ಅನುಶಾಸನ ಪರ್ವ: ದಾನಧರ್ಮ ಪರ್ವ
೧೨
ಭಂಗಾಶ್ವನೋಪಾಖ್ಯಾನ
ಸ್ತ್ರೀ-ಪುರುಷರ ಸಂಭೋಗದಲ್ಲಿ ಯಾರ ಸುಖವು ಅಧಿಕವಾಗಿರುತ್ತದೆ? ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಭಂಗಾಶ್ವನ ಕಥೆಯನ್ನು ಹೇಳಿ, ಇದರಲ್ಲಿ ಸ್ತ್ರೀಯ ಸುಖವೇ ಹೆಚ್ಚಿನದೆಂದು ತಿಳಿಸುವುದು (೧-೪೯).
13012001 ಯುಧಿಷ್ಠಿರ ಉವಾಚ|
13012001a ಸ್ತ್ರೀಪುಂಸಯೋಃ ಸಂಪ್ರಯೋಗೇ ಸ್ಪರ್ಶಃ ಕಸ್ಯಾಧಿಕೋ ಭವೇತ್|
13012001c ಏತನ್ಮೇ ಸಂಶಯಂ ರಾಜನ್ಯಥಾವದ್ವಕ್ತುಮರ್ಹಸಿ||
ಯಧಿಷ್ಠಿರನು ಹೇಳಿದನು: “ರಾಜನ್! ಸ್ತ್ರೀ-ಪುರುಷರ ಸಂಭೋಗದಲ್ಲಿ ಯಾರ ಸುಖವು ಅಧಿಕವಾಗಿರುತ್ತದೆ? ನನ್ನ ಈ ಸಂಶಯದ ಕುರಿತು ಯಥಾವತ್ತಾಗಿ ಹೇಳಬೇಕು.”
13012002 ಭೀಷ್ಮ ಉವಾಚ|
13012002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
13012002c ಭಂಗಾಶ್ವನೇನ ಶಕ್ರಸ್ಯ ಯಥಾ ವೈರಮಭೂತ್ಪುರಾ||
ಭೀಷ್ಮನು ಹೇಳಿದನು: “ಹಿಂದೆ ಭಂಗಾಶ್ವನೊಂದಿಗೆ ಶಕ್ರನ ವೈರವು ಹೇಗುಂಟಾಯಿತೆನ್ನುವ ಪುರಾತನ ಇತಿಹಾಸವನ್ನು ಈ ವಿಷಯದಲ್ಲಿ ಉದಾಹರಿಸುತ್ತಾರೆ.
13012003a ಪುರಾ ಭಂಗಾಶ್ವನೋ ನಾಮ ರಾಜರ್ಷಿರತಿಧಾರ್ಮಿಕಃ|
13012003c ಅಪುತ್ರಃ ಸ ನರವ್ಯಾಘ್ರ ಪುತ್ರಾರ್ಥಂ ಯಜ್ಞಮಾಹರತ್||
ಹಿಂದೆ ಭಂಗಾಶ್ವನೆಂಬ ಹೆಸರಿನ ಅತಿ ಧಾರ್ಮಿಕ ರಾಜನಿದ್ದನು. ನರವ್ಯಾಘ್ರ! ಅಪುತ್ರನಾಗಿದ್ದ ಅವನು ಪುತ್ರನಿಗಾಗಿ ಯಜ್ಞವನ್ನು ಕೈಗೊಂಡನು.
13012004a ಅಗ್ನಿಷ್ಟುಂ ನಾಮ ರಾಜರ್ಷಿರಿಂದ್ರದ್ವಿಷ್ಟಂ ಮಹಾಬಲಃ|
13012004c ಪ್ರಾಯಶ್ಚಿತ್ತೇಷು ಮರ್ತ್ಯಾನಾಂ ಪುತ್ರಕಾಮಸ್ಯ ಚೇಷ್ಯತೇ||
ಆ ಮಹಾಬಲ ರಾಜರ್ಷಿಯು ಮನುಷ್ಯರ ಪ್ರಾಯಶ್ಚಿತ್ತಕ್ಕೂ ಪುತ್ರನನ್ನು ಬಯಸುವವರಿಗೂ ಹೇಳಿರುವ, ಆದರೆ ಇಂದ್ರನಿಗೆ ವಿರುದ್ಧವಾದ, ಅಗ್ನಿಷ್ಟು ಎಂಬ ಹೆಸರಿನ ಯಾಗವನ್ನು ಮಾಡಿದನು.
13012005a ಇಂದ್ರೋ ಜ್ಞಾತ್ವಾ ತು ತಂ ಯಜ್ಞಂ ಮಹಾಭಾಗಃ ಸುರೇಶ್ವರಃ|
13012005c ಅಂತರಂ ತಸ್ಯ ರಾಜರ್ಷೇರನ್ವಿಚ್ಚನ್ನಿಯತಾತ್ಮನಃ||
ಆ ಯಜ್ಞದ ಕುರಿತು ತಿಳಿದ ಮಹಾಭಾಗ ಸುರೇಶ್ವರ ಇಂದ್ರನು ಆ ನಿಯತಾತ್ಮ ರಾಜರ್ಷಿಯಲ್ಲಿ ನ್ಯೂನತೆಗಳನ್ನು ಹುಡುಕತೊಡಗಿದನು.
13012006a ಕಸ್ಯ ಚಿತ್ತ್ವಥ ಕಾಲಸ್ಯ ಮೃಗಯಾಮಟತೋ ನೃಪ|
13012006c ಇದಮಂತರಮಿತ್ಯೇವ ಶಕ್ರೋ ನೃಪಮಮೋಹಯತ್||
ಕೆಲವು ಸಮಯದ ನಂತರ ನೃಪನು ಬೇಟೆಗಾಗಿ ತಿರುಗಾಡುತ್ತಿದ್ದಾಗ ಇದೇ ಸಮಯವೆಂದು ತಿಳಿದ ಶಕ್ರನು ನೃಪನನ್ನು ವಿಮೋಹಗೊಳಿಸಿದನು.
13012007a ಏಕಾಶ್ವೇನ ಚ ರಾಜರ್ಷಿರ್ಭ್ರಾಂತ ಇಂದ್ರೇಣ ಮೋಹಿತಃ|
13012007c ನ ದಿಶೋಽವಿಂದತ ನೃಪಃ ಕ್ಷುತ್ಪಿಪಾಸಾರ್ದಿತಸ್ತದಾ||
ಇಂದ್ರನಿಂದ ಮೋಹಿತನಾಗಿ ಭ್ರಾಂತಿಗೊಳಗಾದ ರಾಜರ್ಷಿಯು ಒಬ್ಬನೇ ಕುದುರೆಯ ಮೇಲೆ ಕುಳಿತು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಾನೆಂದು ತಿಳಿಯದೇ ಅಲೆದಾಡತೊಡಗಿದನು. ಆಗ ಅವನು ಹಸಿವು-ಬಾಯಾರಿಕೆಗಳಿಂದ ಬಳಲಿದನು.
13012008a ಇತಶ್ಚೇತಶ್ಚ ವೈ ಧಾವನ್ಶ್ರಮತೃಷ್ಣಾರ್ದಿತೋ ನೃಪಃ|
13012008c ಸರೋಽಪಶ್ಯತ್ಸುರುಚಿರಂ ಪೂರ್ಣಂ ಪರಮವಾರಿಣಾ|
ಇಲ್ಲಿಂದಲ್ಲಿಗೆ ಓಡಾಡುತ್ತಾ ಶ್ರಮ-ಬಾಯರಿಕೆಗಳಿಂದ ಬಳಲಿದ ನೃಪನು ಶುದ್ಧ ನೀರಿನಿಂದ ತುಂಬಿದ್ದ ಸುಂದರ ಸರೋವರವೊಂದನ್ನು ಕಂಡನು.
13012008e ಸೋಽವಗಾಹ್ಯ ಸರಸ್ತಾತ ಪಾಯಯಾಮಾಸ ವಾಜಿನಮ್||
13012009a ಅಥ ಪೀತೋದಕಂ ಸೋಽಶ್ವಂ ವೃಕ್ಷೇ ಬದ್ಧ್ವಾ ನೃಪೋತ್ತಮಃ|
13012009c ಅವಗಾಹ್ಯ ತತಃ ಸ್ನಾತೋ ರಾಜಾ ಸ್ತ್ರೀತ್ವಮವಾಪ ಹ||
ಮಗೂ! ಆ ನೃಪೋತ್ತಮನು ಕುದುರೆಯ ಮೈತೊಳೆದು ನೀರು ಕುಡಿಸಿ ಕುದುರೆಯನ್ನು ಒಂದು ಮರಕ್ಕೆ ಕಟ್ಟಿ, ತಾನೂ ಆ ಕೊಳದಲ್ಲಿ ಮುಳುಗಿ ಸ್ನಾನಮಾಡಿದನು. ಕೂಡಲೇ ಆ ರಾಜನು ಸ್ತ್ರೀಯಾದನು.
13012010a ಆತ್ಮಾನಂ ಸ್ತ್ರೀಕೃತಂ ದೃಷ್ಟ್ವಾ ವ್ರೀಡಿತೋ ನೃಪಸತ್ತಮಃ|
13012010c ಚಿಂತಾನುಗತಸರ್ವಾತ್ಮಾ ವ್ಯಾಕುಲೇಂದ್ರಿಯಚೇತನಃ||
ತಾನು ಸ್ತ್ರೀಯಾದುದನ್ನು ನೋಡಿ ನಾಚಿಕೊಂಡ ಆ ಸರ್ವಾತ್ಮಾ ನೃಪಸತ್ತಮನು ಚಿಂತಾನುಗತನಾದನು. ಅವನ ಇಂದ್ರಿಯ-ಚೇತನಗಳು ವ್ಯಾಕುಲಗೊಂಡವು.
13012011a ಆರೋಹಿಷ್ಯೇ ಕಥಂ ತ್ವಶ್ವಂ ಕಥಂ ಯಾಸ್ಯಾಮಿ ವೈ ಪುರಮ್|
13012011c ಅಗ್ನಿಷ್ಟುಂ ನಾಮ ಇಷ್ಟಂ ಮೇ ಪುತ್ರಾಣಾಂ ಶತಮೌರಸಮ್||
“ಕುದುರೆಯನ್ನು ಹೇಗೆ ಏರಬಲ್ಲೆ? ಪುರಕ್ಕೆ ಹೇಗೆ ಹೋಗಬಲ್ಲೆ? ಅಗ್ನಿಷ್ಟುವೆಂಬ ಯಾಗದಿಂದ ನನಗೆ ನೂರು ಔರಸ ಪುತ್ರರಾಗಿದ್ದಾರೆ.
13012012a ಜಾತಂ ಮಹಾಬಲಾನಾಂ ವೈ ತಾನ್ಪ್ರವಕ್ಷ್ಯಾಮಿ ಕಿಂ ತ್ವಹಮ್|
13012012c ದಾರೇಷು ಚಾಸ್ಮದೀಯೇಷು ಪೌರಜಾನಪದೇಷು ಚ||
ಹೋಗಿ ಆ ಮಹಾಬಲರಿಗೆ ನಾನು ಏನೆಂದು ಹೇಳಲಿ? ಪತ್ನಿ, ನನ್ನವರು ಮತ್ತು ಪೌರ-ಜಾನಪದದವರಿಗೆ ಏನು ಹೇಳಲಿ?
13012013a ಮೃದುತ್ವಂ ಚ ತನುತ್ವಂ ಚ ವಿಕ್ಲವತ್ವಂ ತಥೈವ ಚ|
13012013c ಸ್ತ್ರೀಗುಣಾ ಋಷಿಭಿಃ ಪ್ರೋಕ್ತಾ ಧರ್ಮತತ್ತ್ವಾರ್ಥದರ್ಶಿಭಿಃ|
13012013e ವ್ಯಾಯಾಮಃ ಕರ್ಕಶತ್ವಂ ಚ ವೀರ್ಯಂ ಚ ಪುರುಷೇ ಗುಣಾಃ||
ಧರ್ಮತತ್ವಾರ್ಥದರ್ಶಿ ಋಷಿಗಳು ಮೃದುತ್ವ, ಕೃಶತ್ವ ಮತ್ತು ಚಂಚಲತೆಗಳು ಸ್ತ್ರೀಯರ ಗುಣಗಳೆಂದೂ ವ್ಯಾಯಾಮ, ಕರ್ಕಶತ್ವ ಮತ್ತು ವೀರ್ಯಗಳು ಪುರುಷನ ಗುಣಗಳೆಂದೂ ಹೇಳಿದ್ದಾರೆ.
13012014a ಪೌರುಷಂ ವಿಪ್ರನಷ್ಟಂ ಮೇ ಸ್ತ್ರೀತ್ವಂ ಕೇನಾಪಿ ಮೇಽಭವತ್|
13012014c ಸ್ತ್ರೀಭಾವಾತ್ಕಥಮಶ್ವಂ ತು ಪುನರಾರೋಢುಮುತ್ಸಹೇ||
ಯಾವುದೋ ಕಾರಣದಿಂದ ಪೌರುಷತ್ವವು ನಷ್ಟವಾಗಿ ನನಗೆ ಸ್ತ್ರೀತ್ವವು ಪ್ರಾಪ್ತವಾಗಿದೆ. ಸ್ತ್ರೀಯಾಗಿರುವ ನಾನು ಹೇಗೆ ಈ ಕುದುರೆಯನ್ನು ಪುನಃ ಏರಬಲ್ಲೆನು?”
13012015a ಮಹತಾ ತ್ವಥ ಖೇದೇನ ಆರುಹ್ಯಾಶ್ವಂ ನರಾಧಿಪಃ|
13012015c ಪುನರಾಯಾತ್ಪುರಂ ತಾತ ಸ್ತ್ರೀಭೂತೋ ನೃಪಸತ್ತಮ||
ಮಗೂ! ನೃಪಸತ್ತಮ! ಸ್ತ್ರೀಯಾಗಿದ್ದ ಆ ನರಾಧಿಪನು ಮಹಾಖೇದದಿಂದ ಪುನಃ ಕುದುರೆಯನ್ನೇರಿ ತನ್ನ ಪುರಕ್ಕೆ ಆಗಮಿಸಿದನು.
13012016a ಪುತ್ರಾ ದಾರಾಶ್ಚ ಭೃತ್ಯಾಶ್ಚ ಪೌರಜಾನಪದಾಶ್ಚ ತೇ|
13012016c ಕಿಂ ನ್ವಿದಂ ತ್ವಿತಿ ವಿಜ್ಞಾಯ ವಿಸ್ಮಯಂ ಪರಮಂ ಗತಾಃ||
ಅವನ ಪುತ್ರರು, ಪತ್ನಿಯರು, ಸೇವಕರು ಮತ್ತು ಪೌರ-ಜಾನಪದ ಜನರು “ಇದೇನಾಯಿತು?” ಎಂದು ತಿಳಿಯದೇ ಪರಮ ವಿಸ್ಮಿತರಾದರು.
13012017a ಅಥೋವಾಚ ಸ ರಾಜರ್ಷಿಃ ಸ್ತ್ರೀಭೂತೋ ವದತಾಂ ವರಃ|
13012017c ಮೃಗಯಾಮಸ್ಮಿ ನಿರ್ಯಾತೋ ಬಲೈಃ ಪರಿವೃತೋ ದೃಢಮ್|
13012017e ಉದ್ಭ್ರಾಂತಃ ಪ್ರಾವಿಶಂ ಘೋರಾಮಟವೀಂ ದೈವಮೋಹಿತಃ||
ಸ್ತ್ರೀಯಾಗಿದ್ದ ಆ ಮಾತನಾಡುವವರಲ್ಲಿ ಶ್ರೇಷ್ಠ ರಾಜರ್ಷಿಯು ಹೇಳಿದನು: “ದೃಢ ಸೇನೆಯಿಂದ ಸುತ್ತುವರೆಯಲ್ಪಟ್ಟ ನಾನು ಬೇಟೆಗೆಂದು ಹೊರಟೆ. ದೈವಮೋಹಿತನಾಗಿ ನಾನು ಘೋರ ಅರಣ್ಯವನ್ನು ಪ್ರವೇಶಿಸಿ ಭ್ರಾಂತನಾದೆನು.
13012018a ಅಟವ್ಯಾಂ ಚ ಸುಘೋರಾಯಾಂ ತೃಷ್ಣಾರ್ತೋ ನಷ್ಟಚೇತನಃ|
13012018c ಸರಃ ಸುರುಚಿರಪ್ರಖ್ಯಮಪಶ್ಯಂ ಪಕ್ಷಿಭಿರ್ವೃತಮ್||
ಆ ಘೋರ ಅರಣ್ಯದಲ್ಲಿ ಬಾಯಾರಿಕೆಯಿಂದ ಪೀಡಿತನಾಗಿ ಚೇತನವನ್ನೇ ಕಳೆದುಕೊಂಡಿದ್ದ ನಾನು ಪಕ್ಷಿಗಳಿಂದ ತುಂಬಿದ್ದ ಸುಂದರ ಸರೋವರವೊಂದನ್ನು ಕಂಡೆನು.
13012019a ತತ್ರಾವಗಾಢಃ ಸ್ತ್ರೀಭೂತೋ ವ್ಯಕ್ತಂ ದೈವಾನ್ನ ಸಂಶಯಃ|
13012019c ಅತೃಪ್ತ ಇವ ಪುತ್ರಾಣಾಂ ದಾರಾಣಾಂ ಚ ಧನಸ್ಯ ಚ||
ಅದರಲ್ಲಿ ಮುಳುಗಿದೊಡನೆಯೇ ನಾನು ಸ್ತ್ರೀಯಾದೆನು. ಇದು ದೈವವೆಂದೇ ವ್ಯಕ್ತವಾಗುತ್ತದೆ. ಇದರಲ್ಲಿ ಸಂಶಯವಿಲ್ಲ.” ಆಗ ಅವನ ಪುತ್ರರು, ಪತ್ನಿಯರು ಮತ್ತು ಜನರು ಅವನ ವರದಿಯಿಂದ ಅತೃಪ್ತರಾದವರಂತೆ ತೋರಿದರು.
13012020a ಉವಾಚ ಪುತ್ರಾಂಶ್ಚ ತತಃ ಸ್ತ್ರೀಭೂತಃ ಪಾರ್ಥಿವೋತ್ತಮಃ|
13012020c ಸಂಪ್ರೀತ್ಯಾ ಭುಜ್ಯತಾಂ ರಾಜ್ಯಂ ವನಂ ಯಾಸ್ಯಾಮಿ ಪುತ್ರಕಾಃ|
13012020e ಅಭಿಷಿಚ್ಯ ಸ ಪುತ್ರಾಣಾಂ ಶತಂ ರಾಜಾ ವನಂ ಗತಃ||
ಆಗ ಸ್ತ್ರೀಯಾಗಿದ್ದ ಆ ಪಾರ್ಥಿವೋತ್ತಮನು “ಪುತ್ರರೇ! ಸಂತೋಷದಿಂದ ರಾಜ್ಯವನ್ನು ಭೋಗಿಸಿ. ನಾನು ವನಕ್ಕೆ ತೆರಳುತ್ತೇನೆ!” ಎಂದು ಪುತ್ರರಿಗೆ ಹೇಳಿದನು. ತನ್ನ ನೂರು ಪುತ್ರರನ್ನು ರಾಜ್ಯದಲ್ಲಿ ಅಭಿಷೇಕಿಸಿ ರಾಜನು ವನವನ್ನು ಸೇರಿದನು.
13012021a ತಾಮಾಶ್ರಮೇ ಸ್ತ್ರಿಯಂ ತಾತ ತಾಪಸೋಽಭ್ಯವಪದ್ಯತ|
13012021c ತಾಪಸೇನಾಸ್ಯ ಪುತ್ರಾಣಾಮಾಶ್ರಮೇಽಪ್ಯಭವಚ್ಚತಮ್||
ಮಗೂ! ಆ ಸ್ತ್ರೀಯು ತಪಸ್ವಿಯೋರ್ವನ ಆಶ್ರಮಕ್ಕೆ ಹೋಗಿ ಅಲ್ಲಿಯೇ ಇರತೊಡಗಿದಳು. ಆ ತಾಪಸಿಯಿಂದ ಅವಳು ಆ ಆಶ್ರಮದಲ್ಲಿ ಕೂಡ ನೂರು ಪುತ್ರರನ್ನು ಪಡೆದಳು.
13012022a ಅಥ ಸಾ ತಾನ್ಸುತಾನ್ಗೃಹ್ಯ ಪೂರ್ವಪುತ್ರಾನಭಾಷತ|
13012022c ಪುರುಷತ್ವೇ ಸುತಾ ಯೂಯಂ ಸ್ತ್ರೀತ್ವೇ ಚೇಮೇ ಶತಂ ಸುತಾಃ||
ಅವಳು ಆ ಮಕ್ಕಳನ್ನು ಕರೆದುಕೊಂಡು ಹೋಗಿ ಮೊದಲೇ ತನಗೆ ಹುಟ್ಟಿದ್ದ ಪುತ್ರರಿಗೆ ಹೇಳಿದಳು: “ನಾನು ಪುರುಷನಾಗಿದ್ದಾಗ ನನಗೆ ಹುಟ್ಟಿದ ಮಕ್ಕಳು ನೀವು. ಈ ನೂರು ಮಕ್ಕಳು ನಾನು ಸ್ತ್ರೀಯಾಗಿರುವಾಗ ಹುಟ್ಟಿರುವವರು.
13012023a ಏಕತ್ರ ಭುಜ್ಯತಾಂ ರಾಜ್ಯಂ ಭ್ರಾತೃಭಾವೇನ ಪುತ್ರಕಾಃ|
13012023c ಸಹಿತಾ ಭ್ರಾತರಸ್ತೇಽಥ ರಾಜ್ಯಂ ಬುಭುಜಿರೇ ತದಾ||
ಮಕ್ಕಳೇ! ಒಂದಾಗಿ ಭ್ರಾತೃಭಾವದಿಂದ ರಾಜ್ಯವನ್ನು ಭೋಗಿಸಿ!” ಅನಂತರ ಆ ಸಹೋದರರೆಲ್ಲರೂ ಒಂದಾಗಿ ರಾಜ್ಯವನ್ನು ಭೋಗಿಸಿದರು.
13012024a ತಾನ್ದೃಷ್ಟ್ವಾ ಭ್ರಾತೃಭಾವೇನ ಭುಂಜಾನಾನ್ರಾಜ್ಯಮುತ್ತಮಮ್|
13012024c ಚಿಂತಯಾಮಾಸ ದೇವೇಂದ್ರೋ ಮನ್ಯುನಾಭಿಪರಿಪ್ಲುತಃ|
13012024e ಉಪಕಾರೋಽಸ್ಯ ರಾಜರ್ಷೇಃ ಕೃತೋ ನಾಪಕೃತಂ ಮಯಾ||
ಭ್ರಾತೃಭಾವದಿಂದ ಉತ್ತಮವಾದ ರಾಜ್ಯವನ್ನು ಭೋಗಿಸುತ್ತಿದ್ದ ಅವರನ್ನು ನೋಡಿ ಕೋಪದಿಂದ ಆವೇಶಗೊಂಡ ದೇವೇಂದ್ರನು “ನಾನು ಈ ರಾಜರ್ಷಿಗೆ ಉಪಕಾರವನ್ನೆಸಗಿದ್ದೇನೆಯೇ ವಿನಃ ನಾನು ಮಾಡಿದುದರಿಂದ ಇವನಿಗೆ ಅಪಕಾರವೇನೂ ಆಗಲಿಲ್ಲವಲ್ಲ!” ಎಂದು ಚಿಂತಿಸಿದನು.
13012025a ತತೋ ಬ್ರಾಹ್ಮಣರೂಪೇಣ ದೇವರಾಜಃ ಶತಕ್ರತುಃ|
13012025c ಭೇದಯಾಮಾಸ ತಾನ್ಗತ್ವಾ ನಗರಂ ವೈ ನೃಪಾತ್ಮಜಾನ್||
ಆಗ ಶತ್ರಕ್ರತು ದೇವರಾಜನು ಬ್ರಾಹ್ಮಣರೂಪದಲ್ಲಿ ಆ ನಗರಕ್ಕೆ ಹೋಗಿ ನೃಪಾತ್ಮಜರಲ್ಲಿ ಭೇದವನ್ನುಂಟುಮಾಡತೊಡಗಿದನು.
13012026a ಭ್ರಾತೄಣಾಂ ನಾಸ್ತಿ ಸೌಭ್ರಾತ್ರಂ ಯೇಽಪ್ಯೇಕಸ್ಯ ಪಿತುಃ ಸುತಾಃ|
13012026c ರಾಜ್ಯಹೇತೋರ್ವಿವದಿತಾಃ ಕಶ್ಯಪಸ್ಯ ಸುರಾಸುರಾಃ||
“ಒಂದೇ ತಂದೆಯ ಮಕ್ಕಳಾದರೂ ಭ್ರಾತೃಗಳಲ್ಲಿ ಸೌಭ್ರಾತೃತ್ವವು ಇರುವುದಿಲ್ಲ. ಕಶ್ಯಪನ ಮಕ್ಕಳಾದ ಸುರಾಸುರರು ರಾಜ್ಯದ ಕಾರಣಕ್ಕಾಗಿ ಕಲಹಮಾಡುತ್ತಲೇ ಇದ್ದಾರೆ!
13012027a ಯೂಯಂ ಭಂಗಾಶ್ವನಾಪತ್ಯಾಸ್ತಾಪಸಸ್ಯೇತರೇ ಸುತಾಃ|
13012027c ಕಶ್ಯಪಸ್ಯ ಸುರಾಶ್ಚೈವ ಅಸುರಾಶ್ಚ ಸುತಾಸ್ತಥಾ|
13012027e ಯುಷ್ಮಾಕಂ ಪೈತೃಕಂ ರಾಜ್ಯಂ ಭುಜ್ಯತೇ ತಾಪಸಾತ್ಮಜೈಃ||
ನೀವಾದರೋ ಭಂಗಾಶ್ವನನ ಮಕ್ಕಳು. ಇತರರು ತಾಪಸಿಯ ಮಕ್ಕಳು. ಸುರರೂ ಮತ್ತು ಅಸುರರೂ ಕಶ್ಯಪನದೇ ಮಕ್ಕಳು. ನಿಮ್ಮ ತಂದೆಯ ರಾಜ್ಯವನ್ನು ನೀವು ತಾಪಸಿಯ ಮಕ್ಕಳೊಂದಿಗೆ ಭೋಗಿಸುತ್ತಿದ್ದೀರಿ!”
13012028a ಇಂದ್ರೇಣ ಭೇದಿತಾಸ್ತೇ ತು ಯುದ್ಧೇಽನ್ಯೋನ್ಯಮಪಾತಯನ್|
13012028c ತಚ್ಚ್ರುತ್ವಾ ತಾಪಸೀ ಚಾಪಿ ಸಂತಪ್ತಾ ಪ್ರರುರೋದ ಹ||
ಇಂದ್ರನಿಂದ ಹೀಗೆ ಭೇದಿತರಾದ ಅವರು ಯುದ್ಧದಲ್ಲಿ ಅನ್ಯೋನ್ಯರನ್ನು ಕೆಳಗುರುಳಿಸಿದರು. ಅತನ್ನು ಕೇಳಿದ ತಾಪಸಿಯು ಸಂತಪ್ತಳಾಗಿ ರೋದಿಸಿದಳು.
13012029a ಬ್ರಾಹ್ಮಣಚ್ಚದ್ಮನಾಭ್ಯೇತ್ಯ ತಾಮಿಂದ್ರೋಽಥಾನ್ವಪೃಚ್ಚತ|
13012029c ಕೇನ ದುಃಖೇನ ಸಂತಪ್ತಾ ರೋದಿಷಿ ತ್ವಂ ವರಾನನೇ||
ಆಗ ಬ್ರಾಹ್ಮಣನ ವೇಶದಲ್ಲಿದ್ದ ಇಂದ್ರನು ಅವಳ ಬಳಿಸಾರಿ “ವರಾನನೇ! ಯಾವ ದುಃಖದಿಂದ ಸಂತಪ್ತಳಾಗಿ ನೀನು ರೋದಿಸುತ್ತಿರುವೆ?” ಎಂದು ಕೇಳಿದನು.
13012030a ಬ್ರಾಹ್ಮಣಂ ತು ತತೋ ದೃಷ್ಟ್ವಾ ಸಾ ಸ್ತ್ರೀ ಕರುಣಮಬ್ರವೀತ್|
13012030c ಪುತ್ರಾಣಾಂ ದ್ವೇ ಶತೇ ಬ್ರಹ್ಮನ್ಕಾಲೇನ ವಿನಿಪಾತಿತೇ||
ಕರುಣೆಯಿಂದಿದ್ದ ಆ ಬ್ರಾಹ್ಮಣನನ್ನು ನೋಡಿ ಸ್ತ್ರೀಯು ಹೇಳಿದಳು: “ಬ್ರಹ್ಮನ್! ಕಾಲವು ನನ್ನ ಈ ಇನ್ನೂರು ಮಕ್ಕಳನ್ನು ನಾಶಮಾಡಿಬಿಟ್ಟಿತು!
13012031a ಅಹಂ ರಾಜಾಭವಂ ವಿಪ್ರ ತತ್ರ ಪುತ್ರಶತಂ ಮಯಾ|
13012031c ಸಮುತ್ಪನ್ನಂ ಸುರೂಪಾಣಾಂ ವಿಕ್ರಾಂತಾನಾಂ ದ್ವಿಜೋತ್ತಮ||
ದ್ವಿಜೋತ್ತಮ! ನಾನು ರಾಜನಾಗಿದ್ದೆ. ಆಗ ನನಗೆ ನೂರು ಸುಂದರ ವಿಕ್ರಾಂತ ಮಕ್ಕಳು ಜನಿಸಿದರು.
13012032a ಕದಾ ಚಿನ್ಮೃಗಯಾಂ ಯಾತ ಉದ್ಭ್ರಾಂತೋ ಗಹನೇ ವನೇ|
13012032c ಅವಗಾಢಶ್ಚ ಸರಸಿ ಸ್ತ್ರೀಭೂತೋ ಬ್ರಾಹ್ಮಣೋತ್ತಮ|
13012032e ಪುತ್ರಾನ್ರಾಜ್ಯೇ ಪ್ರತಿಷ್ಠಾಪ್ಯ ವನಮಸ್ಮಿ ತತೋ ಗತಃ||
ಬ್ರಾಹ್ಮಣೋತ್ತಮ! ಒಮ್ಮೆ ಬೇಟೆಗೆಂದು ಹೋದಾಗ ನಾನು ಗಹನ ವನದಲ್ಲಿ ತಿರುಗಾಡುತ್ತಿದ್ದಾಗ ಸರೋವರವೊಂದರಲ್ಲಿ ಮುಳುಗಲು ಸ್ತ್ರೀಯಾದೆನು. ಅನಂತರ ಪುತ್ರರನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿ ವನಕ್ಕೆ ತೆರಳಿದೆನು.
13012033a ಸ್ತ್ರಿಯಾಶ್ಚ ಮೇ ಪುತ್ರಶತಂ ತಾಪಸೇನ ಮಹಾತ್ಮನಾ|
13012033c ಆಶ್ರಮೇ ಜನಿತಂ ಬ್ರಹ್ಮನ್ನೀತಾಸ್ತೇ ನಗರಂ ಮಯಾ||
ಬ್ರಹ್ಮನ್! ಸ್ತ್ರೀಯಾಗಿದ್ದ ನನಗೆ ಮಹಾತ್ಮ ತಾಪಸನಿಂದ ನೂರು ಪುತ್ರರು ಜನಿಸಿದರು. ಆಶ್ರಮದಲ್ಲಿ ಜನಿಸಿದ ಅವರನ್ನು ನಗರಕ್ಕೆ ಕರೆದುಕೊಂಡು ಹೋದೆ.
13012034a ತೇಷಾಂ ಚ ವೈರಮುತ್ಪನ್ನಂ ಕಾಲಯೋಗೇನ ವೈ ದ್ವಿಜ|
13012034c ಏತಶ್ಚೋಚಾಮಿ ವಿಪ್ರೇಂದ್ರ ದೈವೇನಾಭಿಪರಿಪ್ಲುತಾ||
ದ್ವಿಜ! ವಿಪ್ರೇಂದ್ರ! ಕಾಲಯೋಗದಿಂದ ಅವರಲ್ಲಿ ವೈರತ್ವವುಂಟಾಯಿತು. ದೈವದಿಂದುಂಟಾದ ಈ ದುಃಖದಲ್ಲಿ ಮುಳುಗಿಹೋಗಿದ್ದೇನೆ!”
13012035a ಇಂದ್ರಸ್ತಾಂ ದುಃಖಿತಾಂ ದೃಷ್ಟ್ವಾ ಅಬ್ರವೀತ್ಪರುಷಂ ವಚಃ|
13012035c ಪುರಾ ಸುದುಃಸಹಂ ಭದ್ರೇ ಮಮ ದುಃಖಂ ತ್ವಯಾ ಕೃತಮ್||
ದುಃಖಿತಳಾಗಿದ್ದ ಅವಳನ್ನು ನೋಡಿ ಇಂದ್ರನು ಕಠೋರವಾದ ಈ ಮಾತನ್ನಾಡಿದನು: “ಭದ್ರೇ! ಹಿಂದೆ ನೀನು ನನಗೆ ಸಹಿಸಲಸಾಧ್ಯ ದುಃಖವನ್ನುಂಟು ಮಾಡಿದ್ದೆ!
13012036a ಇಂದ್ರದ್ವಿಷ್ಟೇನ ಯಜತಾ ಮಾಮನಾದೃತ್ಯ ದುರ್ಮತೇ|
13012036c ಇಂದ್ರೋಽಹಮಸ್ಮಿ ದುರ್ಬುದ್ಧೇ ವೈರಂ ತೇ ಯಾತಿತಂ ಮಯಾ||
ದುರ್ಮತೇ! ಇಂದ್ರನಿಗೆ ವಿರುದ್ಧವಾಗಿರುವ ಯಜ್ಞವನ್ನು ಯಾಜಿಸಿ ನನ್ನನ್ನು ಅನಾದರಿಸಿದೆ. ದುರ್ಬುದ್ಧೇ! ನಾನು ಇಂದ್ರ! ನಿನ್ನ ಮೇಲಿನ ನನ್ನ ವೈರವನ್ನು ತೀರಿಸಿಕೊಂಡೆ!”
13012037a ಇಂದ್ರಂ ತು ದೃಷ್ಟ್ವಾ ರಾಜರ್ಷಿಃ ಪಾದಯೋಃ ಶಿರಸಾ ಗತಃ|
13012037c ಪ್ರಸೀದ ತ್ರಿದಶಶ್ರೇಷ್ಠ ಪುತ್ರಕಾಮೇನ ಸ ಕ್ರತುಃ|
13012037e ಇಷ್ಟಸ್ತ್ರಿದಶಶಾರ್ದೂಲ ತತ್ರ ಮೇ ಕ್ಷಂತುಮರ್ಹಸಿ||
ಇಂದ್ರನನ್ನು ನೋಡಿ ರಾಜರ್ಷಿಯು ಅವನ ಪಾದಗಳಿಗೆ ಶಿರವನ್ನಿಟ್ಟು “ತ್ರಿದಶಶ್ರೇಷ್ಠ! ಪ್ರಸೀದನಾಗು! ಪುತ್ರಕಾಮನಾಗಿ ಆ ಕ್ರತುವನ್ನು ಮಾಡಿದೆನು. ತ್ರಿದಶಶಾರ್ದೂಲ! ಆ ಯಾಗಮಾಡಿದುದಕ್ಕೆ ನನ್ನನ್ನು ಕ್ಷಮಿಸಬೇಕು!”
13012038a ಪ್ರಣಿಪಾತೇನ ತಸ್ಯೇಂದ್ರಃ ಪರಿತುಷ್ಟೋ ವರಂ ದದೌ|
13012038c ಪುತ್ರಾ ವೈ ಕತಮೇ ರಾಜನ್ಜೀವಂತು ತವ ಶಂಸ ಮೇ|
13012038e ಸ್ತ್ರೀಭೂತಸ್ಯ ಹಿ ಯೇ ಜಾತಾಃ ಪುರುಷಸ್ಯಾಥ ಯೇಽಭವನ್||
ಕಾಲಿಗೆ ಬಿದ್ದ ಅವನ ಮೇಲೆ ಪರಿತುಷ್ಟನಾದ ಇಂದ್ರನು ಅವನಿಗೆ ವರವನ್ನಿತ್ತನು: “ರಾಜನ್! ನಿನ್ನ ಯಾವ ಮಕ್ಕಳು ಜೀವಿತಗೊಳ್ಳಬೇಕೆನ್ನುವುದನ್ನು ಹೇಳು. ಸ್ತ್ರೀಯಾಗಿದ್ದಾಗ ನಿನಗಾದ ಮಕ್ಕಳೋ ಅಥವಾ ಪುರುಷನಾಗಿದ್ದಾಗ ಆದ ಮಕ್ಕಳೋ?”
13012039a ತಾಪಸೀ ತು ತತಃ ಶಕ್ರಮುವಾಚ ಪ್ರಯತಾಂಜಲಿಃ|
13012039c ಸ್ತ್ರೀಭೂತಸ್ಯ ಹಿ ಯೇ ಜಾತಾಸ್ತೇ ಮೇ ಜೀವಂತು ವಾಸವ||
ಆಗ ಕೈಮುಗಿದು ತಲೆಬಾಗಿ ತಾಪಸಿಯು ಶಕ್ರನಿಗೆ ಹೇಳಿದಳು: “ವಾಸವ! ಸ್ತ್ರೀಯಾಗಿದ್ದಾಗ ಹುಟ್ಟಿದ ನನ್ನ ಮಕ್ಕಳು ಜೀವಿತಗೊಳ್ಳಲಿ!”
13012040a ಇಂದ್ರಸ್ತು ವಿಸ್ಮಿತೋ ಹೃಷ್ಟಃ ಸ್ತ್ರಿಯಂ ಪಪ್ರಚ್ಚ ತಾಂ ಪುನಃ|
13012040c ಪುರುಷೋತ್ಪಾದಿತಾ ಯೇ ತೇ ಕಥಂ ದ್ವೇಷ್ಯಾಃ ಸುತಾಸ್ತವ||
ಹೃಷ್ಟ ಇಂದ್ರನಾದರೋ ವಿಸ್ಮಿತನಾಗಿ ಆ ಸ್ತ್ರೀಯನ್ನು ಪುನಃ ಕೇಳಿದನು: “ಪುರುಷನಾಗಿ ಹುಟ್ಟಿದ ಆ ನಿನ್ನ ಮಕ್ಕಳ ಮೇಲೆ ನಿನಗೆ ಹೇಗೆ ದ್ವೇಷವುಂಟಾಯಿತು?
13012041a ಸ್ತ್ರೀಭೂತಸ್ಯ ಹಿ ಯೇ ಜಾತಾಃ ಸ್ನೇಹಸ್ತೇಭ್ಯೋಽಧಿಕಃ ಕಥಮ್|
13012041c ಕಾರಣಂ ಶ್ರೋತುಮಿಚ್ಚಾಮಿ ತನ್ಮೇ ವಕ್ತುಮಿಹಾರ್ಹಸಿ||
ಸ್ತ್ರೀಯಾಗಿದ್ದಾಗ ನಿನಗೆ ಹುಟ್ಟಿದ ಮಕ್ಕಳ ಮೇಲೆ ಅಧಿಕ ಸ್ನೇಹವು ಹೇಗಾಯಿತು? ಇದರ ಕಾರಣವನ್ನು ಕೇಳಲು ಬಯಸುತ್ತೇನೆ. ಅದನ್ನು ಹೇಳಬೇಕು.”
13012042 ಸ್ತ್ರ್ಯುವಾಚ|
13012042a ಸ್ತ್ರಿಯಾಸ್ತ್ವಭ್ಯಧಿಕಃ ಸ್ನೇಹೋ ನ ತಥಾ ಪುರುಷಸ್ಯ ವೈ|
13012042c ತಸ್ಮಾತ್ತೇ ಶಕ್ರ ಜೀವಂತು ಯೇ ಜಾತಾಃ ಸ್ತ್ರೀಕೃತಸ್ಯ ವೈ||
ಸ್ತ್ರೀಯು ಹೇಳಿದಳು: “ಪುರುಷನಿಗಿಂತಲೂ ಸ್ತ್ರೀಗೆ ತನ್ನ ಮಕ್ಕಳ ಮೇಲೆ ಅಧಿಕ ಸ್ನೇಹವಿರುತ್ತದೆ. ಆದುದರಿಂದ ಶಕ್ರ! ನಾನು ಸ್ತ್ರೀಯಾಗಿದ್ದಾಗ ಹುಟ್ಟಿದ ಮಕ್ಕಳು ಬದುಕಿಕೊಳ್ಳಲಿ!””
13012043 ಭೀಷ್ಮ ಉವಾಚ|
13012043a ಏವಮುಕ್ತೇ ತತಸ್ತ್ವಿಂದ್ರಃ ಪ್ರೀತೋ ವಾಕ್ಯಮುವಾಚ ಹ|
13012043c ಸರ್ವ ಏವೇಹ ಜೀವಂತು ಪುತ್ರಾಸ್ತೇ ಸತ್ಯವಾದಿನಿ||
ಭೀಷ್ಮನು ಹೇಳಿದನು: “ಅವಳು ಹೀಗೆ ಹೇಳಲು ಪ್ರೀತನಾದ ಇಂದ್ರನು ಇಂತೆಂದನು: “ಸತ್ಯವಾದಿನಿ! ನಿನ್ನ ಎಲ್ಲ ಮಕ್ಕಳೂ ಬದುಕಲಿ!
13012044a ವರಂ ಚ ವೃಣು ರಾಜೇಂದ್ರ ಯಂ ತ್ವಮಿಚ್ಚಸಿ ಸುವ್ರತ|
13012044c ಪುರುಷತ್ವಮಥ ಸ್ತ್ರೀತ್ವಂ ಮತ್ತೋ ಯದಭಿಕಾಂಕ್ಷಸಿ||
ರಾಜೇಂದ್ರ! ಸುವ್ರತ! ವರವನ್ನು ಕೇಳಿಕೋ! ಪುರುಷತ್ವ ಅಥವಾ ಸ್ತ್ರೀತ್ವ ಯಾವುದನ್ನು ಬಯಸುತ್ತೀಯೆ?”
13012045 ಸ್ತ್ರ್ಯುವಾಚ|
13012045a ಸ್ತ್ರೀತ್ವಮೇವ ವೃಣೇ ಶಕ್ರ ಪ್ರಸನ್ನೇ ತ್ವಯಿ ವಾಸವ||
ಸ್ತ್ರೀಯು ಹೇಳಿದಳು: “ವಾಸವ! ಶಕ್ರ! ನೀನು ಪ್ರಸನ್ನನಾದರೆ ಸ್ತ್ರೀತ್ವವನ್ನೇ ಕೇಳಿಕೊಳ್ಳುತ್ತೇನೆ.”
13012046a ಏವಮುಕ್ತಸ್ತು ದೇವೇಂದ್ರಸ್ತಾಂ ಸ್ತ್ರಿಯಂ ಪ್ರತ್ಯುವಾಚ ಹ|
13012046c ಪುರುಷತ್ವಂ ಕಥಂ ತ್ಯಕ್ತ್ವಾ ಸ್ತ್ರೀತ್ವಂ ರೋಚಯಸೇ ವಿಭೋ||
ಇದನ್ನು ಕೇಳಿದ ದೇವೇಂದ್ರನು ಆ ಸ್ತ್ರೀಗೆ ಪುನಃ ಹೇಳಿದನು: “ವಿಭೋ! ಪುರುಷತ್ವವನ್ನು ತ್ಯಜಿಸಿ ಸ್ತ್ರೀತ್ವವನ್ನು ಏಕೆ ಇಚ್ಛಿಸುವೆ?”
13012047a ಏವಮುಕ್ತಃ ಪ್ರತ್ಯುವಾಚ ಸ್ತ್ರೀಭೂತೋ ರಾಜಸತ್ತಮಃ|
13012047c ಸ್ತ್ರಿಯಾಃ ಪುರುಷಸಂಯೋಗೇ ಪ್ರೀತಿರಭ್ಯಧಿಕಾ ಸದಾ|
13012047e ಏತಸ್ಮಾತ್ಕಾರಣಾಚ್ಚಕ್ರ ಸ್ತ್ರೀತ್ವಮೇವ ವೃಣೋಮ್ಯಹಮ್||
ಇದನ್ನು ಕೇಳಿದ ಸ್ತ್ರೀಯಾಗಿದ್ದ ರಾಜಸತ್ತಮನು ಉತ್ತರಿಸಿದನು: “ಪುರುಷಸಂಯೋಗದಿಂದ ಸದಾ ಸ್ತ್ರೀಗೇ ಅಧಿಕ ಸಂತೋಷವಾಗುತ್ತದೆ. ಶಕ್ರ! ಈ ಕಾರಣದಿಂದಲೇ ನಾನು ಸ್ತ್ರೀತ್ವವನ್ನು ಕೇಳಿಕೊಳ್ಳುತ್ತಿದ್ದೇನೆ.
13012048a ರಮೇ ಚೈವಾಧಿಕಂ ಸ್ತ್ರೀತ್ವೇ ಸತ್ಯಂ ವೈ ದೇವಸತ್ತಮ|
13012048c ಸ್ತ್ರೀಭಾವೇನ ಹಿ ತುಷ್ಟೋಽಸ್ಮಿ ಗಮ್ಯತಾಂ ತ್ರಿದಶಾಧಿಪ||
ದೇವಸತ್ತಮ! ತ್ರಿದಶಾಧಿಪ! ಸ್ತ್ರೀಯಾಗಿಯೇ ನಾನು ಅಧಿಕವಾಗಿ ರಮಿಸಿದ್ದೇನೆ. ಸತ್ಯವನ್ನು ಹೇಳುತ್ತಿದ್ದೇನೆ. ಸ್ತ್ರೀಭಾವದಿಂದಲೇ ತುಷ್ಟನಾಗಿದ್ದೇನೆ. ನೀನಿನ್ನು ಹೋಗಬಹುದು.”
13012049a ಏವಮಸ್ತ್ವಿತಿ ಚೋಕ್ತ್ವಾ ತಾಮಾಪೃಚ್ಚ್ಯ ತ್ರಿದಿವಂ ಗತಃ|
13012049c ಏವಂ ಸ್ತ್ರಿಯಾ ಮಹಾರಾಜ ಅಧಿಕಾ ಪ್ರೀತಿರುಚ್ಯತೇ||
ಅವಳ ಆ ಮಾತನ್ನು ಕೇಳಿ “ಹಾಗೆಯೇ ಆಗಲಿ!” ಎಂದು ಹೇಳಿ ಇಂದ್ರನು ತ್ರಿದಿವಕ್ಕೆ ತೆರಳಿದನು. ಮಹಾರಾಜ! ಹೀಗೆ ಸ್ತ್ರೀಗೇ ಅಧಿಕ ಸುಖವುಂಟಾಗುತ್ತದೆ ಎಂದು ಹೇಳುತ್ತಾರೆ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಭಂಗಸ್ವನೋಪಾಖ್ಯಾನೇ ದ್ವಾದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಭಂಗಸ್ವನೋಪಾಖ್ಯಾನ ಎನ್ನುವ ಹನ್ನೆರಡನೇ ಅಧ್ಯಾಯವು.