ಆದಿ ಪರ್ವ: ಆಸ್ತೀಕ ಪರ್ವ
೨೯
ಗರುಡನು ಅಮೃತವನ್ನು ಅಪಹರಿಸಿದುದು (೧-೧೦). ಆಕಾಶದಲ್ಲಿ ಗರುಡನು ವಿಷ್ಣುವನ್ನು ಭೇಟಿಯಾಗಿ ವರವನ್ನು ನೀಡಿದುದು (೧೧-೧೫), ಇಂದ್ರನ ವಜ್ರವನ್ನು ಗೌರವಿಸಿ ಗರುಡನು ಒಂದು ಪುಕ್ಕವನ್ನು ಬೀಳಿಸಲು, ಇಂದ್ರನು ಗರುಡನ ಮಿತ್ರತ್ವವನ್ನು ಕೇಳಿಕೊಡಿದುದು (೧೬-೨೦).
01029001 ಸೂತ ಉವಾಚ
01029001a ಜಾಂಬೂನದಮಯೋ ಭೂತ್ವಾ ಮರೀಚಿವಿಕಚೋಜ್ಜ್ವಲಃ|
01029001c ಪ್ರವಿವೇಶ ಬಲಾತ್ ಪಕ್ಷೀ ವಾರಿವೇಗ ಇವಾರ್ಣವಂ||
ಸೂತನು ಹೇಳಿದನು: “ಸೂರ್ಯನ ಕಿರಣಗಳಂತೆ ಪ್ರಜ್ವಲಿಸುತ್ತಿರುವ ಕಾಂಚನದೇಹವನ್ನು ತಾಳಿ ಆ ಪಕ್ಷಿಯು ಸಮುದ್ರವನ್ನು ಸೇರುತ್ತಿರುವ ನದಿಯಂತೆ ವೇಗವಾಗಿ ಒಳ ಹೊಕ್ಕನು.
01029002a ಸ ಚಕ್ರಂ ಕ್ಷುರಪರ್ಯಂತಮಪಶ್ಯದಮೃತಾಂತಿಕೇ|
01029002c ಪರಿಭ್ರಮಂತಮನಿಶಂ ತೀಕ್ಷ್ಣಧಾರಮಯಸ್ಮಯಂ||
01029003a ಜ್ವಲನಾರ್ಕಪ್ರಭಂ ಘೋರಂ ಚೇದನಂ ಸೋಮಹಾರಿಣಾಂ|
01029003c ಘೋರರೂಪಂ ತದತ್ಯರ್ಥಂ ಯಂತ್ರಂ ದೇವೈಃ ಸುನಿರ್ಮಿತಂ||
ಅಮೃತವನ್ನು ಕದಿಯಲು ಬರುವವರನ್ನು ಕತ್ತರಿಸಲು ದೇವತೆಗಳು ಪ್ರಯತ್ನಪಟ್ಟು ರಚಿಸಿದ್ದ ಸೂರ್ಯ ಪ್ರಭೆಯಂತೆ ಪ್ರಜ್ವಲಿಸುತ್ತಿದ್ದ ನಿರಂತರವಾಗಿ ಪರಿಭ್ರಮಿಸುತ್ತಿದ್ದ ತೀಕ್ಷ್ಣ ಹಲ್ಲುಗಳ ಘೋರ ಚಕ್ರವೊಂದನ್ನು ಅಮೃತದ ಮುಂದೆ ನೋಡಿದನು.
01029004a ತಸ್ಯಾಂತರಂ ಸ ದೃಷ್ಟ್ವೈವ ಪರ್ಯವರ್ತತ ಖೇಚರಃ|
01029004c ಅರಾಂತರೇಣಾಭ್ಯಪತತ್ಸಂಕ್ಷಿಪ್ಯಾಂಗಂ ಕ್ಷಣೇನ ಹ||
ಅವುಗಳ ಮಧ್ಯದಲ್ಲಿ ದಾರಿಯೊಂದನ್ನು ಕಂಡ ಖೇಚರನು ಒಂದು ಕ್ಷಣದಲ್ಲಿ ಸಣ್ಣದಾಗಿ ಆ ಚಕ್ರದ ಹಲ್ಲುಗಳ ಮಧ್ಯದಿಂದ ಒಳ ಹೊಕ್ಕನು.
01029005a ಅಧಶ್ಚಕ್ರಸ್ಯ ಚೈವಾತ್ರ ದೀಪ್ತಾನಲಸಮದ್ಯುತೀ|
01029005c ವಿದ್ಯುಜ್ಜಿಹ್ವೌ ಮಹಾಘೋರೌ ದೀಪ್ತಾಸ್ಯೌ ದೀಪ್ತಲೋಚನೌ||
01029006a ಚಕ್ಷುರ್ವಿಷೌ ಮಹಾವೀರ್ಯೌ ನಿತ್ಯಕ್ರುದ್ಧೌ ತರಸ್ವಿನೌ|
01029006c ರಕ್ಷಾರ್ಥಮೇವಾಮೃತಸ್ಯ ದದರ್ಶ ಭುಜಗೋತ್ತಮೌ||
01029007a ಸದಾ ಸಂರಬ್ಧನಯನೌ ಸದಾ ಚಾನಿಮಿಷೇಕ್ಷಣೌ|
01029007c ತಯೋರೇಕೋಽಪಿ ಯಂ ಪಶ್ಯೇತ್ಸ ತೂರ್ಣಂ ಭಸ್ಮಸಾದ್ಭವೇತ್||
ಆ ಚಕ್ರದ ಹಿಂದೆ ಉರಿಯುವ ಬೆಂಕಿಯಂತೆ ಪ್ರಜ್ವಲಿಸುತ್ತಿದ್ದ ಮಿಂಚಿನಂತೆ ನಾಲಿಗೆಗಳನ್ನು ಹೊರಚಾಚುತ್ತಿದ್ದ, ಬೆಂಕಿಯನ್ನು ಕಾರುತ್ತಿದ್ದ ಬಾಯಿ ಮತ್ತು ಉರಿಯುತ್ತಿರುವ ಕಣ್ಣುಗಳನ್ನು ಹೊಂದಿದ್ದ, ವಿಷಕಾರಕ, ಮಹಾಘೋರ, ಮಹಾವೀರ್ಯ, ಸದಾ ಸಿಟ್ಟಿನಲ್ಲಿರುವ, ಕಣ್ಣನ್ನು ಮಚ್ಚದೆಯೇ ಯಾವಾಗಲೂ ಎಚ್ಚರದಲ್ಲಿದ್ದು ಅಮೃತವನ್ನು ರಕ್ಷಿಸುತ್ತಿದ್ದ ಈರ್ವರು ಸರ್ಪೋತ್ತಮರನ್ನು ಕಂಡನು. ಯಾವುದೇ ಸರ್ಪದ ಕಣ್ಣು ಯಾರ ಮೇಲೆ ಬಿದ್ದರೂ ಅವರು ತಕ್ಷಣವೇ ಭಸ್ಮವಾಗಿ ಬಿಡುತ್ತಿದ್ದರು.
01029008a ತಯೋಶ್ಚಕ್ಷೂಂಷಿ ರಜಸಾ ಸುಪರ್ಣಸ್ತೂರ್ಣಮಾವೃಣೋತ್|
01029008c ಅದೃಷ್ಟರೂಪಸ್ತೌ ಚಾಪಿ ಸರ್ವತಃ ಪರ್ಯಕಾಲಯತ್||
ಆಗ ಸುಪರ್ಣನು ಅವರ ಕಣ್ಣುಗಳನ್ನು ಧೂಳಿನಿಂದ ಮುಚ್ಚಿ, ಅವರನ್ನು ಅಂಧರನ್ನಾಗಿ ಮಾಡಿ, ಎಲ್ಲ ಕಡೆಯಿಂದಲೂ ಅವರನ್ನು ಆಕ್ರಮಣ ಮಾಡಿದನು.
01029009a ತಯೋರಂಗೇ ಸಮಾಕ್ರಮ್ಯ ವೈನತೇಯೋಽಂತರಿಕ್ಷಗಃ|
01029009c ಆಚ್ಛಿನತ್ತರಸಾ ಮಧ್ಯೇ ಸೋಮಮಭ್ಯದ್ರವತ್ ತತಃ||
ಆ ಅಂತರಿಕ್ಷಗ ವೈನತೇಯನು ಅವರನ್ನು ತುಂಡುಮಾಡಿ ಮುದ್ದೆಮಾಡಿ ತಡಮಾಡದೇ ಸೋಮದ ಕಡೆ ಧಾವಿಸಿದನು.
01029010a ಸಮುತ್ಪಾಟ್ಯಾಮೃತಂ ತತ್ತು ವೈನತೇಯಸ್ತತೋ ಬಲೀ|
01029010c ಉತ್ಪಪಾತ ಜವೇನೈವ ಯಂತ್ರಮುನ್ಮಥ್ಯ ವೀರ್ಯವಾನ್||
ಬಲಶಾಲಿ ವೀರ್ಯವಾನ್ ವೈನತೇಯನು ಅಮೃತವನ್ನು ಅಲ್ಲಿಂದ ಎತ್ತಿ, ಆ ಚಕ್ರವನ್ನು ತುಂಡು ತುಂಡು ಮಾಡಿ ವೇಗದಿಂದ ಮೇಲೇರಿದನು.
01029011a ಅಪೀತ್ವೈವಾಮೃತಂ ಪಕ್ಷೀ ಪರಿಗೃಹ್ಯಾಶು ವೀರ್ಯವಾನ್|
01029011c ಅಗಚ್ಛದಪರಿಶ್ರಾಂತ ಆವಾರ್ಯಾರ್ಕಪ್ರಭಾಂ ಖಗಃ||
ಆ ವೀರ ಪಕ್ಷಿಯು ಕುಡಿಯದೆಯೇ ಅಮೃತವನ್ನು ಎತ್ತಿಕೊಂಡು ಸ್ವಲ್ಪವೂ ಆಯಾಸಗೊಳ್ಳದೇ ಮೇಲೆ ಹಾರಿ, ಸೂರ್ಯನ ಪ್ರಭೆಯನ್ನೂ ಕುಂಠಿತಗೊಳಿಸಿದನು.
01029012a ವಿಷ್ಣುನಾ ತು ತದಾಕಾಶೇ ವೈನತೇಯಃ ಸಮೇಯಿವಾನ್|
01029012c ತಸ್ಯ ನಾರಾಯಣಸ್ತುಷ್ಟಸ್ತೇನಾಲೌಲ್ಯೇನ ಕರ್ಮಣಾ||
ಆಕಾಶದಲ್ಲಿ ವಿಷ್ಣು ನಾರಾಯಣನು ವೈನತೇಯನ ಸ್ವ-ನಿಯಂತ್ರಣವನ್ನು ಮತ್ತು ಕಾರ್ಯವನ್ನು ಕಂಡು ತುಷ್ಟನಾದನು.
01029013a ತಮುವಾಚಾವ್ಯಯೋ ದೇವೋ ವರದೋಽಸ್ಮೀತಿ ಖೇಚರಂ|
01029013c ಸ ವವ್ರೇ ತವ ತಿಷ್ಠೇಯಮುಪರೀತ್ಯಂತರಿಕ್ಷಗಃ||
ಆ ಅವ್ಯಯ ದೇವನು ಹೇಳಿದನು: “ಪಕ್ಷಿಯೇ! ನಿನಗೆ ವರವನ್ನು ನೀಡುತ್ತೇನೆ.” ಅದಕ್ಕೆ ಅಂತರಿಕ್ಷಗನು “ನಿನ್ನ ಮೇಲೆಯೇ ನನಗೆ ಸ್ಥಾನವನ್ನು ಕೊಡು” ಎಂದನು.
01029014a ಉವಾಚ ಚೈನಂ ಭೂಯೋಽಪಿ ನಾರಾಯಣಮಿದಂ ವಚಃ|
01029014c ಅಜರಶ್ಚಾಮರಶ್ಚ ಸ್ಯಾಮಮೃತೇನ ವಿನಾಪ್ಯಹಂ||
ನಾರಾಯಣನಲ್ಲಿ ಇನ್ನೂ ಕೇಳಿಕೊಂಡನು: “ಅಮೃತವನ್ನು ಕುಡಿಯದೆಯೇ ನಾನು ಅಜರ ಮತ್ತು ಅಮರನಾಗಲಿ.”
01029015a ಪ್ರತಿಗೃಹ್ಯ ವರೌ ತೌ ಚ ಗರುಡೋ ವಿಷ್ಣುಮಬ್ರವೀತ್|
01029015c ಭವತೇಽಪಿ ವರಂ ದದ್ಮಿ ವೃಣೀತಾಂ ಭಗವಾನಪಿ||
ಆ ಎರಡು ವರಗಳನ್ನು ಸ್ವೀಕರಿಸಿದ ಗರುಡನು ವಿಷ್ಣುವಿಗೆ ಹೇಳಿದನು: “ಭಗವನ್! ನಾನೂ ಕೂಡ ನಿನಗೆ ವರವನ್ನು ಕೊಡುತ್ತೇನೆ. ಕೇಳಿಕೋ.”
01029016a ತಂ ವವ್ರೇ ವಾಹನಂ ಕೃಷ್ಣೋ ಗರುತ್ಮಂತಂ ಮಹಾಬಲಂ|
01029016c ಧ್ವಜಂ ಚ ಚಕ್ರೇ ಭಗವಾನುಪರಿ ಸ್ಥಾಸ್ಯಸೀತಿ ತಂ||
ಆ ಮಾತಿಗೆ ಕೃಷ್ಣನು ಮಹಾಬಲ ಗರುತ್ಮಂತನನ್ನು ತನ್ನ ವಾಹನವನ್ನಾಗಿ ಆರಿಸಿಕೊಂಡನು. ಮತ್ತು ಅವನನ್ನು ಧ್ವಜದಲ್ಲಿ ಇಟ್ಟು “ಈ ರೀತಿ ನನ್ನ ಮೇಲೆಯೂ ನೀನು ಇರುತ್ತೀಯೆ” ಎಂದನು.
01029017a ಅನುಪತ್ಯ ಖಗಂ ತ್ವಿಂದ್ರೋ ವಜ್ರೇಣಾಂಗೇಽಭ್ಯತಾಡಯತ್|
01029017c ವಿಹಂಗಮಂ ಸುರಾಮಿತ್ರಂ ಹರಂತಮಮೃತಂ ಬಲಾತ್||
ಅಮೃತವನ್ನು ಬಲಾತ್ಕಾರವಾಗಿ ಕದ್ದು ಒಯ್ಯುತ್ತಿರುವ ಸುರಶತ್ರು ಗರುಡನನ್ನು ಇಂದ್ರನು ವಜ್ರದಿಂದ ಹೊಡೆದನು.
01029018a ತಮುವಾಚೇಂದ್ರಮಾಕ್ರಂದೇ ಗರುಡಃ ಪತತಾಂ ವರಃ|
01029018c ಪ್ರಹಸನ್ ಶ್ಲಕ್ಷ್ಣಯಾ ವಾಚಾ ತಥಾ ವಜ್ರಸಮಾಹತಃ||
ಪಕ್ಷಿಗಳಲ್ಲಿಯೇ ಶ್ರೇಷ್ಠ ವಜ್ರಸಮಾಹತ ಗರುಡನು ಸಿಟ್ಟಿಗೆದ್ದ ಇಂದ್ರನಿಗೆ ನಗುತ್ತಾ ಶ್ಲಾಘನೀಯ ಮಾತುಗಳಿಂದ ಹೇಳಿದನು:
01029019a ಋಷೇರ್ಮಾನಂ ಕರಿಷ್ಯಾಮಿ ವಜ್ರಂ ಯಸ್ಯಾಸ್ಥಿಸಂಭವಂ|
01029019c ವಜ್ರಸ್ಯ ಚ ಕರಿಷ್ಯಾಮಿ ತವ ಚೈವ ಶತಕ್ರತೋ||
“ಯಾವ ಋಷಿಗಳ ಎಲುಬಿನಿಂದ ಈ ವಜ್ರವು ಮಾಡಲ್ಪಟ್ಟಿದೆಯೋ ಅವರನ್ನು, ಈ ವಜ್ರವನ್ನು ಮತ್ತು ಶತಕ್ರತು! ನಿನ್ನನ್ನು ಗೌರವಿಸುತ್ತೇನೆ.
01029020a ಏಷ ಪತ್ರಂ ತ್ಯಜಾಮ್ಯೇಕಂ ಯಸ್ಯಾಂತಂ ನೋಪಲಪ್ಸ್ಯಸೇ|
01029020c ನ ಹಿ ವಜ್ರನಿಪಾತೇನ ರುಜಾ ಮೇಽಸ್ತಿ ಕದಾಚನ||
ನನ್ನ ಈ ಒಂದು ರೆಕ್ಕೆಯ ಪುಕ್ಕವನ್ನು ಬಿಸಾಡುತ್ತಿದ್ದೇನೆ. ಅದರ ಕೊನೆಯನ್ನು ನೀನೂ ಕೂಡ ಕಾಣಲಾರೆ. ವಜ್ರದ ಹೊಡೆತದಿಂದ ನನಗೆ ಸ್ವಲ್ಪವೂ ನೋವಾಗಲಿಲ್ಲ.”
01029021a ತತ್ರ ತಂ ಸರ್ವಭೂತಾನಿ ವಿಸ್ಮಿತಾನ್ಯಬ್ರುವಂಸ್ತದಾ|
01029021c ಸುರೂಪಂ ಪತ್ರಮಾಲಕ್ಷ್ಯ ಸುಪರ್ಣೋಽಯಂ ಭವತ್ವಿತಿ||
ಆ ಸುಂದರ ರೆಕ್ಕೆಯ ಪುಕ್ಕವನ್ನು ನೋಡಿ ವಿಸ್ಮಿತರಾದ ಸರ್ವ ಜೀವಿಗಳೂ “ಇವನು ಸುಪರ್ಣ ಎಂದು ಕರೆಯಲ್ಪಡಲಿ!” ಎಂದರು.
01029022a ದೃಷ್ಟ್ವಾ ತದದ್ಭುತಂ ಚಾಪಿ ಸಹಸ್ರಾಕ್ಷಃ ಪುರಂದರಃ|
01029022c ಖಗೋ ಮಹದಿದಂ ಭೂತಮಿತಿ ಮತ್ವಾಭ್ಯಭಾಷತ||
ಆ ಅದ್ಭುತವನ್ನು ಕಂಡ ಸಹಸ್ರಾಕ್ಷ ಪುರಂದರನು ಈ ಪಕ್ಷಿಯು ಒಂದು ಮಹಾ ಜೀವಿ ಎಂದು ಗಮನಿಸಿ ಹೇಳಿದನು:
01029023a ಬಲಂ ವಿಜ್ಞಾತುಮಿಚ್ಛಾಮಿ ಯತ್ತೇ ಪರಮನುತ್ತಮಂ|
01029023c ಸಖ್ಯಂ ಚಾನಂತಮಿಚ್ಛಾಮಿ ತ್ವಯಾ ಸಹ ಖಗೋತ್ತಮ||
“ನಿನ್ನ ಅನುತ್ತಮ ಪರಮ ಬಲವನ್ನು ತಿಳಿಯ ಬಯಸುತ್ತೇನೆ. ಮತ್ತು ಖಗೋತ್ತಮ! ನಿನ್ನೊಡನೆ ಅನಂತ ಸಖ್ಯವನ್ನು ಬಯಸುತ್ತೇನೆ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಏಕೋನತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೊಂಭತ್ತನೇ ಅಧ್ಯಾಯವು.