ಆದಿ ಪರ್ವ: ಆಸ್ತೀಕ ಪರ್ವ
೩೭
ಋಷಿಪುತ್ರನಿಂದ ಪರಿಕ್ಷಿತನಿಗೆ ಶಾಪ (೧-೧೦). ಋಷಿಯು ಮಗನಿಗೆ ಶಾಪವನ್ನು ಹಿಂತೆಗೆದುಕೊಳ್ಳಲು ಹೇಳಿದುದು (೧೧-೨೫).
01037001 ಸೂತ ಉವಾಚ
01037001a ಏವಮುಕ್ತಃ ಸ ತೇಜಸ್ವೀ ಶೃಂಗೀ ಕೋಪಸಮನ್ವಿತಃ|
01037001c ಮೃತಧಾರಂ ಗುರುಂ ಶ್ರುತ್ವಾ ಪರ್ಯತಪ್ಯತ ಮನ್ಯುನಾ||
ಸೂತನು ಹೇಳಿದನು: “ಆ ತೇಜಸ್ವಿ ಶೃಂಗಿಯು ತನ್ನ ಗುರುವು ಒಂದು ಮೃತಶರೀರವನ್ನು ಧರಿಸಿದ್ದಾನೆ ಎಂದು ಕೇಳಿ ಕೋಪಸಮನ್ವಿತನಾಗಿ ಸಿಟ್ಟಿನಿಂದ ಉರಿದೆದ್ದನು.
01037002a ಸ ತಂ ಕೃಶಮಭಿಪ್ರೇಕ್ಷ್ಯ ಸೂನೃತಾಂ ವಾಚಮುತ್ಸೃಜನ್|
01037002c ಅಪೃಚ್ಛತ ಕಥಂ ತಾತಃ ಸ ಮೇಽದ್ಯ ಮೃತಧಾರಕಃ||
ಆಗ ಅವನು ಎಲ್ಲ ಮೃದು ಮಾತುಗಳನ್ನು ಬದಿಗೊತ್ತಿ ಕೃಶನಲ್ಲಿ “ನನ್ನ ತಂದೆಯು ಇಂದು ಯಾವ ಕಾರಣಕ್ಕಾಗಿ ಮೃತಶರೀರವನ್ನು ಹೊತ್ತಿದ್ದಾನೆ?” ಎಂದು ಕೇಳಿದನು.
01037003 ಕೃಶ ಉವಾಚ
01037003a ರಾಜ್ಞಾ ಪರಿಕ್ಷಿತಾ ತಾತ ಮೃಗಯಾಂ ಪರಿಧಾವತಾ|
01037003c ಅವಸಕ್ತಃ ಪಿತುಸ್ತೇಽದ್ಯ ಮೃತಃ ಸ್ಕಂಧೇ ಭುಜಂಗಮಃ||
ಕೃಶನು ಹೇಳಿದನು: “ಬೇಟೆಯಾಡುತ್ತಾ ಬಂದ ರಾಜಾ ಪರಿಕ್ಷಿತನು ಸತ್ತ ಒಂದು ಸರ್ಪವನ್ನು ನಿನ್ನ ತಂದೆಯ ಭುಜದ ಮೇಲೇರಿಸಿದನು.”
01037004 ಶೃಂಗ್ಯುವಾಚ
01037004a ಕಿಂ ಮೇ ಪಿತ್ರಾ ಕೃತಂ ತಸ್ಯ ರಾಜ್ಞೋಽನಿಷ್ಟಂ ದುರಾತ್ಮನಃ|
01037004c ಬ್ರೂಹಿ ತ್ವಂ ಕೃಶ ತತ್ತ್ವೇನ ಪಶ್ಯ ಮೇ ತಪಸೋ ಬಲಂ||
ಶೃಂಗಿಯು ಹೇಳಿದನು: “ಆ ದುರಾತ್ಮ ರಾಜನಿಗೆ ನನ್ನ ತಂದೆಯು ಯಾವ ಅನಿಷ್ಟ ಕಾರ್ಯವನ್ನು ಮಾಡಿದನು? ಕೃಶ! ಅದನ್ನು ನನಗೆ ಹೇಳು ಮತ್ತು ನಂತರ ನನ್ನ ತಪೋಬಲವನ್ನು ನೋಡು.”
01037005 ಕೃಶ ಉವಾಚ
01037005a ಸ ರಾಜಾ ಮೃಗಯಾಂ ಯಾತಃ ಪರಿಕ್ಷಿದಭಿಮನ್ಯುಜಃ|
01037005c ಸಸಾರ ಮೃಗಮೇಕಾಕೀ ವಿದ್ಧ್ವಾ ಬಾಣೇನ ಪತ್ರಿಣಾ||
ಕೃಶನು ಹೇಳಿದನು: “ಅಭಿಮನ್ಯುವಿನ ಮಗ ರಾಜಾ ಪರಿಕ್ಷಿತನು ತನ್ನ ಬಾಣದ ಹೊಡೆತ ತಿಂದು ಪಲಾಯನಗೈದ ಜಿಂಕೆಯೊಂದನ್ನು ಏಕಾಕಿಯಾಗಿ ಅರಸುತ್ತಾ ಬಂದನು.
01037006a ನ ಚಾಪಶ್ಯನ್ಮೃಗಂ ರಾಜಾ ಚರಂಸ್ತಸ್ಮಿನ್ಮಹಾವನೇ|
01037006c ಪಿತರಂ ತೇ ಸ ದೃಷ್ಟ್ವೈವ ಪಪ್ರಚ್ಛಾನಭಿಭಾಷಿಣಂ||
ಈ ಮಹಾವನದಲ್ಲಿ ಆ ಜಿಂಕೆಯನ್ನು ಕಾಣದೇ ಅದನ್ನು ಹುಡುಕುತ್ತಾ ಬರುತ್ತಿರುವಾಗ ನಿನ್ನ ತಂದೆಯನ್ನು ಕಂಡು ಅವನಲ್ಲಿ ಕೇಳಿದನು.
01037007a ತಂ ಸ್ಥಾಣುಭೂತಂ ತಿಷ್ಠಂತಂ ಕ್ಷುತ್ಪಿಪಾಸಾಶ್ರಮಾತುರಃ|
01037007c ಪುನಃ ಪುನರ್ಮೃಗಂ ನಷ್ಟಂ ಪಪ್ರಚ್ಛ ಪಿತರಂ ತವ||
ಹಸಿವು, ಬಾಯರಿಕೆ ಮತ್ತು ಆಯಾಸಗಳಿಂದ ಬಳಲಿದ ಅವನು ತನ್ನ ಸ್ಥಾನದಲ್ಲಿಯೇ ನಿಂತಿದ್ದ ನಿನ್ನ ತಂದೆಯನ್ನು ಕಳೆದುಹೋದ ಜಿಂಕೆಯ ಕುರಿತು ಮೇಲಿಂದ ಮೇಲೆ ಕೇಳಿದನು.
01037008a ಸ ಚ ಮೌನವ್ರತೋಪೇತೋ ನೈವ ತಂ ಪ್ರತ್ಯಭಾಷತ|
01037008c ತಸ್ಯ ರಾಜಾ ಧನುಷ್ಕೋಟ್ಯಾ ಸರ್ಪಂ ಸ್ಕಂಧೇ ಸಮಾಸೃಜತ್||
ಆದರೆ ಮೌನವ್ರತ ಪಾಲಿಸುತ್ತಿದ್ದ ಅವನು ಉತ್ತರವನ್ನು ಕೊಡದೇ ಇದ್ದಾಗ ರಾಜನು ತನ್ನ ಧನುಸ್ಸಿನ ತುದಿಯಿಂದ ಸರ್ಪವೊಂದನ್ನು ಅವನ ಭುಜದ ಮೇಲೇರಿಸಿದನು.
01037009a ಶೃಂಗಿಂಸ್ತವ ಪಿತಾದ್ಯಾಸೌ ತಥೈವಾಸ್ತೇ ಯತವ್ರತಃ|
01037009c ಸೋಽಪಿ ರಾಜಾ ಸ್ವನಗರಂ ಪ್ರತಿಯಾತೋ ಗಜಾಹ್ವಯಂ||
ಶೃಂಗಿ! ವ್ರತನಿರತ ನಿನ್ನ ತಂದೆಯು ಈಗಲೂ ಅದೇ ಅವಸ್ಥೆಯಲ್ಲಿ ಇದ್ದಾನೆ. ರಾಜನು ತನ್ನ ನಗರ ಹಸ್ತಿನಾಪುರಕ್ಕೆ ತೆರಳಿದ್ದಾನೆ.””
01037010 ಸೂತ ಉವಾಚ
01037010a ಶ್ರುತ್ವೈವಮೃಷಿಪುತ್ರಸ್ತು ದಿವಂ ಸ್ತಬ್ಧ್ವೇವ ವಿಷ್ಠಿತಃ|
01037010c ಕೋಪಸಂರಕ್ತನಯನಃ ಪ್ರಜ್ವಲನ್ನಿವ ಮನ್ಯುನಾ||
ಸೂತನು ಹೇಳಿದನು: “ಇದನ್ನು ಕೇಳಿದ ಋಷಿಪುತ್ರನು ಆಕಾಶದ ಕಂಬದಂತೆ ಸ್ತಬ್ಧನಾಗಿ ನಿಂತನು. ಕೋಪದಿಂದ ಅವನ ಕಣ್ಣುಗಳು ಕೆಂಪಾದವು ಮತ್ತು ಸಿಟ್ಟಿನಿಂದ ಭುಗಿಲೆಂದು ಉರಿದೆದ್ದನು.
01037011a ಆವಿಷ್ಟಃ ಸ ತು ಕೋಪೇನ ಶಶಾಪ ನೃಪತಿಂ ತದಾ|
01037011c ವಾಯುರಪಸ್ಪೃಶ್ಯ ತೇಜಸ್ವೀ ಕ್ರೋಧವೇಗಬಲಾತ್ಕೃತಃ||
ಕೋಪಾವಿಷ್ಟನಾಗಿ ಕ್ರೋಧದ ವೇಗ ಬಲಗಳಿಂದ ಚೋದಿತನಾಗಿ ಆ ತೇಜಸ್ವಿಯು ನೀರನ್ನು ಮುಟ್ಟಿ ಆ ನೃಪತಿಗೆ ಶಾಪವನ್ನಿತ್ತನು.
01037012 ಶೃಂಗ್ಯುವಾಚ
01037012a ಯೋಽಸೌ ವೃದ್ಧಸ್ಯ ತಾತಸ್ಯ ತಥಾ ಕೃಚ್ಛ್ರಗತಸ್ಯ ಚ|
01037012c ಸ್ಕಂಧೇ ಮೃತಮವಾಸ್ರಾಕ್ಷೀತ್ಪನ್ನಗಂ ರಾಜಕಿಲ್ಬಿಷೀ||
01037013a ತಂ ಪಾಪಮತಿಸಂಕ್ರುದ್ಧಸ್ತಕ್ಷಕಃ ಪನ್ನಗೋತ್ತಮಃ|
01037013c ಆಶೀವಿಷಸ್ತಿಗ್ಮತೇಜಾ ಮದ್ವಾಕ್ಯಬಲಚೋದಿತಃ||
01037014a ಸಪ್ತರಾತ್ರಾದಿತೋ ನೇತಾ ಯಮಸ್ಯ ಸದನಂ ಪ್ರತಿ|
01037014c ದ್ವಿಜಾನಾಮವಮಂತಾರಂ ಕುರೂಣಾಮಯಶಸ್ಕರಂ||
ಶೃಂಗಿಯು ಹೇಳಿದನು: “ವೃದ್ಧನೂ, ಕೃಶನೂ ಆದ ನನ್ನ ತಂದೆಯ ಭುಜಗಳ ಮೇಲೆ ಮೃತ ಸರ್ಪವನ್ನು ಹಾಕಿ ದ್ವಿಜನನ್ನು ಅಪಮಾನಿಸಿ ಕುರುಗಳ ಯಶಸ್ಸನ್ನು ಹಾಳುಮಾಡಿದ ಆ ರಾಜಕಿಲ್ಬಿಷಿ, ಪಾಪ ಮತಿಯು ಇಂದಿನಿಂದ ಏಳು ರಾತ್ರಿಯೊಳಗೆ ನನ್ನ ವಾಕ್ಬಲದಿಂದ ಪ್ರೇರಿತ ಅತಿವಿಷಸಮಾನ್ವಿತ ತಿಗ್ಮತೇಜಸ್ವಿ ಪನ್ನಗೋತ್ತಮ ತಕ್ಷಕನಿಂದ ಯಮಸದನಕ್ಕೆ ಒಯ್ಯಲ್ಪಡುತ್ತಾನೆ.””
01037015 ಸೂತ ಉವಾಚ
01037015a ಇತಿ ಶಪ್ತ್ವಾ ನೃಪಂ ಕ್ರುದ್ಧಃ ಶೃಂಗೀ ಪಿತರಮಭ್ಯಯಾತ್|
01037015c ಆಸೀನಂ ಗೋಚರೇ ತಸ್ಮಿನ್ವಹಂತಂ ಶವಪನ್ನಗಂ||
ಸೂತನು ಹೇಳಿದನು: “ಸಿಟ್ಟಿನಲ್ಲಿ ಈ ರೀತಿ ರಾಜನನ್ನು ಶಪಿಸಿದ ಶೃಂಗಿಯು ಹಿಂದಿರುಗಿ ಬಂದು ಸರ್ಪಶವವನ್ನು ಹೊತ್ತು ಗೋಶಾಲೆಯಲ್ಲಿ ಕುಳಿತಿದ್ದ ತನ್ನ ತಂದೆಯನ್ನು ನೋಡಿದನು.
01037016a ಸ ತಮಾಲಕ್ಷ್ಯ ಪಿತರಂ ಶೃಂಗೀ ಸ್ಕಂಧಗತೇನ ವೈ|
01037016c ಶವೇನ ಭುಜಗೇನಾಸೀದ್ಭೂಯಃ ಕ್ರೋಧಸಮನ್ವಿತಃ||
ತಂದೆಯ ಭುಜಗಳ ಮೇಲೆ ಇನ್ನೂ ಸರ್ಪದ ಶವವು ಇರುವುದನ್ನು ನೋಡಿ ಪುನಃ ಅವನು ಕ್ರೋಧದಿಂದ ಉರಿದೆದ್ದನು.
01037017a ದುಃಖಾಚ್ಚಾಶ್ರೂಣಿ ಮುಮುಚೇ ಪಿತರಂ ಚೇದಮಬ್ರವೀತ್|
01037017c ಶ್ರುತ್ವೇಮಾಂ ಧರ್ಷಣಾಂ ತಾತ ತವ ತೇನ ದುರಾತ್ಮನಾ||
01037018a ರಾಜ್ಞಾ ಪರಿಕ್ಷಿತಾ ಕೋಪಾದಶಪಂ ತಮಹಂ ನೃಪಂ|
01037018c ಯಥಾರ್ಹತಿ ಸ ಏವೋಗ್ರಂ ಶಾಪಂ ಕುರುಕುಲಾಧಮಃ||
ದುಃಖದಿಂದ ಕಣ್ಣೀರಿಡುತ್ತಾ ತಂದೆಗೆ ಹೇಳಿದನು: “ತಂದೇ! ಆ ದುರಾತ್ಮನಿಂದ ನಿನಗಾದ ಅಪಮಾನವನ್ನು ಕೇಳಿದ ನಾನು ಕೋಪಗೊಂಡು ಆ ರಾಜ ಪರಿಕ್ಷಿತನಿಗೆ ಶಾಪವನ್ನು ಕೊಟ್ಟಿದ್ದೇನೆ. ಆ ಕುರುಕುಲಾಧಮ ನೃಪನು ನನ್ನ ಈ ಉಗ್ರ ಶಾಪಕ್ಕೆ ಅರ್ಹನಾಗಿದ್ದಾನೆ.
01037019a ಸಪ್ತಮೇಽಹನಿ ತಂ ಪಾಪಂ ತಕ್ಷಕಃ ಪನ್ನಗೋತ್ತಮಃ|
01037019c ವೈವಸ್ವತಸ್ಯ ಭವನಂ ನೇತಾ ಪರಮದಾರುಣಂ||
ಇಂದಿನಿಂದ ಏಳು ದಿನಗಳಲ್ಲಿ ಪನ್ನಗೋತ್ತಮ ತಕ್ಷಕನು ಆ ಪಾಪಿಯನ್ನು ವೈವಸ್ವತನ ಪರಮದಾರುಣ ಭವನಕ್ಕೆ ಕರೆದೊಯ್ಯುತ್ತಾನೆ.”
01037020a ತಮಬ್ರವೀತ್ಪಿತಾ ಬ್ರಹ್ಮಂಸ್ತಥಾ ಕೋಪಸಮನ್ವಿತಂ|
01037020c ನ ಮೇ ಪ್ರಿಯಂ ಕೃತಂ ತಾತ ನೈಷ ಧರ್ಮಸ್ತಪಸ್ವಿನಾಂ||
ಆಗ ಆ ಕೋಪಸಮನ್ವಿತ ಬ್ರಾಹ್ಮಣನಿಗೆ ಅವನ ತಂದೆಯು ಹೇಳಿದನು: “ನನ್ನ ಮಗನೇ! ನೀನು ಮಾಡಿದ ಕೆಲಸ ನನಗೆ ಇಷ್ಟವಾಗಲಿಲ್ಲ. ಧರ್ಮತಪಸ್ವಿಗಳಿಗೆ ಇದು ತಕ್ಕುದಲ್ಲ.
01037021a ವಯಂ ತಸ್ಯ ನರೇಂದ್ರಸ್ಯ ವಿಷಯೇ ನಿವಸಾಮಹೇ|
01037021c ನ್ಯಾಯತೋ ರಕ್ಷಿತಾಸ್ತೇನ ತಸ್ಯ ಪಾಪಂ ನ ರೋಚಯೇ||
ನಾವು ಆ ನರೇಂದ್ರನ ಗಡಿಯೊಳಗೇ ವಾಸಿಸುತ್ತಿದ್ದೇವೆ. ಅವನು ನ್ಯಾಯದಿಂದ ನಮ್ಮನ್ನು ರಕ್ಷಿಸುತ್ತಿದ್ದಾನೆ, ನಾವು ಅವನಿಗೆ ಕೆಟ್ಟದ್ದನ್ನು ಯೋಚಿಸಬಾರದಾಗಿತ್ತು.
01037022a ಸರ್ವಥಾ ವರ್ತಮಾನಸ್ಯ ರಾಜ್ಞೋ ಹ್ಯಸ್ಮದ್ವಿಧೈಃ ಸದಾ|
01037022c ಕ್ಷಂತವ್ಯಂ ಪುತ್ರ ಧರ್ಮೋ ಹಿ ಹತೋ ಹಂತಿ ನ ಸಂಶಯಃ||
ವರ್ತಮಾನದಲ್ಲಿರುವ ರಾಜನನ್ನು ನಮ್ಮಂಥವರು ಸರ್ವಥಾ ಕ್ಷಮಿಸಬೇಕು. ಪುತ್ರ! ಧರ್ಮವನ್ನು ನಾಶಪಡಿಸಿದರೆ ಧರ್ಮವೇ ನಮ್ಮನ್ನು ನಾಶಪಡಿಸುತ್ತದೆ.
01037023a ಯದಿ ರಾಜಾ ನ ರಕ್ಷೇತ ಪೀಢಾ ವೈ ನಃ ಪರಾ ಭವೇತ್|
01037023c ನ ಶಕ್ನುಯಾಮ ಚರಿತುಂ ಧರ್ಮಂ ಪುತ್ರ ಯಥಾಸುಖಂ||
ಒಂದುವೇಳೆ ರಾಜನು ನಮ್ಮನ್ನು ರಕ್ಷಿಸುವುದಿಲ್ಲವಾದರೆ ನಾವು ಹಲವಾರು ಮಹತ್ತರ ಪೀಡೆಗಳನ್ನು ಅನುಭವಿಸಬೇಕಾಗುತ್ತದೆ. ಪುತ್ರ! ಇಷ್ಟೊಂದು ಸುಖದಿಂದ ನಾವು ಧರ್ಮದಲ್ಲಿ ನಡೆಯಲು ಶಕ್ಯವಾಗುತ್ತಿರಲಿಲ್ಲ.
01037024a ರಕ್ಷ್ಯಮಾಣಾ ವಯಂ ತಾತ ರಾಜಭಿಃ ಶಾಸ್ತ್ರದೃಷ್ಟಿಭಿಃ|
01037024c ಚರಾಮೋ ವಿಪುಲಂ ಧರ್ಮಂ ತೇಷಾಂ ಚಾಂಶೋಽಸ್ತಿ ಧರ್ಮತಃ||
ಮಗನೇ! ರಾಜನಿಂದ ರಕ್ಷಣೆಯನ್ನು ಪಡೆದ ನಾವು ಶಾಸ್ತ್ರದೃಷ್ಟಿಯಲ್ಲಿ ಜೀವಿಸಿ ವಿಪುಲ ಧರ್ಮವನ್ನು ಗಳಿಸುತ್ತೇವೆ ಮತ್ತು ಅದರಲ್ಲಿನ ಒಂದು ಅಂಶವು ಅವನಿಗೂ ಸೇರುತ್ತದೆ.
01037025a ಪರಿಕ್ಷಿತ್ತು ವಿಶೇಷೇಣ ಯಥಾಸ್ಯ ಪ್ರಪಿತಾಮಹಃ|
01037025c ರಕ್ಷತ್ಯಸ್ಮಾನ್ಯಥಾ ರಾಜ್ಞಾ ರಕ್ಷಿತವ್ಯಾಃ ಪ್ರಜಾಸ್ತಥಾ||
ವಿಶೇಷವಾಗಿ ಪರಿಕ್ಷಿತನು ತನ್ನ ಪ್ರಪಿತಾಮಹನಂತೆ, ರಾಜನಾದವನು ತನ್ನ ಪ್ರಜೆಗಳನ್ನು ಹೇಗೆ ರಕ್ಷಿಸಬೇಕೋ ಹಾಗೆ, ನಮ್ಮನ್ನೂ ರಕ್ಷಿಸುತ್ತಿದ್ದಾನೆ.
01037026a ತೇನೇಹ ಕ್ಷುಧಿತೇನಾದ್ಯ ಶ್ರಾಂತೇನ ಚ ತಪಸ್ವಿನಾ|
01037026c ಅಜಾನತಾ ವ್ರತಮಿದಂ ಕೃತಮೇತದಸಂಶಯಂ||
ಬಾಯಾರಿಕೆ ಆಯಾಸಗಳಿಂದ ಬಳಲಿದ ಆ ತಪಸ್ವಿ ರಾಜನಿಗೆ ನಾನು ಈ ವ್ರತವನ್ನು ಮಾಡುತ್ತಿದ್ದೇನೆ ಎಂದು ಗೊತ್ತಾಗಲಿಲ್ಲ ಎನ್ನುವುದು ಅಸಂಶಯವೇ ಸರಿ.
01037027a ತಸ್ಮಾದಿದಂ ತ್ವಯಾ ಬಾಲ್ಯಾತ್ಸಹಸಾ ದುಷ್ಕೃತಂ ಕೃತಂ|
01037027c ನ ಹ್ಯರ್ಹತಿ ನೃಪಃ ಶಾಪಮಸ್ಮತ್ತಃ ಪುತ್ರ ಸರ್ವಥಾ||
ಆದುದರಿಂದ ಬಾಲಕನಾದ ನೀನು ಆತುರದಲ್ಲಿ ಮಾಡಿದ ಈ ಕೆಲಸವು ದುಷ್ಕೃತವಾದದ್ದು. ಪುತ್ರ! ಆ ನೃಪನು ನಮ್ಮಿಂದ ಸರ್ವಥಾ ಈ ಶಾಪವನ್ನು ಪಡೆಯಲು ಅರ್ಹನಲ್ಲ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪರಿಕ್ಷಿಚ್ಛಾಪೇ ಸಪ್ತತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಪರಿಕ್ಷಿತ್ ಶಾಪ ಎನ್ನುವ ಮೂವತ್ತೇಳನೆಯ ಅಧ್ಯಾಯವು.
Dear Sir
I do not know how to express my gratitude for the monumental work of yours. Reading your kannada translation together with sanskrit shlokas, I am able to learn sanskrit quickly. Since you are a busy person, finding time to attend to noble works of this nature is a surprise. Instead of giving summary of each verse, you have tried to do yathavath translation, a great job. If you share your telephone number, I would like to speak to you and express my gratitude. Thank you Sir.
Pranaams
Dr. D S Krishna Rao
Bengaluru
Thanks very much Dr. Krishna Rao for your appreciation. You can please email me using the contact form and will be able to respond to your mail with my Canada phone number.
Bests
Ramesh