ಆದಿ ಪರ್ವ: ಪೌಲೋಮ ಪರ್ವ
೭
ಕೋಪಗೊಂಡ ಅಗ್ನಿಯು ಎಲ್ಲ ಕರ್ಮಗಳಿಂದ ತನ್ನನ್ನು ಹಿಂದೆತೆಗೆದುಕೊಂಡಿದುದು (೧-೧೫). ದೇವತೆಗಳ ಒತ್ತಾಯದ ಮೇರೆಗೆ ಬ್ರಹ್ಮನು ಅಗ್ನಿಗೆ ಶಾಪವನ್ನು ಸ್ವೀಕರಿಸಲು ಹೇಳುವುದು (೧೫-೨೫).
01007001 ಸೂತ ಉವಾಚ|
01007001a ಶಪ್ತಸ್ತು ಭೃಗುಣಾ ವಹ್ನಿಃ ಕ್ರುದ್ಧೋ ವಾಕ್ಯಮಥಾಬ್ರವೀತ್|
01007001c ಕಿಮಿದಂ ಸಾಹಸಂ ಬ್ರಹ್ಮನ್ಕೃತವಾನಸಿ ಸಾಂಪ್ರತಂ||
ಸೂತನು ಹೇಳಿದನು: “ಭೃಗುವಿನಿಂದ ಶಪಿತನಾದ ವಹ್ನಿಯು ಕೋಪದಿಂದ ಹೇಳಿದನು: “ಬ್ರಾಹ್ಮಣ! ನನ್ನ ವಿರುದ್ಧ ಏಕೆ ಈ ಸಾಹಸ ಕಾರ್ಯವನ್ನೆಸಗಿದೆ?
01007002a ಧರ್ಮೇ ಪ್ರಯತಮಾನಸ್ಯ ಸತ್ಯಂ ಚ ವದತಃ ಸಮಂ|
01007002c ಪೃಷ್ಟೋ ಯದಬ್ರುವಂ ಸತ್ಯಂ ವ್ಯಭಿಚಾರೋಽತ್ರ ಕೋ ಮಮ||
ಸತ್ಯವನ್ನು ಹೇಳು ಎಂದು ಕೇಳಿಕೊಂಡಾಗ ಧರ್ಮದಲ್ಲಿ ನಡೆದು ಸತ್ಯವನ್ನು ನುಡಿದ ನಾನು ಯಾವ ವ್ಯಭಿಚಾರ್ಯವನ್ನು ಮಾಡಿದ್ದೇನೆ?
01007003a ಪೃಷ್ಟೋ ಹಿ ಸಾಕ್ಷೀ ಯಃ ಸಾಕ್ಷ್ಯಂ ಜಾನಮಾನೋಽನ್ಯಥಾ ವದೇತ್|
01007003c ಸ ಪೂರ್ವಾನಾತ್ಮನಃ ಸಪ್ತ ಕುಲೇ ಹನ್ಯಾತ್ತಥಾ ಪರಾನ್||
ಎದಿರು ಸಾಕ್ಷಿಯಾಗಿದ್ದವನು ಸಾಕ್ಷಿಯನ್ನು ಕೇಳಿದಾಗ ತಿಳಿದಿದ್ದುದನ್ನು ಬಿಟ್ಟು ಅನ್ಯಥಾ ಹೇಳಿದರೆ ಅವನು ತನ್ನ ಪೂರ್ವಜರನ್ನು ಮತ್ತು ತನ್ನ ಮುಂದಿನ ಕುಲವನ್ನು - ಎರಡನ್ನೂ ಏಳು ಪೀಳಿಗೆಗಳವರೆಗೆ - ನಾಶಮಾಡುತ್ತಾನೆ.
01007004a ಯಶ್ಚ ಕಾರ್ಯಾರ್ಥತತ್ತ್ವಜ್ಞೋ ಜಾನಮಾನೋ ನ ಭಾಷತೇ|
01007004c ಸೋಽಪಿ ತೇನೈವ ಪಾಪೇನ ಲಿಪ್ಯತೇ ನಾತ್ರ ಸಂಶಯಃ||
ಕೇಳಿದಾಗ ತಿಳಿದುದ್ದದನ್ನು ಹೇಳದೇ ಇದ್ದ ತತ್ವಜ್ಞನೂ ಕೂಡ ಇದೇ ರೀತಿಯ ಪಾಪವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
01007005a ಶಕ್ತೋಽಹಮಪಿ ಶಪ್ತುಂ ತ್ವಾಂ ಮಾನ್ಯಾಸ್ತು ಬ್ರಾಹ್ಮಣಾ ಮಮ|
01007005c ಜಾನತೋಽಪಿ ಚ ತೇ ವ್ಯಕ್ತಂ ಕಥಯಿಷ್ಯೇ ನಿಬೋಧ ತತ್||
ನಾನೂ ಕೂಡ ನಿನ್ನನ್ನು ಶಪಿಸಬಹುದು. ಆದರೆ ನಾನು ಬ್ರಾಹ್ಮಣರನ್ನು ಆದರಿಸುತ್ತೇನೆ. ಇವೆಲ್ಲವೂ ನಿನಗೆ ಮೊದಲೇ ತಿಳಿದಿದ್ದರೂ ನಿನಗೆ ವ್ಯಕ್ತಪಡಿಸಲು ಹೇಳುತ್ತಿದ್ದೇನೆ.
01007006a ಯೋಗೇನ ಬಹುಧಾತ್ಮಾನಂ ಕೃತ್ವಾ ತಿಷ್ಟಾಮಿ ಮೂರ್ತಿಷು|
01007006c ಅಗ್ನಿಹೋತ್ರೇಷು ಸತ್ರೇಷು ಕ್ರಿಯಾಸ್ವಥ ಮಖೇಷು ಚ||
ಯೋಗದಿಂದ ನನ್ನನ್ನು ನಾನೇ ಬಹುದಾತ್ಮನನ್ನಾಗಿ ಮಾಡಿಕೊಂಡು ಅಗ್ನಿಹೋತ್ರ, ಸತ್ರ, ಕ್ರಿಯ ಮತ್ತು ಮಖಗಳಾಗಿದ್ದೇನೆ.
01007007a ವೇದೋಕ್ತೇನ ವಿಧಾನೇನ ಮಯಿ ಯದ್ಧೂಯತೇ ಹವಿಃ|
01007007c ದೇವತಾಃ ಪಿತರಶ್ಚೈವ ತೇನ ತೃಪ್ತಾ ಭವಂತಿ ವೈ||
ವೇದೋಕ್ತ ವಿಧಾನಗಳಿಂದ ನನ್ನಲ್ಲಿ ಹವಿಸ್ಸನ್ನು ಸುರಿದಾಗ ದೇವತೆಗಳು ಮತ್ತು ಪಿತೃಗಳು ತೃಪ್ತರಾಗುತ್ತಾರೆ.
01007008a ಆಪೋ ದೇವಗಣಾಃ ಸರ್ವೇ ಆಪಃ ಪಿತೃಗಣಾಸ್ತಥಾ|
01007008c ದರ್ಶಶ್ಚ ಪೌರ್ಣಮಾಸಶ್ಚ ದೇವಾನಾಂ ಪಿತೃಭಿಃ ಸಹ||
ಸರ್ವ ದೇವಗಣಗಳು ನೀರು ಮತ್ತು ಪಿತೃಗಣಗಳೂ ಕೂಡ ನೀರು. ದೇವ ಮತ್ತು ಪಿತೃಗಳು ಕ್ರಮವಾಗಿ ಪೂರ್ಣಿಮ ಮತ್ತು ಅಮವಾಸ್ಯೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
01007009a ದೇವತಾಃ ಪಿತರಸ್ತಸ್ಮಾತ್ಪಿತರಶ್ಚಾಪಿ ದೇವತಾಃ|
01007009c ಏಕೀಭೂತಾಶ್ಚ ಪೂಜ್ಯಂತೇ ಪೃಥಕ್ತ್ವೇನ ಚ ಪರ್ವಸು||
ದೇವತೆಗಳೇ ಪಿತೃಗಳು ಮತ್ತು ಪಿತೃಗಳೇ ದೇವತೆಗಳು. ಒಂದಾದ ಅವರೀರ್ವರನ್ನೂ ಚಂದ್ರಮಾನ ಮಾಸದ ಪರ್ವಗಳೆರಡಲ್ಲಿ ಪೂಜಿಸುತ್ತಾರೆ.
01007010a ದೇವತಾಃ ಪಿತರಶ್ಚೈವ ಜುಹ್ವತೇ ಮಯಿ ಯತ್ಸದಾ|
01007010c ತ್ರಿದಶಾನಾಂ ಪಿತೄಣಾಂ ಚ ಮುಖಮೇವಮಹಂ ಸ್ಮೃತಃ||
ದೇವತೆ-ಪಿತೃಗಳೀರ್ವರೂ ನನ್ನ ಮೂಲಕವೇ ತಿನ್ನುತ್ತಾರೆ. ಆದುದರಿಂದ ಮೂರೂ ಲೋಕಗಳಲ್ಲಿ ನನ್ನನ್ನು ದೇವ-ಪಿತೃಗಳ ಬಾಯಿಯೆಂದು ಕರೆಯುತ್ತಾರೆ.
01007011a ಅಮಾವಾಸ್ಯಾಂ ಚ ಪಿತರಃ ಪೌರ್ಣಮಾಸ್ಯಾಂ ಚ ದೇವತಾಃ|
01007011c ಮನ್ಮುಖೇನೈವ ಹೂಯಂತೇ ಭುಂಜತೇ ಚ ಹುತಂ ಹವಿಃ|
01007011e ಸರ್ವಭಕ್ಷಃ ಕಥಂ ತೇಷಾಂ ಭವಿಷ್ಯಾಮಿ ಮುಖಂ ತ್ವಹಂ||
ನನ್ನ ಬಾಯಿಯಲ್ಲಿ ಹವಿಸ್ಸನ್ನು ಹಾಕುವುದರ ಮೂಲಕ ಅಮವಾಸ್ಯೆಗಳಲ್ಲಿ ಪಿತೃಗಳು ಮತ್ತು ಪೂರ್ಣಿಮೆಗಳಲ್ಲಿ ದೇವತೆಗಳು ಊಟ ಮಾಡುತ್ತಾರೆ. ಕೇವಲ ಅವರ ಬಾಯಿಯಾಗಿರುವ ನಾನು ಹೇಗೆ ಸರ್ವಭಕ್ಷಕನಾಗಲಿ?”
01007012a ಚಿಂತಯಿತ್ವಾ ತತೋ ವಹ್ನಿಶ್ಚಕ್ರೇ ಸಂಹಾರಮಾತ್ಮನಃ|
01007012c ದ್ವಿಜಾನಾಮಗ್ನಿಹೋತ್ರೇಷು ಯಜ್ಮಸತ್ರಕ್ರಿಯಾಸು ಚ||
ಸ್ವಲ್ಪ ಸಮಯ ಯೋಚಿಸಿ, ವಹ್ನಿಯು ದ್ವಿಜರ ಅಗ್ನಿಹೋತ್ರ, ಯಜ್ಞ, ಸತ್ರ ಮತ್ತು ಕ್ರಿಯೆಗಳೆಲ್ಲವುಗಳಿಂದ ತನ್ನನ್ನು ಹಿಂತೆಗೆದುಕೊಂಡನು.
01007013a ನಿರೋಂಕಾರವಷಟ್ಕಾರಾಃ ಸ್ವಧಾಸ್ವಾಹಾವಿವರ್ಜಿತಾಃ|
01007013c ವಿನಾಗ್ನಿನಾ ಪ್ರಜಾಃ ಸರ್ವಾಸ್ತತ ಆಸನ್ಸುದುಃಖಿತಾಃ||
ಓಂಕಾರ, ವಷಟ್ಕಾರ, ಸ್ವಧಾ, ಸ್ವಾಹಗಳಿಲ್ಲದೇ ಕಾರ್ಯಗಳೆಲ್ಲವೂ ನಿಂತು ಹೋಗಿ ಸರ್ವ ಪ್ರಜೆಗಳೂ ದುಃಖಿತರಾದರು.
01007014a ಅಥರ್ಷಯಃ ಸಮುದ್ವಿಗ್ನಾ ದೇವಾನ್ಗತ್ವಾಬ್ರುವನ್ವಚಃ|
01007014c ಅಗ್ನಿನಾಶಾತ್ಕ್ರಿಯಾಭ್ರಂಶಾದ್ಭ್ರಾಂತಾ ಲೋಕಾಸ್ತ್ರಯೋಽನಘಾಃ|
01007014e ವಿಧಧ್ವಮತ್ರ ಯತ್ಕಾರ್ಯಂ ನ ಸ್ಯಾತ್ಕಾಲಾತ್ಯಯೋ ಯಥಾ||
ಆಗ ಉದ್ವಿಗ್ನರಾದ ಎಲ್ಲ ಋಷಿಗಳು ದೇವತೆಗಳ ಬಳಿ ಹೋಗಿ ಹೇಳಿದರು: “ಅನಘರೇ! ಅಗ್ನಿನಾಶದಿಂದ ಕ್ರಿಯಾಭ್ರಂಶವಾಗಿ ಮೂರೂ ಲೋಕಗಳೂ ಭ್ರಾಂತವಾಗಿವೆ. ಆದುದರಿಂದ ತಡೆಮಾಡದೇ ಉಚಿತ ಕಾರ್ಯವನ್ನು ಕೈಗೊಳ್ಳಿ.”
01007015a ಅಥರ್ಷಯಶ್ಚ ದೇವಾಶ್ಚ ಬ್ರಹ್ಮಾಣಮುಪಗಮ್ಯ ತು|
01007015c ಅಗ್ನೇರಾವೇದಯಂ ಶಾಪಂ ಕ್ರಿಯಾಸಂಹಾರಮೇವ ಚ||
ಆಗ ಋಷಿಗಳು ಮತ್ತು ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ ಅಗ್ನಿಗೆ ಬಂದ ಶಾಪ ಮತ್ತು ಅವನು ತನ್ನ ಕ್ರಿಯೆಗಳನ್ನು ನಿಲ್ಲಿಸಿದ್ದುದನ್ನು ನಿವೇದಿಸಿದರು.
01007016a ಭೃಗುಣಾ ವೈ ಮಹಾಭಾಗ ಶಪ್ತೋಽಗ್ನಿಃ ಕಾರಣಾಂತರೇ|
01007016c ಕಥಂ ದೇವಮುಖೋ ಭೂತ್ವಾ ಯಜ್ಞಭಾಗಾಗ್ರಭುಕ್ತಥಾ|
01007016e ಹುತಭುಕ್ಸರ್ವಲೋಕೇಷು ಸರ್ವಭಕ್ಷತ್ವಮೇಷ್ಯತಿ||
“ಮಹಾಭಾಗ! ಕಾರಣಾಂತರದಿಂದ ಭೃಗುವು ಅಗ್ನಿಯನ್ನು ಶಪಿಸಿದನು. ದೇವಮುಖನಾದ, ಯಜ್ಞಗಳಲ್ಲಿ ಅಗ್ರಭುಕ್ತನಾದ ಅಗ್ನಿಯು ಹೇಗೆ ಸರ್ವಲೋಕದಲ್ಲಿ ಸರ್ವಭಕ್ಷಕನಾಗಲು ಸಾಧ್ಯ?”
01007017a ಶ್ರುತ್ವಾ ತು ತದ್ವಚಸ್ತೇಷಾಮಗ್ನಿಮಾಹೂಯ ಲೋಕಕೃತ್|
01007017c ಉವಾಚ ವಚನಂ ಶ್ಲಕ್ಷ್ಣಂ ಭೂತಭಾವನಮವ್ಯಯಂ||
ಅವರ ಆ ಮಾತುಗಳನ್ನು ಕೇಳಿದ ಲೋಕಕೃತನು ಅಗ್ನಿಯನ್ನು ಕರೆಯಿಸಿ ಆ ಭೂತಭಾವನ ಅವ್ಯಯನಿಗೆ ಈ ಮೃದು ಮಾತುಗಳನ್ನು ಹೇಳಿದನು:
01007018a ಲೋಕಾನಾಮಿಹ ಸರ್ವೇಷಾಂ ತ್ವಂ ಕರ್ತಾ ಚಾಂತ ಏವ ಚ|
01007018c ತ್ವಂ ಧಾರಯಸಿ ಲೋಕಾಂಸ್ತ್ರೀನ್ಕ್ರಿಯಾಣಾಂ ಚ ಪ್ರವರ್ತಕಃ||
“ಈ ಸರ್ವ ಲೋಕಗಳ ಕರ್ತನೂ ನೀನು. ಅಂತನೂ ನೀನು. ನೀನು ಮೂರೂ ಲೋಕಗಳನ್ನೂ, ಕ್ರಿಯೆಗಳನ್ನೂ ನಡೆಸುತ್ತೀಯೆ.
01007019a ಕಸ್ಮಾದೇವಂ ವಿಮೂಢಸ್ತ್ವಮೀಶ್ವರಃ ಸನ್ ಹುತಾಶನಃ|
01007019c ತ್ವಂ ಪವಿತ್ರಂ ಯದಾ ಲೋಕೇ ಸರ್ವಭೂತಗತಶ್ಚ ಹ||
ಸರ್ವೇಶ್ವರ ಹುತಾಶನ! ನೀನು ಹೇಗೆ ಈ ರೀತಿ ಮೂಢನಾಗಲು ಸಾಧ್ಯ? ಲೋಕದ ಸರ್ವಭೂತಗಳಲ್ಲಿ ನೆಲಸಿರುವ ನೀನು ಪವಿತ್ರ.
01007020a ನ ತ್ವಂ ಸರ್ವಶರೀರೇಣ ಸರ್ವಭಕ್ಷತ್ವಮೇಷ್ಯಸಿ|
01007020c ಉಪಾದಾನೇಽರ್ಚಿಷೋ ಯಾಸ್ತೇ ಸರ್ವಂ ಧಕ್ಷ್ಯಂತಿ ತಾಃ ಶಿಖಿನ್||
ನಿನ್ನ ಸರ್ವ ಶರೀರವು ಸರ್ವಭಕ್ಷಕವಾಗುವುದಿಲ್ಲ. ನಿನ್ನ ಅಧೋಮುಖ ಜ್ವಾಲೆಗಳು ಮಾತ್ರ ಸರ್ವವನ್ನೂ ಭಕ್ಷಿಸುತ್ತವೆ.
[1]01007021a ಯಥಾ ಸೂರ್ಯಾಂಶುಭಿಃ ಸ್ಪೃಷ್ಟಂ ಸರ್ವಂ ಶುಚಿ ವಿಭಾವ್ಯತೇ|
01007021c ತಥಾ ತ್ವದರ್ಚಿರ್ನಿರ್ದಗ್ಧಂ ಸರ್ವಂ ಶುಚಿ ಭವಿಷ್ಯತಿ||
ಸೂರ್ಯನ ಕಿರಣಗಳ ಸಂಪರ್ಕದಲ್ಲಿ ಬಂದ ಸರ್ವವೂ ಹೇಗೆ ಶುಚಿಯಾಗುತ್ತವೆಯೋ ಹಾಗೆ ನಿನ್ನಲ್ಲಿ ದಗ್ಧವಾದ ಎಲ್ಲವೂ ಶುಚಿಯಾಗುತ್ತವೆ.
01007022a ತದಗ್ನೇ ತ್ವಂ ಮಹತ್ತೇಜಃ ಸ್ವಪ್ರಭಾವಾದ್ವಿನಿರ್ಗತಂ|
01007022c ಸ್ವತೇಜಸೈವ ತಂ ಶಾಪಂ ಕುರು ಸತ್ಯಂ ಋಷೇರ್ವಿಭೋ|
01007022e ದೇವಾನಾಂ ಚಾತ್ಮನೋ ಭಾಗಂ ಗೃಹಾಣ ತ್ವಂ ಮುಖೇ ಹುತಂ||
ಅಗ್ನಿ! ನೀನು ನಿನ್ನದೇ ಪ್ರಭಾವದಿಂದ ಹುಟ್ಟಿದ ಮಹಾತೇಜಸ್ಸುಳ್ಳವನು. ನಿನ್ನ ಈ ತೇಜಸ್ಸಿನಿಂದ ಈ ಶಾಪವು ಸತ್ಯವಾಗುವಹಾಗೆ ಮಾಡು. ನಿನ್ನ ಮುಖದಿಂದ ನಿನ್ನ ಮತ್ತು ದೇವತೆಗಳ ಆಹುತಿಗಳನ್ನು ಸ್ವೀಕರಿಸು.”
01007023a ಏವಮಸ್ತ್ವಿತಿ ತಂ ವಹ್ನಿಃ ಪ್ರತ್ಯುವಾಚ ಪಿತಾಮಹಂ|
01007023c ಜಗಾಮ ಶಾಸನಂ ಕರ್ತುಂ ದೇವಸ್ಯ ಪರಮೇಷ್ಠಿನಃ||
“ಹೀಗೆಯೇ ಆಗಲಿ” ಎಂದು ಪಿತಾಮಹನಿಗೆ ಉತ್ತರಿಸಿ ವಹ್ನಿಯು ದೇವ ಪರಮೇಷ್ಠಿಯ ಆಜ್ಞೆಯನ್ನು ಪರಿಪಾಲಿಸಲು ಮುಂದಾದನು.
01007024a ದೇವರ್ಷಯಶ್ಚ ಮುದಿತಾಸ್ತತೋ ಜಗ್ಮುರ್ಯಥಾಗತಂ|
01007024c ಋಷಯಶ್ಚ ಯಥಾಪೂರ್ವಂ ಕ್ರಿಯಾಃ ಸರ್ವಾಃ ಪ್ರಚಕ್ರಿರೇ||
ದೇವ ಋಷಿಗಳು ಕೂಡ ಮುದಿತರಾಗಿ ಹಿಂದಿರುಗಿದರು. ಋಷಿಗಳು ಮತ್ತು ಸರ್ವರೂ ಹಿಂದಿನಂತೆ ಕ್ರಿಯೆಗಳಲ್ಲಿ ಮಗ್ನರಾದರು.
01007025a ದಿವಿ ದೇವಾ ಮುಮುದಿರೇ ಭೂತಸಂಘಾಶ್ಚ ಲೌಕಿಕಾಃ|
01007025c ಅಗ್ನಿಶ್ಚ ಪರಮಾಂ ಪ್ರೀತಿಮಾವಾಪ ಹತಕಲ್ಮಷಃ||
ಸ್ವರ್ಗದಲ್ಲಿ ದೇವತೆಗಳು ಮತ್ತು ಭೂಮಿಯಲ್ಲಿ ಸರ್ವ ಭೂತಗಳು ಹರ್ಷಿತರಾದರು ಮತ್ತು ಅಗ್ನಿಯೂ ಹತಕಲ್ಮಶನಾಗಿ ಪರಮ ಸಂತಸವನ್ನು ಹೊಂದಿದನು.
01007026a ಏವಮೇಷ ಪುರಾವೃತ್ತ ಇತಿಹಾಸೋಽಗ್ನಿಶಾಪಜಃ|
01007026c ಪುಲೋಮಸ್ಯ ವಿನಾಶಶ್ಚ ಚ್ಯವನಸ್ಯ ಚ ಸಂಭವಃ||
ಅಗ್ನಿಗೆ ಶಾಪ ಬಂದಿದುದರ, ಪುಲೋಮನ ವಿನಾಶದ ಮತ್ತು ಚ್ಯವನನ ಜನ್ಮದ ಕುರಿತಾದ ಹಿಂದೆ ನಡೆದ ಇತಿಹಾಸವಿದು.”
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಪೌಲೋಮ ಪರ್ವಣಿ ಅಗ್ನಿಶಾಪಮೋಚನೋ ನಾಮ ಸಪ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಪೌಲೋಮ ಪರ್ವದಲ್ಲಿ ಅಗ್ನಿಶಾಪಮೋಚನವೆಂಬ ಏಳನೆಯ ಅಧ್ಯಾಯವು.
[1] ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಕ್ರವ್ಯಾದಾ ಚ ತನುರ್ಯಾ ತೇ ಸಾ ಸರ್ವಂ ಭಕ್ಷಯಿಷ್ಯತಿ| ಅರ್ಥಾತ್: ಕ್ರವ್ಯಾದಾ (ಚಿತಾಗ್ನಿ) ಎನ್ನುವ ನಿನ್ನ ರೂಪವೇನಿದೆಯೋ ಅದು ಸರ್ವವನ್ನು ಭಕ್ಷಿಸುವಂತಾಗುತ್ತದೆ.