ಆದಿ ಪರ್ವ: ಆಸ್ತೀಕ ಪರ್ವ
೩೬
“ಜರಾತ್ಕಾರು”ವಿನ ಶಬ್ಧಾರ್ಥ ಮತ್ತು ಅವನ ತಪಸ್ಸು (೧-೭). ಪರಿಕ್ಷಿತನು ಬೇಟೆಗೆ ಹೋದಾಗ ಜಿಂಕೆಯನ್ನು ಹುಡುಕುತ್ತಾ ಋಷಿಯೋರ್ವನಿಗೆ ಅಪಮಾನಿಸಿದುದು (೮-೨೦). ಋಷಿಯ ಮಗನಿಗೆ ಈ ಅಪಮಾನದ ಕುರಿತು ತಿಳಿದುದು (೨೧-೨೫).
01036001 ಶೌನಕ ಉವಾಚ
01036001a ಜರತ್ಕಾರುರಿತಿ ಪ್ರೋಕ್ತಂ ಯತ್ತ್ವಯಾ ಸೂತನಂದನ|
01036001c ಇಚ್ಛಾಮ್ಯೇತದಹಂ ತಸ್ಯ ಋಷೇಃ ಶ್ರೋತುಂ ಮಹಾತ್ಮನಃ||
01036002a ಕಿಂ ಕಾರಣಂ ಜರತ್ಕಾರೋರ್ನಾಮೈತತ್ಪ್ರಥಿತಂ ಭುವಿ|
01036002c ಜರತ್ಕಾರುನಿರುಕ್ತಂ ತ್ವಂ ಯಥಾವದ್ವಕ್ತುಮರ್ಹಸಿ||
ಶೌನಕನು ಹೇಳಿದನು: “ಸೂತನಂದನ! ಆ ಮಹಾತ್ಮ ಋಷಿಯು ಜರತ್ಕಾರುವೆಂದು ಏಕೆ ಕರೆಯಲ್ಪಟ್ಟ ಎನ್ನುವುದನ್ನು ತಿಳಿಯಲು ಇಚ್ಛಿಸುತ್ತೇನೆ. ಯಾವ ಕಾರಣದಿಂದ ಅವನು ಈ ಭುವಿಯಲ್ಲಿ ಜರತ್ಕಾರುವೆಂದು ಪ್ರತಿಥನಾದನು? ಜರತ್ಕಾರುವಿನ ಶಬ್ದಾರ್ಥವನ್ನು ಹೇಳು.”
01036003 ಸೂತ ಉವಾಚ
01036003a ಜರೇತಿ ಕ್ಷಯಮಾಹುರ್ವೈ ದಾರುಣಂ ಕಾರುಸಂಜ್ಞಿತಂ|
01036003c ಶರೀರಂ ಕಾರು ತಸ್ಯಾಸೀತ್ತತ್ಸ ಧೀಮಾ ಶನೈಃ ಶನೈಃ||
01036004a ಕ್ಷಪಯಾಮಾಸ ತೀವ್ರೇಣ ತಪಸೇತ್ಯತ ಉಚ್ಯತೇ|
01036004c ಜರತ್ಕಾರುರಿತಿ ಬ್ರಹ್ಮನ್ವಾಸುಕೇರ್ಭಗಿನೀ ತಥಾ||
ಸೂತನು ಹೇಳಿದನು: “‘ಜರ’ ಎಂದರೆ ಕ್ಷಯವಾಗುವುದು ಮತ್ತು ‘ಕಾರು’ ಎಂದರೆ ಅತಿ ದೊಡ್ಡ ದೇಹ ಎಂದು ತಿಳಿ. ಆ ಧೀಮಂತನು ತೀವ್ರ ತಪಸ್ಸಿನಿಂದ ಸ್ವಲ್ಪ ಸ್ವಲ್ಪವೇ ತನ್ನ ಅತಿ ಸ್ಥೂಲ ಕಾಯವನ್ನು ಬಡಕಲು ಮಾಡಿಕೊಂಡನೆಂದು ಹೇಳುತ್ತಾರೆ. ಬ್ರಾಹ್ಮಣ! ಇದೇ ಕಾರಣಕ್ಕಾಗಿ ವಾಸುಕಿಯ ತಂಗಿಯೂ ಜರತ್ಕಾರುವೆಂದು ಕರೆಯಲ್ಪಟ್ಟಳು.”
01036005a ಏವಮುಕ್ತಸ್ತು ಧರ್ಮಾತ್ಮಾ ಶೌನಕಃ ಪ್ರಾಹಸತ್ತದಾ|
01036005c ಉಗ್ರಶ್ರವಸಮಾಮಂತ್ರ್ಯ ಉಪಪನ್ನಮಿತಿ ಬ್ರುವನ್||
ಇದನ್ನು ಕೇಳಿದ ಧರ್ಮಾತ್ಮ ಶೌನಕನು ಮುಗುಳ್ನಗುತ್ತಾ “ನೀನು ಹೇಳುವುದು ಸರಿ!” ಎಂದು ಉಗ್ರಶ್ರವನಿಗೆ ಹೇಳಿದನು.
01036006 ಸೂತ ಉವಾಚ
01036006a ಅಥ ಕಾಲಸ್ಯ ಮಹತಃ ಸ ಮುನಿಃ ಸಂಶಿತವ್ರತಃ|
01036006c ತಪಸ್ಯಭಿರತೋ ಧೀಮಾನ್ನ ದಾರಾನಭ್ಯಕಾಂಕ್ಷತ||
ಸೂತನು ಹೇಳಿದನು: “ಬಹಳಷ್ಟು ಸಮಯವು ಕಳೆಯಿತು. ಆದರೂ ತಪಸ್ಸಿನಲ್ಲಿಯೇ ನಿರತನಾದ ಆ ಸಂಶಿತವ್ರತ ಧೀಮಂತ ಮುನಿಯು ಪತ್ನಿಯನ್ನು ಬಯಸಲೇ ಇಲ್ಲ.
01036007a ಸ ಊರ್ಧ್ವರೇತಾಸ್ತಪಸಿ ಪ್ರಸಕ್ತಃ
ಸ್ವಾಧ್ಯಾಯವಾನ್ವೀತಭಯಕ್ಲಮಃ ಸನ್|
01036007c ಚಚಾರ ಸರ್ವಾಂ ಪೃಥಿವೀಂ ಮಹಾತ್ಮಾ
ನ ಚಾಪಿ ದಾರಾನ್ಮನಸಾಪ್ಯಕಾಂಕ್ಷತ್||
ಆ ಮಹಾತ್ಮ ಊರ್ಧ್ವರೇತನು ಅಧ್ಯಾಯ ಮತ್ತು ತಪಸ್ಸಿನಲ್ಲಿ ಪ್ರಸಕ್ತನಾಗಿ ಸ್ವಲ್ಪಯೂ ಭಯಭೀತಿಯಿಲ್ಲದೇ ಪೃಥ್ವಿಯೆಲ್ಲವನ್ನೂ ಸಂಚರಿಸಿದನು. ಅವನ ಮನಸ್ಸಿನಲ್ಲಿ ಪತ್ನಿಗಾಗಿ ಸ್ವಲ್ಪವೂ ಬಯಕೆ ಬರಲಿಲ್ಲ.
01036008a ತತೋಽಪರಸ್ಮಿನ್ಸಂಪ್ರಾಪ್ತೇ ಕಾಲೇ ಕಸ್ಮಿಂಶ್ಚಿದೇವ ತು|
01036008c ಪರಿಕ್ಷಿದಿತಿ ವಿಖ್ಯಾತೋ ರಾಜಾ ಕೌರವವಂಶಭೃತ್||
ಬಹಳಷ್ಟು ಸಮಯವು ಕಳೆದನಂತರ, ಕಾಲ ಪ್ರಾಪ್ತವಾದ ಹಾಗೆ, ಕೌರವ ವಂಶದಲ್ಲಿ ಪರಿಕ್ಷಿತನೆಂಬ ಖ್ಯಾತ ರಾಜನು ಜನಿಸಿದನು.
01036009a ಯಥಾ ಪಾಂಡುರ್ಮಹಾಬಾಹುರ್ಧನುರ್ಧರವರೋ ಭುವಿ|
01036009c ಬಭೂವ ಮೃಗಯಾಶೀಲಃ ಪುರಾಸ್ಯ ಪ್ರಪಿತಾಮಹಃ||
ತನ್ನ ಪುರಾತನ ಪ್ರಪಿತಾಮಹನಂತೆ ಅವನು ಮಹಾಬಾಹುವೂ, ಭೂಮಂಡಲದ ಧನುರ್ಧರರಲ್ಲಿ ಶ್ರೇಷ್ಠನೂ ಮತ್ತು ಮೃಗಯಾಶೀಲನೂ ಆಗಿದ್ದನು.
01036010a ಮೃಗಾನ್ವಿಧ್ಯನ್ವರಾಹಾಂಶ್ಚ ತರಕ್ಷೂನ್ಮಹಿಷಾಂಸ್ತಥಾ|
01036010c ಅನ್ಯಾಂಶ್ಚ ವಿವಿಧಾನ್ವನ್ಯಾಂಶ್ಚಚಾರ ಪೃಥಿವೀಪತಿಃ||
ಆ ಪೃಥಿವೀಪತಿಯು ಜಿಂಕೆ, ವರಾಹ, ಹಯೀನ, ಕಾಡೆಮ್ಮೆಗಳು ಮತ್ತು ಇತರ ಹಲವಾರು ವನ್ಯ ಮೃಗಗಳನ್ನು ಬೇಟೆಯಾಡುತ್ತಾ ಸಂಚರಿಸುತ್ತಿದ್ದನು.
01036011a ಸ ಕದಾಚಿನ್ಮೃಗಂ ವಿದ್ಧ್ವಾ ಬಾಣೇನ ನತಪರ್ವಣಾ|
01036011c ಪೃಷ್ಠತೋ ಧನುರಾದಾಯ ಸಸಾರ ಗಹನೇ ವನೇ||
ಒಮ್ಮೆ ಒಂದು ಜಿಂಕೆಯನ್ನು ಬಾಣದಿಂದ ಹೊಡೆದ ಅವನು ತನ್ನ ಧನುಸ್ಸನ್ನು ಭುಜದ ಮೇಲೇರಿಸಿ ಅದರ ಹಿಂದೆ ಹೋಗುತ್ತಾ ದಟ್ಟ ವನವನ್ನು ಪ್ರವೇಶಿಸಿದನು.
01036012a ಯಥಾ ಹಿ ಭಗವಾನ್ರುದ್ರೋ ವಿದ್ಧ್ವಾ ಯಜ್ಞಮೃಗಂ ದಿವಿ|
01036012c ಅನ್ವಗಚ್ಛದ್ಧನುಷ್ಪಾಣಿಃ ಪರ್ಯನ್ವೇಷಂಸ್ತತಸ್ತತಃ||
ಭಗವಾನ್ ರುದ್ರನು ಸ್ವರ್ಗಲೋಕದಲ್ಲಿ ಯಜ್ಞಮೃಗವನ್ನು ಅರಸಿದಂತೆ ಆ ಧನುಷ್ಪಾಣಿಯು ಅದನ್ನು ಅಲ್ಲಿ ಇಲ್ಲಿ ಅರಸ ತೊಡಗಿದನು.
01036013a ನ ಹಿ ತೇನ ಮೃಗೋ ವಿದ್ಧೋ ಜೀವನ್ಗಚ್ಛತಿ ವೈ ವನಂ|
01036013c ಪೂರ್ವರೂಪಂ ತು ತನ್ನೂನಮಾಸೀತ್ಸ್ವರ್ಗಗತಿಂ ಪ್ರತಿ|
01036013e ಪರಿಕ್ಷಿತಸ್ತಸ್ಯ ರಾಜ್ಞೋ ವಿದ್ಧೋ ಯನ್ನಷ್ಟವಾನ್ಮೃಗಃ||
ಇದಕ್ಕೂ ಮೊದಲು ಅವನು ಹೊಡೆದ ಯಾವ ಮೃಗವೂ ಜೀವಂತವಾಗಿ ಹೋಗಿರಲಿಲ್ಲ. ಈಗ ಕಳೆದುಹೋದ ಆ ಮೃಗವು ರಾಜ ಪರೀಕ್ಷಿತನ ಸಾವನ್ನು ಸೂಚಿಸುವಂತಿತ್ತು.
01036014a ದೂರಂ ಚಾಪಹೃತಸ್ತೇನ ಮೃಗೇಣ ಸ ಮಹೀಪತಿಃ|
01036014c ಪರಿಶ್ರಾಂತಃ ಪಿಪಾಸಾರ್ತ ಆಸಸಾದ ಮುನಿಂ ವನೇ||
01036015a ಗವಾಂ ಪ್ರಚಾರೇಷ್ವಾಸೀನಂ ವತ್ಸಾನಾಂ ಮುಖನಿಃಸೃತಂ|
01036015c ಭೂಯಿಷ್ಠಮುಪಯುಂಜಾನಂ ಫೇನಮಾಪಿಬತಾಂ ಪಯಃ||
ಜಿಂಕೆಯನ್ನು ಹಿಂಬಾಲಿಸುತ್ತಾ ಬಹುದೂರ ಹೋದ ಮಹೀಪತಿಯು ಆಯಾಸಗೊಂಡು ಬಾಯಾರಿಕೆಯಿಂದ ಬಳಲಿ ಆ ವನದಲ್ಲಿ ಒಂದು ಗೋಶಾಲೆಯಲ್ಲಿ ಕರುಗಳು ಹಾಲು ಕುಡಿಯುವಾಗ ಅವರ ಬಾಯಿಯಿಂದ ಹೊರಚೆಲ್ಲುತ್ತಿದ್ದ ಹಾಲಿನ ನೊರೆಯನ್ನೇ ಕುಡಿಯುತ್ತಿದ್ದ ಓರ್ವ ಮುನಿಯನ್ನು ಕಂಡನು.
01036016a ತಮಭಿದ್ರುತ್ಯ ವೇಗೇನ ಸ ರಾಜಾ ಸಂಶಿತವ್ರತಂ|
01036016c ಅಪೃಚ್ಛದ್ಧನುರುದ್ಯಮ್ಯ ತಂ ಮುನಿಂ ಕ್ಷುಚ್ಛ್ರಮಾನ್ವಿತಃ||
ವೇಗದಿಂದ ಅವನ ಬಳಿ ಬಂದು, ಧನುಸ್ಸನ್ನು ಮೇಲೇರಿಸಿ, ಹಸಿವು ಬಾಯಾರಿಕೆಗಳಿಂದ ಬಳಲುತ್ತಿದ್ದ ರಾಜನು ಆ ಸಂಶಿತವ್ರತ ಮುನಿಯನ್ನು ಕೇಳಿದನು:
01036017a ಭೋ ಭೋ ಬ್ರಹ್ಮನ್ನಹಂ ರಾಜಾ ಪರಿಕ್ಷಿದಭಿಮನ್ಯುಜಃ|
01036017c ಮಯಾ ವಿದ್ಧೋ ಮೃಗೋ ನಷ್ಟಃ ಕಚ್ಚಿತ್ತ್ವಂ ದೃಷ್ಟವಾನಸಿ||
“ಬ್ರಾಹ್ಮಣ! ನಾನು ಅಭಿಮನ್ಯುವಿನ ಮಗ ರಾಜ ಪರಿಕ್ಷಿತ. ನನ್ನಿಂದ ಹೊಡೆಯಲ್ಪಟ್ಟ ಜಿಂಕೆಯೊಂದು ಕಳೆದು ಹೋಗಿದೆ. ನೀನು ಅದು ಎಲ್ಲಿ ಹೋಯಿತೆಂದು ಕಂಡೆಯಾ?”
01036018a ಸ ಮುನಿಸ್ತಸ್ಯ ನೋವಾಚ ಕಿಂ ಚಿನ್ಮೌನವ್ರತೇ ಸ್ಥಿತಃ|
01036018c ತಸ್ಯ ಸ್ಕಂಧೇ ಮೃತಂ ಸರ್ಪಂ ಕ್ರುದ್ಧೋ ರಾಜಾ ಸಮಾಸಜತ್||
01036019a ಧನುಷ್ಕೋಟ್ಯಾ ಸಮುತ್ಕ್ಷಿಪ್ಯ ಸ ಚೈನಂ ಸಮುದೈಕ್ಷತ|
01036019c ನ ಚ ಕಿಂ ಚಿದುವಾಚೈನಂ ಶುಭಂ ವಾ ಯದಿ ವಾಶುಭಂ||
ಮೌನವ್ರತ ಪಾಲಿಸುತ್ತಿದ್ದ ಆ ಮುನಿಯು ಅವನಿಗೆ ಯಾವುದೇ ಉತ್ತರವನ್ನೂ ಕೊಡಲಿಲ್ಲ. ಇದರಿಂದ ಕ್ರೋಧಿತನಾದ ರಾಜನು ತನ್ನ ಧನುಸ್ಸಿನ ಕೊನೆಯಿಂದ ಸತ್ತ ಸರ್ಪವೊಂದನ್ನು ಎತ್ತಿ ಅವನ ಕೊರಳಲ್ಲಿ ಹಾಕಿದನು. ಆಗಲೂ ಕೂಡ ಅವನು ಒಳ್ಳೆಯ ಅಥವಾ ಕೆಟ್ಟ ಯಾವ ಮಾತನ್ನೂ ಆಡಲಿಲ್ಲ.
01036020a ಸ ರಾಜಾ ಕ್ರೋಧಮುತ್ಸೃಜ್ಯ ವ್ಯಥಿತಸ್ತಂ ತಥಾಗತಂ|
01036020c ದೃಷ್ಟ್ವಾ ಜಗಾಮ ನಗರಂ ಋಷಿಸ್ತ್ವಾಸ್ತೇ ತಥೈವ ಸಃ||
ಋಷಿಯನ್ನು ಆ ಅವಸ್ಥೆಯಲ್ಲಿ ನೋಡಿದ ರಾಜನು ಕೋಪವನ್ನು ಬಿಟ್ಟು ಬೇಸರದಿಂದ ತನ್ನ ನಗರಕ್ಕೆ ತೆರಳಿದನು.
01036021a ತರುಣಸ್ತಸ್ಯ ಪುತ್ರೋಽಭೂತ್ತಿಗ್ಮತೇಜಾ ಮಹಾತಪಾಃ|
01036021c ಶೃಂಗೀ ನಾಮ ಮಹಾಕ್ರೋಧೋ ದುಷ್ಪ್ರಸಾದೋ ಮಹಾವ್ರತಃ||
ಅವನಿಗೆ ಮಹಾ ತೇಜಸ್ವಿ, ಮಹಾತಪಸ್ವಿ, ಮಹಾ ಕ್ರೋಧಿ, ಮಹಾವ್ರತ ಮತ್ತು ಒಲಿಸಲು ದುಷ್ಕರ ಶೃಂಗಿ ಎಂಬ ಹೆಸರಿನ ತರುಣ ಮಗನಿದ್ದನು.
01036022a ಸ ದೇವಂ ಪರಮೀಶಾನಂ ಸರ್ವಭೂತಹಿತೇ ರತಂ|
01036022c ಬ್ರಹ್ಮಾಣಮುಪತಸ್ಥೇ ವೈ ಕಾಲೇ ಕಾಲೇ ಸುಸಂಯತಃ|
01036022e ಸ ತೇನ ಸಮನುಜ್ಞಾತೋ ಬ್ರಹ್ಮಣಾ ಗೃಹಮೇಯಿವಾನ್||
ಆ ಸರ್ವಭೂತಹಿತರತನು ಕಾಲ ಕಾಲದಲ್ಲಿ ಸುಸಂಯಮನಾಗಿ ತನ್ನ ಆಸನದಲ್ಲಿ ಕುಳಿತುಕೊಂಡು ಪರಮೀಷಾನ ಬ್ರಹ್ಮದೇವನನ್ನು ಉಪಾಸಿಸುತ್ತಿದ್ದನು. ಬ್ರಹ್ಮನ ಅಪ್ಪಣೆಯಂತೆ ಅವನು ತನ್ನ ಮನೆಗೆ ಬಂದನು.
01036023a ಸಖ್ಯೋಕ್ತಃ ಕ್ರೀಢಮಾನೇನ ಸ ತತ್ರ ಹಸತಾ ಕಿಲ|
01036023c ಸಂರಂಭೀ ಕೋಪನೋಽತೀವ ವಿಷಕಲ್ಪ ಋಷೇಃ ಸುತಃ|
01036023E ಋಷಿಪುತ್ರೇಣ ನರ್ಮಾರ್ಥಂ ಕೃಶೇನ ದ್ವಿಜಸತ್ತಮ||
ವಿಷಸಮಾನ ಅತಿಕೋಪವನ್ನು ಹೊಂದಿದ್ದ ಆ ಋಷಿಸುತನಿಗೆ ಇನ್ನೊಬ್ಬ ಋಷಿಯ ಮಗ ಕೃಶ ಎನ್ನುವ ಸಖನು ನಗುನಗುತ್ತಾ ಹಾಸ್ಯದಲ್ಲಿ ಹೇಳಿದನು:
01036024a ತೇಜಸ್ವಿನಸ್ತವ ಪಿತಾ ತಥೈವ ಚ ತಪಸ್ವಿನಃ|
01036024c ಶವಂ ಸ್ಕಂಧೇನ ವಹತಿ ಮಾ ಶೃಂಗಿಂಗರ್ವಿತೋ ಭವ||
“ಶೃಂಗಿ! ನಿನ್ನ ಗರ್ವವನ್ನು ಬಿಡು. ನೀನು ತಪಸ್ವಿಯೂ ತೇಜಸ್ವಿಯೂ ಆಗಿರಬಹುದು. ಆದರೆ ನಿನ್ನ ತಂದೆಯು ತನ್ನ ಹೆಗಲಮೇಲೆ ಒಂದು ಶವವನ್ನು ಹೊತ್ತಿದ್ದಾನೆ.
01036025a ವ್ಯಾಹರತ್ಸ್ವೃಷಿಪುತ್ರೇಷು ಮಾ ಸ್ಮ ಕಿಂ ಚಿದ್ವಚೋ ವದೀಃ|
01036025c ಅಸ್ಮದ್ವಿಧೇಷು ಸಿದ್ಧೇಷು ಬ್ರಹ್ಮವಿತ್ಸು ತಪಸ್ವಿಷು||
ತಪಸ್ವಿಗಳೂ, ಸಿದ್ಧರೂ, ಬ್ರಹ್ಮವಿದರೂ ಆದ ನಮ್ಮಂತಹ ಋಷಿಪುತ್ರರಲ್ಲಿ ನೀನು ಯಾವ ವ್ಯವಹಾರವನ್ನೂ ಮಾಡಬೇಕಾಗಿಲ್ಲ.
01036026a ಕ್ವ ತೇ ಪುರುಷಮಾನಿತ್ವಂ ಕ್ವ ತೇ ವಾಚಸ್ತಥಾವಿಧಾಃ|
01036026c ದರ್ಪಜಾಃ ಪಿತರಂ ಯಸ್ತ್ವಂ ದ್ರಷ್ಟಾ ಶವಧರಂ ತಥಾ||
ನಿನ್ನ ತಂದೆಯು ಒಂದು ಶವವನ್ನು ಹೊತ್ತಿರುವುದನ್ನು ನೋಡಿದಾಗ ನಿನ್ನ ಪುರುಷಮಾನಿತ್ವ ಎಲ್ಲಿದೆ ಮತ್ತು ನಿನ್ನ ದರ್ಪದ ಮಾತುಗಳು ಎಲ್ಲಿ ಹೋಗುತ್ತವೆ?””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪರಿಕ್ಷಿದುಪಖ್ಯಾನೇ ಷಟ್ತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಪರಿಕ್ಷಿದುಪಖ್ಯಾನ ಎನ್ನುವ ಮೂವತ್ತಾರನೆಯ ಅಧ್ಯಾಯವು.