ಅನುಶಾಸನ ಪರ್ವ: ದಾನಧರ್ಮ ಪರ್ವ
೧೧
ಶ್ರೀಯ ನಿವಾಸಸ್ಥಾನಗಳು
ಎಂತಹ ಪುರುಷನಲ್ಲಿ ಅಥವಾ ಸ್ತ್ರೀಯಲ್ಲಿ ಶ್ರೀಯು ನಿತ್ಯವೂ ವಾಸಿಸುತ್ತಾಳೆ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶ್ರೀ ಮತ್ತು ರುಕ್ಮಿಣಿಯರ ಸಂವಾದವನ್ನು ತಿಳಿಸುವುದು (೧-೨೦).
13011001 ಯುಧಿಷ್ಠಿರ ಉವಾಚ|
13011001a ಕೀದೃಶೇ ಪುರುಷೇ ತಾತ ಸ್ತ್ರೀಷು ವಾ ಭರತರ್ಷಭ|
13011001c ಶ್ರೀಃ ಪದ್ಮಾ ವಸತೇ ನಿತ್ಯಂ ತನ್ಮೇ ಬ್ರೂಹಿ ಪಿತಾಮಹ||
ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ತಾತ! ಎಂತಹ ಪುರುಷನಲ್ಲಿ ಅಥವಾ ಸ್ತ್ರೀಯಲ್ಲಿ ಪದ್ಮಾ ಶ್ರೀಯು ನಿತ್ಯವೂ ವಾಸಿಸುತ್ತಾಳೆ ಎನ್ನುವುದನ್ನು ನನಗೆ ಹೇಳು.”
13011002 ಭೀಷ್ಮ ಉವಾಚ|
13011002a ಅತ್ರ ತೇ ವರ್ತಯಿಷ್ಯಾಮಿ ಯಥಾದೃಷ್ಟಂ ಯಥಾಶ್ರುತಮ್|
13011002c ರುಕ್ಮಿಣೀ ದೇವಕೀಪುತ್ರಸಂನಿಧೌ ಪರ್ಯಪೃಚ್ಚತ||
ಭೀಷ್ಮನು ಹೇಳಿದನು: “ಇದರ ಕುರಿತು ನೋಡಿದಹಾಗಿ ಮತ್ತು ಕೇಳಿದಹಾಗಿ ದೇವಕೀಪುತ್ರನ ಸನ್ನಿಧಿಯಲ್ಲಿ ರುಕ್ಮಿಣಿಯು ಲಕ್ಷ್ಮಿಯನ್ನು ಕೇಳಿದುದನ್ನು ಹೇಳುತ್ತೇನೆ.
13011003a ನಾರಾಯಣಸ್ಯಾಂಕಗತಾಂ ಜ್ವಲಂತೀಂ
ದೃಷ್ಟ್ವಾ ಶ್ರಿಯಂ ಪದ್ಮಸಮಾನವಕ್ತ್ರಾಮ್|
13011003c ಕೌತೂಹಲಾದ್ವಿಸ್ಮಿತಚಾರುನೇತ್ರಾ
ಪಪ್ರಚ್ಚ ಮಾತಾ ಮಕರಧ್ವಜಸ್ಯ||
ವಿಸ್ಮಿತ ಚಾರುನೇತ್ರೆ ಮಕರಧ್ವಜ ಪ್ರದ್ಯುಮ್ನನ ತಾಯಿ ರುಕ್ಮಿಣಿಯು ನಾರಾಯಣನ ತೊಡೆಯಮೇಲೆ ಕುಳಿತಿದ್ದ, ಪದ್ಮಸಮಾನ ಮುಖವಿದ್ದ ಪ್ರಜ್ವನಿಸುತ್ತಿದ್ದ ಶ್ರೀಯನ್ನು ನೋಡಿ ಕುತೂಹಲದಿಂದ ಕೇಳಿದಳು:
13011004a ಕಾನೀಹ ಭೂತಾನ್ಯುಪಸೇವಸೇ ತ್ವಂ
ಸಂತಿಷ್ಠತೀ ಕಾನಿ ನ ಸೇವಸೇ ತ್ವಮ್|
13011004c ತಾನಿ ತ್ರಿಲೋಕೇಶ್ವರಭೂತಕಾಂತೇ
ತತ್ತ್ವೇನ ಮೇ ಬ್ರೂಹಿ ಮಹರ್ಷಿಕನ್ಯೇ||
“ಮಹರ್ಷಿಕನ್ಯೇ! ತ್ರಿಲೋಕೇಶ್ವರಭೂತಕಾಂತೇ! ನೀನು ಯಾವ ಭೂತಗಳನ್ನು ಉಪಸೇವಿಸುತ್ತೀಯೆ? ಎಲ್ಲಿ ನೀನು ಸ್ಥಿರವಾಗಿ ನಿಲ್ಲುವೆ? ಹೇಗಿರುವವರನ್ನು ಸೇವಿಸುವೆ? ತತ್ತ್ವತಃ ಅದನ್ನು ನನಗೆ ಹೇಳು.”
13011005a ಏವಂ ತದಾ ಶ್ರೀರಭಿಭಾಷ್ಯಮಾಣಾ
ದೇವ್ಯಾ ಸಮಕ್ಷಂ ಗರುಡಧ್ವಜಸ್ಯ|
13011005c ಉವಾಚ ವಾಕ್ಯಂ ಮಧುರಾಭಿಧಾನಂ
ಮನೋಹರಂ ಚಂದ್ರಮುಖೀ ಪ್ರಸನ್ನಾ||
ದೇವಿಯು ಹೀಗೆಂದು ಪ್ರಶ್ನಿಸಲು ಚಂದ್ರಮುಖೀ ಶ್ರೀಯು ಪ್ರಸನ್ನಳಾಗಿ ಗರುಡಧ್ವಜನ ಸಮಕ್ಷಮದಲ್ಲಿ ಮಧುರವಾದ ಮತ್ತು ಮನೋಹರವಾದ ಈ ಮಾತನ್ನಾಡಿದಳು:
13011006a ವಸಾಮಿ ಸತ್ಯೇ ಸುಭಗೇ ಪ್ರಗಲ್ಭೇ
ದಕ್ಷೇ ನರೇ ಕರ್ಮಣಿ ವರ್ತಮಾನೇ|
[1]13011006c ನಾಕರ್ಮಶೀಲೇ ಪುರುಷೇ ವಸಾಮಿ
ನ ನಾಸ್ತಿಕೇ ಸಾಂಕರಿಕೇ ಕೃತಘ್ನೇ|
13011006e ನ ಭಿನ್ನವೃತ್ತೇ ನ ನೃಶಂಸವೃತ್ತೇ
ನ ಚಾಪಿ ಚೌರೇ ನ ಗುರುಷ್ವಸೂಯೇ||
ಸುಭಗೇ! ಸತ್ಯವಂತನಲ್ಲಿಯೂ, ಧೈರ್ಯದಿಂದ ಚೆನ್ನಾಗಿ ಮಾತನಾಡುವವನಲ್ಲಿಯೂ, ಕಾರ್ಯಕುಶಲನಲ್ಲಿಯೂ, ಕಾರ್ಯದಲ್ಲಿಯೇ ಯಾವಾಗಲೂ ನಿರತನಾಗಿರುವವನಲ್ಲಿಯೂ ನಾನು ವಾಸಮಾಡುತ್ತೇನೆ. ಕಾರ್ಯಶೀಲನಲ್ಲದವನಲ್ಲಿಯೂ, ನಾಸ್ತಿಕನಲ್ಲಿಯೂ, ವರ್ಣಸಂಕರವುಳ್ಳವನಲ್ಲಿಯೂ, ಪಡೆದುಕೊಂಡ ಉಪಕಾರವನ್ನು ಸ್ಮರಿಸದೇಇರುವವನಲ್ಲಿಯೂ, ದುರಾಚಾರಿಯಲ್ಲಿಯೂ, ಕ್ರೂರಿಯಲ್ಲಿಯೂ, ಕಳ್ಳನಲ್ಲಿಯೂ ಮತ್ತು ಗುರುಜನರಲ್ಲಿ ದೋಷದೃಷ್ಟಿಯಿರುವವನಲ್ಲಿಯೂ ನಾನು ವಾಸಮಾಡುವುದಿಲ್ಲ.
13011007a ಯೇ ಚಾಲ್ಪತೇಜೋಬಲಸತ್ತ್ವಸಾರಾ
ಹೃಷ್ಯಂತಿ ಕುಪ್ಯಂತಿ ಚ ಯತ್ರ ತತ್ರ|
13011007c ನ ದೇವಿ ತಿಷ್ಠಾಮಿ ತಥಾವಿಧೇಷು
ನರೇಷು ಸಂಸುಪ್ತಮನೋರಥೇಷು||
ದೇವೀ! ಯಾರು ತೇಜಸ್ಸು, ಬಲ, ಸತ್ತ್ವ ಮತ್ತು ಸಾರಗಳಲ್ಲಿ ಹೀನರಾಗಿರುವರೋ, ಎಲ್ಲೆಂದರಲ್ಲಿ ಸಂತೋಷಪಡುವರೋ ಅಥವಾ ಕೋಪಗೊಳ್ಳುವರೋ, ಮನೋರಥಗಳನ್ನು ಗುಪ್ತವಾಗಿಟ್ಟುಕೊಂಡಿರುವ ನರರಲ್ಲಿ ನಾನು ನಿಲ್ಲುವುದಿಲ್ಲ.
13011008a ಯಶ್ಚಾತ್ಮನಿ ಪ್ರಾರ್ಥಯತೇ ನ ಕಿಂ ಚಿದ್
ಯಶ್ಚ ಸ್ವಭಾವೋಪಹತಾಂತರಾತ್ಮಾ|
13011008c ತೇಷ್ವಲ್ಪಸಂತೋಷರತೇಷು ನಿತ್ಯಂ
ನರೇಷು ನಾಹಂ ನಿವಸಾಮಿ ದೇವಿ||
ದೇವೀ! ತಮಗಾಗಿ ಯಾರು ಯಾವುದನ್ನೂ ಇಚ್ಛಿಸುವುದೇ ಇಲ್ಲವೋ, ಅಂತರಾತ್ಮನನ್ನು ನೋಯಿಸುವುದೇ ಯಾರ ಸ್ವಭಾವವಾಗಿರುವುದೋ, ಅಂತಹ ಅಲ್ಪತೃಪ್ತ ಪುರುಷರಲ್ಲಿ ನಾನು ಪೂರ್ಣಮನಸ್ಸಿನಿಂದ ವಾಸಿಸುವುದಿಲ್ಲ.
13011009a ವಸಾಮಿ ಧರ್ಮಶೀಲೇಷು ಧರ್ಮಜ್ಞೇಷು ಮಹಾತ್ಮಸು|
13011009c ವೃದ್ಧಸೇವಿಷು ದಾಂತೇಷು ಸತ್ತ್ವಜ್ಞೇಷು ಮಹಾತ್ಮಸು||
ನಾನು ಧರ್ಮಶೀಲರಲ್ಲಿ, ಧರ್ಮಜ್ಞರಲ್ಲಿ, ಮಹಾತ್ಮರಲ್ಲಿ, ವೃದ್ಧರ ಸೇವೆಮಾಡುವವರಲ್ಲಿ, ದಾಂತರಲ್ಲಿ, ಮತ್ತು ಮಹಾತ್ಮ ಸತ್ತ್ವಜ್ಞರಲ್ಲಿ ವಾಸಿಸುತ್ತೇನೆ.
13011010a ಸ್ತ್ರೀಷು ಕ್ಷಾಂತಾಸು ದಾಂತಾಸು ದೇವದ್ವಿಜಪರಾಸು ಚ|
13011010c ವಸಾಮಿ ಸತ್ಯಶೀಲಾಸು ಸ್ವಭಾವನಿರತಾಸು ಚ||
ಸ್ತ್ರೀಯರಲ್ಲಿ, ಕ್ಷಮಾಶೀಲರಲ್ಲಿ, ದಾಂತರಲ್ಲಿ, ದೇವದ್ವಿಜಪರರಲ್ಲಿ, ಸತ್ಯಶೀಲರಲ್ಲಿ ಮತ್ತು ಸ್ವಭಾವನಿರತರಲ್ಲಿ ನಾನು ವಾಸಿಸುತ್ತೇನೆ.
[2]13011011a ಪ್ರಕೀರ್ಣಭಾಂಡಾಮನವೇಕ್ಷ್ಯಕಾರಿಣೀಂ
ಸದಾ ಚ ಭರ್ತುಃ ಪ್ರತಿಕೂಲವಾದಿನೀಮ್|
13011011c ಪರಸ್ಯ ವೇಶ್ಮಾಭಿರತಾಮಲಜ್ಜಾಮ್
ಏವಂವಿಧಾಂ ಸ್ತ್ರೀಂ ಪರಿವರ್ಜಯಾಮಿ||
ಮನೆಯಲ್ಲಿ ಸುತ್ತಲೂ ಬಿದ್ದಿರುವ ಪಾತ್ರೆ-ಪದಾರ್ಥಗಳನ್ನು ಸರಿಯಾದ ಸ್ಥಳಗಳಲ್ಲಿ ಇಡದೇ ಇರುವವಳನ್ನೂ, ವಿವೇಚಿಸದೇ ಕಾರ್ಯಮಾಡುವವಳನ್ನೂ, ಯಾವಾಗಲೂ ಪತಿಗೆ ಪ್ರತಿಕೂಲವಾಗಿ ಮಾತನಾಡುವವಳನ್ನೂ, ಇತರರ ಮನೆಬಾಗಿಲಿನಲ್ಲಿಯೇ ಇರಲು ಆಸಕ್ತಳಾಗಿರುವವಳನ್ನೂ, ನಾಚಿಕೆ ಬಿಟ್ಟವಳನ್ನೂ ನಾನು ಪರಿತ್ಯಾಗಮಾಡುತ್ತೇನೆ.
13011012a ಲೋಲಾಮಚೋಕ್ಷಾಮವಲೇಹಿನೀಂ ಚ
ವ್ಯಪೇತಧೈರ್ಯಾಂ ಕಲಹಪ್ರಿಯಾಂ ಚ|
13011012c ನಿದ್ರಾಭಿಭೂತಾಂ ಸತತಂ ಶಯಾನಾಮ್
ಏವಂವಿಧಾಂ ಸ್ತ್ರೀಂ ಪರಿವರ್ಜಯಾಮಿ||
ದಯಾರಹಿತಳೂ, ಪಾಪಿಯೂ, ಕುರೂಪಿಯೂ, ಧೈರ್ಯವಿಲ್ಲದವಳೂ, ಜಗಳಗಂಟಿಯೂ, ತೂಕಡಿಸುವವಳೂ ಮತ್ತು ಯಾವಾಗಲೂ ಮಲಗಿರುವವಳನ್ನು ನಾನು ಪರಿತ್ಯಜಿಸುತ್ತೇನೆ.
13011013a ಸತ್ಯಾಸು ನಿತ್ಯಂ ಪ್ರಿಯದರ್ಶನಾಸು
ಸೌಭಾಗ್ಯಯುಕ್ತಾಸು ಗುಣಾನ್ವಿತಾಸು|
13011013c ವಸಾಮಿ ನಾರೀಷು ಪತಿವ್ರತಾಸು
ಕಲ್ಯಾಣಶೀಲಾಸು ವಿಭೂಷಿತಾಸು||
ನಿತ್ಯವೂ ಸತ್ಯವನ್ನೇ ಹೇಳುವ, ಪ್ರಿಯದರ್ಶಿನಿಯರಾದ, ಸೌಭಾಗ್ಯವತಿಯರಾದ, ಗುಣಾನ್ವಿತರಾದ, ಪತಿವ್ರತೆಯರಾದ, ಕಲ್ಯಾಣಶೀಲರಾದ ಮತ್ತು ವಿಭೂಷಿತೆಯರಾದ ನಾರಿಗಳಲ್ಲಿ ನಾನು ವಾಸಿಸುತ್ತೇನೆ.
13011014a ಯಾನೇಷು ಕನ್ಯಾಸು ವಿಭೂಷಣೇಷು
ಯಜ್ಞೇಷು ಮೇಘೇಷು ಚ ವೃಷ್ಟಿಮತ್ಸು|
13011014c ವಸಾಮಿ ಫುಲ್ಲಾಸು ಚ ಪದ್ಮಿನೀಷು
ನಕ್ಷತ್ರವೀಥೀಷು ಚ ಶಾರದೀಷು||
ಯಾನಗಳಲ್ಲಿ, ಕನ್ಯೆಯರಲ್ಲಿ, ವಿಭೂಷಣಗಳಲ್ಲಿ, ಯಜ್ಞಗಳಲ್ಲಿ, ಮಳೆಸುರಿಸುವ ಮೇಘಗಳಲ್ಲಿ, ಅರಳಿದ ಕಮಲಗಳಲ್ಲಿ, ಶರತ್ಕಾಲದ ನಕ್ಷತ್ರಪಂಕ್ತಿಗಳಲ್ಲಿ ನಾನು ವಾಸಿಸುತ್ತೇನೆ.
13011015a ಶೈಲೇಷು ಗೋಷ್ಠೇಷು ತಥಾ ವನೇಷು
ಸರಃಸು ಫುಲ್ಲೋತ್ಪಲಪಂಕಜೇಷು|
13011015c ನದೀಷು ಹಂಸಸ್ವನನಾದಿತಾಸು
ಕ್ರೌಂಚಾವಘುಷ್ಟಸ್ವರಶೋಭಿತಾಸು||
13011016a ವಿಸ್ತೀರ್ಣಕೂಲಹ್ರದಶೋಭಿತಾಸು
ತಪಸ್ವಿಸಿದ್ಧದ್ವಿಜಸೇವಿತಾಸು|
13011016c ವಸಾಮಿ ನಿತ್ಯಂ ಸುಬಹೂದಕಾಸು
ಸಿಂಹೈರ್ಗಜೈಶ್ಚಾಕುಲಿತೋದಕಾಸು|
ಶೈಲಗಳಲ್ಲಿ, ಗೋಶಾಲೆಗಳಲ್ಲಿ, ವನಗಳಲ್ಲಿ, ಅರಳಿರುವ ಕನ್ನೈದಿಲೆ-ಕಮಲಗಳಿಂದ ಕೂಡಿದ ಸರೋವರಗಳಲ್ಲಿ, ಹಂಸಸ್ವನನಾದದಿಂದ ಮತ್ತು ಕ್ರೌಂಚಪಕ್ಷಿಗಳ ಸ್ವರಗಳಿಂದ ಶೋಭಿತವಾದ ಹಾಗೂ ದಡಗಳಲ್ಲಿ ದಟ್ಟವಾಗಿ ಬೆಳೆದ ವೃಕ್ಷಗಳಿಂದ ಶೋಭಿಸುವ ನದಿಗಳಲ್ಲಿ, ತಪಸ್ವಿ-ಸಿದ್ಧ-ದ್ವಿಜರು ಸೇವಿಸುವ ಮತ್ತು ಸಿಂಹ-ಗಜಗಳಿಂದ ಅಲ್ಲೋಲಕಲ್ಲೋಲಗೊಳ್ಳುವ ಜಲಪೂರ್ಣ ನದಿಗಳಲ್ಲಿ ನಿತ್ಯವೂ ನಾನು ವಾಸಿಸುತ್ತೇನೆ.
13011016e ಮತ್ತೇ ಗಜೇ ಗೋವೃಷಭೇ ನರೇಂದ್ರೇ
ಸಿಂಹಾಸನೇ ಸತ್ಪುರುಷೇ ಚ ನಿತ್ಯಮ್||
13011017a ಯಸ್ಮಿನ್ಗೃಹೇ ಹೂಯತೇ ಹವ್ಯವಾಹೋ
ಗೋಬ್ರಾಹ್ಮಣಶ್ಚಾರ್ಚ್ಯತೇ ದೇವತಾಶ್ಚ|
13011017c ಕಾಲೇ ಚ ಪುಷ್ಪೈರ್ಬಲಯಃ ಕ್ರಿಯಂತೇ
ತಸ್ಮಿನ್ಗೃಹೇ ನಿತ್ಯಮುಪೈಮಿ ವಾಸಮ್||
ಮದಿಸಿದ ಆನೆಯಲ್ಲಿಯೂ, ಹೋರಿಯಲ್ಲಿಯೂ, ನರೇಂದ್ರನಲ್ಲಿಯೂ, ಸಿಂಹಾಸನದಲ್ಲಿಯೂ, ಸತ್ಪುರುಷನಲ್ಲಿಯೂ ನಾನು ನಿತ್ಯ ವಾಸಮಾಡುತ್ತೇನೆ. ಯಾರ ಮನೆಯಲ್ಲಿ ಹವ್ಯವಾಹನನಲ್ಲಿ ಹೋಮವು ನಡೆಯುತ್ತದೆಯೋ, ಗೋ-ಬ್ರಾಹ್ಮಣ-ದೇವತೆಗಳ ಅರ್ಚನೆಯು ನಡೆಯುತ್ತದೆಯೋ, ಕಾಲಗಳಲ್ಲಿ ದೇವತೆಗಳಿಗೆ ಪುಷ್ಪಬಲಿಯನ್ನು ನೀಡುತ್ತಾರೋ ಆ ಗೃಹದಲ್ಲಿ ನಾನು ನಿತ್ಯವೂ ವಾಸಮಾಡಿಕೊಂಡಿರುತ್ತೇನೆ.
13011018a ಸ್ವಾಧ್ಯಾಯನಿತ್ಯೇಷು ದ್ವಿಜೇಷು ನಿತ್ಯಂ
ಕ್ಷತ್ರೇ ಚ ಧರ್ಮಾಭಿರತೇ ಸದೈವ|
13011018c ವೈಶ್ಯೇ ಚ ಕೃಷ್ಯಾಭಿರತೇ ವಸಾಮಿ
ಶೂದ್ರೇ ಚ ಶುಶ್ರೂಷಣನಿತ್ಯಯುಕ್ತೇ||
ನಿತ್ಯವೂ ಸ್ವಾಧ್ಯಾಯನಿರತರಾಗಿರುವ ದ್ವಿಜರಲ್ಲಿ, ಸದೈವ ಧರ್ಮಾಭಿರತನಾಗಿರುವ ಕ್ಷತ್ರಿಯನಲ್ಲಿ, ಕೃಷಿಯಲ್ಲಿ ನಿರತನಾಗಿರುವ ವೈಶ್ಯನಲ್ಲಿ ಮತ್ತು ನಿತ್ಯವೂ ಶುಶ್ರೂಷೆಯಲ್ಲಿ ನಿರತನಾಗಿರುವ ಶೂದ್ರ ಇವರಲ್ಲಿ ನಾನು ನಿತ್ಯವೂ ವಾಸಿಸುತ್ತೇನೆ.
13011019a ನಾರಾಯಣೇ ತ್ವೇಕಮನಾ ವಸಾಮಿ
ಸರ್ವೇಣ ಭಾವೇನ ಶರೀರಭೂತಾ|
13011019c ತಸ್ಮಿನ್ ಹಿ ಧರ್ಮಃ ಸುಮಹಾನ್ನಿವಿಷ್ಟೋ
ಬ್ರಹ್ಮಣ್ಯತಾ ಚಾತ್ರ ತಥಾ ಪ್ರಿಯತ್ವಮ್||
ಏಕಮನಸ್ಕಳಾಗಿ ಸರ್ವಭಾವದಿಂದ ಶರೀರವನ್ನು ತಾಳಿ ನಾನು ನಾರಾಯಣನಲ್ಲಿ ವಾಸಿಸುತ್ತೇನೆ. ಏಕೆಂದರೆ ಅವನಲ್ಲಿಯೇ ಮಹಾಧರ್ಮವು ಸನ್ನಿಹಿತವಾಗಿದೆ. ಅವನಲ್ಲಿ ಬ್ರಾಹ್ಮಣ್ಯತೆಯಿದೆ. ಅವನು ಸರ್ವರಿಗೂ ಪ್ರಿಯನಾದವನು.
13011020a ನಾಹಂ ಶರೀರೇಣ ವಸಾಮಿ ದೇವಿ
ನೈವಂ ಮಯಾ ಶಕ್ಯಮಿಹಾಭಿಧಾತುಮ್|
13011020c ಯಸ್ಮಿಂಸ್ತು ಭಾವೇನ ವಸಾಮಿ ಪುಂಸಿ
ಸ ವರ್ಧತೇ ಧರ್ಮಯಶೋರ್ಥಕಾಮೈಃ||
ದೇವೀ! ನಾರಾಯಣನ ಹೊರತಾಗಿ ಬೇರೆ ಎಲ್ಲಿಯೂ ನಾನು ಶರೀರಿಯಾಗಿ ವಾಸಿಸುವುದಿಲ್ಲ. ಇದೇ ರೂಪದಲ್ಲಿ ನಾನು ಬೇರೆ ಯಾವ ಸ್ಥಳದಲ್ಲಿ ಇರಲೂ ಸಾಧ್ಯವಿಲ್ಲ. ನಾನು ಯಾವ ಪುರುಷನಲ್ಲಿ ಭಾವನಾ ಮಾತ್ರದಿಂದ ನೆಲೆಸಿರುವೆನೋ ಅವನು ಧರ್ಮ-ಯಶಸ್ಸು-ಕಾಮಗಳಿಂದ ವೃದ್ಧಿಸುವನು.””
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರೀರುಕ್ಮಿಣೀಸಂವಾದೇ ಏಕದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರೀರುಕ್ಮಿಣೀಸಂವಾದ ಎನ್ನುವ ಹನ್ನೊಂದನೇ ಅಧ್ಯಾಯವು.
[1] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಅಕ್ರೋಧನೇ ದೇವಪರೇ ಕೃತಜ್ಞೇ ಜಿತೇಂದ್ರಿಯೇ ನಿತ್ಯಮುದೀರ್ಣಸತ್ಯೇ|
[2] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಸ್ವಧರ್ಮಶೀಲೇಷು ಚ ಧರ್ಮವಿತ್ಸು ವೃದ್ಧೋಪಸೇವಾನಿರತೇ ಚ ದಾಂತೇ| ಕೃತಾತ್ಮನಿ ಕ್ಷಾಂತಿಪರೇ ಸಮರ್ಥೇ ಕ್ಷಾಂತಾಸು ದಾಂತಾಸು ತಥಾಬಲಾಸು| ಸತ್ಯಸ್ವಭಾವಾರ್ಜವಸಂಯುತಾಸು ವಸಾಮಿ ದೇವದ್ವಿಜಪೂಜಿಕಾಸು||