010010000 ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ |
010010000 ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇತ್||
ನರೋತ್ತಮರಾದ ನಾರಾಯಣ ಮತ್ತು ನರ ಹಾಗೂ ದೇವಿ ಸರಸ್ವತಿಗೆ ನಮಸ್ಕರಿಸಿ, ಜಯವನ್ನು ಪಠಿಸಬೇಕು.
01001001A ಲೋಮಹರ್ಷಣಪುತ್ರ ಉಗ್ರಶ್ರವಾಃ ಸೂತಃ ಪೌರಾಣಿಕೋ
ನೈಮಿಷಾರಣ್ಯೇ ಶೌನಕಸ್ಯ ಕುಲಪತೇರ್ದ್ವಾದಶವಾರ್ಷಿಕೇ
ಸತ್ರೇ||
01001002a ಸಮಾಸೀನಾನಭ್ಯಗಚ್ಛದ್ ಬ್ರಹ್ಮರ್ಷೀನ್ ಸಂಶಿತವ್ರತಾನ್ |
01001002c ವಿನಯಾವನತೋ ಭೂತ್ವಾ ಕದಾಚಿತ್ ಸೂತನಂದನಃ ||
ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ಸುಖಾಸೀನರಾಗಿ ಕುಳಿತಿದ್ದ ಸಂಶಿತವ್ರತ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣಪುತ್ರ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು.
01001003a ತಮಾಶ್ರಮಮನುಪ್ರಾಪ್ತಂ ನೈಮಿಷಾರಣ್ಯವಾಸಿನಃ |
01001003c ಚಿತ್ರಾಃ ಶ್ರೋತುಂ ಕಥಾಸ್ತತ್ರ ಪರಿವವ್ರುಸ್ತಪಸ್ವಿನಃ ||
ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು.
01001004a ಅಭಿವಾದ್ಯ ಮುನೀಂಸ್ತಾಂಸ್ತು ಸರ್ವಾನೇವ ಕೃತಾಂಜಲಿಃ |
01001004c ಅಪೃಚ್ಛತ್ ಸ ತಪೋವೃದ್ಧಿಂ ಸದ್ಭಿಶ್ಚೈವಾಭಿನಂದಿತಃ ||
ಅಭಿನಂದಿತನಾದ ಅವನು ಕೈ ಜೋಡಿಸಿ ಮುನಿಗಳೆಲ್ಲರಿಗೂ ಅಭಿವಂದಿಸಿ ಅವರ ತಪೋವೃದ್ಧಿಯ ಕುರಿತು ವಿಚಾರಿಸಿದನು.
01001005a ಅಥ ತೇಷೂಪವಿಷ್ಟೇಷು ಸರ್ವೇಷ್ವೇವ ತಪಸ್ವಿಷು |
01001005c ನಿರ್ದಿಷ್ಟಮಾಸನಂ ಭೇಜೇ ವಿನಯಾಲ್ಲೋಮಹರ್ಷಣಿಃ ||
ಸರ್ವ ತಪಸ್ವಿಗಳೂ ಕುಳಿತುಕೊಂಡನಂತರ, ಲೋಮಹರ್ಷಣಿಯು ತನಗೆ ತೋರಿಸಿದ ಆಸನದಲ್ಲಿ ವಿನಯದಿಂದ ಕುಳಿತುಕೊಂಡನು.
01001006a ಸುಖಾಸೀನಂ ತತಸ್ತಂತು ವಿಶ್ರಾಂತಮುಪಲಕ್ಷ್ಯ ಚ |
01001006c ಅಥಾಪೃಚ್ಛದೃಷಿಸ್ತತ್ರ ಕಶ್ಚಿತ್ ಪ್ರಸ್ತಾವಯನ್ ಕಥಾಃ ||
ಸೂತನು ಸುಖಾಸೀನನಾಗಿ ವಿಶ್ರಾಂತನಾಗಿದ್ದುದನ್ನು ನೋಡಿದ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ ಪ್ರಶ್ನೆಯೊಂದನ್ನು ಕೇಳಿದನು:
01001007a ಕುತ ಆಗಮ್ಯತೇ ಸೌತೇ ಕ್ವ ಚಾಯಂ ವಿಹೃತಸ್ತ್ವಯಾ |
01001007c ಕಾಲಃ ಕಮಲಪತ್ರಾಕ್ಷ ಶಂಸೈತತ್ ಪೃಚ್ಛತೋ ಮಮ ||
“ಸೌತಿ! ನೀನು ಎಲ್ಲಿಂದ ಆಗಮಿಸುತ್ತಿದ್ದೀಯೆ? ಇಲ್ಲಿಗೆ ಬರುವ ಮೊದಲು ನಿನ್ನ ಸಮಯವನ್ನು ಎಲ್ಲಿ ಕಳೆದೆ? ಕಮಲಪತ್ರಾಕ್ಷ! ನಾನು ಕೇಳಿದುದರ ಕುರಿತು ಹೇಳು.”
01001008 ಸೂತ ಉವಾಚ
01001008a ಜನಮೇಜಯಸ್ಯ ರಾಜರ್ಷೇಃ ಸರ್ಪಸತ್ರೇ ಮಹಾತ್ಮನಃ |
01001008c ಸಮೀಪೇ ಪಾರ್ಥಿವೇಂದ್ರಸ್ಯ ಸಮ್ಯಕ್ ಪಾರಿಕ್ಷಿತಸ್ಯ ಚ ||
01001009a ಕೃಷ್ಣದ್ವೈಪಾಯನಪ್ರೋಕ್ತಾಃ ಸುಪುಣ್ಯಾ ವಿವಿಧಾಃ ಕಥಾಃ |
01001009c ಕಥಿತಾಶ್ಚಾಪಿ ವಿಧಿವದ್ಯಾ ವೈಶಂಪಾಯನೇನ ವೈ ||
01001010a ಶ್ರುತ್ವಾಹಂ ತಾ ವಿಚಿತ್ರಾರ್ಥಾ ಮಹಾಭಾರತಸಂಶ್ರಿತಾಃ |
01001010c ಬಹೂನಿ ಸಂಪರಿಕ್ರಮ್ಯ ತೀರ್ಥಾನ್ಯಾಯತನಾನಿ ಚ ||
01001011a ಸಮಂತಪಂಚಕಂ ನಾಮ ಪುಣ್ಯಂ ದ್ವಿಜನಿಸೇವಿತಂ |
01001011c ಗತವಾನಸ್ಮಿ ತಂ ದೇಶಂ ಯುದ್ಧಂ ಯತ್ರಾಭವತ್ ಪುರಾ |
01001011e ಪಾಂಡವಾನಾಂ ಕುರೂಣಾಂ ಚ ಸರ್ವೇಷಾಂ ಚ ಮಹೀಕ್ಷಿತಾಂ||
ಸೂತನು ಹೇಳಿದನು: “ಪಾರಿಕ್ಷಿತ, ಪಾರ್ಥಿವೇಂದ್ರ ಮಹಾತ್ಮ ರಾಜರ್ಷಿ ಜನಮೇಜಯನ ಸರ್ಪಸತ್ರದಲ್ಲಿ ಕೃಷ್ಣದ್ವೈಪಾಯನಪ್ರೋಕ್ತ, ವಿವಿಧ ಕಥೆಗಳನ್ನೂ ವಿಚಿತ್ರಾರ್ಥಗಳನ್ನೂ ಒಳಗೊಂಡ ಪುಣ್ಯಕಾರಕ ಮಹಾಭಾರತ ಕಥೆಯನ್ನು ವೈಶಂಪಾಯನನು ವಿಧಿವತ್ತಾಗಿ ಹೇಳಿದುದನ್ನು ಕೇಳಿದೆ. ನಂತರ ನಾನು ಹಲವಾರು ತೀರ್ಥ ಕ್ಷೇತ್ರಗಳನ್ನು ಸುತ್ತಾಡಿ, ಹಿಂದೆ ಕುರು-ಪಾಂಡವರು ಮತ್ತು ಸರ್ವ ಮಹೀಕ್ಷಿತರು ಯುದ್ಧ ಮಾಡಿದ, ದ್ವಿಜಸಂಸೇವಿತ ಸಮಂತಪಂಚಕ ಎಂಬ ಹೆಸರಿನ ಪುಣ್ಯ ಪ್ರದೇಶಕ್ಕೆ ಹೋದೆ.
01001012a ದಿದೃಕ್ಷುರಾಗತಸ್ತಸ್ಮಾತ್ ಸಮೀಪಂ ಭವತಾಮಿಹ |
01001012c ಆಯುಷ್ಮಂತಃ ಸರ್ವ ಏವ ಬ್ರಹ್ಮಭೂತಾ ಹಿ ಮೇ ಮತಾಃ ||
01001013a ಅಸ್ಮಿನ್ ಯಜ್ಞೇ ಮಹಾಭಾಗಾಃ ಸೂರ್ಯಪಾವಕವರ್ಚಸಃ |
ಅಲ್ಲಿಂದ ನಾನು ಈ ಯಜ್ಞದಲ್ಲಿ ಭಾಗವಹಿಸಿರುವ ಮಹಾಭಾಗರೂ ಸೂರ್ಯಪಾವಕವರ್ಚಸರೂ ಮತ್ತು ನನ್ನ ಮತದಂತೆ ಬ್ರಹ್ಮ ಸಂಭೂತರೂ ಆದ ನಿಮ್ಮೆಲ್ಲರನ್ನೂ ನೋಡಲು ಬಂದಿದ್ದೇನೆ.
01001013c ಕೃತಾಭಿಷೇಕಾಃ ಶುಚಯಃ ಕೃತಜಪ್ಯಾಹುತಾಗ್ನಯಃ |
01001013e ಭವಂತ ಆಸತೇ ಸ್ವಸ್ಥಾ ಬ್ರವೀಮಿ ಕಿಮಹಂ ದ್ವಿಜಾಃ ||
01001014a ಪುರಾಣಸಂಶ್ರಿತಾಃ ಪುಣ್ಯಾಃ ಕಥಾ ವಾ ಧರ್ಮಸಂಶ್ರಿತಾಃ |
01001014c ಇತಿವೃತ್ತಂ ನರೇಂದ್ರಾಣಾಮೃಷೀಣಾಂ ಚ ಮಹಾತ್ಮನಾಂ ||
ದ್ವಿಜರೇ! ಸ್ನಾನ ಮಾಡಿ ಶುಚಿರ್ಭೂತರಾಗಿ ಜಪ-ಅಗ್ನಿಹೋತ್ರಗಳನ್ನು ಮುಗಿಸಿ ಕುಳಿತ ನಿಮಗೆ ನಾನು ಏನು ಹೇಳಲಿ? ಧರ್ಮಸಂಶ್ರಿತ ಪುರಾಣ ಕಥೆಗಳನ್ನು ಹೇಳಲೇ ಅಥವಾ ಮಹಾತ್ಮ ಋಷಿ-ನರೇಂದ್ರರ ಸಂಶ್ರಿತ ವೃತ್ತಾಂತವನ್ನು ಹೇಳಲೇ?”
01001015 ಋಷಯ ಊಚುಃ
01001015a ದ್ವೈಪಾಯನೇನ ಯತ್ಪ್ರೋಕ್ತಂ ಪುರಾಣಂ ಪರಮರ್ಷಿಣಾ |
01001015c ಸುರೈರ್ಬ್ರಹ್ಮರ್ಷಿಭಿಶ್ಚೈವ ಶ್ರುತ್ವಾ ಯದಭಿಪೂಜಿತಂ ||
01001016a vಸ್ಯಾಖ್ಯಾನವರಿಷ್ಠಸ್ಯ ವಿಚಿತ್ರಪದಪರ್ವಣಃ |
01001016c ಸೂಕ್ಷ್ಮಾರ್ಥನ್ಯಾಯಯುಕ್ತಸ್ಯ ವೇದಾರ್ಥೈರ್ಭೂಷಿತಸ್ಯ ಚ ||
01001017a ಭಾರತಸ್ಯೇತಿಹಾಸಸ್ಯ ಪುಣ್ಯಾಂ ಗ್ರಂಥಾರ್ಥಸಂಯುತಾಂ |
01001017c ಸಂಸ್ಕಾರೋಪಗತಾಂ ಬ್ರಾಹ್ಮೀಂ ನಾನಾಶಾಸ್ತ್ರೋಪಬೃಂಹಿತಾಂ||
01001018a ಜನಮೇಜಯಸ್ಯ ಯಾಂ ರಾಜ್ಞೋ ವೈಶಂಪಾಯನ ಉಕ್ತವಾನ್|
01001018c ಯಥಾವತ್ ಸ ಋಷಿಸ್ತುಷ್ಟ್ಯಾ ಸತ್ರೇ ದ್ವೈಪಾಯನಾಜ್ಞಯಾ||
01001019a ವೇದೈಶ್ಚತುರ್ಭಿಃ ಸಮಿತಾಂ ವ್ಯಾಸಸ್ಯಾದ್ಭುತಕರ್ಮಣಃ |
01001019c ಸಂಹಿತಾಂ ಶ್ರೋತುಮಿಚ್ಛಾಮೋ ಧರ್ಮ್ಯಾಂ ಪಾಪಭಯಾಪಹಾಂ||
ಋಷಿಗಳು ಹೇಳಿದರು: “ಪರಮ ಋಷಿ ದ್ವೈಪಾಯನಪ್ರೋಕ್ತ, ಸುರಬ್ರಹ್ಮರ್ಷಿಗಳೂ ಕೇಳಿ ಪೂಜಿಸುವ, ವಿಚಿತ್ರ ಪದ ಪರ್ವಗಳಿಂದೊಡಗೂಡಿದ, ಆಖ್ಯಾನಗಳಲ್ಲೇ ವರಿಷ್ಠ, ಸೂಕ್ಷ್ಮಾರ್ಥ-ನ್ಯಾಯಯುಕ್ತ, ವೇದಾರ್ಥಭೂಷಿತ, ಭಾರತ ಇತಿಹಾಸದೊಂದಿಗೆ ಪುಣ್ಯಕರ ಗ್ರಂಥಾರ್ಥಸಂಯುತ, ಸಂಸ್ಕಾರೋಪಗತ, ನಾನಾ ಬ್ರಾಹ್ಮೀ ಶಾಸ್ತ್ರಗಳನ್ನೊಡಗೂಡಿದ, ರಾಜ ಜನಮೇಜಯನಿಗೆ ವೈಶಂಪಾಯನನು ಹೇಳಿದ, ಚತುರ್ವೇದಗಳ ಸಂಹಿತೆ, ವ್ಯಾಸನ ಅದ್ಭುತ ಕೃತಿ, ಪಾಪ-ಭಯಗಳನ್ನು ಹೋಗಲಾಡಿಸುವ, ಆ ಧರ್ಮ ಸಂಹಿತೆ ಪುರಾಣವನ್ನು ಕೇಳಲು ಬಯಸುತ್ತೇವೆ.”
01001020 ಸೂತ ಉವಾಚ
01001020a ಆದ್ಯಂ ಪುರುಷಮೀಶಾನಂ ಪುರುಹೂತಂ ಪುರುಷ್ಠುತಂ |
01001020c ಋತಮೇಕಾಕ್ಷರಂ ಬ್ರಹ್ಮ ವ್ಯಕ್ತಾವ್ಯಕ್ತಂ ಸನಾತನಂ ||
01001021a ಅಸಚ್ಚ ಸಚ್ಚೈವ ಚ ಯದ್ ವಿಶ್ವಂ ಸದಸತಃ ಪರಂ |
01001021c ಪರಾವರಾಣಾಂ ಸ್ರಷ್ಟಾರಂ ಪುರಾಣಂ ಪರಮವ್ಯಯಂ ||
01001022a ಮಂಗಲ್ಯಂ ಮಂಗಲಂ ವಿಷ್ಣುಂ ವರೇಣ್ಯಮನಘಂ ಶುಚಿಂ |
01001022c ನಮಸ್ಕೃತ್ಯ ಹೃಷೀಕೇಶಂ ಚರಾಚರಗುರುಂ ಹರಿಂ ||
01001023a ಮಹರ್ಷೇಃ ಪೂಜಿತಸ್ಯೇಹ ಸರ್ವಲೋಕೇ ಮಹಾತ್ಮನಃ |
01001023c ಪ್ರವಕ್ಷ್ಯಾಮಿ ಮತಂ ಕೃತ್ಸ್ನಂ ವ್ಯಾಸಸ್ಯಾಮಿತತೇಜಸಃ ||
ಸೂತನು ಹೇಳಿದನು: “ಆದ್ಯನೂ, ಪುರುಷನೂ, ಈಶನೂ, ಪುರುಹೂತನೂ, ಪುರುಷ್ಠುತನೂ, ಋತನೂ, ಏಕಾಕ್ಷರನೂ, ಬ್ರಹ್ಮನೂ, ವ್ಯಕ್ತಾವ್ಯಕ್ತನೂ, ಸನಾತನನೂ, ಅಸಚ್ಚ ಸಚ್ಚನೂ, ವಿಶ್ವನೂ, ಸದಸತನೂ, ಪರಮನೂ, ಪರಾವರಗಳ ಸೃಷ್ಟನೂ, ಪುರಾಣನೂ, ಪರಮ ಅವ್ಯಯನೂ, ಮಂಗಲಗಳಲ್ಲಿ ಮಂಗಲಕರನೂ, ವಿಷ್ಣುವೂ, ವರೇಣ್ಯನೂ, ಅನಘನೂ, ಶುಚಿಯೂ ಆದ ಚರಾಚರಗಳ ಗುರು, ಹರಿ ಹೃಷೀಕೇಶನಿಗೆ ನಮಸ್ಕರಿಸಿ, ಸರ್ವಲೋಕಪೂಜಿತ ಮಹಾತ್ಮ ಮಹರ್ಷಿ ಅಮಿತ ತೇಜಸ ವ್ಯಾಸನ ಉತ್ಕೃಷ್ಟ ಕೃತಿಯನ್ನು ಹೇಳಲು ಪ್ರಾರಂಭಿಸುತ್ತೇನೆ.
01001024a ಆಚಖ್ಯುಃ ಕವಯಃ ಕೇಚಿತ್ ಸಂಪ್ರತ್ಯಾಚಕ್ಷತೇ ಪರೇ |
01001024c ಆಖ್ಯಾಸ್ಯಂತಿ ತಥೈವಾನ್ಯೇ ಇತಿಹಾಸಮಿಮಂ ಭುವಿ ||
ಈ ಹಿಂದೆ ಎಷ್ಟೋ ಕವಿಗಳು ಇದನ್ನು ಬಹಳಷ್ಟು ಬಾರಿ ಹೇಳಿದ್ದಾರೆ. ಅದರಂತೆಯೇ ಈ ಭುವಿಯಲ್ಲಿ ಇನ್ನು ಮುಂದೆಯೂ ಅನ್ಯರು ಈ ಇತಿಹಾಸವನ್ನು ಹೇಳುತ್ತಾರೆ.
01001025a ಇದಂ ತು ತ್ರಿಷು ಲೋಕೇಷು ಮಹಜ್ಞಾನಂ ಪ್ರತಿಷ್ಠಿತಂ |
01001025c ವಿಸ್ತರೈಶ್ಚ ಸಮಾಸೈಶ್ಚ ಧಾರ್ಯತೇ ಯದ್ ದ್ವಿಜಾತಿಭಿಃ ||
ಮೂರು ಲೋಕಗಳಲ್ಲಿಯೂ ಇದು ಮಹಾಜ್ಞಾನವೆಂದು ಪ್ರತಿಷ್ಠಿತವಾಗಿದೆ. ವಿಸ್ತಾರ ಮತ್ತು ಸಮಾಸಗಳಲ್ಲಿ ದ್ವಿಜರು ಇದನ್ನು ಉತ್ತಮವಾದುದೆಂದು ಪರಿಗ್ರಹಿಸುತ್ತಾರೆ.
01001026a ಅಲಂಕೃತಂ ಶುಭೈಃ ಶಬ್ದೈಃ ಸಮಯೈರ್ದಿವ್ಯಮಾನುಷೈಃ |
01001026c ಚಂದೋವೃತ್ತೈಶ್ಚ ವಿವಿಧೈರನ್ವಿತಂ ವಿದುಷಾಂ ಪ್ರಿಯಂ ||
ಇದು ಶುಭ ಶಬ್ಧಗಳಿಂದ ಅಲಂಕೃತವಾಗಿದೆ. ಮನುಷ್ಯ ಮತ್ತು ದೇವ ವಿಷಯಗಳೆರಡನ್ನೂ ಒಳಗೊಂಡಿದೆ. ಛಂದ, ಆವೃತ್ತ ಮುಂತಾದ ವಿವಿಧತೆಗಳನ್ನು ಹೊಂದಿದ್ದು ವಿದುಷರಿಗೆ ಪ್ರಿಯವಾದದ್ದಾಗಿದೆ.
01001027a ನಿಷ್ಪ್ರಭೇಽಸ್ಮಿನ್ ನಿರಾಲೋಕೇ ಸರ್ವತಸ್ತಮಸಾವೃತೇ |
01001027c ಬೃಹದಂಡಮಭೂದೇಕಂ ಪ್ರಜಾನಾಂ ಬೀಜಮಕ್ಷಯಂ ||
ನಿಷ್ಪ್ರಭೆಯೂ ನಿರಾಲೋಕವೂ ಆಗಿದ್ದಾಗ ಸರ್ವವೂ ಕತ್ತಲೆಯಿಂದ ಮುಚ್ಚಿಕೊಂಡಿದ್ದ, ಎಲ್ಲವಕ್ಕೂ ಅಕ್ಷಯ ಬೀಜವಾದ ಬೃಹತ್ ಅಂಡವೊಂದಿತ್ತು.
01001028a ಯುಗಸ್ಯಾದೌ ನಿಮಿತ್ತಂ ತನ್ಮಹದ್ದಿವ್ಯಂ ಪ್ರಚಕ್ಷತೇ |
01001028c ಯಸ್ಮಿಂಸ್ತತ್ ಶ್ರೂಯತೇ ಸತ್ಯಂ ಜ್ಯೋತಿರ್ಬ್ರಹ್ಮ ಸನಾತನಂ||
ಈ ದಿವ್ಯ ಮಹಾ ಅಂಡವೇ ಯುಗದ ಆದಿ ನಿಮಿತ್ತ ಎಂದು ಪರಿಗಣಿಸಲ್ಪಟ್ಟಿದೆ. ಎಲ್ಲವಕ್ಕೂ ಕಾರಣಹೇತುವಾದ ಇದನ್ನೇ ಸತ್ಯ, ಸನಾತನ ಜ್ಯೋತಿರ್ಬ್ರಹ್ಮ ಎಂದು ಹೇಳುತ್ತಾರೆ.
01001029a ಅದ್ಭುತಂ ಚಾಪ್ಯಚಿಂತ್ಯಂ ಚ ಸರ್ವತ್ರ ಸಮತಾಂ ಗತಂ |
01001029c ಅವ್ಯಕ್ತಂ ಕಾರಣಂ ಸೂಕ್ಷ್ಮಂ ಯತ್ತತ್ ಸದಸದಾತ್ಮಕಂ ||
ಅದ್ಭುತ, ಅಚಿಂತ್ಯ, ಮತ್ತು ಸರ್ವತ್ರ ಸಮನಾಗಿರುವ ಇದೇ ಇರುವ ಮತ್ತು ಇಲ್ಲದಿರುವ ಎಲ್ಲವಕ್ಕೂ ಅವ್ಯಕ್ತ ಸೂಕ್ಷ್ಮ ಕಾರಣ.
01001030a ಯಸ್ಮಾತ್ಪಿತಾಮಹೋ ಜಜ್ಞೇ ಪ್ರಭುರೇಕಃ ಪ್ರಜಾಪತಿಃ |
01001030c ಬ್ರಹ್ಮಾ ಸುರಗುರುಃ ಸ್ಥಾಣುರ್ಮನುಃ ಕಃ ಪರಮೇಷ್ಟ್ಯಥ ||
01001031a ಪ್ರಾಚೇತಸಸ್ತಥಾ ದಕ್ಷೋ ದಕ್ಷಪುತ್ರಾಶ್ಚ ಸಪ್ತ ಯೇ |
01001031c ತತಃ ಪ್ರಜಾನಾಂ ಪತಯಃ ಪ್ರಾಭವನ್ನೇಕವಿಂಶತಿಃ ||
ಇದರಿಂದಲೇ ಏಕೈಕ ಪ್ರಭು ಪ್ರಜಾಪತಿ ಪಿತಾಮಹ ಬ್ರಹ್ಮ, ಸುರಗುರು ಸ್ಥಾಣು, ಮನು, ಪರಮೇಷ್ಠಿ, ಪ್ರಾಚೇತಸ, ದಕ್ಷ, ದಕ್ಷನ ಏಳು ಮಕ್ಕಳು ಮತ್ತು ಇಪ್ಪತ್ತೊಂದು ಪ್ರಜಾಪತಿಗಳು ಹುಟ್ಟಿದರು.
01001032a ಪುರುಷಶ್ಚಾಪ್ರಮೇಯಾತ್ಮಾ ಯಂ ಸರ್ವಂ ಋಷಯೋ ವಿದುಃ|
01001032c ವಿಶ್ವೇದೇವಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ ||
ಇದರಿಂದಲೇ ಸರ್ವ ಋಷಿಗಳಿಗೂ ತಿಳಿದಿರುವ ಅಪ್ರಮೇಯಾತ್ಮ ಪುರುಷ, ವಿಶ್ವೇದೇವರು, ಆದಿತ್ಯರು, ವಸುಗಳು ಮತ್ತು ಅಶ್ವಿನಿ ದೇವತೆಗಳು ಕಾಣಿಸಿಕೊಂಡರು.
01001033a ಯಕ್ಷಾಃ ಸಾಧ್ಯಾಃ ಪಿಶಾಚಾಶ್ಚ ಗುಹ್ಯಕಾಃ ಪಿತರಸ್ತಥಾ |
01001033c ತತಃ ಪ್ರಸೂತಾ ವಿದ್ವಾಂಸಃ ಶಿಷ್ಟಾ ಬ್ರಹ್ಮರ್ಷಯೋಽಮಲಾಃ||
ನಂತರ ಯಕ್ಷ, ಸಾಧ್ಯ, ಪಿಶಾಚ, ಗುಹ್ಯಕ, ಪಿತೃಗಳು ಹಾಗೂ ವಿದ್ವಾಂಸ-ಶಿಷ್ಠ-ಅಮಲ ಬ್ರಹ್ಮರ್ಷಿಗಳು ಹುಟ್ಟಿದರು.
01001034a ರಾಜರ್ಷಯಶ್ಚ ಬಹವಃ ಸರ್ವೈಃ ಸಮುದಿತಾ ಗುಣೈಃ |
01001034c ಆಪೋ ದ್ಯೌಃ ಪೃಥಿವೀ ವಾಯುರಂತರಿಕ್ಷಂ ದಿಶಸ್ತಥಾ ||
ಅದೇರೀತಿ, ಬಹುಸಂಖ್ಯೆಯಲ್ಲಿ ಸರ್ವ ಗುಣ ಸಮುದಿತ ರಾಜರ್ಷಿಗಳೂ, ನಂತರ ನೀರು, ಆಕಾಶ, ಪೃಥ್ವಿ, ವಾಯು, ಅಂತರಿಕ್ಷ ಮತ್ತು ದಿಕ್ಕುಗಳೂ ಹುಟ್ಟಿದವು.
01001035a ಸಂವತ್ಸರರ್ತವೋ ಮಾಸಾಃ ಪಕ್ಷಾಹೋರಾತ್ರಯಃ ಕ್ರಮಾತ್|
01001035c ಯಚ್ಚಾನ್ಯದಪಿ ತತ್ ಸರ್ವಂ ಸಂಭೂತಂ ಲೋಕಸಾಕ್ಷಿಕಂ ||
ಇದರಿಂದಲೇ ಸಂವತ್ಸರ, ಮಾಸ, ಪಕ್ಷ ಮತ್ತು ಹಗಲು-ರಾತ್ರಿಗಳು ಹಾಗೂ ಈ ಲೋಕದಲ್ಲಿ ಕಂಡುಬರುವ ಸರ್ವವೂ ಕ್ರಮವಾಗಿ ಉದ್ಭವಿಸಿದವು.
01001036a ಯದಿದಂ ದೃಶ್ಯತೇ ಕಿಂಚಿದ್ ಭೂತಂ ಸ್ಥಾವರಜಂಗಮಂ |
01001036c ಪುನಃ ಸಂಕ್ಷಿಪ್ಯತೇ ಸರ್ವಂ ಜಗತ್ ಪ್ರಾಪ್ತೇ ಯುಗಕ್ಷಯೇ ||
ಈ ಜಗತ್ತಿನಲ್ಲಿ ಇರುವ ಮತ್ತು ಕಾಣುವ ಎಲ್ಲ ಸ್ಥಾವರ ಜಂಗಮಗಳೂ ಯುಗಕ್ಷಯದಲ್ಲಿ ಪುನಃ ಸಂಕ್ಷಿಪ್ತವಾಗುತ್ತವೆ.
01001037a ಯಥರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ |
01001037c ದೃಶ್ಯಂತೇ ತಾನಿ ತಾನ್ಯೇವ ತಥಾ ಭಾವಾ ಯುಗಾದಿಷು ||
ಋತುವಿನ ಪ್ರಾರಂಭದಲ್ಲಿ ಹೇಗೆ ನಾನಾ ರೂಪಲಕ್ಷಣಗಳು ಕಂಡು ಬಂದು ಅದರ ಜೊತೆಗೇ ನಾಶವಾಗುವವೋ ಹಾಗೆ ಯುಗದ ಆದಿಯಲ್ಲಿ ಕಂಡುಬರುವವು ಅದರ ಅಂತ್ಯದಲ್ಲಿ ನಾಶವಾಗುತ್ತವೆ.
01001038a ಏವಮೇತದನಾದ್ಯಂತಂ ಭೂತಸಂಹಾರಕಾರಕಂ |
01001038c ಅನಾದಿನಿಧನಂ ಲೋಕೇ ಚಕ್ರಂ ಸಂಪರಿವರ್ತತೇ ||
ಈ ರೀತಿ ಈ ಅನಾದಿನಿಧನ ಲೋಕದಲ್ಲಿ ಹುಟ್ಟು-ಸಂಹಾರದ ಚಕ್ರವು ಆದಿ ಅಂತ್ಯಗಳಿಲ್ಲದೆ ಸದಾ ತಿರುಗುತ್ತಿರುತ್ತದೆ.
01001039a ತ್ರಯಸ್ತ್ರಿಂಶತ್ಸಹಸ್ರಾಣಿ ತ್ರಯಸ್ತ್ರಿಂಶಚ್ಛತಾನಿ ಚ |
01001039c ತ್ರಯಸ್ತ್ರಿಂಶಚ್ಚ ದೇವಾನಾಂ ಸೃಷ್ಟಿಃ ಸಂಕ್ಷೇಪಲಕ್ಷಣಾ ||
ಸಂಕ್ಷಿಪ್ತವಾಗಿ ಹೇಳುವುದಾದರೆ, ಒಟ್ಟು ಮೂವತ್ತುಮೂರು ಲಕ್ಷ ಮೂವತ್ತುಮೂರು ಸಾವಿರ ಮೂವತ್ತುಮೂರು ನೂರು ದೇವತೆಗಳ ಸೃಷ್ಟಿಯಾಗಿದೆ.
01001040a ದಿವಸ್ಪುತ್ರೋ ಬೃಹದ್ಭಾನುಶ್ಚಕ್ಷುರಾತ್ಮಾ ವಿಭಾವಸುಃ |
01001040c ಸವಿತಾ ಚ ಋಚೀಕೋಽರ್ಕೋ ಭಾನುರಾಶಾವಹೋ ರವಿಃ ||
01001041a ಪುತ್ರಾ ವಿವಸ್ವತಃ ಸರ್ವೇ ಮಹ್ಯಸ್ತೇಷಾಂ ತಥಾವರಃ |
01001041c ದೇವಭ್ರಾಟ್ ತನಯಸ್ತಸ್ಯ ತಸ್ಮಾತ್ ಸುಭ್ರಾಢಿತಿ ಸ್ಮೃತಃ ||
ದಿವಸ್ಪುತ್ರ, ಬೃಹದ್ಭಾನು, ಚಕ್ಷು, ಆತ್ಮ, ವಿಭಾವಸು, ಸವಿತ, ಋಚಿಕ, ಅರ್ಕ, ಭಾನು, ಅಶಾವಹ, ರವಿ ಮೊದಲಾದ ಸರ್ವ ವಿವಸ್ವತರೂ ಕಾಣಿಸಿಕೊಂಡರು. ಅವರಲ್ಲಿ ಕೊನೆಯ ಮಹಾತ್ಮನು ದೇವತೆಗಳ ಅನುಗ್ರಹದಿಂದ ಲಭಿಸಿದ ದೇವಭ್ರಾತನೆಂಬ ಪುತ್ರನನ್ನೂ ಹಾಗೆಯೇ ದೇವಭ್ರಾತನು ಸುಭ್ರಾತನೆಂಬ ತನಯನನನ್ನೂ ಪಡೆದರು.
01001042a ಸುಭ್ರಾಜಸ್ತು ತ್ರಯಃ ಪುತ್ರಾಃ ಪ್ರಜಾವಂತೋ ಬಹುಶ್ರುತಾಃ|
01001042c ದಶಜ್ಯೋತಿಃ ಶತಜ್ಯೋತಿಃ ಸಹಸ್ರಜ್ಯೋತಿರಾತ್ಮವಾನ್ ||
ಸುಭ್ರಾತನು ದಶಜ್ಯೋತಿ, ಶತಜ್ಯೋತಿ ಮತ್ತು ಸಹಸ್ರಜ್ಯೋತಿ ಎನ್ನುವ ಮೂವರು ಪ್ರಜಾವಂತ, ಬಹುಶೃತ, ಆತ್ಮವಂತ ಪುತ್ರರನ್ನು ಪಡೆದನು.
01001043a ದಶ ಪುತ್ರಸಹಸ್ರಾಣಿ ದಶಜ್ಯೋತೇರ್ಮಹಾತ್ಮನಃ |
01001043c ತತೋ ದಶಗುಣಾಶ್ಚಾನ್ಯೇ ಶತಜ್ಯೋತೇರಿಹಾತ್ಮಜಾಃ ||
ಮಹಾತ್ಮ ದಶಜ್ಯೋತಿಯು ಹತ್ತುಸಾವಿರ ಪುತ್ರರನ್ನೂ, ಅದಕ್ಕೂ ಹತ್ತುಪಟ್ಟು ಪುತ್ರರನ್ನು ಶತಜ್ಯೋತಿಯೂ ಪಡೆದರು.
01001044a ಭೂಯಸ್ತತೋ ದಶಗುಣಾಃ ಸಹಸ್ರಜ್ಯೋತಿಷಃ ಸುತಾಃ |
01001044c ತೇಭ್ಯೋಽಯಂ ಕುರುವಂಶಶ್ಚ ಯದೂನಾಂ ಭರತಸ್ಯ ಚ ||
01001045a ಯಯಾತೀಕ್ಷ್ವಾಕುವಂಶಶ್ಚ ರಾಜರ್ಷೀಣಾಂ ಚ ಸರ್ವಶಃ |
01001045c ಸಂಭೂತಾ ಬಹವೋ ವಂಶಾ ಭೂತಸರ್ಗಾಃ ಸವಿಸ್ತರಾಃ ||
ಸಹಸ್ರಜ್ಯೋತಿಯು ಅವರಿಗಿಂತಲೂ ಹತ್ತುಪಟ್ಟು ಮಕ್ಕಳನ್ನು ಪಡೆದನು. ಇವರಲ್ಲಿಯೇ ಕುರು, ಯದು, ಭರತ, ಯಯಾತಿ, ಇಕ್ಷ್ವಾಕು ಮೊದಲಾದ ಸರ್ವ ರಾಜರ್ಷಿ ವಂಶಗಳು ಜನಿಸಿದವು ಮತ್ತು ಈ ವಂಶಗಳಿಂದ ಭೂಮಿಯನ್ನಾಳಿದ ಬಹಳಷ್ಟು ಸವಿಸ್ತಾರ ವಂಶಗಳು ಹುಟ್ಟಿದವು.
01001046a ಭೂತಸ್ಥಾನಾನಿ ಸರ್ವಾಣಿ ರಹಸ್ಯಂ ತ್ರಿವಿಧಂ ಚ ಯತ್ |
01001046c ವೇದಯೋಗಂ ಸವಿಜ್ಞಾನಂ ಧರ್ಮೋಽರ್ಥಃ ಕಾಮ ಏವ ಚ||
01001047a ಧರ್ಮಕಾಮಾರ್ಥಶಾಸ್ತ್ರಾಣಿ ಶಾಸ್ತ್ರಾಣಿ ವಿವಿಧಾನಿ ಚ |
01001047c ಲೋಕಯಾತ್ರಾವಿಧಾನಂ ಚ ಸಂಭೂತಂ ದೃಷ್ಟವಾನೃಷಿಃ ||
ಋಷಿಯು ತನ್ನ ದಿವ್ಯದೃಷ್ಠಿಯಿಂದ ಸರ್ವ ಭೂತಸ್ಥಾನಗಳನ್ನೂ ತ್ರಿವಿಧ ರಹಸ್ಯವನ್ನೂ, ವೇದ, ಯೋಗ, ಸವಿಜ್ಞಾನ, ಧರ್ಮ, ಅರ್ಥ, ಕಾಮ, ಧರ್ಮಕಾಮಾರ್ಥ ಶಾಸ್ತ್ರಗಳೇ ಮೊದಲಾದ ವಿವಿಧ ಶಾಸ್ತ್ರಗಳನ್ನೂ, ಮತ್ತು ಲೋಕಯಾತ್ರಾವಿಧಾನಗಳನ್ನೂ ಕಂಡಿದ್ದಾನೆ.
01001048a ಇತಿಹಾಸಾಃ ಸವೈಯಾಖ್ಯಾ ವಿವಿಧಾಃ ಶ್ರುತಯೋಽಪಿ ಚ |
01001048c ಇಹ ಸರ್ವಮನುಕ್ರಾಂತಮುಕ್ತಂ ಗ್ರಂಥಸ್ಯ ಲಕ್ಷಣಂ ||
ವ್ಯಾಖ್ಯಾಸಹಿತವಾದ ಎಲ್ಲ ಇತಿಹಾಸ ಮತ್ತು ಶೃತಿಗಳ ರಹಸ್ಯಗಳನ್ನೂ ವಿವರಿಸಿದ್ದಾನೆ. ಇದೇ ಈ ಗ್ರಂಥದ ವಿಶಿಷ್ಠ ಗುಣವೆಂದು ಹೇಳಲ್ಪಟ್ಟಿದೆ.
01001049a ವಿಸ್ತೀರ್ಯೈತನ್ಮಹಜ್ಞಾನಂ ಋಷಿಃ ಸಂಕ್ಷೇಪಮಬ್ರವೀತ್ |
01001049c ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸಧಾರಣಂ ||
ಋಷಿಯು ಮಹಾ ಜ್ಞಾನವನ್ನು ವಿವರವಾಗಿಯೂ ಮತ್ತು ಸಂಕ್ಷಿಪ್ತವಾಗಿಯೂ ನಿರೂಪಿಸಿದ್ದಾನೆ. ಯಾಕೆಂದರೆ ಲೋಕದಲ್ಲಿ ವಿದುಷರು ಸಮಾಸ ಮತ್ತು ವ್ಯಾಸ ಇವೆರಡನ್ನೂ ಇಷ್ಟಪಡುತ್ತಾರೆ.
01001050a ಮನ್ವಾದಿ ಭಾರತಂ ಕೇಚಿದಾಸ್ತೀಕಾದಿ ತಥಾಪರೇ |
01001050c ತಥೋಪರಿಚರಾದ್ಯನ್ಯೇ ವಿಪ್ರಾಃ ಸಮ್ಯಗಧೀಯತೇ ||
ಭಾರತವನ್ನು ಕೆಲವರು ಆದಿಪರ್ವದಿಂದ, ಇನ್ನು ಕೆಲವರು ಆಸ್ತೀಕಪರ್ವದಿಂದ, ಹಾಗೆಯೇ ಇನ್ನೂ ಕೆಲವರು ಉಪರಿಚರನ ಕಥೆಯಿಂದ ಪ್ರಾರಂಭಿಸುತ್ತಾರೆ. ವಿಪ್ರರು ಇದನ್ನು ಸಂಪೂರ್ಣವಾಗಿ ತಿಳಿಯುತ್ತಾರೆ.
01001051a ವಿವಿಧಂ ಸಂಹಿತಾಜ್ಞಾನಂ ದೀಪಯಂತಿ ಮನೀಷಿಣಃ |
01001051c ವ್ಯಾಖ್ಯಾತುಂ ಕುಶಲಾಃ ಕೇಚಿದ್ಗ್ರಂಥಂ ಧಾರಯಿತುಂ ಪರೇ ||
ಮಹಾಭಾರತವನ್ನು ವ್ಯಾಖ್ಯಾನಮಾಡುವುದರ ಮೂಲಕ ಕೆಲವರು ತಮ್ಮ ವಿವಿಧ ಸಂಹಿತ ಜ್ಞಾನವನ್ನು ಪ್ರಕಾಶಿಸುತ್ತಾರೆ. ಇನ್ನು ಕೆಲವರು ಇದನ್ನು ಕಂಠಪಾಠ ಮಾಡುವುದರ ಮೂಲಕ ತಮ್ಮ ಕುಶಲತೆಯನ್ನು ಪ್ರಕಾಶಿಸುತ್ತಾರೆ.
01001052a ತಪಸಾ ಬ್ರಹ್ಮಚರ್ಯೇಣ ವ್ಯಸ್ಯ ವೇದಂ ಸನಾತನಂ |
01001052c ಇತಿಹಾಸಮಿಮಂ ಚಕ್ರೇ ಪುಣ್ಯಂ ಸತ್ಯವತೀಸುತಃ ||
ಸನಾತನ ವೇದವನ್ನು ವಿವರಿಸುವ ಪುಣ್ಯಕರವಾದ ಈ ಇತಿಹಾಸವನ್ನು ಸತ್ಯವತೀಸುತನು ತನ್ನ ತಪಸ್ಸು ಮತ್ತು ಬ್ರಹ್ಮಚರ್ಯಗಳಿಂದ ರಚಿಸಿದನು.
01001053a ಪರಾಶರಾತ್ಮಜೋ ವಿದ್ವಾನ್ ಬ್ರಹ್ಮರ್ಷಿಃ ಸಂಶಿತವ್ರತಃ |
01001053c ಮಾತುರ್ನಿಯೋಗಾದ್ಧರ್ಮಾತ್ಮಾ ಗಾಂಗೇಯಸ್ಯ ಚ ಧೀಮತಃ||
01001054a ಕ್ಷೇತ್ರೇ ವಿಚಿತ್ರವೀರ್ಯಸ್ಯ ಕೃಷ್ಣದ್ವೈಪಾಯನಃ ಪುರಾ |
01001054c ತ್ರೀನಗ್ನೀನಿವ ಕೌರವ್ಯಾನ್ಜನಯಾಮಾಸ ವೀರ್ಯವಾನ್ ||
01001055a ಉತ್ಪಾದ್ಯ ಧೃತರಾಷ್ಟ್ರಂ ಚ ಪಾಂಡುಂ ವಿದುರಮೇವ ಚ |
01001055c ಜಗಾಮ ತಪಸೇ ಧೀಮಾನ್ ಪುನರೇವಾಶ್ರಮಂ ಪ್ರತಿ ||
ಪರಾಶರಾತ್ಮಜ ವಿದ್ವಾನ್ ಬ್ರಹ್ಮರ್ಷಿ ಸಂಶಿತವ್ರತ ಧೀಮಂತ ಕೃಷ್ಣದ್ವೈಪಾಯನನು ತಾಯಿ ಮತ್ತು ಧರ್ಮಾತ್ಮ ಧೀಮಂತ ಗಾಂಗೇಯನ ಸೂಚನೆಯಂತೆ ವಿಚಿತ್ರವೀರ್ಯನ ಪತ್ನಿಯರಲ್ಲಿ ಮೂವರು ಅಗ್ನಿಸದೃಶರೂ ವೀರರೂ ಆದ ಧೃತರಾಷ್ಟ್ರ, ಪಾಂಡು ಮತ್ತು ವಿದುರರಿಗೆ ಜನ್ಮವನ್ನಿತ್ತು ತಪಸ್ಸಿಗೋಸ್ಕರ ಪುನಃ ತನ್ನ ಆಶ್ರಮಕ್ಕೆ ತೆರಳಿದನು.
01001056a ತೇಷು ಜಾತೇಷು ವೃದ್ಧೇಷು ಗತೇಷು ಪರಮಾಂ ಗತಿಂ |
01001056c ಅಬ್ರವೀದ್ಭಾರತಂ ಲೋಕೇ ಮಾನುಷೇಽಸ್ಮಿನ್ ಮಹಾನೃಷಿಃ||
ತನ್ನ ಮಕ್ಕಳು ವೃದ್ಧರಾಗಿ ಪರಮ ಗತಿಯನ್ನು ಹೊಂದಿದ ಬಳಿಕ ಆ ಮಹಾನೃಷಿಯು ಭಾರತವನ್ನು ಮನುಷ್ಯಲೋಕಕ್ಕೆ ಹೇಳಿದನು.
01001057a ಜನಮೇಜಯೇನ ಪೃಷ್ಟಃ ಸನ್ ಬ್ರಾಹ್ಮಣೈಶ್ಚ ಸಹಸ್ರಶಃ |
01001057c ಶಶಾಸ ಶಿಷ್ಯಮಾಸೀನಂ ವೈಶಂಪಾಯನಮಂತಿಕೇ ||
01001058a ಸ ಸದಸ್ಯೈಃ ಸಹಾಸೀನಃ ಶ್ರಾವಯಾಮಾಸ ಭಾರತಂ |
01001058c ಕರ್ಮಾಂತರೇಷು ಯಜ್ಞಸ್ಯ ಚೋದ್ಯಮಾನಃ ಪುನಃ ಪುನಃ ||
ಯಜ್ಞ ಕರ್ಮಾಂತರಗಳಲ್ಲಿ ಸೇರಿದ್ದ ಸಹಸ್ರಾರು ಬ್ರಾಹ್ಮಣರ ಜೊತೆ ಕುಳಿತಿದ್ದ ಜನಮೇಜಯನು ಪುನಃ ಪುನಃ ಕೇಳಿಕೊಂಡಾಗ ಅವನು ಸದಸ್ಯರೊಂದಿಗೆ ಕುಳಿತಿದ್ದ ಶಿಷ್ಯ ವೈಶಂಪಾಯನಿಗೆ ಭಾರತವನ್ನು ಹೇಳಲು ಅಪ್ಪಣೆಯನ್ನಿತ್ತನು.
01001059a ವಿಸ್ತರಂ ಕುರುವಂಶಸ್ಯ ಗಾಂಧಾರ್ಯಾ ಧರ್ಮಶೀಲತಾಂ |
01001059c ಕ್ಷತ್ತುಃ ಪ್ರಜ್ಞಾಂ ಧೃತಿಂ ಕುಂತ್ಯಾಃ ಸಮ್ಯಗ್ದ್ವೈಪಾಯನೋಽಬ್ರವೀತ್||
01001060a ವಾಸುದೇವಸ್ಯ ಮಾಹಾತ್ಮ್ಯಂ ಪಾಂಡವಾನಾಂ ಚ ಸತ್ಯತಾಂ|
01001060c ದುರ್ವೃತ್ತಂ ಧಾರ್ತರಾಷ್ಟ್ರಾಣಾಮುಕ್ತವಾನ್ ಭಗವಾನೃಷಿಃ||
ಇದರಲ್ಲಿ ಭಗವಾನ್ ಋಷಿ ದ್ವೈಪಾಯನನು ಕುರುವಂಶ ವಿಸ್ತಾರ, ಗಾಂಧಾರಿಯ ಧರ್ಮಶೀಲತೆ, ಕ್ಷತ್ತನ ಪ್ರಜ್ಞೆ, ಕುಂತಿಯ ಧೃತಿ, ವಾಸುದೇವನ ಮಹಾತ್ಮೆ, ಪಾಂಡವರ ಸತ್ಯತೆ, ಮತ್ತು ಧಾರ್ತರಾಷ್ಟ್ರರ ದುರ್ವೃತ್ತಿ ಎಲ್ಲವನ್ನೂ ಹೇಳಿದ್ದಾನೆ.
01001061a ಚತುರ್ವಿಂಶತಿಸಾಹಸ್ರೀಂ ಚಕ್ರೇ ಭಾರತಸಂಹಿತಾಂ |
01001061c ಉಪಾಖ್ಯಾನೈರ್ವಿನಾ ತಾವದ್ ಭಾರತಂ ಪ್ರೋಚ್ಯತೇ ಬುಧೈಃ||
ಭಾರತ ಸಂಹಿತದಲ್ಲಿರುವ ಉಪಾಖ್ಯಾನಗಳನ್ನು ಬಿಟ್ಟು ಉಳಿದ ೨೪,೦೦೦ ಶ್ಲೋಕಗಳನ್ನು ಭಾರತವೆಂದು ತಿಳಿದವರು ಪರಿಗಣಿಸುತ್ತಾರೆ.
01001062a ತತೋಽಧ್ಯರ್ಧಶತಂ ಭೂಯಃ ಸಂಕ್ಷೇಪಂ ಕೃತವಾನೃಷಿಃ |
01001062c ಅನುಕ್ರಮಣಿಮಧ್ಯಾಯಂ ವೃತ್ತಾಂತಾನಾಂ ಸಪರ್ವಣಾಂ ||
ಕ್ರಮೇಣವಾಗಿ ಋಷಿಯು ಎಲ್ಲ ಪರ್ವಗಳನ್ನು ಸಂಕ್ಷೇಪವಾಗಿ ಪರಿಚಯಿಸುವ ೧೫೦ ಶ್ಲೋಕಗಳ ಅನುಕ್ರಮಣಿಕಾ ಅಧ್ಯಾಯವನ್ನು ಸೇರಿಸಿದನು.
01001063a ಇದಂ ದ್ವೈಪಾಯನಃ ಪೂರ್ವಂ ಪುತ್ರಮಧ್ಯಾಪಯಚ್ಛುಕಂ |
01001063c ತತೋಽನ್ಯೇಭ್ಯೋಽನುರೂಪೇಭ್ಯಃ ಶಿಷ್ಯೇಭ್ಯಃ ಪ್ರದದೌ ಪ್ರಭುಃ ||
ಪ್ರಭು ದ್ವೈಪಾಯನನು ಪೂರ್ವದಲ್ಲಿ ಇದನ್ನು ಪುತ್ರ ಶುಕನಿಗೆ ಉಪದೇಶಿಸಿದನು ಮತ್ತು ನಂತರ ಇತರ ಅನುರೂಪ ಶಿಷ್ಯರಿಬ್ಬರಿಗೆ ಹೇಳಿಕೊಟ್ಟನು.
01001064a ನಾರದೋಽಶ್ರಾವಯದ್ದೇವಾನಸಿತೋ ದೇವಲಃ ಪಿತೄನ್ |
01001064c ಗಂಧರ್ವಯಕ್ಷರಕ್ಷಾಂಸಿ ಶ್ರಾವಯಾಮಾಸ ವೈ ಶುಕಃ ||
ನಾರದನು ಇದನ್ನು ದೇವತೆಗಳಿಗೆ ಹೇಳಿದನು. ಅಸಿತ ದೇವಲನು ಪಿತೃಗಳಿಗೆ ಮತ್ತು ಶುಕನು ಗಂಧರ್ವ-ಯಕ್ಷ-ರಾಕ್ಷಸರಿಗೆ ಹೇಳಿದನು.
01001065a ದುರ್ಯೋಧನೋ ಮನ್ಯುಮಯೋ ಮಹಾದ್ರುಮಃ
ಸ್ಕಂಧಃ ಕರ್ಣಃ ಶಕುನಿಸ್ತಸ್ಯ ಶಾಖಾಃ |
01001065c ದುಃಶಾಸನಃ ಪುಷ್ಪಫಲೇ ಸಮೃದ್ಧೇ
ಮೂಲಂ ರಾಜಾ ಧೃತರಾಷ್ಟ್ರೋಽಮನೀಷೀ ||
ದುರ್ಯೋಧನನು ಕ್ರೋಧದ ಮಹಾವೃಕ್ಷ. ಕರ್ಣನು ಅದರ ಕಾಂಡ. ಶಕುನಿಯು ಅದರ ರೆಂಬೆ. ದುಃಶಾಸನನು ಸಮೃದ್ಧ ಪುಷ್ಪ-ಫಲ ಮತ್ತು ಅಜ್ಞಾನಿ ರಾಜ ಧೃತರಾಷ್ಟ್ರನು ಅದರ ಬೇರು.
01001066a ಯುಧಿಷ್ಠಿರೋ ಧರ್ಮಮಯೋ ಮಹಾದ್ರುಮಃ
ಸ್ಕಂಧೋಽರ್ಜುನೋ ಭೀಮಸೇನೋಽಸ್ಯ ಶಾಖಾಃ |
01001066c ಮಾದ್ರೀಸುತೌ ಪುಷ್ಪಫಲೇ ಸಮೃದ್ಧೇ
ಮೂಲಂ ಕೃಷ್ಣೋ ಬ್ರಹ್ಮ ಚ ಬ್ರಾಹ್ಮಣಾಶ್ಚ ||
ಯುಧಿಷ್ಠಿರನು ಧರ್ಮದ ಮಹಾವೃಕ್ಷ. ಅರ್ಜುನನು ಅದರ ಕಾಂಡ. ಭೀಮಸೇನನು ಅದರ ರೆಂಬೆ. ಮಾದ್ರಿಯ ಮಕ್ಕಳೀರ್ವರು ಸಮೃದ್ಧ ಪುಷ್ಪ-ಫಲಗಳು ಮತ್ತು ಕೃಷ್ಣ, ಬ್ರಹ್ಮ ಮತ್ತು ಬ್ರಾಹ್ಮಣರು ಅದರ ಬೇರುಗಳು.
01001067a ಪಾಂಡುರ್ಜಿತ್ವಾ ಬಹೂನ್ದೇಶಾನ್ ಯುಧಾ ವಿಕ್ರಮಣೇನ ಚ|
01001067c ಅರಣ್ಯೇ ಮೃಗಯಾಶೀಲೋ ನ್ಯವಸತ್ ಸಜನಸ್ತದಾ ||
ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ತನ್ನ ಪರಾಕ್ರಮದಿಂದ ಬಹು ದೇಶಗಳನ್ನು ಯುದ್ಧದಲ್ಲಿ ಗೆದ್ದು ತನ್ನವರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಿದ್ದನು.
01001068a ಮೃಗವ್ಯವಾಯನಿಧನೇ ಕೃಚ್ಛ್ರಾಂ ಪ್ರಾಪ ಸ ಆಪದಂ |
01001068c ಜನ್ಮಪ್ರಭೃತಿ ಪಾರ್ಥಾನಾಂ ತತ್ರಾಚಾರವಿಧಿಕ್ರಮಃ ||
ಅವನು ಬೇಟೆಯಾಡುತ್ತಿರುವಾಗ ಒಂದು ಆಪತ್ತನ್ನು ತಂದುಕೊಂಡ ನಂತರ ಪಾರ್ಥರ ಜನ್ಮಪ್ರಭೃತಿ ವಿಧಿಕ್ರಮಾಚಾರಗಳನ್ನು ಅಲ್ಲಿಯೇ ನೆರವೇರಿಸಲಾಯಿತು.
01001069a ಮಾತ್ರೋರಭ್ಯುಪಪತ್ತಿಶ್ಚ ಧರ್ಮೋಪನಿಷದಂ ಪ್ರತಿ |
01001069c ಧರ್ಮಸ್ಯ ವಾಯೋಃ ಶಕ್ರಸ್ಯ ದೇವಯೋಶ್ಚ ತಥಾಶ್ವಿನೋಃ ||
ತಾಯಂದಿರೀರ್ವರು ಧರ್ಮೋಪನಿಷದದ ಪ್ರಕಾರ ಧರ್ಮ, ವಾಯು, ಶಕ್ರ ಮತ್ತು ಅಶ್ವಿನಿ ದೇವತೆಗಳಿಂದ ಪುತ್ರರನ್ನು ಪಡೆದರು.
01001070a ತಾಪಸೈಃ ಸಹ ಸಂವೃದ್ಧಾ ಮಾತೃಭ್ಯಾಂ ಪರಿರಕ್ಷಿತಾಃ |
01001070c ಮೇಧ್ಯಾರಣ್ಯೇಷು ಪುಣ್ಯೇಷು ಮಹತಾಮಾಶ್ರಮೇಷು ಚ ||
ಅವರು ದಟ್ಟವಾದ ಅರಣ್ಯದಲ್ಲಿಯ ಪುಣ್ಯಕರ ಮಹಾ ಆಶ್ರಮಗಳಲ್ಲಿ ಇಬ್ಬರೂ ತಾಯಿಂದಿರಿಂದ ಪರಿರಕ್ಷಿತರಾಗಿ ತಾಪಸಿಗಳ ಮಧ್ಯೆ ಬೆಳೆದರು.
01001071a ಋಷಿಭಿಶ್ಚ ತದಾನೀತಾ ಧಾರ್ತರಾಷ್ಟ್ರಾನ್ ಪ್ರತಿ ಸ್ವಯಂ |
01001071c ಶಿಶವಶ್ಚಾಭಿರೂಪಾಶ್ಚ ಜಟಿಲಾ ಬ್ರಹ್ಮಚಾರಿಣಃ ||
ಸ್ವಯಂ ಋಷಿಗಳು ಬ್ರಹ್ಮಚಾರಿಗಳಂತೆ ಜಟಿಲ ರೂಪಧರಿಸಿದ್ದ ಮಕ್ಕಳನ್ನು ಧಾರ್ತರಾಷ್ಟ್ರರಲ್ಲಿಗೆ ಕರೆತಂದರು.
01001072a ಪುತ್ರಾಶ್ಚ ಭ್ರಾತರಶ್ಚೇಮೇ ಶಿಷ್ಯಾಶ್ಚ ಸುಹೃದಶ್ಚ ವಃ |
01001072c ಪಾಂಡವಾ ಏತ ಇತ್ಯುಕ್ತ್ವಾ ಮುನಯೋಽಂತರ್ಹಿತಾಸ್ತತಃ ||
“ಈ ನಮ್ಮ ಸುಹೃದಯ ಶಿಷ್ಯರು ನಿನ್ನ ತಮ್ಮ ಪಾಂಡುವಿನ ಮಕ್ಕಳು” ಎಂದು ಹೇಳಿ ಆ ಮುನಿಗಳು ಅಲ್ಲಿಯೇ ಅಂತರ್ಹಿತರಾದರು.
01001073a ತಾಂಸ್ತೈರ್ನಿವೇದಿತಾನ್ ದೃಷ್ಠ್ವಾ ಪಾಂಡವಾನ್ ಕೌರವಾಸ್ತದಾ|
01001073c ಶಿಷ್ಠಾಶ್ಚ ವರ್ಣಾಃ ಪೌರಾ ಯೇ ತೇ ಹರ್ಷಾಚ್ಚುಕ್ರುಶುರ್ಭೃಶಂ||
ಅವರು ಕರೆದುತಂದು ಬಿಟ್ಟುಹೋದ ಪಾಂಡವರನ್ನು ಕಂಡು ಕೌರವರು, ಶಿಷ್ಟರು, ಮತ್ತು ಎಲ್ಲಾ ವರ್ಣದ ಪೌರರೂ ಹರ್ಷಭರಿತರಾದರು.
01001074a ಆಹುಃ ಕೇಚಿನ್ನ ತಸ್ಯೈತೇ ತಸ್ಯೈತ ಇತಿ ಚಾಪರೇ |
01001074c ಯದಾ ಚಿರಮೃತಃ ಪಾಂಡುಃ ಕಥಂ ತಸ್ಯೇತಿ ಚಾಪರೇ ||
ಕೆಲವರು “ಚಿರಮೃತ ಪಾಂಡುವಿಗೆ ಮಕ್ಕಳು ಹೇಗೆ? ಇವರು ಅವನ ಮಕ್ಕಳಲ್ಲ!” ಎಂದು ಹೇಳಿದರೆ ಕೆಲವರು ಇವರು ಅವನದ್ದೇ ಮಕ್ಕಳು ಎಂದು ಒಪ್ಪಿಕೊಂಡರು.
01001075a ಸ್ವಾಗತಂ ಸರ್ವಥಾ ದಿಷ್ಟ್ಯಾ ಪಾಂಡೋಃ ಪಶ್ಯಾಮ ಸಂತತಿಂ|
01001075c ಉಚ್ಯತಾಂ ಸ್ವಾಗತಮಿತಿ ವಾಚೋಽಶ್ರೂಯಂತ ಸರ್ವಶಃ ||
“ಪಾಂಡುವಿನ ಸಂತತಿಯನ್ನು ನೋಡಲು ದೊರೆತ ನಾವೇ ಧನ್ಯರು ಅವರಿಗೆ ಸರ್ವಥಾ ಸ್ವಾಗತ. ನಾವೆಲ್ಲರೂ ಸ್ವಾಗತವೆನ್ನುತ್ತೇವೆ” ಎನ್ನುವುದು ಸರ್ವದಿಶೆಯಲ್ಲಿಯೂ ಕೇಳಿಬರುತ್ತಿತ್ತು.
01001076a ತಸ್ಮಿನ್ನುಪರತೇ ಶಬ್ದೇ ದಿಶಃ ಸರ್ವಾ ವಿನಾದಯನ್ |
01001076c ಅಂತರ್ಹಿತಾನಾಂ ಭೂತಾನಾಂ ನಿಸ್ವನಸ್ತುಮುಲೋಽಭವತ್||
ಸರ್ವ ದಿಶೆಯಲ್ಲಿಯೂ ಈ ಶಬ್ಧನಿನಾದಗಳು ಹೆಚ್ಚಾಗುತ್ತಿರುವಾಗ ಅಂತರ್ಹಿತ ಭೂತಗಳ ಧ್ವನಿಯು ತುಮುಲಗಳನ್ನು ಶಾಂತಗೊಳಿಸಿತು.
01001077a ಪುಷ್ಪವೃಷ್ಟಿಃ ಶುಭಾ ಗಂಧಾಃ ಶಂಖದುಂದುಭಿನಿಸ್ವನಾಃ |
01001077c ಆಸನ್ ಪ್ರವೇಶೇ ಪಾರ್ಥಾನಾಂ ತದದ್ಭುತಮಿವಾಭವತ್ ||
ಪಾರ್ಥರು ಪ್ರವೇಶಿಸುತ್ತಿದ್ದಂತೆ ಹಲವಾರು ಅದ್ಭುತಗಳು ನಡೆದವು: ಪುಷ್ಪವೃಷ್ಟಿಯಾಯಿತು, ಮಂಗಳಕರ ಸುಗಂಧವು ತುಂಬಿಕೊಂಡಿತು, ಮತ್ತು ಶಂಖ-ದುಂದುಭಿಗಳ ಸುಸ್ವರವು ಕೇಳಿಸತೊಡಗಿತು.
01001078a ತತ್ಪ್ರೀತ್ಯಾ ಚೈವ ಸರ್ವೇಷಾಂ ಪೌರಾಣಾಂ ಹರ್ಷಸಂಭವಃ |
01001078c ಶಬ್ದ ಆಸೀನ್ಮಹಾಂಸ್ತತ್ರ ದಿವಸ್ಪೃತ್ಕೀರ್ತಿವರ್ಧನಃ ||
ತತ್ಪ್ರೀತ ಸರ್ವ ಪೌರರ ಹರ್ಷಸಂಭವವಾದ ಮಹತ್ತರ ಶಬ್ಧವು ಸ್ವರ್ಗದಲ್ಲಿಯೂ ಕೇಳಿಬರುವಷ್ಟು ಜೋರಾಗಿತ್ತು.
01001079a ತೇಽಪ್ಯಧೀತ್ಯಾಖಿಲಾನ್ ವೇದಾನ್ ಶಾಸ್ತ್ರಾಣಿ ವಿವಿಧಾನಿ ಚ|
01001079c ನ್ಯವಸನ್ ಪಾಂಡವಾಸ್ತತ್ರ ಪೂಜಿತಾ ಅಕುತೋಭಯಾಃ ||
ಪಾಂಡವರು ಅಲ್ಲಿ ಯಾರಿಂದಲೂ ಕಡೆಗಣಿಸಲ್ಪಡದೇ, ಎಲ್ಲರಿಂದ ಪೂಜಿತರಾಗಿ ವಾಸಿಸುತ್ತಿದ್ದು ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ ಅಧ್ಯಯನ ಮಾಡಿದರು.
01001080a ಯುಧಿಷ್ಠಿರಸ್ಯ ಶೌಚೇನ ಪ್ರೀತಾಃ ಪ್ರಕೃತಯೋಽಭವನ್ |
01001080c ಧೃತ್ಯಾ ಚ ಭೀಮಸೇನಸ್ಯ ವಿಕ್ರಮೇಣಾರ್ಜುನಸ್ಯ ಚ ||
01001081a ಗುರುಶುಶ್ರೂಷಯಾ ಕುಂತ್ಯಾ ಯಮಯೋರ್ವಿನಯೇನ ಚ |
01001081c ತುತೋಷ ಲೋಕಃ ಸಕಲಸ್ತೇಷಾಂ ಶೌರ್ಯಗುಣೇನ ಚ ||
ಯುಧಿಷ್ಠಿರನ ಪವಿತ್ರತೆ, ಭೀಮಸೇನನ ಧೈರ್ಯ, ಅರ್ಜುನನ ವಿಕ್ರಮ, ಕುಂತಿಯ ಶುಶ್ರೂಷೆ, ಅವಳಿ ಮಕ್ಕಳ ವಿನಯ ಮತ್ತು ಇವೆಲ್ಲವುಗಳನ್ನೂ ಮೀರಿದ ಅವರ ಶೌರ್ಯಗುಣಗಳಿಂದ ಎಲ್ಲ ಜನರೂ ಸಂತುಷ್ಟರಾದರು.
01001082a ಸಮವಾಯೇ ತತೋ ರಾಜ್ಞಾಂ ಕನ್ಯಾಂ ಭರ್ತೃಸ್ವಯಂವರಾಂ|
01001082c ಪ್ರಾಪ್ತವಾನರ್ಜುನಃ ಕೃಷ್ಣಾಂ ಕೃತ್ವಾ ಕರ್ಮ ಸುದುಷ್ಕರಂ ||
ಸಮಯಾನಂತರದಲ್ಲಿ ಅರ್ಜುನನು ಸ್ವಯಂವರದಲ್ಲಿ ದುಷ್ಕರ ಕಾರ್ಯವೊಂದನ್ನು ಎಸಗಿ ರಾಜಕನ್ಯೆ ದ್ರೌಪದಿ ಕೃಷ್ಣೆಯನ್ನು ಪತ್ನಿಯನ್ನಾಗಿ ಪಡೆದನು.
01001083a ತತಃ ಪ್ರಭೃತಿ ಲೋಕೇಽಸ್ಮಿನ್ ಪೂಜ್ಯಃ ಸರ್ವಧನುಷ್ಮತಾಂ |
01001083c ಆದಿತ್ಯೈವ ದುಷ್ಪ್ರೇಕ್ಷ್ಯಃ ಸಮರೇಷ್ವಪಿ ಚಾಭವತ್ ||
ಅಂದಿನಿಂದ ಅವನು ಲೋಕದ ಸರ್ವಧನುಷ್ಮಂತರಲ್ಲಿ ಪೂಜನೀಯ ಮತ್ತು ಸಮರದಲ್ಲಿ ಆದಿತ್ಯನಂತೆ ದುಷ್ಪ್ರೇಕ್ಷ ಎನ್ನಿಸಿಕೊಂಡನು.
01001084a ಸ ಸರ್ವಾನ್ ಪಾರ್ಥಿವಾನ್ ಜಿತ್ವಾ ಸರ್ವಾಂಶ್ಚ ಮಹತೋ ಗಣಾನ್|
01001084c ಆಜಹಾರಾರ್ಜುನೋ ರಾಜ್ಞೇ ರಾಜಸೂಯಂ ಮಹಾಕ್ರತುಂ||
ಅರ್ಜುನನು ಸರ್ವ ಪಾರ್ಥಿವರನ್ನೂ ಎಲ್ಲರ ಮಹತ್ತರ ಸೈನ್ಯಗಳನ್ನೂ ಗೆದ್ದು ರಾಜ ಯುಧಿಷ್ಠಿರನ ರಾಜಸೂಯ ಮಹಾಕ್ರತುವಿಗೆ ಸಹಾಯಮಾಡಿದನು.
01001085a ಅನ್ನವಾನ್ ದಕ್ಷಿಣಾವಾಂಶ್ಚ ಸರ್ವೈಃ ಸಮುದಿತೋ ಗುಣೈಃ |
01001085c ಯುಧಿಷ್ಠಿರೇಣ ಸಂಪ್ರಾಪ್ತೋ ರಾಜಸೂಯೋ ಮಹಾಕ್ರತುಃ||
01001086a ಸುನಯಾದ್ ವಾಸುದೇವಸ್ಯ ಭೀಮಾರ್ಜುನಬಲೇನ ಚ |
01001086c ಘಾತಯಿತ್ವಾ ಜರಾಸಂಧಂ ಚೈದ್ಯಂ ಚ ಬಲಗರ್ವಿತಂ ||
ವಾಸುದೇವನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಬಲಗರ್ವಿತ ಜರಾಸಂಧ ಮತ್ತು ಚೈದ್ಯರನ್ನು ಸಂಹರಿಸಿ, ಯುಧಿಷ್ಠಿರನು ಅನ್ನ-ದಕ್ಷಿಣೆ ಮತ್ತು ಸರ್ವಗುಣಯುಕ್ತ ರಾಜಸೂಯ ಮಹಾಕ್ರತುವನ್ನು ನೆರವೇರಿಸಿದನು.
01001087a ದುರ್ಯೋಧನಮುಪಾಗಚ್ಛನ್ನರ್ಹಣಾನಿ ತತಸ್ತತಃ |
01001087c ಮಣಿಕಾಂಚನರತ್ನಾನಿ ಗೋಹಸ್ತ್ಯಶ್ವಧನಾನಿ ಚ ||
01001088a ಸಮೃದ್ಧಾಂ ತಾಂ ತಥಾ ದೃಷ್ಟ್ವಾ ಪಾಂಡವಾನಾಂ ತದಾ ಶ್ರಿಯಂ|
01001088c ಈರ್ಷ್ಯಾಸಮುತ್ಥಃ ಸುಮಹಾಂಸ್ತಸ್ಯ ಮನ್ಯುರಜಾಯತ ||
ಆ ಸಮಯದಲ್ಲಿ ಮಣಿ, ಕಾಂಚನ, ರತ್ನ, ಗೋವು, ಆನೆ ಮತ್ತು ಅಶ್ವಧನಗಳನ್ನೊಡಗೂಡಿದ ಪಾಂಡವರ ಸಮೃದ್ಧ ಸಂಪತ್ತನ್ನು ನೋಡಿದ ದುರ್ಯೋಧನನಲ್ಲಿ ಅಸೂಯೆ-ಕೋಪಗಳುಂಟಾದವು.
01001089a ವಿಮಾನಪ್ರತಿಮಾಂ ಚಾಪಿ ಮಯೇನ ಸುಕೃತಾಂ ಸಭಾಂ |
01001089c ಪಾಂಡವಾನಾಮುಪಹೃತಾಂ ಸ ದೃಷ್ಟ್ವಾ ಪರ್ಯತಪ್ಯತ ||
ಪಾಂಡವರಿಗೆ ಉಡುಗೊರೆಯಾಗಿ ದೊರೆತಿದ್ದ ಮಯ ಸುನಿರ್ಮಿತ ವಿಮಾನಸದೃಶ ಸಭೆಯನ್ನು ನೋಡಿ ಅವನು ಇನ್ನೂ ಹೆಚ್ಚು ಬೆಂದನು.
01001090a ಯತ್ರಾವಹಸಿತಶ್ಚಾಸೀತ್ ಪ್ರಸ್ಕಂದನ್ನಿವ ಸಂಭ್ರಮಾತ್ |
01001090c ಪ್ರತ್ಯಕ್ಷಂ ವಾಸುದೇವಸ್ಯ ಭೀಮೇನಾನಭಿಜಾತವತ್ ||
ಅಲ್ಲಿಯೇ, ವಾಸುದೇವನ ಪ್ರತ್ಯಕ್ಷದಲ್ಲಿ, ಭ್ರಮೆಗೊಂಡು ಜಾರಿ ಬಿದ್ದಾಗ ಅವನು ಭೀಮಸೇನನಿಂದ ಅವಹೇಳನೆಗೊಳಪಟ್ಟನು.
01001091a ಸ ಭೋಗಾನ್ ವಿವಿಧಾನ್ ಭುಂಜನ್ ರತ್ನಾನಿ ವಿವಿಧಾನಿ ಚ|
01001091c ಕಥಿತೋ ಧೃತರಾಷ್ಟ್ರಸ್ಯ ವಿವರ್ಣೋ ಹರಿಣಃ ಕೃಶಃ ||
ವಿವಿಧ ಭುಂಜನ-ರತ್ನಗಳನ್ನು ಭೋಗಿಸುತ್ತಿದ್ದರೂ ಅವನು ವಿವರ್ಣನಾಗಿ ಕೃಶನಾಗುತ್ತಿದ್ದಾನೆ ಎಂದು ಧೃತರಾಷ್ಟ್ರನಿಗೆ ತಿಳಿಯಿತು.
01001092a ಅನ್ವಜಾನಾತ್ತತೋ ದ್ಯೂತಂ ಧೃತರಾಷ್ಟ್ರಃ ಸುತಪ್ರಿಯಃ |
01001092c ತಚ್ಛ್ರುತ್ವಾ ವಾಸುದೇವಸ್ಯ ಕೋಪಃ ಸಮಭವನ್ಮಹಾನ್ ||
ಮಗನ ಮೇಲಿನ ಪ್ರೀತಿಯಿಂದ ಧೃತರಾಷ್ಟ್ರನು ದ್ಯೂತವನ್ನು ಆಜ್ಞಾಪಿಸಿದನು. ಇದನ್ನು ಕೇಳಿದ ವಾಸುದೇವನು ಅತ್ಯಂತ ಕುಪಿತನಾದನು.
01001093a ನಾತಿಪ್ರೀತಮನಾಶ್ಚಾಸೀದ್ ವಿವಾದಾಂಶ್ಚಾನ್ವಮೋದತ |
01001093c ದ್ಯೂತಾದೀನನಯಾನ್ ಘೋರಾನ್ ಪ್ರವೃದ್ಧಾಂಶ್ಚಾಪ್ಯುಪೈಕ್ಷತ ||
ವಿವಾದಗಳನ್ನು ಬಯಸದಿದ್ದ ಅವನು ದ್ಯೂತ ಮತ್ತು ಇತರ ಘೋರ ಪ್ರವೃತ್ತಿಗಳನ್ನು ಮೌನವಾಗಿ ಒಪ್ಪಿಕೊಂಡನು.
01001094a ನಿರಸ್ಯ ವಿದುರಂ ದ್ರೋಣಂ ಭೀಷ್ಮಂ ಶಾರದ್ವತಂ ಕೃಪಂ |
01001094c ವಿಗ್ರಹೇ ತುಮುಲೇ ತಸ್ಮಿನ್ನಹನ್ ಕ್ಷತ್ರಂ ಪರಸ್ಪರಂ ||
ವಿದುರ, ದ್ರೋಣ, ಭೀಷ್ಮ, ಶಾರದ್ವತ ಕೃಪ ಇವರನ್ನು ನಿರಾಕರಿಸಿ ಘೋರ ಯುದ್ಧದಲ್ಲಿ ಕ್ಷತ್ರಿಯರು ಪರಸ್ಪರರನ್ನು ಸಂಹರಿಸುವಂತೆ ಮಾಡಿದನು.
01001095a ಜಯತ್ಸು ಪಾಂಡುಪುತ್ರೇಷು ಶ್ರುತ್ವಾ ಸುಮಹದಪ್ರಿಯಂ |
01001095c ದುರ್ಯೋಧನಮತಂ ಜ್ಞಾತ್ವಾ ಕರ್ಣಸ್ಯ ಶಕುನೇಸ್ತಥಾ |
01001095e ಧೃತರಾಷ್ಟ್ರಶ್ಚಿರಂ ಧ್ಯಾತ್ವಾ ಸಂಜಯಂ ವಾಕ್ಯಮಬ್ರವೀತ್ ||
ಪಾಂಡುಪುತ್ರರು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮೇಲೆ ಜಯವನ್ನು ಗಳಿಸಿದರು ಎಂಬ ಅತಿ ಅಪ್ರಿಯ ವಿಷಯವನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಸಂಜಯನನ್ನುದ್ದೇಶಿಸಿ ಹೇಳಿದನು:
01001096a ಶೃಣು ಸಂಜಯ ಮೇ ಸರ್ವಂ ನ ಮೇಽಸೂಯಿತುಮರ್ಹಸಿ|
01001096c ಶ್ರುತವಾನಸಿ ಮೇಧಾವೀ ಬುದ್ಧಿಮಾನ್ ಪ್ರಾಜ್ಞಸಮ್ಮತಃ ||
“ಸಂಜಯ! ನಾನು ಹೇಳುವುದೆಲ್ಲವನ್ನೂ ಕೇಳು. ಮೇಧಾವಿ, ಬುದ್ಧಿವಂತ ಮತ್ತು ಪ್ರಜ್ಞಸಮ್ಮತನಾದ ನೀನು ಇದಕ್ಕೆಲ್ಲಾ ನಾನೇ ಕಾರಣನೆಂದು ತಿಳಿದುಕೊಳ್ಳಬೇಡ.
01001097a ನ ವಿಗ್ರಹೇ ಮಮ ಮತಿರ್ನ ಚ ಪ್ರೀಯೇ ಕುರುಕ್ಷಯೇ |
01001097c ನ ಮೇ ವಿಶೇಷಃ ಪುತ್ರೇಷು ಸ್ವೇಷು ಪಾಂಡುಸುತೇಷು ಚ ||
ಈ ಕುರುಕ್ಷಯಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಮತ್ತು ಇದು ನನ್ನ ಮನಸ್ಸಿಗೆ ಪ್ರಿಯವೂ ಆಗಿರಲಿಲ್ಲ. ನನ್ನ ಪುತ್ರರಲ್ಲಿ ಮತ್ತು ಪಾಂಡುಸುತರಲ್ಲಿ ನನಗೆ ಯಾವುದೇ ವ್ಯತ್ಯಾಸಗಳೂ ಇರಲಿಲ್ಲ.
01001098a ವೃದ್ಧಂ ಮಾಮಭ್ಯಸೂಯಂತಿ ಪುತ್ರಾ ಮನ್ಯುಪರಾಯಣಾಃ |
01001098c ಅಹಂ ತ್ವಚಕ್ಷುಃ ಕಾರ್ಪಣ್ಯಾತ್ ಪುತ್ರಪ್ರೀತ್ಯಾ ಸಹಾಮಿ ತತ್ |
01001098e ಮುಹ್ಯಂತಂ ಚಾನುಮುಹ್ಯಾಮಿ ದುರ್ಯೋಧನಮಚೇತನಂ ||
ಕೆಟ್ಟದಾರಿ ಹಿಡಿದಿದ್ದ ನನ್ನ ಪುತ್ರರು ಈ ಕುರುಡ ವೃದ್ಧ ದೀನನನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಪುತ್ರರ ಮೇಲಿನ ಪ್ರೀತಿಯಿಂದ ಅವೆಲ್ಲವನ್ನೂ ಸಹಿಸಿಕೊಂಡೆನು. ಮೂಢ ದುರ್ಯೋಧನನು ಬೇಸರದಿಂದಿದ್ದಾಗಲೆಲ್ಲಾ ನಾನೂ ಬೇಸರಗೊಳ್ಳುತ್ತಿದ್ದೆನು.
01001099a ರಾಜಸೂಯೇ ಶ್ರಿಯಂ ದೃಷ್ಠ್ವಾ ಪಾಂಡವಸ್ಯ ಮಹೌಜಸಃ |
01001099c ತಚ್ಚಾವಹಸನಂ ಪ್ರಾಪ್ಯ ಸಭಾರೋಹಣದರ್ಶನೇ ||
01001100a ಅಮರ್ಷಿತಃ ಸ್ವಯಂ ಜೇತುಮಶಕ್ತಃ ಪಾಂಡವಾನ್ ರಣೇ |
01001100c ನಿರುತ್ಸಾಹಶ್ಚ ಸಂಪ್ರಾಪ್ತುಂ ಶ್ರಿಯಮಕ್ಷತ್ರಿಯೋ ಯಥಾ |
01001100e ಗಾಂಧಾರರಾಜಸಹಿತಶ್ಚದ್ಮದ್ಯೂತಮಮಂತ್ರಯತ್ ||
ರಾಜಸೂಯದಲ್ಲಿ ಮಹೌಜಸ ಪಾಂಡವರ ಸಂಪತ್ತನ್ನು ನೋಡಿ ಮತ್ತು ಸಭಾ ದರ್ಶನದ ಸಮಯದಲ್ಲಿ ಹಾಸ್ಯಕ್ಕೊಳಪಟ್ಟ ಅವನು ಪಾಂಡವರನ್ನು ರಣದಲ್ಲಿ ಗೆಲ್ಲುವುದು ತನಗೆ ಸಾದ್ಯವಾದುದಲ್ಲ ಎಂದು ತಿಳಿದು ನಿರುತ್ಸಾಹಗೊಂಡು ಗಾಂಧಾರರಾಜನ ಜೊತೆಗೂಡಿ ಸಂಪತ್ತನ್ನು ಪಡೆಯಲೋಸುಗ ಕ್ಷತ್ರಿಯರಿಗೆ ಶೋಭಿಸದ ದ್ಯೂತಕ್ಕೆ ಅವರನ್ನು ಆಮಂತ್ರಿಸಿದನು.
01001101a ತತ್ರ ಯದ್ಯದ್ಯಥಾ ಜ್ಞಾತಂ ಮಯಾ ಸಂಜಯ ತಚ್ಛೃಣು |
01001101c ಶ್ರುತ್ವಾ ಹಿ ಮಮ ವಾಕ್ಯಾನಿ ಬುದ್ಧ್ಯಾ ಯುಕ್ತಾನಿ ತತ್ತ್ವತಃ |
01001101e ತತೋ ಜ್ಞಾಸ್ಯಸಿ ಮಾಂ ಸೌತೇ ಪ್ರಜ್ಞಾಚಕ್ಷುಷಮಿತ್ಯುತ ||
ಸಂಜಯ! ಇದರ ಮೊದಲು ಮತ್ತು ನಂತರ ಏನೆಲ್ಲ ಆಯಿತು ಎಂದು ನನಗೆ ತಿಳಿದಿದ್ದನ್ನು ಹೇಳುತ್ತೇನೆ ಕೇಳು. ಸೌತಿ! ನನ್ನ ಈ ಮಾತುಗಳನ್ನು ಕೇಳಿದರೆ ನನಗೂ ಪ್ರಜ್ಞೆಯ ಕಣ್ಣೊಂದಿದೆ ಎಂದು ನಿನಗೆ ತಿಳಿಯುತ್ತದೆ.
01001102a ಯದಾಶ್ರೌಷಂ ಧನುರಾಯಮ್ಯ ಚಿತ್ರಂ ವಿದ್ಧಂ
ಲಕ್ಷ್ಯಂ ಪಾತಿತಂ ವೈ ಪೃಥಿವ್ಯಾಂ |
01001102c ಕೃಷ್ಣಾಂ ಹೃತಾಂ ಪಶ್ಯತಾಂ ಸರ್ವರಾಜ್ಞಾಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಸರ್ವ ರಾಜರುಗಳೂ ನೋಡುತ್ತಿದ್ದಂತೆಯೇ ಅರ್ಜುನನು ಅದ್ಭುತವಾಗಿ ಧನಸ್ಸು ಹೂಡಿ ಲಕ್ಷ್ಯವನ್ನು ಪೃಥಿವಿಗೆ ಉರುಳಿಸಿ ಕೃಷ್ಣೆಯನ್ನು ಕೊಂಡೊಯ್ದ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು.
01001103a ಯದಾಶ್ರೌಷಂ ದ್ವಾರಕಾಯಾಂ ಸುಭದ್ರಾಂ
ಪ್ರಸಹ್ಯೋಧಾಂ ಮಾಧವೀಮರ್ಜುನೇನ |
01001103c ಇಂದ್ರಪ್ರಸ್ಥಂ ವೃಷ್ಣಿವೀರೌ ಚ ಯಾತೌ
ತದಾ ನಾಶಂಸೇ ವಿಜಯಾಯ ಸಂಜಯ ||
ಅರ್ಜುನನು ಮಾಧವಿ ಸುಭದ್ರೆಯನ್ನು ದ್ವಾರಕೆಯಿಂದ ಅಪಹರಿಸಿದ ಮತ್ತು ನಂತರ ವೃಷ್ಣಿವೀರರಿಬ್ಬರೂ ಇಂದ್ರಪ್ರಸ್ಥಕ್ಕೆ ಬಂದ ಎಂದು ನಾನು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001104a ಯದಾಶ್ರೌಷಂ ದೇವರಾಜಂ ಪ್ರವೃಷ್ಟಂ
ಶರೈರ್ದಿವ್ಯೈರ್ವಾರಿತಂ ಚಾರ್ಜುನೇನ |
01001104c ಅಗ್ನಿಂ ತಥಾ ತರ್ಪಿತಂ ಖಾಂಡವೇ ಚ
ತದಾ ನಾಶಂಸೇ ವಿಜಯಾಯ ಸಂಜಯ ||
ದಿವ್ಯ ಶರಗಳ ಮಳೆಯನ್ನೇ ಸುರಿಸುತ್ತಿರುವ ದೇವರಾಜನನ್ನು ತಡೆಹಿಡಿದು ಅರ್ಜುನನು ಅಗ್ನಿಗೆ ಖಾಂಡವವನ್ನಿತ್ತು ತೃಪ್ತಿಪಡಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001105a ಯದಾಶ್ರೌಷಂ ಹೃತರಾಜ್ಯಂ ಯುಧಿಷ್ಠಿರಂ
ಪರಾಜಿತಂ ಸೌಬಲೇನಾಕ್ಷವತ್ಯಾಂ |
01001105c ಅನ್ವಾಗತಂ ಭ್ರಾತೃಭಿರಪ್ರಮೇಯೈಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಜೂಜಿನಲ್ಲಿ ಸೌಬಲನಿಂದ ಪರಾಜಿತನಾಗಿ ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡರೂ, ಅಪ್ರಮೇಯ ಸಹೋದರರು ಅವನನ್ನು ಅನುಸರಿಸಿದರು ಎಂದು ಕೇಳಿದಂದೇ ನನಗೆ ವಿಜಯದಲ್ಲಿ ಸಂಶಯವಿತ್ತು.
01001106a ಯದಾಶ್ರೌಷಂ ದ್ರೌಪದೀಮಶ್ರುಕಂಠೀಮ್
ಸಭಾಂ ನೀತಾಂ ದುಃಖಿತಾಮೇಕವಸ್ತ್ರಾಂ |
01001106c ರಜಸ್ವಲಾಂ ನಾಥವತೀಮನಾಥವತ್
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಪತಿಗಳಿದ್ದರೂ ಅನಾಥಳಂತೆ ದುಃಖಿತಳಾಗಿ, ಏಕವಸ್ತ್ರಧಾರಿಯಾಗಿ, ಕಣ್ಣೀರಿನಿಂದ ಗಂಟಲು ಕಟ್ಟಿಹೋಗಿದ್ದ ರಜಸ್ವಲೆ ಅಶೃಕಂಠೀ ದ್ರೌಪದಿಯನ್ನು ಸಭೆಗೆ ಎಳೆತಂದುದನ್ನು ಕೇಳಿದಾಗಲೇ ನನಗೆ ವಿಜಯದ ಕುರಿತು ಸಂಶಯವಾಗಿತ್ತು.
01001107a ಯದಾಶ್ರೌಷಂ ವಿವಿಧಾಸ್ತಾತ ಚೇಷ್ಠಾ
ಧರ್ಮಾತ್ಮನಾಂ ಪ್ರಸ್ಥಿತಾನಾಂ ವನಾಯ |
01001107c ಜ್ಯೇಷ್ಠಪ್ರೀತ್ಯಾ ಕ್ಲಿಶ್ಯತಾಂ ಪಾಂಡವಾನಾಂ
ತದಾ ನಾಶಂಸೇ ವಿಜಯಾಯ ಸಂಜಯ ||
ಯಾವಾಗ ಧರ್ಮಾತ್ಮ ಪಾಂಡವರು ಜ್ಯೇಷ್ಠನನ್ನು ವನಕ್ಕೆ ಹಿಂಬಾಲಿಸಿ, ಅವನಿಗೋಸ್ಕರ ಎಲ್ಲ ಕಷ್ಟಗಳನ್ನೂ ಅನುಭವಿಸಿದರೆಂದು ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001108a ಯದಾಶ್ರೌಷಂ ಸ್ನಾತಕಾನಾಂ ಸಹಸ್ರೈರ್
ಅನ್ವಾಗತಂ ಧರ್ಮರಾಜಂ ವನಸ್ಥಂ |
01001108c ಭಿಕ್ಷಾಭುಜಾಂ ಬ್ರಾಹ್ಮಣಾನಾಂ ಮಹಾತ್ಮನಾಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಸಹಸ್ರಾರು ಸ್ನಾತಕರು ಧರ್ಮರಾಜನನ್ನು ವನಕ್ಕೆ ಅನುಸರಿಸಿ ಹೋದರು ಮತ್ತು ಅವನು ಆ ಎಲ್ಲ ಮಹಾತ್ಮ ಬ್ರಾಹ್ಮಣರಿಗೆ ಭಿಕ್ಷೆ-ಭೋಜನಗಳನ್ನಿತ್ತನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು.
01001109a ಯದಾಶ್ರೌಷಂ ಅರ್ಜುನೋ ದೇವದೇವಂ
ಕಿರಾತರೂಪಂ ತ್ರ್ಯಂಬಕಂ ತೋಷ್ಯ ಯುದ್ಧೇ |
01001109c ಅವಾಪ ತತ್ ಪಾಶುಪತಂ ಮಹಾಸ್ತ್ರಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಅರ್ಜುನನು ಕಿರಾತರೂಪಿ ದೇವದೇವ ತ್ರಯಂಬಕನನ್ನು ಯುದ್ಧದಲ್ಲಿ ತೃಪ್ತಿಗೊಳಿಸಿ ಮಹಾಸ್ತ್ರ ಪಾಶುಪತವನ್ನು ಪಡೆದನೆಂದು ಯಾವಾಗ ಕೇಳಿದೆನೋ ಅಂದೇ ನಾನು ವಿಜಯದ ಆಸೆಯನ್ನು ತೊರೆದಿದ್ದೆನು.
01001110a ಯದಾಶ್ರೌಷಂ ತ್ರಿದಿವಸ್ಥಂ ಧನಂಜಯಂ
ಶಕ್ರಾತ್ ಸಾಕ್ಷಾದ್ದಿವ್ಯಮಸ್ತ್ರಂ ಯಥಾವತ್ |
01001110c ಅಧೀಯಾನಂ ಶಂಸಿತಂ ಸತ್ಯಸಂಧಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸತ್ಯಸಂಧ, ಪ್ರಸಿದ್ಧ ಧನಂಜಯನು ದೇವಲೋಕವನ್ನು ಪ್ರವೇಶಿಸಿ ಅಲ್ಲಿ ಸಾಕ್ಷಾತ್ ಶಕ್ರನಿಂದ ದಿವ್ಯಾಸ್ತ್ರಗಳನ್ನು ಪಡೆದನೆಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!
01001111a ಯದಾಶ್ರೌಷಂ ವೈಶ್ರವಣೇನ ಸಾರ್ಧಂ
ಸಮಾಗತಂ ಭೀಮಮನ್ಯಾಂಶ್ಚ ಪಾರ್ಥಾನ್ |
01001111c ತಸ್ಮಿನ್ ದೇಶೇ ಮಾನುಷಾಣಾಮಗಮ್ಯೇ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ವೈಶ್ರವಣನನ್ನೊಡಗೂಡಿ ಭೀಮ ಮತ್ತು ಇತರ ಪಾರ್ಥರು ಮನುಷ್ಯರು ಮೊದಲೆಂದೂ ಹೋಗದೇ ಇದ್ದ ಪ್ರದೇಶಗಳಿಗೆ ಹೋದರು ಎಂದು ಕೇಳಿದಾಗಲೇ ನನಗೆ ವಿಜಯದ ಕುರಿತು ಸಂಶಯವಾಗಿತ್ತು.
01001112a ಯದಾಶ್ರೌಷಂ ಘೋಷಯಾತ್ರಾಗತಾನಾಂ
ಬಂಧಂ ಗಂಧರ್ವೈರ್ಮೋಕ್ಷಣಂ ಚಾರ್ಜುನೇನ |
01001112c ಸ್ವೇಷಾಂ ಸುತಾನಾಂ ಕರ್ಣಬುದ್ಧೌ ರತಾನಾಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಕರ್ಣನನ್ನೇ ನಂಬಿ ಅವನು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದ ನನ್ನ ಮಗನು ಘೋಷಯಾತ್ರೆಯ ವೇಳೆಯಲ್ಲಿ ಗಂಧರ್ವರಿಂದ ಬಂಧಿಯಾಗಿದ್ದಾಗ ಅರ್ಜುನನಿಂದ ಬಿಡುಗಡೆ ಹೊಂದಿದನೆಂದು ಕೇಳಿದಾಗಲೇ ನಾನು ವಿಜಯದ ಕುರಿತು ಸಂಶಯವನ್ನು ತಾಳಿದ್ದೆ.
01001113a ಯದಾಶ್ರೌಷಂ ಯಕ್ಷರೂಪೇಣ ಧರ್ಮಂ
ಸಮಾಗತಂ ಧರ್ಮರಾಜೇನ ಸೂತ |
01001113c ಪ್ರಶ್ನಾನುಕ್ತಾನ್ ವಿಬ್ರುವಂತಂ ಚ ಸಮ್ಯಕ್
ತದಾ ನಾಶಂಸೇ ವಿಜಯಾಯ ಸಂಜಯ ||
ಸೂತ ಸಂಜಯ! ಯಕ್ಷರೂಪದಲ್ಲಿ ಬಂದ ಧರ್ಮನು ಕೇಳಿದ ಪ್ರಶ್ನೆಗಳಿಗೆಲ್ಲ ಧರ್ಮರಾಜನು ಉತ್ತರಿಸಿ ಅವನನ್ನು ತೃಪ್ತಿಗೊಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು.
01001114a ಯದಾಶ್ರೌಷಂ ಮಾಮಕಾನಾಂ ವರಿಷ್ಠಾನ್
ಧನಂಜಯೇನೈಕರಥೇನ ಭಘ್ನಾನ್ |
01001114c ವಿರಾಟರಾಷ್ಟ್ರೇ ವಸತಾ ಮಹಾತ್ಮನಾ
ತದಾ ನಾಶಂಸೇ ವಿಜಯಾಯ ಸಂಜಯ ||
ಆ ಮಹಾತ್ಮರು ವಿರಾಟರಾಷ್ಟ್ರದಲ್ಲಿ ವಾಸಿಸುತ್ತಿರುವಾಗ ಹಿರಿಯರಿಂದೊಡಗೂಡಿದ ನಮ್ಮವರನ್ನು ಧನಂಜಯನು ಏಕಾಕಿಯಾಗಿಯೇ ಸೋಲಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001115a ಯದಾಶ್ರೌಷಂ ಸತ್ಕೃತಾಂ ಮತ್ಸ್ಯರಾಜ್ಞಾ
ಸುತಾಂ ದತ್ತಾಮುತ್ತರಾಮರ್ಜುನಾಯ |
01001115c ತಾಂ ಚಾರ್ಜುನಃ ಪ್ರತ್ಯಗೃಹ್ಣಾತ್ ಸುತಾರ್ಥೇ
ತದಾ ನಾಶಂಸೇ ವಿಜಯಾಯ ಸಂಜಯ ||
ಮತ್ಸ್ಯರಾಜನು ಅರ್ಜುನನನ್ನು ಸತ್ಕರಿಸಿ ತನ್ನ ಸುತೆ ಉತ್ತರೆಯನ್ನು ಕೊಟ್ಟಾಗ ಅರ್ಜುನನು ಅವಳನ್ನು ತನ್ನ ಸುತನಿಗಾಗಿ ಸ್ವೀಕರಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು, ಸಂಜಯ!
01001116a ಯದಾಶ್ರೌಷಂ ನಿರ್ಜಿತಸ್ಯಾಧನಸ್ಯ
ಪ್ರವ್ರಾಜಿತಸ್ಯ ಸ್ವಜನಾತ್ ಪ್ರಚ್ಯುತಸ್ಯ |
01001116c ಅಕ್ಷೌಹಿಣೀಃ ಸಪ್ತ ಯುಧಿಷ್ಠಿರಸ್ಯ
ತದಾ ನಾಶಂಸೇ ವಿಜಯಾಯ ಸಂಜಯ ||
ರಾಜ್ಯ ಸಂಪತ್ತುಗಳನ್ನು ದ್ಯೂತದಲ್ಲಿ ಕಳೆದುಕೊಂಡು ತನ್ನವರ ಸಂಪರ್ಕವನ್ನೇ ಕಳೆದುಕೊಂಡಿದ್ದ ಯುಧಿಷ್ಠಿರನು ಏಳು ಅಕ್ಷೌಹಿಣೀ ಸೇನೆಯನ್ನು ಒಂದುಗೂಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001117a ಯದಾಶ್ರೌಷಂ ನರನಾರಾಯಣೌ ತೌ
ಕೃಷ್ಣಾರ್ಜುನೌ ವದತೋ ನಾರದಸ್ಯ |
01001117c ಅಹಂ ದ್ರಷ್ಟಾ ಬ್ರಹ್ಮಲೋಕೇ ಸದೇತಿ
ತದಾ ನಾಶಂಸೇ ವಿಜಯಾಯ ಸಂಜಯ ||
ಕೃಷ್ಣಾರ್ಜುನರು ಬ್ರಹ್ಮಲೋಕದಲ್ಲಿ ಜೊತೆಯಲ್ಲಿಯೇ ಕಂಡುಬರುವ ನರನಾರಯಣರು ಎಂದು ನಾರದನಿಂದ ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001118a ಯದಾಶ್ರೌಷಂ ಮಾಧವಂ ವಾಸುದೇವಂ
ಸರ್ವಾತ್ಮನಾ ಪಾಂಡವಾರ್ಥೇ ನಿವಿಷ್ಠಂ |
01001118c ಯಸ್ಯೇಮಾಂ ಗಾಂ ವಿಕ್ರಮಮೇಕಮಾಹುಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಇಡೀ ವಿಶ್ವವನ್ನೇ ಒಂದು ಪಾದದಲ್ಲಿ ಅಳೆದ ವಿಕ್ರಮಿ ಮಾಧವ ವಾಸುದೇವನ ಆತ್ಮವು ಪಾಂಡವರ ಹಿತವನ್ನೇ ಬಯಸುತ್ತದೆ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಂii.!
01001119a ಯದಾಶ್ರೌಷಂ ಕರ್ಣದುರ್ಯೋಧನಾಭ್ಯಾಂ
ಬುದ್ಧಿಂ ಕೃತಾಂ ನಿಗ್ರಹೇ ಕೇಶವಸ್ಯ |
01001119c ತಂ ಚಾತ್ಮಾನಂ ಬಹುಧಾ ದರ್ಶಯಾನಂ
ತದಾ ನಾಶಂಸೇ ವಿಜಯಾಯ ಸಂಜಯ ||
ಕೇಶವನನ್ನು ಬಂಧಿಸಲು ಯೋಚಿಸುತ್ತಿದ್ದ ಕರ್ಣ-ದುರ್ಯೋಧನರಿಗೆ ಅವನು ತನ್ನ ಬಹು ರೂಪಗಳನ್ನು ಕಾಣಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001120a ಯದಾಶ್ರೌಷಂ ವಾಸುದೇವೇ ಪ್ರಯಾತೇ
ರಥಸ್ಯೈಕಾಮಗ್ರತಸ್ತಿಷ್ಟಮಾನಾಂ |
01001120c ಆರ್ತಾಂ ಪೃಥಾಂ ಸಾಂತ್ವಿತಾಂ ಕೇಶವೇನ
ತದಾ ನಾಶಂಸೇ ವಿಜಯಾಯ ಸಂಜಯ ||
ವಾಸುದೇವನು ಇಲ್ಲಿಂದ ಹಿಂತಿರುಗುವಾಗ ಕುಂತಿಯು ಅವನ ರಥದ ಎದುರಿನಲ್ಲಿ ನಿಂತು ಶೋಕಿಸಲು ಕೇಶವನು ಅವಳನ್ನು ಸಂತವಿಸಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001121a ಯದಾಶ್ರೌಷಂ ಮಂತ್ರಿಣಂ ವಾಸುದೇವಂ
ತಥಾ ಭೀಷ್ಮಂ ಶಾಂತನವಂ ಚ ತೇಷಾಂ |
01001121c ಭಾರದ್ವಾಜಂ ಚಾಶಿಷೋಽನುಬ್ರುವಾಣಂ
ತದಾ ನಾಶಂಸೇ ವಿಜಯಾಯ ಸಂಜಯ ||
ಅವರಿಗೆ ವಾಸುದೇವನ ಮಂತ್ರಿತ್ವ, ಶಾಂತನವ ಭೀಷ್ಮ, ಭಾರದ್ವಾಜ ಮೊದಲಾದವರ ಆಶೀರ್ವಾದವಿದೆ ಎಂದು ಕೇಳಿದಾಗಲೇ ನಮ್ಮ ಗೆಲುವಿನ ಮೇಲೆ ಸಂಶಯ ಬಂದಿತ್ತು ಸಂಜಯ!
01001122a ಯದಾಶ್ರೌಷಂ ಕರ್ಣ ಉವಾಚ ಭೀಷ್ಮಂ
ನಾಹಂ ಯೋತ್ಸ್ಯೇ ಯುಧ್ಯಮಾನೇ ತ್ವಯೀತಿ |
01001122c ಹಿತ್ವಾ ಸೇನಾಮಪಚಕ್ರಾಮ ಚೈವ
ತದಾ ನಾಶಂಸೇ ವಿಜಯಾಯ ಸಂಜಯ ||
“ನೀನಿರುವವರೆಗೆ ನಾನು ಯುದ್ಧ ಮಾಡುವುದಿಲ್ಲ!” ಎಂದು ಭೀಷ್ಮನಿಗೆ ಹೇಳಿ ಕರ್ಣನು ಸೇನೆಯನ್ನು ಬಿಟ್ಟು ಹೋದುದನ್ನು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!
01001123a ಯದಾಶ್ರೌಷಂ ವಾಸುದೇವಾರ್ಜುನೌ ತೌ
ತಥಾ ಧನುರ್ಗಾಂಡಿವಮಪ್ರಮೇಯಂ |
01001123c ತ್ರೀಣ್ಯುಗ್ರವೀರ್ಯಾಣಿ ಸಮಾಗತಾನಿ
ತದಾ ನಾಶಂಸೇ ವಿಜಯಾಯ ಸಂಜಯ ||
ವಾಸುದೇವ, ಅರ್ಜುನ ಮತ್ತು ಅಪ್ರಮೇಯ ಗಾಂಡೀವ ಈ ಮೂವರು ಉಗ್ರವೀರ್ಯರೂ ಒಂದಾಗಿದ್ದಾರೆ ಎಂದು ತಿಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!
01001124a ಯದಾಶ್ರೌಷಂ ಕಶ್ಮಲೇನಾಭಿಪನ್ನೇ
ರಥೋಪಸ್ಥೇ ಸೀದಮಾನೇಽರ್ಜುನೇ ವೈ |
01001124c ಕೃಷ್ಣಂ ಲೋಕಾನ್ ದರ್ಶಯಾನಂ ಶರೀರೇ
ತದಾ ನಾಶಂಸೇ ವಿಜಯಾಯ ಸಂಜಯ ||
ದುಃಖಿತ ಅರ್ಜುನನು ರಥದ ಮೇಲೆ ಕುಸಿದು ಶೋಕಿಸುತ್ತಿರುವಾಗ ಕೃಷ್ಣನು ತನ್ನ ಶರೀರದಲ್ಲಿ ವಿಶ್ವವನ್ನೇ ತೋರಿಸಿದನೆಂದು ಕೇಳಿದಾಗಲೇ ನನಗೆ ಗೆಲುವಿನ ಸಂಶಯವಾಗಿತ್ತು ಸಂಜಯ!
01001125a ಯದಾಶ್ರೌಷಂ ಭೀಷ್ಮಮಮಿತ್ರಕರ್ಶನಂ
ನಿಘ್ನಂತಮಾಜಾವಯುತಂ ರಥಾನಾಂ |
01001125c ನೈಷಾಂ ಕಶ್ಚಿದ್ ವಧ್ಯತೇ ದೃಶ್ಯರೂಪಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಅಮಿತ್ರಕರ್ಶನ ಭೀಷ್ಮನು ಹತ್ತುಸಾವಿರ ರಥಿಗಳನ್ನು ಕೊಂದರೂ ಯಾರೇ ಪ್ರಮುಖ ಪಾಂಡವನೊಬ್ಬನನ್ನೂ ಕೊಲ್ಲಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001126a ಯದಾಶ್ರೌಷಂ ಭೀಷ್ಮಮತ್ಯಂತಶೂರಂ
ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಂ |
01001126c ಶಿಖಂಡಿನಂ ಪುರತಃ ಸ್ಥಾಪಯಿತ್ವಾ
ತದಾ ನಾಶಂಸೇ ವಿಜಯಾಯ ಸಂಜಯ ||
ಶಿಖಂಡಿಯನ್ನು ರಥದ ಮುಂದೆ ನಿಲ್ಲಿಸಿಕೊಂಡು ಪಾರ್ಥನು ಅತ್ಯಂತ ಶೂರ, ಗೆಲ್ಲಲಸಾದ್ಯ ಭೀಷ್ಮನನ್ನು ಉರುಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001127a ಯದಾಶ್ರೌಷಂ ಶರತಲ್ಪೇ ಶಯಾನಂ
ವೃದ್ಧಂ ವೀರಂ ಸಾದಿತಂ ಚಿತ್ರಪುಂಖೈಃ |
01001127c ಭೀಷ್ಮಂ ಕೃತ್ವಾ ಸೋಮಕಾನಲ್ಪಶೇಷಾಂಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಸೋಮಕರನ್ನು ಅಲ್ಪಗೊಳಿಸಿದ ಆ ವೃದ್ಧ ವೀರ ಭೀಷ್ಮನು ಗಾಯಗಳಿಂದ ಬಳಲುತ್ತಾ ಶರತಲ್ಪದಮೇಲೆ ಮಲಗಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001128a ಯದಾಶ್ರೌಷಂ ಶಾಂತನವೇ ಶಯಾನೇ
ಪಾನೀಯಾರ್ಥೇ ಚೋದಿತೇನಾರ್ಜುನೇನ |
01001128c ಭೂಮಿಂ ಭಿತ್ತ್ವಾ ತರ್ಪಿತಂ ತತ್ರ ಭೀಷ್ಮಂ
ತದಾ ನಾಶಂಸೇ ವಿಜಯಾಯ ಸಂಜಯ ||
ಮಲಗಿದ್ದ ಶಾಂತನವನು ಪಾನೀಯವನ್ನು ಕೇಳಿದಾಗ ಅರ್ಜುನನು ಭೂಮಿಯನ್ನು ಸೀಳಿ ಭೀಷ್ಮನಿಗೆ ನೀರನ್ನಿತ್ತ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001129a ಯದಾಶ್ರೌಷಂ ಶುಕ್ರಸೂರ್ಯೌ ಚ ಯುಕ್ತೌ
ಕೌಂತೇಯಾನಾಮನುಲೋಮೌ ಜಯಾಯ |
01001129c ನಿತ್ಯಂ ಚಾಸ್ಮನ್ ಶ್ವಾಪದಾ ವ್ಯಾಭಷಂತಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಶುಕ್ರ ಮತ್ತು ಸೂರ್ಯ ಇಬ್ಬರೂ ಕೌಂತೇಯರ ಜಯವನ್ನೇ ಬಯಸುತ್ತಿದ್ದಾರೆ ಮತ್ತು ಪಶುಗಳೂ ಕೂಡ ನಿತ್ಯವೂ ನಮ್ಮನ್ನು ಭಯಪಡಿಸುತ್ತಿವೆ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001130a ಯದಾ ದ್ರೋಣೋ ವಿವಿಧಾನಸ್ತ್ರಮಾರ್ಗಾನ್
ವಿದರ್ಶಯನ್ ಸಮರೇ ಚಿತ್ರಯೋಧೀ |
01001130c ನ ಪಾಂಡವಾನ್ ಶ್ರೇಷ್ಠತಮಾನ್ ನಿಹಂತಿ
ತದಾ ನಾಶಂಸೇ ವಿಜಯಾಯ ಸಂಜಯ ||
ಚಿತ್ರಯೋಧಿ ದ್ರೋಣನು ಸಮರದಲ್ಲಿ ವಿವಿಧ ಅಸ್ತ್ರಗಳ ಪ್ರದರ್ಶನ ಮಾಡಿದರೂ ಪಾಂಡವರಲ್ಲಿ ಶ್ರೇಷ್ಠನಾದ ಯಾರನ್ನೂ ಕೊಲ್ಲಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001131a ಯದಾಶ್ರೌಷಂ ಚಾಸ್ಮದೀಯಾನ್ ಮಹಾರಥಾನ್
ವ್ಯವಸ್ಥಿತಾನರ್ಜುನಸ್ಯಾಂತಕಾಯ |
01001131c ಸಂಶಪ್ತಕಾನ್ ನಿಹತಾನರ್ಜುನೇನ
ತದಾ ನಾಶಂಸೇ ವಿಜಯಾಯ ಸಂಜಯ ||
ಅರ್ಜುನನನ್ನು ಕೊಲ್ಲುವುದಕ್ಕಾಗಿ ಹಠಹಿಡಿದಿದ್ದ ನಮ್ಮವರಾದ ಮಹಾರಥಿ ಸಂಶಪ್ತಕರು ಅರ್ಜುನನಿಂದಲೇ ಮರಣಹೊಂದಿದರೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001132a ಯದಾಶ್ರೌಷಂ ವ್ಯೂಹಮಭೇದ್ಯಮನ್ಯೈ
ರ್ಭಾರದ್ವಾಜೇನಾತ್ತಶಸ್ತ್ರೇಣ ಗುಪ್ತಂ |
01001132c ಭಿತ್ತ್ವಾ ಸೌಭದ್ರಂ ವೀರಮೇಕಂ ಪ್ರವಿಷ್ಟಂ
ತದಾ ನಾಶಂಸೇ ವಿಜಯಾಯ ಸಂಜಯ ||
ಭಾರದ್ವಾಜನಿಂದ ರಚಿತಗೊಂಡು ಶಸ್ತ್ರಗಳಿಂದ ರಕ್ಷಿಸಲ್ಪಟ್ಟ ಅನ್ಯರಿಂದ ಅಭೇಧ್ಯವಾದ ವ್ಯೂಹವನ್ನು ವೀರ ಸೌಭದ್ರಿಯೊಬ್ಬನೇ ಒಡೆದು ಒಳಹೊಕ್ಕಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001133a ಯದಾಭಿಮನ್ಯುಂ ಪರಿವಾರ್ಯ ಬಾಲಂ
ಸರ್ವೇ ಹತ್ವಾ ಹೃಷ್ಟರೂಪಾ ಬಭೂವುಃ |
01001133c ಮಹಾರಥಾಃ ಪಾರ್ಥಮಶಕ್ನುವಂತಸ್
ತದಾ ನಾಶಂಸೇ ವಿಜಯಾಯ ಸಂಜಯ ||
ಪಾರ್ಥನನ್ನು ಎದುರಿಸಲು ಅಶಕ್ತರಾದ ಮಹಾರಥಿಗಳೆಲ್ಲರೂ ಬಾಲಕ ಅಭಿಮನ್ಯುವನ್ನು ಸುತ್ತುವರೆದು ಕೊಂದು ಹರ್ಷಿತರಾದರೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001134a ಯದಾಶ್ರೌಷಮಭಿಮನ್ಯುಂ ನಿಹತ್ಯ
ಹರ್ಷಾನ್ಮೂಧಾನ್ ಕ್ರೋಶತೋ ಧಾರ್ತರಾಷ್ಟ್ರಾನ್
01001134c ಕ್ರೋಧಂ ಮುಕ್ತಂ ಸೈಂಧವೇ ಚಾರ್ಜುನೇನ
ತದಾ ನಾಶಂಸೇ ವಿಜಯಾಯ ಸಂಜಯ ||
ಅಭಿಮನ್ಯುವನ್ನು ಕೊಂದು ಹರ್ಷಿತರಾಗಿ ಮೂಢ ಧಾರ್ತರಾಷ್ಟ್ರರು ಹರ್ಷೋದ್ಗಾರ ಮಾಡುತ್ತಿರುವಾಗ ಕ್ರೋಧಿತ ಅರ್ಜುನನು ಸೈಂಧವನನ್ನು ಕೊಲ್ಲುವ ಪ್ರತಿಜ್ಞೆ ಮಾಡಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!
01001135a ಯದಾಶ್ರೌಷಂ ಸೈಂಧವಾರ್ಥೇ ಪ್ರತಿಜ್ಞಾಂ
ಪ್ರತಿಜ್ಞಾತಾಂ ತದ್ವಧಾಯಾರ್ಜುನೇನ |
01001135c ಸತ್ಯಾಂ ನಿಸ್ತೀರ್ಣಾಂ ಶತ್ರುಮಧ್ಯೇ ಚ ತೇನ
ತದಾ ನಾಶಂಸೇ ವಿಜಯಾಯ ಸಂಜಯ ||
ಸೈಂಧವನನ್ನು ಕೊಲ್ಲುವ ಪ್ರತಿಜ್ಞೆಯನ್ನು ಮಾಡಿದ ಅರ್ಜುನನು ಶತ್ರುಗಳ ಮಧ್ಯದಲ್ಲಿಯೇ ಪ್ರತಿಜ್ಞೆಯನ್ನು ಸತ್ಯವಾಗಿಸಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಾಗಿತ್ತು ಸಂಜಯ!
01001136a ಯದಾಶ್ರೌಷಂ ಶ್ರಾಂತಹಯೇ ಧನಂಜಯೇ
ಮುಕ್ತ್ವಾ ಹಯಾನ್ ಪಾಯಯಿತ್ವೋಪವೃತ್ತಾನ್ |
01001136c ಪುನರ್ಯುಕ್ತ್ವಾ ವಾಸುದೇವಂ ಪ್ರಯಾತಂ
ತದಾ ನಾಶಂಸೇ ವಿಜಯಾಯ ಸಂಜಯ ||
ಧನಂಜಯನ ಕುದುರೆಗಳು ಬಳಲಿರುವಾಗ ಮಾಧವನು ರಣಭೂಮಿಯ ಮಧ್ಯದಲ್ಲಿಯೇ ಅವುಗಳನ್ನು ಬಿಚ್ಚಿ ನೀರುಕುಡಿಸಿ ಪುನಃ ಕಟ್ಟಿ ಮೊದಲಿನಂತೆಯೇ ರಥವನ್ನು ಓಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001137a ಯದಾಶ್ರೌಷಂ ವಾಹನೇಷ್ವಾಶ್ವಸತ್ಸು
ರಥೋಪಸ್ಥೇ ತಿಷ್ಠತಾ ಗಾಂಡಿವೇನ |
01001137c ಸರ್ವಾನ್ ಯೋಧಾನ್ ವಾರಿತಾನರ್ಜುನೇನ
ತದಾ ನಾಶಂಸೇ ವಿಜಯಾಯ ಸಂಜಯ ||
ಕುದುರೆಗಳು ನೀರು ಕುಡಿಯುತ್ತಿರುವಾಗ ಅರ್ಜುನನು ರಥದಲ್ಲಿಯೇ ನಿಂತು ಗಾಂಡೀವದಿಂದ ಸರ್ವ ಯೋದ್ಧರನ್ನೂ ತಡೆಹಿಡಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001138a ಯದಾಶ್ರೌಷಂ ನಾಗಬಲೈರ್ದುರುತ್ಸಹಂ
ದ್ರೋಣಾನೀಕಂ ಯುಯುಧಾನಂ ಪ್ರಮಥ್ಯ |
01001138c ಯಾತಂ ವಾರ್ಷ್ಣೇಯಂ ಯತ್ರ ತೌ ಕೃಷ್ಣಪಾರ್ಥೌ
ತದಾ ನಾಶಂಸೇ ವಿಜಯಾಯ ಸಂಜಯ ||
ವಾರ್ಷ್ಣೇಯ ಯುಯುಧಾನನು ದ್ರೋಣನ ಆನೆಗಳ ಸೇನೆಯನ್ನು ಎಲ್ಲ ಕಡೆ ಚದುರುವಂತೆ ಮಾಡಿ ಅವುಗಳು ಕೃಷ್ಣಪಾರ್ಥರಿದ್ದೆಡೆ ತಲುಪದಂತೆ ತಡೆಗಟ್ಟಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001139a ಯದಾಶ್ರೌಷಂ ಕರ್ಣಮಾಸಾದ್ಯ ಮುಕ್ತಂ
ವಧಾದ್ ಭೀಮಂ ಕುತ್ಸಯಿತ್ವಾ ವಚೋಭಿಃ |
01001139c ಧನುಷ್ಕೋಟ್ಯಾ ತುದ್ಯ ಕರ್ಣೇನ ವೀರಂ
ತದಾ ನಾಶಂಸೇ ವಿಜಯಾಯ ಸಂಜಯ ||
ವೀರ ಕರ್ಣನು ಧನುಸ್ಸಿನ ತುದಿಯಿಂದ ಭೀಮನನ್ನು ಎಳೆಯುತ್ತಾ ತನ್ನ ವಶದಲ್ಲಿ ತೆಗೆದುಕೊಂಡಿದ್ದರೂ ಬರಿಯ ಮೂದಲಿಕೆಯ ಮಾತುಗಳನ್ನು ಮಾತ್ರ ಹೇಳಿ ಅವನನ್ನು ವಧಿಸದೇ ಬಿಡುಗಡೆಮಾಡಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001140a ಯದಾ ದ್ರೋಣಃ ಕೃತವರ್ಮಾ ಕೃಪಶ್ಚ
ಕರ್ಣೋ ದ್ರೌಣಿರ್ಮದ್ರರಾಜಶ್ಚ ಶೂರಃ |
01001140c ಅಮರ್ಷಯನ್ ಸೈಂಧವಂ ವಧ್ಯಮಾನಂ
ತದಾ ನಾಶಂಸೇ ವಿಜಯಾಯ ಸಂಜಯ ||
ದ್ರೋಣ, ಕೃತವರ್ಮ, ಕೃಪ, ಕರ್ಣ, ದ್ರೌಣಿ, ಮತ್ತು ಶೂರ ಮದ್ರರಾಜ ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001141a ಯದಾಶ್ರೌಷಂ ದೇವರಾಜೇನ ದತ್ತಾಂ
ದಿವ್ಯಾಂ ಶಕ್ತಿಂ ವ್ಯಂಸಿತಾಂ ಮಾಧವೇನ |
01001141c ಘಟೋತ್ಕಚೇ ರಾಕ್ಷಸೇ ಘೋರರೂಪೇ
ತದಾ ನಾಶಂಸೇ ವಿಜಯಾಯ ಸಂಜಯ ||
ದೇವರಾಜನಿಂದ ದೊರೆತ ದಿವ್ಯ ಶಕ್ತಿಯನ್ನು ಮಾಧವನ ಯೋಜನೆಯಂತೆ ಘೋರರೂಪಿ ರಾಕ್ಷಸ ಘಟೋತ್ಕಚನ ಮೇಲೆ ಉಪಯೋಗಿಸಲಾಯಿತು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು, ಸಂಜಯ!
01001142a ಯದಾಶ್ರೌಷಂ ಕರ್ಣಘಟೋತ್ಕಚಾಭ್ಯಾಂ
ಯುದ್ಧೇ ಮುಕ್ತಾಂ ಸೂತಪುತ್ರೇಣ ಶಕ್ತಿಂ |
01001142c ಯಯಾ ವಧ್ಯಃ ಸಮರೇ ಸವ್ಯಸಾಚೀ
ತದಾ ನಾಶಂಸೇ ವಿಜಯಾಯ ಸಂಜಯ ||
ಸಮರದಲ್ಲಿ ಸವ್ಯಸಾಚಿಯ ವಧೆಗೆಂದು ಮೀಸಲಾಗಿಟ್ಟಿದ್ದ ಶಕ್ತಿಯನ್ನು ಕರ್ಣ-ಘಟೋತ್ಕಚರ ಯುದ್ಧದಲ್ಲಿ ಸೂತಪುತ್ರನು ಬಳಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001143a ಯದಾಶ್ರೌಷಂ ದ್ರೋಣಮಾಚಾರ್ಯಮೇಕಂ
ಧೃಷ್ಟದ್ಯುಮ್ನೇನಾಭ್ಯತಿಕ್ರಮ್ಯ ಧರ್ಮಂ |
01001143c ರಥೋಪಸ್ಥೇ ಪ್ರಾಯಗತಂ ವಿಶಸ್ತಂ
ತದಾ ನಾಶಂಸೇ ವಿಜಯಾಯ ಸಂಜಯ ||
ಆಚಾರ್ಯ ದ್ರೊಣನು ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತನಾಗಿದ್ದಾಗ ಧರ್ಮವನ್ನು ಅತಿಕ್ರಮಿಸಿ ಧೃಷ್ಟದ್ಯುಮ್ನನು ಅವನನ್ನು ಸಂಹರಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001144a ಯದಾಶ್ರೌಷಂ ದ್ರೌಣಿನಾ ದ್ವೈರಥಸ್ಥಂ
ಮಾದ್ರೀಪುತ್ರಂ ನಕುಲಂ ಲೋಕಮಧ್ಯೇ |
01001144c ಸಮಂ ಯುದ್ಧೇ ಪಾಂಡವಂ ಯುಧ್ಯಮಾನಂ
ತದಾ ನಾಶಂಸೇ ವಿಜಯಾಯ ಸಂಜಯ ||
ಮಾದ್ರೀಪುತ್ರ ನಕುಲನು ಸೇನೆಯ ಮಧ್ಯದಲ್ಲಿ ದ್ರೌಣಿಯ ರಥವನ್ನು ಅಸ್ತವ್ಯಸ್ತ ಮಾಡಿ ಯುದ್ಧದಲ್ಲಿ ಪಾಂಡವನಾದ ತಾನೂ ಸರಿಸಾಟಿಯೆಂದು ತೋರಿಸಿದಲಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಂii.!
01001145a ಯದಾ ದ್ರೋಣೇ ನಿಹತೇ ದ್ರೋಣಪುತ್ರೋ
ನಾರಾಯಣಂ ದಿವ್ಯಮಸ್ತ್ರಂ ವಿಕುರ್ವನ್ |
01001145c ನೈಷಾಮಂತಂ ಗತವಾನ್ ಪಾಂಡವಾನಾಂ
ತದಾ ನಾಶಂಸೇ ವಿಜಯಾಯ ಸಂಜಯ ||
ದ್ರೋಣಾವಸಾನದ ನಂತರ ದ್ರೋಣಪುತ್ರನು ಬಿಟ್ಟ ದಿವ್ಯ ನಾರಾಯಣಾಸ್ತ್ರವು ಪಾಂಡವರನ್ನು ಕೊನೆಗೊಳಿಸುವಲ್ಲಿ ಅಸಫಲವಾದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001146a ಯದಾಶ್ರೌಷಂ ಕರ್ಣಮತ್ಯಂತಶೂರಂ
ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಂ |
01001146c ತಸ್ಮಿನ್ ಭ್ರಾತೄಣಾಂ ವಿಗ್ರಹೇ ದೇವಗುಹ್ಯೇ
ತದಾ ನಾಶಂಸೇ ವಿಜಯಾಯ ಸಂಜಯ ||
ಯುದ್ಧದಲ್ಲಿ ಗೆಲ್ಲಲಸಾದ್ಯ ಅತಿ ಶೂರ ಕರ್ಣನು ದೇವತೆಗಳಿಗೂ ಗುಹ್ಯವಾದ ಆ ಸಹೋದರರ ಸಮರದಲ್ಲಿ ಪಾರ್ಥನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001147a ಯದಾಶ್ರೌಷಂ ದ್ರೋಣಪುತ್ರಂ ಕೃಪಂ ಚ
ದುಃಶಾಸನಂ ಕೃತವರ್ಮಾಣಮುಗ್ರಂ |
01001147c ಯುಧಿಷ್ಠಿರಂ ಶೂನ್ಯಮಧರ್ಷಯಂತಂ
ತದಾ ನಾಶಂಸೇ ವಿಜಯಾಯ ಸಂಜಯ ||
ಯುಧಿಷ್ಠಿರನು ದ್ರೋಣಪುತ್ರ, ಕೃಪ, ದುಃಶಾಸನ ಮತ್ತು ಉಗ್ರ ಕೃತವರ್ಮರನ್ನು ಸಮರದಲ್ಲಿ ಸೋಲಿಸಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001148a ಯದಾಶ್ರೌಷಂ ನಿಹತಂ ಮದ್ರರಾಜಂ
ರಣೇ ಶೂರಂ ಧರ್ಮರಾಜೇನ ಸೂತ |
01001148c ಸದಾ ಸಂಗ್ರಾಮೇ ಸ್ಪರ್ಧತೇ ಯಃ ಸ ಕೃಷ್ಣಂ
ತದಾ ನಾಶಂಸೇ ವಿಜಯಾಯ ಸಂಜಯ ||
ಸಂಜಯ! ಸಂಗ್ರಾಮ ಸಾರಥ್ಯದಲ್ಲಿ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ ರಣದಲ್ಲಿ ಹತನಾದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು.
01001149a ಯದಾಶ್ರೌಷಂ ಕಲಹದ್ಯೂತಮೂಲಂ
ಮಾಯಾಬಲಂ ಸೌಬಲಂ ಪಾಂಡವೇನ |
01001149c ಹತಂ ಸಂಗ್ರಾಮೇ ಸಹದೇವೇನ ಪಾಪಂ
ತದಾ ನಾಶಂಸೇ ವಿಜಯಾಯ ಸಂಜಯ ||
ಕಲಹದ್ಯೂತ ಮೂಲ, ಮಾಯಾಬಲ ಪಾಪಿ ಸೌಬಲನು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!
01001150a ಯದಾಶ್ರೌಷಂ ಶ್ರಾಂತಮೇಕಂ ಶಯಾನಂ
ಹ್ರದಂ ಗತ್ವಾ ಸ್ತಂಭಯಿತ್ವಾ ತದಂಭಃ |
01001150c ದುರ್ಯೋಧನಂ ವಿರಥಂ ಭಗ್ನದರ್ಪಂ
ತದಾ ನಾಶಂಸೇ ವಿಜಯಾಯ ಸಂಜಯ ||
ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ಅಲ್ಲಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ ತೆಗೆದುಕೊಂಡ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!
01001151a ಯದಾಶ್ರೌಷಂ ಪಾಂಡವಾಂಸ್ತಿಷ್ಟಮಾನ್
ಆಂಗಂಗಾಹ್ರದೇ ವಾಸುದೇವೇನ ಸಾರ್ಧಂ |
01001151c ಅಮರ್ಷಣಂ ಧರ್ಷಯತಃ ಸುತಂ ಮೇ
ತದಾ ನಾಶಂಸೇ ವಿಜಯಾಯ ಸಂಜಯ ||
ವಾಸುದೇವನನ್ನೊಡಗೂಡಿದ ಪಾಂಡವರು ಅದೇ ಸರೋವರದ ದಡದಮೇಲೆ ನಿಂತು ನನ್ನ ಮಗನನ್ನು ಅಸಹ್ಯ ಮತ್ತು ಅಶ್ಲೀಲವಾಗಿ ಮೂದಲಿಸಿದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001152a ಯದಾಶ್ರೌಷಂ ವಿವಿಧಾಂಸ್ತಾತ ಮಾರ್ಗಾನ್
ಗದಾಯುದ್ಧೇ ಮಂಡಲಂ ಸಂಚರಂತಂ |
01001152c ಮಿಥ್ಯಾ ಹತಂ ವಾಸುದೇವಸ್ಯ ಬುದ್ಧ್ಯಾ
ತದಾ ನಾಶಂಸೇ ವಿಜಯಾಯ ಸಂಜಯ ||
ಗದಾಯುದ್ಧದಲ್ಲಿ ಸುತ್ತುಬಳಸಿ ವಿವಿಧ ಕುಶಲತೆಗಳನ್ನು ತೋರಿಸುತ್ತಿದ್ದ ನನ್ನ ಮಗನನ್ನು ವಾಸುದೇವನ ಸಲಹೆಯಂತೆ ಅನ್ಯಾಯವಾಗಿ ಹೊಡೆಯಲಾಯಿತು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001153a ಯದಾಶ್ರೌಷಂ ದ್ರೋಣಪುತ್ರಾದಿಭಿಸ್ತೈರ್ಹತಾನ್
ಪಾಂಚಾಲಾನ್ ದ್ರೌಪದೇಯಾಂಶ್ಚ ಸುಪ್ತಾನ್ |
01001153c ಕೃತಂ ಬೀಭತ್ಸಮಯಶಸ್ಯಂ ಚ ಕರ್ಮ
ತದಾ ನಾಶಂಸೇ ವಿಜಯಾಯ ಸಂಜಯ ||
ಮಲಗಿದ್ದ ಪಾಂಚಾಲ ಮತ್ತು ದ್ರೌಪದೇಯರನ್ನು ದ್ರೋಣಪುತ್ರ ಮತ್ತು ಇತರರು ಅನಾವಶ್ಯಕವಾಗಿ ಕೊಲ್ಲುವ ಬೀಭತ್ಸ ಕರ್ವವನ್ನೆಸಗಿದರೆಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001154a ಯದಾಶ್ರೌಷಂ ಭೀಮಸೇನಾನುಯಾತೇನ
ಅಶ್ವತ್ಥಾಮ್ನಾ ಪರಮಾಸ್ತ್ರಂ ಪ್ರಯುಕ್ತಂ |
01001154c ಕ್ರುದ್ಧೇನೈಷೀಕಮವಧೀದ್ಯೇನ ಗರ್ಭಂ
ತದಾ ನಾಶಂಸೇ ವಿಜಯಾಯ ಸಂಜಯ ||
ಭೀಮಸೇನನಿಂದ ಬೆನ್ನಟ್ಟಲ್ಪಟ್ಟ ಅಶ್ವತ್ಥಾಮನು ಸಿಟ್ಟಿನಿಂದ ಹುಲ್ಲಿನ ಮೂಲಕ ಪರಮಾಸ್ತ್ರವನ್ನು ಬಿಟ್ಟು ಗರ್ಭವಧೆಗೈದುದನ್ನು ಕೇಳಿದಾಗಲೇ ವಿಜಯದ ಸಂಶಯವಿತ್ತು ಸಂಜಯ!
01001155a ಯದಾಶ್ರೌಷಂ ಬ್ರಹ್ಮಶಿರೋಽರ್ಜುನೇನ
ಮುಕ್ತಂ ಸ್ವಸ್ತೀತ್ಯಸ್ತ್ರಮಸ್ತ್ರೇಣ ಶಾಂತಂ |
01001155c ಅಶ್ವತ್ಥಾಮ್ನಾ ಮಣಿರತ್ನಂ ಚ ದತ್ತಂ
ತದಾ ನಾಶಂಸೇ ವಿಜಯಾಯ ಸಂಜಯ ||
ಅಶ್ವತ್ಥಾಮನ ಬ್ರಹ್ಮಶಿರವು ಅರ್ಜುನನು ಸ್ವಸ್ತಿ ಎಂದು ಬಿಟ್ಟ ಅಸ್ತ್ರದಿಂದ ಶಾಂತಗೊಂಡಿತು ಮತ್ತು ಅಶ್ವತ್ಥಾಮನು ತನ್ನ ಮಣಿರತ್ನವನ್ನು ಕೊಟ್ಟನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001156a ಯದಾಶ್ರೌಷಂ ದ್ರೋಣಪುತ್ರೇಣ ಗರ್ಭೇ
ವೈರಾಟ್ಯಾ ವೈ ಪಾತ್ಯಮಾನೇ ಮಹಾಸ್ತ್ರೇ |
01001156c ದ್ವೈಪಾಯನಃ ಕೇಶವೋ ದ್ರೋಣಪುತ್ರಂ
ಪರಸ್ಪರೇಣಾಭಿಶಾಪೈಃ ಶಶಾಪ ||
ದ್ರೋಣಪುತ್ರನ ಮಹಾಸ್ತ್ರದಿಂದ ವೈರಾಟಿಯ ಗರ್ಭವು ಹನನಗೊಂಡಾಗ ದ್ವೈಪಾಯನ, ಕೇಶವ ಮತ್ತು ದ್ರೋಣಪುತ್ರರು ಪರಸ್ಪರರಿಗೆ ಶಾಪ-ಅಭಿಶಾಪಗಳನ್ನಿತ್ತರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!
01001157a ಶೋಚ್ಯಾ ಗಾಂಧಾರೀ ಪುತ್ರಪೌತ್ರೈರ್ವಿಹೀನಾ
ತಥಾ ವಧ್ವಃ ಪಿತೃಭಿರ್ಭ್ರಾತೃಭಿಶ್ಚ |
01001157c ಕೃತಂ ಕಾರ್ಯಂ ದುಷ್ಕರಂ ಪಾಂಡವೇಯೈಃ
ಪ್ರಾಪ್ತಂ ರಾಜ್ಯಮಸಪತ್ನಂ ಪುನಸ್ತೈಃ ||
ಪಾಂಡವರು ಸರಿಸಾಟಿಯಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪುತ್ರ, ಪೌತ್ರ, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯ ಬಗ್ಗೆ ಶೋಕಿಸಬೇಕು.
01001158a ಕಷ್ಟಂ ಯುದ್ಧೇ ದಶ ಶೇಷಾಃ ಶ್ರುತಾ ಮೇ
ತ್ರಯೋಽಸ್ಮಾಕಂ ಪಾಂಡವಾನಾಂ ಚ ಸಪ್ತ |
01001158c ದ್ವ್ಯೂನಾ ವಿಂಶತಿರಾಹತಾಕ್ಷೌಹಿಣೀನಾಂ
ತಸ್ಮಿನ್ ಸಂಗ್ರಾಮೇ ವಿಗ್ರಹೇ ಕ್ಷತ್ರಿಯಾಣಾಂ ||
ಆ ಸಂಗ್ರಾಮದಲ್ಲಿ ೧೮ ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಯುದ್ಧದಲ್ಲಿ ಕೇವಲ ೧೦ ಮಂದಿ ಉಳಿದುಕೊಂಡಿದ್ದಾರೆ - ನಮ್ಮವರು ಮೂರು ಮತ್ತು ಪಾಂಡವರ ಕಡೆಯವರು ಏಳು - ಎಂದು ಕೇಳಲು ಬಹಳ ಕಷ್ಟವಾಗುತ್ತಿದೆ.
01001159a ತಮಸಾತ್ವಭ್ಯವಸ್ತೀರ್ಣೋ ಮೋಹ ಆವಿಶತೀವ ಮಾಂ |
01001159c ಸಂಜ್ಞಾಂ ನೋಪಲಭೇ ಸೂತ ಮನೋ ವಿಹ್ವಲತೀವ ಮೇ ||
ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು ಕಳೆದುಕೊಂಡಂಥವನಾಗಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ.”
01001160a ಇತ್ಯುಕ್ತ್ವಾ ಧೃತರಾಷ್ಟ್ರೋಽಥ ವಿಲಪ್ಯ ಬಹುದುಃಖಿತಃ |
01001160c ಮೂರ್ಚ್ಛಿತಃ ಪುನರಾಶ್ವಸ್ತಃ ಸಂಜಯಂ ವಾಕ್ಯಮಬ್ರವೀತ್ ||
ಬಹು ದುಃಖಿತ ಧೃತರಾಷ್ಟ್ರನು ಈ ರೀತಿ ಹೇಳಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು:
01001161a ಸಂಜಯೈವಂಗತೇ ಪ್ರಾಣಾಂಸ್ತ್ಯಕ್ತುಮಿಚ್ಛಾಮಿ ಮಾಚಿರಂ |
01001161c ಸ್ತೋಕಂ ಹ್ಯಪಿ ನ ಪಶ್ಯಾಮಿ ಫಲಂ ಜೀವಿತಧಾರಣೇ ||
“ಸಂಜಯ! ಈಗಲೇ ಈ ಪ್ರಾಣವನ್ನು ತ್ಯಜಿಸ ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ.”
01001162a ತಂ ತಥಾವಾದಿನಂ ದೀನಂ ವಿಲಪಂತಂ ಮಹೀಪತಿಂ |
01001162c ಗಾವಲ್ಗಣಿರಿದಂ ಧೀಮಾನ್ ಮಹಾರ್ಥಂ ವಾಕ್ಯಮಬ್ರವೀತ್ ||
ಈ ರೀತಿ ಹೇಳಿ ದೀನನಾಗಿ ವಿಲಪಿಸುತ್ತಿದ್ದ ಮಹೀಪತಿಗೆ ಧೀಮಂತ ಗಾವಲ್ಗಣಿಯು ಮಹಾರ್ಥವುಳ್ಳ ಈ ಮಾತುಗಳನ್ನಾಡಿದನು:
01001163a ಶ್ರುತವಾನಸಿ ವೈ ರಾಜ್ಞೋ ಮಹೋತ್ಸಾಹಾನ್ಮಹಾಬಲಾನ್|
01001163c ದ್ವೈಪಾಯನಸ್ಯ ವದತೋ ನಾರದಸ್ಯ ಚ ಧೀಮತಃ ||
“ಮಹಾಬಲಶಾಲಿಗಳೂ ಮಹೋತ್ಸಾಹಿಗಳೂ ಆದ ರಾಜರ ಕುರಿತು ಧೀಮಂತ ವೈಶಂಪಾಯನ ಮತ್ತು ನಾರದರು ಹೇಳಿದ ಮಾತುಗಳನ್ನು ಕೇಳಿದ್ದೀಯೆ.
01001164a ಮಹತ್ಸು ರಾಜವಂಶೇಷು ಗುಣೈಃ ಸಮುದಿತೇಷು ಚ |
01001164c ಜಾತಾನ್ ದಿವ್ಯಾಸ್ತ್ರವಿದುಷಃ ಶಕ್ರಪ್ರತಿಮತೇಜಸಃ ||
01001165a ಧರ್ಮೇಣ ಪೃಥಿವೀಂ ಜಿತ್ವಾ ಯಜ್ಞೈರಿಷ್ಟ್ವಾಪ್ತದಕ್ಷಿಣೈಃ |
01001165c ಅಸ್ಮಿನ್ ಲೋಕೇ ಯಶಃ ಪ್ರಾಪ್ಯ ತತಃ ಕಾಲವಶಂ ಗತಾಃ ||
ಮಹಾ ರಾಜವಂಶಗಳಲ್ಲಿ ಜನಿಸಿದ ಹಲವಾರು ಉತ್ತಮ ಗುಣಶಾಲಿಗಳೂ, ದಿವ್ಯಾಸ್ತ್ರ ವಿದುಷರೂ, ಶಕ್ರನಂತೆ ತೇಜಸ್ವಿಗಳೂ ಆದ ರಾಜರುಗಳು ಧರ್ಮ ಪೂರಕವಾಗಿ ಪೃಥ್ವಿಯನ್ನು ಗೆದ್ದು ಧಾರಾಳ ದಕ್ಷಿಣೆಗಳಿಂದ ಯಜ್ಞಕಾರ್ಯಗಳನ್ನೆಸಗಿ ಈ ಲೋಕದಲ್ಲಿ ಯಶವನ್ನು ಹೊಂದಿ ನಂತರದಲ್ಲಿ ಎಲ್ಲರೂ ಕಾಲವಶರಾದರು.
01001166a ವೈನ್ಯಂ ಮಹಾರಥಂ ವೀರಂ ಸೃಂಜಯಂ ಜಯತಾಂ ವರಂ |
01001166c ಸುಹೋತ್ರಂ ರಂತಿದೇವಂ ಚ ಕಕ್ಷೀವಂತಂ ತಥೌಶಿಜಂ ||
01001167a ಬಾಹ್ಲೀಕಂ ದಮನಂ ಶೈಬ್ಯಂ ಶರ್ಯಾತಿಮಜಿತಂ ನಲಂ |
01001167c ವಿಶ್ವಾಮಿತ್ರಮಮಿತ್ರಘ್ನಂ ಅಂಬರೀಷಂ ಮಹಾಬಲಂ ||
01001168a ಮರುತ್ತಂ ಮನುಮಿಕ್ಷ್ವಾಕುಂ ಗಯಂ ಭರತಮೇವ ಚ |
01001168c ರಾಮಂ ದಾಶರಥಿಂ ಚೈವ ಶಶಬಿಂದುಂ ಭಗೀರಥಂ ||
01001168c ಕೃತವೀರ್ಯಂ ಮಹಾಭಾಗಂ ತಥೈವ ಜನಮೇಜಯಂ||
01001169a ಯಯಾತಿಂ ಶುಭಕರ್ಮಾಣಂ ದೇವೈರ್ಯೋ ಯಾಜಿತಃ ಸ್ವಯಂ|
01001169c ಚೈತ್ಯಯೂಪಾಂಕಿತಾ ಭೂಮಿರ್ಯಸ್ಯೇಯಂ ಸವನಾಕರಾ ||
ಈ ರಾಜರುಗಳಲ್ಲಿ ಮಹಾರಥಿ ವೀರ ವೈನ್ಯ, ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯ, ಸುಹೋತ್ರ, ರಂತಿದೇವ, ಕಕ್ಷೀವಂತ, ಔಶಿಜ, ಬಾಹ್ಲೀಕ, ದಮನ, ಶೈಭ್ಯ, ಶರ್ಯಾತಿ, ಅಪರಾಜಿತ ನಲ, ಅಮಿತ್ರಘ್ನ ವಿಶ್ವಾಮಿತ್ರ, ಮಹಾಬಲಿ ಅಂಬರೀಷ, ಮರುತ್ತ, ಮನು, ಇಕ್ಷ್ವಾಕು, ಗಯ, ಭರತ, ದಾಶರಥಿ ರಾಮ, ಶಶಬಿಂದು, ಭಗೀರಥ, ಮಹಾಭಾಗ ಕೃತವೀರ್ಯ, ಜನಮೇಜಯ ಮತ್ತು ಇಡೀ ಭೂಮಿಯನ್ನೇ ಯಜ್ಞಕುಂಡವನ್ನಾಗಿ ಗುರುತುಹಾಕಿ ಸ್ವಯಂ ದೇವತೆಗಳೊಂದಿಗೆ ಯಜ್ಞ ಮೊದಲಾದ ಶುಭಕರ್ಮಗಳನ್ನು ಮಾಡಿದ ಯಯಾತಿ ಸೇರಿರುತ್ತಾರೆ.
01001170a ಇತಿ ರಾಜ್ಞಾಂ ಚತುರ್ವಿಂಶನ್ನಾರದೇನ ಸುರರ್ಷಿಣಾ |
01001170c ಪುತ್ರಶೋಕಾಭಿತಪ್ತಾಯ ಪುರಾ ಶೈಬ್ಯಾಯ ಕೀರ್ತಿತಾಃ ||
ಹಿಂದೆ ಪುತ್ರಶೋಕದಿಂದ ಬಳಲುತ್ತಿದ್ದ ಶೈಬ್ಯನಿಗೆ ಸುರರ್ಷಿ ನಾರದನು ಈ ೨೪ ರಾಜರುಗಳ ಕುರಿತು ಹೇಳಿದ್ದನು.
01001171a ತೇಭ್ಯಶ್ಚಾನ್ಯೇ ಗತಾಃ ಪೂರ್ವಂ ರಾಜಾನೋ ಬಲವತ್ತರಾಃ |
01001171c ಮಹಾರಥಾ ಮಹಾತ್ಮಾನಃ ಸರ್ವೈಃ ಸಮುದಿತಾ ಗುಣೈಃ ||
01001172a ಪೂರುಃ ಕುರುರ್ಯದುಃ ಶೂರೋ ವಿಷ್ವಗಶ್ವೋ ಮಹಾಧೃತಿಃ |
01001172c ಅನೇನಾ ಯುವನಾಶ್ವಶ್ಚ ಕಕುತ್ಸ್ಥೋ ವಿಕ್ರಮೀ ರಘುಃ ||
01001173a ವಿಜಿತೀ ವೀತಿಹೋತ್ರಶ್ಚ ಭವಃ ಶ್ವೇತೋ ಬೃಹದ್ಗುರುಃ |
01001173c ಉಶೀನರಃ ಶತರಥಃ ಕಂಕೋ ದುಲಿದುಹೋ ದ್ರುಮಃ ||
01001174a ದಂಭೋದ್ಭವಃ ಪರೋ ವೇನಃ ಸಗರಃ ಸಂಕೃತಿರ್ನಿಮಿಃ |
01001174c ಅಜೇಯಃ ಪರಶುಃ ಪುಂಡ್ರಃ ಶಂಭುರ್ದೇವಾವೃಧೋಽನಘಃ ||
01001175a ದೇವಾಹ್ವಯಃ ಸುಪ್ರತಿಮಃ ಸುಪ್ರತೀಕೋ ಬೃಹದ್ರಥಃ |
01001175c ಮಹೋತ್ಸಾಹೋ ವಿನೀತಾತ್ಮಾ ಸುಕ್ರತುರ್ನೈಷಧೋ ನಲಃ ||
01001176a ಸತ್ಯವ್ರತಃ ಶಾಂತಭಯಃ ಸುಮಿತ್ರಃ ಸುಬಲಃ ಪ್ರಭುಃ |
01001176c ಜಾನುಜಂಘೋಽನರಣ್ಯೋಽರ್ಕಃ ಪ್ರಿಯಭೃತ್ಯಃ ಶುಭವ್ರತಃ ||
01001177a ಬಲಬಂಧುರ್ನಿರಾಮರ್ದಃ ಕೇತುಶೃಂಗೋ ಬೃಹದ್ಬಲಃ |
01001177c ಧೃಷ್ಟಕೇತುರ್ಬೃಹತ್ಕೇತುರ್ದೀಪ್ತಕೇತುರ್ನಿರಾಮಯಃ ||
01001178a ಅವಿಕ್ಷಿತ್ ಪ್ರಬಲೋ ಧೂರ್ತಃ ಕೃತಬಂಧುರ್ದೃಧೇಷುಧಿಃ |
01001178c ಮಹಾಪುರಾಣಃ ಸಂಭಾವ್ಯಃ ಪ್ರತ್ಯಂಗಃ ಪರಹಾ ಶ್ರುತಿಃ ||
ಇವರಲ್ಲದೇ ಇನ್ನೂ ಇತರ ಬಲಶಾಲಿ ಮಹಾತ್ಮ ಮಹಾರಥಿ ಸರ್ವ ಸುಗುಣೋಪೇತ ರಾಜರುಗಳು ಈ ಹಿಂದೆ ಕಾಲವಶರಾಗಿದ್ದಾರೆ: ಪುರು, ಕುರು, ಯದು, ಶೂರ, ವಿಶಗಶ್ವ, ಮಹಾಧೃತಿ, ಅನೇನ, ಯುವನಾಶ್ವ, ಕುಕುತ್ಸ್ಥ, ವಿಕ್ರಮೀ, ರಘು, ವಿಜಯ, ವೀತಿಹೋತ್ರ, ಭವ, ಶ್ವೇತ, ಬೃಹದ್ಗುರು, ಉಶೀನರ, ಶತರಥ, ಕಂಕ, ದುಲಿದುಹ, ದೃಪ, ದಂಭೋದ್ಭವ, ಪರ, ವೇನ, ಸಗರ, ಸಂಕೃತಿ, ನಿಮಿ, ಅಜೇಯ, ಪರಶು, ಪುಂಡ್ರ, ಶಂಭು, ದೇವಾವೃಧ, ಅನಘ, ದೇವಾಹ್ವಯ, ಸುಪ್ರತಿಮ, ಸುಪ್ರತೀಕ, ಬೃಹದ್ರಥ, ಮಹೋತ್ಸಾಹ, ವಿನೀತಾತ್ಮ, ಸುಕರ್ತು, ನೈಷಧ ನಲ, ಸತ್ಯವ್ರತ, ಶಾಂತಭಯ, ಸುಮಿತ್ರ, ಸುಬಲ, ಪ್ರಭು, ಜಾನುಜಂಘ, ಅನರಣ್ಯ, ಅರ್ಕ, ಪ್ರಿಯಭೃತ್ಯ, ಶುಭವ್ರತ, ಬಲಬಂಧು, ನಿರಾಮರ್ದ, ಕೇತುಶಂಗ, ಬೃಹದ್ಬಲ, ಧೃತಕೇತು, ಬೃಹತ್ಕೇತು, ದೀಪ್ತಕೇತು, ನಿರಾಮಯ, ಅವಿಕ್ಷಿತ್, ಪ್ರಬಲ, ಧೂರ್ತ, ಕೃತಬಂಧು, ದೃಢೇಷುಧಿ, ಮಹಾಪುರಾಣ, ಸಂಭಾವ್ಯ, ಪ್ರತ್ಯಂಗ, ಪರಹಾ ಮತ್ತು ಶೃತಿ.
01001179a ಏತೇ ಚಾನ್ಯೇ ಚ ಬಹವಃ ಶತಶೋಽಥ ಸಹಸ್ರಶಃ |
01001179c ಶ್ರೂಯಂತೇಽಯುತಶಶ್ಚಾನ್ಯೇ ಸಂಖ್ಯಾತಾಶ್ಚಾಪಿ ಪದ್ಮಶಃ ||
01001180a ಹಿತ್ವಾ ಸುವಿಪುಲಾನ್ ಭೋಗಾನ್ ಬುದ್ಧಿಮಂತೋ ಮಹಾಬಲಾಃ|
01001180c ರಾಜಾನೋ ನಿಧನಂ ಪ್ರಾಪ್ತಾಸ್ತವ ಪುತ್ರೈರ್ಮಹತ್ತಮಾಃ ||
ಇವರು ಮತ್ತು ಇನ್ನೂ ಹಲವರು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಬುದ್ಧಿವಂತ ಮಹಾಬಲ ರಾಜರುಗಳು ವಿಪುಲ ಭೋಗಗಳನ್ನು ತೊರೆದು ನಿನ್ನ ಪುತ್ರರ ಹಾಗೆ ಮಹತ್ತಮ ನಿಧನ ಹೊಂದಿದ್ದಾರೆ.
01001181a ಯೇಷಾಂ ದಿವ್ಯಾನಿ ಕರ್ಮಾಣಿ ವಿಕ್ರಮಸ್ತ್ಯಾಗ ಏವ ಚ |
01001181c ಮಾಹಾತ್ಮ್ಯಮಪಿ ಚಾಸ್ತಿಕ್ಯಂ ಸತ್ಯತಾ ಶೌಚಮಾರ್ಜವಂ ||
01001182a ವಿದ್ವದ್ಭಿಃ ಕಥ್ಯತೇ ಲೋಕೇ ಪುರಾಣೈಃ ಕವಿಸತ್ತಮೈಃ |
01001182c ಸರ್ವರ್ದ್ಧಿಗುಣಸಂಪನ್ನಾಸ್ತೇ ಚಾಪಿ ನಿಧನಂ ಗತಾಃ ||
ಯಾರ ದಿವ್ಯ ಕರ್ಮಗಳು, ವಿಕ್ರಮ, ತ್ಯಾಗ, ಮಹಾತ್ಮೆ, ಅಸ್ತಿತ್ವ, ಸತ್ಯತೆ ಮತ್ತು ಶುದ್ಧತೆಯನ್ನು ಲೋಕದ ವಿದ್ವಾಂಸ ಕವಿಸತ್ತಮರು ಪುರಾಣಗಳಲ್ಲಿ ಹೇಳುತ್ತಾರೋ ಆ ಎಲ್ಲ ಗುಣಸಂಪನ್ನರೂ ಏಷ್ಟೋ ಕಾಲದ ಹಿಂದೆಯೇ ನಿಧನರಾಗಿ ಹೋಗಿದ್ದಾರೆ.
01001183a ತವ ಪುತ್ರಾ ದುರಾತ್ಮಾನಃ ಪ್ರತಪ್ತಾಶ್ಚೈವ ಮನ್ಯುನಾ |
01001183c ಲುಬ್ಧಾ ದುರ್ವೃತ್ತಭೂಯಿಷ್ಠಾ ನ ತಾನ್ಶೋಚಿತುಮರ್ಹಸಿ ||
ನಿನ್ನ ಮಕ್ಕಳಾದರೋ ದುರಾತ್ಮರಾಗಿದ್ದರು. ಸಿಟ್ಟು ಮತ್ತು ಲೋಭದಿಂದ ಉರಿಯುತ್ತಿದ್ದರು. ದುರ್ವೃತ್ತಿಗಳಾಗಿದ್ದರು. ಅಂಥವರಿಗಾಗಿ ನೀನು ಶೋಚಿಸುವುದು ಸರಿಯಲ್ಲ.
01001184a ಶ್ರುತವಾನಸಿ ಮೇಧಾವೀ ಬುದ್ಧಿಮಾನ್ ಪ್ರಾಜ್ಞಸಮ್ಮತಃ |
01001184c ಯೇಷಾಂ ಶಾಸ್ತ್ರಾನುಗಾ ಬುದ್ಧಿರ್ನ ತೇ ಮುಹ್ಯಂತಿ ಭಾರತ ||
ಭಾರತ! ನೀನು ಶೃತಿಗಳನ್ನು ಅರಿತವನೂ, ಮೇಧಾವಿಯೂ, ಬುದ್ಧಿವಂತನೂ, ಪ್ರಜ್ಞಸಮ್ಮತನೂ ಆಗಿದ್ದೀಯೆ. ಶಾಸ್ತ್ರಗಳನ್ನು ಅನುಸರಿಸುವವರು ಹೀಗೆ ಶೋಕಿಸುವುದಿಲ್ಲ.
01001185a ನಿಗ್ರಹಾನುಗ್ರಹೌ ಚಾಪಿ ವಿದಿತೌ ತೇ ನರಾಧಿಪ |
01001185c ನಾತ್ಯಂತಮೇವಾನುವೃತ್ತಿಃ ಶ್ರೂಯತೇ ಪುತ್ರರಕ್ಷಣೇ ||
ನರಾಧಿಪ! ನೀನು ವಿಧಿಯ ನಿಗ್ರಹ-ಅನುಗ್ರಹಗಳನ್ನು ತಿಳಿದಿದ್ದೀಯೆ. ಪುತ್ರರಕ್ಷಣೆಗೆಂದು ನೀನು ಮಾಡಿದುದೆಲ್ಲವನ್ನೂ ವಿಧಿಯು ಮೊದಲೇ ನಿರ್ಧರಿಸಿತ್ತು.
01001186a ಭವಿತವ್ಯಂ ತಥಾ ತಚ್ಚ ನಾತಃ ಶೋಚಿತುಮರ್ಹಸಿ |
01001186c ದೈವಂ ಪ್ರಜ್ಞಾವಿಶೇಷೇಣ ಕೋ ನಿವರ್ತಿತುಮರ್ಹತಿ ||
ಹೀಗೆಯೇ ಆಗಬೇಕೆಂದು ಇದ್ದುದಕ್ಕೆ ಶೋಚಿಸುವುದು ಸರಿಯಲ್ಲ. ಪ್ರಜ್ಞಾವಿಷೇಶದಿಂದ ಯಾರುತಾನೆ ದೈವವನ್ನು ತಡೆಗಟ್ಟಲು ಸಾದ್ಯ?
01001187a ವಿಧಾತೃವಿಹಿತಂ ಮಾರ್ಗಂ ನ ಕಶ್ಚಿದತಿವರ್ತತೇ |
01001187c ಕಾಲಮೂಲಮಿದಂ ಸರ್ವಂ ಭಾವಾಭಾವೌ ಸುಖಾಸುಖೇ ||
ವಿಧಾತನಿಂದ ಹಾಕಿ ಕೊಟ್ಟ ಮಾರ್ಗವನ್ನು ಬಿಟ್ಟು ಹೋಗುವುದು ಯಾರಿಗೂ ಅಸಾದ್ಯ. ಆಗುವಂತದ್ದು-ಆಗದಿರುವಂತದ್ದು, ಸುಖ-ದುಃಖ ಇವೆಲ್ಲವೂ ಕಾಲದಿಂದಲೇ ಹುಟ್ಟುತ್ತವೆ.
01001188a ಕಾಲಃ ಪಚತಿ ಭೂತಾನಿ ಕಾಲಃ ಸಂಹರತಿ ಪ್ರಜಾಃ |
01001188c ನಿರ್ದಹಂತಂ ಪ್ರಜಾಃ ಕಾಲಂ ಕಾಲಃ ಶಮಯತೇ ಪುನಃ ||
ಇರುವ ಎಲ್ಲವನ್ನೂ ಕಾಲವೇ ಸೃಸ್ಟಿಸುತ್ತದೆ ಮತ್ತು ಇರುವ ಎಲ್ಲವನ್ನೂ ಅದೇ ನಾಶಪಡಿಸುತ್ತದೆ. ಹುಟ್ಟಿದ ಎಲ್ಲವನ್ನೂ ಕಾಲವು ಸುಡುತ್ತದೆ ಮತ್ತು ಕಾಲವೇ ಆ ಅಗ್ನಿಯನ್ನು ಆರಿಸುತ್ತದೆ.
01001189a ಕಾಲೋ ವಿಕುರುತೇ ಭಾವಾನ್ ಸರ್ವಾನ್ ಲೋಕೇ ಶುಭಾಶುಭಾನ್|
01001189c ಕಾಲಃ ಸಂಕ್ಷಿಪತೇ ಸರ್ವಾಃ ಪ್ರಜಾ ವಿಸೃಜತೇ ಪುನಃ |
01001189e ಕಾಲಃ ಸರ್ವೇಷು ಭೂತೇಷು ಚರತ್ಯವಿಧೃತಃ ಸಮಃ ||
ಲೋಕದಲ್ಲಿರುವ ಸರ್ವ ಶುಭಾಶುಭ ಭಾವಗಳನ್ನೂ ಕಾಲವೇ ಹುಟ್ಟಿಸಿದೆ. ಹುಟ್ಟಿಸಿದ ಎಲ್ಲವನ್ನೂ ಕಾಲವು ನಾಶಗೊಳಿಸಿ ಪುನಃ ಸೃಸ್ಟಿಸುತ್ತದೆ. ಇರುವ ಎಲ್ಲದರಲ್ಲಿಯೂ ಕಾಲವು ಒಂದೇ ಸಮನೆ ಕೆಲಸಮಾಡುತ್ತಿರುತ್ತದೆ.
01001190a ಅತೀತಾನಾಗತಾ ಭಾವಾ ಯೇ ಚ ವರ್ತಂತಿ ಸಾಂಪ್ರತಂ |
01001190c ತಾನ್ಕಾಲನಿರ್ಮಿತಾನ್ಬುದ್ಧ್ವಾ ನ ಸಂಜ್ಞಾಂ ಹಾತುಮರ್ಹಸಿ||
ಹಿಂದೆ ನಡೆದ ಮತ್ತು ಮುಂದೆ ನಡೆಯುವ ಎಲ್ಲವೂ ಕಾಲನಿರ್ಮಿತವಾದವು ಎಂದು ತಿಳಿದೂ ಶೋಕಿಸಿ ಬಳಲುವುದು ಸರಿಯಲ್ಲ.””
01001191 ಸೂತ ಉವಾಚ
01001191a ಅತ್ರೋಪನಿಷದಂ ಪುಣ್ಯಾಂ ಕೃಷ್ಣದ್ವೈಪಾಯನೋಽಬ್ರವೀತ್|
01001191c ಭಾರತಾಧ್ಯಯನಾತ್ ಪುಣ್ಯಾದಪಿ ಪಾದಮಧೀಯತಃ |
01001191e ಶ್ರದ್ದಧಾನಸ್ಯ ಪೂಯಂತೇ ಸರ್ವಪಾಪಾನ್ಯಶೇಷತಃ ||
ಸೂತನು ಹೇಳಿದನು: “ಇದು ಕೃಷ್ಣದ್ವೈಪಾಯನನು ಹೇಳಿದ ಪುಣ್ಯ ಉಪನಿಷತ್ತು. ಭಾರತದ ಒಂದೇ ಒಂದು ಶ್ಲೋಕದ ಅಧ್ಯಯನ ಮಾಡುವುದರಿಂದಲೂ ಪುಣ್ಯವು ದೊರೆಯುತ್ತದೆ. ಶ್ರದ್ಧೆಯಿಂದ ಓದುವವನ ಸರ್ವ ಪಾಪಗಳೂ ಅಶೇಷವಾಗಿ ನಾಶವಾಗುತ್ತವೆ.
01001192a ದೇವರ್ಷಯೋ ಹ್ಯತ್ರ ಪುಣ್ಯಾ ಬ್ರಹ್ಮರಾಜರ್ಷಯಸ್ತಥಾ |
01001192c ಕೀರ್ತ್ಯಂತೇ ಶುಭಕರ್ಮಾಣಸ್ತಥಾ ಯಕ್ಷಮಹೋರಗಾಃ ||
ಈ ಪುಣ್ಯ ಕೃತಿಯಲ್ಲಿ ದೇವರ್ಷಿ, ಬ್ರಹ್ಮರ್ಷಿ, ಮತ್ತು ರಾಜರ್ಷಿಗಳ ಹಾಗೂ ಯಕ್ಷ, ಮಹಾ ಉರಗಗಳ ಶುಭಕರ್ಮಗಳ ಕೀರ್ತನೆಯಿದೆ.
01001193a ಭಗವಾನ್ ವಾಸುದೇವಶ್ಚ ಕೀರ್ತ್ಯತೇಽತ್ರ ಸನಾತನಃ |
01001193c ಸ ಹಿ ಸತ್ಯಂ ಋತಂ ಚೈವ ಪವಿತ್ರಂ ಪುಣ್ಯಮೇವ ಚ ||
ಇದರಲ್ಲಿ ಸನಾತನನೂ ಸತ್ಯನೂ, ಋತನೂ, ಪವಿತ್ರನೂ, ಪುಣ್ಯನೂ ಆದ ಭಗವಾನ್ ವಾಸುದೇವನ ಕೀರ್ತನೆಯಿದೆ.
01001194a ಶಾಶ್ವತಂ ಬ್ರಹ್ಮ ಪರಮಂ ಧ್ರುವಂ ಜ್ಯೋತಿಃ ಸನಾತನಂ |
01001194c ಯಸ್ಯ ದಿವ್ಯಾನಿ ಕರ್ಮಾಣಿ ಕಥಯಂತಿ ಮನೀಷಿಣಃ ||
ಅವನು ಶಾಶ್ವತ, ಬ್ರಹ್ಮ, ಪರಮ ಧೃವ ಜ್ಯೋತಿ, ಸನಾತನ. ಅವನ ದಿವ್ಯಕರ್ಮಗಳನ್ನು ಮನುಷ್ಯರು ಹೊಗಳುತ್ತಿರುತ್ತಾರೆ.
01001195a ಅಸತ್ಸತ್ ಸದಸಚ್ಚೈವ ಯಸ್ಮಾದ್ದೇವಾತ್ ಪ್ರವರ್ತತೇ |
01001195c ಸಂತತಿಶ್ಚ ಪ್ರವೃತ್ತಿಶ್ಚ ಜನ್ಮಮೃತ್ಯುಃ ಪುನರ್ಭವಃ ||
ಇರುವವು ಮತ್ತು ಇಲ್ಲದಿರುವವೆಲ್ಲವೂ - ಸಂತತಿ, ಪ್ರವೃತ್ತಿ, ಜನ್ಮ, ಮೃತ್ಯು, ಪುನರ್ಜನ್ಮ - ಎಲ್ಲವೂ ಅವನಿಂದಲೇ ಹುಟ್ಟುತ್ತವೆ.
01001196a ಅಧ್ಯಾತ್ಮಂ ಶ್ರೂಯತೇ ಯಚ್ಚ ಪಂಚಭೂತಗುಣಾತ್ಮಕಂ |
01001196c ಅವ್ಯಕ್ತಾದಿ ಪರಂ ಯಚ್ಚ ಸ ಏವ ಪರಿಗೀಯತೇ ||
ಅವನನ್ನು ಅಧ್ಯಾತ್ಮನೆಂದೂ, ಪಂಚಭೂತಗುಣಾತ್ಮಕನೆಂದೂ, ಅವ್ಯಕ್ತ, ಆದಿ, ಮತ್ತು ಪರ ಎಂದೂ ವರ್ಣಿಸಿದ್ದಾರೆ.
01001197a ಯತ್ತದ್ಯತಿವರಾ ಯುಕ್ತಾ ಧ್ಯಾನಯೋಗಬಲಾನ್ವಿತಾಃ |
01001197c ಪ್ರತಿಬಿಂಬಮಿವಾದರ್ಶೇ ಪಶ್ಯಂತ್ಯಾತ್ಮನ್ಯವಸ್ಥಿತಂ ||
ಧ್ಯಾನಯೋಗಬಲಾನ್ವಿತ ಯತಿವರರು ಆತ್ಮನಲ್ಲಿರುವ ಅವನನ್ನು ಪ್ರತಿಬಿಂಬದಲ್ಲಿ ಕಾಣುವಂತೆ ನೋಡುತ್ತಾರೆ.
01001198a ಶ್ರದ್ದಧಾನಃ ಸದೋದ್ಯುಕ್ತಃ ಸತ್ಯಧರ್ಮಪರಾಯಣಃ |
01001198c ಆಸೇವನ್ನಿಮಮಧ್ಯಾಯಂ ನರಃ ಪಾಪಾತ್ ಪ್ರಮುಚ್ಯತೇ ||
ಸತ್ಯಧರ್ಮಪರಾಯಣ, ಶ್ರದ್ಧಾವಂತ, ಒಳ್ಳೆಯದನ್ನೇ ಮಾತನಾಡುವ ನರನು ಈ ಅಧ್ಯಾಯವನ್ನು ಓದಿದರೆ ಪಾಪದಿಂದ ವಿಮುಕ್ತನಾಗುತ್ತಾನೆ.
01001199a ಅನುಕ್ರಮಣಿಮಧ್ಯಾಯಂ ಭಾರತಸ್ಯೇಮಮಾದಿತಃ |
01001199c ಆಸ್ತಿಕಃ ಸತತಂ ಶೃಣ್ವನ್ನ ಕೃಚ್ಛ್ರೇಷ್ವವಸೀದತಿ ||
ಭಾರತದ ಈ ಅನುಕ್ರಮಣಿಕಾ ಅಧ್ಯಾಯವನ್ನು ಸತತವೂ ಕೇಳುವ ಆಸ್ತೀಕನು ಸರ್ವ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ.
01001200a ಉಭೇ ಸಂಧ್ಯೇ ಜಪನ್ಕಿಂಚಿತ್ ಸದ್ಯೋ ಮುಚ್ಯೇತ ಕಿಲ್ಬಿಷಾತ್|
01001200c ಅನುಕ್ರಮಣ್ಯಾ ಯಾವತ್ ಸ್ಯಾದಹ್ನಾರಾತ್ರ್ಯಾ ಚ ಸಂಚಿತಂ ||
ಹಗಲು ಮತ್ತು ರಾತ್ರಿಯ ಎರಡೂ ಸಂಧ್ಯಾಸಮಯಗಳಲ್ಲಿ ಅನುಕ್ರಮಣಿಕಾ ಪರ್ವದ ಯಾವುದೇ ಭಾಗವನ್ನು ಓದುವವರು ಹಗಲು ಅಥವಾ ರಾತ್ರಿಯಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುತ್ತಾರೆ.
01001201a ಭಾರತಸ್ಯ ವಪುರ್ಹ್ಯೇತತ್ ಸತ್ಯಂ ಚಾಮೃತಮೇವ ಚ |
01001201c ನವನೀತಂ ಯಥಾ ದಧ್ನೋ ದ್ವಿಪದಾಂ ಬ್ರಾಹ್ಮಣೋ ಯಥಾ||
ದ್ವಿಜರಲ್ಲಿ ಬ್ರಾಹ್ಮಣರು ಹೇಗೋ ಮತ್ತು ಮೊಸರಿಗೆ ಬೆಣ್ಣೆಯು ಹೇಗೋ ಹಾಗೆ ಭಾರತಕ್ಕೆ ಈ ಅಧ್ಯಾಯವು ನಿಜವಾಗಿಯೂ ಅಮೃತವಿದ್ದಂತೆ.
01001202a ಹ್ರದಾನಾಮುದಧಿಃ ಶ್ರೇಷ್ಠೋ ಘೌರ್ವರಿಷ್ಠಾ ಚತುಷ್ಪದಾಂ |
01001202c ಯಥೈತಾನಿ ವರಿಷ್ಠಾನಿ ತಥಾ ಭಾರತಮುಚ್ಯತೇ ||
ಎಲ್ಲ ಸರೋವರಗಳಲ್ಲಿ ಸಾಗರವು ಹೇಗೆ ಶ್ರೇಷ್ಠವೋ, ಎಲ್ಲ ಚತುಷ್ಪದಿಗಳಲ್ಲಿ ಗೋವು ಹೇಗೆ ಶ್ರೇಷ್ಠವೋ, ಹಾಗೆಯೇ ಎಲ್ಲ ಇತಿಹಾಸಗಳಲ್ಲಿ ಭಾರತವು ವರಿಷ್ಠವೆಂದು ಹೇಳಲ್ಪಟ್ಟಿದೆ.
01001203a ಯಶ್ಚೈನಂ ಶ್ರಾವಯೇಚ್ಛ್ರಾದ್ಧೇ ಬ್ರಾಹ್ಮಣಾನ್ ಪಾದಮಂತತಃ|
01001203c ಅಕ್ಷಯ್ಯಮನ್ನಪಾನಂ ತತ್ ಪಿತೄಂಸ್ತಸ್ಯೋಪತಿಷ್ಠತಿ ||
ಶ್ರಾದ್ಧದಲ್ಲಿ ಬ್ರಾಹ್ಮಣನು ಈ ಅಧ್ಯಾಯದ ಕಾಲುಭಾಗವನ್ನು ಪಠಿಸಿದರೂ, ಪಿತೃಗಳಿಗೆ ನೀಡಿದ ಅನ್ನ-ಪಾನೀಯಗಳು ಅಕ್ಷಯವಾಗುತ್ತವೆ.
01001204a ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಹ್ಮಯೇತ್ |
01001204c ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರತರಿಷ್ಯತಿ ||
ಇತಿಹಾಸ-ಪುರಾಣಗಳು ವೇದವನ್ನು ವಿವರಿಸುತ್ತವೆ. ಇವುಗಳನ್ನು ಅರಿಯದಿದ್ದ ಅಲ್ಪವಿದರಿಗೆ ವೇದಗಳೂ ಹೆದರಿಕೊಳ್ಳುತ್ತದೆ.
01001205a ಕಾರ್ಷ್ಣಂ ವೇದಮಿಮಂ ವಿದ್ವಾನ್ ಶ್ರಾವಯಿತ್ವಾರ್ಥಮಶ್ನುತೇ |
01001205c ಭ್ರೂಣಹತ್ಯಾಕೃತಂ ಚಾಪಿ ಪಾಪಂ ಜಹ್ಯಾನ್ನಸಂಶಯಃ ||
ಇದನ್ನು ಪಠಿಸುವ ವಿದ್ವಾಂಸನಿಗೆ ವೇದವನ್ನು ಅರ್ಥಮಾಡಿಕೊಳ್ಳಲು ಸಾದ್ಯವಾಗುತ್ತದೆ. ಭ್ರೂಣಹತ್ಯವನ್ನು ಮಾಡಿದ ಪಾಪವೂ ನಾಶವಾಗುವುದರಲ್ಲಿ ಸಂಶಯವಿಲ್ಲ.
01001206a ಯ ಇಮಂ ಶುಚಿರಧ್ಯಾಯಂ ಪಠೇತ್ ಪರ್ವಣಿ ಪರ್ವಣಿ |
01001206c ಅಧೀತಂ ಭಾರತಂ ತೇನ ಕೃತ್ಸ್ನಂ ಸ್ಯಾದಿತಿ ಮೇ ಮತಿಃ ||
ನನ್ನ ಅಭಿಪ್ರಾಯದಲ್ಲಿ ಈ ಅಧ್ಯಾಯ ಶುಚಿಯನ್ನು ಪರ್ವ ಪರ್ವಗಳಲ್ಲಿ ಓದಿದರೆ ಇಡೀ ಭಾರತವನ್ನೇ ಓದಿದಹಾಗೆ.
01001207a ಯಶ್ಚೇಮಂ ಶೃಣುಯಾನ್ನಿತ್ಯಮಾರ್ಷಂ ಶ್ರದ್ಧಾಸಮನ್ವಿತಃ |
01001207c ಸ ದೀರ್ಘಮಾಯುಃ ಕೀರ್ತಿಂ ಚ ಸ್ವರ್ಗತಿಂ ಚಾಪ್ನುಯಾನ್ನರಃ ||
ಇದನ್ನು ನಿತ್ಯವೂ ಗೌರವ ಮತ್ತು ಶ್ರದ್ಧೆಗಳಿಂದ ಕೇಳುವ ನರನು ದೀರ್ಘಾಯುಷ್ಯ, ಕೀರ್ತಿ ಮತ್ತು ಸ್ವರ್ಗಗತಿಯನ್ನು ಹೊಂದುತ್ತಾನೆ.
01001208a ಚತ್ವಾರ ಏಕತೋ ವೇದಾ ಭಾರತಂ ಚೈಕಮೇಕತಃ |
01001208c ಸಮಾಗತೈಃ ಸುರರ್ಷಿಭಿಸ್ತುಲಾಂ ಆರೋಪಿತಂ ಪುರಾ |
01001208e ಮಹತ್ತ್ವೇ ಚ ಗುರುತ್ವೇ ಚ ಧ್ರಿಯಮಾಣಂ ತತೋಽಧಿಕಂ ||
ಹಿಂದೆ ಸುರರ್ಷಿಗಳು ನಾಲ್ಕೂ ವೇದಗಳನ್ನು ಒಂದುಕಡೆ ಮತ್ತು ಭಾರತವನ್ನು ಇನ್ನೊಂದು ಕಡೆ ಇಟ್ಟು ತುಲನೆ ಮಾಡಿದಾಗ ಭಾರತವೇ ತೂಕದಲ್ಲಿ ಹೆಚ್ಚಾಗಿರುವುದನ್ನು ಕಂಡರಂತೆ.
01001209a ಮಹತ್ತ್ವಾದ್ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ |
01001209c ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ||
ಅಂದಿನಿಂದ ಮಹತ್ವ ಮತ್ತು ಗುರುತ್ವದಲ್ಲಿ ಭಾರತವೇ ಶ್ರೇಷ್ಠವೆಂದು ಮಾನ್ಯತೆಯಿದೆ. ಹೀಗೆ ಮಹತ್ತರ ಭಾರವಿರುವುದರಿಂದಲೇ ಇದನ್ನು ಮಹಾಭಾರತವೆಂದು ಕರೆಯುತ್ತಾರೆ. ಇದರ ನಿಜವಾದ ಅರ್ಥವನ್ನು ತಿಳಿದುಕೊಂಡವನು ಸರ್ವ ಪಾಪಗಳಿಂದ ಮುಕ್ತನಾಗುತ್ತಾನೆ.
01001210a ತಪೋ ನ ಕಲ್ಕೋಽಧ್ಯಯನಂ ನ ಕಲ್ಕಃ
ಸ್ವಾಭಾವಿಕೋ ವೇದವಿಧಿರ್ನ ಕಲ್ಕಃ |
01001210c ಪ್ರಸಹ್ಯ ವಿತ್ತಾಹರಣಂ ನ ಕಲ್ಕಸ್
ತಾನ್ಯೇವ ಭಾವೋಪಹತಾನಿ ಕಲ್ಕಃ ||
ತಪಸ್ಸು ಕೆಟ್ಟದ್ದಲ್ಲ; ಅಧ್ಯಯನವು ಕೆಟ್ಟದ್ದಲ್ಲ, ಸ್ವಾಭಾವಿಕ ವೇದವಿಧಿಗಳೂ ಕೆಟ್ಟವಲ್ಲ; ದುಡಿದು ಧನವನ್ನು ಸಂಪಾದಿಸುವುದೂ ಕೆಟ್ಟದಲ್ಲ. ಆದರೆ ಅವುಗಳಲ್ಲಿರುವ ಭಾವಗಳನ್ನು ಮೀರಿ ಮಾಡಿದರೆ ಅವೆಲ್ಲವೂ ಕೆಟ್ಟವಾಗುತ್ತವೆ.”