Anushasana Parva: Chapter 126

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೬

ಉಮಾ-ಮಹೇಶ್ವರ ಸಂವಾದ

ಕೃಷ್ಣನ ಕುರಿತು ಹೇಳೆಂದು ಯುಧಿಷ್ಠಿರನು ಕೇಳಲು ಭೀಷ್ಮನು ಉಮಾ-ಮಹೇಶ್ವರರ ಸಂವಾದವನ್ನು ಉದಾಹರಿಸಲು ಪ್ರಾರಂಭಿಸಿದುದು (೧-೯). ತಪಸ್ಸನ್ನಾಚರಿಸುತ್ತಿದ್ದ ಕೃಷ್ಣನನ್ನು ಸಂದರ್ಶಿಸಲು ಬಂದಿದ್ದ ಮುನಿಗಣಗಳು ಕೃಷ್ಣನ ಮುಖದಿಂದ ಹೊರಟ ಅಗ್ನಿಯು ಪರ್ವತವನ್ನು ಸುಟ್ಟು ಹಿಂದಿರುಗಿ ಕೃಷ್ಣನ ಪಾದಗಳನ್ನು ಸೇರಿ ನಂತರ ಪರ್ವತವು ಹಿಂದಿನ ಪ್ರಕೃತಿಯನ್ನೇ ಪಡೆದುದನ್ನು ನೋಡಿ ವಿಸ್ಮಿತರಾದುದು (೧೦-೨೨). ಋಷಿಗಳ ವಿಸ್ಮಯಕ್ಕೆ ಕಾರಣವಾದ ವೈಷ್ಣವೀ ತೇಜಸ್ಸಿನ ಕುರಿತು ಕೃಷ್ಣನು ಹೇಳಿದುದು (೨೩-೪೪). ನಾರದನು ಹಿಮಾಲಯಪರ್ವತದಲ್ಲಿ ಕಂಡ ಅದ್ಭುತದ ಕುರಿತು ಹೇಳಲು ಪ್ರಾರಂಭಿಸಿದುದು (೪೫-೫೦).

13126001 ಯುಧಿಷ್ಠಿರ ಉವಾಚ|

13126001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|

13126001c ಆಗಮೈರ್ಬಹುಭಿಃ ಸ್ಫೀತೋ ಭವಾನ್ನಃ ಪ್ರಥಿತಃ ಕುಲೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಅನೇಕ ಆಗಮಗಳಿಂದ ಪರಿಪೂರ್ಣನಾಗಿರುವ ನೀನು ನಮ್ಮ ಈ ಶ್ರೇಷ್ಠ ಕುಲದಲ್ಲಿ ಜನಿಸಿರುವೆ!

13126002a ತ್ವತ್ತೋ ಧರ್ಮಾರ್ಥಸಂಯುಕ್ತಮಾಯತ್ಯಾಂ ಚ ಸುಖೋದಯಮ್|

13126002c ಆಶ್ಚರ್ಯಭೂತಂ ಲೋಕಸ್ಯ ಶ್ರೋತುಮಿಚ್ಚಾಮ್ಯರಿಂದಮ||

ಅರಿಂದಮ! ಈಗ ನಿನ್ನಿಂದ ನಾನು ಧರ್ಮಾರ್ಥಸಂಯುಕ್ತವಾದ, ಸುಖೋದಯಕ್ಕೆ ಕಾರಣವಾದ ಮತ್ತು ಲೋಕಕ್ಕೇ ಆಶ್ಚರ್ಯಕರವಾದುದನ್ನು ಕೇಳಲು ಬಯಸುತ್ತೇನೆ.

13126003a ಅಯಂ ಚ ಕಾಲಃ ಸಂಪ್ರಾಪ್ತೋ ದುರ್ಲಭಜ್ಞಾತಿಬಾಂಧವಃ|

13126003c ಶಾಸ್ತಾ ಚ ನ ಹಿ ನಃ ಕಶ್ಚಿತ್ತ್ವಾಮೃತೇ ಭರತರ್ಷಭ||

ಭರತರ್ಷಭ! ಜ್ಞಾತಿ-ಬಾಂಧವರು ದುರ್ಲಭವಾಗಿರುವ ಈ ಕಾಲವು ಪ್ರಾಪ್ತವಾಗಿದೆ! ನಿನ್ನನ್ನು ಬಿಟ್ಟು ನಮಗೆ ಉಪದೇಶಿಸುವವರು ಯಾರೂ ಇಲ್ಲ!

13126004a ಯದಿ ತೇಽಹಮನುಗ್ರಾಹ್ಯೋ ಭ್ರಾತೃಭಿಃ ಸಹಿತೋಽನಘ|

13126004c ವಕ್ತುಮರ್ಹಸಿ ನಃ ಪ್ರಶ್ನಂ ಯತ್ತ್ವಾಂ ಪೃಚ್ಚಾಮಿ ಪಾರ್ಥಿವ||

ಅನಘ! ಪಾರ್ಥಿವ! ಒಂದು ವೇಳೆ ಸಹೋದರರ ಸಹಿತ ನನ್ನಮೇಲೆ ನಿನ್ನ ಅನುಗ್ರಹವಿದೆಯೆಂದಾದರೆ ಹೇಳಬೇಕು. ನಾನು ಈ ಪ್ರಶ್ನೆಯೊಂದನ್ನು ಕೇಳುತ್ತೇನೆ.

13126005a ಅಯಂ ನಾರಾಯಣಃ ಶ್ರೀಮಾನ್ಸರ್ವಪಾರ್ಥಿವಸಂಮತಃ|

13126005c ಭವಂತಂ ಬಹುಮಾನೇನ ಪ್ರಶ್ರಯೇಣ ಚ ಸೇವತೇ||

ಸರ್ವ ಪಾರ್ಥಿವರಿಂದಲೂ ಸನ್ಮಾನಿಸಲ್ಪಡುವ ಈ ಶ್ರೀಮಾನ್ ನಾರಾಯಣನು ನಿನ್ನನ್ನು ಅತ್ಯಾದರದಿಂದ ವಿನಯಪೂರ್ವಕವಾಗಿ ಸೇವಿಸುತ್ತಿದ್ದಾನೆ.

13126006a ಅಸ್ಯ ಚೈವ ಸಮಕ್ಷಂ ತ್ವಂ ಪಾರ್ಥಿವಾನಾಂ ಚ ಸರ್ವಶಃ|

13126006c ಭ್ರಾತೄಣಾಂ ಚ ಪ್ರಿಯಾರ್ಥಂ ಮೇ ಸ್ನೇಹಾದ್ಭಾಷಿತುಮರ್ಹಸಿ||

ಇವನ ಸಮಕ್ಷಮದಲ್ಲಿ ಮತ್ತು ಇಲ್ಲಿ ನೆರೆದಿರುವ ಪಾರ್ಥಿವರ ಸಮಕ್ಷಮದಲ್ಲಿ ನನಗೆ ಮತ್ತು ನನ್ನ ಸಹೋದರರಿಗೆ ಪ್ರಿಯವನ್ನುಂಟುಮಾಡುವ ಸಲುವಾಗಿ ಸ್ನೇಹಪೂರ್ವಕವಾಗಿ ಇವನ ಕುರಿತು ಹೇಳಬೇಕು!””

13126007 ವೈಶಂಪಾಯನ ಉವಾಚ|

13126007a ತಸ್ಯ ತದ್ವಚನಂ ಶ್ರುತ್ವಾ ಸ್ನೇಹಾದಾಗತಸಂಭ್ರಮಃ|

13126007c ಭೀಷ್ಮೋ ಭಾಗೀರಥೀಪುತ್ರ ಇದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಭಾಗೀರಥೀಪುತ್ರ ಭೀಷ್ಮನು ಸ್ನೇಹಾವೇಶಯುಕ್ತನಾಗಿ ಸಂಭ್ರಮದಿಂದ  ಈ ಮಾತನ್ನಾಡಿದನು:

13126008a ಹಂತ ತೇ ಕಥಯಿಷ್ಯಾಮಿ ಕಥಾಮತಿಮನೋರಮಾಮ್|

13126008c ಅಸ್ಯ ವಿಷ್ಣೋಃ ಪುರಾ ರಾಜನ್ಪ್ರಭಾವೋಽಯಂ ಮಯಾ ಶ್ರುತಃ||

13126009a ಯಶ್ಚ ಗೋವೃಷಭಾಂಕಸ್ಯ ಪ್ರಭಾವಸ್ತಂ ಚ ಮೇ ಶೃಣು|

13126009c ರುದ್ರಾಣ್ಯಾಃ ಸಂಶಯೋ ಯಶ್ಚ ದಂಪತ್ಯೋಸ್ತಂ ಚ ಮೇ ಶೃಣು||

“ರಾಜನ್! ನಿಲ್ಲು! ನಾನು ಹಿಂದೆ ಕೇಳಿದ್ದ ವಿಷ್ಣುವಿನ ಪ್ರಭಾವದ ಕುರಿತಾಗಿ ಪ್ರಭಾವಿಯಾಗಿರುವ ಗೋವೃಷಭಾಂಕನು ಹೇಳಿದ ಅತಿ ಮನೋಹರ ಕಥೆಯನ್ನು ಹೇಳುತ್ತೇನೆ. ಕೇಳು. ರುದ್ರಾಣಿಯ ಸಂಶಯವನ್ನು ಹೋಗಲಾಡಿಸಲು ದಂಪತಿಯರಲ್ಲಾದ ಆ ಸಂವಾದವನ್ನು ಕೇಳು!

13126010a ವ್ರತಂ ಚಚಾರ ಧರ್ಮಾತ್ಮಾ ಕೃಷ್ಣೋ ದ್ವಾದಶವಾರ್ಷಿಕಮ್|

13126010c ದೀಕ್ಷಿತಂ ಚಾಗತೌ ದ್ರಷ್ಟುಮುಭೌ ನಾರದಪರ್ವತೌ||

13126011a ಕೃಷ್ಣದ್ವೈಪಾಯನಶ್ಚೈವ ಧೌಮ್ಯಶ್ಚ ಜಪತಾಂ ವರಃ|

13126011c ದೇವಲಃ ಕಾಶ್ಯಪಶ್ಚೈವ ಹಸ್ತಿಕಾಶ್ಯಪ ಏವ ಚ||

13126012a ಅಪರೇ ಋಷಯಃ ಸಂತೋ ದೀಕ್ಷಾದಮಸಮನ್ವಿತಾಃ|

13126012c ಶಿಷ್ಯೈರನುಗತಾಃ ಸರ್ವೇ ದೇವಕಲ್ಪೈಸ್ತಪೋಧನೈಃ||

ಧರ್ಮಾತ್ಮಾ ಕೃಷ್ಣನು ಹನ್ನೆರಡು ವರ್ಷಗಳ ವ್ರತವನ್ನು ಮಾಡಿದನು. ದೀಕ್ಷಿತನಾದ ಅವನನ್ನು ಕಾಣಲು ನಾರದ-ಪರ್ವತರಿಬ್ಬರೂ ಆಗಮಿಸಿದರು. ಹಾಗೆಯೇ ಕೃಷ್ಣಾದ್ವೈಪಾಯನ, ಜಪಿಗಳಲ್ಲಿ ಶ್ರೇಷ್ಠ ಧೌಮ್ಯ, ದೇವಲ, ಕಾಶ್ಯಪ, ಹಸ್ತಿಕಾಶ್ಯಪ ಮತ್ತು ಇತರ ದೀಕ್ಷ-ದಮಸಮನ್ವಿತ ಸಂತ ಋಷಿಗಳು ದೇವಕಲ್ಪರೂ ತಪೋಧನರೂ ಆಗಿದ್ದ ಎಲ್ಲ ಶಿಷ್ಯರಿಂದೊಡಗೂಡಿ ಆಗಮಿಸಿದರು.

13126013a ತೇಷಾಮತಿಥಿಸತ್ಕಾರಮರ್ಚನೀಯಂ ಕುಲೋಚಿತಮ್|

13126013c ದೇವಕೀತನಯಃ ಪ್ರೀತೋ ದೇವಕಲ್ಪಮಕಲ್ಪಯತ್||

ಪ್ರೀತನಾದ ದೇವಕೀತನಯನು ತನ್ನ ಕುಲೋಚಿತವಾದ ದೇವೋಚಿತ ಉಪಚಾರಗಳಿಂದ ಅವರನ್ನು ಅರ್ಚಿಸಿ ಅತಿಥಿಸತ್ಕಾರವನ್ನು ಮಾಡಿದನು.

13126014a ಹರಿತೇಷು ಸುವರ್ಣೇಷು ಬರ್ಹಿಷ್ಕೇಷು ನವೇಷು ಚ|

13126014c ಉಪೋಪವಿವಿಶುಃ ಪ್ರೀತಾ ವಿಷ್ಟರೇಷು ಮಹರ್ಷಯಃ||

ಪ್ರೀತರಾದ ಮಹರ್ಷಿಗಳು ಹಚ್ಚಹಸಿರಾಗಿದ್ದ ಸುವರ್ಣವರ್ಣದ ನೂತನ ದರ್ಭಾಸನಗಳಲ್ಲಿ ಕುಳಿತುಕೊಂಡರು.

13126015a ಕಥಾಶ್ಚಕ್ರುಸ್ತತಸ್ತೇ ತು ಮಧುರಾ ಧರ್ಮಸಂಹಿತಾಃ|

13126015c ರಾಜರ್ಷೀಣಾಂ ಸುರಾಣಾಂ ಚ ಯೇ ವಸಂತಿ ತಪೋಧನಾಃ||

ಅನಂತರ ಅವರು ರಾಜರ್ಷಿಗಳ, ಸುರರ ಮತ್ತು ಅಲ್ಲಿ ವಾಸಿಸುತ್ತಿದ್ದ ತಪೋಧನರ ಕರಿತು ಧರ್ಮಸಂಹಿತವಾದ ಮಧುರ ಮಾತುಗಳಲ್ಲಿ ತೊಡಗಿದರು.

13126016a ತತೋ ನಾರಾಯಣಂ ತೇಜೋ ವ್ರತಚರ್ಯೇಂಧನೋತ್ಥಿತಮ್|

13126016c ವಕ್ತ್ರಾನ್ನಿಃಸೃತ್ಯ ಕೃಷ್ಣಸ್ಯ ವಹ್ನಿರದ್ಭುತಕರ್ಮಣಃ||

ಆಗ ವ್ರತಚರ್ಯ ಇಂಧನದಿಂದ ಮೇಲೆದ್ದ ನಾರಾಯಣ ತೇಜಸ್ಸು ಅದ್ಭುತಕರ್ಮಿ ಕೃಷ್ಣನ ಮುಖದಿಂದ ಹೊರಬಂದು ಅಗ್ನಿಯಾಯಿತು.

13126017a ಸೋಽಗ್ನಿರ್ದದಾಹ ತಂ ಶೈಲಂ ಸದ್ರುಮಂ ಸಲತಾಕ್ಷುಪಮ್|

13126017c ಸಪಕ್ಷಿಮೃಗಸಂಘಾತಂ ಸಶ್ವಾಪದಸರೀಸೃಪಮ್||

13126018a ಮೃಗೈಶ್ಚ ವಿವಿಧಾಕಾರೈರ್ಹಾಹಾಭೂತಮಚೇತನಮ್|

13126018c ಶಿಖರಂ ತಸ್ಯ ಶೈಲಸ್ಯ ಮಥಿತಂ ದೀಪ್ತದರ್ಶನಮ್||

ಆ ಅಗ್ನಿಯು ವೃಕ್ಷ-ಬಳ್ಳಿ-ಗಿಡಗಳ ಸಮೇತವಾಗಿ, ಪಕ್ಷಿ-ಮೃಗಗಳ ಸಮೇತ, ಹಿಂಸಮೃಗಗಳು ಮತ್ತು ಸರ್ಪಗಳ ಸಮೇತ ಆ ಶೈಲವನ್ನು ಸುಟ್ಟುಹಾಕಿತು. ನಿಶ್ಚೇಷ್ಟವಾಗಿದ್ದ ಆ ಶಿಖರವು ವಿವಿಧ ಜೀವಜಂತುಗಳ ಹಾಹಾಕಾರದಿಂದ ಪ್ರಜ್ವಲಿಸಿ ಉರಿಯಿತು.

13126019a ಸ ತು ವಹ್ನಿರ್ಮಹಾಜ್ವಾಲೋ ದಗ್ಧ್ವಾ ಸರ್ವಮಶೇಷತಃ|

13126019c ವಿಷ್ಣೋಃ ಸಮೀಪಮಾಗಮ್ಯ ಪಾದೌ ಶಿಷ್ಯವದಸ್ಪೃಶತ್||

ಆ ಅಗ್ನಿಜ್ವಾಲೆಯು ಎಲ್ಲವನ್ನೂ ಸಂಪೂರ್ಣವಾಗಿ ಸುಟ್ಟು ವಿಷ್ಣುವಿನ ಸಮೀಪಕ್ಕೆ ಆಗಮಿಸಿ ಶಿಷ್ಯನಂತೆ ಅವನ ಪಾದಗಳನ್ನು ಮುಟ್ಟಿತು.

13126020a ತತೋ ವಿಷ್ಣುರ್ವನಂ ದೃಷ್ಟ್ವಾ ನಿರ್ದಗ್ಧಮರಿಕರ್ಶನಃ|

13126020c ಸೌಮ್ಯೈರ್ದೃಷ್ಟಿನಿಪಾತೈಸ್ತತ್ಪುನಃ ಪ್ರಕೃತಿಮಾನಯತ್||

ಆಗ ಅರಿಕರ್ಶನ ವಿಷ್ಣುವು ಆ ವನವನ್ನು ನೋಡಿ ಸೌಮ್ಯದೃಷ್ಟಿಯನ್ನು ಬೀಳಿಸಿ ಪುನಃ ಅದನ್ನು ಹಿಂದಿನಂತೆಯೇ ಮಾಡಿದನು.

13126021a ತಥೈವ ಸ ಗಿರಿರ್ಭೂಯಃ ಪ್ರಪುಷ್ಪಿತಲತಾದ್ರುಮಃ|

13126021c ಸಪಕ್ಷಿಗಣಸಂಘುಷ್ಟಃ ಸಶ್ವಾಪದಸರೀಸೃಪಃ||

ಹಾಗೆಯೇ ಆ ಗಿರಿಯು ಪುನಃ ಪುಷ್ಪ-ಲತಾ-ವೃಕ್ಷಗಳಿಂದ ಹಾಗೂ ಪಕ್ಷಿಗಣಗಳ ಮತ್ತು ಹಿಂಸಮೃಗ-ಸರ್ಪಗಳಿಂದ ತುಂಬಿಕೊಂಡಿತು.

13126022a ತದದ್ಭುತಮಚಿಂತ್ಯಂ ಚ ದೃಷ್ಟ್ವಾ ಮುನಿಗಣಸ್ತದಾ|

13126022c ವಿಸ್ಮಿತೋ ಹೃಷ್ಟಲೋಮಾ ಚ ಬಭೂವಾಸ್ರಾವಿಲೇಕ್ಷಣಃ||

ಅದ್ಭುತವೂ ಅಚಿಂತ್ಯವೂ ಆದ ಅದನ್ನು ನೋಡಿದ ಮುನಿಗಣಗಳು ಕಣ್ಣುಗಳನ್ನು ಅಗಲಿಸಿಕೊಂಡು ರೋಮಾಂಚನಗೊಂಡು ವಿಸ್ಮಿತಗೊಂಡವು.

13126023a ತತೋ ನಾರಾಯಣೋ ದೃಷ್ಟ್ವಾ ತಾನೃಷೀನ್ವಿಸ್ಮಯಾನ್ವಿತಾನ್|

13126023c ಪ್ರಶ್ರಿತಂ ಮಧುರಂ ಸ್ನಿಗ್ಧಂ ಪಪ್ರಚ್ಚ ವದತಾಂ ವರಃ||

ಆಗ ಮಾತನಾಡುವವರಲ್ಲಿ ಶ್ರೇಷ್ಠ ನಾರಾಯಣನು ವಿಸ್ಮಿತರಾಗಿದ್ದ ಆ ಋಷಿಗಳನ್ನು ನೋಡಿ ಮಧುರವೂ ಸ್ನೇಹಪೂರ್ವಕವೂ ವಿನಯಪೂರ್ವಕವೂ ಆದ ಪ್ರಶ್ನೆಯನ್ನು ಕೇಳಿದನು:

13126024a ಕಿಮಸ್ಯ ಋಷಿಪೂಗಸ್ಯ ತ್ಯಕ್ತಸಂಗಸ್ಯ ನಿತ್ಯಶಃ|

13126024c ನಿರ್ಮಮಸ್ಯಾಗಮವತೋ ವಿಸ್ಮಯಃ ಸಮುಪಾಗತಃ||

“ನಿತ್ಯಶಃ ಸಂಗವನ್ನು ತ್ಯಜಿಸಿರುವ ಮತ್ತು ನಿರ್ಮಮತ್ವವನ್ನು ಪಡೆದಿರುವ ಈ ಋಷಿಸ್ತೋಮಕ್ಕೆ ವಿಸ್ಮಯವು ಹೇಗೆ ಉಂಟಾಗಿಬಿಟ್ಟಿತು?

13126025a ಏತಂ ಮೇ ಸಂಶಯಂ ಸರ್ವಂ ಯಾಥಾತಥ್ಯಮನಿಂದಿತಾಃ|

13126025c ಋಷಯೋ ವಕ್ತುಮರ್ಹಂತಿ ನಿಶ್ಚಿತಾರ್ಥಂ ತಪೋಧನಾಃ||

ನನ್ನಲ್ಲಿರುವ ಸರ್ವಸಂಶಯಗಳನ್ನೂ ಪರಿಹರಿಸಿ ಯಥಾತಥ್ಯವಾಗಿ ಅನಿಂದಿತ ತಪೋಧನ ಋಷಿಗಳು ನಿಶ್ಚಯವನ್ನು ಹೇಳಬೇಕು.”

13126026 ಋಷಯ ಊಚುಃ|

13126026a ಭವಾನ್ವಿಸೃಜತೇ ಲೋಕಾನ್ಭವಾನ್ಸಂಹರತೇ ಪುನಃ|

13126026c ಭವಾನ್ಶೀತಂ ಭವಾನುಷ್ಣಂ ಭವಾನೇವ ಪ್ರವರ್ಷತಿ||

ಋಷಿಗಳು ಹೇಳಿದರು: “ನೀನೇ ಈ ಲೋಕಗಳನ್ನು ಸೃಷ್ಟಿಸುತ್ತೀಯೆ. ನೀನೇ ಪುನಃ ಇವುಗಳನ್ನು ಎಳೆದುಕೊಳ್ಳುತ್ತೀಯೆ. ನೀನೇ ಶೀತ. ನೀನೇ ಉಷ್ಣ. ಮಳೆಸುರಿಸುವವನೂ ನೀನೇ.

13126027a ಪೃಥಿವ್ಯಾಂ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|

13126027c ತೇಷಾಂ ಪಿತಾ ತ್ವಂ ಮಾತಾ ಚ ಪ್ರಭುಃ ಪ್ರಭವ ಏವ ಚ||

ಪೃಥ್ವಿಯಲ್ಲಿ ಯಾವ ಸ್ಥಾವರ-ಚರ ಭೂತಗಳಿವೆಯೋ ಅವುಗಳ ಮಾತಾ-ಪಿತುವು ನೀನು. ಅವುಗಳ ಹುಟ್ಟು ಮತ್ತು ಪ್ರಭುವೂ ಕೂಡ.

13126028a ಏತನ್ನೋ ವಿಸ್ಮಯಕರಂ ಪ್ರಶಂಸ ಮಧುಸೂದನ|

13126028c ತ್ವಮೇವಾರ್ಹಸಿ ಕಲ್ಯಾಣ ವಕ್ತುಂ ವಹ್ನೇರ್ವಿನಿರ್ಗಮಮ್||

ಮಧುಸೂದನ! ಕಲ್ಯಾಣ! ನಮಗೆ ವಿಸ್ಮಯವನ್ನುಂಟು ಮಾಡಿರುವ ನಿನ್ನಿಂದ ಹೊರಟ ಅಗ್ನಿಯ ಕುರಿತು ನೀನೇ ಹೇಳಲು ಅರ್ಹನಾಗಿದ್ದೀಯೆ.

13126029a ತತೋ ವಿಗತಸಂತ್ರಾಸಾ ವಯಮಪ್ಯರಿಕರ್ಶನ|

13126029c ಯಚ್ಚ್ರುತಂ ಯಚ್ಚ ದೃಷ್ಟಂ ನಸ್ತತ್ಪ್ರವಕ್ಷ್ಯಾಮಹೇ ಹರೇ||

ಹರೇ! ಅರಿಕರ್ಶನ! ಆಗ ನಾವು ನಿರ್ಭಯರಾಗುತ್ತೇವೆ. ಯಾವುದನ್ನು ಕೇಳಿದೆವೋ ಮತ್ತು ನೋಡಿದೆವೋ ಅವುಗಳ ಕುರಿತು ನಾವು ಹೇಳುತ್ತೇವೆ.”

13126030 ವಾಸುದೇವ ಉವಾಚ|

13126030a ಏತತ್ತದ್ವೈಷ್ಣವಂ ತೇಜೋ ಮಮ ವಕ್ತ್ರಾದ್ವಿನಿಃಸೃತಮ್|

13126030c ಕೃಷ್ಣವರ್ತ್ಮಾ ಯುಗಾಂತಾಭೋ ಯೇನಾಯಂ ಮಥಿತೋ ಗಿರಿಃ||

ವಾಸುದೇವನು ಹೇಳಿದನು: “ನನ್ನ ಮುಖದಿಂದ ಹೊರಹೊಮ್ಮಿದುದು ವೈಷ್ಣವ ತೇಜಸ್ಸು. ಯುಗಾಂತಕ್ಕೆ ಸಮನಾದ ಆ ಅಗ್ನಿಯು ಈ ಗಿರಿಯನ್ನು ಸುಟ್ಟು ಭಸ್ಮಮಾಡಿತು.

13126031a ಋಷಯಶ್ಚಾರ್ತಿಮಾಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ|

13126031c ಭವಂತೋ ವ್ಯಥಿತಾಶ್ಚಾಸನ್ದೇವಕಲ್ಪಾಸ್ತಪೋಧನಾಃ||

ಅದರಿಂದಾಗಿ ಜಿತಕ್ರೋಧರೂ ಜಿತೇಂದ್ರಿಯರೂ ದೇವಕಲ್ಪ ತಪೋಧನರೂ ಆದ ನೀವು ಋಷಿಗಳು ವ್ಯಥಿತರಾಗಿ ಆರ್ತರಾದಿರಿ.

13126032a ವ್ರತಚರ್ಯಾಪರೀತಸ್ಯ ತಪಸ್ವಿವ್ರತಸೇವಯಾ|

13126032c ಮಮ ವಹ್ನಿಃ ಸಮುದ್ಭೂತೋ ನ ವೈ ವ್ಯಥಿತುಮರ್ಹಥ||

ವ್ರತಚರ್ಯದಲ್ಲಿ ತೊಡಗಿರುವ ಮತ್ತು ತಪಸ್ವಿಯ ವ್ರತವನ್ನು ನಡೆಸುತ್ತಿರುವ ನನ್ನಿಂದ ಅಗ್ನಿಯು ಹುಟ್ಟಿತು. ಅದಕ್ಕೆ ನೀವು ವ್ಯಥಿತರಾಗಬಾರದು.

13126033a ವ್ರತಂ ಚರ್ತುಮಿಹಾಯಾತಸ್ತ್ವಹಂ ಗಿರಿಮಿಮಂ ಶುಭಮ್|

13126033c ಪುತ್ರಂ ಚಾತ್ಮಸಮಂ ವೀರ್ಯೇ ತಪಸಾ ಸ್ರಷ್ಟುಮಾಗತಃ||

ವೀರ್ಯದಲ್ಲಿ ನನ್ನ ಸಮನಾಗಿರುವ ಪುತ್ರನನ್ನು ತಪಸ್ಸಿನಿಂದ ಪಡೆದುಕೊಳ್ಳಲು ಈ ಶುಭಗಿರಿಗೆ ಬಂದು ವ್ರತವನ್ನಾಚರಿಸುತ್ತಿದ್ದೇನೆ.

13126034a ತತೋ ಮಮಾತ್ಮಾ ಯೋ ದೇಹೇ ಸೋಽಗ್ನಿರ್ಭೂತ್ವಾ ವಿನಿಃಸೃತಃ|

13126034c ಗತಶ್ಚ ವರದಂ ದ್ರಷ್ಟುಂ ಸರ್ವಲೋಕಪಿತಾಮಹಮ್||

ಆಗ ನನ್ನ ಆತ್ಮವು ದೇಹದಿಂದ ಅಗ್ನಿಯಾಗಿ ಹೊರಟು ವರದ ಸರ್ವಲೋಕಪಿತಾಮಹನನ್ನು ನೋಡಲು ಹೋಗಿತ್ತು.

13126035a ತೇನ ಚಾತ್ಮಾನುಶಿಷ್ಟೋ ಮೇ ಪುತ್ರತ್ವೇ ಮುನಿಸತ್ತಮಾಃ|

13126035c ತೇಜಸೋಽರ್ಧೇನ ಪುತ್ರಸ್ತೇ ಭವಿತೇತಿ ವೃಷಧ್ವಜಃ||

ಮುನಿಸತ್ತಮರೇ! “ವೃಷಧ್ವಜನು ತನ್ನ ತೇಜಸ್ಸಿನ ಅರ್ಧದಿಂದ ನಿನ್ನ ಪುತ್ರನಾಗಿ ಹುಟ್ಟುತ್ತಾನೆ” ಎಂದು ಅವನು ನನ್ನ ಆತ್ಮನಿಗೆ ಹೇಳಿದನು.

13126036a ಸೋಽಯಂ ವಹ್ನಿರುಪಾಗಮ್ಯ ಪಾದಮೂಲೇ ಮಮಾಂತಿಕಮ್|

13126036c ಶಿಷ್ಯವತ್ಪರಿಚರ್ಯಾಥ ಶಾಂತಃ ಪ್ರಕೃತಿಮಾಗತಃ||

ಆ ಅಗ್ನಿಯೇ ಹಿಂದಿರುಗಿ ಶಿಷ್ಯ ಮತ್ತು ಸೇವಕನಂತೆ ನನ್ನ ಹತ್ತಿರ ಪಾದಮೂಲದಲ್ಲಿ ಬಂದು ಸೇರಿ ತನ್ನ ಪೂರ್ವಭಾವವನ್ನು ಹೊಂದಿತು.

13126037a ಏತದಸ್ಯ ರಹಸ್ಯಂ ವಃ ಪದ್ಮನಾಭಸ್ಯ ಧೀಮತಃ|

13126037c ಮಯಾ ಪ್ರೇಮ್ಣಾ ಸಮಾಖ್ಯಾತಂ ನ ಭೀಃ ಕಾರ್ಯಾ ತಪೋಧನಾಃ||

ತಪೋಧನರೇ! ಪ್ರೇಮದಿಂದ ನಾನು ಹೇಳಿದ ಇದೇ ಆ ಧೀಮತ ಪದ್ಮನಾಭನ ರಹಸ್ಯ. ಇದರಲ್ಲಿ ಭಯಪಡಬೇಕಾದುದು ಏನೂ ಇಲ್ಲ.

13126038a ಸರ್ವತ್ರ ಗತಿರವ್ಯಗ್ರಾ ಭವತಾಂ ದೀರ್ಘದರ್ಶನಾಃ|

13126038c ತಪಸ್ವಿವ್ರತಸಂದೀಪ್ತಾ ಜ್ಞಾನವಿಜ್ಞಾನಶೋಭಿತಾಃ||

ದೀರ್ಘದರ್ಶನರಾದ ನಿಮ್ಮ ಗಮನವು ಎಲ್ಲಕಡೆಗಳಲ್ಲಿಯೂ ಅನಿರ್ಬಾದಿತವಾಗಿರುವುದು. ವ್ರತಸಂದೀಪ್ತ ತಪಸ್ವಿಗಳಾಗಿರುವ ನೀವು ಜ್ಞಾನವಿಜ್ಞಾನಗಳಿಂದ ಶೋಭಿಸುತ್ತೀರಿ.

13126039a ಯಚ್ಚ್ರುತಂ ಯಚ್ಚ ವೋ ದೃಷ್ಟಂ ದಿವಿ ವಾ ಯದಿ ವಾ ಭುವಿ|

13126039c ಆಶ್ಚರ್ಯಂ ಪರಮಂ ಕಿಂ ಚಿತ್ತದ್ಭವಂತೋ ಬ್ರುವಂತು ಮೇ||

ದಿವಿಯಲ್ಲಾಗಲೀ ಭುವಿಯಲ್ಲಾಗಲೀ ನೀವು ಕೇಳಿರುವ ಮತ್ತು ನೋಡಿರುವ ಪರಮಾಶ್ಚರ್ಯವು ಯಾವುದಾದರೂ ಇದ್ದರೆ ಅದನ್ನು ನನಗೆ ಹೇಳಬೇಕು.

13126040a ತಸ್ಯಾಮೃತನಿಕಾಶಸ್ಯ ವಾಙ್ಮಧೋರಸ್ತಿ ಮೇ ಸ್ಪೃಹಾ|

13126040c ಭವದ್ಭಿಃ ಕಥಿತಸ್ಯೇಹ ತಪೋವನನಿವಾಸಿಭಿಃ||

ತಪೋವನ ನಿವಾಸಿಗಳಾದ ನಿಮ್ಮ ಅಮೃತಸಮಾನ ಮಧುರ ವಾಕ್ಯಗಳನ್ನು ಕೇಳ ಬಯಸುತ್ತೇನೆ.

13126041a ಯದ್ಯಪ್ಯಹಮದೃಷ್ಟಂ ವಾ ದಿವ್ಯಮದ್ಭುತದರ್ಶನಮ್|

13126041c ದಿವಿ ವಾ ಭುವಿ ವಾ ಕಿಂ ಚಿತ್ಪಶ್ಯಾಮ್ಯಮಲದರ್ಶನಾಃ||

ಅಮಲದರ್ಶನರೇ! ದಿವಿಯಲ್ಲಾಗಲೀ ಭುವಿಯಾಗಲೀ ನೀವು ಏನನ್ನಾದರೂ ದಿವ್ಯ ಅದ್ಭುತವನ್ನು ಕಂಡಿದ್ದರೆ ಅದನ್ನು ನಾನು ನನ್ನ ಚಿತ್ತದಲ್ಲಿ ಕಾಣುತ್ತಿದ್ದೇನೆ.

13126042a ಪ್ರಕೃತಿಃ ಸಾ ಮಮ ಪರಾ ನ ಕ್ವ ಚಿತ್ಪ್ರತಿಹನ್ಯತೇ|

13126042c ನ ಚಾತ್ಮಗತಮೈಶ್ವರ್ಯಮಾಶ್ಚರ್ಯಂ ಪ್ರತಿಭಾತಿ ಮೇ||

ನನ್ನ ಈ ಪರಮ ಪ್ರಕೃತಿಯನ್ನು ಯಾವುದೂ ತಡೆಯಲಾರದು. ನನ್ನ ಆತ್ಮಗತವಾಗಿರುವ ಐಶ್ವರ್ಯಗಳ್ಯಾವುವೂ ನನ್ನಲ್ಲಿ ಆಶ್ಚರ್ಯವನ್ನುಂಟುಮಾಡುವುದಿಲ್ಲ.

13126043a ಶ್ರದ್ಧೇಯಃ ಕಥಿತೋ ಹ್ಯರ್ಥಃ ಸಜ್ಜನಶ್ರವಣಂ ಗತಃ|

13126043c ಚಿರಂ ತಿಷ್ಠತಿ ಮೇದಿನ್ಯಾಂ ಶೈಲೇ ಲೇಖ್ಯಮಿವಾರ್ಪಿತಮ್||

ಆದರೆ ಸಜ್ಜನರ ಕಿವಿಗಳಲ್ಲಿ ಬಿದ್ದ ವಿಷಯವು ಮಾತಿನಮೂಲಕವಾಗಿ ಹೊರಬಂದರೆ ಎಲ್ಲರೂ ನಂಬುತ್ತಾರೆ. ಅಂಥಹ ವಿಷಯವು ಪರ್ವತದ ಮೇಲೆ ಬರೆದಿಟ್ಟ ವಾಕ್ಯದಂತೆ ಭೂಮಿಯಲ್ಲಿ ಬಹಳ ಕಾಲದವರೆಗೂ ಉಳಿದಿರುತ್ತದೆ.

13126044a ತದಹಂ ಸಜ್ಜನಮುಖಾನ್ನಿಃಸೃತಂ ತತ್ಸಮಾಗಮೇ|

13126044c ಕಥಯಿಷ್ಯಾಮ್ಯಹರಹರ್ಬುದ್ಧಿದೀಪಕರಂ ನೃಣಾಮ್||

ಆದುದರಿಂದ ನಾನು ಸಜ್ಜನರ ಮುಖದಿಂದ ಹೊರಬಂದ ಮನುಷ್ಯರ ಬುದ್ಧಿಯನ್ನು ವಿಕಾಸಗೊಳಿಸುವ ವಿಷಯಗಳನ್ನು ಸಜ್ಜನರ ಸಮಾಗಮದಲ್ಲಿ ಅವರಿಗೆ ಹೇಳುತ್ತೇನೆ.”

13126045a ತತೋ ಮುನಿಗಣಾಃ ಸರ್ವೇ ಪ್ರಶ್ರಿತಾಃ ಕೃಷ್ಣಸಂನಿಧೌ|

13126045c ನೇತ್ರೈಃ ಪದ್ಮದಲಪ್ರಖ್ಯೈರಪಶ್ಯಂತ ಜನಾರ್ದನಮ್||

ಅದನ್ನು ಕೇಳಿದ ಕೃಷ್ಣಸನ್ನಿಧಿಯಲ್ಲಿದ್ದ ಆ ಎಲ್ಲ ಮುನಿಗಣಗಳೂ ಅರಳಿದ ಕಣ್ಣುಗಳಿಂದ ಜನಾರ್ದನನನ್ನು ನೋಡಿದವು.

13126046a ವರ್ಧಯಂತಸ್ತಥೈವಾನ್ಯೇ ಪೂಜಯಂತಸ್ತಥಾಪರೇ|

13126046c ವಾಗ್ಭಿರೃಗ್ಭೂಷಿತಾರ್ಥಾಭಿಃ ಸ್ತುವಂತೋ ಮಧುಸೂದನಮ್||

ಕೆಲವರು ಅವನನ್ನು ಅಭಿನಿಂದಿಸಿದರೆ ಅನ್ಯರು ಪೂಜಿಸುತ್ತಿದ್ದರು. ಇನ್ನೂ ಇತರರು ಋಗ್ವೇದ ಋಕ್ಕುಗಳಿಂದ ಮಧುಸೂದನನನ್ನು ಸ್ತುತಿಸುತ್ತಿದ್ದರು.

13126047a ತತೋ ಮುನಿಗಣಾಃ ಸರ್ವೇ ನಾರದಂ ದೇವದರ್ಶನಮ್|

13126047c ತದಾ ನಿಯೋಜಯಾಮಾಸುರ್ವಚನೇ ವಾಕ್ಯಕೋವಿದಮ್||

ಆಗ ಮುನಿಗಣಗಳೆಲ್ಲವೂ ದೇವದರ್ಶನ ವಾಕ್ಯಕೋವಿದ ನಾರದನನ್ನು ಮಾತನಾಡಲು ನಿಯೋಜಿಸಿದವು.

13126048a ಯದಾಶ್ಚರ್ಯಮಚಿಂತ್ಯಂ ಚ ಗಿರೌ ಹಿಮವತಿ ಪ್ರಭೋ|

13126048c ಅನುಭೂತಂ ಮುನಿಗಣೈಸ್ತೀರ್ಥಯಾತ್ರಾಪರಾಯಣೈಃ||

13126049a ತದ್ಭವಾನೃಷಿಸಂಘಸ್ಯ ಹಿತಾರ್ಥಂ ಸರ್ವಚೋದಿತಃ|

13126049c ಯಥಾದೃಷ್ಟಂ ಹೃಷೀಕೇಶೇ ಸರ್ವಮಾಖ್ಯಾತುಮರ್ಹತಿ||

“ಪ್ರಭೋ! ತೀರ್ಥಯಾತ್ರಾಪರಾಯಣಾರಾದ ಈ ಮುನಿಗಣಗಳಿಗೆ ಹಿಮವತ್ಪರ್ವತದಲ್ಲಿ ಅಚಿಂತ್ಯವೂ ಆಶ್ಚರ್ಯವೂ ಆದ ಅನುಭವದ ಕುರಿತು, ಕಂಡಹಾಗೆ ಸರ್ವವನ್ನೂ ಈ ಋಷಿಸಂಘದ ಹಿತಕ್ಕಾಗಿ, ಹೃಷೀಕೇಶನಿಗೆ ಹೇಳಬೇಕು.”

13126050a ಏವಮುಕ್ತಃ ಸ ಮುನಿಭಿರ್ನಾರದೋ ಭಗವಾನೃಷಿಃ|

13126050c ಕಥಯಾಮಾಸ ದೇವರ್ಷಿಃ ಪೂರ್ವವೃತ್ತಾಂ ಕಥಾಂ ಶುಭಾಮ್||

ಆ ಮುನಿಗಳಿಂದ ಹೀಗೆ ಹೇಳಲ್ಪಟ್ಟ ಭಗವಾನ್ ಋಷಿ ದೇವರ್ಷಿ ನಾರದನು ಹಿಂದೆ ನಡೆದ ಆ ಶುಭ ಕಥೆಯನ್ನು ಹೇಳತೊಡಗಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಷಟ್ವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ನೂರಾಇಪ್ಪತ್ತಾರನೇ ಅಧ್ಯಾಯವು.

Related image

Comments are closed.