ಆದಿ ಪರ್ವ: ಆಸ್ತೀಕ ಪರ್ವ
೧೮
ವಿನತೆ ಮತ್ತು ಕದ್ರುವಿನ ನಡುವೆ ಉಚ್ಛೈಶ್ರವದ ಬಾಲದಬಣ್ಣದ ಕುರಿತು ಪಣ (೧-೫). ಕದ್ರುವು ತನ್ನ ಮಕ್ಕಳಾದ ಸರ್ಪಗಳಿಗೆ ನೀಡಿದ ಶಾಪ (೬-೧೦).
01018001 ಸೂತ ಉವಾಚ|
01018001a ಏತತ್ತೇ ಸರ್ವಮಾಖ್ಯಾತಮಮೃತಂ ಮಥಿತಂ ಯಥಾ|
01018001c ಯತ್ರ ಸೋಽಶ್ವಃ ಸಮುತ್ಪನ್ನಃ ಶ್ರೀಮಾನತುಲವಿಕ್ರಮಃ||
ಸೂತನು ಹೇಳಿದನು: “ಅಮೃತಮಥನದ ಕುರಿತು ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ. ಅದೇ ಸಮಯದಲ್ಲಿ ಅತುಲ ವಿಕ್ರಮಿ ಸುಂದರ ಅಶ್ವವು ಹುಟ್ಟಿತು.
01018002a ಯಂ ನಿಶಾಮ್ಯ ತದಾ ಕದ್ರೂರ್ವಿನತಾಮಿದಮಬ್ರವೀತ್|
01018002c ಉಚ್ಚೈಶ್ರವಾ ನು ಕಿಂವರ್ಣೋ ಭದ್ರೇ ಜಾನೀಹಿ ಮಾಚಿರಂ||
ಅದನ್ನು ವೀಕ್ಷಿಸುತ್ತಾ ಕದ್ರುವು ವಿನತಳನ್ನು ಕೇಳಿದಳು: “ಭದ್ರೇ! ಆ ಉಚ್ಛೈಶ್ರವವು ಯಾವ ವರ್ಣದ್ದು? ಬೇಗ ಹೇಳು.”
01018003 ವಿನತೋವಾಚ|
01018003a ಶ್ವೇತ ಏವಾಶ್ವರಾಜೋಽಯಂ ಕಿಂ ವಾ ತ್ವಂ ಮನ್ಯಸೇ ಶುಭೇ|
01018003c ಬ್ರೂಹಿ ವರ್ಣಂ ತ್ವಮಪ್ಯಸ್ಯ ತತೋಽತ್ರ ವಿಪಣಾವಹೇ||
ವಿನತೆಯು ಹೇಳಿದಳು: “ಈ ಅಶ್ವರಾಜನು ಬಿಳಿಯಾಗಿದ್ದಾನೆ. ಶುಭೇ! ನಿನ್ನ ಅಭಿಪ್ರಾಯವೇನು? ಅದರ ಬಣ್ಣವು ಯಾವುದು ಎಂದು ನೀನು ಹೇಳು. ಅದರ ಮೇಲೆ ಪಣವಿಡೋಣ.”
01018004 ಕದ್ರೂರುವಾಚ|
01018004a ಕೃಷ್ಣವಾಲಮಹಂ ಮನ್ಯೇ ಹಯಮೇನಂ ಶುಚಿಸ್ಮಿತೇ|
01018004c ಏಹಿ ಸಾರ್ಧಂ ಮಯಾ ದೀವ್ಯ ದಾಸೀಭಾವಾಯ ಭಾಮಿನಿ||
ಕದ್ರುವು ಹೇಳಿದಳು: “ಶುಚಿಸ್ಮಿತೇ! ಈ ಕುದುರೆಯ ಬಾಲವು ಕಪ್ಪು ಬಣ್ಣದ್ದು ಎಂದು ನನ್ನ ಅನಿಸಿಕೆ. ಭಾಮಿನಿ! ಇದರಲ್ಲಿ ಸೋತವರು ಇನ್ನೊಬ್ಬರ ದಾಸಿಯಾಗಬೇಕು.””
01018005 ಸೂತ ಉವಾಚ|
01018005a ಏವಂ ತೇ ಸಮಯಂ ಕೃತ್ವಾ ದಾಸೀಭಾವಾಯ ವೈ ಮಿಥಃ|
01018005c ಜಗ್ಮತುಃ ಸ್ವಗೃಹಾನೇವ ಶ್ವೋ ದ್ರಕ್ಷ್ಯಾವ ಇತಿ ಸ್ಮ ಹ||
ಸೂತನು ಹೇಳಿದನು: “ಈ ರೀತಿ ಒಬ್ಬರಿಗೊಬ್ಬರು ದಾಸಿಯಾಗುವ ಪಣವನ್ನು ತೊಟ್ಟು “ನಾಳೆ ಬಂದು ಕುದುರೆಯನ್ನು ನೋಡೋಣ” ಎಂದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
01018006a ತತಃ ಪುತ್ರಸಹಸ್ರಂ ತು ಕದ್ರೂರ್ಜಿಹ್ಮಂ ಚಿಕೀರ್ಷತೀ|
01018006c ಆಜ್ಞಾಪಯಾಮಾಸ ತದಾ ವಾಲಾ ಭೂತ್ವಾಂಜನಪ್ರಭಾಃ||
ಮೋಸಮಾಡುವ ಉದ್ದೇಶದಿಂದ ಕದ್ರುವು ತನ್ನ ಸಹಸ್ರ ಪುತ್ರರಿಗೆ “ನಾನು ದಾಸಿಯಾಗಬಾರದೆಂದಾದರೆ ತಕ್ಷಣವೇ ಹೋಗಿ ಆ ಅಶ್ವದ ಬಾಲಕ್ಕೆ ಸುತ್ತಿಕೊಂಡು, ಅದು ಕಪ್ಪಾಗಿ ಕಾಣುವಂತೆ ಮಾಡಿ” ಎಂದು ಅಜ್ಞಾಪಿಸಿದಳು.
01018007a ಆವಿಶಧ್ವಂ ಹಯಂ ಕ್ಷಿಪ್ರಂ ದಾಸೀ ನ ಸ್ಯಾಮಹಂ ಯಥಾ|
01018007c ತದ್ವಾಕ್ಯಂ ನಾನ್ವಪದ್ಯಂತ ತಾನ್ ಶಶಾಪ ಭುಜಂಗಮಾನ್||
01018008a ಸರ್ಪಸತ್ರೇ ವರ್ತಮಾನೇ ಪಾವಕೋ ವಃ ಪ್ರಧಕ್ಷ್ಯತಿ|
01018008c ಜನಮೇಜಯಸ್ಯ ರಾಜರ್ಷೇಃ ಪಾಂಡವೇಯಸ್ಯ ಧೀಮತಃ||
ಅವಳ ಮಾತನ್ನು ಪರಿಪಾಲಿಸಲು ಇಚ್ಛೆ ತೋರದ ಆ ಭುಜಂಗಗಳಿಗೆ ಅವಳು “ಧೀಮಂತ ಪಾಂಡವೇಯ ರಾಜರ್ಷಿ ಜನಮೇಜಯನು ನಡೆಸುವ ಸರ್ಪಸತ್ರದಲ್ಲಿ ನಿಮ್ಮೆಲ್ಲರನ್ನೂ ಪಾವಕನು ಸುಟ್ಟು ಭಸ್ಮಮಾಡುವನು” ಎಂದು ಶಾಪವನ್ನಿತ್ತಳು.
01018009a ಶಾಪಮೇನಂ ತು ಶುಶ್ರಾವ ಸ್ವಯಮೇವ ಪಿತಾಮಹಃ|
01018009c ಅತಿಕ್ರೂರಂ ಸಮುದ್ದಿಷ್ಟಂ ಕದ್ರ್ವಾ ದೈವಾದತೀವ ಹಿ||
01018010a ಸಾರ್ಧಂ ದೇವಗಣೈಃ ಸರ್ವೈರ್ವಾಚಂ ತಾಮನ್ವಮೋದತ|
01018010c ಬಹುತ್ವಂ ಪ್ರೇಕ್ಷ್ಯ ಸರ್ಪಾಣಾಂ ಪ್ರಜಾನಾಂ ಹಿತಕಾಮ್ಯಯಾ||
ದೈವಾಧೀನ ಕದ್ರುವಿನಿಂದ ಹೊರಬಂದ ಈ ಅತಿ ಕ್ರೂರ ಶಾಪವನ್ನು ಸ್ವಯಂ ಪಿತಾಮಹನೂ ಕೇಳಿದನು. ಆದರೆ ಸರ್ಪಗಳು ವೃದ್ಧಿಯಾಗುತ್ತಿರುವುದನ್ನು ನೋಡಿ ಪ್ರಜೆಗಳ ಹಿತಕ್ಕಾಗಿ ಅವನು ಎಲ್ಲ ದೇವಗಣಗಳ ಸಹಿತ ಆ ಶಾಪವನ್ನು ಅನುಮೋದಿಸಿದನು.
01018011a ತಿಗ್ಮವೀರ್ಯವಿಷಾ ಹ್ಯೇತೇ ದಂದಶೂಕಾ ಮಹಾಬಲಾಃ|
01018011c ತೇಷಾಂ ತೀಕ್ಷ್ಣವಿಷತ್ವಾದ್ಧಿ ಪ್ರಜಾನಾಂ ಚ ಹಿತಾಯ ವೈ|
[1]01018011e ಪ್ರಾದಾದ್ವಿಷಹರೀಂ ವಿದ್ಯಾಂ ಕಾಶ್ಯಪಾಯ ಮಹಾತ್ಮನೇ||
“ಅತ್ಯಂತ ಪರಿಣಾಮಕಾರಿಯಾದ ಅವರ ವಿಷ, ಅವರ ಮಹಾ ಶಕ್ತಿ, ತೀಕ್ಷ್ಣ ವಿಷ, ಮತ್ತು ಕಚ್ಚುವ ಸ್ವಭಾವವನ್ನು ಪರಿಗಣಿಸಿದರೆ ಪ್ರಜೆಗಳ ಹಿತಕ್ಕೆ ಇದು ಒಳ್ಳೆಯದೇ ಆಯಿತು!” ಎಂದು ಅವನು ಮಹಾತ್ಮ ಕಾಶ್ಯಪನಿಗೆ ವಿಷಹರಣೀ ವಿಧ್ಯೆಯನ್ನು ಪ್ರದಾನಿಸಿದನು.”[2]
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ಅಷ್ಟಾದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸುಪರ್ಣದಲ್ಲಿ ಹದಿನೆಂಟನೆಯ ಅಧ್ಯಾಯವು.
[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಯುಕ್ತಂ ಮಾತ್ರಾ ಕೃತಂ ತೇಷಾಂ ಪರಪೀಡೋಪಸರ್ಪಿಣಾಂ| ಅನ್ಯೇಷಾಮಪಿ ಸತ್ವಾನಾಂ ನಿತ್ಯಂ ದೋಷಪರಾಸ್ತು ಯೇ|| ತೇಷಾಂ ಪ್ರಾಣಾಂತಕೋ ದಂಡೋ ದೈವೇನ ವಿನಿಪಾತ್ಯತೇ| ಏವಂ ಸಂಭಾಷ್ಯ ದೇವಸ್ತು ಪೂಜ್ಯ ಕದ್ರೂಂ ಚ ತಾಂ ತದಾ|| ಆಯೂಯ ಕಶ್ಯಪಂ ದೇವ ಇದಂ ವಚನಮಬ್ರವೀತ್| ಯದೇತೇ ದಂತಶೂಕಾಶ್ಚ ಸರ್ಪಾ ಜಾತಾಸ್ತವಾನಘ|| ವಿಷೋಲ್ಬಣಾ ಮಹಾಭೋಗಾ ಮಾತ್ರಾ ಶಪ್ತಾಃ ಪರಂತಪ| ತತ್ರ ಮನ್ಯುಸ್ತ್ವಯಾ ತಾತ ನ ಕರ್ತವ್ಯಃ ಕಥಂಚನ|| ದೃಷ್ಟಂ ಪುರಾತನಂ ಏತದ್ಯಜ್ಞೇ ಸರ್ಪವಿನಾಶನಂ| ಇತ್ಯುಕ್ತ್ವಾ ಸೃಷ್ಟಿಕೃದ್ದೇವಸ್ತಂ ಪ್ರಸಾದ್ಯ ಪ್ರಜಾಪತಿಂ|| ಅರ್ಥಾತ್: “ಪರರಿಗೆ ಪೀಡೆಗಳನ್ನು ನೀಡುವ ಸರ್ಪಗಳಿಗೆ ಅವರ ತಾಯಿಯು ಮಾಡಿರುವುದು ಯುಕ್ತವೇ ಆಗಿದೆ. ಬೇರೆಯವರಿಗೆ ಯಾವಾಗಲೂ ತೊಂದರೆಯನ್ನೇ ಉಂಟುಮಾಡುವವರಿಗೆ ಪ್ರಾಣಾಂತಕರ ಶಿಕ್ಷೆಯು ದೈವದಿಂದಲೇ ಸಿದ್ಧವಾಗುತ್ತದೆ.” ಬ್ರಹ್ಮನು ಹೀಗೆ ಹೇಳಿ ಕದ್ರುವನ್ನು ಪ್ರಶಂಸಿಸಿದನು. ಅನಂತರ ದೇವನು ಕಶ್ಯಪನನ್ನು ಕರೆದು ಹೀಗೆಂದನು: “ಅನಘ! ಇವಳಲ್ಲಿ ನಿನಗೆ ಹುಟ್ಟಿದ ಸರ್ಪಗಳಲ್ಲಿ ವಿಷಭರಿತ ಹಲ್ಲುಗಳಿವೆ. ಅತ್ಯಂತ ವಿಷಭರಿತವಾಗಿರುವ, ಮಹಾಕಾಯದ ಈ ಸರ್ಪಗಳಿಗೆ ತಾಯಿಯೇ ಶಪಿಸಿದ್ದಾಳೆ. ಪರಂತಪ! ಮಗನೇ! ಈ ವಿಷಯದಲ್ಲಿ ನೀನು ಯಾವಕಾರಣಕ್ಕೂ ಕುಪಿತನಾಗಬಾರದು. ಯಜ್ಞದಲ್ಲಿ ಸರ್ಪಗಳ ವಿನಾಶವು ಹಿಂದೆಯೇ ನಿಶ್ಚಿತವಾಗಿತ್ತು.” ಹೀಗೆ ಹೇಳಿ ಸೃಷ್ಟಿಕರ್ತ ದೇವನು ಪ್ರಜಾಪತಿಯನ್ನು ಸಮಾಧಾನಗೊಳಿಸಿದನು.
[2] ದಾಕ್ಷಿಣಾತ್ಯ ಪಾಠದ ಕುಂಭಕೋಣ ಪ್ರತಿಯಲ್ಲಿ ಈ ಅಧ್ಯಾಯದ ಕೊನೆಯಲ್ಲಿ ಈ ಶ್ಲೋಕಗಳಿವೆ: ಏವಂ ಶಪ್ತೇಷು ನಾಗೇಷು ಕದ್ರ್ವಾ ಚ ದ್ವಿಜಸತ್ತಮ| ಉದ್ವಿಗ್ನಃ ಶಾಪತಸ್ತಸ್ಯಾಃ ಕದ್ರೂಂ ಕರ್ಕೋಟಕೋಽಬ್ರವೀತ್|| ಮಾತರಂ ಪರಮಪ್ರೀತಸ್ತದಾ ಭುಜಗಸತ್ತಮಃ| ಆವಿಷ್ಯ ವಾಜಿನಂ ಮುಖ್ಯಂ ವಾಲೋ ಭೂತ್ವಾಂಜನಪ್ರಭಃ|| ದರ್ಶಯಿಷ್ಯಾಮಿ ತತ್ರಾಹಮಾತ್ಮಾನಂ ಕಾಮಮಾಷ್ವಸ| ಏವಮಸ್ತ್ವಿತಿ ತಂ ಪುತ್ರಂ ಪ್ರತ್ಯುವಾಚ ಯಶಸ್ವಿನೀ|| ಅರ್ಥಾತ್: ದ್ವಿಜಸತ್ತಮ! ಹೀಗೆ ಕದ್ರುವು ನಾಗಗಳಿಗೆ ಶಪಿಸಲು, ಅವಳ ಶಾಪದಿಂದ ಉದ್ವಿಗ್ನನಾದ ಭುಜಗಸತ್ತಮ ಕರ್ಕೋಟಕನು ತಾಯಿ ಕದ್ರುವಿಗೆ ಪರಮ ಸಂತೋಷವನ್ನು ನೀಡಲು ಈ ಮಾತನ್ನಾಡಿದನು: “ಮಾತೆ! ಕಪ್ಪಾಗಿ ಹೊಳೆಯುವ ಬಾಲವಾಗಿ ನಾನು ಆ ಉಚ್ಛೈಶ್ರವವನ್ನು ಪ್ರವೇಶಿಸಿ ನಿನಗೆ ನಾನು ಅಲ್ಲಿ ಕಾಣಿಸಿಕೊಳ್ಳುತ್ತೇನೆ!” ಅದಕ್ಕೆ ಯುಶಸ್ವಿನೀ ಕದ್ರುವು “ಹಾಗೆಯೇ ಆಗಲಿ!” ಎಂದಳು.