Adi Parva: Chapter 41

ಆದಿ ಪರ್ವ: ಆಸ್ತೀಕ ಪರ್ವ

೪೧

ಜರತ್ಕಾರು ಮತ್ತು ಸಂಕಟದಲ್ಲಿದ್ದ ಅವನ ಪಿತೃಗಳ ಸಂವಾದ (೧-೩೦).

01041001 ಸೂತ ಉವಾಚ

01041001a ಏತಸ್ಮಿನ್ನೇವ ಕಾಲೇ ತು ಜರತ್ಕಾರುರ್ಮಹಾತಪಾಃ|

01041001c ಚಚಾರ ಪೃಥಿವೀಂ ಕೃತ್ಸ್ನಾಂ ಯತ್ರಸಾಯಂಗೃಹೋ ಮುನಿಃ||

ಸೂತನು ಹೇಳಿದನು: “ಇದೇ ಸಮಯದಲ್ಲಿ ಮಹಾತಪಸ್ವಿ ಜರತ್ಕಾರುವು ಸಾಯಂಕಾಲ ಎಲ್ಲಿರುತ್ತಾನೋ ಅಲ್ಲಿಯೇ ತಂಗುತ್ತಾ ಇಡೀ ಪೃಥ್ವಿಯಮೇಲೆ ತಿರುಗುತ್ತಿದ್ದನು.

01041002a ಚರಂದೀಕ್ಷಾಂ ಮಹಾತೇಜಾ ದುಶ್ಚರಾಮಕೃತಾತ್ಮಭಿಃ|

01041002c ತೀರ್ಥೇಷ್ವಾಪ್ಲವನಂ ಕುರ್ವನ್ಪುಣ್ಯೇಷು ವಿಚಚಾರ ಹ||

ಮಹಾತೇಜಸ್ವಿಗಳಿಗೂ ಅಸಾಧ್ಯವೆನಿಸುವ ಕಾರ್ಯಪಾಲನೆ ಮಾಡುತ್ತಾ ಪುಣ್ಯಕ್ಷೇತ್ರಗಳಲ್ಲಿ ತೀರ್ಥಸ್ನಾನಗಳನ್ನು ಮಾಡುತ್ತಾ ಸಂಚರಿಸುತ್ತಿದ್ದನು.

01041003a ವಾಯುಭಕ್ಷೋ ನಿರಾಹಾರಃ ಶುಷ್ಯನ್ನಹರಹರ್ಮುನಿಃ|

01041003c ಸ ದದರ್ಶ ಪಿತೄನ್ಗರ್ತೇ ಲಂಬಮಾನಾನಧೋಮುಖಾನ್||

ನಿರಾಹಾರನಾಗಿ ಕೇವಲ ಗಾಳಿಯನ್ನೇ ಸೇವಿಸುತ್ತಾ ದಿನ ದಿನವೂ ತನ್ನ ದೇಹವನ್ನು ಒಣಗಿಸುತ್ತಿದ್ದನು. ಒಮ್ಮೆ ಅವನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇಲುತ್ತಿದ್ದ ತನ್ನ ಪಿತೃಗಳನ್ನು ಕಂಡನು.

01041004a ಏಕತಂತ್ವವಶಿಷ್ಠಂ ವೈ ವೀರಣಸ್ತಂಬಮಾಶ್ರಿತಾನ್|

01041004c ತಂ ಚ ತಂತುಂ ಶನೈರಾಖುಮಾದದಾನಂ ಬಿಲಾಶ್ರಯಂ||

ಆ ಬಿಲದಲ್ಲಿಯೇ ವಾಸಿಸುತ್ತಿದ್ದ ಇಲಿಗಳು ತಿಂದು ಜೀರ್ಣವಾದ ಒಂದೇ ಒಂದು ವೀರಣದ ಬೇರನ್ನು ಹಿಡಿದು ಅವರು ನೇತಾಡುತ್ತಿದ್ದರು.

01041005a ನಿರಾಹಾರಾನ್ಕೃಶಾನ್ದೀನಾನ್ಗರ್ತೇಽಽರ್ತಾಂಸ್ತ್ರಾಣಮಿಚ್ಛತಃ|

01041005c ಉಪಸೃತ್ಯ ಸ ತಾನ್ದೀನಾನ್ದೀನರೂಪೋಽಭ್ಯಭಾಷತ||

ಆಹಾರವಿಲ್ಲದೇ ಬಡಕಲು ಬಿದ್ದು, ಮೇಲೆ ಬರಲು ಸ್ವಲ್ಪವೂ ಶಕ್ತಿಯಿಲ್ಲದೇ ಅರ್ತ ದೀನರೂಪಿಗಳಾದ ದೀನರ ಬಳಿಬಂದು ಅವನು ಹೇಳಿದನು:

01041006a ಕೇ ಭವಂತೋಽವಲಂಬಂತೇ ವೀರಣಸ್ತಂಬಮಾಶ್ರಿತಾಃ|

01041006c ದುರ್ಬಲಂ ಖಾದಿತೈರ್ಮೂಲೈರಾಖುನಾ ಬಿಲವಾಸಿನಾ||

“ಇದೇ ಬಿಲದಲ್ಲಿ ವಾಸಿಸುತ್ತಿರುವ ಇಲಿಯಿಂದ ತಿನ್ನಲ್ಪಟ್ಟು ದುರ್ಬಲವಾಗಿರುವ ಈ ವೀರಣದ ಬೇರನ್ನು ಹಿಡಿದು ನೇತಾಡುತ್ತಿರುವ ನೀವು ಯಾರು?

01041007a ವೀರಣಸ್ತಂಬಕೇ ಮೂಲಂ ಯದಪ್ಯೇಕಮಿಹ ಸ್ಥಿತಂ|

01041007c ತದಪ್ಯಯಂ ಶನೈರಾಖುರಾದತ್ತೇ ದಶನೈಃ ಶಿತೈಃ||

ನೀವು ಹಿಡಿದು ನಿಂತಿರುವ ಈ ವೀರಣ ಬೇರಿನ ದಾರವು ಇಲಿಯಿಂದ ತಿನ್ನಲ್ಪಟ್ಟು ನಿಧಾನವಾಗಿ ಹರಿದುಹೋಗುತ್ತಿದೆ.

01041008a ಚೇತ್ಸ್ಯತೇಽಲ್ಪಾವಶಿಷ್ಠತ್ವಾದೇತದಪ್ಯಚಿರಾದಿವ|

01041008c ತತಃ ಸ್ಥ ಪತಿತಾರೋಽತ್ರ ಗರ್ತೇ ಅಸ್ಮಿನ್ನಧೋಮುಖಾಃ||

ಈ ಆಳವಾದ ಬಾವಿಯಲ್ಲಿ ನೀವು ತಲೆಕೆಳಗಾಗಿ ಬೀಳುತ್ತೀರಿ ಎನ್ನುವುದಲ್ಲಿ ಸಂಶಯವೇ ಇಲ್ಲ.

01041009a ತತೋ ಮೇ ದುಃಖಮುತ್ಪನ್ನಂ ದೃಷ್ಠ್ವಾ ಯುಷ್ಮಾನಧೋಮುಖಾನ್|

01041009c ಕೃಚ್ಛ್ರಾಮಾಪದಮಾಪನ್ನಾನ್ಪ್ರಿಯಂ ಕಿಂ ಕರವಾಣಿ ವಃ||

ಅಧೋಮುಖರಾಗಿರುವ ನಿಮ್ಮನ್ನು ನೋಡಿ ನನಗೆ ಅತೀವ ದುಃಖವಾಗುತ್ತಿದೆ. ನಿಮಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಲಿ ಹೇಳಿ.

01041010a ತಪಸೋಽಸ್ಯ ಚತುರ್ಥೇನ ತೃತೀಯೇನಾಪಿ ವಾ ಪುನಃ|

01041010c ಅರ್ಧೇನ ವಾಪಿ ನಿಸ್ತರ್ತುಮಾಪದಂ ಬ್ರೂತ ಮಾಚಿರಂ||

ನನ್ನ ತಪೋಬಲದ ಕಾಲುಭಾಗದಿಂದ ಅಥವಾ ಮೂರರಲ್ಲಿ ಒಂದು ಭಾಗ ಅಥವಾ ಅರ್ಧಭಾಗದಿಂದ ನಿಮ್ಮ ಈ ಆಪತ್ತನ್ನು ನಿವಾರಿಸಬಹುದಾದರೆ ಬೇಗ ಹೇಳಿ.

01041011a ಅಥವಾಪಿ ಸಮಗ್ರೇಣ ತರಂತು ತಪಸಾ ಮಮ|

01041011c ಭವಂತಃ ಸರ್ವ ಏವಾಸ್ಮಾತ್ಕಾಮಮೇವಂ ವಿಧೀಯತಾಂ||

ಅಥವಾ, ನನ್ನ ಸಮಗ್ರ ತಪಸ್ಸಿನ ಬಲದಿಂದ ನಿಮ್ಮ ಈ ಎಲ್ಲ ಕಷ್ಟಗಳು ದೂರಾಗುವವೆಂದರೆ ಹೇಳಿ. ಅದಕ್ಕೂ ನಾನು ಸಿದ್ಧನಿದ್ದೇನೆ.”

01041012 ಪಿತರ ಊಚುಃ

01041012a ಋದ್ಧೋ ಭವಾನ್ಬ್ರಹ್ಮಚಾರೀ ಯೋ ನಸ್ತ್ರಾತುಮಿಹೇಚ್ಛತಿ|

01041012c ನ ತು ವಿಪ್ರಾಗ್ರ್ಯ ತಪಸಾ ಶಕ್ಯಮೇತದ್ವ್ಯಪೋಹಿತುಂ||

ಪಿತೃಗಳು ಹೇಳಿದರು: “ಬ್ರಹ್ಮಚಾರಿ! ನಮ್ಮನ್ನು ಉದ್ಧರಿಸಲು ಬಯಸುತ್ತಿದ್ದೀಯೆ. ಆದರೆ ನಿನ್ನ ತಪಸ್ಸಿನಿಂದ ನಮ್ಮನ್ನು ಉಳಿಸಲು ಶಕ್ಯವಿಲ್ಲ.

01041013a ಅಸ್ತಿ ನಸ್ತಾತ ತಪಸಃ ಫಲಂ ಪ್ರವದತಾಂ ವರ|

01041013c ಸಂತಾನಪ್ರಕ್ಷಯಾದ್ಬ್ರಹ್ಮನ್ಪತಾಮೋ ನಿರಯೇಽಶುಚೌ||

ಮಗು! ನಮ್ಮಲ್ಲಿ ಕೂಡ ತಪಸ್ಸಿನ ಶ್ರೇಷ್ಠ ಫಲಗಳಿವೆ. ಆದರೆ ಬ್ರಾಹ್ಮಣ! ಸಂತಾನದ ಕೊರತೆಯಿಂದಾಗಿ ನಾವು ಈ ನರಕದಲ್ಲಿ ಬೀಳುತ್ತಿದ್ದೇವೆ.

01041014a ಲಂಬತಾಮಿಹ ನಸ್ತಾತ ನ ಜ್ಞಾನಂ ಪ್ರತಿಭಾತಿ ವೈ|

01041014c ಯೇನ ತ್ವಾಂ ನಾಭಿಜಾನೀಮೋ ಲೋಕೇ ವಿಖ್ಯಾತಪೌರುಷಂ||

ಮಗು! ಇಲ್ಲಿ ನೇತಾಡುತ್ತಿರುವ ನಮ್ಮ ಜ್ಞಾನ ಪ್ರತಿಭೆಯು ಕುಂದುತ್ತಿದೆ. ಆದುದರಿಂದ ನೀನು ಪೌರುಷದಲ್ಲಿ ಲೋಕದಲ್ಲೆಲ್ಲಾ ವಿಖ್ಯಾತನಾಗಿದ್ದರೂ ನಮಗೆ ನಿನ್ನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

01041015a ಋದ್ಧೋ ಭವಾನ್ಮಹಾಭಾಗೋ ಯೋ ನಃ ಶೋಚ್ಯಾನ್ಸುದುಃಖಿತಾನ್|

01041015c ಶೋಚಸ್ಯುಪೇತ್ಯ ಕಾರುಣ್ಯಾಚ್ಛೃಣು ಯೇ ವೈ ವಯಂ ದ್ವಿಜ||

ಮಹಾಭಾಗ ನೀನು ಪೂಜಿಸಲರ್ಹ. ಶೋಚಿಸುತ್ತಿರುವ ನಮ್ಮ ಸಮದುಃಖಿಯಾಗಿದ್ದೀಯೆ. ದ್ವಿಜ! ನಾವು ಯಾರು ಮತ್ತು ಯಾವ ಕಾರಣಕ್ಕಾಗಿ ಶೋಚಿಸುತ್ತಿದ್ದೇವೆ ಎನ್ನುವುದನ್ನು ಕೇಳು.

01041016a ಯಾಯಾವರಾ ನಾಮ ವಯಮೃಷಯಃ ಸಂಶಿತವ್ರತಾಃ|

01041016c ಲೋಕಾತ್ಪುಣ್ಯಾದಿಹ ಭ್ರಷ್ಠಾಃ ಸಂತಾನಪ್ರಕ್ಷಯಾದ್ವಿಭೋ||

ನಾವು ಯಾಯಾವರಾ ಎಂಬ ಹೆಸರಿನ ಸಂಶಿತವ್ರತ ಋಷಿಗಳು. ಸಂತಾನವಿಲ್ಲದಿರುವ ಕಾರಣದಿಂದ ನಾವು ಪುಣ್ಯಲೋಕದಿಂದ ಭ್ರಷ್ಟರಾಗಿದ್ದೇವೆ.

01041017a ಪ್ರನಷ್ಟಂ ನಸ್ತಪಃ ಪುಣ್ಯಂ ನ ಹಿ ನಸ್ತಂತುರಸ್ತಿ ವೈ|

01041017c ಅಸ್ತಿ ತ್ವೇಕೋಽದ್ಯ ನಸ್ತಂತುಃ ಸೋಽಪಿ ನಾಸ್ತಿ ಯಥಾ ತಥಾ||

ನಮ್ಮ ತಪಸ್ಸಿನ ಪುಣ್ಯಗಳು ಇನ್ನೂ ಸಂಪೂರ್ಣವಾಗಿ ನಶಿಸಿಹೋಗಿಲ್ಲ.  ಆದುದರಿಂದ ನಮಗೆ ಈ ದಾರವಾದರೂ ಆಧಾರವಾಗಿದೆ. ಆದರೆ ಇದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ.

01041018a ಮಂದಭಾಗ್ಯೋಽಲ್ಪಭಾಗ್ಯಾನಾಂ ಬಂಧುಃ ಸ ಕಿಲ ನಃ ಕುಲೇ|

01041018c ಜರತ್ಕಾರುರಿತಿ ಖ್ಯಾತೋ ವೇದವೇದಾಂಗಪಾರಗಃ|

01041018e ನಿಯತಾತ್ಮಾ ಮಹಾತ್ಮಾ ಚ ಸುವ್ರತಃ ಸುಮಹಾತಪಾಃ||

ಮಂದಭಾಗ್ಯರಾದ ನಮ್ಮ ಕುಲದ ಏಕತ್ರ ಬಂಧುವಿನಲ್ಲಿ ನಮ್ಮ ಉಳಿದ ಅಲ್ಪಭಾಗ್ಯವಿದೆ. ಅವನು ಜರತ್ಕಾರುವೆಂದು ಖ್ಯಾತ ವೇದವೇದಾಂಗಪಾರಂಗತ, ನಿಯತಾತ್ಮ, ಸುವ್ರತ, ಸುಮಹಾತಪಸ್ವಿ ಮಹಾತ್ಮನು.

01041019a ತೇನ ಸ್ಮ ತಪಸೋ ಲೋಭಾತ್ ಕೃಚ್ಛ್ರಮಾಪಾದಿತಾ ವಯಂ|

01041019c ನ ತಸ್ಯ ಭಾರ್ಯಾ ಪುತ್ರೋ ವಾ ಬಾಂಧವೋ ವಾಸ್ತಿ ಕಶ್ಚನ||

ಆದರೆ ಅವನ ತಪಸ್ಸಿನ ಲೋಭದಿಂದಾಗಿ ನಾವು ಈ ಪರಿಸ್ಥಿತಿಯಲ್ಲಿದ್ದೇವೆ. ಅವನಿಗೆ ಹೆಂಡತಿ, ಪುತ್ರ ಅಥವಾ ಬಾಂಧವರ್ಯಾರೂ ಇಲ್ಲ.

01041020a ತಸ್ಮಾಲ್ಲಂಬಾಮಹೇ ಗರ್ತೇ ನಷ್ಟಸಂಜ್ಞಾ ಹ್ಯನಾಥವತ್|

01041020c ಸ ವಕ್ತವ್ಯಸ್ತ್ವಯಾ ದೃಷ್ಟ್ವಾ ಅಸ್ಮಾಕಂ ನಾಥವತ್ತಯಾ||

ಅದರಿಂದಾಗಿ ನಾವು ಹೀಗೆ ನಷ್ಟಸಂಜ್ಞರಾಗಿ ಅನಾಥರಂತೆ ಈ ಬಾವಿಯಲ್ಲಿ ನೇತಾಡುತ್ತಿದ್ದೇವೆ. ನೀನು ಅವನನ್ನು ಕಂಡರೆ ನಮ್ಮ ಮೇಲಿನ ಕರುಣೆಯಿಂದ ಅವನಿಗೆ ಇದನ್ನು ತಿಳಿಸು.

01041021a ಪಿತರಸ್ತೇಽವಲಂಬಂತೇ ಗರ್ತೇ ದೀನಾ ಅಧೋಮುಖಾಃ|

01041021c ಸಾಧು ದಾರಾನ್ಕುರುಷ್ವೇತಿ ಪ್ರಜಾಯಸ್ವೇತಿ ಚಾಭಿಭೋ|

01041021e ಕುಲತಂತುರ್ಹಿ ನಃ ಶಿಷ್ಠಸ್ತ್ವಂ ಏವೈಕಸ್ತಪೋಧನ||

“ನಿನ್ನ ಪಿತೃಗಳು ಒಂದು ಬಾವಿಯಲ್ಲಿ ದೀನರಾಗಿ ಅಧೋಮುಖರಾಗಿ ನೇತಾಡುತ್ತಿದ್ದಾರೆ. ಸಾಧುವೇ! ಪತ್ನಿಯನ್ನು ಹೊಂದಿ, ಮಕ್ಕಳನ್ನು ಪಡೆ. ನೀನೊಬ್ಬನೇ ಅವರಿಗಿರುವ ಒಂದೇ ಒಂದು ಕುಲತಂತು.’

01041022a ಯಂ ತು ಪಶ್ಯಸಿ ನೋ ಬ್ರಹ್ಮನ್ವೀರಣಸ್ತಂಬಮಾಶ್ರಿತಾನ್|

01041022c ಏಷೋಽಸ್ಮಾಕಂ ಕುಲಸ್ತಂಬ ಆಸೀತ್ಸ್ವಕುಲವರ್ಧನಃ||

ಬ್ರಾಹ್ಮಣ! ನಾವು ಹಿಡಿದಿರುವ ಈ ವೀರಣದ ಬೇರು ನಮ್ಮ ಕುಲವನ್ನು ಮುಂದುವರಿಸಬಹುದಾಗಿರುವ ಒಂದೇ ಒಂದು ಕುಲಸ್ತಂಭ.

01041023a ಯಾನಿ ಪಶ್ಯಸಿ ವೈ ಬ್ರಹ್ಮನ್ಮೂಲಾನೀಹಾಸ್ಯ ವೀರುಧಃ|

01041023c ಏತೇ ನಸ್ತಂತವಸ್ತಾತ ಕಾಲೇನ ಪರಿಭಕ್ಷಿತಾಃ||

ಬ್ರಾಹ್ಮಣ! ನಿನಗೆ ಕಾಣುತ್ತಿರುವಂತೆ ಜೀರ್ಣವಾಗಿರುವ ಈ ಬೇರನ್ನು ತಿನ್ನುತ್ತಿರುವವನೇ ಕಾಲ.

01041024a ಯತ್ತ್ವೇತತ್ಪಶ್ಯಸಿ ಬ್ರಹ್ಮನ್ಮೂಲಮಸ್ಯಾರ್ಧಭಕ್ಷಿತಂ|

01041024c ತತ್ರ ಲಂಬಾಮಹೇ ಸರ್ವೇ ಸೋಽಪ್ಯೇಕಸ್ತಪ ಆಸ್ಥಿತಃ||

ಬ್ರಾಹ್ಮಣ! ನಾವು ಹಿಡಿದು ನೇತಾಡುತ್ತಿರುವ ಅರ್ಧ ತಿಂದು ಜೀರ್ಣವಾಗಿರುವ ಈ ಬೇರೇ ತಪಸ್ಸಿನಲ್ಲಿರುವ ಅವನು.

01041025a ಯಮಾಖುಂ ಪಶ್ಯಸಿ ಬ್ರಹ್ಮನ್ಕಾಲ ಏಷ ಮಹಾಬಲಃ|

01041025c ಸ ತಂ ತಪೋರತಂ ಮಂದಂ ಶನೈಃ ಕ್ಷಪಯತೇ ತುದನ್|

01041025e ಜರತ್ಕಾರುಂ ತಪೋಲುಬ್ಧಂ ಮಂದಾತ್ಮಾನಮಚೇತಸಂ||

ಬ್ರಹ್ಮನ್! ನೀನು ನೋಡುವ ಇಲಿಯೇ ಆ ಬಹಾಬಲಿ ಕಾಲ. ಅವನು ಮಂದಾತ್ಮ, ಅಚೇತಸ, ತಪೋಲುಬ್ಧ ಮತ್ತು ತಪೋನಿರತ ಜರತ್ಕಾರುವನ್ನು ನಿಧಾನವಾಗಿ ಭಕ್ಷಿಸುತ್ತಿದ್ದಾನೆ.

01041026a ನ ಹಿ ನಸ್ತತ್ತಪಸ್ತಸ್ಯ ತಾರಯಿಷ್ಯತಿ ಸತ್ತಮ|

01041026c ಚಿನ್ನಮೂಲಾನ್ಪರಿಭ್ರಷ್ಟಾನ್ಕಾಲೋಪಹತಚೇತಸಃ|

01041026e ನರಕಪ್ರತಿಷ್ಠಾನ್ಪಶ್ಯಾಸ್ಮಾನ್ಯಥಾ ದುಷ್ಕೃತಿನಸ್ತಥಾ||

ಸತ್ತಮ! ಅವನ ತಪಸ್ಸು ನಮ್ಮನ್ನು ಪಾರುಮಾಡುವುದಿಲ್ಲ. ನಮ್ಮ ಮೂಲವೇ ತುಂಡಾಗಿದೆ, ಮತ್ತು ಕಾಲಾಂತರದಿಂದ ನಮ್ಮ ಮನಸ್ಸು ಗಾಯಗೊಂಡಿದೆ. ನಾವು ಹೇಗೆ ಈ ನರಕದಲ್ಲಿ ಪಾಪಿಗಳಂತೆ ಅಧೋಗತಿಗಿಳಿಯುತ್ತಿದ್ದೇವೆ ನೋಡು!

01041027a ಅಸ್ಮಾಸು ಪತಿತೇಷ್ವತ್ರ ಸಹ ಪೂರ್ವೈಃ ಪಿತಾಮಹೈಃ|

01041027c ಚಿನ್ನಃ ಕಾಲೇನ ಸೋಽಪ್ಯತ್ರ ಗಂತಾ ವೈ ನರಕಂ ತತಃ||

ನಮ್ಮ ಪೂರ್ವ ಪಿತಾಮಹರೊಂದಿಗೆ ನಾವು ಎಂದು ಈ ಆಳದಲ್ಲಿ ಮುಳುಗುತ್ತೇವೋ ಆಗ ಅವನೂ ಕೂಡ ಕಾಲನಿಂದ ಛಿದ್ರಛಿದ್ರನಾಗಿ ನಮ್ಮೊಂದಿಗೆ ನರಕವನ್ನು ಸೇರುತ್ತಾನೆ.

01041028a ತಪೋ ವಾಪ್ಯಥವಾ ಯಜ್ಞೋ ಯಚ್ಚಾನ್ಯತ್ಪಾವನಂ ಮಹತ್|

01041028c ತತ್ಸರ್ವಂ ನ ಸಮಂ ತಾತ ಸಂತತ್ಯೇತಿ ಸತಾಂ ಮತಂ||

ಮಗು! ತಪಸ್ಸಾಗಲೀ, ಯಜ್ಞವಾಗಲೀ ಅಥವಾ ಬೇರೆ ಯಾವುದೇ ಮಹಾ ಪುಣ್ಯಕಾರ್ಯವಾಗಲೀ - ಅವೆಲ್ಲವೂ ಸಂತತಿಗೆ ಸಮಾನವಲ್ಲ ಎನ್ನುವುದು ಸತ್ಯವಂತರ ಮತ.

01041029a ಸ ತಾತ ದೃಷ್ಟ್ವಾ ಬ್ರೂಯಾಸ್ತ್ವಂ ಜರತ್ಕಾರುಂ ತಪಸ್ವಿನಂ|

01041029c ಯಥಾದೃಷ್ಟಮಿದಂ ಚಾಸ್ಮೈ ತ್ವಯಾಖ್ಯೇಯಮಶೇಷತಃ||

ಮಗು! ತಪಸ್ವಿ ಜರತ್ಕಾರುವನ್ನು ಕಂಡರೆ ಅವನಿಗೆ ನೀನು ಇಲ್ಲಿ ನೋಡಿದುದೆಲ್ಲವನ್ನೂ ಮತ್ತು ನಮ್ಮ ಈ ಮಾತುಗಳನ್ನೂ ಯಥಾವತ್ತಾಗಿ ಹೇಳು.

01041030a ಯಥಾ ದಾರಾನ್ಪ್ರಕುರ್ಯಾತ್ಸ ಪುತ್ರಾಂಶ್ಚೋತ್ಪಾದಯೇದ್ಯಥಾ|

01041030c ತಥಾ ಬ್ರಹ್ಮಂಸ್ತ್ವಯಾ ವಾಚ್ಯಃ ಸೋಽಸ್ಮಾಕಂ ನಾಥವತ್ತಯಾ||

ಅವನು ಪತ್ನಿಯನ್ನು ಮಾಡಿಕೊಂಡು ಪುತ್ರನನ್ನು ಪಡೆದು ನಮ್ಮನ್ನು ರಕ್ಷಿಸಬೇಕೆಂದರೆ ಬ್ರಾಹ್ಮಣ! ನೀನು ಇದನ್ನು ಅವನಿಗೆ ತಿಳಿಸಬೇಕು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರುಪಿತೃದರ್ಶನೇ ಏಕಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರುಪಿತೃದರ್ಶನ ಎನ್ನುವ ನಲವತ್ತೊಂದನೆಯ ಅಧ್ಯಾಯವು.

Comments are closed.