ಆದಿ ಪರ್ವ: ಆಸ್ತೀಕ ಪರ್ವ
೧೯
ಕದ್ರು-ವಿನತೆಯರು ಸಮುದ್ರವನ್ನು ವೀಕ್ಷಿಸುವುದು (೧-೨). ಸಮುದ್ರದ ವರ್ಣನೆ (೩-೧೫).
01019001 ಸೂತ ಉವಾಚ|
01019001a ತತೋ ರಜನ್ಯಾಂ ವ್ಯುಷ್ಟಾಯಾಂ ಪ್ರಭಾತ ಉದಿತೇ ರವೌ|
01019001c ಕದ್ರೂಶ್ಚ ವಿನತಾ ಚೈವ ಭಗಿನ್ಯೌ ತೇ ತಪೋಧನ||
01019002a ಅಮರ್ಷಿತೇ ಸುಸಂರಬ್ಧೇ ದಾಸ್ಯೇ ಕೃತಪಣೇ ತದಾ|
01019002c ಜಗ್ಮತುಸ್ತುರಗಂ ದ್ರಷ್ಟುಮುಚ್ಛೈಃಶ್ರವಸಮಂತಿಕಾತ್||
ಸೂತನು ಹೇಳಿದನು: “ತಪೋಧನ! ರಾತ್ರಿ ಕಳೆದು ಪ್ರಭಾತದಲ್ಲಿ ರವಿಯ ಉದಯವಾಗುತ್ತಿದ್ದಂತೆ ದಾಸ್ಯತ್ವದ ಪಣವನ್ನಿಟ್ಟು ಆತಂಕಗೊಂಡ ಅಕ್ಕ-ತಂಗಿ ಕದ್ರು ಮತ್ತು ವಿನತೆಯರು ಕುದುರೆ ಉಚ್ಛೈಶ್ರವವನ್ನು ನೋಡಲು ಹೊರಟರು.
01019003a ದದೃಶಾತೇ ತದಾ ತತ್ರ ಸಮುದ್ರಂ ನಿಧಿಮಂಭಸಾಂ|
01019003c ತಿಮಿಂಗಿಲಝಷಾಕೀರ್ಣಂ ಮಕರೈರಾವೃತಂ ತಥಾ||
ಆಗ ಅಲ್ಲಿ ಅವರು ತಿಮಿಂಗಿಲು ಮಕರಗಳ ಕೂಗಿನಿಂದ ತುಂಬಿದ ನೀರಿನ ನಿಧಿ ಸಮುದ್ರವನ್ನು ಕಂಡರು.
01019004a ಸತ್ತ್ವೈಶ್ಚ ಬಹುಸಾಹಸ್ರೈರ್ನಾನಾರೂಪೈಃ ಸಮಾವೃತಂ|
01019004c ಉಗ್ರೈರ್ನಿತ್ಯಮನಾಧೃಷ್ಯಂ ಕೂರ್ಮಗ್ರಾಹಸಮಾಕುಲಂ||
ಅದು ನಾನಾ ರೂಪದ ಸಹಸ್ರಾರು ಜೀವಿಗಳು, ಉಗ್ರ ಜಂತುಗಳು, ಮತ್ತು ಕೂರ್ಮಸಂಕುಲಗಳಿಂದ ತುಂಬಿತ್ತು.
01019005a ಆಕರಂ ಸರ್ವರತ್ನಾನಾಮಾಲಯಂ ವರುಣಸ್ಯ ಚ|
01019005c ನಾಗಾನಾಮಾಲಯಂ ರಮ್ಯಮುತ್ತಮಂ ಸರಿತಾಂ ಪತಿಂ||
ಸರ್ವ ರತ್ನಗಳ ಆಗರ, ವರುಣನ ಆಲಯ, ಮತ್ತು ಸರ್ಪಗಳ ಆಲಯವಾಗಿದ್ದ ರಮ್ಯ ಉತ್ತಮ ಸರಿತಾ ಪತಿಯನ್ನು ನೋಡಿದರು.
01019006a ಪಾತಾಲಜ್ವಲನಾವಾಸಮಸುರಾಣಾಂ ಚ ಬಂಧನಂ|
01019006c ಭಯಂಕರಂ ಚ ಸತ್ತ್ವಾನಾಂ ಪಯಸಾಂ ನಿಧಿಮರ್ಣವಂ||
ಅದರೊಳಗೆ ಸಾತ್ವಿಕರಿಗೆ ಭಯಂಕರರಾದ ಅಸುರರ ಬಂಧನಸ್ಥಾನವಾಗಿದ್ದ ಪ್ರಜ್ವಲಿಪ ಪಾತಾಳ ಮತ್ತು ಅಂತ್ಯವಿಲ್ಲದ ಆಳದವರೆಗೂ ನೀರಿನ ನಿಧಿ ಇದೆ.
01019007a ಶುಭಂ ದಿವ್ಯಮಮರ್ತ್ಯಾನಾಮಮೃತಸ್ಯಾಕರಂ ಪರಂ|
01019007c ಅಪ್ರಮೇಯಮಚಿಂತ್ಯಂ ಚ ಸುಪುಣ್ಯಜಲಮದ್ಭುತಂ||
ಅದು ಶುಭವೂ, ಅಮರ್ತ್ಯರಿಗೆ ಪರಮಾಮೃತದ ಆಕರವೂ, ಅಪ್ರಮೇಯವೂ, ಅಚಿಂತ್ಯವೂ, ಸುಪುಣ್ಯವೂ ಅದ್ಭುತವೂ ಆದ ಜಲಾಶಯವಾಗಿತ್ತು.
01019008a ಘೋರಂ ಜಲಚರಾರಾವರೌದ್ರಂ ಭೈರವನಿಸ್ವನಂ|
01019008c ಗಂಭೀರಾವರ್ತಕಲಿಲಂ ಸರ್ವಭೂತಭಯಂಕರಂ||
ಘೋರ ಜಲಚರಗಳ ರೌದ್ರ ಘರ್ಜನೆಗಳಿಂದ ಮತ್ತು ಗಂಭೀರ ಸುಳಿಗಳಿಂದ ಕೂಡಿದ ಅದು ಸರ್ವರಿಗೂ ಭಯಂಕರವಾಗಿದ್ದಿತು.
01019009a ವೇಲಾದೋಲಾನಿಲಚಲಂ ಕ್ಷೋಭೋದ್ವೇಗಸಮುತ್ಥಿತಂ|
01019009c ವೀಚೀಹಸ್ತೈಃ ಪ್ರಚಲಿತೈರ್ನೃತ್ಯಂತಮಿವ ಸರ್ವಶಃ||
ಕೈಗಳನ್ನು ಮೇಲೆತ್ತಿ ನರ್ತಿಸಿರುವಂತೆ ಎಲ್ಲೆಡೆಯಲ್ಲಿಯೂ ಭಿರುಗಾಳಿಯಿಂದ ಅಲ್ಲೋಲ ಕಲ್ಲೋಲಗೊಂಡು ಕ್ಷೋಭೋದ್ವೇಗದೊಂದಿಗೆ ಬರುತ್ತಿರುವ ಅಲೆಗಳು ಕುಣಿಯುತ್ತಿದ್ದವು.
01019010a ಚಂದ್ರವೃದ್ಧಿಕ್ಷಯವಶಾದುದ್ವೃತ್ತೋರ್ಮಿದುರಾಸದಂ|
01019010c ಪಾಂಚಜನ್ಯಸ್ಯ ಜನನಂ ರತ್ನಾಕರಮನುತ್ತಮಂ||
ಚಂದ್ರನ ವೃದ್ಧಿ ಕ್ಷಯದೊಂದಿಗೆ ಏರಿಳಿಯುತ್ತಿರುವ ಆ ಅನುತ್ತಮ ರತ್ನಾಕರನಲ್ಲಿಯೇ ಪಾಂಚಜನ್ಯ[1]ದ ಜನನವಾಗಿತ್ತು.
01019011a ಗಾಂ ವಿಂದತಾ ಭಗವತಾ ಗೋವಿಂದೇನಾಮಿತೌಜಸಾ|
01019011c ವರಾಹರೂಪಿಣಾ ಚಾಂತರ್ವಿಕ್ಷೋಭಿತಜಲಾವಿಲಂ||
ಅಮಿತತೇಜಸ ಗೋವಿಂದನು ವರಾಹ[2] ರೂಪಧರಿಸಿ, ಜಲವನ್ನು ಅಲ್ಲೋಲಕಲ್ಲೋಲಗೊಳಿಸಿ ಅದರಿಂದ ಭೂಮಿಯನ್ನು ಮೇಲೆತ್ತಿದ್ದನು.
01019012a ಬ್ರಹ್ಮರ್ಷಿಣಾ ಚ ತಪತಾ ವರ್ಷಾಣಾಂ ಶತಮತ್ರಿಣಾ|
01019012c ಅನಾಸಾದಿತಗಾಧಂ ಚ ಪಾತಾಲತಲಮವ್ಯಯಂ||
ನೂರು ವರ್ಷಗಳ ತಪಸ್ಸನ್ನು ಗೈದರೂ ಬ್ರಹ್ಮರ್ಷಿ ಅತ್ರಿ[3]ಯು ಪತಾಳಕ್ಕಿಂತಲೂ ಅಡಿಯಲ್ಲಿರುವ ಇದರ ಆಳವನ್ನು ಅಳೆಯಲು ಸಮರ್ಥನಾಗಲಿಲ್ಲ.
01019013a ಅಧ್ಯಾತ್ಮಯೋಗನಿದ್ರಾಂ ಚ ಪದ್ಮನಾಭಸ್ಯ ಸೇವತಃ|
01019013c ಯುಗಾದಿಕಾಲಶಯನಂ ವಿಷ್ಣೋರಮಿತತೇಜಸಃ||
ಅಮಿತ ತೇಜಸ ಪದ್ಮನಾಭ ವಿಷ್ಣುವು ಯುಗಾದಿಕಾಲದಲ್ಲಿ ಅಧ್ಯಾತ್ಮಯೋಗನಿದ್ರೆಯಲ್ಲಿರುವಾಗ ಇದು ಅವನಿಗೆ ಹಾಸಿಗೆಯಾಗಿ ಸೇವೆ ಸಲ್ಲಿಸಿತ್ತು.
[4]01019014a ವಢವಾಮುಖದೀಪ್ತಾಗ್ನೇಸ್ತೋಯಹವ್ಯಪ್ರದಂ ಶುಭಂ|
01019014c ಅಗಾಧಪಾರಂ ವಿಸ್ತೀರ್ಣಮಪ್ರಮೇಯಂ ಸರಿತ್ಪತಿಂ||
ವಡವನ ಬಾಯಿಯಿಂದ ಹೊರಹೊಮ್ಮಿ ಪ್ರಜ್ವಲಿಸುತ್ತಿರುವ ಅಗ್ನಿಗೆ[5] ಅಗಾಧ, ಅಪಾರ, ಮತ್ತು ಅಪ್ರಮೇಯ ವಿಸ್ತೀರ್ಣವನ್ನು ಹೊಂದಿದ ಆ ಶುಭ ಸರಿತ್ಪತಿಯು ಹವಿಸ್ಸಾಗಿದ್ದನು.
01019015a ಮಹಾನದೀಭಿರ್ಬಹ್ವೀಭಿಃ ಸ್ಪರ್ಧಯೇವ ಸಹಸ್ರಶಃ|
01019015c ಅಭಿಸಾರ್ಯಮಾಣಮನಿಶಂ ದದೃಶಾತೇ ಮಹಾರ್ಣವಂ||
ಸಹಸ್ರಾರು ಮಹಾನದಿಗಳು ಮತ್ತು ತೊರೆಗಳು ಪ್ರಿಯನನ್ನು ಸೇರಲು ಸ್ಪರ್ಧಿಸುತ್ತಿರುವ ಅಭಿಸಾರಿಕೆಯರಂತೆ ಮಹಾಸಾಗರವನ್ನು ಸೇರಲು ಬರುತ್ತಿರುವುದನ್ನು ಕಂಡರು.
01019016a ಗಂಭೀರಂ ತಿಮಿಮಕರೋಗ್ರಸಂಕುಲಂ ತಂ
ಗರ್ಜಂತಂ ಜಲಚರರಾವರೌದ್ರನಾದೈಃ|
01019016c ವಿಸ್ತೀರ್ಣಂ ದದೃಶತುರಂಬರಪ್ರಕಾಶಂ
ತೇಽಗಾಧಂ ನಿಧಿಮುರುಮಂಭಸಾಮನಂತಂ||
ತಿಮಿಂಗಿಲ ಮತ್ತು ಮಕರಗಳ ಉಗ್ರ ಸಂಕುಲಗಳ ಘರ್ಜನೆ, ಇತರ ಜಲಚರಗಳ ರೌದ್ರನಾದಗಳಿಂದ ಪ್ರತಿಧ್ವನಿಸುತ್ತಿರುವ, ಗಂಭೀರ, ಗಗನದ ಪ್ರಕಾಶವನ್ನು ವಿಸ್ತೀರ್ಣವಾಗಿ ಪ್ರತಿಬಿಂಬಿಸುತ್ತಿರುವ, ಅಗಾಧ ಮತ್ತು ಅನಂತ ನೀರಿನ ನಿಧಿಯನ್ನು ಕಂಡರು.
[6]01019017a ಇತ್ಯೇವಂ ಝಷಮಕರೋರ್ಮಿಸಂಕುಲಂ ತಂ
ಗಂಭೀರಂ ವಿಕಸಿತಮಂಬರಪ್ರಕಾಶಂ|
01019017c ಪಾತಾಲಜ್ವಲನಶಿಖಾವಿದೀಪಿತಂ ತಂ
ಪಶ್ಯಂತ್ಯೌ ದ್ರುತಮಭಿಪೇತತುಸ್ತದಾನೀಂ||
ಈ ರೀತಿ ಮಕರ ತಿಮಿಂಗಿಲುಗಳ ಸಂಕುಲವನ್ನು ಹೊಂದಿರುವ, ಆಕಾಶದ ಪ್ರಕಾಶವನ್ನು ಭಿತ್ತರಿಸುತ್ತಿರುವ, ಪಾತಾಳದಲ್ಲಿ ಉರಿಯುತ್ತಿರುವ ಅಗ್ನಿಯಿಂದ ಬೆಳಗುತ್ತಿರುವ ಗಂಭೀರ ಸಮುದ್ರವನ್ನು ನೋಡುತ್ತಾ ಅವರು ಸಾಗರವನ್ನು ಪಾರುಮಾಡಿದರು.”
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ಏಕೋನವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.
[1] ವಿಷ್ಣುವಿನ ಆಯುಧಗಳಲ್ಲೊಂದು ಪಾಂಚಜನ್ಯವೆಂಬ ಶಂಖ. ಹರಿವಂಶದ ಪ್ರಕಾರ ಪಾಂಚಜನ ಅಥವಾ ಶಂಖಾಸುರನು ಪ್ರಭಾಸ ಸಮುದ್ರದ ಆಳದಲ್ಲಿ ಒಂದು ದೊಡ್ಡ ಶಂಖದಲ್ಲಿ ವಾಸಿಸುತ್ತಿದ್ದನು. ಅವನು ಕೃಷ್ಣನ ಗುರು ಸಾಂದೀಪನಿಯ ಮಗನನ್ನು ಕದ್ದುಕೊಂಡು ಆ ಶಂಖದಲ್ಲಿ ಬಂಧಿಯಾಗಿರಿಸಿದ್ದನು. ಗುರುದಕ್ಷಿಣೆಯನ್ನು ಕೊಡಲು ಕೃಷ್ಣ-ಬಲರಾಮರು ಪಾಂಚಜನನನ್ನು ಕೊಂದು ಸಾಂದೀಪನಿಯ ಮಗನನ್ನು ಹಿಂದೆ ತಂದೊಪ್ಪಿಸಿದರು. ಕೃಷ್ಣನು ಶಂಖವನ್ನು ತನಗಾಗಿಟ್ಟುಕೊಂಡನು ಮತ್ತು ಅದಕ್ಕೆ ಪಾಂಚಜನ್ಯವೆಂಬ ಹೆಸರನ್ನಿತ್ತನು. ಯುದ್ಧದಲ್ಲಿ ಪಾಂಚಜನ್ಯವನ್ನು ಊದಿದಾಗ ಶತ್ರುಗಳಲ್ಲಿ ಭಯವುಂಟಾಗುವುದು.
[2] ವಿಷ್ಣುವಿನ ದಶಾವತಾರಗಳಲ್ಲಿ ಮೂರನೆಯದು ವರಾಹಾವತಾರ. ಹಿರಣ್ಯಾಕ್ಷನು ಭೂದೇವಿಯನ್ನು ಕದ್ದು ಸಮುದ್ರದ ಆಳದಲ್ಲಿ ಅಡಗಿಸಿಟ್ಟಿದ್ದಾಗ ವಿಷ್ಣುವು ವರಾಹರೂಪವನ್ನು ತಾಳಿ, ಹಿರಣ್ಯಾಕ್ಷನನ್ನು ಸಂಹರಿಸಿ, ಭೂಮಿಯನ್ನು ಮೇಲೆತ್ತಿ ಮೊದಲಿನ ಸ್ಥಾನದಲ್ಲಿ ಇರಿಸಿದ್ದನು.
[3] ಮಹರ್ಷಿ ಅತ್ರಿಯು ಸಪ್ತರ್ಷಿಗಳಲ್ಲಿ ಒಬ್ಬನು. ಋಗ್ವೇದದ ಐದನೆಯ ಮಂಡಲಕ್ಕೆ ಅತ್ರಿಮಂಡಲವೆಂದು ಹೆಸರು. ಇದರಲ್ಲಿ ಅತ್ರಿಯು ಅಗ್ನಿ, ಇಂದ್ರ ಮತ್ತು ಇತರ ದೇವತೆಗಳಿಗೆ ಮಂತ್ರಗಳನ್ನು ರಚಿಸಿದನು. ಅತ್ರಿಯು ಪತ್ನಿ ಅನುಸೂಯಾದೇವಿಯಲ್ಲಿ ದತ್ತಾತ್ರೇಯ, ದುರ್ವಾಸ ಮತ್ತು ಸೋಮರನ್ನು ಪುತ್ರರನ್ನಾಗಿ ಪಡೆದನು. ರಾಮಾಯಣದಲ್ಲಿ, ರಾಮ, ಸೀತಾ ಲಕ್ಷ್ಮಣರು ಚಿತ್ರಕೂಟ (ಈಗಿನ ಉತ್ತರ ಪ್ರದೇಶದ ಒಂದು ಜಿಲ್ಲೆ) ದಲ್ಲಿರುವ ಅತ್ತಿ-ಅನಸೂಯರ ಆಶ್ರಮಕ್ಕೆ ಹೋಗಿದ್ದರೆಂದಿದೆ. ಅವನು ಸಮುದ್ರದ ಆಳವನ್ನು ಅಳೆಯಲು ಪ್ರಯತ್ನಿಸುವ ಪ್ರಸಂಗವು ಯಾವ ಪುರಾಣದಲ್ಲಿದೆಯೆಂದು ತಿಳಿದಿಲ್ಲ.
[4] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ವಜ್ರಪಾತನಸಂತ್ರಸ್ತಮೈನಾಕಸ್ಯಾಭಯಪ್ರದಂ| ಡಿಂಬಾಹವಾರ್ದಿತಾನಾಂ ಚ ಅಸುರಾಣಾಂ ಪರಾಯಣಂ|| ಅರ್ಥಾತ್: ವಜ್ರಾಯುಧಘಾತದ ಭೀತಿಯಿಂದ ಸಂತ್ರಸ್ತನಾಗಿದ್ದ ಮೈನಾಕ ಪರ್ವತಕ್ಕೆ ಅಭಯಪ್ರದನಾದ, ದೇವತೆಗಳ ಪೆಟ್ಟನ್ನು ತಾಳಲಾರದೇ ಹಾಹಾಕಾರ ಮಾಡಿ ಓಡಿ ಬಂದ ರಾಕ್ಷಸರಿಗೂ ಆಶ್ರಯಸ್ಥಾನನಾದ ಸಮುದ್ರರಾಜನನ್ನು ಕದ್ರೂ-ವಿನತೆಯರು ನೋಡಿದರು.
[5] ವಡವಮುಖಾಗ್ನಿ ಅಥವಾ ವಡವಾಗ್ನಿಯು ಔರ್ವ ಎಂಬ ಭಾರ್ಗವವಂಶಜ ಋಷಿಯ ಕೋಪದಿಂದ ಹುಟ್ಟಿದ ಅಗ್ನಿ. ಕುದುರೆಯ ಮುಖದ ರೂಪವನ್ನು ತಳೆದಿರುವ ಈ ಅಗ್ನಿಯನ್ನು ಸಮುದ್ರದಲ್ಲಿ ಇರಿಸಲಾಯಿತು. ಇದೇ ವಡವಾಗ್ನಿಯು ಯುಗಾಂತದಲ್ಲಿ ಲೋಕಗಳನ್ನು ಸುಡುತ್ತದೆ. ಔರ್ವನ ಚರಿತ್ರೆಯನ್ನು ಮಹಾಭಾರತದ ಚೈತ್ರರಥ ಪರ್ವದಲ್ಲಿ ಹೇಳಲಾಗಿದೆ.
[6] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಸರ್ಪಗಳು ತಾಯಿಯ ಮಾತಿನಂತೆ ಉಚ್ಛೈಶ್ರವನ ಬಾಲಕ್ಕೆ ಸುತ್ತಿಕೊಂಡಿರುವುದನ್ನು ಸೂಚಿಸುವ ಈ ಕೆಳಗಿನ ಶ್ಲೋಕಗಳಿವೆ: ನಾಗಾಶ್ಚ ಸಂವಿದಂ ಕೃತ್ವಾ ಕರ್ತ್ಯವ್ಯಮಿತಿ ತದ್ವಚಃ| ನಿಃಸ್ನೇಹಾ ವೈ ದಹೇನ್ಮಾತಾ ಅಸಂಪ್ರಾಪ್ತಮನೋರಥಾ|| ಪ್ರಸನ್ನಾ ಮೋಕ್ಷಯೇದಸ್ಮಾಂಸ್ತಸ್ಮಾಚ್ಛಾಪಾಶ್ಚ ಭಾಮಿನೀ| ಕೃಷ್ಣಂ ಪೃಚ್ಛಂ ಕರಿಷ್ಯಾಮಸ್ತುರಗಸ್ಯ ನ ಸಂಶಯಃ|| ತಥಾ ಹಿ ಗತ್ವಾ ತೇ ತಸ್ಯ ಪೃಚ್ಛೇ ವಾಲಾ ಇವ ಸ್ಥಿತಾಃ| ಅರ್ಥಾತ್: ಅವಳ ಮನೋರಥವನ್ನು ಈಡೇರಿಸಲಾರೆವೆಂದು ತಿಳಿದು ನಿಃಸ್ನೇಹದಿಂದ ಮಾತೆಯು ಸುಟ್ಟುಹೋಗುತ್ತೀರಿ ಎಂದು ಹೇಳಿದಾಗ ಏನು ಕರ್ತವ್ಯವನ್ನು ಮಾಡಬೇಕೆಂದು ನಾಗಗಳು ತಮ್ಮತಮ್ಮೊಳಗೇ ಸಮಾಲೋಚಿಸಿ ನಿರ್ಧರಿದರು. ತಾಯಿ ಭಾಮಿನಿಯು ಪ್ರಸನ್ನಳಾದರೆ ನಮ್ಮನ್ನು ಶಾಪದಿಂದ ವಿಮೋಚನೆಯನ್ನೂ ಮಾಡಬಹುದು. ನಿಃಸಂಶಯವಾಗಿ ನಾವು ಕುದುರೆಯ ಬಾಲವನ್ನು ಕಪ್ಪನ್ನಾಗಿಸೋಣ ಎಂದು ಕಪ್ಪಾದ ಸರ್ಪಗಳು ಕುದುರೆಯ ಬಾಲಕ್ಕೆ ಅಂಟಿಕೊಂಡು ಕುದುರೆಯ ಬಾಲದ ಕೂದಲಿನಂತೆಯೇ ಇದ್ದುಬಿಟ್ಟವು.