|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಅರ್ಜುನವನವಾಸ ಪರ್ವ
೨೦೦
ಇಂದ್ರಪ್ರಸ್ಥಕ್ಕೆ ನಾರದನ ಆಗಮನ, ಸತ್ಕಾರ (೧-೧೫). “ಪಾಂಚಾಲಿಯಿಂದಾಗಿ ನಿಮ್ಮಲ್ಲಿ ಭೇದವುಂಟಾಗಬಾರದೆಂದು ನಿಯಮವನ್ನು ಮಾಡಿಕೊಳ್ಳಬೇಕು” ಎಂದು ಹೇಳಿ ನಾರದನು ಸುಂದೋಪಸುಂದರ ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದುದು (೧೬-೨೩).
01200001 ಜನಮೇಜಯ ಉವಾಚ|
01200001a ಏವಂ ಸಂಪ್ರಾಪ್ಯ ರಾಜ್ಯಂ ತದಿಂದ್ರಪ್ರಸ್ಥೇ ತಪೋಧನ|
01200001c ಅತ ಊರ್ಧ್ವಂ ಮಹಾತ್ಮಾನಃ ಕಿಮಕುರ್ವಂತ ಪಾಂಡವಾಃ||
01200002a ಸರ್ವ ಏವ ಮಹಾತ್ಮಾನಃ ಪೂರ್ವೇ ಮಮ ಪಿತಾಮಹಾಃ|
01200002c ದ್ರೌಪದೀ ಧರ್ಮಪತ್ನೀ ಚ ಕಥಂ ತಾನನ್ವವರ್ತತ||
ಜನಮೇಜಯನು ಹೇಳಿದನು: “ತಪೋಧನ! ಈ ರೀತಿ ಇಂದ್ರಪ್ರಸ್ಥದಲ್ಲಿ ರಾಜ್ಯವನ್ನು ಪಡೆದ ನಂತರ ಮಹಾತ್ಮ ಪಾಂಡವರು ಏನು ಮಾಡಿದರು? ಆ ನನ್ನ ಪಿತಾಮಹ ಮಹಾತ್ಮರೆಲ್ಲರ ಧರ್ಮಪತ್ನಿ ದ್ರೌಪದಿಯು ಹೇಗೆ ನಡೆದುಕೊಳ್ಳುತ್ತಿದ್ದಳು?
01200003a ಕಥಂ ವಾ ಪಂಚ ಕೃಷ್ಣಾಯಾಮೇಕಸ್ಯಾಂ ತೇ ನರಾಧಿಪಾಃ|
01200003c ವರ್ತಮಾನಾ ಮಹಾಭಾಗಾ ನಾಭಿದ್ಯಂತ ಪರಸ್ಪರಂ||
ಅಥವಾ ಆ ನರಾಧಿಪರು ಹೇಗೆ ಮಹಾಭಾಗೆ ಕೃಷ್ಣೆಯೊಬ್ಬಳಿಗೇ ನಡೆದುಕೊಳ್ಳುತ್ತಿದ್ದು ಪರಸ್ಪರರಲ್ಲಿ ಭೇದಭಾವವು ಉಂಟಾಗಲಿಲ್ಲವೇ?
01200004a ಶ್ರೋತುಮಿಚ್ಛಾಮ್ಯಹಂ ಸರ್ವಂ ವಿಸ್ತರೇಣ ತಪೋಧನ|
01200004c ತೇಷಾಂ ಚೇಷ್ಟಿತಮನ್ಯೋನ್ಯಂ ಯುಕ್ತಾನಾಂ ಕೃಷ್ಣಯಾ ತಯಾ||
ತಪೋಧನ! ಕೃಷ್ಣೆಯೊಡನೆ ಒಟ್ಟಿಗೇ ಮದುವೆಯಾದ ಅವರು ಪರಸ್ಪರರಲ್ಲಿ ನಡೆದುಕೊಂಡಿದ್ದರ ಕುರಿತು ಸರ್ವವನ್ನೂ ವಿಸ್ತಾರವಾಗಿ ಕೇಳ ಬಯಸುತ್ತೇನೆ.”
01200005 ವೈಶಂಪಾಯನ ಉವಾಚ|
01200005a ಧೃತರಾಷ್ಟ್ರಾಭ್ಯನುಜ್ಞಾತಾಃ ಕೃಷ್ಣಯಾ ಸಹ ಪಾಂಡವಾಃ|
01200005c ರೇಮಿರೇ ಪುರುಷವ್ಯಾಘ್ರಾಃ ಪ್ರಾಪ್ತರಾಜ್ಯಾಃ ಪರಂತಪಾಃ||
ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಅನುಜ್ಞೆಯಂತೆ ರಾಜ್ಯವನ್ನು ಹೊಂದಿದ ಆ ಪುರುಷವ್ಯಾಘ್ರ, ಪರಂತಪ ಪಾಂಡವರು ಕೃಷ್ಣೆಯೊಡನೆ ರಮಿಸಿದರು.
01200006a ಪ್ರಾಪ್ಯ ರಾಜ್ಯಂ ಮಹಾತೇಜಾಃ ಸತ್ಯಸಂಧೋ ಯುಧಿಷ್ಠಿರಃ|
01200006c ಪಾಲಯಾಮಾಸ ಧರ್ಮೇಣ ಪೃಥಿವೀಂ ಭ್ರಾತೃಭಿಃ ಸಹ||
ರಾಜ್ಯವನ್ನು ಪಡೆದ ಮಹಾತೇಜಸ್ವಿ ಸತ್ಯಸಂಧ ಯುಧಿಷ್ಠಿರನು ಭ್ರಾತೃಗಳೊಡನೆ ಪೃಥ್ವಿಯನ್ನು ಧರ್ಮದಿಂದ ಪಾಲಿಸತೊಡಗಿದನು.
01200007a ಜಿತಾರಯೋ ಮಹಾಪ್ರಾಜ್ಞಾಃ ಸತ್ಯಧರ್ಮಪರಾಯಣಾಃ|
01200007c ಮುದಂ ಪರಮಿಕಾಂ ಪ್ರಾಪ್ತಾಸ್ತತ್ರೋಷುಃ ಪಾಂಡುನಂದನಾಃ||
ಅರಿಗಳನ್ನು ಗೆದ್ದು ಮಹಾಪ್ರಾಜ್ಞ ಸತ್ಯಧರ್ಮಪರಾಯಣ ಪಾಂಡುನಂದನನು ಪರಮ ಸಂತಸವನ್ನು ಹೊಂದಿ ಬಾಳುತ್ತಿದ್ದನು.
01200008a ಕುರ್ವಾಣಾಃ ಪೌರಕಾರ್ಯಾಣಿ ಸರ್ವಾಣಿ ಪುರುಷರ್ಷಭಾಃ|
01200008c ಆಸಾಂ ಚಕ್ರುರ್ಮಹಾರ್ಹೇಷು ಪಾರ್ಥಿವೇಷ್ವಾಸನೇಷು ಚ||
ಪುರುಷರ್ಷಭರು ಬೆಲೆಬಾಳುವ ರಾಜಾಸನಗಳಲ್ಲಿ[1] ಕುಳಿತು ಸರ್ವ ಪೌರಕಾರ್ಯಗಳನ್ನೂ ಮಾಡುತ್ತಿದ್ದರು.
01200009a ಅಥ ತೇಷೂಪವಿಷ್ಟೇಷು ಸರ್ವೇಷ್ವೇವ ಮಹಾತ್ಮಸು|
01200009c ನಾರದಸ್ತ್ವಥ ದೇವರ್ಷಿರಾಜಗಾಮ ಯದೃಚ್ಛಯಾ|
01200009e ಆಸನಂ ರುಚಿರಂ ತಸ್ಮೈ ಪ್ರದದೌ ಸ್ವಂ ಯುಧಿಷ್ಠಿರಃ||
01200010a ದೇವರ್ಷೇರುಪವಿಷ್ಟಸ್ಯ ಸ್ವಯಮರ್ಘ್ಯಂ ಯಥಾವಿಧಿ|
01200010c ಪ್ರಾದಾದ್ಯುಧಿಷ್ಠಿರೋ ಧೀಮಾನ್ರಾಜ್ಯಂ ಚಾಸ್ಮೈ ನ್ಯವೇದಯತ್||
ಒಮ್ಮೆ ಸರ್ವ ಮಹಾತ್ಮರೂ ಕುಳಿತಿರುವಾಗ ಅಲ್ಲಿಗೆ ದೇವರ್ಷಿ ನಾರದನು ಬಂದನು[2]. ಯುಧಿಷ್ಠಿರನು ಅವನಿಗೆ ತನ್ನದೇ ಸುಂದರ ಆಸನವನ್ನು ನೀಡಿದನು ಮತ್ತು ಯುಧಿಷ್ಠಿರನು ದೇವರ್ಷಿಯನ್ನು ಸ್ವಯಂ ಕುಳ್ಳಿರಿಸಿ ಯಥಾವಿಧಿ ಅರ್ಘ್ಯವನ್ನಿತ್ತನು. ನಂತರ ಧೀಮಾನ್ ಯುಧಿಷ್ಠಿರನು ರಾಜ್ಯವನ್ನೇ ಅವನಿಗೆ ನಿವೇದಿಸಿದನು.
01200011a ಪ್ರತಿಗೃಹ್ಯ ತು ತಾಂ ಪೂಜಾಮೃಷಿಃ ಪ್ರೀತಮನಾಭವತ್|
01200011c ಆಶೀರ್ಭಿರ್ವರ್ಧಯಿತ್ವಾ ತು ತಮುವಾಚಾಸ್ಯತಾಮಿತಿ||
01200012a ನಿಷಸಾದಾಭ್ಯನುಜ್ಞಾತಸ್ತತೋ ರಾಜಾ ಯುಧಿಷ್ಠಿರಃ|
01200012c ಪ್ರೇಷಯಾಮಾಸ ಕೃಷ್ಣಾಯೈ ಭಗವಂತಮುಪಸ್ಥಿತಂ||
ಅವನ ಪೂಜೆಯನ್ನು ಸ್ವೀಕರಿಸಿದ ಋಷಿಯು ಸಂತೋಷಗೊಂಡು ಅವನಿಗೆ ಆಶೀರ್ವಾದಗಳನ್ನಿತ್ತು ಕುಳಿತುಕೊಳ್ಳಲು ಹೇಳಿದನು. ರಾಜ ಯುಧಿಷ್ಠಿರನು ಕುಳಿತುಕೊಳ್ಳಲು ಭಗವಾನನು ಬಂದಿದ್ದಾನೆಂದು ಕೃಷ್ಣೆಗೆ ಬರಲು ಹೇಳಿ ಕಳುಹಿಸಿದನು.
01200013a ಶ್ರುತ್ವೈವ ದ್ರೌಪದೀ ಚಾಪಿ ಶುಚಿರ್ಭೂತ್ವಾ ಸಮಾಹಿತಾ|
01200013c ಜಗಾಮ ತತ್ರ ಯತ್ರಾಸ್ತೇ ನಾರದಃ ಪಾಂಡವೈಃ ಸಹ||
ಕೇಳಿದೊಡನೆಯೇ ದ್ರೌಪದಿಯು ಶುಚಿರ್ಭೂತಳಾಗಿ ಪಾಂಡವರೊಡನೆ ನಾರದನು ಇರುವಲ್ಲಿಗೆ ಹೋದಳು.
01200014a ತಸ್ಯಾಭಿವಾದ್ಯ ಚರಣೌ ದೇವರ್ಷೇರ್ಧರ್ಮಚಾರಿಣೀ|
01200014c ಕೃತಾಂಜಲಿಃ ಸುಸಂವೀತಾ ಸ್ಥಿತಾಥ ದ್ರುಪದಾತ್ಮಜಾ||
ದೇವರ್ಷಿಯ ಚರಣಗಳೆರಡಕ್ಕೂ ನಮಸ್ಕರಿಸಿದ ಧರ್ಮಚಾರಿಣಿ ದ್ರುಪದಾತ್ಮಜೆಯು ಅಂಜಲೀಬದ್ಧಳಾಗಿ, ಸುಸಂವೀತಳಾಗಿ ನಿಂತುಕೊಂಡಳು.
01200015a ತಸ್ಯಾಶ್ಚಾಪಿ ಸ ಧರ್ಮಾತ್ಮಾ ಸತ್ಯವಾಗೃಷಿಸತ್ತಮಃ|
01200015c ಆಶಿಷೋ ವಿವಿಧಾಃ ಪ್ರೋಚ್ಯ ರಾಜಪುತ್ರ್ಯಾಸ್ತು ನಾರದಃ|
01200015e ಗಮ್ಯತಾಮಿತಿ ಹೋವಾಚ ಭಗವಾಂಸ್ತಾಮನಿಂದಿತಾಂ||
ಸತ್ಯವಾಗ್ಮಿ ಋಷಿಸತ್ತಮ ಧರ್ಮಾತ್ಮ ಭಗವಾನ್ ನಾರದನು ಅನಿಂದಿತೆ ರಾಜಪುತ್ರಿಗೆ ವಿವಿಧ ಆಶೀರ್ವಾದಗಳನ್ನಿತ್ತು ಹೋಗಬಹುದೆಂದು ಹೇಳಿದನು[3].
01200016a ಗತಾಯಾಮಥ ಕೃಷ್ಣಾಯಾಂ ಯುಧಿಷ್ಠಿರಪುರೋಗಮಾನ್|
01200016c ವಿವಿಕ್ತೇ ಪಾಂಡವಾನ್ಸರ್ವಾನುವಾಚ ಭಗವಾನೃಷಿಃ||
ಕೃಷ್ಣೆಯು ಹೋದನಂತರ ಯುಧಿಷ್ಠಿರನೇ ಮೊದಲಾದ ಪಾಂಡವರು ಮಾತ್ರ ಏಕಾಂತದಲ್ಲಿರಲು, ಸರ್ವರನ್ನೂ ಉದ್ದೇಶಿಸಿ ಭಗವಾನ್ ಋಷಿಯು ಹೇಳಿದನು:
01200017a ಪಾಂಚಾಲೀ ಭವತಾಮೇಕಾ ಧರ್ಮಪತ್ನೀ ಯಶಸ್ವಿನೀ|
01200017c ಯಥಾ ವೋ ನಾತ್ರ ಭೇದಃ ಸ್ಯಾತ್ತಥಾ ನೀತಿರ್ವಿಧೀಯತಾಂ||
“ಯಶಸ್ವಿನೀ ಪಾಂಚಾಲಿಯು ನಿಮ್ಮೆಲ್ಲರಿಗೂ ಒಬ್ಬಳೇ ಧರ್ಮಪತ್ನಿಯಾಗಿದ್ದಾಳೆ. ಅವಳಿಂದಾಗಿ ನಿಮ್ಮ ನಿಮ್ಮಲ್ಲಿ ಭೇದವುಂಟಾಗದಂತೆ ನಿಮ್ಮಲ್ಲಿಯೇ ಒಂದು ನೀತಿಯನ್ನು ಪಾಲಿಸಬೇಕಾಗುತ್ತದೆ.
01200018a ಸುಂದೋಪಸುಂದಾವಸುರೌ ಭ್ರಾತರೌ ಸಹಿತಾವುಭೌ|
01200018c ಆಸ್ತಾಮವಧ್ಯಾವನ್ಯೇಷಾಂ ತ್ರಿಷು ಲೋಕೇಷು ವಿಶ್ರುತೌ||
ಹಿಂದೆ ಮೂರೂ ಲೋಕಗಳಲ್ಲಿಯೂ ವಿಶ್ರುತ, ಒಬ್ಬರನ್ನೊಬ್ಬರು ಬಿಟ್ಟಿರದೇ ಇದ್ದ ಸುಂದ ಮತ್ತು ಉಪಸುಂದರೆಂಬ ಈರ್ವರು ಅಸುರ ಸಹೋದರರಿದ್ದರು. ಅವರು ಬೇರೆ ಯಾರಿಂದಲೂ ಅವಧ್ಯರಾಗಿದ್ದರು.
01200019a ಏಕರಾಜ್ಯಾವೇಕಗೃಹಾವೇಕಶಯ್ಯಾಸನಾಶನೌ|
01200019c ತಿಲೋತ್ತಮಾಯಾಸ್ತೌ ಹೇತೋರನ್ಯೋನ್ಯಮಭಿಜಘ್ನತುಃ||
ಒಂದೇ ರಾಜ್ಯ, ಒಂದೇ ಅರಮನೆ, ಒಂದೇ ಹಾಸಿಗೆ, ಆಸನ, ಆಹಾರವನ್ನು ಬಳಸುತ್ತಿದ್ದ ಅವರು ತಿಲೋತ್ತಮೆಯ ಸಲುವಾಗಿ ಪರಸ್ಪರರನ್ನು ಸಂಹರಿಸಿದರು.
01200020a ರಕ್ಷ್ಯತಾಂ ಸೌಹೃದಂ ತಸ್ಮಾದನ್ಯೋನ್ಯಪ್ರತಿಭಾವಿಕಂ|
01200020c ಯಥಾ ವೋ ನಾತ್ರ ಭೇದಃ ಸ್ಯಾತ್ತತ್ಕುರುಷ್ವ ಯುಧಿಷ್ಠಿರ||
ಯುಧಿಷ್ಠಿರ! ಆದುದರಿಂದ ನಿಮ್ಮ ಅನ್ಯೋನ್ಯರಲ್ಲಿ ಇರುವ ಸೌಹಾರ್ದತೆಯನ್ನು ರಕ್ಷಿಸಿಕೋ ಮತ್ತು ನಿಮ್ಮಲ್ಲೇ ಭೇದವುಂಟಾಗದ ಹಾಗೆ ನಡೆದುಕೋ!”
01200021 ಯುಧಿಷ್ಠಿರ ಉವಾಚ|
01200021a ಸುಂದೋಪಸುಂದಾವಸುರೌ ಕಸ್ಯ ಪುತ್ರೌ ಮಹಾಮುನೇ|
01200021c ಉತ್ಪನ್ನಶ್ಚ ಕಥಂ ಭೇದಃ ಕಥಂ ಚಾನ್ಯೋನ್ಯಮಘ್ನತಾಂ||
ಯುಧಿಷ್ಠಿರನು ಹೇಳಿದನು: “ಮಹಾಮುನೇ! ಸುಂದ ಮತ್ತು ಉಪಸುಂದರು ಯಾರ ಮಕ್ಕಳು ಮತ್ತು ಅವರಲ್ಲಿ ಹೇಗೆ ಭೇದವುಂಟಾಯಿತು ಮತ್ತು ಅವರು ಹೇಗೆ ಅನ್ಯೋನ್ಯರನ್ನು ಸಂಹರಿಸಿದರು?
01200022a ಅಪ್ಸರಾ ದೇವಕನ್ಯಾ ವಾ ಕಸ್ಯ ಚೈಷಾ ತಿಲೋತ್ತಮಾ|
01200022c ಯಸ್ಯಾಃ ಕಾಮೇನ ಸಮ್ಮತ್ತೌ ಜಘ್ನತುಸ್ತೌ ಪರಸ್ಪರಂ||
ಮತ್ತು ಕಾಮದಿಂದ ಆ ಸಮ್ಮತ್ತರು ಪರಸ್ಪರರನ್ನು ಸಂಹರಿಸಿದ ಆ ತಿಲೋತ್ತಮೆಯು ಯಾರು? ಅಪ್ಸರೆಯೇ? ದೇವಕನ್ಯೆಯೇ? ಮತ್ತು ಅವಳು ಯಾರವಳು?
01200023a ಏತತ್ಸರ್ವಂ ಯಥಾವೃತ್ತಂ ವಿಸ್ತರೇಣ ತಪೋಧನ|
01200023c ಶ್ರೋತುಮಿಚ್ಛಾಮಹೇ ವಿಪ್ರ ಪರಂ ಕೌತೂಹಲಂ ಹಿ ನಃ||
ತಪೋಧನ! ಇವೆಲ್ಲವನ್ನೂ ಯಥಾವತ್ತಾಗಿ ಕೇಳಲು ಬಯಸುತ್ತೇನೆ. ವಿಪ್ರ! ಇದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”
ಇತಿ ಶ್ರೀಮಹಾಭಾರತೇ ಆದಿಪರ್ವಣಿ ಅರ್ಜುನವನವಾಸಪರ್ವಣಿ ಯುಧಿಷ್ಠಿರನಾರದಸಂವಾದೇ ದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದ ಆದಿಪರ್ವದಲ್ಲಿ ಅರ್ಜುನವನವಾಸಪರ್ವದಲ್ಲಿ ಯುಧಿಷ್ಠಿರನಾರದಸಂವಾದ ಎನ್ನುವ ಇನ್ನೂರನೆಯ ಅಧ್ಯಾಯವು.
[1]ಇಲ್ಲಿ ರಾಜಾಸನದ ಮಹತ್ವವೇನು?
[2]ಗೀತಾಪ್ರೆಸ್‌ನ ಸಂಪುಟದಲ್ಲಿ ನಾರದನ ಆಗಮನದ್ವಾರ ಮತ್ತು ಅವನ ಹಿರಿಮೆಯ ಕುರಿತಾದ ಹಲವಾರು ಶ್ಲೋಕಗಳಿವೆ.
[3]ದ್ರೌಪದಿಯ ಎದುರಿನಲ್ಲಿ ಮುಂದಿನ ಮಾತುಕತೆಯಾಗುವುದು ಬೇಡ ಎಂದು ನಿರ್ಧರಿಸಿ ನಾರದನು ದ್ರೌಪದಿಗೆ ಹೋಗಬಹುದು ಎಂದು ಹೇಳಿದನು.