ಅನುಶಾಸನ ಪರ್ವ: ದಾನಧರ್ಮ ಪರ್ವ
೧೧೪
ಬೃಹಸ್ಪತಿಯು ಯುಧಿಷ್ಠಿರನಿಗೆ ಅಹಿಂಸೆಯ ಮಹಿಮೆಯನ್ನು ತಿಳಿಸಿ ಸ್ವರ್ಗಕ್ಕೆ ಹಿಂದಿರುಗಿದುದು (1-11).
13114001 ಯುಧಿಷ್ಠಿರ ಉವಾಚ|
13114001a ಅಹಿಂಸಾ ವೈದಿಕಂ ಕರ್ಮ ಧ್ಯಾನಮಿಂದ್ರಿಯಸಂಯಮಃ|
13114001c ತಪೋಽಥ ಗುರುಶುಶ್ರೂಷಾ ಕಿಂ ಶ್ರೇಯಃ ಪುರುಷಂ ಪ್ರತಿ||
ಯುಧಿಷ್ಠಿರನು ಹೇಳಿದನು: “ಅಹಿಂಸೆ, ವೈದಿಕ ಕರ್ಮ, ಧ್ಯಾನ, ಇಂದ್ರಿಯ ಸಂಯಮ, ತಪಸ್ಸು ಮತ್ತು ಗುರುಶುಶ್ರೂಷೆ ಇವುಗಳಲ್ಲಿ ಯಾವುದು ಪುರುಷನಿಗೆ ಶ್ರೇಯಸ್ಸನ್ನುಂಟುಮಾಡುತ್ತದೆ?”
13114002 ಬೃಹಸ್ಪತಿರುವಾಚ|
13114002a ಸರ್ವಾಣ್ಯೇತಾನಿ ಧರ್ಮಸ್ಯ ಪೃಥಗ್ದ್ವಾರಾಣಿ ಸರ್ವಶಃ|
13114002c ಶೃಣು ಸಂಕೀರ್ತ್ಯಮಾನಾನಿ ಷಡೇವ ಭರತರ್ಷಭ||
ಬೃಹಸ್ಪತಿಯು ಹೇಳಿದನು: “ಭರತರ್ಷಭ! ಇವೆಲ್ಲವೂ ಧರ್ಮಕ್ಕೆ ಬೇರೆ ಬೇರೆ ದ್ವಾರಗಳಾಗಿವೆ. ಈ ಆರರಲ್ಲಿ ಯಾವ ದ್ವಾರದ ಮೂಲಕ ಹೋದರೂ ಧರ್ಮದ ಸಾಧನೆಯಾಗುತ್ತದೆ. ಈ ಆರನ್ನೂ ವಿವರಿಸುತ್ತೇನೆ. ಕೇಳು.
13114003a ಹಂತ ನಿಃಶ್ರೇಯಸಂ ಜಂತೋರಹಂ ವಕ್ಷ್ಯಾಮ್ಯನುತ್ತಮಮ್|
13114003c ಅಹಿಂಸಾಪಾಶ್ರಯಂ ಧರ್ಮಂ ಯಃ ಸಾಧಯತಿ ವೈ ನರಃ||
13114004a ತ್ರೀನ್ ದೋಷಾನ್ಸರ್ವಭೂತೇಷು ನಿಧಾಯ ಪುರುಷಃ ಸದಾ|
13114004c ಕಾಮಕ್ರೋಧೌ ಚ ಸಂಯಮ್ಯ ತತಃ ಸಿದ್ಧಿಮವಾಪ್ನುತೇ||
ಈಗ ನಾನು ಮನುಷ್ಯರ ಶ್ರೇಯಸ್ಸಿಗಾಗಿರುವ ಸರ್ವಶ್ರೇಷ್ಠ ಉಪಾಯವನ್ನು ಹೇಳುತ್ತೇನೆ. ಅಹಿಂಸಾಯುಕ್ತ ಧರ್ಮವನ್ನು ಪಾಲಿಸುತ್ತಾ ಅಪರಾಧ, ಅಪಚಾರ ಮತ್ತು ಅಪಕಾರಗಳೆಂಬ ಮೂರು ದೋಷಗಳನ್ನೂ ಯಾರ ಕುರಿತೂ ಮಾಡುವುದಿಲ್ಲವೆಂಬ ನಿಯಮವನ್ನಿಟ್ಟುಕೊಂಡು ಕಾಮಕ್ರೋಧಗಳನ್ನು ಸಂಯಮಿಸಿದವನು ಸಿದ್ಧಿಯನ್ನು ಹೊಂದುತ್ತಾನೆ.
13114005a ಅಹಿಂಸಕಾನಿ ಭೂತಾನಿ ದಂಡೇನ ವಿನಿಹಂತಿ ಯಃ|
13114005c ಆತ್ಮನಃ ಸುಖಮನ್ವಿಚ್ಚನ್ನ ಸ ಪ್ರೇತ್ಯ ಸುಖೀ ಭವೇತ್||
ತನ್ನ ಸುಖಕ್ಕಾಗಿ ಅಹಿಂಸಕ ಪ್ರಾಣಿಗಳನ್ನು ಕೋಲಿನಿಂದ ಹೊಡೆಯುವವನು ಪರಲೋಕದಲ್ಲಿ ಸುಖಿಯಾಗಿರುವುದಿಲ್ಲ.
13114006a ಆತ್ಮೋಪಮಶ್ಚ ಭೂತೇಷು ಯೋ ವೈ ಭವತಿ ಪೂರುಷಃ|
13114006c ನ್ಯಸ್ತದಂಡೋ ಜಿತಕ್ರೋಧಃ ಸ ಪ್ರೇತ್ಯ ಸುಖಮೇಧತೇ||
ತನ್ನಂತೆಯೇ ಎಲ್ಲರೂ ಎಂದು ಭಾವಿಸಿ ದಂಡವನ್ನು ತ್ಯಜಿಸಿ ಕ್ರೋಧವನ್ನು ಜಯಿಸಿದವನು ಪರಲೋಕದಲ್ಲಿ ಸುಖವನ್ನು ಹೊಂದುತ್ತಾನೆ.
13114007a ಸರ್ವಭೂತಾತ್ಮಭೂತಸ್ಯ ಸರ್ವಭೂತಾನಿ ಪಶ್ಯತಃ|
13114007c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ||
ಸರ್ವಭೂತಾತ್ಮಭೂತನನ್ನು ಸರ್ವಪ್ರಾಣಿಗಳಲ್ಲಿ ಕಾಣುವ ಅಪದದ ಪದವನ್ನು[1] ಬಯಸುವವನನ್ನು ನೋಡಿ ಮಾರ್ಗದಲ್ಲಿ ದೇವತೆಗಳೂ ಮೋಹಗೊಳ್ಳುತ್ತಾರೆ.
13114008a ನ ತತ್ಪರಸ್ಯ ಸಂದದ್ಯಾತ್ಪ್ರತಿಕೂಲಂ ಯದಾತ್ಮನಃ|
13114008c ಏಷ ಸಂಕ್ಷೇಪತೋ ಧರ್ಮಃ ಕಾಮಾದನ್ಯಃ ಪ್ರವರ್ತತೇ||
ತನಗೆ ಪ್ರತಿಕೂಲವಾದುದನ್ನು ಇತರರ ವಿಷಯದಲ್ಲಿ ಆಚರಿಸಬಾರದು. ಇದು ಧರ್ಮದ ಸಂಕ್ಷಿಪ್ತ ಲಕ್ಷಣ. ಇದಕ್ಕೆ ಹೊರತಾದುದೆಲ್ಲವೂ ಕಾಮಜನ್ಯವಾದವುಗಳು.
13114009a ಪ್ರತ್ಯಾಖ್ಯಾನೇ ಚ ದಾನೇ ಚ ಸುಖದುಃಖೇ ಪ್ರಿಯಾಪ್ರಿಯೇ|
13114009c ಆತ್ಮೌಪಮ್ಯೇನ ಪುರುಷಃ ಸಮಾಧಿಮಧಿಗಚ್ಚತಿ||
ತಿರಸ್ಕಾರ, ದಾನ, ಸುಖ-ದುಃಖಗಳು ಮತ್ತು ಪ್ರಿಯ-ಅಪ್ರಿಯಗಳು ತನಗೆ ಉಂಟಾದಾಗ ಹೇಗೆ ಹರ್ಷ-ಶೋಕಗಳುಂಟಾಗುವವೋ ಹಾಗೆ ಇತರರಿಗೂ ಆಗುತ್ತವೆಯೆಂದು ಭಾವಿಸಬೇಕು. ಹೀಗೆ ಭಾವಿಸುವವನು ಸಮಾಧಿಸ್ಥಿತಿಯನ್ನು ಹೊಂದುತ್ತಾನೆ.
13114010a ಯಥಾ ಪರಃ ಪ್ರಕ್ರಮತೇಽಪರೇಷು
ತಥಾಪರಃ ಪ್ರಕ್ರಮತೇ ಪರಸ್ಮಿನ್|
13114010c ಏಷೈವ ತೇಽಸ್ತೂಪಮಾ ಜೀವಲೋಕೇ
ಯಥಾ ಧರ್ಮೋ ನೈಪುಣೇನೋಪದಿಷ್ಟಃ||
ಇಂದು ಇತರರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೋ ಹಾಗೆ ಮುಂದೆ ಅವನ ವಿಷಯದಲ್ಲಿಯೂ ಇತರರು ನಡೆದುಕೊಳ್ಳುತ್ತಾರೆ. ಜೀವಲೋಕದಲ್ಲಿ ಇದನ್ನೇ ನೀನು ದೃಷ್ಟಾಂತವಾಗಿಟ್ಟುಕೊಂಡು ಇತರರ ವಿಷಯದಲ್ಲಿ ಸರಿಯಾಗಿ ನಡೆದುಕೋ. ಹೀಗೆ ನಾನು ನೈಪುಣ್ಯದಿಂದ ಧರ್ಮವನ್ನು ಉಪದೇಶಿಸಿದ್ದೇನೆ.””
13114011 ವೈಶಂಪಾಯನ ಉವಾಚ|
13114011a ಇತ್ಯುಕ್ತ್ವಾ ತಂ ಸುರಗುರುರ್ಧರ್ಮರಾಜಂ ಯುಧಿಷ್ಠಿರಮ್|
13114011c ದಿವಮಾಚಕ್ರಮೇ ಧೀಮಾನ್ ಪಶ್ಯತಾಮೇವ ನಸ್ತದಾ||
ವೈಶಂಪಾಯನನು ಹೇಳಿದನು: “ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಆ ಧೀಮಾನ್ ಸುರಗುರುವು ನಾವೆಲ್ಲರೂ[2] ನೋಡುತ್ತಿದ್ದಂತೆಯೇ ದಿವವನ್ನೇರಿದನು.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಸಮಾಪ್ತೌ ಚತುರ್ದಶಾಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರಸಮಾಪ್ತಿ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.
[1] ಹೆಜ್ಜೆಯ ಗುರುತಿಲ್ಲದ ಪದವನ್ನು ಬಯಸುವವನು.
[2] ಯುಧಿಷ್ಠಿರ-ಭೀಷ್ಮರ ಸಂವಾದವು ನಡೆಯುತ್ತಿರುವಾಗ ಅಲ್ಲಿ ವೈಶಂಪಾಯನನೂ ಇದ್ದನೆಂದು ಇದು ಸೂಚಿಸುತ್ತದೆ.