Anushasana Parva: Chapter 120

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೦

ಕೀಟವು ಮೊದಲು ಕ್ಷತ್ರಿಯನಾಗಿ ನಂತರ ಬ್ರಾಹ್ಮಣನಾಗಿ ಬ್ರಹ್ಮಲೋಕವನ್ನು ಪಡೆದುದು (1-14).

13120001 ಭೀಷ್ಮ ಉವಾಚ|

13120001a ಕ್ಷತ್ರಧರ್ಮಮನುಪ್ರಾಪ್ತಃ ಸ್ಮರನ್ನೇವ ಸ ವೀರ್ಯವಾನ್|

13120001c ತ್ಯಕ್ತ್ವಾ ಸ ಕೀಟತಾಂ ರಾಜಂಶ್ಚಚಾರ ವಿಪುಲಂ ತಪಃ||

ಭೀಷ್ಮನು ಹೇಳಿದನು: “ರಾಜನ್! ಹೀಗೆ ಕೀಟತ್ವವನ್ನು ತ್ಯಜಿಸಿ ಆ ವೀರ್ಯವಾನನು ಕ್ಷತ್ರಧರ್ಮವನ್ನು ಪಡೆದುಕೊಂಡು ತನ್ನ ಹಿಂದಿನ ಜನ್ಮಗಳನ್ನು ಸ್ಮರಿಸುತ್ತಾ ವಿಪುಲ ತಪಸ್ಸನ್ನಾಚರಿಸಿದನು.

13120002a ತಸ್ಯ ಧರ್ಮಾರ್ಥವಿದುಷೋ ದೃಷ್ಟ್ವಾ ತದ್ವಿಪುಲಂ ತಪಃ|

13120002c ಆಜಗಾಮ ದ್ವಿಜಶ್ರೇಷ್ಠಃ ಕೃಷ್ಣದ್ವೈಪಾಯನಸ್ತದಾ||

ಅವನ ಆ ವಿಪುಲ ತಪಸ್ಸನ್ನು ನೋಡಿ ಧರ್ಮಾರ್ಥವಿದುಷ ದ್ವಿಜಶ್ರೇಷ್ಠ ಕೃಷ್ಣದ್ವೈಪಾಯನನು ಅಲ್ಲಿಗೆ ಆಗಮಿಸಿದನು.

13120003 ವ್ಯಾಸ ಉವಾಚ|

13120003a ಕ್ಷಾತ್ರಂ ಚೈವ ವ್ರತಂ ಕೀಟ ಭೂತಾನಾಂ ಪರಿಪಾಲನಮ್|

13120003c ಕ್ಷಾತ್ರಂ ಚೈವ ವ್ರತಂ ಧ್ಯಾಯಂಸ್ತತೋ ವಿಪ್ರತ್ವಮೇಷ್ಯಸಿ||

ವ್ಯಾಸನು ಹೇಳಿದನು: “ಹಿಂದೆ ಕೀಟವಾಗಿದ್ದವನೇ! ಜೀವಿಗಳ ಪರಿಪಾಲನೆಯೇ ಕ್ಷತ್ರಿಯರ ವ್ರತ. ಇದನ್ನು ಧ್ಯಾನದಲ್ಲಿಟ್ಟುಕೊಂಡು ಕ್ಷಾತ್ರವ್ರತವನ್ನೇ ಪರಿಪಾಲಿಸು. ಅನಂತರ ನೀನು ವಿಪ್ರತ್ವವನ್ನು ಪಡೆದುಕೊಳ್ಳುತ್ತೀಯೆ.

13120004a ಪಾಹಿ ಸರ್ವಾಃ ಪ್ರಜಾಃ ಸಮ್ಯಕ್ ಶುಭಾಶುಭವಿದಾತ್ಮವಾನ್|

13120004c ಶುಭೈಃ ಸಂವಿಭಜನ್ಕಾಮೈರಶುಭಾನಾಂ ಚ ಪಾವನೈಃ||

ನಿನ್ನ ಶುಭಾಶುಭಕರ್ಮಗಳು ಯಾವುದೆಂದು ತಿಳಿದುಕೊಂಡು ಸರ್ವ ಪ್ರಜೆಗಳನ್ನೂ ಚೆನ್ನಾಗಿ ಪರಿಪಾಲಿಸು. ಶುಭಕಾಮನೆಗಳಿಂದ ನಿನ್ನ ಐಶ್ವರ್ಯವನ್ನು ದಾನಮಾಡು. ಅಶುಭಕರ್ಮಗಳನ್ನು ಪರಿತ್ಯಜಿಸು. ಪಾವನನಾಗು.

13120005a ಆತ್ಮವಾನ್ಭವ ಸುಪ್ರೀತಃ ಸ್ವಧರ್ಮಚರಣೇ ರತಃ|

13120005c ಕ್ಷಾತ್ರೀಂ ತನುಂ ಸಮುತ್ಸೃಜ್ಯ ತತೋ ವಿಪ್ರತ್ವಮೇಷ್ಯಸಿ||

ಸ್ವಧರ್ಮಾಚರಣೆಯಲ್ಲಿ ನಿರತನಾಗಿ ಸುಪ್ರೀತನಾಗು. ಆತ್ಮವಂತನಾಗು. ಕ್ಷತ್ರಿಯ ತನುವನ್ನು ಪರಿತ್ಯಜಿಸಿದ ನಂತರ ವಿಪ್ರತ್ವವನ್ನು ಪಡೆಯುತ್ತೀಯೆ.””

13120006 ಭೀಷ್ಮ ಉವಾಚ|

13120006a ಸೋಽಥಾರಣ್ಯಮಭಿಪ್ರೇತ್ಯ ಪುನರೇವ ಯುಧಿಷ್ಠಿರ|

13120006c ಮಹರ್ಷೇರ್ವಚನಂ ಶ್ರುತ್ವಾ ಪ್ರಜಾ ಧರ್ಮೇಣ ಪಾಲ್ಯ ಚ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮಹರ್ಷಿಯ ಮಾತನ್ನು ಕೇಳಿ ಅವನು ಪುನಃ ಅರಣ್ಯದಿಂದ ಹಿಂದಿರುಗಿ ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು.

13120007a ಅಚಿರೇಣೈವ ಕಾಲೇನ ಕೀಟಃ ಪಾರ್ಥಿವಸತ್ತಮ|

13120007c ಪ್ರಜಾಪಾಲನಧರ್ಮೇಣ ಪ್ರೇತ್ಯ ವಿಪ್ರತ್ವಮಾಗತಃ||

ಪಾರ್ಥಿವಸತ್ತಮ! ಸ್ವಲ್ಪವೇ ಸಮಯದಲ್ಲಿ ಅವನು ಮರಣಹೊಂದಿ ಪ್ರಜಾಪಾಲನಧರ್ಮದಿಂದ ವಿಪ್ರತ್ವವನ್ನು ಪಡೆದನು.

13120008a ತತಸ್ತಂ ಬ್ರಾಹ್ಮಣಂ ದೃಷ್ಟ್ವಾ ಪುನರೇವ ಮಹಾಯಶಾಃ|

13120008c ಆಜಗಾಮ ಮಹಾಪ್ರಾಜ್ಞಃ ಕೃಷ್ಣದ್ವೈಪಾಯನಸ್ತದಾ||

ಆ ಬ್ರಾಹ್ಮಣನನ್ನು ನೋಡಿ ಪುನಃ ಮಹಾಯಶಸ್ವೀ ಮಹಾಪ್ರಾಜ್ಞ ಕೃಷ್ಣದ್ವೈಪಾಯನನು ಅಲ್ಲಿಗೆ ಆಗಮಿಸಿದನು.

13120009 ವ್ಯಾಸ ಉವಾಚ|

13120009a ಭೋ ಭೋ ವಿಪ್ರರ್ಷಭ ಶ್ರೀಮನ್ಮಾ ವ್ಯಥಿಷ್ಠಾಃ ಕಥಂ ಚನ|

13120009c ಶುಭಕೃಚ್ಚುಭಯೋನೀಷು ಪಾಪಕೃತ್ ಪಾಪಯೋನಿಷು|

13120009E ಉಪಪದ್ಯತಿ ಧರ್ಮಜ್ಞ ಯಥಾಧರ್ಮಂ ಯಥಾಗಮಮ್||

ವ್ಯಾಸನು ಹೇಳಿದನು: “ಭೋ ಭೋ ಶ್ರೀಮಾನ್ ವಿಪ್ರರ್ಷಭ! ಯಾವ ಕಾರಣಕ್ಕೂ ನೀನು ಇನ್ನು ವ್ಯಥೆಪಡಬೇಡ. ಶುಭಕರ್ಮಗಳನ್ನು ಮಾಡಿದವನು ಶುಭಯೋನಿಗಳಲ್ಲಿಯೂ ಪಾಪಕರ್ಮಿಯು ಪಾಪಯೋನಿಗಳಲ್ಲಿಯೂ ಹುಟ್ಟುತ್ತಾನೆ. ಧರ್ಮಜ್ಞ! ಯಾರು ಯಾವ ಧರ್ಮವನ್ನು ಪಾಲಿಸುತ್ತಾನೋ ಅದಕ್ಕೆ ತಕ್ಕಂತಹ ಯೋನಿಯನ್ನು ಅವನು ಪಡೆದುಕೊಳ್ಳುತ್ತಾನೆ.

13120010a ತಸ್ಮಾನ್ಮೃತ್ಯುಭಯಾತ್ಕೀಟ ಮಾ ವ್ಯಥಿಷ್ಠಾಃ ಕಥಂ ಚನ|

13120010c ಧರ್ಮಲೋಪಾದ್ಭಯಂ ತೇ ಸ್ಯಾತ್ತಸ್ಮಾದ್ಧರ್ಮಂ ಚರೋತ್ತಮಮ್||

ಹಿಂದೆ ಕೀಟವಾಗಿದ್ದವನೇ! ನಿನಗೆ ಮೃತ್ಯುಭಯವಿಲ್ಲದಿರಲಿ. ಯಾವುದೇ ವ್ಯಥೆಯೂ ಆಗದಿರಲಿ. ಧರ್ಮವು ಲೋಪವಾದೀತೆಂಬ ಭಯವು ಯಾವಾಗಲೂ ನಿನ್ನಲ್ಲಿರಲಿ. ಅದರಿಂದ ಉತ್ತಮ ಧರ್ಮವನ್ನು ಆಚರಿಸು.”

13120011 ಕೀಟ ಉವಾಚ|

13120011a ಸುಖಾತ್ಸುಖತರಂ ಪ್ರಾಪ್ತೋ ಭಗವಂಸ್ತ್ವತ್ಕೃತೇ ಹ್ಯಹಮ್|

13120011c ಧರ್ಮಮೂಲಾಂ ಶ್ರಿಯಂ ಪ್ರಾಪ್ಯ ಪಾಪ್ಮಾ ನಷ್ಟ ಇಹಾದ್ಯ ಮೇ||

ಕೀಟವು ಹೇಳಿತು: “ಭಗವನ್! ನಿನ್ನ ಅನುಗ್ರಹದಿಂದ ನಾನು ಒಂದು ಸುಖಸ್ಥಾನದಿಂದ ಇನ್ನೂ ಹೆಚ್ಚಿನ ಸುಖಸ್ಥಾನವನ್ನು ಪಡೆದುಕೊಂಡೆ. ಧರ್ಮಮೂಲವಾದ ಸಂಪತ್ತನ್ನು ಪಡೆದು ಇಂದು ನಾನು ಪಾಪಗಳನ್ನು ನಷ್ಟಗೊಳಿಸುತ್ತೇನೆ.””

13120012 ಭೀಷ್ಮ ಉವಾಚ|

13120012a ಭಗವದ್ವಚನಾತ್ಕೀಟೋ ಬ್ರಾಹ್ಮಣ್ಯಂ ಪ್ರಾಪ್ಯ ದುರ್ಲಭಮ್|

13120012c ಅಕರೋತ್ಪೃಥಿವೀಂ ರಾಜನ್ಯಜ್ಞಯೂಪಶತಾಂಕಿತಾಮ್|

13120012E ತತಃ ಸಾಲೋಕ್ಯಮಗಮದ್ಬ್ರಹ್ಮಣೋ ಬ್ರಹ್ಮವಿತ್ತಮಃ||

ಭೀಷ್ಮನು ಹೇಳಿದನು: “ರಾಜನ್! ಭಗವಾನ್ ವ್ಯಾಸನ ಮಾತಿನಂತೆ ಆ ಕೀಟವು ದುರ್ಲಭ ಬ್ರಾಹ್ಮಣತ್ವವನ್ನು ಪಡೆದು ಪೃಥಿಯನ್ನು ನೂರು ಯಜ್ಞಯೂಪಗಳಿಂದ ಅಂಕಿತವನ್ನಾಗಿ ಮಾಡಿತು. ಅನಂತರ ಆ ಬ್ರಹ್ಮವಿತ್ತಮನು ಬ್ರಹ್ಮನ ಸಾಲೋಕ್ಯವನ್ನು ಪಡೆದುಕೊಂಡನು.

13120013a ಅವಾಪ ಚ ಪರಂ ಕೀಟಃ ಪಾರ್ಥ ಬ್ರಹ್ಮ ಸನಾತನಮ್|

13120013c ಸ್ವಕರ್ಮಫಲನಿರ್ವೃತ್ತಂ ವ್ಯಾಸಸ್ಯ ವಚನಾತ್ತದಾ||

ವ್ಯಾಸನ ವಚನದಂತೆ ಆ ಕೀಟವು ಯಾವ ಯೋನಿಯಲ್ಲಿ ಅಥವಾ ವರ್ಣದಲ್ಲಿ ಹುಟ್ಟಿದರೂ ಆಯಾ ಯೋನಿ-ವರ್ಣಗಳ ಧರ್ಮವನ್ನು ಪಾಲಿಸುತ್ತಿತ್ತು. ಪಾರ್ಥ! ಅದರಿಂದಾಗಿ ಆ ಜೀವವು ಸನಾತನ ಬ್ರಹ್ಮಪದವಿಯನ್ನು ಪಡೆದುಕೊಂಡಿತು.

13120014a ತೇಽಪಿ ಯಸ್ಮಾತ್ಸ್ವಭಾವೇನ ಹತಾಃ ಕ್ಷತ್ರಿಯಪುಂಗವಾಃ|

13120014c ಸಂಪ್ರಾಪ್ತಾಸ್ತೇ ಗತಿಂ ಪುಣ್ಯಾಂ ತಸ್ಮಾನ್ಮಾ ಶೋಚ ಪುತ್ರಕ||

ಪುತ್ರಕ! ನಿನ್ನೊಡನೆ ಯುದ್ಧಮಾಡಿದ ಕ್ಷತ್ರಿಯಪುಂಗವರೂ ಕೂಡ ತಮ್ಮ ಸ್ವಭಾವದಲ್ಲಿದ್ದುಕೊಂಡು ಹತರಾಗಿ ಪುಣ್ಯ ಗತಿಯನ್ನು ಪಡೆದುಕೊಂಡರು. ಆದಕ್ಕಾಗಿ ಶೋಕಿಸಬೇಡ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಇಪ್ಪತ್ತನೇ ಅಧ್ಯಾಯವು.

Comments are closed.