Adi Parva: Chapter 9

ಆದಿ ಪರ್ವ: ಪೌಲೋಮ ಪರ್ವ

ರುರುವಿನ ಅರ್ಧ ಆಯುಷ್ಯದಿಂದ ಪ್ರಮದ್ವತಿಗೆ ಪುನರ್ಜೀವನ, ರುರುವು ಕಂಡಲ್ಲಿ ಹಾವುಗಳನ್ನು ಕೊಲ್ಲುವ ಪ್ರತಿಜ್ಞೆ ಕೈಗೊಳ್ಳುವುದು (೧-೧೫). ಒಮ್ಮೆ ಹಾವೆಂದು ಹೊಡೆದಾಗ ಡುಂಡುಭವು ವಿರೋಧಿಸುವುದು (೧೫-೨೦).

01009001 ಸೂತ ಉವಾಚ|

01009001a ತೇಷು ತತ್ರೋಪವಿಷ್ಟೇಷು ಬ್ರಾಹ್ಮಣೇಷು ಸಮಂತತಃ|

01009001c ರುರುಶ್ಚುಕ್ರೋಶ ಗಹನಂ ವನಂ ಗತ್ವಾ ಸುದುಃಖಿತಃ||

ಸೂತನು ಹೇಳಿದನು: “ಅಲ್ಲಿ ಎಲ್ಲ ಬ್ರಾಹ್ಮಣರೂ ಸೇರಿರುವಾಗ ದುಃಖಿತ ರುರುವು ದಟ್ಟ ವನವನ್ನು ಸೇರಿ ಜೋರಾಗಿ ರೋದಿಸಿದನು.

01009002a ಶೋಕೇನಾಭಿಹತಃ ಸೋಽಥ ವಿಲಪನ್ಕರುಣಂ ಬಹು|

01009002c ಅಬ್ರವೀದ್ವಚನಂ ಶೋಚನ್ಪ್ರಿಯಾಂ ಚಿಂತ್ಯ ಪ್ರಮದ್ವರಾಂ||

ಶೋಕಪೀಡಿತನಾದ ಅವನು ಅತ್ಯಂತ ಕರುಣೆಯಿಂದ ಬಹಳಷ್ಟು ವಿಲಪಿಸಿದನು. ಪ್ರಿಯೆ ಪ್ರಮದ್ವರೆಯ ಕುರಿತು ಚಿಂತಿಸುತ್ತಾ ಶೋಕಭರಿತನಾಗಿ ಹೇಳಿದನು:

01009003a ಶೇತೇ ಸಾ ಭುವಿ ತನ್ವಂಗೀ ಮಮ ಶೋಕವಿವರ್ಧಿನೀ|

01009003c ಬಾಂಧವಾನಾಂ ಚ ಸರ್ವೇಷಾಂ ಕಿಂ ನು ದುಃಖಮತಃ ಪರಂ||

“ಭೂಮಿಯ ಮೇಲೆ ಮಲಗಿರುವ ಆ ತನ್ವಂಗಿಯು ನನ್ನ ಶೋಕವನ್ನು ಹೆಚ್ಚಿಸುತ್ತಿದ್ದಾಳೆ. ಸರ್ವ ಬಾಂಧವರಿಗೆ ಇದಕ್ಕಿಂತ ಹೆಚ್ಚಿನ ದುಃಖವು ಯಾವುದಿರಬಹುದು?

01009004a ಯದಿ ದತ್ತಂ ತಪಸ್ತಪ್ತಂ ಗುರವೋ ವಾ ಮಯಾ ಯದಿ|

01009004c ಸಮ್ಯಗಾರಾಧಿತಾಸ್ತೇನ ಸಂಜೀವತು ಮಮ ಪ್ರಿಯಾ||

ನಾನು ಎಂದಾದರೂ ದಾನವನ್ನಿತ್ತಿದ್ದರೆ, ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ಆರಾಧಿಸಿದ್ದರೆ, ಇವೆಲ್ಲವುಗಳ ಪುಣ್ಯವು ನನ್ನ ಪ್ರಿಯೆಯನ್ನು ಪುನಃ ಬದುಕಿಸಲಿ.

01009005a ಯಥಾ ಜನ್ಮಪ್ರಭೃತಿ ವೈ ಯತಾತ್ಮಾಹಂ ಧೃತವ್ರತಃ|

01009005c ಪ್ರಮದ್ವರಾ ತಥಾದ್ಯೈವ ಸಮುತ್ತಿಷ್ಟತು ಭಾಮಿನೀ||

ಜನ್ಮ ಪ್ರಭೃತಿ ನಾನು ನನ್ನನ್ನು ಧೃಢವ್ರತನನ್ನಾಗಿರಿಸಿ ಕೊಂಡಿದ್ದರೆ ಭಾಮಿನಿ ಪ್ರಮದ್ವರೆಯು ಈಗಲೇ ಎದ್ದು ನಿಲ್ಲಲಿ.”

01009006 ದೇವದೂತ ಉವಾಚ|

[1]01009006a ಅಭಿಧತ್ಸೇ ಹ ಯದ್ವಾಚಾ ರುರೋ ದುಃಖೇನ ತನ್ಮೃಷಾ|

01009006c ನ ತು ಮರ್ತ್ಯಸ್ಯ ಧರ್ಮಾತ್ಮನ್ನಾಯುರಸ್ತಿ ಗತಾಯುಷಃ||

ದೇವದೂತನು ಹೇಳಿದನು: “ರುರು! ದುಃಖದಿಂದ ಹೇಳುತ್ತಿರುವ ನಿನ್ನ ಈ ಮಾತುಗಳು ಎಂದೂ ಸತ್ಯವಾಗಲಾರವು. ಧರ್ಮಾತ್ಮ! ಆಯುಷ್ಯ ಕಳೆದ ಮರ್ತ್ಯರ್ಯಾರೂ ಪುನಃ ಜೀವಿತರಾಗುವುದಿಲ್ಲ.

01009007a ಗತಾಯುರೇಷಾ ಕೃಪಣಾ ಗಂಧರ್ವಾಪ್ಸರಸೋಃ ಸುತಾ|

01009007c ತಸ್ಮಾತ್ ಶೋಕೇ ಮನಸ್ತಾತ ಮಾ ಕೃಥಾಸ್ತ್ವಂ ಕಥಂ ಚನ||

ಗಂಧರ್ವ-ಅಪ್ಸರೆಯರ ಈ ಮಗಳ ಆಯುಷ್ಯರೇಖೆಯು ಮುಗಿದುಹೋಗಿದೆ. ಆದುದರಿಂದ ಮಗು! ನಿನ್ನ ಮನಸ್ಸನ್ನು ಶೋಕಸಾಗರದಲ್ಲಿ ಮುಳುಗಿಸಬೇಡ.

01009008a ಉಪಾಯಶ್ಚಾತ್ರ ವಿಹಿತಃ ಪೂರ್ವಂ ದೇವೈರ್ಮಹಾತ್ಮಭಿಃ|

01009008c ತಂ ಯದೀಚ್ಛಸಿ ಕರ್ತುಂ ತ್ವಂ ಪ್ರಾಪ್ಸ್ಯಸೀಮಾಂ ಪ್ರಮದ್ವರಾಂ||

ಆದರೆ ಹಿಂದೆ ಮಹಾತ್ಮ ದೇವತೆಗಳು ವಿಹಿಸಿದ್ದ ಉಪಾಯವೊಂದಿದೆ. ಅದನ್ನು ಮಾಡಲು ನಿನಗೆ ಇಷ್ಟವಿದ್ದರೆ ನೀನು ಪ್ರಮದ್ವರೆಯನ್ನು ಮರಳಿ ಪಡೆಯಬಹುದು.”

01009009 ರುರುರುವಾಚ|

01009009a ಕ ಉಪಾಯಃ ಕೃತೋ ದೇವೈರ್ಬ್ರೂಹಿ ತತ್ತ್ವೇನ ಖೇಚರ|

01009009c ಕರಿಷ್ಯೇ ತಂ ತಥಾ ಶ್ರುತ್ವಾ ತ್ರಾತುಮರ್ಹತಿ ಮಾಂ ಭವಾನ್||

ರುರುವು ಹೇಳಿದನು: “ಖೇಚರ! ದೇವರು ಮಾಡಿಟ್ಟಿರುವ ಉಪಾಯವು ಯಾವುದು ಹೇಳು. ನಿನ್ನಿಂದ ಕೇಳಿ ಅದನ್ನೇ ಮಾಡುತ್ತೇನೆ.”

01009010 ದೇವದೂತ ಉವಾಚ|

01009010a ಆಯುಷೋಽರ್ಧಂ ಪ್ರಯಚ್ಛಸ್ವ ಕನ್ಯಾಯೈ ಭೃಗುನಂದನ|

01009010c ಏವಮುತ್ಥಾಸ್ಯತಿ ರುರೋ ತವ ಭಾರ್ಯಾ ಪ್ರಮದ್ವರಾ||

ದೇವದೂತನು ಹೇಳಿದನು: “ಭೃಗುನಂದನ ರುರು! ನಿನ್ನ ಆಯುಷ್ಯದ ಅರ್ಧವನ್ನು ಈ ಕನ್ಯೆಗೆ ನೀಡಿದರೆ ನಿನ್ನ ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲುವಳು.”

01009011 ರುರುರುವಾಚ|

01009011a ಆಯುಷೋಽರ್ಧಂ ಪ್ರಯಚ್ಛಾಮಿ ಕನ್ಯಾಯೈ ಖೇಚರೋತ್ತಮ|

01009011c ಶೃಂಗಾರರೂಪಾಭರಣಾ ಉತ್ತಿಷ್ಟತು ಮಮ ಪ್ರಿಯಾ||

ರುರುವು ಹೇಳಿದನು: “ಖೇಚರೋತ್ತಮ! ನನ್ನ ಆಯಸ್ಸಿನಲ್ಲಿ ಅರ್ಧವನ್ನು ಈ ಕನ್ಯೆಗೆ ಕೊಡುತ್ತೇನೆ. ಶೃಂಗಾರರೂಪಾಭರಣೆ ನನ್ನ ಪ್ರಿಯೆಯು ಏಳಲಿ.””

01009012 ಸೂತ ಉವಾಚ|

01009012a ತತೋ ಗಂಧರ್ವರಾಜಶ್ಚ ದೇವದೂತಶ್ಚ ಸತ್ತಮೌ|

01009012c ಧರ್ಮರಾಜಮುಪೇತ್ಯೇದಂ ವಚನಂ ಪ್ರತ್ಯಭಾಷತಾಂ||

ಸೂತನು ಹೇಳಿದನು: “ನಂತರ ಗಂಧರ್ವ ರಾಜ ಮತ್ತು ದೇವದೂತ ಸತ್ತಮರೀರ್ವರೂ ಧರ್ಮರಾಜನ ಬಳಿ ಹೋಗಿ ಹೇಳಿದರು:

01009013a ಧರ್ಮರಾಜಾಯುಷೋಽರ್ಧೇನ ರುರೋರ್ಭಾರ್ಯಾ ಪ್ರಮದ್ವರಾ|

01009013c ಸಮುತ್ತಿಷ್ಟತು ಕಲ್ಯಾಣೀ ಮೃತೈವ ಯದಿ ಮನ್ಯಸೇ||

“ಧರ್ಮರಾಜ! ನೀನು ಬಯಸಿದರೆ ಮೃತಳಾದ ರುರುವಿನ ಭಾರ್ಯೆ ಕಲ್ಯಾಣಿ ಪ್ರಮದ್ವರೆಯು ಅವನ ಅರ್ಧ ಆಯುಸ್ಸನ್ನು ಪಡೆದು ಎದ್ದು ನಿಲ್ಲಲಿ.”

01009014 ಧರ್ಮರಾಜ ಉವಾಚ|

01009014a ಪ್ರಮದ್ವರಾ ರುರೋರ್ಭಾರ್ಯಾ ದೇವದೂತ ಯದೀಚ್ಛಸಿ|

01009014c ಉತ್ತಿಷ್ಟತ್ವಾಯುಷೋಽರ್ಧೇನ ರುರೋರೇವ ಸಮನ್ವಿತಾ||

ಧರ್ಮರಾಜನು ಹೇಳಿದನು: “ದೇವದೂತ! ನಿನ್ನ ಇಚ್ಛೆಯಂತೆ ರುರುವಿನ ಅರ್ಧ ಆಯುಸ್ಸನ್ನು ಪಡೆದು ರುರು ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲಲಿ.””

01009015 ಸೂತ ಉವಾಚ|

01009015a ಏವಮುಕ್ತೇ ತತಃ ಕನ್ಯಾ ಸೋದತಿಷ್ಠತ್ಪ್ರಮದ್ವರಾ|

01009015c ರುರೋಸ್ತಸ್ಯಾಯುಷೋಽರ್ಧೇನ ಸುಪ್ತೇವ ವರವರ್ಣಿನೀ||

ಸೂತನು ಹೇಳಿದನು: “ಹೀಗೆ ಹೇಳಿದ ನಂತರ ವರವರ್ಣಿನಿ ಕನ್ಯೆ ಪ್ರಮದ್ವರೆಯು ರುರುವಿನ ಅರ್ಧ ಆಯುಸ್ಸನ್ನು ಪಡೆದು ನಿದ್ದೆಯಿಂದ ಎದ್ದವಳಂತೆ ಎಚ್ಚೆತ್ತಳು.

01009016a ಏತದ್ದೃಷ್ಟಂ ಭವಿಷ್ಯೇ ಹಿ ರುರೋರುತ್ತಮತೇಜಸಃ|

01009016c ಆಯುಷೋಽತಿಪ್ರವೃದ್ಧಸ್ಯ ಭಾರ್ಯಾರ್ಥೇಽರ್ಧಂ ಹ್ರಸತ್ವಿತಿ||

ಉತ್ತಮತೇಜಸ್ವೀ ರುರುವು ಅರ್ಧವನ್ನು ಭಾರ್ಯೆಗೆ ಕೊಟ್ಟು ತನ್ನ ದೀರ್ಘ ಆಯುಸ್ಸನ್ನು ಕಡಿಮೆಮಾಡಿಕೊಂಡಿದ್ದುದು ಮುಂದೆ ಕಾಣಿಸಿಕೊಂಡಿತು.

01009017a ತತ ಇಷ್ಟೇಽಹನಿ ತಯೋಃ ಪಿತರೌ ಚಕ್ರತುರ್ಮುದಾ|

01009017c ವಿವಾಹಂ ತೌ ಚ ರೇಮಾತೇ ಪರಸ್ಪರಹಿತೈಷಿಣೌ||

ನಂತರ ಒಳ್ಳೆಯ ದಿನದಲ್ಲಿ ಅವರೀರ್ವರ ತಂದೆಯಂದಿರು ಸಂತೋಷದಿಂದ ಅವರ ವಿವಾಹವನ್ನು ನೆರವೇರಿಸಿದರು. ಅವರೀರ್ವರೂ ಪರಸ್ಪರರ ಹಿತೈಷಿಗಳಾಗಿ ರಮಿಸಿದರು.

01009018a ಸ ಲಬ್ಧ್ವಾ ದುರ್ಲಭಾಂ ಭಾರ್ಯಾಂ ಪದ್ಮಕಿಂಜಲ್ಕಸಪ್ರಭಾಂ|

01009018c ವ್ರತಂ ಚಕ್ರೇ ವಿನಾಶಾಯ ಜಿಹ್ಮಗಾನಾಂ ಧೃತವ್ರತಃ||

ಪದ್ಮದ ಎಸಳುಗಳಂತೆ ಹೊಳೆಯುತ್ತಿದ್ದ ಭಾರ್ಯೆಯನ್ನು ಬಹಳ ಕಷ್ಟದಿಂದ ಪಡೆದ ಧೃತವ್ರತ ರುರುವು ಸರ್ಪಗಳ ವಿನಾಶದ ವ್ರತವನ್ನು ಕೈಗೊಂಡನು.

01009019a ಸ ದೃಷ್ಟ್ವಾ ಜಿಹ್ಮಗಾನ್ಸರ್ವಾಂಸ್ತೀವ್ರಕೋಪಸಮನ್ವಿತಃ|

01009019c ಅಭಿಹಂತಿ ಯಥಾಸನ್ನಂ ಗೃಹ್ಯ ಪ್ರಹರಣಂ ಸದಾ||

ಎಲ್ಲಿ ಯಾವಾಗ ಸರ್ಪಗಳನ್ನು ನೋಡಿದರೂ ಅತೀವ ಕೋಪಸಮನ್ವಿತನಾಗಿ ಅವನು ಕೈಗೆ ದೊರಕಿದ ಆಯುಧವನ್ನು ಹಿಡಿದು ಕೊಲ್ಲ ತೊಡಗಿದನು.

01009020a ಸ ಕದಾ ಚಿದ್ವನಂ ವಿಪ್ರೋ ರುರುರಭ್ಯಾಗಮನ್ಮಹತ್|

01009020c ಶಯಾನಂ ತತ್ರ ಚಾಪಶ್ಯನ್ಡುಂಡುಭಂ ವಯಸಾನ್ವಿತಂ||

ಒಮ್ಮೆ ವಿಪ್ರ ರುರುವು ಒಂದು ಮಹಾರಣ್ಯಕ್ಕೆ ಬಂದಾಗ ಅಲ್ಲಿ ಮಲಗಿರುವ ವೃದ್ಧ ಡುಂಡುಭವೊಂದನ್ನು ನೋಡಿದನು.

01009021a ತತ ಉದ್ಯಮ್ಯ ದಂಡಂ ಸ ಕಾಲದಂಡೋಪಮಂ ತದಾ|

01009021c ಅಭ್ಯಘ್ನದೃಷಿತೋ ವಿಪ್ರಸ್ತಮುವಾಚಾಥಡುಂಡುಭಃ||

ರೋಷಗೊಂಡ ವಿಪ್ರನು ಅದನ್ನು ಕೊಲ್ಲಲು ಕಾಲದಂಡದಂತಿರುವ ತನ್ನ ದಂಡವನ್ನು ಮೇಲೆತ್ತಿದಾಗ, ಡುಂಡುಭವು ಹೇಳಿತು:

01009022a ನಾಪರಾಧ್ಯಾಮಿ ತೇ ಕಿಂ ಚಿದಹಮದ್ಯ ತಪೋಧನ|

01009022c ಸಂರಂಭಾತ್ತತ್ಕಿಮರ್ಥಂ ಮಾಮಭಿಹಂಸಿ ರುಷಾನ್ವಿತಃ||

“ತಪೋಧನ! ನಾನು ನಿನಗೆ ಯಾವ ಅಪರಾಧವನ್ನೂ ಎಸಗಿಲ್ಲ. ಸಿಟ್ಟಿನಿಂದ ಏಕೆ ನನ್ನನ್ನು ಕೊಲ್ಲಲು ತೊಡಗಿರುವೆ?”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಪೌಲೋಮ ಪರ್ವಣಿ ಪ್ರಮದ್ವರಾಜೀವೋ ನಾಮ ನವೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಪೌಲೋಮ ಪರ್ವದಲ್ಲಿ ಪ್ರಮದ್ವರಾಜೀವ ಎನ್ನುವ ಒಂಭತ್ತನೆಯ ಅಧ್ಯಾಯವು.

[1]ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಕೃಷ್ಣೇ ವಿಷ್ಣೌ ಹೃಷೀಕೇಶೇ ಲೋಕೇಶೇಽಸುರವಿದ್ಧಿಷಿ| ಯದಿ ಮೇ ನಿಶ್ಚಲಾ ಭಕ್ತಿರ್ಮಮ ಜೀವತು ಸಾ ಪ್ರಿಯಾ|| ಅರ್ಥಾತ್: ಒಂದು ವೇಳೆ ಲೋಕೇಶ ಅಸುರವಿನಾಶಿ ವಿಷ್ಣು ಹೃಷೀಕೇಶ ಕೃಷ್ಣನಲ್ಲಿ ನನ್ನ ಭಕ್ತಿಯು ನಿಶ್ಚಲವಾಗಿದೆಯೆಂದಾದರೆ ನನ್ನ ಪ್ರಿಯೆಯು ಜೀವಿಸಲಿ! ಏವಂ ಲಾಲಪ್ಯತಸ್ತಸ್ಯ ಭಾರ್ಯಾರ್ಥೇ ದುಃಖಿತಸ್ಯ ಚ| ದೇವದೂತಸ್ತದಾಭ್ಯೇತ್ಯ ವಾಕ್ಯಮಾಹ ರುರುಂ ವನೇ|| ಅರ್ಥಾತ್: ಹೀಗೆ ಅವನು ಭಾರ್ಯೆಯ ಸಲುವಾಗಿ ದುಃಖಿಸುತ್ತಿರಲು ದೇವತೆಗಳಿಂದ ಕಳುಹಿಸಲ್ಪಟ್ಟ ದೇವದೂತನು ವನದಲ್ಲಿದ್ದ ರುರುವಿನ ಬಳಿಬಂದು ಹೇಳಿದನು.

Leave a Reply

Your email address will not be published. Required fields are marked *