ಆದಿ ಪರ್ವ: ಸಂಭವ ಪರ್ವ
೬೬
ವಿಶ್ವಾಮಿತ್ರ-ಮೇನಕೆಯರಲ್ಲಿ ಹೆಣ್ಣು ಮಗುವಿನ ಜನನ (೧-೫). ಹುಟ್ಟಿದ ಮಗುವನ್ನು ಅರಣ್ಯದಲ್ಲಿಯೇ ತೊರೆದು ಹೋಗಲು, ಕಣ್ವನು ಮಗುವನ್ನು ತಂದು, ಶಕುಂತಲೆಯೆಂದು ಸಾಕಿದುದು (೬-೧೫).
01066001 ಶಕುಂತಲೋವಾಚ
01066001a ಏವಮುಕ್ತಸ್ತಯಾ ಶಕ್ರಃ ಸಂದಿದೇಶ ಸದಾಗತಿಂ|
01066001c ಪ್ರಾತಿಷ್ಠತ ತದಾ ಕಾಲೇ ಮೇನಕಾ ವಾಯುನಾ ಸಹ||
ಶಕುಂತಲೆಯು ಹೇಳಿದಳು: ““ಅವಳು ಹೀಗೆ ಹೇಳಿದ ನಂತರ, ಮೇನಕೆಯು ಋಷಿಯ ಸನ್ನಿಧಿಯಲ್ಲಿರುವಾಗ ವಾಯುವೂ ಕೂಡ ಅಲ್ಲಿರುವಂತೆ ಶಕ್ರನು ಆದೇಶವನ್ನಿತ್ತನು.
01066002a ಅಥಾಪಶ್ಯದ್ವರಾರೋಹಾ ತಪಸಾ ದಗ್ಧಕಿಲ್ಬಿಷಂ|
01066002c ವಿಶ್ವಾಮಿತ್ರಂ ತಪಸ್ಯಂತಂ ಮೇನಕಾ ಭೀರುರಾಶ್ರಮೇ||
ಅನಂತರ ಭೀರು ವರಾರೋಹೆ ಮೇನಕೆಯು ತಪಸ್ಸಿನಿಂದ ತನ್ನ ಪಾಪಗಳನ್ನೆಲ್ಲ ಭಸ್ಮಮಾಡಿಕೊಂಡು ತಪಸ್ಸಿನಲ್ಲಿ ತೊಡಗಿದ್ದ ವಿಶ್ವಾಮಿತ್ರನ ಆಶ್ರಮಕ್ಕೆ ಬಂದು ಅವನನ್ನು ನೋಡಿದಳು.
01066003a ಅಭಿವಾದ್ಯ ತತಃ ಸಾ ತಂ ಪ್ರಾಕ್ರೀಡದೃಷಿಸನ್ನಿಧೌ|
01066003c ಅಪೋವಾಹ ಚ ವಾಸೋಽಸ್ಯಾ ಮಾರುತಃ ಶಶಿಸನ್ನಿಭಂ||
ಅವನನ್ನು ಅಭಿವಾದಿಸಿ ಅವಳು ಋಷಿಸನ್ನಿಧಿಯಲ್ಲಿ ಆಟವಾಡಲು ತೊಡಗಿದಳು. ಅದೇ ಸಮಯದಲ್ಲಿ ಮಾರುತನು ಅವಳ ಶಶಿಸನ್ನಿಭ ವಸ್ತ್ರವನ್ನು ಹಾರಿಸಿಬಿಟ್ಟನು.
01066004a ಸಾಗಚ್ಛತ್ತ್ವರಿತಾ ಭೂಮಿಂ ವಾಸಸ್ತದಭಿಲಿಂಗತೀ|
01066004c ಉತ್ಸ್ಮಯಂತೀವ ಸವ್ರೀಡಂ ಮಾರುತಂ ವರವರ್ಣಿನೀ||
ಆಗ ಆ ವರವರ್ಣಿನಿಯು ನಾಚುತ್ತಾ ಮಾರುತನ ಈ ಕ್ರಿಯೆಯಿಂದ ಸಿಡುಕಿದ್ದಾಳೋ ಎಂದು ತೋರುವಂತೆ ತನ್ನ ವಸ್ತ್ರವನ್ನು ಹಿಡಿಯಲು ಅದರ ಹಿಂದೆ ಓಡತೊಡಗಿದಳು.
01066005a ಗೃದ್ಧಾಂ ವಾಸಸಿ ಸಂಭ್ರಾಂತಾಂ ಮೇನಕಾಂ ಮುನಿಸತ್ತಮಃ|
01066005c ಅನಿರ್ದೇಶ್ಯವಯೋರೂಪಾಮಪಶ್ಯದ್ವಿವೃತಾಂ ತದಾ||
ಅದೇ ಸಮಯದಲ್ಲಿ ಮುನಿಸತ್ತಮನು ಆ ನಗ್ನ ಮೇನಕೆಯು ಯಾವುದೇ ರೀತಿಯ ವಯಸ್ಸಿನ ಗುರುತೇ ಇಲ್ಲದ ಅತೀವ ಸುಂದರಿ ಎನ್ನುವುದನ್ನು ಗಮನಿಸಿದನು.
01066006a ತಸ್ಯಾ ರೂಪಗುಣಂ ದೃಷ್ಟ್ವಾ ಸ ತು ವಿಪ್ರರ್ಷಭಸ್ತದಾ|
01066006c ಚಕಾರ ಭಾವಂ ಸಂಸರ್ಗೇ ತಯಾ ಕಾಮವಶಂ ಗತಃ||
ಅವಳ ರೂಪಗುಣವನ್ನು ಕಂಡು ಆ ವಿಪ್ರರ್ಷಭನು ಕಾಮವಶನಾಗಿ ಅವಳ ಸಂಸರ್ಗವನ್ನು ಬಯಸಿದನು.
01066007a ನ್ಯಮಂತ್ರಯತ ಚಾಪ್ಯೇನಾಂ ಸಾ ಚಾಪ್ಯೈಚ್ಛದನಿಂದಿತಾ|
01066007c ತೌ ತತ್ರ ಸುಚಿರಂ ಕಾಲಂ ವನೇ ವ್ಯಹರತಾಮುಭೌ|
01066007e ರಮಮಾಣೌ ಯಥಾಕಾಮಂ ಯಥೈಕದಿವಸಂ ತಥಾ||
ಅವಳನ್ನು ತನ್ನ ಬಳಿ ಬರಲು ಆಮಂತ್ರಿಸಲು ಆ ಅನಿಂದಿತೆಯು ಆಮಂತ್ರಣವನ್ನು ಸ್ವೀಕರಿಸಿದಳು. ಅವರೀರ್ವರೂ ಆ ವನದಲ್ಲಿ ಬಹಳ ಕಾಲ ರಮಿಸಿದರು. ಅವರ ಕಾಮಕೇಳಿಯಲ್ಲಿ ವರ್ಷಗಳೂ ದಿನಗಳಾಗಿ ತೋರಿದವು.
01066008a ಜನಯಾಮಾಸ ಸ ಮುನಿರ್ಮೇನಕಾಯಾಂ ಶಕುಂತಲಾಂ|
01066008c ಪ್ರಸ್ಥೇ ಹಿಮವತೋ ರಮ್ಯೇ ಮಾಲಿನೀಮಭಿತೋ ನದೀಂ||
01066009a ಜಾತಮುತ್ಸೃಜ್ಯ ತಂ ಗರ್ಭಂ ಮೇನಕಾ ಮಾಲಿನೀಮನು|
01066009c ಕೃತಕಾರ್ಯಾ ತತಸ್ತೂರ್ಣಮಗಚ್ಛಚ್ಚಕ್ರಸಂಸದಂ||
ಆ ಮುನಿಯು ಮೇನಕೆಯಲ್ಲಿ ಶಕುಂತಲೆಯನ್ನು ಹುಟ್ಟಿಸಿದನು. ಮೇನಕೆಯು ಹಿಮಾಲಯದ ಕಣಿವೆಯಲ್ಲಿ ಹರಿಯುತ್ತಿರುವ ರಮ್ಯ ಮಾಲಿನೀ ನದಿಯ ತೀರಕ್ಕೆ ಹೋಗಿ ಮಗಳಿಗೆ ಜನ್ಮವನ್ನಿತ್ತು ಅವಳನ್ನು ಅಲ್ಲಿಯೇ ಬಿಟ್ಟು, ತನ್ನ ಕಾರ್ಯವನ್ನು ಪೂರೈಸಿ ಸ್ವರ್ಗಲೋಕಕ್ಕೆ ತೆರಳಿದಳು.
01066010a ತಂ ವನೇ ವಿಜನೇ ಗರ್ಭಂ ಸಿಂಹವ್ಯಾಘ್ರಸಮಾಕುಲೇ|
01066010c ದೃಷ್ಟ್ವಾ ಶಯಾನಂ ಶಕುನಾಃ ಸಮಂತಾತ್ಪರ್ಯವಾರಯನ್||
ಸಿಂಹ ವ್ಯಾಘ್ರಗಳಿಂದ ಕೂಡಿದ ಆ ನಿರ್ಜನ ವನದಲ್ಲಿ ಆ ಮಗುವನ್ನು ಕಂಡ ಶಕುನ ಪಕ್ಷಿಗಳು ಅದರ ಸುತ್ತಲೂ ಕುಳಿತು ರಕ್ಷಿಸಿದವು.
01066011a ನೇಮಾಂ ಹಿಂಸ್ಯುರ್ವನೇ ಬಾಲಾಂ ಕ್ರವ್ಯಾದಾ ಮಾಂಸಗೃದ್ಧಿನಃ|
01066011c ಪರ್ಯರಕ್ಷಂತ ತಾಂ ತತ್ರ ಶಕುಂತಾ ಮೇನಕಾತ್ಮಜಾಂ||
ಈ ರೀತಿ ಆ ಹಿಮಾಲಯದ ವನದಲ್ಲಿ ಶಕುಂತ ಪಕ್ಷಿಗಳು ಮೇನಕಾತ್ಮಜೆಯನ್ನು ಯಾವುದೇ ಮಾಂಸಾಹಾರಿ ಪ್ರಾಣಿಗಳಿಂದ ರಕ್ಷಿಸಿದವು.
01066012a ಉಪಸ್ಪ್ರಷ್ಟುಂ ಗತಶ್ಚಾಹಮಪಶ್ಯಂ ಶಯಿತಾಮಿಮಾಂ|
01066012c ನಿರ್ಜನೇ ವಿಪಿನೇಽರಣ್ಯೇ ಶಕುಂತೈಃ ಪರಿವಾರಿತಾಂ|
01066012e ಆನಯಿತ್ವಾ ತತಶ್ಚೈನಾಂ ದುಹಿತೃತ್ವೇ ನ್ಯಯೋಜಯಂ||
ಸ್ನಾನಕಾರ್ಯಗಳಿಗೆ ಹೋಗಿದ್ದ ನಾನು ಆ ನಿರ್ಜನ ವಿಪಿನಾರಣ್ಯದಲಿ ಶಕುಂತ ಪಕ್ಷಿಗಳಿಂದ ಸುತ್ತುವರೆಯಲ್ಪಟ್ಟು ಮಲಗಿದ್ದ ಈ ಮಗುವನ್ನು ನೋಡಿದೆನು. ಅವಳನ್ನು ಇಲ್ಲಿಗೆ ತಂದು ನನ್ನ ಮಗಳನ್ನಾಗಿ ಮಾಡಿಕೊಂಡೆನು.
01066013a ಶರೀರಕೃತ್ಪ್ರಾಣದಾತಾ ಯಸ್ಯ ಚಾನ್ನಾನಿ ಭುಂಜತೇ|
01066013c ಕ್ರಮೇಣ ತೇ ತ್ರಯೋಽಪ್ಯುಕ್ತಾಃ ಪಿತರೋ ಧರ್ಮನಿಶ್ಚಯೇ||
ಧರ್ಮನಿಶ್ಚಯದ ಪ್ರಕಾರ ಕ್ರಮವಾಗಿ ಮೂರು ರೀತಿಯಲ್ಲಿ ತಂದೆಯೆನಿಸಿಕೊಳ್ಳಬಹುದು: ಶರೀರವನ್ನು ನೀಡುವುದರಿಂದ, ಪ್ರಾಣವನ್ನು ರಕ್ಷಿಸುವುದರಿಂದ ಮತ್ತು ಆಹಾರವನ್ನು ನೀಡುವುದರಿಂದ.
01066014a ನಿರ್ಜನೇ ಚ ವನೇ ಯಸ್ಮಾಚ್ಛಕುಂತೈಃ ಪರಿರಕ್ಷಿತಾ|
01066014c ಶಕುಂತಲೇತಿ ನಾಮಾಸ್ಯಾಃ ಕೃತಂ ಚಾಪಿ ತತೋ ಮಯಾ||
ಆ ನಿರ್ಜನ ವನದಲ್ಲಿ ಶಕುಂತಗಳಿಂದ ಪರಿರಕ್ಷಿತ ಅವಳಿಗೆ ನಾನು ಶಕುಂತಲ ಎಂಬ ಹೆಸರನ್ನಿಟ್ಟೆನು.
01066015a ಏವಂ ದುಹಿತರಂ ವಿದ್ಧಿ ಮಮ ಸೌಮ್ಯ ಶಕುಂತಲಾಂ|
01066015c ಶಕುಂತಲಾ ಚ ಪಿತರಂ ಮನ್ಯತೇ ಮಾಮನಿಂದಿತಾ||
ಸೌಮ್ಯ! ಈ ರೀತಿ ಶಕುಂತಲೆಯನ್ನು ನನ್ನ ಮಗಳೆಂದು ತಿಳಿಯುತ್ತೇನೆ. ಅನಿಂದಿತೆ ಶಕುಂತಲೆಯೂ ಕೂಡ ನನ್ನನ್ನು ತನ್ನ ತಂದೆಯೆಂದು ಭಾವಿಸುತ್ತಾಳೆ.”
01066016a ಏತದಾಚಷ್ಟ ಪೃಷ್ಟಃ ಸನ್ಮಮ ಜನ್ಮ ಮಹರ್ಷಯೇ|
01066016c ಸುತಾಂ ಕಣ್ವಸ್ಯ ಮಾಮೇವಂ ವಿದ್ಧಿ ತ್ವಂ ಮನುಜಾಧಿಪ||
ತನ್ನನ್ನು ಕೇಳಿದಾಗ ಆ ಮಹರ್ಷಿಯು ನನ್ನ ಜನ್ಮದ ಕುರಿತು ಈ ರೀತಿ ಹೇಳಿದನು. ಮನುಜಾಧಿಪ! ಆದುದರಿಂದ ನೀನು ನನ್ನನ್ನು ಕಣ್ವನ ಸುತೆಯೆಂದೇ ತಿಳಿ.
01066017a ಕಣ್ವಂ ಹಿ ಪಿತರಂ ಮನ್ಯೇ ಪಿತರಂ ಸ್ವಮಜಾನತೀ|
01066017c ಇತಿ ತೇ ಕಥಿತಂ ರಾಜನ್ಯಥಾವೃತ್ತಂ ಶ್ರುತಂ ಮಯಾ||
ರಾಜನ್! ನನ್ನ ಪಿತನಾರೆಂದು ತಿಳಿಯದ ನಾನು ಕಣ್ವನನ್ನೇ ನನ್ನ ಪಿತನೆಂದು ಭಾವಿಸುತ್ತೇನೆ. ನಾನು ಕೇಳಿದ್ದುದನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಷಟ್‌ಷಷ್ಟಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತಾರನೆಯ ಅಧ್ಯಾಯವು.