ಅನುಶಾಸನ ಪರ್ವ: ದಾನಧರ್ಮ ಪರ್ವ
೧೨೮
13128001 ಮಹೇಶ್ವರ ಉವಾಚ|
13128001a ತಿಲೋತ್ತಮಾ ನಾಮ ಪುರಾ ಬ್ರಹ್ಮಣಾ ಯೋಷಿದುತ್ತಮಾ|
13128001c ತಿಲಂ ತಿಲಂ ಸಮುದ್ಧೃತ್ಯ ರತ್ನಾನಾಂ ನಿರ್ಮಿತಾ ಶುಭಾ||
ಮಹೇಶ್ವರನು ಹೇಳಿದನು: “ಹಿಂದೆ ಬ್ರಹ್ಮನು ಕೋಶ-ಕೋಶವನ್ನೂ ರತ್ನಗಳಿಂದ ತುಂಬಿಸಿ ತಿಲೋತ್ತಮ ಎಂಬ ಹೆಸರಿನ ಉತ್ತಮ ಶುಭ ಸ್ತ್ರೀಯನ್ನು ನಿರ್ಮಿಸಿದನು.
13128002a ಸಾಭ್ಯಗಚ್ಚತ ಮಾಂ ದೇವಿ ರೂಪೇಣಾಪ್ರತಿಮಾ ಭುವಿ|
13128002c ಪ್ರದಕ್ಷಿಣಂ ಲೋಭಯಂತೀ ಮಾಂ ಶುಭೇ ರುಚಿರಾನನಾ||
ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದ ಆ ರುಚಿರಾನನೆ ಶುಭೆ ದೇವಿಯು ನನ್ನನ್ನು ಮೋಹಗೊಳಿಸುತ್ತಾ ನನ್ನ ಸುತ್ತಲೂ ಪ್ರದಕ್ಷಿಣೆ ಹಾಕಿದಳು.
13128003a ಯತೋ ಯತಃ ಸಾ ಸುದತೀ ಮಾಮುಪಾಧಾವದಂತಿಕೇ|
13128003c ತತಸ್ತತೋ ಮುಖಂ ಚಾರು ಮಮ ದೇವಿ ವಿನಿರ್ಗತಮ್||
ದೇವೀ! ಆ ಸುದತಿಯು ನನ್ನನ್ನು ಪ್ರದಕ್ಷಿಣೆಮಾಡುತ್ತಾ ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಳೋ ಆಯಾ ದಿಕ್ಕುಗಳಲ್ಲಿ ನನ್ನಿಂದ ಮುಖಗಳು ಹೊರಬಂದವು.
13128004a ತಾಂ ದಿದೃಕ್ಷುರಹಂ ಯೋಗಾಚ್ಚತುರ್ಮೂರ್ತಿತ್ವಮಾಗತಃ|
13128004c ಚತುರ್ಮುಖಶ್ಚ ಸಂವೃತ್ತೋ ದರ್ಶಯನ್ಯೋಗಮಾತ್ಮನಃ||
ಅವಳನ್ನು ನೋಡಲೋಸುಗ ನಾನು ಯೋಗದಿಂದ ಚತುರ್ಮೂರ್ತಿತ್ವವನ್ನು ಪಡೆದುಕೊಂಡೆನು. ಸುತ್ತಲೂ ನೋಡಲೋಸುಗ ಯೋಗದಿಂದ ನನ್ನನ್ನು ಚತುರ್ಮುಖನನ್ನಾಗಿಸಿಕೊಂಡೆನು.
13128005a ಪೂರ್ವೇಣ ವದನೇನಾಹಮಿಂದ್ರತ್ವಮನುಶಾಸ್ಮಿ ಹ|
13128005c ಉತ್ತರೇಣ ತ್ವಯಾ ಸಾರ್ಧಂ ರಮಾಮ್ಯಹಮನಿಂದಿತೇ||
ನನ್ನ ಪೂರ್ವ ವದನದಿಂದ ನಾನು ಇಂದ್ರತ್ವವನ್ನು ಅನುಶಾಸನಮಾಡುತ್ತೇನೆ. ಅನಿಂದಿತೇ! ಉತ್ತರದ ವದನದಿಂದ ನಿನ್ನೊಡನೆ ರಮಿಸುತ್ತೇನೆ.
13128006a ಪಶ್ಚಿಮಂ ಮೇ ಮುಖಂ ಸೌಮ್ಯಂ ಸರ್ವಪ್ರಾಣಿಸುಖಾವಹಮ್|
13128006c ದಕ್ಷಿಣಂ ಭೀಮಸಂಕಾಶಂ ರೌದ್ರಂ ಸಂಹರತಿ ಪ್ರಜಾಃ||
ಪಶ್ಚಿಮದ ಸೌಮ್ಯ ಮುಖದಿಂದ ನಾನು ಪ್ರಾಣಿಗಳಿಗೆ ಸುಖವನ್ನು ತರುತ್ತೇನೆ. ದಕ್ಷಿಣದ ಭೀಮಸಂಕಾಶ ರೌದ್ರ ಮುಖದಿಂದ ಪ್ರಜೆಗಳನ್ನು ಸಂಹರಿಸುತ್ತೇನೆ.
13128007a ಜಟಿಲೋ ಬ್ರಹ್ಮಚಾರೀ ಚ ಲೋಕಾನಾಂ ಹಿತಕಾಮ್ಯಯಾ|
13128007c ದೇವಕಾರ್ಯಾರ್ಥಸಿದ್ಧ್ಯರ್ಥಂ ಪಿನಾಕಂ ಮೇ ಕರೇ ಸ್ಥಿತಮ್||
ಲೋಕಗಳ ಹಿತವನ್ನು ಬಯಸಿ ಜಟಿಲನೂ ಬ್ರಹ್ಮಚಾರಿಯೂ ಆಗಿದ್ದೇನೆ. ದೇವಕಾರ್ಯಾರ್ಥ ಸಿದ್ಧಿಗಾಗಿ ನನ್ನ ಕರದಲ್ಲಿ ಪಿನಾಕವನ್ನು ಹಿಡಿದ್ದಿದ್ದೇನೆ.
13128008a ಇಂದ್ರೇಣ ಚ ಪುರಾ ವಜ್ರಂ ಕ್ಷಿಪ್ತಂ ಶ್ರೀಕಾಂಕ್ಷಿಣಾ ಮಮ|
13128008c ದಗ್ಧ್ವಾ ಕಂಠಂ ತು ತದ್ಯಾತಂ ತೇನ ಶ್ರೀಕಂಠತಾ ಮಮ||
ಶ್ರೀಯನ್ನು ಬಯಸಿ ಇಂದ್ರನು ಹಿಂದೆ ವಜ್ರವನ್ನು ಎಸೆದ ಕಾರಣ ಅದು ನನ್ನ ಕಂಠವನ್ನು ಸುಟ್ಟಿದುದರಿಂದ ನಾನು ಶ್ರೀಕಂಠತ್ವವನ್ನು ಪಡೆದುಕೊಂಡೆನು.”
[1]13128009 ಉಮೋವಾಚ|
13128009a ವಾಹನೇಷು ಪ್ರಭೂತೇಷು ಶ್ರೀಮತ್ಸ್ವನ್ಯೇಷು ಸತ್ಸು ತೇ|
13128009c ಕಥಂ ಗೋವೃಷಭೋ ದೇವ ವಾಹನತ್ವಮುಪಾಗತಃ||
ಉಮೆಯು ಹೇಳಿದಳು: “ದೇವ! ಅನ್ಯ ಶ್ರೀಮಂತ ವಾಹನಗಳು ಇರುವಾಗ ಗೋವೃಷಭಕ್ಕೆ ಏಕೆ ನಿನ್ನ ವಾಹನತ್ವವು ದೊರಕಿತು?”
13128010 ಮಹೇಶ್ವರ ಉವಾಚ|
13128010a ಸುರಭೀಂ ಸಸೃಜೇ ಬ್ರಹ್ಮಾಮೃತಧೇನುಂ ಪಯೋಮುಚಮ್|
13128010c ಸಾ ಸೃಷ್ಟಾ ಬಹುಧಾ ಜಾತಾ ಕ್ಷರಮಾಣಾ ಪಯೋಽಮೃತಮ್||
ಮಹೇಶ್ವರನು ಹೇಳಿದನು: “ಅಮೃತವನ್ನು ಹಾಲಾಗಿ ಸುರಿಸುವ ಸುರಭೀ ಎಂಬ ಧೇನುವನ್ನು ಬ್ರಹ್ಮನು ಸೃಷ್ಟಿಸಿದನು. ಅಮೃತಮಯ ಹಾಲನ್ನು ಕೊಡುವ ಅದರಲ್ಲಿ ಅನೇಕ ಜಾತಿಯ ಹಸುಗಳು ಹುಟ್ಟಿಕೊಂಡವು.
13128011a ತಸ್ಯಾ ವತ್ಸಮುಖೋತ್ಸೃಷ್ಟಃ ಫೇನೋ ಮದ್ಗಾತ್ರಮಾಗತಃ|
13128011c ತತೋ ದಗ್ಧಾ ಮಯಾ ಗಾವೋ ನಾನಾವರ್ಣತ್ವಮಾಗತಾಃ||
ಅವಳ ಕರುವಿನ ಮುಖದಿಂದ ಚೆಲ್ಲಲ್ಪಟ್ಟ ಹಾಲಿನ ನೊರೆಯು ನನ್ನ ಶರೀರದ ಮೇಲೆ ಬಿದ್ದಾಗ ನನ್ನಿಂದ ದಗ್ಧವಾದ ಗೋವುಗಳಿಗೆ ನಾನಾ ಬಣ್ಣಗಳು ಬಂದವು.
13128012a ತತೋಽಹಂ ಲೋಕಗುರುಣಾ ಶಮಂ ನೀತೋಽರ್ಥವೇದಿನಾ|
13128012c ವೃಷಂ ಚೇಮಂ ಧ್ವಜಾರ್ಥಂ ಮೇ ದದೌ ವಾಹನಮೇವ ಚ||
ಆಗ ನನ್ನನ್ನು ಶಾಂತಗೊಳಿಸಲು ಅರ್ಥವೇದೀ ಲೋಕಗುರು ಬ್ರಹ್ಮನು ವೃಷಭವನ್ನು ನನ್ನ ಧ್ವಜಕ್ಕಾಗಿ ಮತ್ತು ವಾಹನಕ್ಕಾಗಿ ನೀಡಿದನು.”
13128013 ಉಮೋವಾಚ|
13128013a ನಿವಾಸಾ ಬಹುರೂಪಾಸ್ತೇ ವಿಶ್ವರೂಪಗುಣಾನ್ವಿತಾಃ|
13128013c ತಾಂಶ್ಚ ಸಂತ್ಯಜ್ಯ ಭಗವನ್ ಶ್ಮಶಾನೇ ರಮಸೇ ಕಥಮ್||
13128014a ಕೇಶಾಸ್ಥಿಕಲಿಲೇ ಭೀಮೇ ಕಪಾಲಘಟಸಂಕುಲೇ|
13128014c ಗೃಧ್ರಗೋಮಾಯುಕಲಿಲೇ ಚಿತಾಗ್ನಿಶತಸಂಕುಲೇ||
13128015a ಅಶುಚೌ ಮಾಂಸಕಲಿಲೇ ವಸಾಶೋಣಿತಕರ್ದಮೇ|
13128015c ವಿನಿಕೀರ್ಣಾಮಿಷಚಯೇ ಶಿವಾನಾದವಿನಾದಿತೇ||
ಉಮೆಯು ಹೇಳಿದಳು: “ಭಗವನ್! ನಿನಗೆ ವಿಶ್ವರೂಪಗುಣಾನ್ವಿತವಾದ ಬಹುರೂಪದ ನಿವಾಸಗಳಿವೆ. ಅವುಗಳನ್ನು ತ್ಯಜಿಸಿ ನೀನು ಕೂದಲು-ಮೂಳೆಗಳು ಹರಡಿರುವ, ಭಯಂಕರ ಕಪಾಲ-ಮಡಿಕೆಗಳ ರಾಶಿಗಳಿರುವ, ಹದ್ದು-ನರಿಗಳು ಸಂಚರಿಸುವ, ನೂರಾರು ಚಿತಾಗ್ನಿಗಳು ಉರಿಯುತ್ತಿರುವ, ಮಾಂಸದ ಮುದ್ದೆಗಳು-ಕೀವು-ರಕ್ತಗಳಿಂದ ಅಶೌಚವಾಗಿರುವ ಚೆಲ್ಲಿದ್ದ ಮಾಂಸಗಳ ಆಸೆಯಿಂದ ನರಿಗಳು ಕೂಗುತ್ತಿರುವ ಶ್ಮಶಾನದಲ್ಲಿ ಏಕೆ ರಮಿಸುತ್ತೀಯೆ?”
13128016 ಮಹೇಶ್ವರ ಉವಾಚ|
13128016a ಮೇಧ್ಯಾನ್ವೇಷೀ ಮಹೀಂ ಕೃತ್ಸ್ನಾಂ ವಿಚರಾಮಿ ನಿಶಾಸ್ವಹಮ್|
13128016c ನ ಚ ಮೇಧ್ಯತರಂ ಕಿಂ ಚಿಚ್ಚ್ಮಶಾನಾದಿಹ ವಿದ್ಯತೇ||
ಮಹೇಶ್ವರನು ಹೇಳಿದನು: “ಹಗಲು ರಾತ್ರಿ ನಾನು ಪವಿತ್ರ ಸ್ಥಳವನ್ನು ಹುಡುಕುತ್ತಾ ಇಡೀ ಭೂಮಿಯನ್ನು ಸುತ್ತುತ್ತಿರುತ್ತೇನೆ. ಆದರೆ ಶ್ಮಶಾನದಷ್ಟು ಪುಣ್ಯ ಭೂಮಿಯು ನನಗೆ ಕಾಣಲಿಲ್ಲ.
13128017a ತೇನ ಮೇ ಸರ್ವವಾಸಾನಾಂ ಶ್ಮಶಾನೇ ರಮತೇ ಮನಃ|
13128017c ನ್ಯಗ್ರೋಧಶಾಖಾಸಂಚನ್ನೇ ನಿರ್ಭುಕ್ತಸ್ರಗ್ವಿಭೂಷಿತೇ||
ಆಲದ ಮರದ ರೆಂಬೆಗಳಿಂದ ಆಚ್ಛಾದಿತವಾಗಿರುವ ಮತ್ತು ತಿರುಚಿಹಾಕಲ್ಪಟ್ಟ ಪುಷ್ಪಹಾರಗಳಿಂದ ವಿಭೂಷಿತವಾಗಿರುವ ಶ್ಮಶಾನವೇ ನನಗೆ ಎಲ್ಲ ಸ್ಥಾನಗಳಿಗಿಂತ ಸಂತೋಷವನ್ನು ನೀಡುತ್ತದೆ.
13128018a ತತ್ರ ಚೈವ ರಮಂತೇ ಮೇ ಭೂತಸಂಘಾಃ ಶುಭಾನನೇ|
13128018c ನ ಚ ಭೂತಗಣೈರ್ದೇವಿ ವಿನಾಹಂ ವಸ್ತುಮುತ್ಸಹೇ||
ಶುಭಾನನೇ! ಅಲ್ಲಿ ಭೂತಸಂಘಗಳೂ ರಮಿಸುತ್ತಿರುತ್ತವೆ. ದೇವಿ! ಭೂತಗಣಗಳಿಲ್ಲದಿರುವಲ್ಲಿ ನಾನು ವಾಸಿಸಲು ಬಯಸುವುದಿಲ್ಲ.
13128019a ಏಷ ವಾಸೋ ಹಿ ಮೇ ಮೇಧ್ಯಃ ಸ್ವರ್ಗೀಯಶ್ಚ ಮತೋ ಹಿ ಮೇ|
13128019c ಪುಣ್ಯಃ ಪರಮಕಶ್ಚೈವ ಮೇಧ್ಯಕಾಮೈರುಪಾಸ್ಯತೇ||
ಆದುದರಿಂದ ಶ್ಮಶಾನವು ನನಗೆ ಪರಮ ಪವಿತ್ರವೂ ಸ್ವರ್ಗದಂತಹ ವಾಸಸ್ಥಾನವೂ ಆಗಿದೆ. ಇದು ಪುಣ್ಯಪ್ರದವಾಗಿದೆ. ಪವಿತ್ರ ವಸ್ತುಗಳನ್ನು ಬಯಸುವವರು ಶ್ಮಶಾನಭೂಮಿಯನ್ನೇ ಆಶ್ರಯಿಸುತ್ತಾರೆ[2].”
[3]13128020 ಉಮೋವಾಚ|
13128020a ಭಗವನ್ಸರ್ವಭೂತೇಶ ಸರ್ವಧರ್ಮಭೃತಾಂ ವರ|
13128020c ಪಿನಾಕಪಾಣೇ ವರದ ಸಂಶಯೋ ಮೇ ಮಹಾನಯಮ್||
ಉಮೆಯು ಹೇಳಿದಳು: “ಭಗವನ್! ಸರ್ವಭೂತೇಶ! ಸರ್ವಧರ್ಮಧಾರಿಗಳಲ್ಲಿ ಶ್ರೇಷ್ಠ! ಪಿನಾಕಪಾಣೇ! ವರದ! ನನಗೆ ಇನ್ನೊಂದು ಮಹಾಸಂಶಯವುಂಟಾಗಿದೆ.
13128021a ಅಯಂ ಮುನಿಗಣಃ ಸರ್ವಸ್ತಪಸ್ತಪ ಇತಿ ಪ್ರಭೋ|
13128021c ತಪೋನ್ವೇಷಕರೋ ಲೋಕೇ ಭ್ರಮತೇ ವಿವಿಧಾಕೃತಿಃ||
ಪ್ರಭೋ! ಈ ಮುನಿಗಣವೆಲ್ಲವೂ ತಪಸ್ಸನ್ನಾಚರಿಸಿ ತಪಸ್ವಿಗಳೆಂದೆನಿಸಿಕೊಂಡಿದ್ದಾರೆ. ವಿವಿಧ ಆಕೃತಿಗಳಲ್ಲಿರುವ ಈ ತಪೋನ್ವೇಷಕರರು ಲೋಕದಲ್ಲಿ ತಿರುಗಾಡುತ್ತಿರುತ್ತಾರೆ.
13128022a ಅಸ್ಯ ಚೈವರ್ಷಿಸಂಘಸ್ಯ ಮಮ ಚ ಪ್ರಿಯಕಾಮ್ಯಯಾ|
13128022c ಏತಂ ಮಮೇಹ ಸಂದೇಹಂ ವಕ್ತುಮರ್ಹಸ್ಯರಿಂದಮ||
ಅರಿಂದಮ! ಈ ಋಷಿಸಂಘದ ಮತ್ತು ನನ್ನ ಪ್ರಿಯವನ್ನು ಬಯಸಿ ಈ ಸಂದೇಹವನ್ನು ನೀನು ನಿವಾರಿಸಬೇಕು.
13128023a ಧರ್ಮಃ ಕಿಂಲಕ್ಷಣಃ ಪ್ರೋಕ್ತಃ ಕಥಂ ವಾಚರಿತುಂ ನರೈಃ|
13128023c ಶಕ್ಯೋ ಧರ್ಮಮವಿಂದದ್ಭಿರ್ಧರ್ಮಜ್ಞ ವದ ಮೇ ಪ್ರಭೋ||
ಧರ್ಮಜ್ಞ! ಪ್ರಭೋ! ಧರ್ಮದ ಲಕ್ಷಣವು ಏನೆಂದು ಹೇಳುತ್ತಾರೆ? ಧರ್ಮವನ್ನು ತಿಳಿಯದವರು ಧರ್ಮವನ್ನು ಆಚರಿಸುವುದಾದರೂ ಹೇಗೆ? ಇದರ ಕುರಿತು ನನಗೆ ಹೇಳು!””
13128024 ನಾರದ ಉವಾಚ|
13128024a ತತೋ ಮುನಿಗಣಃ ಸರ್ವಸ್ತಾಂ ದೇವೀಂ ಪ್ರತ್ಯಪೂಜಯತ್|
13128024c ವಾಗ್ಭಿರ್ಋಗ್ಭೂಷಿತಾರ್ಥಾಭಿಃ ಸ್ತವೈಶ್ಚಾರ್ಥವಿದಾಂ ವರ||
ನಾರದನು ಹೇಳಿದನು: “ಅರ್ಥವಿದರಲ್ಲಿ ಶ್ರೇಷ್ಠ! ಆಗ ಸರ್ವ ಮುನಿಗಣವೂ ಅರ್ಥಭೂಷಿತವಾದ ವಾಕ್ಕು-ಋಕ್ಕು ಮತ್ತು ಸ್ತವಗಳಿಂದ ದೇವಿಯನ್ನು ಪೂಜಿಸಿತು.
13128025 ಮಹೇಶ್ವರ ಉವಾಚ|
13128025a ಅಹಿಂಸಾ ಸತ್ಯವಚನಂ ಸರ್ವಭೂತಾನುಕಂಪನಮ್|
13128025c ಶಮೋ ದಾನಂ ಯಥಾಶಕ್ತಿ ಗಾರ್ಹಸ್ಥ್ಯೋ ಧರ್ಮ ಉತ್ತಮಃ||
ಮಹೇಶ್ವರನು ಹೇಳಿದನು: “ಅಹಿಂಸೆ, ಸತ್ಯವಚನ, ಸರ್ವಭೂತಗಳಲ್ಲಿ ಅನುಕಂಪ, ಶಮ, ಮತ್ತು ಯಥಾಶಕ್ತಿ ದಾನ ಇವು ಗೃಹಸ್ಥನ ಉತ್ತಮ ಧರ್ಮಗಳು.
13128026a ಪರದಾರೇಷ್ವಸಂಕಲ್ಪೋ ನ್ಯಾಸಸ್ತ್ರೀಪರಿರಕ್ಷಣಮ್|
13128026c ಅದತ್ತಾದಾನವಿರಮೋ ಮಧುಮಾಂಸಸ್ಯ ವರ್ಜನಮ್||
13128027a ಏಷ ಪಂಚವಿಧೋ ಧರ್ಮೋ ಬಹುಶಾಖಃ ಸುಖೋದಯಃ|
13128027c ದೇಹಿಭಿರ್ಧರ್ಮಪರಮೈಃ ಕರ್ತವ್ಯೋ ಧರ್ಮಸಂಚಯಃ||
ಪರದಾರೆಯರನ್ನು ಬಯಸದಿರುವುದು, ನ್ಯಾಸರೂಪದಲ್ಲಿ ಇಟ್ಟುಕೊಂಡಿರುವ ಸ್ತ್ರೀಯನ್ನು ಪರಿರಕ್ಷಿಸುವುದು, ದಾನವಾಗಿ ಕೊಟ್ಟಿರದೇ ಇರುವವುಗಳನ್ನು ತೆಗೆದುಕೊಳ್ಳದೇ ಇರುವುದು, ಮಧು-ಮಾಂಸಗಳ ವರ್ಜನೆ ಈ ಐದುವಿಧದ ಧರ್ಮಗಳು ಸುಖವನ್ನು ನೀಡುತ್ತವೆ ಮತ್ತು ಇವಕ್ಕೆ ಅನೇಕ ಶಾಖೆಗಳಿವೆ. ಧರ್ಮವೇ ಶ್ರೇಯಸ್ಕರವೆಂದು ತಿಳಿದಿರುವವರು ಈ ಧರ್ಮಸಂಚಯವನ್ನು ಮಾಡಬೇಕು.”
13128028 ಉಮೋವಾಚ|
13128028a ಭಗವನ್ಸಂಶಯಂ ಪೃಷ್ಟಸ್ತಂ ಮೇ ವ್ಯಾಖ್ಯಾತುಮರ್ಹಸಿ|
13128028c ಚಾತುರ್ವರ್ಣ್ಯಸ್ಯ ಯೋ ಧರ್ಮಃ ಸ್ವೇ ಸ್ವೇ ವರ್ಣೇ ಗುಣಾವಹಃ||
ಉಮೆಯು ಹೇಳಿದಳು: “ಭಗವನ್! ನನ್ನಲ್ಲಿ ಮತ್ತೂ ಇನ್ನೊಂದು ಸಂಶಯವು ಉಂಟಾಗಿದೆ. ಅದನ್ನು ಬಗೆಹರಿಸಬೇಕು. ಚಾತುರ್ವಣ್ಯದಲ್ಲಿ ಯಾವ ಯಾವ ಧರ್ಮವು ಯಾವ ಯಾವ ವರ್ಣದವರಿಗೆ ಶ್ರೇಷ್ಠವಾಗಿರುತ್ತದೆ?
13128029a ಬ್ರಾಹ್ಮಣೇ ಕೀದೃಶೋ ಧರ್ಮಃ ಕ್ಷತ್ರಿಯೇ ಕೀದೃಶೋ ಭವೇತ್|
13128029c ವೈಶ್ಯೇ ಕಿಂಲಕ್ಷಣೋ ಧರ್ಮಃ ಶೂದ್ರೇ ಕಿಂಲಕ್ಷಣೋ ಭವೇತ್||
ಬ್ರಾಹ್ಮಣರ ಧರ್ಮವು ಹೇಗಿರುತ್ತದೆ? ಕ್ಷತ್ರಿಯರ ಧರ್ಮವು ಹೇಗಿರುತ್ತದೆ? ವೈಶ್ಯರ ಧರ್ಮದ ಲಕ್ಷಣವು ಏನು? ಶೂದ್ರರ ಧರ್ಮದ ಲಕ್ಷಣವು ಏನು?”
13128030 ಮಹೇಶ್ವರ ಉವಾಚ|
[4]13128030a ನ್ಯಾಯತಸ್ತೇ ಮಹಾಭಾಗೇ ಸಂಶಯಃ ಸಮುದೀರಿತಃ|
13128030c ಭೂಮಿದೇವಾ ಮಹಾಭಾಗಾಃ ಸದಾ ಲೋಕೇ ದ್ವಿಜಾತಯಃ||
ಮಹೇಶ್ವರನು ಹೇಳಿದನು: “ಮಹಾಭಾಗೇ! ನಿನ್ನ ಸಂಶಯವನ್ನು ಯಥಾನ್ಯಾಯವಾಗಿಯೇ ವ್ಯಕ್ತಪಡಿಸಿರುವೆ. ಮಹಾಭಾಗ ದ್ವಿಜಾತಿಯವರು ಸದಾ ಲೋಕದಲ್ಲಿ ಭೂಮಿದೇವರೆನಿಸಿಕೊಂಡಿರುತ್ತಾರೆ.
13128031a ಉಪವಾಸಃ ಸದಾ ಧರ್ಮೋ ಬ್ರಾಹ್ಮಣಸ್ಯ ನ ಸಂಶಯಃ|
13128031c ಸ ಹಿ ಧರ್ಮಾರ್ಥಮುತ್ಪನ್ನೋ ಬ್ರಹ್ಮಭೂಯಾಯ ಕಲ್ಪತೇ||
ಸದಾ ಬ್ರಾಹ್ಮಣನ ಧರ್ಮವು ಉಪವಾಸ[5] ಎನ್ನುವುದರಲ್ಲಿ ಸಂಶಯವಿಲ್ಲ. ಅದೇ ಧರ್ಮಾರ್ಥದಿಂದ ಬ್ರಹ್ಮತ್ವವು ಹುಟ್ಟುತ್ತದೆ ಎಂದು ಹೇಳುತ್ತಾರೆ.
13128032a ತಸ್ಯ ಧರ್ಮಕ್ರಿಯಾ ದೇವಿ ವ್ರತಚರ್ಯಾ ಚ ನ್ಯಾಯತಃ|
13128032c ತಥೋಪನಯನಂ ಚೈವ ದ್ವಿಜಾಯೈವೋಪಪದ್ಯತೇ||
ದೇವೀ! ಧರ್ಮಕ್ರಿಯೆಗಳೂ, ನ್ಯಾಯಯುಕ್ತವಾದ ವ್ರತಚರ್ಯವೂ, ಹಾಗೆಯೇ ಉಪನಯನವೂ ದ್ವಿಜಾತಿಯವರಿಗೆ ಹೇಳಲ್ಪಟ್ಟಿದೆ.
13128033a ಗುರುದೈವತಪೂಜಾರ್ಥಂ ಸ್ವಾಧ್ಯಾಯಾಭ್ಯಸನಾತ್ಮಕಃ|
13128033c ದೇಹಿಭಿರ್ಧರ್ಮಪರಮೈಶ್ಚರ್ತವ್ಯೋ ಧರ್ಮಸಂಭವಃ||
ಧರ್ಮದಲ್ಲಿ ಪರಮ ನಿಷ್ಠೆಯುಳ್ಳ ಮನುಷ್ಯರು ಗುರು-ದೇವತೆಗಳ ಪೂಜಾರ್ಥವಾಗಿ ಧರ್ಮಕ್ಕೆ ಮೂಲವಾದ ವೇದಾಭ್ಯಾಸವನ್ನು ಮಾಡಬೇಕು.”
13128034 ಉಮೋವಾಚ|
13128034a ಭಗವನ್ಸಂಶಯೋ ಮೇಽತ್ರ ತಂ ಮೇ ವ್ಯಾಖ್ಯಾತುಮರ್ಹಸಿ|
13128034c ಚಾತುರ್ವರ್ಣ್ಯಸ್ಯ ಧರ್ಮಂ ಹಿ ನೈಪುಣ್ಯೇನ ಪ್ರಕೀರ್ತಯ||
ಉಮೆಯು ಹೇಳಿದಳು: “ಭಗವನ್! ಇದರ ಕುರಿತು ನನಗೆ ಇನ್ನೂ ಸಂಶಯವಿದೆ. ಅದನ್ನು ಹೋಗಲಾಡಿಸಬೇಕು. ಚಾತುರ್ವಣ್ಯದ ಧರ್ಮವನ್ನು ನೈಪುಣ್ಯತೆಯಿಂದ ವರ್ಣಿಸು.”
13128035 ಮಹೇಶ್ವರ ಉವಾಚ|
13128035a ರಹಸ್ಯಶ್ರವಣಂ ಧರ್ಮೋ ವೇದವ್ರತನಿಷೇವಣಮ್|
13128035c ವ್ರತಚರ್ಯಾಪರೋ ಧರ್ಮೋ ಗುರುಪಾದಪ್ರಸಾದನಮ್||
ಮಹೇಶ್ವರನು ಹೇಳಿದನು: “ಧರ್ಮದ ರಹಸ್ಯಶ್ರವಣ, ವೇದವ್ರತಗಳನ್ನು ನಡೆಸುವುದು, ಮತ್ತು ಗುರುಪಾದವನ್ನು ಪ್ರಸನ್ನಗೊಳಿಸುವುದು ಇವು ಬ್ರಹ್ಮಚರ್ಯದ ಧರ್ಮಗಳು.
13128036a ಭೈಕ್ಷಚರ್ಯಾಪರೋ ಧರ್ಮೋ ಧರ್ಮೋ ನಿತ್ಯೋಪವಾಸಿತಾ|
13128036c ನಿತ್ಯಸ್ವಾಧ್ಯಾಯಿತಾ ಧರ್ಮೋ ಬ್ರಹ್ಮಚರ್ಯಾಶ್ರಮಸ್ತಥಾ||
ಬ್ರಹ್ಮಚರ್ಯಾಶ್ರಮದಲ್ಲಿ ನಿತ್ಯವೂ ಯಜ್ಞೋಪವೀತವನ್ನು ಧರಿಸಿರುವುದು, ನಿತ್ಯವೂ ಸ್ವಾಧ್ಯಾಯದಲ್ಲಿ ನಿರತನಾಗಿರುವುದು ಮತ್ತು ಭಿಕ್ಷಾಟನಾ ಧರ್ಮವೇ[6] ಪರಮ ಧರ್ಮ.
13128037a ಗುರುಣಾ ತ್ವಭ್ಯನುಜ್ಞಾತಃ ಸಮಾವರ್ತೇತ ವೈ ದ್ವಿಜಃ|
13128037c ವಿಂದೇತಾನಂತರಂ ಭಾರ್ಯಾಮನುರೂಪಾಂ ಯಥಾವಿಧಿ||
ಅನಂತರ ಗುರುವಿನ ಅನುಜ್ಞೆಯನ್ನು ಪಡೆದು ಸಮಾವರ್ತನೆಯನ್ನು ಮಾಡಿಕೊಳ್ಳಬೇಕು ಮತ್ತು ಯಥಾವಿಧಿಯಾಗಿ ಅನುರೂಪಳಾದವಳನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳಬೇಕು.
13128038a ಶೂದ್ರಾನ್ನವರ್ಜನಂ ಧರ್ಮಸ್ತಥಾ ಸತ್ಪಥಸೇವನಮ್|
13128038c ಧರ್ಮೋ ನಿತ್ಯೋಪವಾಸಿತ್ವಂ ಬ್ರಹ್ಮಚರ್ಯಂ ತಥೈವ ಚ||
ನಂತರ ಗೃಹಸ್ಥಾಶ್ರಮದಲ್ಲಿ ಶೂದ್ರಾನ್ನವನ್ನು ವರ್ಜಿಸುವುದು, ಸತ್ಪಥದಲ್ಲಿ ನಡೆಯುವುದು, ನಿತ್ಯವೂ ಉಪವಾಸಮಾಡುವುದು ಮತ್ತು ಬ್ರಹ್ಮಚರ್ಯ[7] ಇವು ಧರ್ಮಗಳು.
13128039a ಆಹಿತಾಗ್ನಿರಧೀಯಾನೋ ಜುಹ್ವಾನಃ ಸಂಯತೇಂದ್ರಿಯಃ|
13128039c ವಿಘಸಾಶೀ ಯತಾಹಾರೋ ಗೃಹಸ್ಥಃ ಸತ್ಯವಾಕ್ಶುಚಿಃ||
ಗೃಹಸ್ಥನು ಜಿತೇಂದ್ರಿಯನಾಗಿ ಅಗ್ನಿಯನ್ನು ಸಿದ್ಧಪಡಿಸಿ ಅಗ್ನಿಹೋತ್ರವನ್ನು ಮಾಡಬೇಕು. ಎಲ್ಲರೂ ಊಟಮಾಡಿದ ನಂತರ ಯಜ್ಞಶೇಷವನ್ನು ಊಟಮಾಡಬೇಕು, ಯತಾಹಾರಿಯಾಗಿರಬೇಕು. ಸತ್ಯವಾನನೂ ಶುಚಿಯಾಗಿಯೂ ಇರಬೇಕು.
13128040a ಅತಿಥಿವ್ರತತಾ ಧರ್ಮೋ ಧರ್ಮಸ್ತ್ರೇತಾಗ್ನಿಧಾರಣಮ್|
13128040c ಇಷ್ಟೀಶ್ಚ ಪಶುಬಂಧಾಂಶ್ಚ ವಿಧಿಪೂರ್ವಂ ಸಮಾಚರೇತ್||
ಅತಿಥಿವ್ರತವು ಅವನ ಧರ್ಮ. ಗಾರ್ಹಪತ್ಯಾದಿ ಮೂರು ಅಗ್ನಿಗಳನ್ನು ರಕ್ಷಿಸುವುದು ಅವನ ಧರ್ಮ. ಇಷ್ಟಿ ಮತ್ತು ಪಶುಬಂಧಗಳನ್ನೂ ವಿಧಿಪೂರ್ವಕವಾಗಿ ಆಚರಿಸಬೇಕು.
13128041a ಯಜ್ಞಶ್ಚ ಪರಮೋ ಧರ್ಮಸ್ತಥಾಹಿಂಸಾ ಚ ದೇಹಿಷು|
13128041c ಅಪೂರ್ವಭೋಜನಂ ಧರ್ಮೋ ವಿಘಸಾಶಿತ್ವಮೇವ ಚ||
ಅವನ ಪರಮ ಧರ್ಮವು ಯಜ್ಞ ಮತ್ತು ದೇಹಿಗಳಿಗೆ ಅಹಿಂಸೆ. ಮೊದಲು ಊಟಮಾಡದೇ ವಿಘಸವನ್ನು ಊಟಮಾಡುವುದೂ ಅವನ ಧರ್ಮವು.
13128042a ಭುಕ್ತೇ ಪರಿಜನೇ ಪಶ್ಚಾದ್ಭೋಜನಂ ಧರ್ಮ ಉಚ್ಯತೇ|
13128042c ಬ್ರಾಹ್ಮಣಸ್ಯ ಗೃಹಸ್ಥಸ್ಯ ಶ್ರೋತ್ರಿಯಸ್ಯ ವಿಶೇಷತಃ||
ಪರಿಜನರು ಊಟಮಾಡಿದ ನಂತರ ಊಟಮಾಡುವುದು ಧರ್ಮ ಎಂದು ಹೇಳಿದ್ದಾರೆ. ಇದು ವಿಶೇಷವಾಗಿ ಬ್ರಾಹ್ಮಣ ಶ್ರೋತ್ರೀಯ ಗೃಹಸ್ಥನ ಧರ್ಮವಾಗಿರುತ್ತದೆ.
13128043a ದಂಪತ್ಯೋಃ ಸಮಶೀಲತ್ವಂ ಧರ್ಮಶ್ಚ ಗೃಹಮೇಧಿನಾಮ್|
13128043c ಗೃಹ್ಯಾಣಾಂ ಚೈವ ದೇವಾನಾಂ ನಿತ್ಯಂ ಪುಷ್ಪಬಲಿಕ್ರಿಯಾ||
ದಂಪತಿಗಳಲ್ಲಿ ಸಮಶೀಲತ್ವವಿರಬೇಕು. ಇದು ಗೃಹಸ್ಥನ ಧರ್ಮವು. ಮನೆಯಲ್ಲಿರುವ ದೇವರಿಗೆ ನಿತ್ಯವೂ ಪುಷ್ಪಗಳಿಂದ ಪೂಜಿಸಿ ಅನ್ನದ ಬಲಿಯನ್ನು ನೀಡಬೇಕು.
13128044a ನಿತ್ಯೋಪಲೇಪನಂ ಧರ್ಮಸ್ತಥಾ ನಿತ್ಯೋಪವಾಸಿತಾ|
13128044c ಸುಸಂಮೃಷ್ಟೋಪಲಿಪ್ತೇ ಚ ಸಾಜ್ಯಧೂಮೋದ್ಗಮೇ ಗೃಹೇ||
ನಿತ್ಯವೂ ಮನೆಯನ್ನು ಸಾರಿಸುವುದು ಮತ್ತು ನಿತ್ಯವೂ ವ್ರತಗಳನ್ನು ನಡೆಸುವುದೂ ಗೃಹಸ್ಥನ ಧರ್ಮಗಳು. ಚೆನ್ನಾಗಿ ಗುಡಿಸಿ ಸಾರಿಸಿದ ಮನೆಯಲ್ಲಿ ಆಜ್ಯದ ಹೋಮದ ಹೊಗೆಯು ಪಸರಿಸಬೇಕು.
13128045a ಏಷ ದ್ವಿಜಜನೇ ಧರ್ಮೋ ಗಾರ್ಹಸ್ಥ್ಯೋ ಲೋಕಧಾರಣಃ|
13128045c ದ್ವಿಜಾತೀನಾಂ ಸತಾಂ ನಿತ್ಯಂ ಸದೈವೈಷ ಪ್ರವರ್ತತೇ||
ಇದೇ ಲೋಕವನ್ನು ರಕ್ಷಿಸುವ ಬ್ರಾಹ್ಮಣ ಗೃಹಸ್ಥನ ಧರ್ಮವು. ಉತ್ತಮ ಬ್ರಾಹ್ಮಣರು ನಿತ್ಯವೂ ಹೀಗೆಯೇ ನಡೆದುಕೊಳ್ಳುತ್ತಾರೆ.
13128046a ಯಸ್ತು ಕ್ಷತ್ರಗತೋ ದೇವಿ ತ್ವಯಾ ಧರ್ಮ ಉದೀರಿತಃ|
13128046c ತಮಹಂ ತೇ ಪ್ರವಕ್ಷ್ಯಾಮಿ ತಂ ಮೇ ಶೃಣು ಸಮಾಹಿತಾ||
ಕ್ಷತ್ರಿಯರ ಧರ್ಮದ ಕುರಿತು ನಾನು ಹೇಳಿದುದನ್ನು ನಿನಗೆ ಹೇಳುತ್ತೇನೆ. ಸಮಾಹಿತಳಾಗಿ ಕೇಳು.
13128047a ಕ್ಷತ್ರಿಯಸ್ಯ ಸ್ಮೃತೋ ಧರ್ಮಃ ಪ್ರಜಾಪಾಲನಮಾದಿತಃ|
13128047c ನಿರ್ದಿಷ್ಟಫಲಭೋಕ್ತಾ ಹಿ ರಾಜಾ ಧರ್ಮೇಣ ಯುಜ್ಯತೇ||
ಕ್ಷತ್ರಿಯನಿಗೆ ಪ್ರಜಾಪರಿಪಾಲನೆಯು ಪ್ರಥಮ ಧರ್ಮವೆಂದು ಹೇಳಿದ್ದಾರೆ. ಪ್ರಜೆಗಳ ನಿರ್ಧಿಷ್ಟ ಫಲವನ್ನು ಪಡೆದುಕೊಳ್ಳುವ ರಾಜನು ಧರ್ಮದ ಫಲವನ್ನು ಪಡೆದುಕೊಳ್ಳುತ್ತಾನೆ.
[8]13128048a ಪ್ರಜಾಃ ಪಾಲಯತೇ ಯೋ ಹಿ ಧರ್ಮೇಣ ಮನುಜಾಧಿಪಃ|
13128048c ತಸ್ಯ ಧರ್ಮಾರ್ಜಿತಾ ಲೋಕಾಃ ಪ್ರಜಾಪಾಲನಸಂಚಿತಾಃ||
ಧರ್ಮದಿಂದ ಪ್ರಜೆಗಳನ್ನು ಪಾಲಿಸುವ ಮನುಜಾಧಿಮತು ಪ್ರಜಾಪಾಲನದಿಂದ ಸಂಪಾದಿಸಿ ಕೂಡಿಟ್ಟ ಧರ್ಮದಿಂದ ಉತ್ತಮ ಲೋಕಗಳನ್ನು ಪಡೆದುಕೊಳ್ಳುತ್ತಾನೆ.
13128049a ತತ್ರ ರಾಜ್ಞಃ ಪರೋ ಧರ್ಮೋ ದಮಃ ಸ್ವಾಧ್ಯಾಯ ಏವ ಚ|
13128049c ಅಗ್ನಿಹೋತ್ರಪರಿಸ್ಪಂದೋ ದಾನಾಧ್ಯಯನಮೇವ ಚ||
13128050a ಯಜ್ಞೋಪವೀತಧಾರಣಂ ಯಜ್ಞೋ ಧರ್ಮಕ್ರಿಯಾಸ್ತಥಾ|
13128050c ಭೃತ್ಯಾನಾಂ ಭರಣಂ ಧರ್ಮಃ ಕೃತೇ ಕರ್ಮಣ್ಯಮೋಘತಾ||
13128051a ಸಮ್ಯಗ್ದಂಡೇ ಸ್ಥಿತಿರ್ಧರ್ಮೋ ಧರ್ಮೋ ವೇದಕ್ರತುಕ್ರಿಯಾಃ|
13128051c ವ್ಯವಹಾರಸ್ಥಿತಿರ್ಧರ್ಮಃ ಸತ್ಯವಾಕ್ಯರತಿಸ್ತಥಾ||
ಇಂದ್ರಿಯ ಸಂಯಮ, ಸ್ವಾಧ್ಯಾಯ, ಅಗ್ನಿಹೋತ್ರ, ದಾನ, ಅಧ್ಯಯನ, ಯಜ್ಞೋಪವೀತಧಾರಣ, ಯಜ್ಞ, ಧರ್ಮಕಾರ್ಯಗಳು, ಸೇವಕರನ್ನು ಪೋಷಿಸುವುದು, ಪ್ರಾರಂಭಿಸಿದ ಕಾರ್ಯವನ್ನು ಪೂರ್ಣಗೊಳಿಸುವುದು, ಉಚಿತ ದಂಡನೆಯನ್ನು ವಿಧಿಸುವುದು, ವೈದಿಕ ಯಜ್ಞಾದಿ ಕರ್ಮಗಳ ಅನುಷ್ಠಾನ, ವ್ಯವಹಾರಸ್ಥಿತಿ ಧರ್ಮ, ಮತ್ತು ಸತ್ಯವಾಕ್ಯಗಳನ್ನೇ ಆಡುವುದು – ಇವು ರಾಜನ ಪರಮ ಧರ್ಮಗಳು.
13128052a ಆರ್ತಹಸ್ತಪ್ರದೋ ರಾಜಾ ಪ್ರೇತ್ಯ ಚೇಹ ಮಹೀಯತೇ|
13128052c ಗೋಬ್ರಾಹ್ಮಣಾರ್ಥೇ ವಿಕ್ರಾಂತಃ ಸಂಗ್ರಾಮೇ ನಿಧನಂ ಗತಃ|
13128052e ಅಶ್ವಮೇಧಜಿತಾಽಲ್ಲೋಕಾನ್ಪ್ರಾಪ್ನೋತಿ ತ್ರಿದಿವಾಲಯೇ||
ಆರ್ತರಾಗಿ ಯಾಚಿಸಿದವರಿಗೆ ಕೊಡುವ ರಾಜನು ಇಹ-ಪರಗಳೆರಡರಲ್ಲೂ ಮೆರೆಯುತ್ತಾನೆ. ಗೋ-ಬ್ರಾಹ್ಮಣರಿಗಾಗಿ ಸಂಗ್ರಾಮದಲ್ಲಿ ನಿಧನ ಹೊಂದುವ ವಿಕ್ರಾಂತನು ಅಶ್ವಮೇಧದಿಂದ ಪಡೆಯುವ ಲೋಕಗಳನ್ನು ತಿದಿವಾಲಯದಲ್ಲಿ ಪಡೆಯುತ್ತಾನೆ.
[9]13128053a ವೈಶ್ಯಸ್ಯ ಸತತಂ ಧರ್ಮಃ ಪಾಶುಪಾಲ್ಯಂ ಕೃಷಿಸ್ತಥಾ|
13128053c ಅಗ್ನಿಹೋತ್ರಪರಿಸ್ಪಂದೋ ದಾನಾಧ್ಯಯನಮೇವ ಚ||
13128054a ವಾಣಿಜ್ಯಂ ಸತ್ಪಥಸ್ಥಾನಮಾತಿಥ್ಯಂ ಪ್ರಶಮೋ ದಮಃ|
13128054c ವಿಪ್ರಾಣಾಂ ಸ್ವಾಗತಂ ತ್ಯಾಗೋ ವೈಶ್ಯಧರ್ಮಃ ಸನಾತನಃ||
ಪಶುಪಾಲನೆ ಮತ್ತು ಕೃಷಿಗಳು ವೈಶ್ಯನ ಸತತ ಧರ್ಮವು. ಅಗ್ನಿಹೋತ್ರ, ದಾನ, ಅಧ್ಯಯನ, ವಾಣಿಜ್ಯ, ಸತ್ಪಥದಲ್ಲಿರುವುದು, ಆತಿಥ್ಯ, ಶಮ, ದಮ, ಬ್ರಾಹ್ಮಣರ ಸ್ವಾಗತ ಮತ್ತು ತ್ಯಾಗ ಇವು ಸನಾತನ ವೈಶ್ಯಧರ್ಮವು.
13128055a ತಿಲಾನ್ಗಂಧಾನ್ರಸಾಂಶ್ಚೈವ ನ ವಿಕ್ರೀಣೀತ ವೈ ಕ್ವ ಚಿತ್|
13128055c ವಣಿಕ್ಪಥಮುಪಾಸೀನೋ ವೈಶ್ಯಃ ಸತ್ಪಥಮಾಶ್ರಿತಃ||
13128056a ಸರ್ವಾತಿಥ್ಯಂ ತ್ರಿವರ್ಗಸ್ಯ ಯಥಾಶಕ್ತಿ ಯಥಾರ್ಹತಃ|
ಸತ್ಪಥವನ್ನಾಶ್ರಯಿಸಿ ವಾಣಿಜ್ಯವೃತ್ತಿಯನ್ನು ಅವಲಂಬಿಸಿದ ವೈಶ್ಯನು ಎಳ್ಳು, ಗಂಧಗಳು ಮತ್ತು ರಸಗಳನ್ನು ಮಾರಾಟಮಾಡಬಾರದು. ತ್ರಿವರ್ಗದ[10] ಎಲ್ಲ ಅತಿಥಿಗಳನ್ನೂ ಯಥಾಶಕ್ತಿಯಾಗಿ ಮತ್ತು ಯಥಾರ್ಹವಾಗಿ ಸತ್ಕರಿಸಬೇಕು.
13128056c ಶೂದ್ರಧರ್ಮಃ ಪರೋ ನಿತ್ಯಂ ಶುಶ್ರೂಷಾ ಚ ದ್ವಿಜಾತಿಷು||
13128057a ಸ ಶೂದ್ರಃ ಸಂಶಿತತಪಾಃ ಸತ್ಯಸಂಧೋ ಜಿತೇಂದ್ರಿಯಃ|
13128057c ಶುಶ್ರೂಷನ್ನತಿಥಿಂ ಪ್ರಾಪ್ತಂ ತಪಃ ಸಂಚಿನುತೇ ಮಹತ್||
ನಿತ್ಯವೂ ದ್ವಿಜಾತಿಯವರ ಶುಶ್ರೂಷೆಯೇ ಶೂದ್ರರ ಪರಮ ಧರ್ಮ. ಸಂಶಿತನೂ, ತಪಸ್ವಿಯೂ, ಸತ್ಯಸಂಧನೂ, ಜಿತೇಂದ್ರಿಯನೂ, ಮನೆಗೆ ಬಂದ ಅತಿಥಿಯ ಶುಶ್ರೂಷೆ ಮಾಡುವ ಶೂದ್ರನು ಮಹಾ ತಪಸ್ಸಿನ ಫಲವನ್ನು ಪಡೆದುಕೊಳ್ಳುತ್ತಾನೆ.
13128058a ತ್ಯಕ್ತಹಿಂಸಃ ಶುಭಾಚಾರೋ ದೇವತಾದ್ವಿಜಪೂಜಕಃ|
13128058c ಶೂದ್ರೋ ಧರ್ಮಫಲೈರಿಷ್ಟೈಃ ಸಂಪ್ರಯುಜ್ಯೇತ ಬುದ್ಧಿಮಾನ್||
ಹಿಂಸೆಯನ್ನು ತ್ಯಜಿಸಿ ಶುಭಾಚಾರಗಳಿಂದ ದೇವತೆಗಳು ಮತ್ತು ದ್ವಿಜರನ್ನು ಪೂಜಿಸುವ ಬುದ್ಧಿಮಾನ್ ಶೂದ್ರನು ಧರ್ಮದ ಮನೋವಾಂಛಿತ ಫಲವನ್ನು ಪಡೆದುಕೊಳ್ಳುತ್ತಾನೆ.
[11]13128059a ಏತತ್ತೇ ಸರ್ವಮಾಖ್ಯಾತಂ ಚಾತುರ್ವರ್ಣ್ಯಸ್ಯ ಶೋಭನೇ|
13128059c ಏಕೈಕಸ್ಯೇಹ ಸುಭಗೇ ಕಿಮನ್ಯಚ್ಚ್ರೋತುಮಿಚ್ಚಸಿ||
ಶೋಭನೇ! ಹೀಗೆ ನಾನು ಒಂದೊಂದಾಗಿ ಚಾತುರ್ವಣ್ಯಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಸುಭಗೇ! ಬೇರೆ ಏನನ್ನು ಕೇಳಲು ಇಚ್ಛಿಸುತ್ತೀಯೆ?”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಉಮಾಮಹೇಶ್ವರಸಂವಾದೇ ಅಷ್ಟಾವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಇಪ್ಪತ್ತೆಂಟನೇ ಅಧ್ಯಾಯವು.
[1] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಪುರಾ ಯುಗಾಂತರೇ ಯತ್ನಾದಮೃತಾರ್ಥಂ ಸುರಾಸುರೈಃ| ಬಲವದ್ಭಿರ್ವಿಮಥಿತಶ್ಚಿರಕಾಲಂ ಮಹೋದಧಿಃ|| ರಜ್ಜುನಾ ನಾಗರಾಜೇನ ಮಥ್ಯಮಾನೇ ಮಹಾದಧೌ| ವಿಷಂ ತತ್ರ ಸಮುದ್ಭೂತಂ ಸರ್ವಲೋಕವಿನಾಶನಮ್|| ತದ್ದೃಷ್ಟ್ವಾ ವಿಬುಧಾಸ್ಸರ್ವೇ ತದಾ ವಿಮನಸೋಽಭವನ್| ಗ್ರಸ್ತಂ ಹಿ ತನ್ಮಯಾ ದೇವಿ ಲೋಕಾನಾಮ್ ಹಿತಕಾರಣಾತ್|| ತತ್ಕೃತಾ ನೀಲತಾ ಚಾಸೀತ್ ಕಂಠೇ ಬರ್ಹಿನಿಭಾ ಶುಭೇ| ತದಾಪ್ರಭೃತಿಚೈವಾಹಂ ನೀಲಕಂಠ ಇತಿಸ್ಮೃತಃ|| ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಛಸಿ| ಉಮೋವಾಚ| ನೀಲಕಂಠ ನಮಸ್ತೇಽಸ್ತು ಸರ್ವಲೋಕಸುಖಾವಹ| ಬಹೂನಾಮಾಯುಧಾನಾಂ ಚ ಪಿನಾಕಂ ಧರ್ತುಮಿಚ್ಛಸಿ| ಕಿಮರ್ಥಂ ದೇವದೇವೇಶ ತನ್ಮೇ ಶಂಶಿತುಮರ್ಹಸಿ|| ಮಹೇಶ್ವರ ಉವಾಚ| ಶಾಸ್ತ್ರಾಗಮಂ ತೇ ವಕ್ಷ್ಯಾಮಿ ಶೃಣು ಧರ್ಮ್ಯಂ ಶುಚಿಸ್ಮಿತೇ| ಯುಗಾಂತರೇ ಮಹಾದೇವಿ ಕಣ್ವೋ ನಾಮ ಮಹಾಮುನಿಃ|| ಸ ಹಿ ದಿವ್ಯಾಂ ತಪಶ್ಚರ್ಯಾಂ ಕರ್ತುಮೇವೋಪಚಕ್ರಮೇ| ತಥಾ ತಸ್ಯ ತಪೋ ಘೋರಂ ಚರತಃ ಕಾಲಪರ್ಯಯಾತ್|| ವಲ್ಮೀಕಂ ಪುನರುದ್ಭೂತಂ ತಸೈವ ಶಿರಸಿ ಪ್ರಿಯೇ| ಧರಮಾಣಶ್ಚ ತತ್ಸರ್ವಂ ತಪಶ್ಚರ್ಯಾಂ ತಥಾಕರೋತ್|| ತಸ್ಮೈ ಬ್ರಹ್ಮ ವರಂ ದಾತುಂ ಜಗಾಮ ತಪಸಾರ್ಚಿತಃ| ದತ್ವಾ ತಸ್ಮೈ ವರಂ ದೇವೋ ವೇಣುಂ ದೃಷ್ಟ್ವಾ ತ್ವಚಿಂತಯತ್|| ಲೋಕಕಾರ್ಯಂ ಸಮುದ್ದಿಶ್ಯ ವೇಣುನಾನೇನ ಭಾಮಿನಿ| ಚಿಂತಯಿತ್ವಾ ತಮಾದಾಯ ಕಾಮುಕಾರ್ಥೇ ನ್ಯಯೋಜಯತ್|| ವಿಷ್ಣೋರ್ಮಮ ಚ ಸಾಮರ್ಥ್ಯಂ ಜ್ಞಾತ್ವಾ ಲೋಕಪಿತಾಮಹಃ| ಧನುಷೀ ದ್ವೇ ತದಾ ಪ್ರಾದಾದ್ವಿಷ್ಣವೇ ಮಮ ಚೈವ ತು|| ಪಿನಾಕಂ ನಾಮ ಮೇ ಚಾಪಂ ಶಾಂರ್ಙ್ರಂ ನಾಮ ಹರೇರ್ಧನುಃ| ತೃತೀಯಮವಶೇಷೇಣ ಗಾಂಡೀವಮಭವದ್ಧನುಃ|| ತಚ್ಚ ಸೋಮಾಯ ನಿರ್ದಿಶ್ಯ ಬ್ರಹ್ಮಾ ಲೋಕಂ ಗತಃ ಪುನಃ| ಏತತ್ತೇ ಸರ್ವಮಾಖ್ಯಾತಂ ಶಾಸ್ತ್ರಾಗಮಮನಿಂದಿತೇ|| (ಗೀತಾ ಪ್ರೆಸ್).
[2] ಶ್ಮಶಾನ ಶಬ್ಧಕ್ಕೆ ಮಹಾಶ್ಮಶಾನವೆನಿಸಿರುವ ಕಾಶಿಯೆಂದೂ ಮೇಧ್ಯ ಎಂಬ ಶಬ್ಧಕ್ಕೆ ಬ್ರಹ್ಮವೆಂದೂ ವ್ಯಾಖ್ಯಾನಮಾಡಿರುತ್ತಾರೆ. ಮೇಧ್ಯಂಬ್ರಹ್ಮ ತತ್ಪಾಪ್ತಿಕಾಮೈಃ ಇದಂ ಶ್ಮಶಾನಂ ಉಪಾಸ್ಯತೇ – ಬ್ರಹ್ಮತ್ವವನ್ನು ಹೊಂದಲು ಇಚ್ಛಿಸುವವರು ಮಹಾಶ್ಮಶಾನವಾದ ಕಾಶಿಕ್ಷೇತ್ರವನ್ನು ಆಶ್ರಯಿಸುತ್ತಾರೆ.
[3] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಅಸ್ಮಾಚ್ಛ್ಮಶಾನಮೇಧ್ಯಂ ತು ನಾಸ್ತಿ ಕಿಂಚಿದನಿಂದಿತೇ| ನಿಸ್ಸಂಪಾತಾನ್ಮನುಷ್ಯಾಣಾಂ ತಸ್ಮಾಚ್ಛುಚಿತಮಂ ಸ್ಮೃತಮ್|| ಸ್ಥಾನಂ ಮೇ ತತ್ರ ವಿಹಿತಂ ವೀರಸ್ಥಾನಮಿತಿ ಪ್ರಿಯೇ| ಕಪಾಲಶತಸಂಪೂರ್ಣಮಭಿರೂಪಂ ಭಯಾನಕಮ್|| ಮಧ್ಯಾಹ್ನೇ ಸಂಧ್ಯಯೋಸ್ತತ್ರ ನಕ್ಷತ್ರೇ ರುದ್ರದೈವತೇ| ಆಯುಷ್ಕಾಮೈರಶುದ್ಧೈರ್ವಾ ನ ಗಂತ್ಯವ್ಯಮಿತಿ ಸ್ಥಿತಿಃ|| ಮದನ್ಯೇನ ನ ಶಕ್ಯಂ ಹಿ ನಿಹಂತಂ ಭೂತಜಂ ಭಯಮ್| ತತ್ರಸ್ಥೋಽಹಂ ಪ್ರಜಾಃ ಸರ್ವಾಃ ಪಾಲಯಾಮಿ ದಿನೇ ದಿನೇ|| ಮನ್ನಿಯೋಗಾದ್ಭೂತಸಂಘಾ ನ ಚ ಘ್ನಂತೀಹ ಕಂಚನ| ತಾಂಸ್ತು ಲೋಕಹಿತಾರ್ಥಾಯ ಶ್ಮಶಾನೇ ರಮಮಾಮ್ಯಹಮ್|| ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಛಸಿ| ಉಮೋವಾಚ| ಭಗವನ್ದೇವದೇವೇಶ ತ್ರಿನೇತ್ರ ವೃಷಭಧ್ವಜ| ಪಿಂಗಲಂ ವಿಕೃತಂ ಭಾತಿ ರೂಪಂ ತೇ ತು ಭಯಾನಕಮ್|| ಭಸ್ಮದಿಗ್ಧಂ ವಿರೂಪಾಕ್ಷಂ ತೀಕ್ಷ್ಣದಂಷ್ಟ್ರಂ ಜಟಾಕುಲಮ್| ವ್ಯಾಘ್ರೋದರತ್ವಕ್ಸಂವೀತಂ ಕಪಿಲಶ್ಮಶ್ರುಸಂತತಮ್|| ರೌದ್ರಂ ಭಯಾನಕಂ ಘೋರಂ ಶೂಲಪಟ್ಟಿಶಸಂಯುತಮ್| ಕಿಮರ್ಥಂ ತ್ವೀದೃಶಂ ರೂಪಂ ತನ್ಮೇ ಶಂಸಿತುಮರ್ಹಸಿ|| ಮಹೇಶ್ವರ ಉವಾಚ| ತದಹಂ ಕಥಯಿಷ್ಯಾಮಿ ಶೃತು ತತ್ತ್ವಂ ಸಮಾಹಿತಾ| ದ್ವಿವಿಧೋ ಲೌಕಿಕೋ ಭಾವಃ ಶೀತಮುಷ್ಣಮಿತಿ ಪ್ರಿಯೇ|| ತಯೋರ್ಹಿ ಗ್ರಥಿತಂ ಸರ್ವಂ ಸೌಮ್ಯಾಗ್ನೇಯಮಿದಂ ಜಗತ್| ಸೌಮ್ಯತ್ವಂ ಸತತಂ ವಿಷ್ಣೌ ಮಯ್ಯಾಗ್ನೇಯಂ ಪ್ರತಿಷ್ಠಿತಮ್|| ಅನೇನ ವಪುಷಾ ನಿತ್ಯಂ ಸರ್ವಲೋಕಾನ್ಬಿಭರ್ಮ್ಯಹಮ್| ರೌದ್ರಾಕೃತಿಂ ವಿರೂಪಾಕ್ಷಂ ಶೂಲಪಟ್ಟಿಶಸಂಯುತಮ್| ಆಗ್ನೇಯಮಿತಿ ಮೇ ರೂಪಂ ದೇವಿ ಲೋಕಹಿತೇ ರತಮ್|| ಯದ್ಯಹಂ ವಿಪರೀತಃ ಸ್ಯಾಮೇತತ್ತ್ಯಕ್ತ್ವಾ ಶುಭಾನನೇ| ತದೈವ ಸರ್ವಲೋಕಾನಾಂ ವಿಪರೀತಂ ಪ್ರವರ್ತತೇ|| ತಸ್ಮಾನ್ಮಯೇದಂ ಧ್ರಿಯತೇ ರೂಪಂ ಲೋಕಹಿತೈಷಿಣಾ| ಇತಿ ತೇ ಕಥಿತಂ ದೇವಿ ಕಿಂ ಭೂಯಃ ಶ್ರೋತುಮಿಚ್ಛಸಿ|| ನಾರದ ಉವಾಚ| ಏವಂ ಬ್ರುವತಿ ದೇವೇಶೇ ವಿಸ್ಮಿತಾ ಪರಮರ್ಷಯಃ| ವಾಗ್ಭಿಃಸಾಂಜಲಿಮಾಲಾಭಿರಭಿತುಷ್ಟುವುರೀಶ್ವರಮ್|| ಋಷಯ ಊಚುಃ| ನಮಃ ಶಂಕರ ಸರ್ವೇಶ ನಮಃ ಸರ್ವಜಗದ್ಗುರೋ| ನಮೋ ದೇವಾದಿದೇವಾಯ ನಮಃ ಶಶಿಕಲಾಧರ|| ನಮೋ ಘೋರತರಾದ್ಘೋರ ನಮೋ ರುದ್ರಾಯ ಶಂಕರ| ನಮಃ ಶಾಂತತರಾಚ್ಛಾಂತಂ ನಮಶ್ಚಂದ್ರಸ್ಯ ಪಾಲಕ|| ನಮಃ ಸೋಮಾಯ ದೇವಾಯ ನಮಸ್ತುಭ್ಯಂ ಚತುರ್ಮುಖ| ನಮೋ ಭೂತಪತೇ ಶಂಭೋ ಜಹ್ನುಕನ್ಯಾಂಬುಶೇಖರ|| ನಮಸ್ತ್ರಿಶೂಲಹಸ್ತಾಯ ಪನ್ನಗಾಭರಣಾಯ ಚ| ನಮೋಽಸ್ತು ವಿಷಮಾಕ್ಷಾಯ ದಕ್ಷಯಜ್ಞಪ್ರದಾಹಕ|| ನಮೋಸ್ತು ಬಹುನೇತ್ರಾಯ ಲೋಕರಕ್ಷಣತತ್ಪರ| ಅಹೋ ದೇವಸ್ಯ ಮಾಹಾತ್ಮ್ಯಮಹೋ ದೇವಸ್ಯ ವೈ ಕೃಪಾ|| ಏವಂ ಧರ್ಮ ಪರತ್ವಂ ಚ ದೇವದೇವಸ್ಯ ಚಾರ್ಹತಿ| (ಗೀತಾ ಪ್ರೆಸ್).
[4] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಏತತ್ತೇ ಕಥಯಿಷ್ಯಾಮಿ ಯತ್ತೇ ದೇವಿ ಮನಃಪ್ರಿಯಮ್| ಶೃಣು ತತ್ಸರ್ವಮಖಿಲಂ ಧರ್ಮಂ ವರ್ಣಾಶ್ರಮಾಶ್ರಿತಮ್|| ಬ್ರಾಹ್ಮಣಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೇತಿ ಚತುರ್ವಿಧಮ್| ಬ್ರಹ್ಮಣಾ ವಿಹಿತಾಃ ಪೂರ್ವಂ ಲೋಕತಂತ್ರಮಭೀಪ್ಸತಾ|| ಕರ್ಮಾಣಿ ಚ ತದರ್ಹಾಣಿ ಶಾಸ್ತ್ರೇಷು ವಿಹಿತಾನಿ ವೈ| ಯದೀದಮೇಕವರ್ಣಂ ಸ್ಯಾಜ್ಜಗತ್ಸರ್ವಂ ವಿನಶ್ಯತಿ|| ಸಹೈವ ದೇವಿ ವರ್ಣಾನಿ ಚತ್ವಾರಿ ವಿಹಿತಾನ್ಯತಃ| ಮುಖತೋ ಬ್ರಾಹ್ಮಣಾಃ ಸೃಷ್ಟಾತ್ತಸ್ಮಾತ್ತೇ ವಾಗ್ವಿಶಾರದಾಃ|| ಬಾಹುಭ್ಯಾಂ ಕ್ಷತ್ರಿಯಾಃ ಸೃಷ್ಟಾತ್ತಸ್ಮಾತ್ತೇ ಬಾಹುಗರ್ವಿತಾಃ| ಉದರಾದುದ್ಗತಾ ವೈಶ್ಯಾಸ್ತಸ್ಮಾದ್ವಾರೋಪಜೀವಿನಃ|| ಶೂದ್ರಶ್ಚ ಪಾದತಃ ಸೃಷ್ಟಾತ್ತಸ್ಮಾತ್ತೇ ಪರಿಚಾರಕಾಃ| ತೇಷಾಂ ಧರ್ಮಾಂಶ್ಚ ಕರ್ಮಾಣಿ ಶೃಣು ದೇವಿ ಸಮಾಹಿತಾ|| ವಿಪ್ರಾಃ ಕೃತಾ ಭೂಮಿದೇವಾ ಲೋಕಾನಾಂ ಧಾರಣೇ ಕೃತಾಃ| ತೇ ಕೈಶ್ಚಿನ್ನಾವಮಂತವ್ಯಾ ಬ್ರಹ್ಮಣಾ ಹಿತಮಿಚ್ಛುಭಿಃ|| ಯದಿ ತೇ ಬ್ರಹ್ಮಣಾ ನ ಸ್ಯುರ್ದಾನಯೋಗವಹಾಃ ಸದಾ| ಉಭಯೋರ್ಲೋಕಯೋರ್ದೇವಿ ಸ್ಥಿತಿರ್ನಸ್ಯಾತ್ಸಮಾಸತಃ|| ಬ್ರಾಹ್ಮಣಾನ್ಯೋಽವಮನ್ಯೇತ ನಿಂದೇಚ್ಚ ಕ್ರೋಧಯೇಚ್ಚ ವಾ| ಪ್ರಹರೇತ ಹರೇದ್ವಾಪಿ ಧನಂ ತೇಷಾಂ ನರಾಧಮಃ|| ಕಾರಯೇದ್ದೀನಕರ್ಮಾಣಿ ಕಾಮಲೋಭವಿಮೋಹನಾತ್| ಸ ಚ ಮಾಮವಮನ್ಯೇತ ಮಾಂ ಕ್ರೋಧಯತಿ ನಿಂದತಿ|| ಮಾಮೇವ ಪ್ರಹರೇನ್ಮೂಢೋ ಮದ್ಧನಸ್ಯಾಪಹಾರಕಃ| ಮಾಮೇವ ಪ್ರೇಷಣಂ ಕೃತ್ವಾ ನಿಂದತೇ ಮೂಢಚೇತನಃ|| ಸ್ವಾಧ್ಯಾಯೋ ಯಜನಂ ದಾನಂ ತಸ್ಯ ಧರ್ಮ ಇತಿ ಸ್ಥಿತಿಃ| ಕರ್ಮಾಣಧ್ಯಾಪನಂ ಚೈವ ಯಾಜನಂ ಚ ಪ್ರತಿಗ್ರಹಃ|| ಸತ್ಯಂ ಶಾಂತಿಸ್ತಪಃ ಶೌಚಂ ತಸ್ಯ ಧರ್ಮಃ ಸನಾತನಃ| ವಿಕ್ರಯೋ ರಸಧಾನ್ಯಾನಾಂ ಬ್ರಾಹ್ಮಣಸ್ಯ ವಿಗರ್ಹಿತಃ|| ತಪ ಏವ ಸದಾ ಧರ್ಮೋ ಬ್ರಾಹ್ಮಣಸ್ಯ ನ ಸಂಶಯಃ| ಸ ತು ಧರ್ಮಾರ್ಥಮುತ್ಪನ್ನಃ ಪೂರ್ವಂ ಧಾತ್ರಾ ತಪೋಬಲಾತ್|| (ಗೀತಾ ಪ್ರೆಸ್).
[5] ಪರಮಾತ್ಮನ ಸಮೀಪದಲ್ಲಿ ವಾಸಮಾಡುವುದು ಎಂಬ ಅರ್ಥವೂ ಉಪವಾಸ ಶಬ್ಧಕ್ಕಿದೆ. ಉಪಾವೃತಸ್ಯ ಪಾಪೇಭ್ಯೋ ಯಶ್ಚ ವಾಸೋ ಗುಣೈಃ ಸಹ| ಉಪವಾಸಃ ಸ ವಿಜ್ಞೇಯಃ ಸರ್ವಭೋಗವಿವರ್ಜಿತಃ|| ಅರ್ಥಾತ್ ಪಾಪಕರ್ಮಗಳನ್ನು ಬಿಟ್ಟು ಪ್ರಾಣಿದಯ, ಸಹನೆ, ದ್ವೇಷಾಸೂಯಪರಿತ್ಯಾಗ, ಅಕಾರ್ಪಣ್ಯ, ನಿಃಸ್ಪೃಹತೆ ಇತ್ಯಾದಿ ಗುಣಗಳನ್ನು ಹೊಂದಿ ಸಮಸ್ತ ಭೋಗವಸ್ತುಗಳನ್ನೂ ತ್ಯಾಗಮಾಡುವುದೇ ಉಪವಾಸ.
[6] ಭಿಕ್ಷಾಟನೆಯನ್ನು ಮಾಡಿ ಸಂಗ್ರಹಿಸಿದ ಅನ್ನವನ್ನು ಗುರುವಿಗೆ ಸಮರ್ಪಿಸಿ ಅವರ ಅನುಮತಿಯನ್ನು ಪಡೆದು ತಿನ್ನುವುದು.
[7] ತನ್ನ ಪತ್ನಿಯಲ್ಲಿ ಮಾತ್ರ ಅವಳು ಋತುಮತಿಯಾಗಿದ್ದಾಗ ಮಾತ್ರ ಸಂಭೋಗಮಾಡುವುದು.
[8] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಕ್ಷತ್ರಿಯಾಸ್ತು ತತೋ ದೇವಿ ದ್ವಿಜಾನಾಂ ಪಾಲನೇ ಸ್ಮೃತಾಃ| ಯದಿ ನ ಕ್ಷತ್ರಿಯೋ ಲೋಕೇ ಜಗತ್ಸ್ಯಾದಧರೋತ್ತರಮ್|| ರಕ್ಷಣಾತ್ ಕ್ಷತ್ರಿಯೈರೇವ ಜಗದ್ಭವತಿ ಶಾಶ್ವತಮ್| ಸಮ್ಯಗ್ಗುಣಹಿತೋ ಧರ್ಮೋ ಧರ್ಮಃ ಪೌರಹಿತಕ್ರಿಯಾ| ವ್ಯವಹಾರಸ್ಥಿತಿರ್ನಿತ್ಯಂ ಗುಣಯುಕ್ತೋ ಮಹೀಪತಿಃ|| (ಗೀತಾ ಪ್ರೆಸ್).
[9] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಥೈವ ದೇವಿ ವೈಶ್ಯಾಶ್ಚ ಲೋಕಯಾತ್ರಾಹಿತಾಸ್ಮೃತಾಃ| ಅನ್ಯೇ ತಾನುಪಜೀವಂತಿ ಪ್ರತ್ಯಕ್ಷಫಲದಾ ಹಿ ತೇ|| ಯದಿ ನ ಸ್ಯುಸ್ತಥಾ ವೈಶ್ಯಾ ನ ಭವೇಯುಸ್ತಥಾ ಪರೇ| (ಗೀತಾ ಪ್ರೆಸ್).
[10] ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು
[11] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಥೈವ ಶೂದ್ರಾ ವಿಹಿತಾಃ ಸರ್ವಧರ್ಮಪ್ರಸಾಧಕಾಃ| ಶೂದ್ರಾಶ್ಚ ಯದಿ ತೇ ನ ಸ್ಯುಃ ಕರ್ಮಕರ್ತಾ ನ ವಿದ್ಯತೇ|| ತ್ರಯಃ ಪೂರ್ವೇ ಶೂದ್ರಮೂಲಾಃ ಸರ್ವೇ ಕರ್ಮಕರಾಃ ಸ್ಮೃತಾಃ| ಬ್ರಾಹ್ಮಣಾದಿಷು ಶುಶ್ರೂಷಾ ದಾಸಧರ್ಮ ಇತಿ ಸ್ಮೃತಃ|| ವಾರ್ತಾ ಚ ಕಾರುಕರ್ಮಾಣಿ ಶಿಲ್ಪಂ ನಾಟ್ಯಂ ತಥೈವ ಚ| ಅಹಿಂಸಕಃ ಶುಭಾಚಾರೋ ದೈವತದ್ವಿಜವಂದಕಃ|| ಶೂದ್ರೋ ಧರ್ಮಫಲೈರಿಷ್ಟೈಃ ಸ್ವಧರ್ಮೇಣೋಪಯುಜ್ಯತೇ| ಏವಮಾದಿ ತಥಾನ್ಯಚ್ಚ ಶೂದ್ರಧರ್ಮ ಇತಿ ಸ್ಮೃತಃ|| (ಗೀತಾ ಪ್ರೆಸ್).