

ಬ್ರಹ್ಮನು ಆಕಾಶದಲ್ಲಿ ಹುಟ್ಟಿದವನಾದರೆ ಅವನು ಅಲ್ಲಿ ನಿಂತುದು ಹೇಗೆ ಎಂದು ಕೇಳಬಹುದು. ಪ್ರಭುವು ಆಗ ಅಹಂಕಾರ ರೂಪದಲ್ಲಿ ಸರ್ವತೇಜೋಮಯನಾಗಿದ್ದನು ಎಂದು ಹೇಳುತ್ತಾರೆ.

13138019a ನಾಸ್ತ್ಯಂಡಮಸ್ತಿ ತು ಬ್ರಹ್ಮಾ ಸ ರಾಜಽಲ್ಲೋಕಭಾವನಃ|

13138019c ಇತ್ಯುಕ್ತಃ ಸ ತದಾ ತೂಷ್ಣೀಮಭೂದ್ವಾಯುಸ್ತಮಬ್ರವೀತ್||

ರಾಜನ್! ವಾಸ್ತವವಾಗಿ ಅಂಡವೆನ್ನುವ ಯಾವ ವಸ್ತುವೂ ಇಲ್ಲ. ಬ್ರಹ್ಮನೇ ಆ ತೇಜಸ್ಸಾಗಿ ಲೋಕಗಳೆಲ್ಲವನ್ನೂ ಸೃಷ್ಟಿಸಿದನು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಅಷ್ಟತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾಮೂವತ್ತೆಂಟನೇ ಅಧ್ಯಾಯವು.

[1] ಅಜೇಯಾ (ಭಾರತ ದರ್ಶನ).

[2] ಮಹತ (ಭಾರತ ದರ್ಶನ).

[3] ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಗಳಲ್ಲಿ ಈ ಶ್ಲೋಕಕ್ಕೆ – ಸಗರನ ಪುತ್ರರು ಕಪಿಲ ಮಹರ್ಷಿಯ ಕೋಪದಿಂದ ಶಪಿತರಾಗಿ ಭಸ್ಮರಾದ ಪ್ರಸಂಗವನ್ನು ಸೂಚಿಸುವ ಅನುವಾದವಿದೆ.

[4] ಶ್ರೇಯೋ (ಭಾರತ ದರ್ಶನ).

[5] ಪ್ರಭುರವ್ಯಯಃ (ಭಾರತ ದರ್ಶನ).

[6] Some learned people say that Brahma was born from an egg. When that original egg cracked, mountains, directions, water earth and heaven were created. (Bibek Debroy)

[7] ಜಾಯೇದಜೋ (ಭಾರತ ದರ್ಶನ).

[8] No one saw that happen. How could he have been born from that darkness? The sacred texts also say that space was the egg from which the grandfather was generated. (Bibek Debroy)

Comments are closed.