ಆದಿ ಪರ್ವ: ಆಸ್ತೀಕ ಪರ್ವ
೩೩
ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ವಾಸುಕಿಯು ಇತರ ನಾಗಗಳೊಂದಿಗೆ ಸಮಾಲೋಚನೆ ಮಾಡುವುದು (೧-೫). ನಾಗಗಳ ಸಲಹೆಗಳು (೬-೩೦).
01033001 ಸೂತ ಉವಾಚ
01033001a ಮಾತುಃ ಸಕಾಶಾತ್ತಂ ಶಾಪಂ ಶ್ರುತ್ವಾ ಪನ್ನಗಸತ್ತಮಃ|
01033001c ವಾಸುಕಿಶ್ಚಿಂತಯಾಮಾಸ ಶಾಪೋಽಯಂ ನ ಭವೇತ್ಕಥಂ||
ಸೂತನು ಹೇಳಿದನು: “ತಾಯಿಯ ಶಾಪವನ್ನು ಕೇಳಿದ ತಕ್ಷಣವೇ ಪನ್ನಗ ಸತ್ತಮ ವಾಸುಕಿಯು ಈ ಶಾಪವು ಘಟಿಸದ ಹಾಗೆ ಏನು ಮಾಡಬೇಕು ಎಂದು ಚಿಂತಿಸತೊಡಗಿದನು.
01033002a ತತಃ ಸ ಮಂತ್ರಯಾಮಾಸ ಭ್ರಾತೃಭಿಃ ಸಹ ಸರ್ವಶಃ|
01033002c ಐರಾವತಪ್ರಭೃತಿಭಿರ್ಯೇ ಸ್ಮ ಧರ್ಮಪರಾಯಣಾಃ||
ಆಗ ಅವನು ಧರ್ಮಪರಾಯಣ ಐರಾವತನೇ ಮೊದಲಾದ ತನ್ನ ಸರ್ವ ಸಹೋದರರೊಡನೆ ಮಂತ್ರಾಲೋಚನೆ ಮಾಡಿದನು.
01033003 ವಾಸುಕಿರುವಾಚ
01033003a ಅಯಂ ಶಾಪೋ ಯಥೋದ್ದಿಷ್ಟೋ ವಿದಿತಂ ವಸ್ತಥಾನಘಾಃ|
01033003c ತಸ್ಯ ಶಾಪಸ್ಯ ಮೋಕ್ಷಾರ್ಥಂ ಮಂತ್ರಯಿತ್ವಾ ಯತಾಮಹೇ||
ವಾಸುಕಿಯು ಹೇಳಿದನು: “ಅನಘರೇ! ನಮ್ಮ ಮೇಲಿರುವ ಶಾಪದ ಕುರಿತು ನಿಮಗೆಲ್ಲ ತಿಳಿದೇ ಇದೆ. ಈ ಶಾಪದಿಂದ ಮೋಕ್ಷವನ್ನು ಹೊಂದಲು ಪ್ರಯತ್ನವನ್ನೇನಾದರೂ ಮಾಡಬೇಕು.
01033004a ಸರ್ವೇಷಾಮೇವ ಶಾಪಾನಾಂ ಪ್ರತಿಘಾತೋ ಹಿ ವಿದ್ಯತೇ|
01033004c ನ ತು ಮಾತ್ರಾಭಿಶಪ್ತಾನಾಂ ಮೋಕ್ಷೋ ವಿದ್ಯೇತ ಪನ್ನಗಾಃ||
ಎಲ್ಲ ರೀತಿಯ ಶಾಪಗಳಿಗೆ ವಿಮೋಚನೆ ಎನ್ನುವುದು ಇದೆ ಎಂದು ತಿಳಿದಿದ್ದೇವೆ. ಆದರೆ ನಾಗಗಳೇ! ತಾಯಿಯ ಅಭಿಶಾಪಕ್ಕೆ ಮೋಕ್ಷವೇ ಇಲ್ಲವೆಂದು ಹೇಳುತ್ತಾರೆ.
01033005a ಅವ್ಯಯಸ್ಯಾಪ್ರಮೇಯಸ್ಯ ಸತ್ಯಸ್ಯ ಚ ತಥಾಗ್ರತಃ|
01033005c ಶಪ್ತಾ ಇತ್ಯೇವ ಮೇ ಶ್ರುತ್ವಾ ಜಾಯತೇ ಹೃದಿ ವೇಪಥುಃ||
ಅವ್ಯಯ, ಅಪ್ರಮೇಯ, ಮತ್ತು ಸತ್ಯನ ಮುಂದೆಯೇ ಈ ಶಾಪವನ್ನು ಉಚ್ಛರಿಸಲಾಯಿತು ಎಂದು ತಿಳಿದು ನನ್ನ ಹೃದಯವು ನಡುಗುತ್ತಿದೆ.
01033006a ನೂನಂ ಸರ್ವವಿನಾಶೋಽಯಮಸ್ಮಾಕಂ ಸಮುದಾಹೃತಃ|
01033006c ನ ಹ್ಯೇನಾಂ ಸೋಽವ್ಯಯೋ ದೇವಃ ಶಪಂತೀಂ ಪ್ರತ್ಯಷೇಧಯತ್||
ನಮ್ಮೆಲ್ಲರ ವಿನಾಶವು ಹತ್ತಿರವಾಗುತ್ತಿರಬೇಕು. ಇಲ್ಲವಾದರೆ ಆ ಅವ್ಯಯ ದೇವನು ಈ ರೀತಿ ಶಪಿಸುವುವವಳನ್ನು ತಡೆಯುತ್ತಿದ್ದ.
01033007a ತಸ್ಮಾತ್ಸಮ್ಮಂತ್ರಯಾಮೋಽತ್ರ ಭುಜಗಾನಾಮನಾಮಯಂ|
01033007c ಯಥಾ ಭವೇತ ಸರ್ವೇಷಾಂ ಮಾ ನಃ ಕಾಲೋಽತ್ಯಗಾದಯಂ||
01033008a ಅಪಿ ಮಂತ್ರಯಮಾಣಾ ಹಿ ಹೇತುಂ ಪಶ್ಯಾಮ ಮೋಕ್ಷಣೇ|
ಆದ್ದರಿಂದ ಹೆಚ್ಚು ಕಾಲ ಹರಣ ಮಾಡದೇ ಸರ್ವ ನಾಗಗಳ ಒಳಿತಿನ ಕುರಿತು ಮಂತ್ರಾಲೋಚನೆ ಮಾಡೋಣ.
01033008c ಯಥಾ ನಷ್ಟಂ ಪುರಾ ದೇವಾ ಗೂಧಮಗ್ನಿಂ ಗುಹಾಗತಂ||
01033009a ಯಥಾ ಸ ಯಜ್ಞೋ ನ ಭವೇದ್ಯಥಾ ವಾಪಿ ಪರಾಭವೇತ್|
01033009c ಜನಮೇಜಯಸ್ಯ ಸರ್ಪಾಣಾಂ ವಿನಾಶಕರಣಾಯ ಹಿ||
ಸರ್ಪಗಳ ವಿನಾಶಹೇತುವಾಗುವ ಜನಮೇಜಯನ ಆ ಯಜ್ಞವೇ ನಡೆಯದಂತೆ ಏನನ್ನಾದರೂ ಮಾಡಬೇಕು.””
01033010 ಸೂತ ಉವಾಚ
01033010a ತಥೇತ್ಯುಕ್ತ್ವಾ ತು ತೇ ಸರ್ವೇ ಕಾದ್ರವೇಯಾಃ ಸಮಾಗತಾಃ|
01033010c ಸಮಯಂ ಚಕ್ರಿರೇ ತತ್ರ ಮಂತ್ರಬುದ್ಧಿವಿಶಾರದಾಃ||
ಸೂತನು ಹೇಳಿದನು: “ಈ ಮಾತುಗಳನ್ನು ಕೇಳಿ ಅಲ್ಲಿ ನೆರೆದಿದ್ದ ಕದ್ರುವಿನ ಮಂತ್ರಬುದ್ಧಿವಿಶಾರದ ಮಕ್ಕಳು ತಮ್ಮ ತಮ್ಮ ಸೂಚನೆಗಳನ್ನಿತ್ತರು.
01033011a ಏಕೇ ತತ್ರಾಬ್ರುವನ್ನಾಗಾ ವಯಂ ಭೂತ್ವಾ ದ್ವಿಜರ್ಷಭಾಃ|
01033011c ಜನಮೇಜಯಂ ತಂ ಭಿಕ್ಷಾಮೋ ಯಜ್ಞಸ್ತೇ ನ ಭವೇದಿತಿ||
ಅವರಲ್ಲಿ ಒಬ್ಬ ನಾಗನು ಹೇಳಿದನು: “ನಾವು ಬ್ರಾಹ್ಮಣ ವೇಷ ಧರಿಸಿ ಜನಮೇಜಯನಲ್ಲಿ ಹೋಗಿ ಈ ಯಜ್ಞವನ್ನು ಕೈಗೊಳ್ಳಬೇಡ ಎಂದು ಬೇಡಿಕೊಳ್ಳೋಣ.”
01033012a ಅಪರೇ ತ್ವಬ್ರುವನ್ನಾಗಾಸ್ತತ್ರ ಪಂಡಿತಮಾನಿನಃ|
01033012c ಮಂತ್ರಿಣೋಽಸ್ಯ ವಯಂ ಸರ್ವೇ ಭವಿಷ್ಯಾಮಃ ಸುಸಮ್ಮತಾಃ||
ಇತರ ನಾಗಗಳು, ತಮ್ಮನ್ನು ತಾವೇ ಪಂಡಿತರೆಂದು ಪರಿಗಣಿಸಿ ಹೇಳಿದವು: “ನಾವೆಲ್ಲರೂ ಅವನ ಸುಸಮ್ಮತಿಗಳನ್ನೀಯುವ ಮಂತ್ರಿಗಳಾಗೋಣ.
01033013a ಸ ನಃ ಪ್ರಕ್ಷ್ಯತಿ ಸರ್ವೇಷು ಕಾರ್ಯೇಷ್ವರ್ಥವಿನಿಶ್ಚಯಂ|
01033013c ತತ್ರ ಬುದ್ಧಿಂ ಪ್ರವಕ್ಷ್ಯಾಮೋ ಯಥಾ ಯಜ್ಞೋ ನಿವರ್ತತೇ||
ಆಗ ಅವನು ಸರ್ವ ಕಾರ್ಯ ವಿಷಯಗಳಲ್ಲಿ ನಮ್ಮ ಸಲಹೆಗಳನ್ನು ಕೇಳುತ್ತಾನೆ. ಆಗ ಬುದ್ಧಿಯನ್ನು ಬಳಸಿ ಈ ಯಜ್ಞವು ನಡೆಯದಂತೆ ನೋಡಿಕೊಳ್ಳಬಹುದು.
01033014a ಸ ನೋ ಬಹುಮತಾನ್ರಾಜಾ ಬುದ್ಧ್ವಾ ಬುದ್ಧಿಮತಾಂ ವರಃ|
01033014c ಯಜ್ಞಾರ್ಥಂ ಪ್ರಕ್ಷ್ಯತಿ ವ್ಯಕ್ತಂ ನೇತಿ ವಕ್ಷ್ಯಾಮಹೇ ವಯಂ||
ಬುದ್ಧಿವಂತರಲ್ಲಿ ಶ್ರೇಷ್ಠ ಆ ರಾಜನು ಯಜ್ಞದ ವಿಷಯದಲ್ಲಿ ನಮ್ಮ ಅಭಿಪ್ರಾಯಗಳನ್ನು ಕೇಳಿಯೇ ಕೇಳುತ್ತಾನೆ. ಆಗ ಅದನ್ನು ಮಾಡಬೇಡ ಎಂದು ಹೇಳೋಣ.
01033015a ದರ್ಶಯಂತೋ ಬಹೂನ್ದೋಷಾನ್ಪ್ರೇತ್ಯ ಚೇಹ ಚ ದಾರುಣಾನ್|
01033015c ಹೇತುಭಿಃ ಕಾರಣೈಶ್ಚೈವ ಯಥಾ ಯಜ್ಞೋ ಭವೇನ್ನ ಸಃ||
ಇಹದಲ್ಲಿಯೂ ಪರದಲ್ಲಿಯೂ ಅದರಿಂದುಂಟಾಗುವ ದಾರುಣ ದೋಷಗಳನ್ನು ತೋರಿಸಿಕೊಡೋಣ. ಇದರ ಕಾರಣ-ಪರಿಣಾಮಗಳೆರಡನ್ನೂ ತಿಳಿಸಿ ಹೇಳಿ ಯಜ್ಞವು ನಡೆಯದಂತೆ ಮಾಡೋಣ.
01033016a ಅಥವಾ ಯ ಉಪಾಧ್ಯಾಯಃ ಕ್ರತೌ ತಸ್ಮಿನ್ಭವಿಷ್ಯತಿ|
01033016c ಸರ್ಪಸತ್ರವಿಧಾನಜ್ಞೋ ರಾಜಕಾರ್ಯಹಿತೇ ರತಃ||
01033017a ತಂ ಗತ್ವಾ ದಶತಾಂ ಕಶ್ಚಿದ್ಭುಜಗಃ ಸ ಮರಿಷ್ಯತಿ|
01033017c ತಸ್ಮಿನ್ ಹತೇ ಯಜ್ಞಕರೇ ಕ್ರತುಃ ಸ ನ ಭವಿಷ್ಯತಿ||
ಅಥವಾ ನಮ್ಮಲ್ಲೊಬ್ಬ ನಾಗನು ರಾಜಕಾರ್ಯಹಿತರತ ಸರ್ಪಸತ್ರದ ವಿಧಾನವನ್ನು ತಿಳಿದಿರುವ, ಕ್ರತುವಿನ ಉಪಾಧ್ಯಾಯನೊಬ್ಬನನ್ನು ಕಚ್ಚಿ ಸಾಯಿಸಲಿ. ಯಜ್ಞಕರ್ತೃವಾದ ಅವನು ತೀರಿಕೊಂಡಾಗ ಯಜ್ಞವು ಮುಂದುವರೆಯಲಾರದು.
01033018a ಯೇ ಚಾನ್ಯೇ ಸರ್ಪಸತ್ರಜ್ಞಾ ಭವಿಷ್ಯಂತ್ಯಸ್ಯ ಋತ್ವಿಜಃ|
01033018c ತಾಂಶ್ಚ ಸರ್ವಾನ್ದಶಿಷ್ಯಾಮಃ ಕೃತಮೇವಂ ಭವಿಷ್ಯತಿ||
ಇಲ್ಲವಾದರೆ ಸರ್ಪಸತ್ರವನ್ನು ತಿಳಿದಿರುವ ಮತ್ತು ಮುಂದೆ ಅದರ ಋತ್ವಿಜರಾಗಬಲ್ಲ ಎಲ್ಲರನ್ನೂ ಕಚ್ಚಿ ಸಾಯಿಸೋಣ. ಈ ರೀತಿ ನಮ್ಮ ಉದ್ದೇಶವನ್ನು ಪೂರೈಸಿಕೊಳ್ಳಬಹುದು.”
01033019a ತತ್ರಾಪರೇಽಮಂತ್ರಯಂತ ಧರ್ಮಾತ್ಮಾನೋ ಭುಜಂಗಮಾಃ|
01033019c ಅಬುದ್ಧಿರೇಷಾ ಯುಷ್ಮಾಕಂ ಬ್ರಹ್ಮಹತ್ಯಾ ನ ಶೋಭನಾ||
ಅಲ್ಲಿಯೇ ಮಂತ್ರಾಲೋಚನೆಯಲ್ಲಿ ಕುಳಿತಿದ್ದ ಒಬ್ಬ ಧರ್ಮಾತ್ಮ ನಾಗನು ಹೇಳಿದನು: “ನಿನ್ನ ಈ ಮಾತುಗಳು ಅಬುದ್ಧಿಯವು. ಬ್ರಹ್ಮ ಹತ್ಯೆ ಒಳ್ಳೆಯದಲ್ಲ.
01033020a ಸಮ್ಯಕ್ಸದ್ಧರ್ಮಮೂಲಾ ಹಿ ವ್ಯಸನೇ ಶಾಂತಿರುತ್ತಮಾ|
01033020c ಅಧರ್ಮೋತ್ತರತಾ ನಾಮ ಕೃತ್ಸ್ನಂ ವ್ಯಾಪಾದಯೇಜ್ಜಗತ್||
ಸಮ್ಯಕ್ ಸದ್ಧರ್ಮವೇ ವ್ಯಸನದಲ್ಲಿರುವವರಿಗೆ ಉತ್ತಮ ಶಾಂತಿಯ ಮೂಲ. ಅಧರ್ಮವು ಇಡೀ ಜಗತ್ತನ್ನೇ ನಾಶಪಡಿಸುತ್ತದೆ.”
01033021a ಅಪರೇ ತ್ವಬ್ರುವನ್ನಾಗಾಃ ಸಮಿದ್ಧಂ ಜಾತವೇದಸಂ|
01033021c ವರ್ಷೈರ್ನಿರ್ವಾಪಯಿಷ್ಯಾಮೋ ಮೇಘಾ ಭೂತ್ವಾ ಸವಿದ್ಯುತಃ||
ಇತರ ನಾಗಗಳು ಹೇಳಿದವು: “ನಾವೆಲ್ಲರೂ ಮಿಂಚಿನಿಂದ ಕೂಡಿದ ಕಪ್ಪು ಮೋಡಗಳಾಗಿ ಜೋರಾಗಿ ಮಳೆಸುರಿಸಿ ಯಜ್ಞೇಶ್ವರನನ್ನು ಆರಿಸಿಬಿಡೋಣ.”
01033022a ಸ್ರುಃ ಭಾಂಡಂ ನಿಶಿ ಗತ್ವಾ ವಾ ಅಪರೇ ಭುಜಗೋತ್ತಮಾಃ|
01033022c ಪ್ರಮತ್ತಾನಾಂ ಹರಂತ್ವಾಶು ವಿಘ್ನ ಏವಂ ಭವಿಷ್ಯತಿ||
ಇನ್ನೊಬ್ಬ ಭುಜಗೋತ್ತಮನು ಹೇಳಿದನು: “ರಾತ್ರಿಯಲ್ಲಿ ಹೋಗಿ ಯಜ್ಞದ ಆಹುತಿಗಳನ್ನು ತುಂಬಿಟ್ಟಿದ್ದ ಪಾತ್ರೆಗಳನ್ನು ಕದ್ದು ತರೋಣ. ಈ ರೀತಿ ಅದಕ್ಕೆ ವಿಘ್ನವುಂಟಾಗುತ್ತದೆ.
01033023a ಯಜ್ಞೇ ವಾ ಭುಜಗಾಸ್ತಸ್ಮಿನ್ ಶತಶೋಽಥ ಸಹಸ್ರಶಃ|
01033023c ಜನಂ ದಶಂತು ವೈ ಸರ್ವಮೇವಂ ತ್ರಾಸೋ ಭವಿಷ್ಯತಿ||
ಅಥವಾ, ನೂರಾರು ಸಹಸ್ರಾರು ನಾಗಗಳು ಅಲ್ಲಿಗೆ ಹೋಗಿ ನೆರೆದಿದ್ದ ಜನರೆಲ್ಲರನ್ನೂ ಕಚ್ಚಿ ಭಯೋತ್ಪಾದನೆ ಮಾಡೋಣ.
01033024a ಅಥವಾ ಸಂಸ್ಕೃತಂ ಭೋಜ್ಯಂ ದೂಷಯಂತು ಭುಜಂಗಮಾಃ|
01033024c ಸ್ವೇನ ಮೂತ್ರಪುರೀಷೇಣ ಸರ್ವಭೋಜ್ಯವಿನಾಶಿನಾ||
ಅಥವಾ ಮಡಿಯಾಗಿದ್ದ ಆಹಾರವನ್ನು ನಾಗಗಳ ಮೂತ್ರ ಮಲಗಳಿಂದ ಮೈಲಿಗೆ ಮಾಡಿ ಆಹಾರವೆಲ್ಲವನ್ನೂ ನಾಶಮಾಡೋಣ.”
01033025a ಅಪರೇ ತ್ವಬ್ರುವಂಸ್ತತ್ರ ಋತ್ವಿಜೋಽಸ್ಯ ಭವಾಮಹೇ|
01033025c ಯಜ್ಞವಿಘ್ನಂ ಕರಿಷ್ಯಾಮೋ ದೀಯತಾಂ ದಕ್ಷಿಣಾ ಇತಿ|
01033025e ವಶ್ಯತಾಂ ಚ ಗತೋಽಸೌ ನಃ ಕರಿಷ್ಯತಿ ಯಥೇಪ್ಷಿತಂ||
ಇನ್ನು ಕೆಲವರು ಹೇಳಿದರು: “ನಾವೆಲ್ಲರೂ ಋತ್ವಿಜರಾಗಿ ಅವನ ಬಳಿ ಹೋಗೋಣ. ದಕ್ಷಿಣೆಯನ್ನು ಕೊಡು ಎಂದು ಯಜ್ಞದಲ್ಲಿ ವಿಘ್ನವನ್ನು ಉಂಟುಮಾಡೋಣ. ಅವನು ನಮ್ಮ ವಶದಲ್ಲಿರುವುದರಿಂದ ನಾವು ಕೇಳಿದುದೆಲ್ಲವನ್ನೂ ಅವನು ಮಾಡುವನು.”
01033026a ಅಪರೇ ತ್ವಬ್ರುವಂಸ್ತತ್ರ ಜಲೇ ಪ್ರಕ್ರೀಡಿತಂ ನೃಪಂ|
01033026c ಗೃಹಮಾನೀಯ ಬಧ್ನೀಮಃ ಕ್ರತುರೇವಂ ಭವೇನ್ನ ಸಃ||
ಅಲ್ಲಿದ್ಡವರಲ್ಲಿ ಇನ್ನೊಬ್ಬನು ಹೇಳಿದನು: “ಜಲಕ್ರೀಡೆಯಲ್ಲಿ ತೊಡಗಿರುವಾಗ ರಾಜನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಧನದಲ್ಲಿ ಇಡೋಣ. ಹೀಗೆ ಯಜ್ಞವೇ ನಡೆಯುವುದಿಲ್ಲ.”
01033027a ಅಪರೇ ತ್ವಬ್ರುವಂಸ್ತತ್ರ ನಾಗಾಃ ಸುಕೃತಕಾರಿಣಃ|
01033027c ದಶಾಮೈನಂ ಪ್ರಗೃಹ್ಯಾಶು ಕೃತಮೇವಂ ಭವಿಷ್ಯತಿ|
01033027e ಚಿನ್ನಂ ಮೂಲಮನರ್ಥಾನಾಂ ಮೃತೇ ತಸ್ಮಿನ್ಭವಿಷ್ಯತಿ||
ಅಲ್ಲಿ ಕೆಲವು ಸುಕೃತಕಾರಿ ನಾಗಗಳಿದ್ದರು. ಅವರು ಹೇಳಿದರು: “ತಕ್ಷಣವೇ ಹೋಗಿ ಅವನನ್ನು ಹಿಡಿದು ಕಚ್ಚಿಬಿಡುವುದರಿಂದ ಎಲ್ಲವೂ ಮುಕ್ತಾಯವಾಗುತ್ತದೆ. ಒಮ್ಮೆ ಅವನು ಸತ್ತನೆಂದಾದರೆ ನಮ್ಮೆಲ್ಲರ ಕಷ್ಟಗಳ ಮೂಲವೇ ಕಡಿದು ಹೋದಂತೆ.
01033028a ಏಷಾ ವೈ ನೈಷ್ಟಿಕೀ ಬುದ್ಧಿಃ ಸರ್ವೇಷಾಮೇವ ಸಮ್ಮತಾ|
01033028c ಯಥಾ ವಾ ಮನ್ಯಸೇ ರಾಜಂಸ್ತತ್ ಕ್ಷಿಪ್ರಂ ಸಂವಿಧೀಯತಾಂ||
ಇದೇ ನಮ್ಮ ಅಂತಿಮ ಸೂಚನೆ ಮತ್ತು ಇದಕ್ಕೆ ನಮ್ಮೆಲ್ಲರ ಸಮ್ಮತಿಯಿದೆ. ರಾಜನ್! ನಿನ್ನ ಒಪ್ಪಿಗೆಯಿದ್ದರೆ ಕೂಡಲೇ ಇದನ್ನು ಕಾರ್ಯಗತಗೊಳಿಸೋಣ.”
01033029a ಇತ್ಯುಕ್ತ್ವಾ ಸಮುದೈಕ್ಷಂತ ವಾಸುಕಿಂ ಪನ್ನಗೇಶ್ವರಂ|
01033029c ವಾಸುಕಿಶ್ಚಾಪಿ ಸಂಚಿಂತ್ಯ ತಾನುವಾಚ ಭುಜಂಗಮಾನ್||
ಹೀಗೆ ಹೇಳಿ ಅವರೆಲ್ಲರೂ ಪನ್ನಗೇಶ್ವರ ವಾಸುಕಿಯತ್ತ ನೋಡಿದರು. ವಾಸುಕಿಯಾದರೂ ಸ್ವಲ್ಪ ಹೊತ್ತು ಯೋಚಿಸಿ ಆ ಭುಜಂಗರಿಗೆ ಹೇಳಿದನು:
01033030a ನೈಷಾ ವೋ ನೈಷ್ಟಿಕೀ ಬುದ್ಧಿರ್ಮತಾ ಕರ್ತುಂ ಭುಜಂಗಮಾಃ|
01033030c ಸರ್ವೇಷಾಮೇವ ಮೇ ಬುದ್ಧಿಃ ಪನ್ನಗಾನಾಂ ನ ರೋಚತೇ||
“ಭುಜಂಗಮರೇ! ನಿಮ್ಮ ಅಂತಿಮ ಸಲಹೆಯು ಕಾರ್ಯಗತಗೊಳಿಸಲು ಯೋಗ್ಯವಾದುದಲ್ಲ. ಪನ್ನಗಗಳಲ್ಲಿ ಯಾರ ಉಪಾಯವೂ ನನಗೆ ಇಷ್ಟವಾಗಲಿಲ್ಲ.
01033031a ಕಿಂ ತ್ವತ್ರ ಸಂವಿಧಾತವ್ಯಂ ಭವತಾಂ ಯದ್ಭವೇದ್ಧಿತಂ|
01033031c ಅನೇನಾಹಂ ಭೃಶಂ ತಪ್ಯೇ ಗುಣದೋಷೌ ಮದಾಶ್ರಯೌ||
ನಿಮ್ಮೆಲ್ಲರ ಒಳಿತಿಗಾಗಿ ಈಗ ಮಾಡಲಿಕ್ಕಾದರೂ ಏನಿದೆ? ಇದೇ ನನ್ನನ್ನು ಚಿಂತೆಗೊಳಪಡಿಸುತ್ತಿದೆ. ಉಳ್ಳೆಯದಾದರೂ ನನ್ನದೇ ಕೆಟ್ಟದ್ದಾದರೂ ನನ್ನದೇ.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ವಾಸುಕ್ಯಾದಿಮಂತ್ರಣೋ ನಾಮ ತ್ರಯಸ್ತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ವಾಸುಕ್ಯಾದಿಮಂತ್ರಣ ಎನ್ನುವ ಮೂವತ್ತ್ಮೂರನೆಯ ಅಧ್ಯಾಯವು.