Adi Parva: Chapter 25

ಆದಿ ಪರ್ವ: ಆಸ್ತೀಕ ಪರ್ವ

೨೫

ಅಕಸ್ಮಾತ್ತಾಗಿ ನುಂಗಿದ ಬ್ರಾಹ್ಮಣನನ್ನು ಗರುಡನು ಬಿಡುಗಡೆಮಾಡುವುದು (೧-೫). ತಂದೆ ಕಶ್ಯಪನನ್ನು ಭೇಟಿಯಾದುದು (೬-೯). ಆನೆ-ಕಚ್ಛಪರ ಜನ್ಮವೃತ್ತಾಂತ (೧೦-೨೫). ಗರುಡನು ಆನೆ-ಕಚ್ಛಪರನ್ನು ಹಿಡಿದು ಹಾರಿದುದು (೨೬-೩೦).

01025001 ಸೂತ ಉವಾಚ|

01025001a ತಸ್ಯ ಕಂಠಮನುಪ್ರಾಪ್ತೋ ಬ್ರಾಹ್ಮಣಃ ಸಹ ಭಾರ್ಯಯಾ|

01025001c ದಹನ್ದೀಪ್ತ ಇವಾಂಗರಸ್ತಮುವಾಚಾಂತರಿಕ್ಷಗಃ||

ಸೂತನು ಹೇಳಿದನು: “ಪತ್ನಿಸಹಿತ ಓರ್ವ ಬ್ರಾಹ್ಮಣನು ಅವನ ಗಂಟಲನ್ನು ಸೇರಿ ಉರಿಯುತ್ತಿರುವ ಬೆಂಕಿಯ ಕೆಂಡದಹಾಗೆ ಸುಡುತ್ತಿರಲು ಆ ಅಂತರಿಕ್ಷಗನು ಅವನನ್ನುದ್ದೇಶಿಸಿ ಹೇಳಿದನು:

01025002a ದ್ವಿಜೋತ್ತಮ ವಿನಿರ್ಗಚ್ಛ ತೂರ್ಣಮಾಸ್ಯಾದಪಾವೃತಾತ್|

01025002c ನ ಹಿ ಮೇ ಬ್ರಾಹ್ಮಣೋ ವಧ್ಯಃ ಪಾಪೇಷ್ವಪಿ ರತಃ ಸದಾ||

“ದ್ವಿಜೋತ್ತಮ! ನಿನಗಾಗಿ ನನ್ನ ಬಾಯಿಯನ್ನು ತೆರೆಯುತ್ತೇನೆ. ತಕ್ಷಣವೇ ಹೊರಗೆ ಬಾ. ಸದಾ ಪಾಪ-ಕರ್ಮಗಳಲ್ಲಿ ನಿರತನಾದವನಾಗಿದ್ದರೂ ಸಹ ನಾನು ಯಾವ ಬ್ರಾಹ್ಮಣನನ್ನೂ ವಧಿಸುವುದಿಲ್ಲ.”

01025003a ಬ್ರುವಾಣಮೇವಂ ಗರುಡಂ ಬ್ರಾಹ್ಮಣಃ ಸಮಭಾಷತ|

01025003c ನಿಷಾದೀ ಮಮ ಭಾರ್ಯೇಯಂ ನಿರ್ಗಚ್ಛತು ಮಯಾ ಸಹ||

ಗರುಡನು ಹೀಗೆ ಹೇಳಿದುದಕ್ಕೆ ಬ್ರಾಹ್ಮಣನೂ ಸಹ ಹೇಳಿದನು: “ನನ್ನ ಜೊತೆಗೆ ನನ್ನ ಪತ್ನಿ ನಿಷದಿಯೂ ಹೊರಬರಲಿ.”

01025004 ಗರುಡ ಉವಾಚ|

01025004a ಏತಾಮಪಿ ನಿಷಾದೀಂ ತ್ವಂ ಪರಿಗೃಹ್ಯಾಶು ನಿಷ್ಪತ|

01025004c ತೂರ್ಣಂ ಸಂಭಾವಯಾತ್ಮಾನಮಜೀರ್ಣಂ ಮಮ ತೇಜಸಾ||

ಗರುಡನು ಹೇಳಿದನು: “ನಿಷದಿಯನ್ನೂ ಕೂಡ ನಿನ್ನ ಸಂಗಡ ಕರೆದುಕೊಂಡು ಕೂಡಲೇ ಹೊರಬೀಳು. ನನ್ನ ತೇಜಸ್ಸಿನಿಂದ ಇನ್ನೂ ಜೀರ್ಣವಾಗಿರದೇ ಇದ್ದ ನೀವು ತಡಮಾಡದೇ ನಿಮ್ಮ ಜೀವವನ್ನು ಉಳಿಸಿಕೊಳ್ಳಿ.””

01025005 ಸೂತ ಉವಾಚ|

01025005a ತತಃ ಸ ವಿಪ್ರೋ ನಿಷ್ಕ್ರಾಂತೋ ನಿಷಾದೀಸಹಿತಸ್ತದಾ|

01025005c ವರ್ಧಯಿತ್ವಾ ಚ ಗರುಡಮಿಷ್ಟಂ ದೇಶಂ ಜಗಾಮ ಹ||

ಸೂತನು ಹೇಳಿದನು: “ಆಗ ಆ ವಿಪ್ರನು ನಿಷದಿಯ ಸಹಿತ ಹೊರಬಂದನು ಮತ್ತು ಗರುಡನಿಗೆ ಕೃತಘ್ನತೆಗಳನ್ನು ಹೇಳಿ ತನಗಿಷ್ಟ ಪ್ರದೇಶಕ್ಕೆ ತೆರಳಿದನು.

01025006a ಸಹಭಾರ್ಯೇ ವಿನಿಷ್ಕ್ರಾಂತೇ ತಸ್ಮಿನ್ವಿಪ್ರೇ ಸ ಪಕ್ಷಿರಾಟ್|

01025006c ವಿತತ್ಯ ಪಕ್ಷಾವಾಕಾಶಮುತ್ಪಪಾತ ಮನೋಜವಃ||

ವಿಪ್ರನು ತನ್ನ ಪತ್ನಿಯ ಸಹಿತ ಹೊರಬಂದ ತಕ್ಷಣ ಆ ಪಕ್ಷಿರಾಜನು ಒಂದು ಕ್ಷಣದಲ್ಲಿ ತನ್ನ ರೆಕ್ಕೆಗಳನ್ನು ಬಿಚ್ಚಿ ಮನೋವೇಗದಲ್ಲಿ ಗಗನವನ್ನೇರಿದನು.

01025007a ತತೋಽಪಶ್ಯತ್ಸ ಪಿತರಂ ಪೃಷ್ಟಶ್ಚಾಖ್ಯಾತವಾನ್ಪಿತುಃ|

01025007c ಅಹಂ ಹಿ ಸರ್ಪೈಃ ಪ್ರಹಿತಃ ಸೋಮಮಾಹರ್ತುಮುದ್ಯತಃ|

01025007e ಮಾತುರ್ದಾಸ್ಯವಿಮೋಕ್ಷಾರ್ಥಮಾಹರಿಷ್ಯೇ ತಮದ್ಯ ವೈ||

ದಾರಿಯಲ್ಲಿ ಕಂಡ ತನ್ನ ತಂದೆಯು ಪ್ರಶ್ನಿಸಲು ಹೇಳಿದನು: “ಸರ್ಪಗಳಿಂದ ಕಳುಹಿಸಲ್ಪಟ್ಟ ನಾನು ಸೋಮವನ್ನು ತರಲು ಹೊರಟಿರುವೆ. ಅದನ್ನು ತಂದು ಇಂದು ನಾನು ತಾಯಿಗೆ ದಾಸತ್ವದಿಂದ ವಿಮೋಚನೆ ದೊರಕಿಸುತ್ತೇನೆ.

01025008a ಮಾತ್ರಾ ಚಾಸ್ಮಿ ಸಮಾದಿಷ್ಟೋ ನಿಷಾದಾನ್ಭಕ್ಷಯೇತಿ ವೈ|

01025008c ನ ಚ ಮೇ ತೃಪ್ತಿರಭವದ್ಭಕ್ಷಯಿತ್ವಾ ಸಹಸ್ರಶಃ||

ನಿಷಾದರನ್ನು ಭಕ್ಷಿಸಲು ತಾಯಿಯು ಹೇಳಿದಳು. ಅವರನ್ನು ಸಹಸ್ರಾರು ಸಂಖ್ಯೆಗಳಲ್ಲಿ ಭಕ್ಷಿಸಿದೆನಾದರೂ ನನಗೆ ತೃಪ್ತಿಯಾಗಲಿಲ್ಲ.

01025009a ತಸ್ಮಾದ್ಭೋಕ್ತವ್ಯಮಪರಂ ಭಗವನ್ಪ್ರದಿಶಸ್ವ ಮೇ|

01025009c ಯದ್ಭುಕ್ತ್ವಾಮೃತಮಾಹರ್ತುಂ ಸಮರ್ಥಃ ಸ್ಯಾಮಹಂ ಪ್ರಭೋ||

ಭಗವನ್! ಪ್ರಭೋ! ಭುಂಜಿಸಿ ಅಮೃತವನ್ನು ತರಲು ಸಮರ್ಥನಾಗುವಂತೆ ಬೇರೆ ಯಾವುದಾದರೂ ಭೋಜನವನ್ನು ತೋರಿಸಿಕೊಡು.”

01025010 ಕಶ್ಯಪ ಉವಾಚ|

01025010a ಆಸೀದ್ವಿಭಾವಸುರ್ನಾಮ ಮಹರ್ಷಿಃ ಕೋಪನೋ ಭೃಶಂ|

01025010c ಭ್ರಾತಾ ತಸ್ಯಾನುಜಶ್ಚಾಸೀತ್ಸುಪ್ರತೀಕೋ ಮಹಾತಪಾಃ||

ಕಶ್ಯಪನು ಹೇಳಿದನು: “ಹಿಂದೆ ವಿಭಾವಸು ಎಂಬ ಹೆಸರಿನ ಕೋಪಸ್ವಭಾವದ ಮಹರ್ಷಿಯೊಬ್ಬನಿದ್ದನು. ಅವನಿಗೆ ಮಹಾತಪಸ್ವಿ ಸುಪ್ರತೀಕನೆಂಬ ತಮ್ಮನಿದ್ದನು.

01025011a ಸ ನೇಚ್ಛತಿ ಧನಂ ಭ್ರಾತ್ರಾ ಸಹೈಕಸ್ಥಂ ಮಹಾಮುನಿಃ|

01025011c ವಿಭಾಗಂ ಕೀರ್ತಯತ್ಯೇವ ಸುಪ್ರತೀಕೋಽಥ ನಿತ್ಯಶಃ||

01025012a ಅಥಾಬ್ರವೀಚ್ಚ ತಂ ಭ್ರಾತಾ ಸುಪ್ರತೀಕಂ ವಿಭಾವಸುಃ|

ಮಹಾಮುನಿ ಸುಪ್ರತೀಕನು ಅಣ್ಣನಲ್ಲಿ ಧನವನ್ನು ಇಡಲು ಇಚ್ಛಿಸದೇ ಅದರ ವಿಭಜನೆಯಾಗಬೇಕೆಂದು ನಿತ್ಯವೂ ಕೇಳುತ್ತಿದ್ದನು. ಆಗ ವಿಭಾವಸುವು ತಮ್ಮ ಸುಪ್ರತೀಕನಿಗೆ ಹೇಳಿದನು:

01025012c ವಿಭಾಗಂ ಬಹವೋ ಮೋಹಾತ್ಕರ್ತುಮಿಚ್ಛಂತಿ ನಿತ್ಯದಾ|

01025012e ತತೋ ವಿಭಕ್ತಾ ಅನ್ಯೋನ್ಯಂ ನಾದ್ರಿಯಂತೇಽರ್ಥಮೋಹಿತಾಃ||

“ಬಹಳಷ್ಟು ಜನರು ಮೋಹದಿಂದ ವಿಭಜನೆಯನ್ನು ಮಾಡಲು ಸದಾ ಬಯಸುತ್ತಿರುತ್ತಾರೆ. ಆದರೆ ವಿಭಜನೆಯಾದ ನಂತರ ಅರ್ಥಮೋಹಿತರಾಗಿ ಅವರು ಅನ್ಯೋನ್ಯರನ್ನು ಕಡೆಗಣಿಸುತ್ತಾರೆ.

01025013a ತತಃ ಸ್ವಾರ್ಥಪರಾನ್ಮೂಡಾನ್ಪೃಥಗ್ಭೂತಾನ್ಸ್ವಕೈರ್ಧನೈಃ|

01025013c ವಿದಿತ್ವಾ ಭೇದಯಂತ್ಯೇತಾನಮಿತ್ರಾ ಮಿತ್ರರೂಪಿಣಃ||

ಅವರು ಬೇರೆಬೇರೆಯಾದದ್ದನ್ನು ತಿಳಿದು ಸ್ವಾರ್ಥಿ ಶತ್ರುಗಳು ಮಿತ್ರರೂಪದಲ್ಲಿ ಬಂದು ಅದೇ ಧನದ ಸಲುವಾಗಿ ಅವರಲ್ಲಿ ಇನ್ನೂ ದೊಡ್ಡ ಬಿರುಕನ್ನು ಹುಟ್ಟಿಸುತ್ತಾರೆ.

01025014a ವಿದಿತ್ವಾ ಚಾಪರೇ ಭಿನ್ನಾನಂತರೇಷು ಪತಂತ್ಯಥ|

01025014c ಭಿನ್ನಾನಾಮತುಲೋ ನಾಶಃ ಕ್ಷಿಪ್ರಮೇವ ಪ್ರವರ್ತತೇ||

ಇನ್ನೂ ದೂರವಾಗಿದ್ದಾರೆಂದು ತಿಳಿದು ಇತರರು ಅವರ ಪತನಕ್ಕೆ ಕಾರಣರಾಗುತ್ತಾರೆ. ಹೀಗೆ ಬೇರೆಬೇರೆಯಾದ ಸಹೋದರರು ಬೇಗನೇ ನಾಶವನ್ನು ಹೊಂದುತ್ತಾರೆ.

01025015a ತಸ್ಮಾಚ್ಚೈವ ವಿಭಾಗಾರ್ಥಂ ನ ಪ್ರಶಂಸಂತಿ ಪಂಡಿತಾಃ|

01025015c ಗುರುಶಾಸ್ತ್ರೇ ನಿಬದ್ಧಾನಾಮನ್ಯೋನ್ಯಮಭಿಶಂಕಿನಾಂ||

ಆದ್ದರಿಂದ ಗುರುಶಾಸ್ತ್ರಗಳಲ್ಲಿ ನಿಬದ್ಧ ಪಂಡಿತರು ಅನ್ಯೋನ್ಯರಲ್ಲಿ ಪ್ರೀತಿಯಿರುವವರ ನಡುವೆ ಅರ್ಥವಿಭಜನೆಯನ್ನು ಒಪ್ಪುವುದಿಲ್ಲ.

01025016a ನಿಯಂತುಂ ನ ಹಿ ಶಕ್ಯಸ್ತ್ವಂ ಭೇದತೋ ಧನಮಿಚ್ಛಸಿ|

01025016c ಯಸ್ಮಾತ್ತಸ್ಮಾತ್ಸುಪ್ರತೀಕ ಹಸ್ತಿತ್ವಂ ಸಮವಾಪ್ಸ್ಯಸಿ||

ಆದರೆ ಸುಪ್ರತೀಕ! ಧನವನ್ನು ವಿಂಗಡಿಸಲು ಇಚ್ಛಿಸುತ್ತಿರುವ ನಿನ್ನನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆದುದರಿಂದ ನೀನು ಒಂದು ಆನೆಯಾಗುತ್ತೀಯೆ.”

01025017a ಶಪ್ತಸ್ತ್ವೇವಂ ಸುಪ್ರತೀಕೋ ವಿಭಾವಸುಮಥಾಬ್ರವೀತ್|

01025017c ತ್ವಮಪ್ಯಂತರ್ಜಲಚರಃ ಕಚ್ಛಪಃ ಸಂಭವಿಷ್ಯಸಿ||

ಈ ರೀತಿ ಶಪಿಸಲ್ಪಟ್ಟ ಸುಪ್ರತೀಕನು ವಿಭಾವಸುವಿಗೆ ಹೇಳಿದನು: “ನೀನೂ ಕೂಡ ನೀರಿನಲ್ಲಿ ಚಲಿಸುವ ಆಮೆಯಾಗುತ್ತೀಯೆ.”

01025018a ಏವಮನ್ಯೋನ್ಯಶಾಪಾತ್ತೌ ಸುಪ್ರತೀಕವಿಭಾವಸೂ|

01025018c ಗಜಕಚ್ಛಪತಾಂ ಪ್ರಾಪ್ತಾವರ್ಥಾರ್ಥಂ ಮೂಢಚೇತಸೌ||

ಈ ರೀತಿ ಸಂಪತ್ತಿನ ಸಲುವಾಗಿ ಮೂಢಚೇತಸ ಸುಪ್ರತೀಕ ಮತ್ತು ವಿಭಾವಸು ಇಬ್ಬರೂ ಅನ್ಯೋನ್ಯರಿಗೆ ಶಾಪವನ್ನಿತ್ತು ಗಜ-ಕಚ್ಛಪ ರೂಪಗಳನ್ನು ಹೊಂದಿದರು.

01025019a ರೋಷದೋಷಾನುಷಂಗೇಣ ತಿರ್ಯಗ್ಯೋನಿಗತಾವಪಿ|

01025019c ಪರಸ್ಪರದ್ವೇಷರತೌ ಪ್ರಮಾಣಬಲದರ್ಪಿತೌ||

ರೋಷದೋಷದಿಂದ ಕೀಳುಯೋನಿಗಳಲ್ಲಿ ಜನಿಸಿದರೂ ಕೂಡ ಅವರವರ ಪ್ರಮಾಣ ಮತ್ತು ಬಲದಿಂದ ದರ್ಪಿತ ಅವರೀರ್ವರು ಪರಸ್ಪರರಲ್ಲಿ ದ್ವೇಷವನ್ನು ಸಾಧಿಸಿಕೊಂಡೇ ಬಂದಿದ್ದಾರೆ.

01025020a ಸರಸ್ಯಸ್ಮಿನ್ಮಹಾಕಾಯೌ ಪೂರ್ವವೈರಾನುಸಾರಿಣೌ|

01025020c ತಯೋರೇಕತರಃ ಶ್ರೀಮಾನ್ಸಮುಪೈತಿ ಮಹಾಗಜಃ||

ಆ ಈರ್ವರು ಮಹಾಕಾಯರು ಈ ಸರೋವರದಲ್ಲಿ ಅವರ ಪೂರ್ವ ವೈರತ್ವವನ್ನು ಮುಂದುವರಿಸಿದ್ದಾರೆ. ನೋಡು! ಆ ಸುಂದರ ಮಹಾಗಜವು ನೀರಿನಕಡೆಗೆ ಬರುತ್ತಿದೆ.

01025021a ತಸ್ಯ ಬೃಂಹಿತಶಬ್ದೇನ ಕೂರ್ಮೋಽಪ್ಯಂತರ್ಜಲೇಶಯಃ|

01025021c ಉತ್ಥಿತೋಽಸೌ ಮಹಾಕಾಯಃ ಕೃತ್ಸ್ನಂ ಸಂಕ್ಷೋಭಯನ್ಸರಃ||

ಅವನ ಕೂಗಿನ ಶಬ್ಧದಿಂದ ನೀರಿನ ಒಳಗಿದ್ದ ಮಹಾಕಾಯ ಆಮೆಯು ಸರೋವರವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಾ ಮೇಲೆ ಏರುತ್ತಿದೆ.

01025022a ತಂ ದೃಷ್ಟ್ವಾವೇಷ್ಟಿತಕರಃ ಪತತ್ಯೇಷ ಗಜೋ ಜಲಂ|

01025022c ದಂತಹಸ್ತಾಗ್ರಲಾಂಗೂಲಪಾದವೇಗೇನ ವೀರ್ಯವಾನ್||

ಅವನನ್ನು ನೋಡಿದ ವೀರ ಆನೆಯು ತನ್ನ ದಂತ, ಸೊಂಡಿಲು, ಮತ್ತು ಬಾಲಗಳನ್ನು ಸುರುಳಿಸುತ್ತಿ ವೇಗದಿಂದ ನೀರನ್ನು ಪ್ರವೇಶಿಸುತ್ತಿದೆ.

01025023a ತಂ ವಿಕ್ಷೋಭಯಮಾಣಂ ತು ಸರೋ ಬಹುಝಷಾಕುಲಂ|

01025023c ಕೂರ್ಮೋಽಪ್ಯಭ್ಯುದ್ಯತಶಿರಾ ಯುದ್ಧಾಯಾಭ್ಯೇತಿ ವೀರ್ಯವಾನ್||

ಮೀನುಗಳಿಂದ ತುಂಬಿದ ಸರೋವರವನ್ನು ಅದು ಅಲ್ಲೋಲಕಲ್ಲೋಲಗೊಳಿಸುತ್ತಿದೆ. ವೀರ ಆಮೆಯೂ ಕೂಡ ತನ್ನ ತಲೆಯನ್ನು ಮೇಲೆತ್ತಿ ಯುದ್ಧಕ್ಕಾಗಿ ಮುಂದೆ ಬರುತ್ತಿದೆ.

01025024a ಷಡುಚ್ಛ್ರಿತೋ ಯೋಜನಾನಿ ಗಜಸ್ತದ್ದ್ವಿಗುಣಾಯತಃ|

01025024c ಕೂರ್ಮಸ್ತ್ರಿಯೋಜನೋತ್ಸೇಧೋ ದಶಯೋಜನಮಂಡಲಃ||

ಆ ಅನೆಯ ಎತ್ತರ ಆರು ಯೋಜನ ಮತ್ತು ಪರಿಧಿಯು ಅದರ ಎರಡರಷ್ಟು. ಆಮೆಯೂ ಕೂಡ ಮೂರು ಯೋಜನ ಎತ್ತರ ಮತ್ತು ಅದರ ಎರಡು ಪಟ್ಟು ಅಗಲವಾಗಿದೆ.

01025025a ತಾವೇತೌ ಯುದ್ಧಸಮ್ಮತ್ತೌ ಪರಸ್ಪರಜಯೈಷಿಣೌ|

01025025c ಉಪಯುಜ್ಯಾಶು ಕರ್ಮೇದಂ ಸಾಧಯೇಪ್ಸಿತಮಾತ್ಮನಃ||

ಈ ರೀತಿ ಪರಸ್ಪರರನ್ನು ಕೊಲ್ಲುವ ಹಠದಿಂದ ಯುದ್ಧನಿರತರಾದ ಇವರೀರ್ವರನ್ನೂ ಭಕ್ಷಿಸಿ ನಿನ್ನ ಕಾರ್ಯವನ್ನು ಮುಂದುವರೆಸು.””

01025026 ಸೂತ ಉವಾಚ|

01025026a ಸ ತತ್ ಶೃತ್ವಾ ಪಿತುರ್ವಾಕ್ಯಂ ಭೀಮವೇಗೋಂಽತರಿಕ್ಷಗಃ|

01025026c ನಖೇನ ಗಜಮೇಕೇನ ಕೂರ್ಮಮೇಕೇನ ಚಾಕ್ಷಿಪತ್||

ಸೂತನು ಹೇಳಿದನು: “ಪಿತೃವಾಕ್ಯವನ್ನು ಕೇಳಿದ ಆ ಅಂತರಿಕ್ಷಗನು ಭೀಮವೇಗದಲ್ಲಿ ಒಂದು ನಖದಿಂದ ಆನೆಯನ್ನೂ ಇನ್ನೊಂದರಿಂದ ಆಮೆಯನ್ನೂ ಹಿಡಿದನು.

01025027a ಸಮುತ್ಪಪಾತ ಚಾಕಾಶಂ ತತ ಉಚ್ಚೈರ್ವಿಹಂಗಮಃ|

01025027c ಸೋಽಲಂಬತೀರ್ಥಮಾಸಾದ್ಯ ದೇವವೃಕ್ಷಾನುಪಾಗಮತ್||

01025028a ತೇ ಭೀತಾಃ ಸಮಕಂಪಂತ ತಸ್ಯ ಪಕ್ಷಾನಿಲಾಹತಾಃ|

01025028c ನ ನೋ ಭಂಜ್ಯಾದಿತಿ ತದಾ ದಿವ್ಯಾಃ ಕನಕಶಾಖಿನಃ||

01025029a ಪ್ರಚಲಾಂಗಾನ್ಸ ತಾನ್ದೃಷ್ಠ್ವಾ ಮನೋರಥಫಲಾಂಕುರಾನ್|

01025029c ಅನ್ಯಾನತುಲರೂಪಾಂಗಾನುಪಚಕ್ರಾಮ ಖೇಚರಃ||

ಬಯಸಿದ ಫಲಗಳನ್ನು ಕೊಡುವ ಆ ವೃಕ್ಷಗಳು ಹೆದರಿ ತತ್ತರಿಸುವುದನ್ನು ಕಂಡ ಖೇಚರನು ರೂಪದಲ್ಲಿ ಸರಿಸಾಟಿ ಇರದ ಅನ್ಯ ವೃಕ್ಷಗಳ ಕಡೆ ಹಾರಿದನು.

01025030a ಕಾಂಚನೈ ರಾಜತೈಶ್ಚೈವ ಫಲೈರ್ವೈಢೂರ್ಯಶಾಖಿನಃ|

01025030c ಸಾಗರಾಂಬುಪರಿಕ್ಷಿಪ್ತಾನ್ಭ್ರಾಜಮಾನಾನ್ಮಹಾದ್ರುಮಾನ್||

ಕಾಂಚನ-ರಜತ ಫಲ ಮತ್ತು ವೈಢೂರ್ಯದ ರೆಂಬೆಗಳಿಂದ ಕೂಡಿದ ಆ ಮಹಾದ್ರುಮಗಳು ಸಾಗರದ ಅಲೆಗಳಿಂದ ತೊಳೆಯಲ್ಪಟ್ಟು ಹೊಳೆಯುತ್ತಿದ್ದವು.

01025031a ತಮುವಾಚ ಖಗಶ್ರೇಷ್ಠಂ ತತ್ರ ರೋಹಿಣಪಾದಪಃ|

01025031c ಅತಿಪ್ರವೃದ್ಧಃ ಸುಮಹಾನಾಪತಂತಂ ಮನೋಜವಂ||

01025032a ಯೈಷಾ ಮಮ ಮಹಾಶಾಖಾ ಶತಯೋಜನಮಾಯತಾ|

01025032c ಏತಾಮಾಸ್ಥಾಯ ಶಾಖಾಂ ತ್ವಂ ಖಾದೇಮೌ ಗಜಕಚ್ಛಪೌ||

ಅಲ್ಲಿಯೇ ವಿಸ್ತಾರವಾಗಿ ಬೆಳೆದಿದ್ದ ರೋಹಿಣಪಾಪದವೊಂದು ಮನೋವೇಗದಲ್ಲಿ ಇಳಿಯುತ್ತಿದ್ದ ಆ ಖಗಶ್ರೇಷ್ಠನಿಗೆ “ಶತಯೋಜನ ವಿಸ್ತೀರ್ಣವುಳ್ಳ ನನ್ನ ಈ ಮಹಾಶಾಖೆಗಳ ಮೇಲೆ ಬಂದಿಳಿದು ಆ ಆನೆ-ಆಮೆಗಳನ್ನು ತಿನ್ನು!” ಎಂದು ಹೇಳಿತು.

01025033a ತತೋ ದ್ರುಮಂ ಪತಗಸಹಸ್ರಸೇವಿತಂ

         ಮಹೀಧರಪ್ರತಿಮವಪುಃ ಪ್ರಕಂಪಯನ್|

01025033c ಖಗೋತ್ತಮೋ ದ್ರುತಮಭಿಪತ್ಯ ವೇಗವಾನ್

         ಬಭಂಜ ತಾಮವಿರಲಪತ್ರಸಂವೃತಾಂ||

ಖಗೋತ್ತಮನು ತನ್ನ ವೇಗವನ್ನು ಕಡಿಮೆ ಮಾಡುತ್ತಾ ನಿಧಾನವಾಗಿ ಬಂದಿಳಿದಾಗ, ಸಹಸ್ರಾರು ಪಕ್ಷಿಗಳನ್ನೊಡಗೂಡಿದ ಆ ಪರ್ವತ ಸಮಾನ ವೃಕ್ಷವು ತತ್ತರಿಸಿ, ದಪ್ಪ ದಪ್ಪ ಎಲೆಗಳ ಆ ರೆಂಭೆಯು ತುಂಡಾಯಿತು.”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ಪಂಚವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೈದನೇ ಅಧ್ಯಾಯವು.

Leave a Reply

Your email address will not be published. Required fields are marked *