Adi Parva: Chapter 210

ಆದಿ ಪರ್ವ: ಅರ್ಜುನವನವಾಸ ಪರ್ವ

೨೧೦

ಕೃಷ್ಣಾರ್ಜುನರ ಪುನರ್ಮಿಲನ

ಪ್ರಭಾಸದಲ್ಲಿ ಕೃಷ್ಣನನ್ನು ಭೇಟಿಯಾದುದು (೧-೪). ಒಟ್ಟಿಗೇ ವನವಿಹಾರ, ಭೋಜನ, ಮನೋರಂಜನೆಗಳನ್ನು ಗೈದು, ಅರ್ಜುನನ್ನು ದ್ವಾರಕೆಗೆ ಕರೆದುಕೊಂಡು ಹೋದುದು, ಕೃಷ್ಣನ ಭವನದಲ್ಲಿ ಅರ್ಜುನನ ವಾಸ (೫-೨೧).

Image result for krishna and arjuna01210001 ವೈಶಂಪಾಯನ ಉವಾಚ|

01210001a ಸೋಽಪರಾಂತೇಷು ತೀರ್ಥಾನಿ ಪುಣ್ಯಾನ್ಯಾಯತನಾನಿ ಚ|

01210001c ಸರ್ವಾಣ್ಯೇವಾನುಪೂರ್ವ್ಯೇಣ ಜಗಾಮಾಮಿತವಿಕ್ರಮಃ||

ವೈಶಂಪಾಯನನು ಹೇಳಿದನು: “ನಂತರ ಆ ಅಮಿತ ವಿಕ್ರಮನು ಪಶ್ಚಿಮದಿಕ್ಕಿನಲ್ಲಿದ್ದ ಎಲ್ಲ ಪುಣ್ಯ ತೀರ್ಥ ಪ್ರದೇಶಗಳಿಗೆ ಭೇಟಿಯಿತ್ತನು.

01210002a ಸಮುದ್ರೇ ಪಶ್ಚಿಮೇ ಯಾನಿ ತೀರ್ಥಾನ್ಯಾಯತನಾನಿ ಚ|

01210002c ತಾನಿ ಸರ್ವಾಣಿ ಗತ್ವಾ ಸ ಪ್ರಭಾಸಮುಪಜಗ್ಮಿವಾನ್||

ಪಶ್ಚಿಮ ಸಮುದ್ರದಲ್ಲಿ ಯಾವ್ಯಾವ ತೀರ್ಥ ಸ್ಥಾನಗಳಿವೆಯೋ ಅವೆಲ್ಲವಕ್ಕೂ ಹೋಗಿ ಅವನು ಪ್ರಭಾಸಕ್ಕೆ ಬಂದನು.

01210003a ಪ್ರಭಾಸದೇಶಂ ಸಂಪ್ರಾಪ್ತಂ ಬೀಭತ್ಸುಮಪರಾಜಿತಂ|

01210003c ತೀರ್ಥಾನ್ಯನುಚರಂತಂ ಚ ಶುಶ್ರಾವ ಮಧುಸೂದನಃ||

ಮಧುಸೂದನನು ಅಪರಾಜಿತ ಬೀಭತ್ಸುವು ತೀರ್ಥಯಾತ್ರೆ ಮಾಡುತ್ತಾ ಪ್ರಭಾಸದೇಶವನ್ನು ತಲುಪಿದ್ದಾನೆ ಎನ್ನುವುದನ್ನು ಕೇಳಿದನು.

01210004a ತತೋಽಭ್ಯಗಚ್ಛತ್ಕೌಂತೇಯಮಜ್ಞಾತೋ ನಾಮ ಮಾಧವಃ|

01210004c ದದೃಶಾತೇ ತದಾನ್ಯೋನ್ಯಂ ಪ್ರಭಾಸೇ ಕೃಷ್ಣಪಾಂಡವೌ||

ಕೌಂತೇಯನಿಗೆ ತಿಳಿಯದಂತೆಯೇ ಮಾಧವನು ಅಲ್ಲಿಗೆ ಹೋದನು ಮತ್ತು ಪುನಃ ಪ್ರಭಾಸದಲ್ಲಿ ಕೃಷ್ಣ ಪಾಂಡವರ ಅನ್ಯೋನ್ಯ ದರ್ಶನವಾಯಿತು.

01210005a ತಾವನ್ಯೋನ್ಯಂ ಸಮಾಶ್ಲಿಷ್ಯ ಪೃಷ್ಟ್ವಾ ಚ ಕುಶಲಂ ವನೇ|

01210005c ಆಸ್ತಾಂ ಪ್ರಿಯಸಖಾಯೌ ತೌ ನರನಾರಾಯಣಾವೃಷೀ||

ಅವರು ಅನ್ಯೋನ್ಯರನ್ನು ಆಲಂಗಿಸಿದರು ಮತ್ತು ಕುಶಲವನ್ನು ವಿಚಾರಿಸಿದರು. ನರ-ನಾರಾಯಣ ಋಷಿಗಳಾಗಿದ್ದ ಆ ಪ್ರಿಯ ಸಖರು ವನದಲ್ಲಿ ಕುಳಿತುಕೊಂಡರು.

01210006a ತತೋಽರ್ಜುನಂ ವಾಸುದೇವಸ್ತಾಂ ಚರ್ಯಾಂ ಪರ್ಯಪೃಚ್ಛತ|

01210006c ಕಿಮರ್ಥಂ ಪಾಂಡವೇಮಾನಿ ತೀರ್ಥಾನ್ಯನುಚರಸ್ಯುತ||

ನಂತರ ವಾಸುದೇವನು ಅರ್ಜುನನ ಕುರಿತು ಕೇಳಿದನು: “ಪಾಂಡವ! ನೀನು ಯಾವ ಕಾರಣಕ್ಕಾಗಿ ತೀರ್ಥಯಾತ್ರೆ ಮಾಡುತ್ತಿದ್ದೀಯೆ?”

01210007a ತತೋಽರ್ಜುನೋ ಯಥಾವೃತ್ತಂ ಸರ್ವಮಾಖ್ಯಾತವಾಂಸ್ತದಾ|

01210007c ಶ್ರುತ್ವೋವಾಚ ಚ ವಾರ್ಷ್ಣೇಯ ಏವಮೇತದಿತಿ ಪ್ರಭುಃ||

ಆಗ ಅರ್ಜುನನು ನಡೆದುದೆಲ್ಲವನ್ನೂ ಯಥಾವತ್ತಾಗಿ ಹೇಳಿದನು. ಅದನ್ನು ಕೇಳಿ ಪ್ರಭು ವಾರ್ಷ್ಣೇಯನು ಅದು ಸರಿಯೆಂದು ಹೇಳಿದನು.

01210008a ತೌ ವಿಹೃತ್ಯ ಯಥಾಕಾಮಂ ಪ್ರಭಾಸೇ ಕೃಷ್ಣಪಾಂಡವೌ|

01210008c ಮಹೀಧರಂ ರೈವತಕಂ ವಾಸಾಯೈವಾಭಿಜಗ್ಮತುಃ||

ಪ್ರಭಾಸದಲ್ಲಿ ಕೃಷ್ಣ-ಪಾಂಡವರು ಮನಬಂದಂತೆ ವಿಹರಿಸಿದರು. ಅವರು ಉಳಿಯಲು ರೈವತ ಪರ್ವತಕ್ಕೆ ಹೋದರು.

01210009a ಪೂರ್ವಮೇವ ತು ಕೃಷ್ಣಸ್ಯ ವಚನಾತ್ತಂ ಮಹೀಧರಂ|

01210009c ಪುರುಷಾಃ ಸಮಲಂಚಕ್ರುರುಪಜಹ್ರುಶ್ಚ ಭೋಜನಂ||

ಕೃಷ್ಣನ ವಚನದಂತೆ ಮೊದಲೇ ಆ ಪರ್ವತವನ್ನು ಜನರು ಸಮಲಂಕರಿಸಿ ಭೋಜನವನ್ನು ಏರ್ಪಡಿಸಿದ್ದರು.

01210010a ಪ್ರತಿಗೃಹ್ಯಾಯಾರ್ಜುನಃ ಸರ್ವಮುಪಭುಜ್ಯ ಚ ಪಾಂಡವಃ|

01210010c ಸಹೈವ ವಾಸುದೇವೇನ ದೃಷ್ಟವಾನ್ನಟನರ್ತಕಾನ್||

ಪಾಂಡವನು ಅವೆಲ್ಲವನ್ನೂ ಸ್ವೀಕರಿಸಿ ಆನಂದಿಸಿದನು. ಮತ್ತು ವಾಸುದೇವನ ಸಹಿತ ನಟನರ್ತಕರನ್ನೂ ನೋಡಿದನು.

01210011a ಅಭ್ಯನುಜ್ಞಾಪ್ಯ ತಾನ್ಸರ್ವಾನರ್ಚಯಿತ್ವಾ ಚ ಪಾಂಡವಃ|

01210011c ಸತ್ಕೃತಂ ಶಯನಂ ದಿವ್ಯಮಭ್ಯಗಚ್ಛನ್ಮಹಾದ್ಯುತಿಃ||

ಅವರೆಲ್ಲರನ್ನೂ ಪ್ರಶಂಸಿಸಿ ಬೀಳ್ಕೊಟ್ಟು ಮಹಾದ್ಯುತಿ ಪಾಂಡವನು ಸಿಂಗರಿಸಿದ ದಿವ್ಯ ಶಯನವನ್ನು ಸೇರಿದನು.

01210012a ತೀರ್ಥಾನಾಂ ದರ್ಶನಂ ಚೈವ ಪರ್ವತಾನಾಂ ಚ ಭಾರತ|

01210012c ಆಪಗಾನಾಂ ವನಾನಾಂ ಚ ಕಥಯಾಮಾಸ ಸಾತ್ವತೇ||

ಭಾರತ! ಅವನು ಸಾತ್ವತನಿಗೆ ತಾನು ಕಂಡ ತೀರ್ಥಗಳ, ಪರ್ವತಗಳ, ನದಿಗಳ ಮತ್ತು ವನಗಳ ಕುರಿತು ಹೇಳಿದನು.

01210013a ಸ ಕಥಾಃ ಕಥಯನ್ನೇವ ನಿದ್ರಯಾ ಜನಮೇಜಯ|

01210013c ಕೌಂತೇಯೋಽಪಹೃತಸ್ತಸ್ಮಿಂಶಯನೇ ಸ್ವರ್ಗಸಮ್ಮಿತೇ||

01210014a ಮಧುರೇಣ ಸ ಗೀತೇನ ವೀಣಾಶಬ್ದೇನ ಚಾನಘ|

01210014c ಪ್ರಬೋಧ್ಯಮಾನೋ ಬುಬುಧೇ ಸ್ತುತಿಭಿರ್ಮಂಗಲೈಸ್ತಥಾ||

ಜನಮೇಜಯ! ಈ ಕಥೆಗಳನ್ನೆಲ್ಲಾ ಹೇಳುತ್ತಿರುವಾಗಲೇ ನಿದ್ರೆಯು ಕೌಂತೇಯನನ್ನು ಸ್ವರ್ಗಸಮ್ಮಿತ ಲೋಕಕ್ಕೆ ಕರೆದುಕೊಂಡು ಹೋಯಿತು. ಬೆಳಗಾಗುತ್ತಲೇ ಆ ಅನಘನು ಮಧುರ ಗೀತ, ವೀಣೆಯ ನಾದ, ಮತ್ತು ಮಂಗಲ ಸ್ತುತಿಗಳಿಗೆ ಎಚ್ಚೆತ್ತನು.

01210015a ಸ ಕೃತ್ವಾವಶ್ಯಕಾರ್ಯಾಣಿ ವಾರ್ಷ್ಣೇಯೇನಾಭಿನಂದಿತಃ|

01210015c ರಥೇನ ಕಾಂಚನಾಂಗೇನ ದ್ವಾರಕಾಮಭಿಜಗ್ಮಿವಾನ್||

ಅವಶ್ಯಕಾರ್ಯಗಳನ್ನು ಮುಗಿಸಿ ವಾರ್ಷ್ಣೇಯನಿಂದ ಅಭಿನಂದಿತನಾಗಿ ಕಾಂಚನಾಂಗ ರಥದಲ್ಲಿ ದ್ವಾರಕೆಗೆ ಹೋದನು.

01210016a ಅಲಂಕೃತಾ ದ್ವಾರಕಾ ತು ಬಭೂವ ಜನಮೇಜಯ|

01210016c ಕುಂತೀಸುತಸ್ಯ ಪೂಜಾರ್ಥಮಪಿ ನಿಷ್ಕುಟಕೇಷ್ವಪಿ||

ಜನಮೇಜಯ! ಕುಂತೀಸುತನ ಗೌರವಾರ್ಥವಾಗಿ ದ್ವಾರಕೆಯನ್ನು ಗುಡಿಸಿ ಸೇರಿ ಚೆನ್ನಾಗಿ ಅಲಂಕರಿಸಲಾಗಿತ್ತು.

01210017a ದಿದೃಕ್ಷವಶ್ಚ ಕೌಂತೇಯಂ ದ್ವಾರಕಾವಾಸಿನೋ ಜನಾಃ|

01210017c ನರೇಂದ್ರಮಾರ್ಗಮಾಜಗ್ಮುಸ್ತೂರ್ಣಂ ಶತಸಹಸ್ರಶಃ||

ದ್ವಾರಕಾವಾಸಿ ಜನರು ಕೌಂತೇಯನನ್ನು ನೋಡಲೆಂದು ರಾಜ ಮಾರ್ಗದಲ್ಲಿ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸೇರಿದರು.

01210018a ಅವಲೋಕೇಷು ನಾರೀಣಾಂ ಸಹಸ್ರಾಣಿ ಶತಾನಿ ಚ|

01210018c ಭೋಜವೃಷ್ಣ್ಯಂಧಕಾನಾಂ ಚ ಸಮವಾಯೋ ಮಹಾನಭೂತ್||

ಅಲ್ಲಿ ಭೋಜ, ವೃಷ್ಣಿ, ಅಂಧಕರು ಮತ್ತು ಅವರ ಸ್ತ್ರೀಯರ ನೂರಾರು ಸಹಸ್ರಾರು ಸಂಖ್ಯೆಗಳ ಮಹಾ ಸಮಾವೇಶವಿತ್ತು.

01210019a ಸ ತಥಾ ಸತ್ಕೃತಃ ಸರ್ವೈರ್ಭೋಜವೃಷ್ಣ್ಯಂಧಕಾತ್ಮಜೈಃ|

01210019c ಅಭಿವಾದ್ಯಾಭಿವಾದ್ಯಾಂಶ್ಚ ಸರ್ವೈಶ್ಚ ಪ್ರತಿನಂದಿತಃ||

ಭೋಜ, ವೃಷ್ಣಿ, ಅಂಧಕಾತ್ಮಜರಿಂದ ಸತ್ಕೃತನಾಗಿ, ಅಭಿವಾದಿಸುವವರನ್ನು ಅಭಿವಾದಿಸಿ ಸರ್ವರಿಗೂ ಸಂತಸವನ್ನು ತಂದನು.

01210020a ಕುಮಾರೈಃ ಸರ್ವಶೋ ವೀರಃ ಸತ್ಕಾರೇಣಾಭಿವಾದಿತಃ|

01210020c ಸಮಾನವಯಸಃ ಸರ್ವಾನಾಶ್ಲಿಷ್ಯ ಸ ಪುನಃ ಪುನಃ||

ಕುಮಾರ ಸರ್ವರೂ ಆ ವೀರನನ್ನು ಸತ್ಕಾರದಿಂದ ಅಭಿವಾದಿಸಿದರು. ಸಮಾನ ವಯಸ್ಕರು ಎಲ್ಲರೂ ಪುನಃ ಪುನಃ ಆಲಂಗಿಸಿದರು.

01210021a ಕೃಷ್ಣಸ್ಯ ಭವನೇ ರಮ್ಯೇ ರತ್ನಭೋಜ್ಯಸಮಾವೃತೇ|

01210021c ಉವಾಸ ಸಹ ಕೃಷ್ಣೇನ ಬಹುಲಾಸ್ತತ್ರ ಶರ್ವರೀಃ||

ಅವನು ರತ್ನ ಭೋಜ್ಯ ಸಮಾವೃತ ಕೃಷ್ಣನ ಭವನದಲ್ಲಿ ಕೃಷ್ಣನೊಡನೆ ಬಹಳಷ್ಟು ರಾತ್ರಿಗಳು ತಂಗಿದನು.

 ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಅರ್ಜುನದ್ವಾರಕಾಗಮನೇ ದಶಾಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಅರ್ಜುನದ್ವಾರಕಾಗಮನ ಎನ್ನುವ ಇನ್ನೂರಾಹತ್ತನೆಯ ಅಧ್ಯಾಯವು.

ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಃ||

ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೬/೧೦೦, ಅಧ್ಯಾಯಗಳು-೨೧೦/೧೯೯೫, ಶ್ಲೋಕಗಳು-೬೭೧೩/೭೩೭೮೪

Related image

Comments are closed.