Adi Parva: Chapter 24

ಆದಿ ಪರ್ವ: ಆಸ್ತೀಕ ಪರ್ವ

೨೪

ಗರುಡನು ಅಮೃತವನ್ನು ತರಲು ಹೊರಡುವುದು, ವಿನತೆಯು ಅವನಿಗೆ ನಿಷಾದರನ್ನು ಆಹಾರವನ್ನಾಗಿ ಸೂಚಿಸಿ, ಬ್ರಾಹ್ಮಣರನ್ನು ತಿನ್ನಬಾರದೆಂದು ಹೇಳಿ, ಮಗನನ್ನು ಬೀಳ್ಕೊಡುವುದು (೧-೯). ಗರುಡನು ನಿಷಾದರನ್ನು ಭಕ್ಷಿಸುವುದು (೧೦-೧೫).

01024001 ಸೂತ ಉವಾಚ|

01024001a ಇತ್ಯುಕ್ತೋ ಗರುಡಃ ಸರ್ಪೈಸ್ತತೋ ಮಾತರಮಬ್ರವೀತ್|

01024001c ಗಚ್ಛಾಮ್ಯಮೃತಮಾಹರ್ತುಂ ಭಕ್ಷ್ಯಮಿಚ್ಛಾಮಿ ವೇದಿತುಂ||

ಸೂತನು ಹೇಳಿದನು: “ಸರ್ಪಗಳು ಹೀಗೆ ಹೇಳಲು ಗರುಡನು ಮಾತೆಯನ್ನು ಕುರಿತು ಹೇಳಿದನು: “ಅಮೃತವನ್ನು ತರಲು ಹೋಗುತ್ತಿದ್ದೇನೆ. ಏನನ್ನಾದರೂ ತಿನ್ನಲು ಬಯಸುತ್ತೇನೆ. ಏನನ್ನು ತಿನ್ನಲಿ ಹೇಳು.”

01024002 ವಿನತೋವಾಚ|

01024002a ಸಮುದ್ರಕುಕ್ಷಾವೇಕಾಂತೇ ನಿಷಾದಾಲಯಮುತ್ತಮಂ|

01024002c ಸಹಸ್ರಾಣಾಮನೇಕಾನಾಂ ತಾನ್ಭುಕ್ತ್ವಾಮೃತಮಾನಯ||

ವಿನತೆಯು ಹೇಳಿದಳು: “ಸಮುದ್ರಕುಕ್ಷದ ಅಡಿಯಲ್ಲಿ ಉತ್ತಮ ನಿಷಾದಾಲಯವಿದೆ. ಸಹಸ್ರಾರು ಸಂಖ್ಯೆಯ ಅವರನ್ನು ತಿಂದು ಅಮೃತವನ್ನು ತೆಗೆದುಕೊಂಡು ಬಾ.

01024003a ನ ತು ತೇ ಬ್ರಾಹ್ಮಣಂ ಹಂತುಂ ಕಾರ್ಯಾ ಬುದ್ಧಿಃ ಕಥಂ ಚನ|

01024003c ಅವಧ್ಯಃ ಸರ್ವಭೂತಾನಾಂ ಬ್ರಾಹ್ಮಣೋ ಹ್ಯನಲೋಪಮಃ||

ಆದರೆ ಎಂದೂ ನೀನು ಬ್ರಾಹ್ಮಣನನ್ನು ಕೊಲ್ಲುವ ಕೆಲಸವನ್ನು ಮಾಡಬೇಡ. ಸರ್ವಭೂತಗಳಲ್ಲಿಯೂ ಬ್ರಾಹ್ಮಣನು ಅವಧ್ಯ. ಅವನು ಬೆಂಕಿಯ ಹಾಗೆ.

01024004a ಅಗ್ನಿರರ್ಕೋ ವಿಷಂ ಶಸ್ತ್ರಂ ವಿಪ್ರೋ ಭವತಿ ಕೋಪಿತಃ|

01024004c ಭೂತಾನಾಮಗ್ರಭುಗ್ವಿಪ್ರೋ ವರ್ಣಶ್ರೇಷ್ಠಃ ಪಿತಾ ಗುರುಃ||

ಕುಪಿತ ವಿಪ್ರನು ಅಗ್ನಿ, ಸೂರ್ಯ, ವಿಷ ಅಥವಾ ಹರಿತ ಶಸ್ತ್ರದ ಸಮಾನ. ಎಲ್ಲ ಜೀವಿಗಳಲ್ಲಿಯೂ ವಿಪ್ರನು ಅಗ್ರಸ್ಥಾನವನ್ನು ಹೊಂದಿದ್ದಾನೆ. ಪಿತ ಮತ್ತು ಗುರುವಿನಂತೆ ಅವನ ಸ್ಥಾನವು ಶ್ರೇಷ್ಠವಾದದ್ದು.”

01024005 ಗರುಡ ಉವಾಚ|

01024005a ಯಥಾಹಮಭಿಜಾನೀಯಾಂ ಬ್ರಾಹ್ಮಣಂ ಲಕ್ಷಣೈಃ ಶುಭೈಃ|

01024005c ತನ್ಮೇ ಕಾರಣತೋ ಮಾತಃ ಪೃಚ್ಛತೋ ವಕ್ತುಮರ್ಹಸಿ||

ಗರುಡನು ಹೇಳಿದನು: “ಮಾತೆ! ಬ್ರಾಹ್ಮಣನನ್ನು ಹೇಗೆ ಗುರುತಿಸಬಹುದು ಹೇಳು. ಅವರ ಶುಭ ಲಕ್ಷಣಗಳು ಯಾವುವು?”

01024006 ವಿನತೋವಾಚ|

01024006a ಯಸ್ತೇ ಕಂಠಮನುಪ್ರಾಪ್ತೋ ನಿಗೀರ್ಣಂ ಬಡಿಶಂ ಯಥಾ|

01024006c ದಹೇದಂಗಾರವತ್ಪುತ್ರ ತಂ ವಿದ್ಯಾದ್ಬ್ರಾಹ್ಮಣರ್ಷಭಂ||

ವಿನತೆಯು ಹೇಳಿದಳು: “ಪುತ್ರ! ಗಂಟಲು ಸೇರುತ್ತಿದ್ದಂತೆ ಮೀನುಹಿಡಿಯಲು ಬಳಸುವ ಕೊಕ್ಕೆಯ ಹಾಗೆ ಪೀಡಿಸುವವನು ಅಥವಾ ಬಿಸಿ ಕೆಂಡದಂತೆ ಸುಡುವವನೇ ಬ್ರಾಹ್ಮಣರ್ಷಭನೆಂದು ತಿಳಿ.””

01024007 ಸೂತ ಉವಾಚ|

01024007a ಪ್ರೋವಾಚ ಚೈನಂ ವಿನತಾ ಪುತ್ರಹಾರ್ದಾದಿದಂ ವಚಃ|

01024007c ಜಾನಂತ್ಯಪ್ಯತುಲಂ ವೀರ್ಯಮಾಶೀರ್ವಾದಸಮನ್ವಿತಂ||

ಸೂತನು ಹೇಳಿದನು: “ಮಗನ ಅತುಲ ವೀರ್ಯವನ್ನು ತಿಳಿದಿದ್ದರೂ ವಿನತೆಯು ಹಾರ್ದಿಕವಾಗಿ ಈ ಮಾತುಗಳಿಂದ ಆಶೀರ್ವದಿಸಿದಳು:

01024008a ಪಕ್ಷೌ ತೇ ಮಾರುತಃ ಪಾತು ಚಂದ್ರಃ ಪೃಷ್ಠಂ ತು ಪುತ್ರಕ|

01024008c ಶಿರಸ್ತು ಪಾತು ತೇ ವಹ್ನಿರ್ಭಾಸ್ಕರಃ ಸರ್ವಮೇವ ತು||

“ಪಕ್ಷಿಯೇ! ಮಾರುತಗಳು ನಿನ್ನ ರೆಕ್ಕೆಗಳನ್ನು ರಕ್ಷಿಸಲಿ. ಚಂದ್ರನು ನಿನ್ನ ಬೆನ್ನನ್ನು ರಕ್ಷಿಸಲಿ. ಅಗ್ನಿಯು ನಿನ್ನ ಶಿರವನ್ನು ಮತ್ತು ಭಾಸ್ಕರನು ನಿನ್ನ ಸರ್ವವನ್ನೂ ರಕ್ಷಿಸಲಿ.

01024009a ಅಹಂ ಚ ತೇ ಸದಾ ಪುತ್ರ ಶಾಂತಿಸ್ವಸ್ತಿಪರಾಯಣಾ|

01024009c ಅರಿಷ್ಟಂ ವ್ರಜ ಪಂಥಾನಂ ವತ್ಸ ಕಾರ್ಯಾರ್ಥಸಿದ್ಧಯೇ||

ಪುತ್ರ! ನಾನೂ ಕೂಡ ಸದಾ ಶಾಂತಿಸ್ವಸ್ತಿಪರಾಯಣಳಾಗಿ ನಿನ್ನ ದಾರಿಯನ್ನು ಕಾಯುತ್ತಿರುತ್ತೇನೆ. ವತ್ಸ! ನಿನ್ನ ಕಾರ್ಯಾರ್ಥಸಿದ್ದಿಯಾಗಲಿ.”

01024010a ತತಃ ಸ ಮಾತುರ್ವಚನಂ ನಿಶಮ್ಯ

         ವಿತತ್ಯ ಪಕ್ಷೌ ನಭ ಉತ್ಪಪಾತ|

01024010c ತತೋ ನಿಷಾದಾನ್ಬಲವಾನುಪಾಗಮದ್

         ಬುಭುಕ್ಷಿತಃ ಕಾಲ ಇವಾಂತಕೋ ಮಹಾನ್||

ಮಾತುರ್ವಚನವನ್ನು ಕೇಳಿದ ಅವನು ರೆಕ್ಕೆಗಳೆರಡನ್ನೂ ಹರಡಿ ನಭವನ್ನೇರಿದನು. ಹಸಿವೆಯಿಂದ ಬಳಲುತ್ತಿದ್ದ ಆ ಬಲವಂತನು ಅಂತಕ ಮಹಾ ಕಾಲನೋ ಎನ್ನುವಂತೆ ನಿಷಾದರ ಮೇಲೆ ಎರಗಿದನು.

01024011a ಸ ತಾನ್ನಿಷಾದಾನುಪಸಂಹರಂಸ್ತದಾ

         ರಜಃ ಸಮುದ್ಧೂಯ ನಭಹಸ್ಪೃಶಂ ಮಹತ್|

01024011c ಸಮುದ್ರಕುಕ್ಷೌ ಚ ವಿಶೋಷಯನ್ಪಯಃ

         ಸಮೀಪಗಾನ್ಭೂಮಿಧರಾನ್ವಿಚಾಲಯನ್||

ಆ ನಿಷಾದರನ್ನು ಉಪಸಂಹರಿಸಲು ಉದ್ಯುಕ್ತನಾಗಿ ಅವನು ಆಕಾಶದಲ್ಲಿ ಒಂದು ಮಹತ್ತರ ಧೂಳಿನ ಭಿರುಗಾಳಿಯನ್ನೇ ಎಬ್ಬಿಸಿ, ಸಮುದ್ರದ ತಳದಿಂದ ನೀರನ್ನು ಹೀರಿಕೊಂಡು ಹತ್ತಿರದ ಪರ್ವತಗಳಲ್ಲಿ ಬೆಳೆದಿದ್ದ ವೃಕ್ಷಗಳು ತತ್ತರಿಸುವಂತೆ ಮಾಡಿದನು.

01024012a ತತಃ ಸ ಚಕ್ರೇ ಮಹದಾನನಂ ತದಾ

         ನಿಷಾದಮಾರ್ಗಂ ಪ್ರತಿರುಧ್ಯ ಪಕ್ಷಿರಾಟ್|

01024012c ತತೋ ನಿಷಾದಾಸ್ತ್ವರಿತಾಃ ಪ್ರವವ್ರಜುಃ

         ಯತೋ ಮುಖಂ ತಸ್ಯ ಭುಜಂಗಭೋಜಿನಃ||

ಅನಂತರ ಆ ಪಕ್ಷಿರಾಜನು ತನ್ನ ಅಗಲ ಬಾಯಿಯನ್ನು ನಿಷಾದರ ಮಾರ್ಗದಲ್ಲಿ ಇಟ್ಟು ತಡೆಗಟ್ಟಿದನು; ನಿಷಾದರು ಆ ಭುಜಂಗಭೋಜಿನಿಯ ಬಾಯಿಯೆಡೆಗೆ ಒಟ್ಟಾಗಿ ಎಳೆಯಲ್ಪಟ್ಟರು.

01024013a ತದಾನನಂ ವಿವೃತಮತಿಪ್ರಮಾಣವತ್

         ಸಮಭ್ಯಯುರ್ಗಗನಮಿವಾರ್ದಿತಾಃ ಖಗಾಃ|

01024013c ಸಹಸ್ರಶಃ ಪವನರಜೋಭ್ರಮೋಹಿತಾ

         ಮಹಾನಿಲಪ್ರಚಲಿತಪಾದಪೇ ವನೇ||

ಭಯಭರಿತ ಪಕ್ಷಿಗಳು ಹೆದರಿ ಗಗನವನ್ನೇರುವಂತೆ ಅವರು ಅವನ ಅಗಲ ಬಾಯಿಯಬಳಿ ಮುತ್ತಿಗೆಹಾಕಿದರು. ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಧೂಳಿನ ಮೋಡಗಳಿಂದ ಸಮ್ಮೋಹಿತರಾಗಿ ಅವರು ಸಹಸ್ರ ಸಂಖ್ಯೆಯಲ್ಲಿ ಭಿರುಗಾಳಿಯಿಂದ ತರುಬಲ್ಪಟ್ಟ ಪಕ್ಷಿಗಳಂತೆ ಅವನ ಬಾಯಿಯ ಹತ್ತಿರ ಬಂದರು. 

01024014a ತತಃ ಖಗೋ ವದನಮಮಿತ್ರತಾಪನಃ

         ಸಮಾಹರತ್ಪರಿಚಪಲೋ ಮಹಾಬಲಃ|

01024014c ನಿಷೂದಯನ್ಬಹುವಿಧಮತ್ಸ್ಯಭಕ್ಷಿಣೋ

         ಬುಭುಕ್ಷಿತೋ ಗಗನಚರೇಶ್ವರಸ್ತದಾ||

ಆಗ ಹಸಿವೆಯಿಂದ ತನ್ನ ಬಾಯಿಯನ್ನು ದೊಡ್ಡದಾಗಿ ತೆರೆದಿಟ್ಟಿದ್ದ ಶತ್ರುತಾಪನ ಮಹಾಬಲಿ ಪಕ್ಷಿಯು ತನ್ನ ಬಾಯಿಯನ್ನು ಮುಚ್ಚಿ ಬಹುವಿಧದ ಮೀನುಗಳನ್ನು ಸೇವಿಸುವ ಆ ನಿಷಾದ ಸಂಕುಲವನ್ನು ಭಕ್ಷಿಸಿದನು.”

 ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ಚತುರ್ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ನಾಲ್ಕನೇ ಅಧ್ಯಾಯವು.

Leave a Reply

Your email address will not be published. Required fields are marked *