ಆದಿ ಪರ್ವ: ಅರ್ಜುನವನವಾಸ ಪರ್ವ
೨೦೨
ಸುಂದೋಪಸುಂದರು ತ್ರೈಲೋಕಗಳನ್ನೂ ಗೆದ್ದು, ತಪಸ್ಸು-ಅಗ್ನಿಕಾರ್ಯಗಳನ್ನು ನಿಲ್ಲಿಸಿದ್ದುದು (೧-೨೭).
01202001 ನಾರದ ಉವಾಚ|
01202001a ಉತ್ಸವೇ ವೃತ್ತಮಾತ್ರೇ ತು ತ್ರೈಲೋಕ್ಯಾಕಾಂಕ್ಷಿಣಾವುಭೌ|
01202001c ಮಂತ್ರಯಿತ್ವಾ ತತಃ ಸೇನಾಂ ತಾವಾಜ್ಞಾಪಯತಾಂ ತದಾ||
ನಾರದನು ಹೇಳಿದನು: “ಉತ್ಸವಗಳು ನಡೆಯುತ್ತಿರುವಾಗ ತ್ರೈಲೋಕ್ಯದ ಆಕಾಂಕ್ಷಿಗಳಾದ ಆ ಈರ್ವರು ಸಮಾಲೋಚನೆ ನಡೆಸಿ ತಮ್ಮ ಸೇನೆಗೆ ಆಜ್ಞೆಯಿತ್ತರು.
01202002a ಸುಹೃದ್ಭಿರಭ್ಯನುಜ್ಞಾತೌ ದೈತ್ಯವೃದ್ಧೈಶ್ಚ ಮಂತ್ರಿಭಿಃ|
01202002c ಕೃತ್ವಾ ಪ್ರಾಸ್ಥಾನಿಕಂ ರಾತ್ರೌ ಮಘಾಸು ಯಯತುಸ್ತದಾ||
01202003a ಗದಾಪಟ್ಟಿಶಧಾರಿಣ್ಯಾ ಶೂಲಮುದ್ಗರಹಸ್ತಯಾ|
01202003c ಪ್ರಸ್ಥಿತೌ ಸಹಧರ್ಮಿಣ್ಯಾ ಮಹತ್ಯಾ ದೈತ್ಯಸೇನಯಾ|
ಅವರ ಸುಹೃದಯರು, ದೈತ್ಯ ವೃದ್ಧರು ಮತ್ತು ಮಂತ್ರಿಗಳು ಅವರಿಗೆ ಅನುಜ್ಞೆಯನ್ನು ನೀಡಲು ಪ್ರಾಸ್ಥಾನಿಕವನ್ನು ಪೂರೈಸಿ ಮಘಾನಕ್ಷತ್ರದ ರಾತ್ರಿಯಲ್ಲಿ ಹೊರಟರು[1]. ಗದೆ, ಪಟ್ಟಿಶಗಳನ್ನು ಹಿಡಿದು ಶೂಲಮುದ್ಗರಗಳನ್ನೆತ್ತಿ ಸಹಧರ್ಮಿ[2] ಮಹಾ ದೈತ್ಯಸೇನೆಯೊಂದಿಗೆ ನಡೆದರು.
01202004a ಮಂಗಲೈಃ ಸ್ತುತಿಭಿಶ್ಚಾಪಿ ವಿಜಯಪ್ರತಿಸಂಹಿತೈಃ|
01202004c ಚಾರಣೈಃ ಸ್ತೂಯಮಾನೌ ತು ಜಗ್ಮತುಃ ಪರಯಾ ಮುದಾ||
ಚಾರಣರು ಮಂಗಲಸ್ತುತಿಗಳನ್ನು, ವಿಜಯಪ್ರತಿಸಂಹಿತಗಳನ್ನು ಸ್ತುತಿಸುತ್ತಿರಲು ಈರ್ವರೂ ಪರಮ ಸಂತೋಷದಿಂದ ಹೊರಟರು.
01202005a ತಾವಂತರಿಕ್ಷಮುತ್ಪತ್ಯ ದೈತ್ಯೌ ಕಾಮಗಮಾವುಭೌ|
01202005c ದೇವಾನಾಮೇವ ಭವನಂ ಜಗ್ಮತುರ್ಯುದ್ಧದುರ್ಮದೌ||
ಯುದ್ಧದ ಮದದಲ್ಲಿದ್ದ ಕಾಮಗಾಮಿ ಆ ಇಬ್ಬರು ದೈತ್ಯರು ಅಂತರಿಕ್ಷವನ್ನೇರಿ ದೇವತೆಗಳ ಭವನಕ್ಕೆ ಧಾಳಿಯಿಟ್ಟರು.
01202006a ತಯೋರಾಗಮನಂ ಜ್ಞಾತ್ವಾ ವರದಾನಂ ಚ ತತ್ಪ್ರಭೋಃ|
01202006c ಹಿತ್ವಾ ತ್ರಿವಿಷ್ಟಪಂ ಜಗ್ಮುರ್ಬ್ರಹ್ಮಲೋಕಂ ತತಃ ಸುರಾಃ||
ಅವರ ಆಗಮನವನ್ನು ಮತ್ತು ಪ್ರಭುವು ಅವರಿಗಿತ್ತ ವರವನ್ನು ತಿಳಿದಿದ್ದ ಸುರರು ಸ್ವರ್ಗವನ್ನು ಬಿಟ್ಟು ಬ್ರಹ್ಮಲೋಕವನ್ನು ಸೇರಿದರು.
01202007a ತಾವಿಂದ್ರಲೋಕಂ ನಿರ್ಜಿತ್ಯ ಯಕ್ಷರಕ್ಷೋಗಣಾಂಸ್ತಥಾ|
01202007c ಖೇಚರಾಣ್ಯಪಿ ಭೂತಾನಿ ಜಿಗ್ಯತುಸ್ತೀವ್ರವಿಕ್ರಮೌ||
ಆ ತೀವ್ರವಿಕ್ರಮಿಗಳು ಇಂದ್ರಲೋಕವನ್ನು ಜಯಿಸಿ ಯಕ್ಷ-ರಕ್ಷಗಣಗಳನ್ನೂ ಖೇಚರಗಣಗಳನ್ನು ಭೂತಗಳನ್ನು ಜಯಿಸಿದರು.
01202008a ಅಂತರ್ಭೂಮಿಗತಾನ್ನಾಗಾಂಜಿತ್ವಾ ತೌ ಚ ಮಹಾಸುರೌ|
01202008c ಸಮುದ್ರವಾಸಿನಃ ಸರ್ವಾನ್ಮ್ಲೇಚ್ಛಜಾತೀನ್ವಿಜಿಗ್ಯತುಃ||
ಅಂತರ್ಭೂಮಿಗೆ ಹೋಗಿ ನಾಗಗಳನ್ನು ಗೆದ್ದು ಆ ಮಹಾಸುರರು ಸರ್ವ ಸಮುದ್ರವಾಸಿಗಳನ್ನೂ ಮ್ಲೇಚ್ಛಜಾತಿಯವರನ್ನೂ ಗೆದ್ದರು.
01202009a ತತಃ ಸರ್ವಾಂ ಮಹೀಂ ಜೇತುಮಾರಬ್ಧಾವುಗ್ರಶಾಸನೌ|
01202009c ಸೈನಿಕಾಂಶ್ಚ ಸಮಾಹೂಯ ಸುತೀಕ್ಷ್ಣಾಂ ವಾಚಮೂಚತುಃ||
ಆ ಇಬ್ಬರು ಉಗ್ರಶಾಸಕರು ಸರ್ವ ಮಹಿಯನ್ನೂ ಗೆಲ್ಲಲು ತೊಡಗಿ ಸೈನಿಕರನ್ನು ಒಟ್ಟುಗೂಡಿಸಿ ಈ ಸುತೀಕ್ಷ್ಣ ಮಾತುಗಳನ್ನಾಡಿದರು:
01202010a ರಾಜರ್ಷಯೋ ಮಹಾಯಜ್ಞೈರ್ಹವ್ಯಕವ್ಯೈರ್ದ್ವಿಜಾತಯಃ|
01202010c ತೇಜೋ ಬಲಂ ಚ ದೇವಾನಾಂ ವರ್ಧಯಂತಿ ಶ್ರಿಯಂ ತಥಾ||
“ರಾಜರ್ಷಿಗಳು ಮತ್ತು ದ್ವಿಜರು ಮಹಾಯಜ್ಞ ಮತ್ತು ಹವ್ಯಕವ್ಯಗಳಿಂದ ದೇವತೆಗಳ ಬಲ ಮತ್ತು ಶ್ರಿಯನ್ನು ವೃದ್ಧಿಸುತ್ತಾರೆ.
01202011a ತೇಷಾಮೇವಂ ಪ್ರವೃದ್ಧಾನಾಂ ಸರ್ವೇಷಾಮಸುರದ್ವಿಷಾಂ|
01202011c ಸಂಭೂಯ ಸರ್ವೈರಸ್ಮಾಭಿಃ ಕಾರ್ಯಃ ಸರ್ವಾತ್ಮನಾ ವಧಃ||
ಅಸುರರ ವೈರಿಗಳಾದ ದೇವತೆಗಳೆಲ್ಲರಿಗೆ ಇವರೇ ತೇಜೋಬಲವನ್ನು ಹೆಚ್ಚಿಸುತ್ತಿರುವುದರಿಂದ ಅವರೂ ನಮಗೆ ಶತ್ರುಗಳಾಗುತ್ತಾರೆ. ದೇವತೆಗಳ ತೇಜೋಬಲಗಳನ್ನು ನೀಡುವವರನ್ನು ತೀರಿಸಿಬಿಟ್ಟರೆ ದೇವತೆಗಳೂ ಶಕ್ತಿ ಹೀನರಾಗುವರು.”
01202012a ಏವಂ ಸರ್ವಾನ್ಸಮಾದಿಶ್ಯ ಪೂರ್ವತೀರೇ ಮಹೋದಧೇಃ|
01202012c ಕ್ರೂರಾಂ ಮತಿಂ ಸಮಾಸ್ಥಾಯ ಜಗ್ಮತುಃ ಸರ್ವತೋಮುಖಂ||
ಈ ರೀತಿ ಮಹೋದಧಿಯ ಪೂರ್ವತೀರದಲ್ಲಿ ಸರ್ವರಿಗೂ ಆದೇಶವನ್ನಿತ್ತು ಕ್ರೂರಮತಿಯನ್ನು ತಳೆದ ಅವರು ಸರ್ವತೋಮುಖವಾಗಿ ಹೊರಟರು.
01202013a ಯಜ್ಞೈರ್ಯಜಂತೇ ಯೇ ಕೇ ಚಿದ್ಯಾಜಯಂತಿ ಚ ಯೇ ದ್ವಿಜಾಃ|
01202013c ತಾನ್ ಸರ್ವಾನ್ಪ್ರಸಭಂ ದೃಷ್ಟ್ವಾ ಬಲಿನೌ ಜಘ್ನತುಸ್ತದಾ|
ಆ ಬಲಿಗಳಿಬ್ಬರೂ ಯಾರು ಯಾರು ಯಜ್ಞಗಳನ್ನು ಮಾಡುತ್ತಿದ್ದರೋ ಮತ್ತು ಯಾವ ಯಾವ ದ್ವಿಜರು ಯಜ್ಞಗಳನ್ನು ಮಾಡಿಸುತ್ತಿದ್ದರೋ ಆ ಎಲ್ಲರನ್ನೂ ಹುಡುಕಿ ಬಲಾತ್ಕಾರವಾಗಿ ಸಂಹರಿಸಿದರು.
01202014a ಆಶ್ರಮೇಷ್ವಗ್ನಿಹೋತ್ರಾಣಿ ಋಷೀಣಾಂ ಭಾವಿತಾತ್ಮನಾಂ|
01202014c ಗೃಹೀತ್ವಾ ಪ್ರಕ್ಷಿಪಂತ್ಯಪ್ಸು ವಿಶ್ರಬ್ಧಾಃ ಸೈನಿಕಾಸ್ತಯೋಃ||
ಅವರ ನಿರ್ಭೀತ ಸೈನಿಕರು ಆಶ್ರಮಗಳಲ್ಲಿ ಭಾವಿತಾತ್ಮ ಋಷಿಗಳ ಅಗ್ನಿಹೋತ್ರಗಳನ್ನು ತೆಗೆದು ನೀರಿನಲ್ಲಿ ಎಸೆದರು.
01202015a ತಪೋಧನೈಶ್ಚ ಯೇ ಶಾಪಾಃ ಕ್ರುದ್ಧೈರುಕ್ತಾ ಮಹಾತ್ಮಭಿಃ|
01202015c ನಾಕ್ರಾಮಂತಿ ತಯೋಸ್ತೇಽಪಿ ವರದಾನೇನ ಜೃಂಭತೋಃ||
ಮಹಾತ್ಮ ತಪೋಧನರು ಕ್ರುದ್ಧರಾಗಿ ನೀಡಿದ ಶಾಪಗಳೂ ಕೂಡ ವರದಾನದಿಂದ ಮೆರೆಯುತ್ತಿದ್ದ ಅವರನ್ನು ಮುಟ್ಟಲಿಲ್ಲ.
01202016a ನಾಕ್ರಾಮಂತಿ ಯದಾ ಶಾಪಾ ಬಾಣಾ ಮುಕ್ತಾಃ ಶಿಲಾಸ್ವಿವ|
01202016c ನಿಯಮಾಂಸ್ತದಾ ಪರಿತ್ಯಜ್ಯ ವ್ಯದ್ರವಂತ ದ್ವಿಜಾತಯಃ||
ಶಿಲೆಗಳ ಮೇಲೆ ಬಿಟ್ಟ ಬಾಣಗಳು ಹೇಗೋ ಹಾಗೆ ಶಾಪಗಳು ಅವರನ್ನು ಮುಟ್ಟದಿರಲು ದ್ವಿಜರು ತಮ್ಮ ತಮ್ಮ ವ್ರತ ನಿಯಮಗಳನ್ನು ಪರಿತ್ಯಜಿಸಿ ಓಡಿ ಹೋದರು.
01202017a ಪೃಥಿವ್ಯಾಂ ಯೇ ತಪಃಸಿದ್ಧಾ ದಾಂತಾಃ ಶಮಪರಾಯಣಾಃ|
01202017c ತಯೋರ್ಭಯಾದ್ದುದ್ರುವುಸ್ತೇ ವೈನತೇಯಾದಿವೋರಗಾಃ||
ವೈನತೇಯನ ಭಯದಿಂದ ಉರಗಗಳು ಓಡುವಂತೆ ಅವರಿಬ್ಬರ ಭಯದಿಂದ ಪೃಥ್ವಿಯ ಎಲ್ಲ ತಪಃಸಿದ್ಧರೂ, ಜಿತೇಂದ್ರಿಯರೂ, ಶಮಪರಾಯಣರೂ ಓಡಿಹೋದರು.
01202018a ಮಥಿತೈರಾಶ್ರಮೈರ್ಭಗ್ನೈರ್ವಿಕೀರ್ಣಕಲಶಸ್ರುವೈಃ|
01202018c ಶೂನ್ಯಮಾಸೀಜ್ಜಗತ್ಸರ್ವಂ ಕಾಲೇನೇವ ಹತಂ ಯಥಾ||
ಹಾಳುಬಿದ್ದಿದ್ದ ಆಶ್ರಮಗಳು ಮತ್ತು ಅಲ್ಲಲ್ಲಿ ಹರಡಿ ಬಿದ್ದಿದ್ದ ಕಲಶ-ಸಟ್ಟುಗಗಳಿಂದ ಜಗತ್ತೆಲ್ಲವೂ ಕಾಲನಿಂದ ಹತವಾದವೋ ಎಂಬಂತೆ ಬರಿದಾಗಿ ತೋರುತ್ತಿತ್ತು.
01202019a ರಾಜರ್ಷಿಭಿರದೃಶ್ಯದ್ಭಿರೃಷಿಭಿಶ್ಚ ಮಹಾಸುರೌ|
01202019c ಉಭೌ ವಿನಿಶ್ಚಯಂ ಕೃತ್ವಾ ವಿಕುರ್ವಾತೇ ವಧೈಷಿಣೌ||
ರಾಜರ್ಷಿ ಮತ್ತು ಋಷಿಗಳು ಅದೃಶ್ಯರಾಗಲು ಅವರನ್ನು ವಧಿಸಲು ನಿಶ್ಚಯಿಸಿದ ಆ ಈರ್ವರು ಮಹಾಸುರರೂ ಬೇರೆ ಬೇರೆ ರೂಪಗಳನ್ನು ಧರಿಸಿದರು.
01202020a ಪ್ರಭಿನ್ನಕರಟೌ ಮತ್ತೌ ಭೂತ್ವಾ ಕುಂಜರರೂಪಿಣೌ|
01202020c ಸಂಲೀನಾನಪಿ ದುರ್ಗೇಷು ನಿನ್ಯತುರ್ಯಮಸಾದನಂ||
ಮದಜಲ ಸೋರುತ್ತಿರುವ ಕುಂಭಸ್ಥಲದ ಮತ್ತಗಜಗಳ ರೂಪವನ್ನು ತಾಳಿ ದುರ್ಗಮ ಪದೇಶಗಳಲ್ಲಿ ಅಡಗಿಕೊಂಡಿದ್ದವರನ್ನು ಯಮಾಲಯಕ್ಕೆ ಕಳುಹಿಸಿದರು.
01202021a ಸಿಂಹೌ ಭೂತ್ವಾ ಪುನರ್ವ್ಯಾಘ್ರೌ ಪುನಶ್ಚಾಂತರ್ಹಿತಾವುಭೌ|
01202021c ತೈಸ್ತೈರುಪಾಯೈಸ್ತೌ ಕ್ರೂರಾವೃಷೀನ್ದೃಷ್ಟ್ವಾ ನಿಜಘ್ನತುಃ||
ಸಿಂಹಗಳಾಗಿ, ಪುನಃ ವ್ಯಾಘ್ರಗಳಾಗಿ, ಪುನಃ ಅಂತರ್ಹಿತರಾಗಿ, ಹೀಗೆ ಅನೇಕ ಉಪಾಯಗಳಿಂದ ಆ ಕ್ರೂರರು ಋಷಿಗಳನ್ನು ಹುಡುಕಿ ಸಂಹರಿಸಿದರು.
01202022a ನಿವೃತ್ತಯಜ್ಞಸ್ವಾಧ್ಯಾಯಾ ಪ್ರಣಷ್ಟನೃಪತಿದ್ವಿಜಾ|
01202022c ಉತ್ಸನ್ನೋತ್ಸವಯಜ್ಞಾ ಚ ಬಭೂವ ವಸುಧಾ ತದಾ||
ಆಗ ವಸುಧೆಯಲ್ಲಿ ಯಜ್ಞ-ಸ್ವಾಧ್ಯಾಯಗಳು ನಿಂತುಹೋದವು. ನೃಪತಿದ್ವಿಜರು ನಷ್ಟರಾದರು. ಯಜ್ಞ-ಉತ್ಸವಗಳು ನಿಂತುಹೋದವು.
01202023a ಹಾಹಾಭೂತಾ ಭಯಾರ್ತಾ ಚ ನಿವೃತ್ತವಿಪಣಾಪಣಾ|
01202023c ನಿವೃತ್ತದೇವಕಾರ್ಯಾ ಚ ಪುಣ್ಯೋದ್ವಾಹವಿವರ್ಜಿತಾ||
ಭೂಮಿಯು ಭಯಪೀಡಿತವಾಗಿ ಹಾಹಾಕರಿಸಿತು. ಅಂಗಡಿ-ವ್ಯಾಪಾರಗಳು ನಿಂತುಹೋದವು. ದೇವತಾಕಾರ್ಯಗಳು ನಿಂತುಹೋದವು. ಪುಣ್ಯಕಾರ್ಯಗಳೂ ವಿವಾಹಗಳೂ ಇಲ್ಲವಾದವು.
01202024a ನಿವೃತ್ತಕೃಷಿಗೋರಕ್ಷಾ ವಿಧ್ವಸ್ತನಗರಾಶ್ರಮಾ|
01202024c ಅಸ್ಥಿಕಂಕಾಲಸಂಕೀರ್ಣಾ ಭೂರ್ಬಭೂವೋಗ್ರದರ್ಶನಾ||
ಕೃಷಿ-ಗೋಪಾಲನೆಗಳು ನಿಂತುಹೋದವು. ನಗರ-ಆಶ್ರಮಗಳು ವಿಧ್ವಂಸವಾದವು. ಎಲುಬು ಮತ್ತು ಅಸ್ತಿಪಂಜರಗಳಿಂದ ತುಂಬಿಹೋದ ಭೂಮಿಯು ಭಯಂಕರವಾಗಿ ತೋರಿತು.
01202025a ನಿವೃತ್ತಪಿತೃಕಾರ್ಯಂ ಚ ನಿರ್ವಷಟ್ಕಾರಮಂಗಲಂ|
01202025c ಜಗತ್ಪ್ರತಿಭಯಾಕಾರಂ ದುಷ್ಪ್ರೇಕ್ಷ್ಯಮಭವತ್ತದಾ||
ಪಿತೃಕಾರ್ಯಗಳು ನಿಂತುಹೋದವು. ಮಂಗಲ ವಷಟ್ಕಾರಗಳು ನಿಂತುಹೋದವು. ಜಗತ್ತು ನೋಡಲಿಕ್ಕಾಗದಷ್ಟು ಭಯಾಕಾರವಾಗಿ ತೋರುತ್ತಿತ್ತು.
01202026a ಚಂದ್ರಾದಿತ್ಯೌ ಗ್ರಹಾಸ್ತಾರಾ ನಕ್ಷತ್ರಾಣಿ ದಿವೌಕಸಃ|
01202026c ಜಗ್ಮುರ್ವಿಷಾದಂ ತತ್ಕರ್ಮ ದೃಷ್ಟ್ವಾ ಸುಂದೋಪಸುಂದಯೋಃ||
ಸುಂದೋಪಸುಂದರ ಈ ಕೃತ್ಯಗಳಿಂದ ಚಂದ್ರಾದಿತ್ಯರು, ಗ್ರಹತಾರೆಗಳು, ನಕ್ಷತ್ರಗಳು ಮತ್ತು ದಿವೌಕಸರು ವಿಷಾದಿತರಾದರು.
01202027a ಏವಂ ಸರ್ವಾ ದಿಶೋ ದೈತ್ಯೌ ಜಿತ್ವಾ ಕ್ರೂರೇಣ ಕರ್ಮಣಾ|
01202027c ನಿಃಸಪತ್ನೌ ಕುರುಕ್ಷೇತ್ರೇ ನಿವೇಶಮಭಿಚಕ್ರತುಃ||
ಈ ರೀತಿ ಕ್ರೂರಕರ್ಮಗಳಿಂದ ಸರ್ವದಿಶಗಳನ್ನು ಜಯಿಸಿ ಆ ದೈತ್ಯರು ಯಾವುದೇ ವಿರೋಧವಿಲ್ಲದೇ ಕುರುಕ್ಷೇತ್ರದಲ್ಲಿ ವಾಸಿಸತೊಡಗಿದರು.”
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಸುಂದೋಪಸುಂದೋಪಾಖ್ಯಾನೇ ದ್ವ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಸುಂದೋಪಸುಂದೋಪಾಖ್ಯಾನದಲ್ಲಿ ಇನ್ನೂರ ಎರಡನೆಯ ಅಧ್ಯಾಯವು.
[1]ಈ ಸಂದರ್ಭದಲ್ಲಿ ಮಘಾ (ಮಖಾ) ನಕ್ಷತ್ರದ ಪ್ರಾಮುಖ್ಯತೆ ಏನು? ಮಘಾ ತಿಂಗಳು ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದ ವರೆಗಿರುತ್ತದೆ.
[2]ಸಹಧರ್ಮಿ ಸೇನೆ ಎಂದರೆ ರಾಕ್ಷಸಧರ್ಮವನ್ನು ಅನುಸರಿಸಿದ ಸೇನೆಯೆಂದೇ? ಯುದ್ಧದ ಯಶಸ್ಸಿಗೆ ಸಹಧರ್ಮವೂ ಮುಖ್ಯವೇ?