ಅನುಶಾಸನ ಪರ್ವ: ದಾನಧರ್ಮ ಪರ್ವ
೧೨೫
ಸಾಂತ್ವಪ್ರಶಂಸಾ
ಸಾಮ-ದಾನಗಳಲ್ಲಿ ಸಾಮವೇ ಶ್ರೇಷ್ಠವೆಂದು ಹೇಳುವ ಹರಿಣಕೃಶಕಾಖ್ಯಾನ (೧-೩೮).
13125001 ಯುಧಿಷ್ಠಿರ ಉವಾಚ|
13125001a ಸಾಮ್ನಾ ವಾಪಿ ಪ್ರದಾನೇ ವಾ ಜ್ಯಾಯಃ ಕಿಂ ಭವತೋ ಮತಮ್|
13125001c ಪ್ರಬ್ರೂಹಿ ಭರತಶ್ರೇಷ್ಠ ಯದತ್ರ ವ್ಯತಿರಿಚ್ಯತೇ||
ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! ನಿನ್ನ ಅಭಿಪ್ರಾಯದಲ್ಲಿ ಸಾಮ ಮತ್ತು ದಾನ – ಇವೆರಡರಲ್ಲಿ ಯಾವುದು ಶ್ರೇಷ್ಠವಾದುದು? ಇವುಗಳಲ್ಲಿ ಯಾವುದು ಅತಿಶಯಿಸುತ್ತದೆ ಎನ್ನುವುದನ್ನು ಹೇಳು.”
13125002 ಭೀಷ್ಮ ಉವಾಚ|
13125002a ಸಾಮ್ನಾ ಪ್ರಸಾದ್ಯತೇ ಕಶ್ಚಿದ್ದಾನೇನ ಚ ತಥಾಪರಃ|
13125002c ಪುರುಷಃ ಪ್ರಕೃತಿಂ ಜ್ಞಾತ್ವಾ ತಯೋರೇಕತರಂ ಭಜೇತ್||
ಭೀಷ್ಮನು ಹೇಳಿದನು: “ಕೆಲವರು ಸಾಮದಿಂದ ಪ್ರಸನ್ನರಾಗುತ್ತಾರೆ. ಇನ್ನುಕೆಲವರು ದಾನದಿಂದ ಪ್ರಸನ್ನರಾಗುತ್ತಾರೆ. ಮನುಷ್ಯನ ಪ್ರಕೃತಿಯನ್ನು ತಿಳಿದು ಅದರಂತೆ ಈ ಎರಡರಲ್ಲಿ ಒಂದನ್ನು ಬಳಸಬೇಕು.
13125003a ಗುಣಾಂಸ್ತು ಶೃಣು ಮೇ ರಾಜನ್ಸಾಂತ್ವಸ್ಯ ಭರತರ್ಷಭ|
13125003c ದಾರುಣಾನ್ಯಪಿ ಭೂತಾನಿ ಸಾಂತ್ವೇನಾರಾಧಯೇದ್ಯಥಾ||
ರಾಜನ್! ಭರತರ್ಷಭ! ಸಾಮದ ಗುಣಗಳನ್ನು ಕೇಳು. ಸಾಂತ್ವನದಿಂದ ದಾರುಣ ಪ್ರಾಣಿಯನ್ನೂ ವಶಪಡಿಸಿಕೊಳ್ಳಬಹುದು.
13125004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13125004c ಗೃಹೀತ್ವಾ ರಕ್ಷಸಾ ಮುಕ್ತೋ ದ್ವಿಜಾತಿಃ ಕಾನನೇ ಯಥಾ||
ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕಾನನದಲ್ಲಿ ರಾಕ್ಷಸನ ಕೈಗೆ ಸಿಕ್ಕಿದ್ದ ಬ್ರಾಹ್ಮಣನು ಮುಕ್ತನಾದ ಬಗೆಯನ್ನು ಉದಾಹರಿಸುತ್ತಾರೆ.
13125005a ಕಶ್ಚಿತ್ತು ಬುದ್ಧಿಸಂಪನ್ನೋ ಬ್ರಾಹ್ಮಣೋ ವಿಜನೇ ವನೇ|
13125005c ಗೃಹೀತಃ ಕೃಚ್ಚ್ರಮಾಪನ್ನೋ ರಕ್ಷಸಾ ಭಕ್ಷಯಿಷ್ಯತಾ||
ಒಮ್ಮೆ ನಿರ್ಜನ ವನದಲ್ಲಿ ಬುದ್ಧಿಸಂಪನ್ನ ಬ್ರಾಹ್ಮಣನೋರ್ವನು ತನ್ನನ್ನು ತಿನ್ನಲು ಬಯಸಿದ್ದ ರಾಕ್ಷಸನ ಹಿಡಿತಕ್ಕೆ ಸಿಲುಕಿ ಕಷ್ಟವನ್ನು ಅನುಭವಿಸಿದನು.
13125006a ಸ ಬುದ್ಧಿಶ್ರುತಸಂಪನ್ನಸ್ತಂ ದೃಷ್ಟ್ವಾತೀವ ಭೀಷಣಮ್|
13125006c ಸಾಮೈವಾಸ್ಮಿನ್ಪ್ರಯುಯುಜೇ ನ ಮುಮೋಹ ನ ವಿವ್ಯಥೇ||
ಬುದ್ಧಿಶ್ರುತಸಂಪನ್ನನಾಗಿದ್ದ ಅವನು ಅತೀವ ಭೀಷಣನಾಗಿದ್ದ ರಾಕ್ಷಸನನ್ನು ನೋಡಿ ಭ್ರಾಂತನೂ ವ್ಯಥಿತನೂ ಆಗಲಿಲ್ಲ. ರಾಕ್ಷಸನೊಡನೆ ಸಾಂತ್ವನದ ಮಾತುಗಳನ್ನೇ ಆಡಿದನು.
13125007a ರಕ್ಷಸ್ತು ವಾಚಾ ಸಂಪೂಜ್ಯ ಪ್ರಶ್ನಂ ಪಪ್ರಚ್ಚ ತಂ ದ್ವಿಜಮ್|
13125007c ಮೋಕ್ಷ್ಯಸೇ ಬ್ರೂಹಿ ಮೇ ಪ್ರಶ್ನಂ ಕೇನಾಸ್ಮಿ ಹರಿಣಃ ಕೃಶಃ||
ರಾಕ್ಷಸನು ಅವನ ಮಾತುಗಳಿಗೆ ಮೆಚ್ಚಿ ದ್ವಿಜನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು: “ನನ್ನ ಪ್ರಶ್ನೆಗಳಿಗೆ ಉತ್ತರಿಸಿದರೆ ನೀನು ಬಿಡುಗಡೆಹೊಂದುತ್ತೀಯೆ. ನಾನು ಏಕೆ ಬಿಳಿಚಿಕೊಂಡಿದ್ದೇನೆ ಮತ್ತು ನಾನು ಏಕೆ ಕೃಶನಾಗಿದ್ದೇನೆ?”
13125008a ಮುಹೂರ್ತಮಥ ಸಂಚಿಂತ್ಯ ಬ್ರಾಹ್ಮಣಸ್ತಸ್ಯ ರಕ್ಷಸಃ|
13125008c ಆಭಿರ್ಗಾಥಾಭಿರವ್ಯಗ್ರಃ ಪ್ರಶ್ನಂ ಪ್ರತಿಜಗಾದ ಹ||
ಬ್ರಾಹ್ಮಣನು ಮುಹೂರ್ತಕಾಲ ಅವ್ಯಗ್ರನಾಗಿ ಯೋಚಿಸಿ ನಂತರ ಮುಂದಿನ ಶ್ಲೋಕಗಳ ಮೂಲಕ ರಾಕ್ಷಸನಿಗೆ ಉತ್ತರಿಸಿದನು:
13125009a ವಿದೇಶಸ್ಥೋ ವಿಲೋಕಸ್ಥೋ ವಿನಾ ನೂನಂ ಸುಹೃಜ್ಜನೈಃ|
13125009c ವಿಷಯಾನತುಲಾನ್ಭುಂಕ್ಷೇ ತೇನಾಸಿ ಹರಿಣಃ ಕೃಶಃ||
“ವಿದೇಶದಲ್ಲಿರುವ, ವಿಲೋಕದಲ್ಲಿರುವ ಮತ್ತು ಸುಹೃಜ್ಜನರಿಂದ ವಿಹೀನನಾಗಿರುವ ನೀನು ಅತುಲ ವಿಷಯಭೋಗಗಳಲ್ಲಿ ತೊಡಗಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125010a ನೂನಂ ಮಿತ್ರಾಣಿ ತೇ ರಕ್ಷಃ ಸಾಧೂಪಚರಿತಾನ್ಯಪಿ|
13125010c ಸ್ವದೋಷಾದಪರಜ್ಯಂತೇ ತೇನಾಸಿ ಹರಿಣಃ ಕೃಶಃ||
ಮಿತ್ರರನ್ನು ನೀನು ಚೆನ್ನಾಗಿ ಗೌರವಿದ್ದರೂ ಅವರು ಸ್ವಭಾವದೋಷದಿಂದಾಗಿ ನಿನ್ನನ್ನು ಅಗಲಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125011a ಧನೈಶ್ವರ್ಯಾಧಿಕಾಃ ಸ್ತಬ್ಧಾಸ್ತ್ವದ್ಗುಣೈಃ ಪರಮಾವರಾಃ|
13125011c ಅವಜಾನಂತಿ ನೂನಂ ತ್ವಾಂ ತೇನಾಸಿ ಹರಿಣಃ ಕೃಶಃ||
ನಿನಗಿಂತಲೂ ಹೆಚ್ಚಿನ ಧನೈಶ್ವರ್ಯಯುಕ್ತರು ಗುಣಗಳಲ್ಲಿ ನಿನಗಿಂತಲೂ ಅತ್ಯಂತ ಕೀಳಾಗಿದ್ದರೂ ನಿನ್ನನ್ನು ಅವಹೇಳನ ಮಾಡುತ್ತಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125012a ಗುಣವಾನ್ವಿಗುಣಾನನ್ಯಾನ್ನೂನಂ ಪಶ್ಯಸಿ ಸತ್ಕೃತಾನ್|
13125012c ಪ್ರಾಜ್ಞೋಽಪ್ರಾಜ್ಞಾನ್ವಿನೀತಾತ್ಮಾ ತೇನಾಸಿ ಹರಿಣಃ ಕೃಶಃ||
ಗುಣವಂತನೂ ವಿದ್ಯಾವಂತನೂ ವಿನಯಶೀಲನೂ ಆಗಿದ್ದರೂ ನಿನ್ನನ್ನು ಯಾರೂ ಗೌರವಿಸುತ್ತಿಲ್ಲ. ಬದಲಾಗಿ ಗುಣಹೀನರನ್ನೂ, ಮೂಢರನ್ನೂ ಜನರು ಗೌರವಿಸುವುದನ್ನು ನೀನು ನೋಡಿದ್ದೀಯೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125013a ಅವೃತ್ತ್ಯಾ ಕ್ಲಿಶ್ಯಮಾನೋಽಪಿ ವೃತ್ತ್ಯುಪಾಯಾನ್ವಿಗರ್ಹಯನ್|
13125013c ಮಾಹಾತ್ಮ್ಯಾದ್ವ್ಯಥಸೇ ನೂನಂ ತೇನಾಸಿ ಹರಿಣಃ ಕೃಶಃ||
ಜೀವನೋಪಾಯಕ್ಕೆ ಮಾರ್ಗವಿಲ್ಲದವನಾಗಿ ಕ್ಲೇಶಪಡುತ್ತಿದ್ದರೂ ಆತ್ಮಗೌರವದ ಕಾರಣದಿಂದ ನೀನು ಪ್ರತಿಗ್ರಹವೇ ಮೊದಲಾದವುಗಳನ್ನು ನಿಂದಿಸುತ್ತೀಯೆ. ಇದರ ಕುರಿತು ತುಂಬಾ ಚಿಂತಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125014a ಸಂಪೀಡ್ಯಾತ್ಮಾನಮಾರ್ಯತ್ವಾತ್ತ್ವಯಾ ಕಶ್ಚಿದುಪಸ್ಕೃತಃ|
13125014c ಜಿತಂ ತ್ವಾಂ ಮನ್ಯತೇ ಸಾಧೋ ತೇನಾಸಿ ಹರಿಣಃ ಕೃಶಃ||
ಆರ್ಯನಾದ ನೀನು ಕಾಯಕ್ಲೇಶವನ್ನು ಅನುಭವಿಸಿಯೂ ಇನ್ನೊಬ್ಬನಿಗೆ ಉಪಕಾರವನ್ನೆಸಗಿರುವೆ. ಆದರೆ ಉಪಕಾರವನ್ನು ಪಡೆದುಕೊಂಡವನು ತಾನು ನಿನ್ನನ್ನು ಗೆದ್ದನೆಂದೂ ಕಾರ್ಯವನ್ನು ಸಾಧಿಸಿದನೆಂದೂ ತಿಳಿದುಕೊಂಡಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125015a ಕ್ಲಿಶ್ಯಮಾನಾನ್ವಿಮಾರ್ಗೇಷು ಕಾಮಕ್ರೋಧಾವೃತಾತ್ಮನಃ|
13125015c ಮನ್ಯೇ ನು ಧ್ಯಾಯಸಿ ಜನಾಂಸ್ತೇನಾಸಿ ಹರಿಣಃ ಕೃಶಃ||
ಕಾಮಕ್ರೋಧಾದಿಗಳಿಂದ ಆಕ್ರಮಿಸಲ್ಪಟ್ಟು ದುರ್ಮಾರ್ಗಗಳಲ್ಲಿ ಪ್ರವೃತ್ತರಾಗಿ ಕಷ್ಟಪಡುತ್ತಿರುವ ಜನರ ಕುರಿತು ನೀನು ಚಿಂತಿಸುತ್ತಿರುವೆಯೆಂದು ನನಗನ್ನಿಸುತ್ತದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125016a ಪ್ರಾಜ್ಞೈಃ ಸಂಭಾವಿತೋ ನೂನಂ ನಪ್ರಾಜ್ಞೈರುಪಸಂಹಿತಃ|
13125016c ಹ್ರೀಮಾನಮರ್ಷೀ ದುರ್ವೃತ್ತೈಸ್ತೇನಾಸಿ ಹರಿಣಃ ಕೃಶಃ||
ನೀನು ಪ್ರಾಜ್ಞನೂ ಸಂಭಾವಿತನೂ ಆಗಿರುವೆ. ಆದರೆ ಅಜ್ಞಾನಿಗಳೂ ದುಷ್ಟರೂ ನಿನ್ನನ್ನು ಅಪಹಾಸ್ಯಮಾಡುತ್ತಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125017a ನೂನಂ ಮಿತ್ರಮುಖಃ ಶತ್ರುಃ ಕಶ್ಚಿದಾರ್ಯವದಾಚರನ್|
13125017c ವಂಚಯಿತ್ವಾ ಗತಸ್ತ್ವಾಂ ವೈ ತೇನಾಸಿ ಹರಿಣಃ ಕೃಶಃ||
ಮಿತ್ರನಂತೆ ನಟಿಸುತ್ತಿದ್ದ ನಿನ್ನ ಶತ್ರುವೋರ್ವನು ಶ್ರೇಷ್ಠಪುರುಷನಂತೆ ವ್ಯವಹರಿಸುತ್ತಿದ್ದ ನಿನ್ನನ್ನು ಸಂಪೂರ್ಣವಾಗಿ ನಂಬಿಸಿ ಸಮಯವನ್ನು ಕಾದು ನಿನ್ನನ್ನು ವಂಚಿಸಿ ಹೊರಟುಹೋಗಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125018a ಪ್ರಕಾಶಾರ್ಥಗತಿರ್ನೂನಂ ರಹಸ್ಯಕುಶಲಃ ಕೃತೀ|
13125018c ತಜ್ಜ್ಞೈರ್ನ ಪೂಜ್ಯಸೇ ನೂನಂ ತೇನಾಸಿ ಹರಿಣಃ ಕೃಶಃ||
ನಿನ್ನ ಅರ್ಥಗತಿಯು ಎಲ್ಲರಿಗೂ ತಿಳಿದಿದೆ. ನೀನು ರಹಸ್ಯವನ್ನು ಇಟ್ಟುಕೊಳ್ಳುವುದರಲ್ಲಿ ಕುಶಲನೂ ತಜ್ಞನೂ ಆಗಿರುವೆ. ಆದರೂ ತಜ್ಞರು ನಿನ್ನನ್ನು ಗೌರವಿಸುವುದಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125019a ಅಸತ್ಸ್ವಭಿನಿವಿಷ್ಟೇಷು ಬ್ರುವತೋ ಮುಕ್ತಸಂಶಯಮ್|
13125019c ಗುಣಾಸ್ತೇ ನ ವಿರಾಜಂತೇ ತೇನಾಸಿ ಹರಿಣಃ ಕೃಶಃ||
ನೀನು ದಷ್ಟಪುಷ್ಟರ ಮಧ್ಯದಲ್ಲಿಯೂ ಯಾವ ವಿಧದ ಸಂಶಯವೂ ಇಲ್ಲದೇ ಉತ್ತಮ ಮಾತುಗಳನ್ನೇ ಆಡುವೆ. ಆದರೂ ನಿನ್ನ ಗುಣಗಳು ಅವರಲ್ಲಿ ಪ್ರಕಾಶಿಸುವುದಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125020a ಧನಬುದ್ಧಿಶ್ರುತೈರ್ಹೀನಃ ಕೇವಲಂ ತೇಜಸಾನ್ವಿತಃ|
13125020c ಮಹತ್ಪ್ರಾರ್ಥಯಸೇ ನೂನಂ ತೇನಾಸಿ ಹರಿಣಃ ಕೃಶಃ||
ಧನ, ಬುದ್ಧಿ, ವಿದ್ಯೆಗಳಿಂದ ವಿಹೀನನಾಗಿದ್ದರೂ ಕೇವಲ ತೇಜಸಾನ್ವಿತನಾಗಿ ಮಹಾ ಫಲಗಳನ್ನು ಅಪೇಕ್ಷಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125021a ತಪಃಪ್ರಣಿಹಿತಾತ್ಮಾನಂ ಮನ್ಯೇ ತ್ವಾರಣ್ಯಕಾಂಕ್ಷಿಣಮ್|
13125021c ಬಂಧುವರ್ಗೋ ನ ಗೃಹ್ಣಾತಿ ತೇನಾಸಿ ಹರಿಣಃ ಕೃಶಃ||
ತಪಸ್ಸಿನಲ್ಲಿಯೇ ನಿನ್ನ ಮನಸ್ಸು ಆಸಕ್ತವಾಗಿದೆ. ಆದುದರಿಂದ ನೀನು ಅರಣ್ಯದಲ್ಲಿಯೇ ಇರಬಯಸುತ್ತೀಯೆ. ಆದರೆ ನಿನ್ನ ಬಂಧುವರ್ಗದವರು ಅದಕ್ಕೆ ಒಪ್ಪುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125022a ನೂನಮರ್ಥವತಾಂ ಮಧ್ಯೇ ತವ ವಾಕ್ಯಮನುತ್ತಮಮ್|
13125022c ನ ಭಾತಿ ಕಾಲೇಽಭಿಹಿತಂ ತೇನಾಸಿ ಹರಿಣಃ ಕೃಶಃ||
ಧನವಂತರ ಮಧ್ಯದಲ್ಲಿ ನೀನು ಉತ್ತಮವಾದ ಕಾಲೋಚಿತವಾದ ಮಾತನ್ನೇ ಆಡುತ್ತೀಯೆ. ಆದರೆ ಆ ಮಾತು ಅವರ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125023a ದೃಢಪೂರ್ವಶ್ರುತಂ ಮೂರ್ಖಂ ಕುಪಿತಂ ಹೃದಯಪ್ರಿಯಮ್|
13125023c ಅನುನೇತುಂ ನ ಶಕ್ನೋಷಿ ತೇನಾಸಿ ಹರಿಣಃ ಕೃಶಃ||
ದೃಢನಿಶ್ಚಯವುಳ್ಳ, ಮೂರ್ಖನಾದ, ಕೋಪಗೊಂಡಿರುವ ಅತ್ಯಂತಪ್ರಿಯನಾದವನನ್ನು ನೀನು ಸಮಾಧಾನಗೊಳಿಸಲು ಅಸಮರ್ಥನಾಗಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125024a ನೂನಮಾಸಂಜಯಿತ್ವಾ ತೇ ಕೃತ್ಯೇ ಕಸ್ಮಿಂಶ್ಚಿದೀಪ್ಸಿತೇ|
13125024c ಕಶ್ಚಿದರ್ಥಯತೇಽತ್ಯರ್ಥಂ ತೇನಾಸಿ ಹರಿಣಃ ಕೃಶಃ||
ಯಾರೋ ಒಬ್ಬನು ನಿನ್ನನ್ನು ಒಂದು ಕೆಲಸದಲ್ಲಿ ನೇಮಿಸಿ ನಿತ್ಯವೂ ಮತ್ತೆ ಮತ್ತೆ ಒತ್ತಾಯಮಾಡುತ್ತಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125025a ನೂನಂ ತ್ವಾ ಸ್ವಗುಣಾಪೇಕ್ಷಂ ಪೂಜಯಾನಂ ಸುಹೃದ್ಧ್ರುವಮ್|
13125025c ಮಯಾರ್ಥ ಇತಿ ಜಾನಾತಿ ತೇನಾಸಿ ಹರಿಣಃ ಕೃಶಃ||
ನಿನ್ನ ಗುಣಗಳನ್ನು ನೋಡಿ ಜನರು ನಿನ್ನನ್ನು ಗೌರವಿಸುತ್ತಾರೆ. ಆದರೆ ನಿನ್ನ ಮಿತ್ರನು ತನ್ನಿಂದಾಗಿ ಜನರು ನಿನ್ನನ್ನು ಗೌರವಿಸುತ್ತಾರೆ ಎಂದು ತಿಳಿದುಕೊಂಡಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125026a ಅಂತರ್ಗತಮಭಿಪ್ರಾಯಂ ನ ನೂನಂ ಲಜ್ಜಯೇಚ್ಚಸಿ|
13125026c ವಿವಕ್ತುಂ ಪ್ರಾಪ್ತಿಶೈಥಿಲ್ಯಾತ್ತೇನಾಸಿ ಹರಿಣಃ ಕೃಶಃ||
ನಿನ್ನ ಅಂತರ್ಗತ ಅಭಿಪ್ರಾಯವನ್ನು ಹೇಳಿಕೊಳ್ಳಲು ನಾಚಿಕೊಳ್ಳುತ್ತೀಯೆ. ಏಕೆಂದರೆ ಬೇಕಾದುದನ್ನು ಪಡೆದುಕೊಳ್ಳುವುದರಲ್ಲಿ ನಿನಗೇ ಸಂದೇಹವುಂಟಾಗಿದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125027a ನಾನಾಬುದ್ಧಿರುಚೀಽಲ್ಲೋಕೇ ಮನುಷ್ಯಾನ್ನೂನಮಿಚ್ಚಸಿ|
13125027c ಗ್ರಹೀತುಂ ಸ್ವಗುಣೈಃ ಸರ್ವಾಂಸ್ತೇನಾಸಿ ಹರಿಣಃ ಕೃಶಃ||
ಲೋಕದಲ್ಲಿರುವ ನಾನಾಬುದ್ಧಿಯ ಮನುಷ್ಯರೆಲ್ಲರನ್ನೂ ನಿನ್ನ ಗುಣಗಳಿಂದ ವಶಪಡಿಸಿಕೊಳ್ಳಲು ಇಚ್ಛಿಸುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125028a ಅವಿದ್ವಾನ್ಭೀರುರಲ್ಪಾರ್ಥೋ ವಿದ್ಯಾವಿಕ್ರಮದಾನಜಮ್|
13125028c ಯಶಃ ಪ್ರಾರ್ಥಯಸೇ ನೂನಂ ತೇನಾಸಿ ಹರಿಣಃ ಕೃಶಃ||
ಅವಿದ್ಯಾವಂತನಾಗಿದ್ದರೂ, ಹೇಡಿಯಾಗಿದ್ದರೂ ಮತ್ತು ಅಲ್ಪಧನನಾಗಿದ್ದರೂ ನೀನು ವಿದ್ಯೆ, ವಿಕ್ರಮ ಮತ್ತು ದಾನಗಳಿಂದ ದೊರೆಯುವ ಯಶಸ್ಸನ್ನು ಬಯಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125029a ಚಿರಾಭಿಲಷಿತಂ ಕಿಂ ಚಿತ್ಫಲಮಪ್ರಾಪ್ತಮೇವ ತೇ|
13125029c ಕೃತಮನ್ಯೈರಪಹೃತಂ ತೇನಾಸಿ ಹರಿಣಃ ಕೃಶಃ||
ಬಹಳ ಕಾಲದಿಂದ ನೀನು ಬಯಸಿದ್ದ ಯಾವುದೋ ಒಂದು ಫಲವನ್ನು ನೀನು ಪಡೆದುಕೊಳ್ಳಲಿಲ್ಲ. ಆದರೆ ಅದನ್ನೇ ಇನ್ನೊಬ್ಬರು ಅಪಹರಿಸಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125030a ನೂನಮಾತ್ಮಕೃತಂ ದೋಷಮಪಶ್ಯನ್ಕಿಂ ಚಿದಾತ್ಮನಿ|
13125030c ಅಕಾರಣೇಽಭಿಶಸ್ತೋಽಸಿ ತೇನಾಸಿ ಹರಿಣಃ ಕೃಶಃ||
ನಿಶ್ಚಯವಾಗಿಯೂ ನೀನು ಯಾವುದೇ ಅಪರಾಧವನ್ನು ಮಾಡದಿದ್ದರೂ ಮತ್ತು ಯಾವುದೂ ನಿನ್ನ ತಿಳುವಳಿಕೆಗೆ ಬಂದಿರದಿದ್ದರೂ ಇತರರು ನಿಷ್ಕಾರಣವಾಗಿ ನೀನೇ ಅಪರಾಧಿಯೆಂದು ಹೇಳುತ್ತಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125031a ಸುಹೃದಾಮಪ್ರಮತ್ತಾನಾಮಪ್ರಮೋಕ್ಷ್ಯಾರ್ಥಹಾನಿಜಮ್[1]|
13125031c ದುಃಖಮರ್ಥಗುಣೈರ್ಹೀನಂ ತೇನಾಸಿ ಹರಿಣಃ ಕೃಶಃ||
ಅಪ್ರಮತ್ತರೂ ಅಪ್ರಮೋಕ್ಷರೂ ಆದ ಸುಹೃದರ ಆರ್ಥಿಕ ಕಷ್ಟವನ್ನಾಗಲೀ ಗುಣಹೀನರಾಗಿರುವುದರ ದುಃಖವನ್ನಾಗಲೀ ಪರಿಹರಿಸಲು ನೀನು ಸಮರ್ಥನಾಗಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125032a ಸಾಧೂನ್ಗೃಹಸ್ಥಾನ್ದೃಷ್ಟ್ವಾ ಚ ತಥಾಸಾಧೂನ್ವನೇಚರಾನ್|
13125032c ಮುಕ್ತಾಂಶ್ಚಾವಸಥೇ ಸಕ್ತಾಂಸ್ತೇನಾಸಿ ಹರಿಣಃ ಕೃಶಃ||
ಸಾಧುಗಳು ಗೃಹಸ್ಥರಾಗಿರುವುದನ್ನು, ಅಸಾಧುಗಳು ವನಚರರಾದುದನ್ನೂ, ಸಂನ್ಯಾಸಿಗಳು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವುದನ್ನೂ ನೋಡಿ ಅದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125033a ಧರ್ಮ್ಯಮರ್ಥಂ ಚ ಕಾಲೇ ಚ ದೇಶೇ ಚಾಭಿಹಿತಂ ವಚಃ|
13125033c ನ ಪ್ರತಿಷ್ಠತಿ ತೇ ನೂನಂ ತೇನಾಸಿ ಹರಿಣಃ ಕೃಶಃ||
ನಿನ್ನ ಮಾತುಗಳು ಧರ್ಮಾರ್ಥಗಳಿಂದ ಯುಕ್ತವಾಗಿಯೂ ದೇಶ-ಕಾಲಗಳಿಗೆ ಹಿತವಾಗಿಯೂ ಇವೆ. ಆದರೂ ಜನರು ಅವನ್ನು ಗೌರವಿಸುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125034a ದತ್ತಾನಕುಶಲೈರರ್ಥಾನ್ಮನೀಷೀ ಸಂಜಿಜೀವಿಷುಃ|
13125034c ಪ್ರಾಪ್ಯ ವರ್ತಯಸೇ ನೂನಂ ತೇನಾಸಿ ಹರಿಣಃ ಕೃಶಃ||
ನೀನು ವಿದ್ವಾಂಸನಾಗಿದ್ದರೂ ಅಜ್ಞಾನಿಗಳು ಕೊಡುವ ಧನ-ಧಾನ್ಯಗಳಿಂದ ಜೀವನವನ್ನು ನಿರ್ವಹಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125035a ಪಾಪಾನ್ವಿವರ್ಧತೋ ದೃಷ್ಟ್ವಾ ಕಲ್ಯಾಣಾಂಶ್ಚಾವಸೀದತಃ|
13125035c ಧ್ರುವಂ ಮೃಗಯಸೇ ಯೋಗ್ಯಂ[2] ತೇನಾಸಿ ಹರಿಣಃ ಕೃಶಃ||
ಪಾಪಿಗಳು ವರ್ಧಿಸುತ್ತಿರುವುದನ್ನೂ ಕಲ್ಯಾಣಪುರುಷರು ಅಧೋಗತಿಗಿಳಿಯುತ್ತಿರುವುದನ್ನೂ ನೋಡಿ ನಿಶ್ಚಯವಾಗಿಯೂ ನೀನು ಯೋಗವನ್ನು ನಿಂದಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125036a ಪರಸ್ಪರವಿರುದ್ಧಾನಾಂ ಪ್ರಿಯಂ ನೂನಂ ಚಿಕೀರ್ಷಸಿ|
13125036c ಸುಹೃದಾಮವಿರೋಧೇನ ತೇನಾಸಿ ಹರಿಣಃ ಕೃಶಃ||
ಪರಸ್ಪರರನ್ನು ವಿರೋಧಿಸುತ್ತಿರುವ ನಿನ್ನ ಮಿತ್ರರಿಗೆ ಪ್ರಿಯವಾದುದನ್ನು ಮಾಡಲು ಬಯಸುತ್ತಿರುವೆ. ಆದರೆ ಅವರು ಅದಕ್ಕೆ ಅವಕಾಶವನ್ನು ಕೊಡುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.
13125037a ಶ್ರೋತ್ರಿಯಾಂಶ್ಚ ವಿಕರ್ಮಸ್ಥಾನ್ಪ್ರಾಜ್ಞಾಂಶ್ಚಾಪ್ಯಜಿತೇಂದ್ರಿಯಾನ್|
13125037c ಮನ್ಯೇಽನುಧ್ಯಾಯಸಿ ಜನಾಂಸ್ತೇನಾಸಿ ಹರಿಣಃ ಕೃಶಃ||
ಶ್ರೋತ್ರಿಯರೂ ಕೆಟ್ಟಕೆಲಸಗಳಲ್ಲಿ ತೊಡಗಿರುವುದನ್ನು, ಪ್ರಾಜ್ಞರೂ ಜಿತೇಂದ್ರಿಯರಾಗಿಲ್ಲದೇ ಇರುವುದನ್ನು ನೋಡಿ ಅಂಥವರ ಕುರಿತು ಯೋಚನಾಮಗ್ನನಾಗಿದ್ದೀಯೆ ಎಂದು ನನಗನ್ನಿಸುತ್ತದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.”
13125038a ಏವಂ ಸಂಪೂಜಿತಂ ರಕ್ಷೋ ವಿಪ್ರಂ ತಂ ಪ್ರತ್ಯಪೂಜಯತ್|
13125038c ಸಖಾಯಮಕರೋಚ್ಚೈನಂ ಸಂಯೋಜ್ಯಾರ್ಥೈರ್ಮುಮೋಚ ಹ||
ಹೀಗೆ ಸಂಪೂಜಿತನಾದ ರಾಕ್ಷಸನು ವಿಪ್ರನನ್ನು ಪ್ರತಿಪೂಜಿಸಿದನು. ಅವನನ್ನು ಸಖನನ್ನಾಗಿಯೂ ಮಾಡಿಕೊಂಡನು. ಮತ್ತು ಅವನಿಗೆ ಹಣವನ್ನಿತ್ತು ಬಿಡುಗಡೆಮಾಡಿದನು.”
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಹರಿಣಕೃಶಕಾಖ್ಯಾನೇ ಪಂಚವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಹರಿಣಕೃಶಕಾಖ್ಯಾನ ಎನ್ನುವ ನೂರಾಇಪ್ಪತ್ತೈದನೇ ಅಧ್ಯಾಯವು.
[1] ಸುಹೃದಾಂ ದುಃಖಮಾರ್ತಾನಾಂ ನ ಪ್ರಮೋಕ್ಷ್ಯಸಿ ಚಾರ್ತಿಜಮ್| (ಭಾರತ ದರ್ಶನ/ಗೀತಾ ಪ್ರೆಸ್).
[2] ಧ್ರುವಂ ಗರ್ಹಯತೇ ನಿತ್ಯಂ (ಭಾರತ ದರ್ಶನ/ಗೀತಾ ಪ್ರೆಸ್).